Wednesday, 11th December 2024

ಸಿಕ್ಕಿದ ಅವಕಾಶ ಕಳೆದುಕೊಳ್ಳುತ್ತಿದೆಯೇ ಕಾಂಗ್ರೆಸ್ ?

ವರ್ತಮಾನ

maapala@gmail.com

ಅಧಿಕಾರ ರಾಜಕಾರಣದಲ್ಲಿ ‘ಶಾರ್ಟ್‌ಕಟ್’ ಬಳಕೆ ಮೊದಲಿನಿಂದಲೂ ನಡೆದುಕೊಂಡು ಬಂದ ವ್ಯವಸ್ಥೆ. ಅಧಿಕಾರಕ್ಕೆ ಬರಲು, ಬಂದ ಮೇಲೆ ಉಳಿಸಿಕೊಳ್ಳಲು ಜನಪರಕ್ಕಿಂತ ಜನಪ್ರಿಯ ಯೋಜನೆಗಳು, ಉಚಿತ ಕೊಡುಗೆಗಳ ಘೋಷಣೆಗಳು.. ಹೀಗೆ ತರಹೇವಾರಿ ಆಮಿಷಗಳನ್ನು ಜನರಿಗೆ ಒಡ್ಡುವುದು ಸಾಮಾನ್ಯವಾಗಿದ್ದವು.

ಆದರೆ, 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಈ ರೀತಿಯ ಶಾರ್ಟ್‌ಕಟ್ ರಾಜಕಾರಣಕ್ಕೆ ತಕ್ಕ ಮಟ್ಟಿಗೆ ಬ್ರೇಕ್ ಸಿಕ್ಕಿದೆ. ಇದಕ್ಕೆ ಹೆಚ್ಚು ಭವಿಷ್ಯವಿಲ್ಲ ಎಂಬುದು ನಿಧಾನವಾಗಿ  ಸಾಬೀತಾ ಗುತ್ತಿದೆ. ಅದು ಆಡಳಿತದ ವಿಚಾರವೇ ಆಗಿರಲಿ, ಚುನಾವಣಾ ಪ್ರಚಾರವೇ ಆಗಿರಲಿ, ದೀರ್ಘ ಕಾಲದ ಅನುಕೂಲ, ಭವಿಷ್ಯ ವನ್ನು ಗಮನ ದಲ್ಲಿಟ್ಟುಕೊಂಡು ಮಾಡುವ ಕೆಲಸಗಳೇ ರಾಜಕೀಯ ಪಕ್ಷಗಳ ಕೈ ಹಿಡಿಯು ತ್ತಿದೆ.

ಇದಕ್ಕೆ ಉದಾಹರಣೆ 2014ರ ಬಳಿಕ ಬಿಜೆಪಿ ದೇಶಾದ್ಯಂತ ತನ್ನ ಬಲ ಹೆಚ್ಚಿಸಿಕೊಂಡು ಅಧಿಕಾರ ವಿಸ್ತರಿಸಿಕೊಳ್ಳುತ್ತಿರುವುದು. ಜನಸಂಘ, ಬಿಜೆಪಿ ಮೂಲಕ ಹಲವು ದಶಕಗಳ ಸತತ ಹೋರಾಟದ ಮೂಲಕ ಅಧಿಕಾರಕ್ಕೇರಿದ ಬಿಜೆಪಿ ಅದನ್ನು ಉಳಿಸಿಕೊಳ್ಳುವುದರ ಜತೆಗೆ ಬೆಳೆಸುತ್ತಿರುವುದೂ ಗಮನಕ್ಕೆ ಬಂದಿದೆ. ಆದರೆ, ಇದನ್ನು ಅನುಸರಿಸದ ಕಾಂಗ್ರೆಸ್ ಕ್ರಮೇಣ ತನ್ನ ಶಕ್ತಿ ಕಳೆದುಕೊಳ್ಳುತ್ತಿದೆ. ಬೇಸರದ ಸಂಗತಿ ಎಂದರೆ, ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳಲು ಕಾಂಗ್ರೆಸ್ ಇನ್ನೂ ಮನಸ್ಸು ಮಾಡದೇ ಇರುವುದು. ಅದರಲ್ಲೂ ಕರ್ನಾಟಕದಂತಹ ಅಽಕಾರಕ್ಕೇರಲು ಅವಕಾಶವಿರುವ ರಾಜ್ಯಗಳಲ್ಲೂ ಇದೇ ತಪ್ಪು ಮಾಡುತ್ತಿರುವುದು ಪಕ್ಷ ಅಧಿಕಾರ ಕಳೆದುಕೊಂಡು ವಿಲವಿಲ ಎಂದು ಒದ್ದಾಡುತ್ತಿರುವುದಕ್ಕೆ ಸಾಕ್ಷಿ.

ವಿಧಾನಸಭೆ ಚುನಾವಣೆಗೆ ಒಂದು ವರ್ಷ ಮುನ್ನವೇ ಪ್ರತಿಪಕ್ಷ ಕಾಂಗ್ರೆಸ್ ಆಡಳಿತಾರೂಢ ಬಿಜೆಪಿ ವಿರುದ್ಧ ಹಲವು
ಅಭಿಯಾನಗಳನ್ನೇ ರೂಪಿಸಿ ಆಡಳಿತ ವಿರೋಧಿ ಅಲೆ ಹೆಚ್ಚುವಂತೆ ನೋಡಿಕೊಂಡಿತ್ತು. ಅದರಲ್ಲೂ ಸರಕಾರದ ವಿರುದ್ಧದ
ಭ್ರಷ್ಟಾಚಾರ ಆರೋಪಗಳು, 40 ಪರ್ಸೆಂಟ್ ಕಮಿಷನ್ ಆರೋಪಗಳು ಕಾಂಗ್ರೆಸ್‌ನ ಈ ಅಭಿಯಾನವನ್ನು ಒಂದು
ಮಟ್ಟಕ್ಕೆ ಯಶಸ್ವಿಗೊಳಿಸಿತ್ತು. ಇದೇ ರೀತಿ ಮುಂದುವರಿದರೆ ಯಾವುದೇ ಸಮಸ್ಯೆ ಇಲ್ಲದೆ ಅಽಕಾರಕ್ಕೆ ಬರುವುದು ಖಚಿತ
ಎಂಬಂತಹ ವಾತಾವರಣವೂ ನಿರ್ಮಾಣವಾಗಿತ್ತು.

ಸರಕಾರದ ವಿರುದ್ಧದ 40 ಪರ್ಸೆಂಟ್ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ಗೆ ದಾಖಲೆ ಇಲ್ಲದೇ ಇದ್ದರೂ ಚುನಾವಣೆ ಎದುರಿಸಲು ಬೇಕಾದ ಅಸಗಳು ಸಿಕ್ಕಿದ್ದವು. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ, ಹಾವೇರಿ ನಗರಸಭೆ ಯಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರೊಬ್ಬರಿಗೆ ಜೈಲು ಶಿಕ್ಷೆ, ಕೆಎಸ್‌ಡಿಎಲ್‌ನಲ್ಲಿ ರಾಸಾಯನಿಕ ಖರೀದಿಗಾಗಿ ಲಂಚ ಪ್ರಕರಣದಲ್ಲಿ ಶಾಸಕ ಮತ್ತು ಅವರ ಪುತ್ರ ಸಿಕ್ಕಿ ಬಿದ್ದಿದ್ದು… ಹೀಗೆ ಸಾಕಷ್ಟು ವಿಷಯಗಳು ಕಾಂಗ್ರೆಸ್‌ಗೆ ಅನುಕೂಲ ಮಾಡಿಕೊಟ್ಟಿತ್ತು. ಇದನ್ನೇ ಪ್ರಬಲವಾಗಿ ಮುಂದುವರಿಸಿದಿದ್ದರೆ ಇಷ್ಟರಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಅಧಿಕಾರ ಕ್ಕೇರುವ ಅವಕಾಶಗಳು ಬಾಗಿಲು ತೆರೆದು ಸ್ವಾಗತಿಸುತ್ತಿದ್ದವು.

ಆದರೆ, ಅಷ್ಟರಲ್ಲಿ ಕಾಂಗ್ರೆಸ್‌ಗೆ ತನ್ನ ಹಳೆಯ ಶಾರ್ಟ್ಕಟ್‌ಗಳ ನೆನಪಾಯಿತು. 40 ಪರ್ಸೆಂಟ್ ಕಮಿಷನ್, ಭ್ರಷ್ಟಾಚಾರದ ಆರೋಪ ಬದಿಗಿಟ್ಟು ಗ್ಯಾರಂಟಿ ಘೋಷಣೆಗಳ ಮೂಲಕ ಜನರನ್ನು ಆಕರ್ಷಿಸಲಾರಂಭಿಸಿತು. ಆದರೆ, ಇಂತಹ ಉಚಿತ ಘೋಷಣೆಗಳು ತಕ್ಕಮಟ್ಟಿಗೆ ಕೈಹಿಡಿಯಬಹುದಾದರೂ ಹೆಚ್ಚು ಲಾಭ ತರುವುದಿಲ್ಲ ಎಂಬ ಯೋಚನೆಯನ್ನೇ ಕಾಂಗ್ರೆಸ್ ಮಾಡಿರಲಿಲ್ಲ. ಹೀಗಾಗಿ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಿಗೆ ಇಂತಹ ಉಚಿತ ಘೋಷಣೆಗಳಿಂದ ದೇಶದ ಅರ್ಥಿಕತೆಗೆ ಹಾನಿ ಎಂಬ ಬಿಜೆಪಿಯ ವಾದ ಸ್ವಲ್ಪ ಮಟ್ಟಿಗೆ ತಣ್ಣೀರೆರಚಿತು. ಆದರೂ ಕಾಂಗ್ರೆಸ್ ಉಚಿತ ಘೋಷಣೆಗಳ ಗ್ಯಾರಂಟಿ ಮುಂದು ವರಿಸಿದೆ. ಇದರ ವಿರುದ್ಧ ಬಿಜೆಪಿ ಅಭಿಯಾನವನ್ನೂ ತೀವ್ರಗೊಳಿಸಿದೆ.

ಈ ಮಧ್ಯೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲು ಹೆಚ್ಚಳ, ಒಳಮೀಸಲು, ಮುಸ್ಲಿಮರಿಗೆ ಹಿಂದುಳಿದ ವರ್ಗಗಳ
೨ಬಿ ಅಡಿ ನೀಡಿದ್ದ ಮೀಸಲು ತೆಗೆದುಹಾಕಿ ಅದನ್ನು ಒಕ್ಕಲಿಗರು, ಲಿಂಗಾಯತರಿಗೆ ನೀಡುವ ಬಿಜೆಪಿ ಸರಕಾರದ ನಿರ್ಧಾರಗಳು ಕಾಂಗ್ರೆಸ್‌ಗೆ ಕೊಂಚ ಮಟ್ಟಿಗೆ ಗಲಿಬಿಲಿ ತಂದಿತು. ಇದನ್ನು ತಾಳ್ಮೆಯಿಂದ ಎದುರಿಸಿ ಅದರ ಲಾಭ ಆಡಳಿತ ಪಕ್ಷಕ್ಕೆ ಹೆಚ್ಚು ಪ್ರಮಾಣದಲ್ಲಿ ಸಿಗದಂತೆ ನೋಡಿಕೊಳ್ಳುವ ಅವಕಾಶ ಕಾಂಗ್ರೆಸ್ ಮುಂದೆ ಇತ್ತು. ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲು ಹೆಚ್ಚಳ ಆಗಬೇಕಾದರೆ ಸರಕಾರದ ನಿರ್ಧಾರವನ್ನು ಸಂವಿಧಾನದ 9ನೇ ಷೆಡ್ಯೂಲ್‌ಗೆ ಸೇರಿಸಬೇಕು. ಈ ಕೆಲಸ ಕೇಂದ್ರ ಸರಕಾರ ಮಾಡಬೇಕಿದ್ದು, ಇನ್ನೂ ಆ ಕಾರ್ಯ ನಡೆದಿಲ್ಲ. ಆದರೆ, ಮುಸ್ಲಿಮರ ಮೀಸಲು ತೆಗೆದುಹಾಕಿದ್ದನ್ನೇ ದೊಡ್ಡ ವಿಚಾರವಾಗಿ ಮಾಡಿದ ಕಾಂಗ್ರೆಸ್, ತಾನು ಮತ್ತೆ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಮತ್ತೆ 2ಬಿ ಅಡಿ ಮೀಸಲು ನೀಡ ಲಾಗುವುದು ಎಂದು ಘೋಷಿಸಿತು.

ಸಹಜವಾಗಿಯೇ ಇದು ಒಕ್ಕಲಿಗರು, ಲಿಂಗಾಯತರ ಆಕ್ರೋಶಕ್ಕೆ ಕಾರಣವಾಯಿತು. ಇದೆಲ್ಲಕ್ಕೂ ಹೆಚ್ಚು ಆಕ್ರಮಣಕಾರಿ
ಯಾಗಿ ಪ್ರತಿಕ್ರಿಯಿಸದೆ ಕೊಂಚ ತಾಳ್ಮೆ ಮತ್ತು ಬುದ್ಧಿವಂತಿಕೆಯಿಂದ ಕಾಂಗ್ರೆಸ್ ನಾಯಕರು ವರ್ತಿಸಿದ್ದಿದ್ದರೆ ಮೀಸಲು
ವಿಚಾರ ಕಾಂಗ್ರೆಸ್‌ಗೆ ತಿರುಗುಬಾಣವಾಗುತ್ತಿರಲಿಲ್ಲ. ಇದೀಗ ಚುನಾವಣಾ ಪ್ರಚಾರ ಆರಂಭವಾಗಿದೆ. ಈ ಹಂತದಲ್ಲಾದರೂ ಕಾಂಗ್ರೆಸ್ ತನ್ನ ಹಳೆಯ ಅಸವಾದ ೪೦ ಪರ್ಸೆಂಟ್ ಕಮಿಷನ್, ಭ್ರಷ್ಟಾಚಾರ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಹೋರಾಟ ಮಾಡಲು ಅವಕಾಶವಿತ್ತು. ಆದರೆ, ಮತ್ತೆ ಶಾರ್ಟ್‌ಕಟ್ ದಾರಿಗೆ ಹಿಂತಿರುಗಿದ ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರ ವಿರುದ್ಧ ವೈಯಕ್ತಿಕವಾಗಿ ಮುಗಿಬಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷದ ಹಾವು ಎಂದು ಕರೆದರು. ಚುನಾವಣೆ ಪ್ರಚಾರಕ್ಕೆ ಅವರೇಕೆ ನಮ್ಮ ರಾಜ್ಯಕ್ಕೆ ಬರಬೇಕು ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಳ್ಳ ಎಂದು ಜರೆದರು. ಕಾಂಗ್ರೆಸ್ ನಾಯಕರ ಇಂತಹ ಹೇಳಿಕೆಗಳು
ಹಿಂದಿನ ಚುನಾವಣೆಗಳಲ್ಲಿ ಪಕ್ಷಕ್ಕೆ ಅದೆಷ್ಟು ಡ್ಯಾಮೇಜ್ ಮಾಡಿತು ಎಂಬುದು ಗೊತ್ತಿದ್ದರೂ ಪದೇ ಪದೆ ಅಂತಹ ಹೇಳಿಕೆಗಳ ಮೊರೆ ಹೋಗುವ ಮೂಲಕ ತನ್ನ ವಿರುದ್ಧವೇ ಬಿಜೆಪಿಗೆ ಅಸಗಳನ್ನು ಒದಗಿಸುತ್ತಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆ ಮೇಲೆ ಕೇಂದ್ರದ ಪರಿಣಾಮ ಹೆಚ್ಚು ಬೀರುವುದಿಲ್ಲ ಎಂಬುದು 2004, 2009, 2013ರಲ್ಲಿ ಸಾಬೀತಾಗಿದ್ದರೂ ರಾಜ್ಯ ಬಿಜೆಪಿ ಸರಕಾರವನ್ನು ಬಿಟ್ಟು ಕೇಂದ್ರ ಸರಕಾರವನ್ನು ನಿಂದಿಸುತ್ತಾ, ಪ್ರಧಾನಿ ನರೇಂದ್ರ ಮೋದಿ ಆಡಳಿತವನ್ನು ಟೀಕಿಸುತ್ತಾ ಕಾಲ ಕಳೆಯುತ್ತಿದ್ದಾರೆ.

ಒಂದು ವರ್ಗದ ಮತದಾರರನ್ನು ಸೆಳೆಯಲು ಆರ್‌ಎಸ್‌ಎಸ್ ವಿರುದ್ಧ ಅನಗತ್ಯವಾಗಿ ಟೀಕೆ, ಆರೋಪಗಳನ್ನು ಮಾಡು ತ್ತಿದ್ದಾರೆ. ಇನ್ನು ಲಿಂಗಾಯತ ವಿಚಾರದಲ್ಲೂ ಅಷ್ಟೆ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುತ್ತಿದ್ದಂತೆ, ಬಿಜೆಪಿಯವರು ಲಿಂಗಾಯತ ವಿರೋಧಿಗಳು ಎಂದು ಬಿಂಬಿಸುವ ಪ್ರಯತ್ನ ಮಾಡಿದರು. ಇದರಿಂದ ತಕ್ಷಣ ಎಚ್ಚೆತ್ತ ಬಿಜೆಪಿ ಲಿಂಗಾಯತ ಮತಗಳು ಪಕ್ಷಬಿಟ್ಟುಹೋಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ಕಾಂಗ್ರೆಸ್ ಈ ಸಂದರ್ಭದಲ್ಲಿ ಸಮುದಾಯದ ಹೆಸರು ಪ್ರಸ್ತಾಪಿಸದೆ ಹಿರಿಯ ನಾಯಕರನ್ನು ಬಿಜೆಪಿ ಮೂಲೆಗುಂಪು ಮಾಡುತ್ತಿದೆ ಎಂದು ಹೇಳಿದ್ದಿದ್ದರೆ ಬಿಜೆಪಿಯಿಂದ ಸ್ವಲ್ಪ ಮಟ್ಟಿ ಗಾದರೂ ಲಿಂಗಾಯತ ಮತಗಳನ್ನು ಕಸಿದುಕೊಳ್ಳಲು ಸಾಧ್ಯವಾಗುತ್ತಿತ್ತು.

ಆದರೆ, ಅಲ್ಲೂ ತರಾತುರಿ ಮಾಡಿ ಸಿಕ್ಕಿದ ಅವಕಾಶ ಕಳೆದುಕೊಂಡರು. ಇದೀಗ ಮೀಸಲು ಕುರಿತು ಮತ್ತೊಂದು ವಿವಾದವನ್ನು ಕಾಂಗ್ರೆಸ್ ಮೈ ಮೇಲೆ ಎಳೆದುಕೊಂಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲು ಪ್ರಮಾಣವನ್ನು ಶೇ.75 ಕ್ಕೇರಿಸುವು ದಾಗಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿದ ಹೇಳಿಕೆ ಪಕ್ಷಕ್ಕೆ ಹಾನಿ ಯುಂಟುಮಾಡುವ ಸಾಧ್ಯತೆ ಇದೆ. ಇದರ ಕುರಿತು ರಾಜಕೀಯ ಹೇಳಿಕೆಗಳು ಏನೇ ಇರಲಿ, ಶೇ. ೫೦ ಮೀಸಲಿನಿಂದ ಈಗಾಗಲೇ ಅನ್ಯಾಯಕ್ಕೊಳಗಾಗಿರು ವವರು ಮೀಸಲು ವ್ಯವಸ್ಥೆಯ ವಿರುದ್ಧವೇ ರೋಸಿ ಹೋಗಿದ್ದಾರೆ.

ಇದೀಗ ಮೀಸಲನ್ನು ಶೇ. 50ರಿಂದ 75ಕ್ಕೆ ಏರಿಸುತ್ತೇವೆ ಎಂದರೆ ಈಗಾಗಲೇ ಆ ವ್ಯವಸ್ಥೆಯಿಂದ ಹೊರಗಿರುವವರು ಕಾಂಗ್ರೆಸ್ ವಿರುದ್ಧ ತಿರುಗಿ ಬೀಳಬಹುದು. ಕಾಂಗ್ರೆಸ್‌ನ ಈ ರೀತಿಯ ತಂತ್ರಗಾರಿಕೆಗಳಿಂದಾಗಿ ಭ್ರಷ್ಟಾಚಾರ, 40 ಪರ್ಸೆಂಟ್ ಕಮಿಷನ್ ವಿರುದ್ಧದ ಹೋರಾಟ ನಿಧಾನವಾಗಿ ಧ್ವನಿ ಕಳೆದುಕೊಳ್ಳುತ್ತಿದೆ. ಈ ಸಂದರ್ಭದಲ್ಲಿ 2014ರ ಲೋಕಸಭೆ ಚುನಾವಣೆ ನೆನಪಾಗು ತ್ತದೆ. ಯುಪಿಎ ಸರಕಾರದ ಭ್ರಷ್ಟಾಚಾರ, ಹಗರಣಗಳ ವಿರುದ್ಧದ ಚುನಾವಣೆ ಇದು ಎಂದು ಹೇಳಿಕೊಂಡಿದ್ದ ಬಿಜೆಪಿ ಕೊನೆಯ ಕ್ಷಣದವರೆಗೂ ಆ ತಂತ್ರದಿಂದ ಹೊರಬರಲೇ ಇಲ್ಲ.

ಬಿಜೆಪಿ ಅಧಿಕಾರಕ್ಕೆ ಬಂದರೆ ಭ್ರಷ್ಟರನ್ನು ಜೈಲಿಗಟ್ಟುತ್ತೇವೆ ಎಂದರು. ಬಿಜೆಪಿ ಪಟ್ಟು ಹಿಡಿದದ್ದನ್ನು ನೋಡಿ ಜನರೂ ಅದನ್ನು
ನಂಬಿದರು. ಅನಾಯಾಸವಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂತು. 2019ರಲ್ಲಿ ಮತ್ತೆ ಅಧಿಕಾರ ಉಳಿಸಿಕೊಂಡು ಇದೀಗ 2024ರಲ್ಲಿ ಮೂರನೇ ಬಾರಿ ಅಧಿಕಾರಕ್ಕೇರಲು ವೇದಿಕೆ ಸಿದ್ದಪಡಿಸಿಕೊಂಡಿದೆ. ಆದರೆ, ಅವಸರಕ್ಕೆ ಬಿದ್ದು ಶಾರ್ಟ್‌ಕಟ್ ಗಳನ್ನೇ ನೆಚ್ಚಿಕೊಂಡಿರುವ ಕಾಂಗ್ರೆಸ್ ಇದುವರೆಗೂ ಬಿಜೆಪಿಯ ವಿರುದ್ಧ ಜನಾಭಿಪ್ರಾಯ ಮೂಡಿಸಲು ಸಾಧ್ಯವಾಗಿಲ್ಲ. ಇದನ್ನು ನೆನಪಿಸಿಕೊಂಡರೆ ಕಾಂಗ್ರೆಸ್‌ನ ಯಡವಟ್ಟುಗಳು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಬಹುದು.

ಲಾಸ್ಟ್ ಸಿಪ್: ಸಿಕ್ಕಿದ ಅವಕಾಶಗಳನ್ನು ಬಳಸಿಕೊಳ್ಳದೆ ಯಡವಟ್ಟುಗಳ ಮೇಲೆ ಯಡವಟ್ಟು ಮಾಡಿಕೊಳ್ಳುವುದಕ್ಕೆ ಕಾಂಗ್ರೆಸ್ ಎನ್ನಬಹುದೇ?