ವರ್ತಮಾನ
maapala@gmail.com
ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಬೆನ್ನಲ್ಲೇ ಸೃಷ್ಟಿಯಾಗಿರುವ ಅಸಮಾಧಾನ, ಬಂಡಾಯಗಳಿಂದಾಗಿ ಅಧಿಕಾರಕ್ಕೆ ಬರುವ ಅವಕಾಶ ವನ್ನು ಪಕ್ಷ ತಾನಾಗಿಯೇ ತಪ್ಪಿಸಿಕೊಂಡಿದೆ ಎಂಬ ಚರ್ಚೆಗಳನ್ನು ಹುಟ್ಟುಹಾಕಿದೆ. ಆದರೆ, ಒಂದೆರಡು ಲೋಪಗಳ ಮಧ್ಯೆಯೂ ಬಿಜೆಪಿ ಎಚ್ಚರಿಕೆ ವಹಿಸಿರುವುದು ಕಾಣಿಸುತ್ತಿದೆ.
ವಿಧಾನಸಭೆ ಚುನಾವಣೆಗೆ 224 ಕ್ಷೇತ್ರಗಳ ಪೈಕಿ 212 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಈ ಬಾರಿ ಬಿಜೆಪಿ ಅಚ್ಚರಿಯ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲಿದೆ, ಭಾರೀ ಬದಲಾವಣೆಗಳನ್ನು ಮಾಡಲಿದೆ, ೩೦-೪೦ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಿದೆ…ಹೀಗೆ ರಾಜಕೀಯ ವಲಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಸಾಕಷ್ಟು ನಿರೀಕ್ಷೆ, ಕುತೂಹಲಗಳಿದ್ದವು.
ಆದರೆ, ಎರಡು ಹಂತಗಳಲ್ಲಿ ಪಟ್ಟಿ ಹೊರಬರುತ್ತಿದ್ದಂತೆ ಬಿಜೆಪಿ ಎಲ್ಲಾ ನಿರೀಕ್ಷೆ ಗಳನ್ನು ಹುಸಿ ಮಾಡಿದೆ, ಅಭ್ಯರ್ಥಿಗಳ ಆಯ್ಕೆ ಯಲ್ಲಿ ಎಡವಿದೆ, ಬಂಡಾಯಕ್ಕೆಡೆ ಮಾಡಿಕೊಟ್ಟಿದೆ ಎಂಬೆಲ್ಲಾ ವಿಶ್ಲೇಷಣೆಗಳು ಆರಂಭವಾಗಿವೆ. ಜತೆಗೆ ಟಿಕೆಟ್ ವಂಚಿತರ ಅಸಮಾಧಾನವೂ ಮುಂದುವರಿದಿದೆ. ಈ ವಿಚಾರದಲ್ಲಿ ಬಿಜೆಪಿ ನಿಜವಾಗಿಯೂ ಎಡವಿದೆಯೇ ಎಂಬ ಪ್ರಶ್ನೆಗೆ ನಾನಾ ರೀತಿಯ ಉತ್ತರಗಳು ಬರಬಹುದು.
ತಮ್ಮ ವಾದಕ್ಕೆ ಸಮರ್ಥನೆಯನ್ನೂ ನೀಡಬಹುದು. ಆದರೆ, ಇಲ್ಲಿ ಬಿಜೆಪಿ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯುವ ನಿರೀಕ್ಷೆಯ ಜತೆಗೆ 2024ರ ಲೋಕಸಭೆ ಚುನಾವಣೆ ಮತ್ತು 2028ರ ವಿಧಾನಸಭೆ ಚುನಾವಣೆ ಯನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ ಎಂಬುದು ಸ್ಪಷ್ಟ. ಪ್ರಸಕ್ತ ವಿಧಾನಸಭೆಯಲ್ಲಿ 121 ಶಾಸಕರನ್ನು ಹೊಂದಿರುವ ಬಿಜೆಪಿಯಲ್ಲಿ ಒಬ್ಬರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ್ದಾರೆ. ಉಳಿದ 120 ಶಾಸಕರ ಪೈಕಿ ಈಗಾಗಲೇ ಪ್ರಕಟಿಸಿರುವ 212 ಅಭ್ಯರ್ಥಿಗಳಲ್ಲಿ 89 ಕ್ಷೇತ್ರಗಳಲ್ಲಿ ಹಾಲಿ ಶಾಸಕ ರನ್ನು ಕಣಕ್ಕಿಳಿಸಿದೆ. ಎರಡು ಕ್ಷೇತ್ರಗಳಲ್ಲಿ ಹಾಲಿ ಶಾಸಕರ ಮಕ್ಕಳಿಗೆ ಟಿಕೆಟ್ ನೀಡಲಾಗಿದೆ.
ಶಾಸಕರಿಬ್ಬರು ನಿಧನರಾದ ಕ್ಷೇತ್ರಗಳಲ್ಲಿ ಅವರ ಮಗ ಮತ್ತು ಪತ್ನಿಗೆ ಟಿಕೆಟ್ ಘೋಷಿಸಿದೆ. ಇನ್ನು ಎರಡು ಕ್ಷೇತ್ರಗಳಲ್ಲಿ ಶಾಸಕರು ನಿವೃತ್ತಿ ಘೋಷಿಸಿದ್ದರಿಂದ ಅಲ್ಲಿ ಹೊಸಬರನ್ನು ಕಣಕ್ಕಿಳಿಸಲಾಗಿದೆ. ಅಂದರೆ ಬಿಜೆಪಿ ಟಿಕೆಟ್ ನಿರಾಕರಿಸಿರುವುದು ಕೇವಲ 17 ಕ್ಷೇತ್ರಗಳಲ್ಲಿ ಮಾತ್ರ. ಅದರಲ್ಲೂ ಎರಡು ಕ್ಷೇತ್ರದ ಅಭ್ಯರ್ಥಿಗಳ ಪೈಕಿ ಒಬ್ಬರು ಪುತ್ರನ ಲಂಚ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರೆ, ಇನ್ನೊಬ್ಬರು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾದವರು.
ಮತ್ತೊಬ್ಬರ ವಿರುದ್ಧ ಮಹಿಳೆ ಜತೆಗಿನ ಖಾಸಗಿ ಫೋಟೋ ಬಹಿರಂಗವಾದ ಆರೋಪವಿತ್ತು. ಹಾಲಿ ಶಾಸಕರಿರುವ ಏಳು ಕ್ಷೇತ್ರಗಳು ಸೇರಿದಂತೆ 12 ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಘೋಷಿಸಬೇಕಿದ್ದು, ಈ ವೇಳೆ ಎಷ್ಟು ಮಂದಿಗೆ ಟಿಕೆಟ್ ಸಿಗುತ್ತದೆ ಎಂಬುದರ ಆಧಾರದ ಮೇಲೆ ಒಟ್ಟು ಎಷ್ಟು ಮಂದಿ ಶಾಸಕರಿಗೆ ಟಿಕೆಟ್ ಕೈತಪ್ಪಿದೆ ಎಂಬುದು ಸ್ಪಷ್ಟವಾಗುತ್ತದೆ. ಹೆಚ್ಚೆಂದರೆ 20ರಿಂದ 22 ಕ್ಷೇತ್ರಗಳಲ್ಲಿ ಟಿಕೆಟ್ ಕೈತಪ್ಪಬಹುದು.
ಅಭ್ಯರ್ಥಿಗಳ ಘೋಷಣೆಗೆ ಮುನ್ನ ಕರ್ನಾಟಕದಲ್ಲೂ ಗುಜರಾತ್ ಮಾದರಿ ಅನುಸರಿಸಲಾಗುತ್ತದೆ. 30ರಿಂದ 35 ಶಾಸಕ ರಿಗೆ ಟಿಕೆಟ್ ಕೈತಪ್ಪಲಿದೆ ಎಂದು ಹೇಳಲಾಗುತ್ತಿತ್ತಾದರೂ ಪಕ್ಷದ ವರಿಷ್ಠರು ಆ ರೀತಿ ಅಪಾಯ ಮೈಮೇಲೆ ಎಳೆದುಕೊಳ್ಳಲು ಮುಂದಾಗದೆ ಅಭ್ಯರ್ಥಿಗಳ ಆಯ್ಕೆಗೆ ಕರ್ನಾಟಕ ಮಾದರಿ ಅಳವಡಿಸಿಕೊಂಡಿದ್ದಾರೆ. ಅಳೆದು-ತೂಗಿ 89 ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಹಾಲಿ ಶಾಸಕರ ಕುಟುಂಬದವರಿಗೆ ಅವಕಾಶ ಮಾಡಿಕೊಟ್ಟಿದೆ.
ಅಂದರೆ, ಒಟ್ಟು 93 ಕ್ಷೇತ್ರಗಳಲ್ಲಿ ಗೆದ್ದು ಬರುವ ಜವಾಬ್ದಾರಿ ಯನ್ನು ಆಯಾ ಶಾಸಕರು ಮತ್ತು ಅವರ ಕುಟುಂಬದವರಿಗೆ
ವಹಿಸಿದೆ. ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸುವಾಗಲೂ ಪಕ್ಷ ಎಚ್ಚರಿಕೆಯಿಂದಲೇ ನಿರ್ಧಾರ ತೆಗೆದುಕೊಂಡಿದೆ. 17 ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳು ದಕ್ಷಿಣ ಕನ್ನಡ ಮತ್ತು ನಾಲ್ಕು ಕ್ಷೇತ್ರಗಳು ಉಡುಪಿ ಜಿಲ್ಲೆಯದ್ದಾಗಿದೆ. ಇಲ್ಲಿ ಪಕ್ಷದ ಗೆಲುವು
ಸಾಂಪ್ರದಾಯಿಕ ಮತ ಮತ್ತು ಹಿಂದುತ್ವದ ಆಧಾರದ ಮೇಲೆ ನಡೆಯುತ್ತಿರುವುದರಿಂದ ಆ ಮತಗಳು ಕೈತಪ್ಪದಂತೆ
ನೋಡಿಕೊಳ್ಳುವ ಪ್ರಯತ್ನ ಮಾಡಿದೆ.
ಉಳಿದ ೧೧ ಕ್ಷೇತ್ರಗಳ ಪೈಕಿ ಇಬ್ಬರ ವಿರುದ್ಧ ಗಂಭೀರ ಪ್ರಕರಣಗಳಿರುವುದರಿಂದ ಅಪಾಯ ಮೈಮೇಲೆ ಎಳೆದುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇನ್ನುಳಿದ ೯ ಕ್ಷೇತ್ರಗಳಲ್ಲಿ ಹಾಲಿ ಶಾಸಕರು ಸೋಲುತ್ತಾರೆ ಎಂದು ಸಮೀಕ್ಷೆಗಳು ಹೇಳಿದ್ದರಿಂದ ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಮೂಲಕ ಅದೃಷ್ಟ ಪರೀಕ್ಷೆಗೆ ಬಿಜೆಪಿ ಮುಂದಾಗಿದೆ.
ಅಂದರೆ, ಇದುವರೆಗಿನ ಟಿಕೆಟ್ ಹಂಚಿಕೆ ಪ್ರಕಾರ ಹಾಲಿ ಶಾಸಕರಿರುವ 113 ಕ್ಷೇತ್ರಗಳ ಪೈಕಿ ಟಿಕೆಟ್ ಸಿಕ್ಕಿದ ಮತ್ತು ಕುಟುಂಬ ದವರ ಪಾಲಾದ 93 ಕ್ಷೇತ್ರಗಳನ್ನು ಅವರು ಗೆದ್ದುಕೊಂಡು ಬಂದರೆ ಬಾಕಿ ಇರುವ 20 ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಗೆಲ್ಲಿಸಿಕೊಂಡು ಬಂದರೆ ಅಲ್ಲಿಗೆ ಪಕ್ಷ ಬಹುಮತ ಗಳಿಸುವುದು ಸ್ಪಷ್ಟ. ಈ ಬಾರಿ 64 ಹೊಸ ಮುಖಗಳನ್ನು ಬಿಜೆಪಿ ಕಣಕ್ಕಿಳಿಸಿದ್ದು, ಇದರಲ್ಲಿ ಹಾಲಿ ಶಾಸಕರ 20 ಕ್ಷೇತ್ರಗಳನ್ನು ಹೊರತುಪಡಿಸಿದರೆ 44 ಹೊಸಬರು ಯಾವ ಸಾಧನೆ ಮಾಡು ತ್ತಾರೆ ಎಂಬುದರ ಮೇಲೆ ಫಲಿತಾಂಶ ಅವಲಂಬಿಸಿರುತ್ತದೆ.
ಇಲ್ಲಿ ಬಿಜೆಪಿ ಜಾಣತನ ಮೆರೆದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಲಿ ಶಾಸಕರಿಗೆ ಮತ್ತೊಂದು ಅವಕಾಶ ನೀಡಿದ ಕ್ಷೇತ್ರದಲ್ಲಿ ಬೇರೆ ಯಾರನ್ನೇ ಕಣಕ್ಕಿಳಿಸಿದರೂ ಸೋಲು ಖಚಿತ ಎಂಬುದು ವರಿಷ್ಠರಿಗೂ ಗೊತ್ತು. ಇದೆಲ್ಲವನ್ನೂ ಲೆಕ್ಕ ಹಾಕಿಯೇ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಕೆಲವೊಂದು ಅನಿರೀಕ್ಷಿತ ಬದಲಾವಣೆಗಳನ್ನು ಮಾಡಿಕೊಂಡಿದೆ. ಈ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಬಗ್ಗೆಯೇ ಎಲ್ಲಾ ಸಮೀಕ್ಷೆಗಳು ಹೇಳುತ್ತವೆ.
ಹೀಗಿರುವಾಗ ಈ ಬಾರಿ ಅಧಿಕಾರಕ್ಕೆ ಬಾರದೇ ಇದ್ದರೂ ಭವಿಷ್ಯದ ದೃಷ್ಟಿಯಿಂದ ಅಂದರೆ 2024ರ ಲೋಕಸಭೆ ಚುನಾವಣೆ ಮತ್ತು 2ರಲ್ಲಿ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಅನುಕೂಲವಾಗುವಂತೆ ಹೊಸ ಮುಖಗಳಿಗೆ ಮಣೆ ಹಾಕಿದರೆ ಜನರಿಗೆ ಬದಲಾವಣೆಯ ಸಂದೇಶ ನೀಡಿದಂತಾಗುತ್ತದೆ. ಜತೆಗೆ ತಮಗೆ ಅವಕಾಶ ನೀಡಿದ ಋಣ ತೀರಿಸಲು ಹೊಸಬರು ಸಕ್ರಿಯ ವಾಗಿ ಕೆಲಸ ಮಾಡಿದರೆ ಅದರಿಂದ ಪಕ್ಷಕ್ಕೆ ಲಾಭವಾಗುತ್ತದೆ.
ಇನ್ನು ರಾಜ್ಯದಲ್ಲಿ ತೀವ್ರ ಚರ್ಚೆ ನಡೆಯುತ್ತಿರುವುದು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ವಯಸ್ಸಿನ ಪರಿಗಣನೆ. ವಯಸ್ಸಾಗಿದೆ ಎಂಬ ಕಾರಣಕ್ಕೆ ಕೆ.ಎಸ್.ಈಶ್ವರಪ್ಪ ಅವರಿಗೆ ಮತ್ತು ಹೊಸಬರಿಗೆ ಅವಕಾಶ ಮಾಡಿಕೊಡಲು ಜಗದೀಶ್ ಶೆಟ್ಟರ್ ಅವರಿಗೆ ಚುನಾವಣೆಗೆ ಸ್ಪಽಸದಂತೆ ವರಿಷ್ಠರು ಸೂಚಿಸಿದ್ದಾರೆ. ಆದರೆ, ಅವರಿಗಿಂತ ಹೆಚ್ಚು ವಯಸ್ಸಾದವರು, ಕಡಿಮೆ ಪ್ರಭಾವ ಹೊಂದಿರುವವರಿಗೆ ಟಿಕೆಟ್ ನೀಡಲಾಗಿದೆ. ಈ ಮೂಲಕ ಪಕ್ಷ ನಿಷ್ಠರನ್ನು ಕಡೆಗಣಿಸಲಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ವಯಸ್ಸು ಮತ್ತು ಪಕ್ಷ ನಿಷ್ಠೆಯ ವಿಚಾರವನ್ನು ಮಾತ್ರ ಪರಿಗಣಿಸಿದರೆ ಈ ಆರೋಪ ಸತ್ಯವಾದರೂ ವರಿಷ್ಠರು ಬದಲಾವಣೆಯ ನಿರ್ಧಾರ ಕೈಗೊಳ್ಳಲು ಬೇರೆ ಕಾರಣಗಳಿವೆ. ಈಶ್ವರಪ್ಪ ಅವರು ರಾಜ್ಯಾಧ್ಯಕ್ಷರಾಗಿ ಪಕ್ಷದಲ್ಲಿ ಮತ್ತು ಉಪಮುಖ್ಯಮಂತ್ರಿ
ಯಾಗಿ ಅಽಕಾರದಲ್ಲೂ ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ.
ಅದೇ ರೀತಿ ಜಗದೀಶ್ ಶೆಟ್ಟರ್ ಕೂಡ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿಯಂತಹ ಸ್ಥಾನಗಳನ್ನು ಗಳಿಸಿದ್ದು, ಮತ್ತೆ ಗೆದ್ದರೂ ಅದಕ್ಕಿಂತ ದೊಡ್ಡ ಸ್ಥಾನ ಅಲಂಕರಿಸಲು ಸಾಧ್ಯವಿಲ್ಲ. ಹೀಗಾಗಿ ಹೊಸಬರಿಗೆ ಅವಕಾಶ ಮಾಡಿಕೊಡುವ ಮೂಲಕ ಭವಿಷ್ಯದ ದೃಷ್ಟಿಯಿಂದ ಚುನಾವಣೆಗೆ ಸ್ಪರ್ಧಿಸದಂತೆ ಅವರಿಬ್ಬರಿಗೆ ಸಲಹೆ ಮಾಡಲಾಗಿದೆ. ಅದಕ್ಕಿಂತ ಮುಖ್ಯವಾಗಿ ಇವರಿಬ್ಬರು ಪ್ರತಿನಿಽಸುತ್ತಿರುವ ಕ್ಷೇತ್ರಗಳು ಬಿಜೆಪಿಯ ಭದ್ರ ಕೋಟೆಯಾಗಿದ್ದು, ಯಾರೇ ನಿಂತರೂ ಗೆಲ್ಲುತ್ತಾರೆ. ಆದರೆ, ವಯಸ್ಸಿನ ಕಾರಣಕ್ಕೆ ಇತರರಿಗೂ ಟಿಕೆಟ್ ನಿರೀಕರಿಸಿದರೆ ಅದು ಕ್ಷೇತ್ರದಲ್ಲಿ ಪಕ್ಷದ ಸೋಲಿಗೆ ಕಾರಣವಾಗಬಹುದು. ಅಲ್ಲಿ ಪಕ್ಷಕ್ಕೆ ಭದ್ರ
ನೆಲೆಯೂ ಇಲ್ಲ, ಸಮರ್ಥ ಅಭ್ಯರ್ಥಿಯೂ ಇಲ್ಲ. ಹೀಗಾಗಿ ಅಂತಹ ಕಡೆಗಳಲ್ಲಿ ಗೆಲವುವೊಂದನ್ನೇ ಮಾನದಂಡವಾಗಿ ಟ್ಟುಕೊಳ್ಳಲಾಗಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.
ಬಿಜೆಪಿ ಈಗಲೂ ಶಿಸ್ತಿನ ಪಕ್ಷ, ಸಿದ್ಧಾಂತವೇ ಮುಖ್ಯ ಎನ್ನುವಂತಿದ್ದರೆ ಟಿಕೆಟ್ ಹಂಚಿಕೆಯಲ್ಲಿ ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವರ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಆಕ್ಷೇಪಿಸುವುದರಲ್ಲಿ ಅರ್ಥವಿದೆ. ಆದರೆ, ಅಧಿಕಾರ ರಾಜಕಾರಣದ ಬೆನ್ನುಬಿದ್ದ ಮೇಲೆ ಪಕ್ಷ ಆ ಶಿಸ್ತು, ಸಿದ್ಧಾಂತವನ್ನು ಬದಿಗೆ ಸರಿಸಿದೆ. ಬಿಜೆಪಿಯನ್ನು ರಾಷ್ಟ್ರ ಮಟ್ಟದಲ್ಲಿ ಬೆಳೆಸಿ ಅಽಕಾರಕ್ಕೆ ತರುವಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿದ ಹಿರಿಜೀವ ಲಾಲ್‌ಕೃಷ್ಣ ಆಡ್ವಾಣಿ ಅವರನ್ನೇ ಅಧಿಕಾರದಿಂದ ದೂರವಿಟ್ಟ, ಅವರನ್ನು ಮಾರ್ಗದರ್ಶಕ ಮಂಡಳಿಯಲ್ಲಿ ಕುಳ್ಳಿರಿಸಿ ಬದಿಗೆ ಸರಿಸಿದ, ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಕಾರಣಕರ್ತರಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಈಗಿನ ಬಿಜೆಪಿಗೆ ಈಶ್ವರಪ್ಪ, ಶೆಟ್ಟರ್ ಯಾವ ಲೆಕ್ಕ?
ಲಾಸ್ಟ್ ಸಿಪ್: ನನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ನಿನ್ನ ಎರಡೂ ಕಣ್ಣುಗಳು ಹೋದರೆ ನನಗೆ ಹೆಚ್ಚು ಸಂತೋಷ
ಎನ್ನುವುದೇ ಈಗಿನ ರಾಜಕೀಯ ತಂತ್ರ.