Tuesday, 10th December 2024

ಸಭ್ಯತೆ ಮೀರುತ್ತಿರುವ ರಾಜಕಾರಣಿಗಳ ಹೇಳಿಕೆ

ಅಭಿಮತ

ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ

ರಾಜ್ಯ ರಾಜಕಾರಣದಲ್ಲಿ ಮೂರು ಪ್ರಮುಖ ರಾಜಕೀಯ ಪಕ್ಷಗಳಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿದೆ. ಇವುಗಳ ಪೈಕಿ ರಾಜಕಾರಣಿಗಳ ಕೆಲವೊಂದು ನಡತೆ, ವರ್ತನೆಗಳು ಮಾಧ್ಯಮಗಳಿಗೆ ದಿನವಿಡೀ ಆಹಾರವಾಗುತ್ತಿದೆ.

ಅದು ಬಿಜೆಪಿ, ಕಾಂಗ್ರೆಸ್ ಅಥವಾ ಜೆಡಿಎಸ್ ಪಕ್ಷವಾಗಲಿ, ಇಲ್ಲಿನ ಆಂತರಿಕ ವಿಚಾರಗಳಿರಬಹುದು ಅಥವಾ ನಾಯಕರ ಹೇಳಿಕೆಗಳು ಕೆಲವೊಂದು ಬಾರಿ ಸಭ್ಯತೆಯ ಎಲ್ಲಾ ಮೀರುತ್ತಿದೆ. ರಾಜಕಾರಣದಲ್ಲಿ ಪ್ರತಿಪಕ್ಷದ ಹುಳುಕು, ವೈಫಲ್ಯಗಳನ್ನು ಜನರ ಮುಂದಿಡಬೇಕಾದರೆ, ಹೇಳಿಕೆ ಪ್ರತಿ ಹೇಳಿಕೆಯನ್ನು ನೀಡುವಾಗ ಆ ಆರೋಪಕ್ಕೆ ಸಂಬಂಧಿಸಿದ ಅಥವಾ ಆ ವಿಷಯಕ್ಕೆ ಸಂಬಂಧಿಸಿದ ಹೇಳಿಕೆಗಳ ಬದಲಾಗಿ ಟೀಕೆಗಳು ವೈಯಕ್ತಿಕ ಮತ್ತು ಕೀಳು ಮಟ್ಟಕ್ಕೆ ಇಳಿಯುತ್ತಿರುವುದು ರಾಜಕಾರಣಕ್ಕೆ ಶೋಭೆ ತರುವಂತದ್ದಲ್ಲ.

ಯಾವುದೇ ಒಬ್ಬ ರಾಜಕಾರಣಿ ತಾಳ್ಮೆ, ಸಂಯಮದ ಜತೆಗೆ ಮಾಧ್ಯಮಕ್ಕೆ ಹೇಳಿಕೆಗಳನ್ನು ನೀಡುವಾಗ ಯಾವುದೇ ಪೂರ್ವ ಸಿದ್ದತೆಯಿಲ್ಲದೆ ಮಾತನಾಡುವು ದರಿಂದ ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ನಗೆಪಾಟಲಿಗೀಡಾಗುವುದನ್ನು ಕಾಣಬಹುದು. ಇತ್ತೀಚೆಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಕೆಆರ್‌ಎಸ್ ಡ್ಯಾಮ್ ಬಿರುಕು ಬಿಡಲು ಅಕ್ರಮ ಕಲ್ಲು ಗಣಿಗಾರಿಕೆಯೇ ಮೂಲ ಕಾರಣ ಎಂಬ ಹೇಳಿಕೆಯನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಅರಗಿಸಿಕೊಳ್ಳಲಾಗದೆ ಸಂಸದೆಗೆ ಅಸಂಬದ್ಧ ಹೇಳಿಕೆಯೊಂದನ್ನು ನೀಡಿದ್ದರು. ಈ ಆರೋಪ ಪ್ರತ್ಯಾರೋಪ ತೀರಾ ಮುಂದುವರಿದು ದಿ.ಅಂಬರೀಶ್ ಅವರ ಪಾರ್ಥಿವ ಶರೀರದ ವಿಚಾರದವರೆಗೆ ತಲುಪಿ ಚಲನಚಿತ್ರರಂಗದವರೆಗೆ ನುಸುಳಿ ರಾಜಕಾರಣವೇ ಇಲ್ಲಿ ವಿಷಯಾಂತರವಾಗಿ ಬಿಟ್ಟಿತ್ತು.

ಅಷ್ಟಕ್ಕೂ ಸುಮಲತಾ ಹೇಳಿಕೆ ಮತ್ತು ಅಕ್ರಮ ಕಲ್ಲು ಗಣಿಗಾರಿಕೆ ಸ್ಥಳದಲ್ಲಿನ ಭೇಟಿ ಎಲ್ಲವೂ ಸಮಂಜಸವಾಗಿಯೇ ಇತ್ತು. ಇಲ್ಲಿ ಭೇಟಿಗೆ ತಡೆಯೊಡ್ಡುವ, ಘೇರಾವ್ ಹಾಕಿ, ಕೆಲ ಶಾಸಕರು, ಪ್ರಭಾವಿ ವ್ಯಕ್ತಿಗಳು ಸಂಸದೆಯ ಮೇಲೆ ಮುಗಿಬೀಳುತ್ತಾರೆಂದರೆ ಇವರೆಲ್ಲರೂ ಅಕ್ರಮದ ಪಾಲುದಾರರೆಂದೇ ಅರ್ಥ. ಇಲ್ಲಿ ಗಣಿಗಾರಿಕೆ ಯಲ್ಲಿ ತೊಡಗಿರುವವರೆಲ್ಲರೂ ಹಲವಾರು ವರ್ಷಗಳಿಂದ ರಾಜಕೀಯ ಪ್ರಭಾವ ಬಳಸಿ, ಪಕ್ಷವೊಂದರ ಕರಿನೆರಳಿನಲ್ಲಿ ರಾಜಾರೋಷವಾಗಿ ಈವರೆಗೆ ತಮ್ಮ ಅಕ್ರಮ ವ್ಯವಹಾರ ನಡೆಸುತ್ತಾ ಬಂದಿದ್ದಾರೆ.

ಪ್ರಶ್ನಿಸಿದ ಬಡರೈತರಿಗೆ ಗೂಂಡಾಗಳನ್ನು ಬಿಟ್ಟು ಬೆದರಿಸುವ ಪ್ರಕ್ರಿಯೆಗಳು ತುಸು ಜೋರಾಗಿ ನಡೆಯುತ್ತಿದೆ. ಇಲ್ಲಿ ಪ್ರಮುಖವಾಗಿ ಕುಮಾರಸ್ವಾಮಿಯವರಿಗೆ ಸುಮಲತಾ ಹೇಳಿಕೆಗೆ ಪ್ರತಿಯಾಗಿ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ತೊಡಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಆಗ್ರಹಿಸಬಹುದಿತ್ತು. ಆದರೆ ಇಲ್ಲಿ ಮಾಜಿ ಮುಖ್ಯಮಂತ್ರಿಯವರು ಕಳೆದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿನ ತನ್ನ ಮಗನ ಸೋಲಿನ ಗುಂಗಿನಿಂದ ಇನ್ನೂ ಹೊರಬಂದಿಲ್ಲ ಎಂಬುದು ಸ್ಪಷ್ಟ. ಬಿಜೆಪಿ – ಜೆಡಿಎಸ್ ಸಮ್ಮಿಶ್ರ ಸರಕಾರದ ಅವಽಯಲ್ಲಿ ಗ್ರಾಮ ವಾಸ್ತವ್ಯ, ಜನತಾ ದರ್ಶನ, ರೈತರ ಸಾಲ ಮನ್ನಾ, ಮಾನವೀಯತೆಯ ಮೂಲಕ ಉತ್ತಮ ಆಡಳಿತ ನೀಡಿದ್ದ ಕುಮಾರಸ್ವಾಮಿಯವರು ಕಳೆದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಿಂದ ಇತ್ತೀಚಿನ ದಿನಗಳಲ್ಲಿ ಮಾಧ್ಯಮ, ಮತ್ತು ಪ್ರತಿಪಕ್ಷಗಳನ್ನು
ಎದುರಿಸುವಲ್ಲಿ ತಾಳ್ಮೆ, ಸಂಯಮ ಕಳೆದುಕೊಂಡು ದ್ವೇಷ ರಾಜಕಾರಣಕ್ಕೆ ಮುನ್ನುಡಿ ಬರೆಯುತ್ತಿರುವುದು ಸಾಕಷ್ಟು ವಿವಾದಕ್ಕೀಡಾಗುತ್ತಿರುವುದಂತೂ ಸುಳ್ಳಲ್ಲ.