Wednesday, 11th December 2024

ರಾಜ್ಯದಲ್ಲಿ ಯಾವ ಪಕ್ಷ ಗೆದ್ದರೂ, ಅದು ಮತದಾರನ ಸೋಲು !

ನೂರೆಂಟು ವಿಶ್ವ

vbhat@me.com

ಕಳೆದ ಹದಿನೈದು ದಿನಗಳಲ್ಲಿ ನಡೆಯುತ್ತಿರುವ ಟಿಕೆಟ್ ಹಂಚಿಕೆ ಪ್ರಹಸನವನ್ನು ನೋಡಿದರೆ, ರಾಜ್ಯದ ಮತದಾರರು ಶತಮೂರ್ಖರು ಎಂದೇ ಮೂರೂ ಪಕ್ಷಗಳ ನಾಯಕರು ಭಾವಿಸಿದಂತಿದೆ. ನಿನ್ನೆ ತನಕ ಒಂದು ಪಕ್ಷದಲ್ಲಿದ್ದವರು ಇಂದು ಮತ್ತೊಂದು ಪಕ್ಷ ಸೇರುತ್ತಿದ್ದಾರೆ.

ಮೂರೂ ರಾಜಕೀಯ ಪಕ್ಷಗಳು ಟಿಕೆಟ್ ಹಂಚಿಕೆ ಮಾಡಲು ಪಟ್ಟ ಕಷ್ಟ, ಹಂಚಲು ಅನುಸರಿಸಿದ ಮಾನದಂಡ, ಅದನ್ನು ನಿಭಾಯಿಸಿದ ರೀತಿಯನ್ನು ಕಣ್ತುಂಬಿಸಿಕೊಂಡ ಬಳಿಕ ಹತ್ತು ಸಂಗತಿಗಳು ನಿಸ್ಸಂದೇಹವಾಗಿ ರಾಜ್ಯದ ಜನತೆಗೆ ಸ್ಪಷ್ಟವಾಗಿವೆ. ೧. ಮೂರೂ ರಾಜಕೀಯ ಪಕ್ಷಗಳಿಗೂ ಯಾವ ವ್ಯತ್ಯಾಸವೂ ಇಲ್ಲ ೨. ಸಂದರ್ಭ ಬಂದರೆ ಯಾರು ಎಂಥ (ಅಸಹ್ಯ, ಹೇಸಿಗೆ..) ನಿರ್ಧಾರವನ್ನಾದರೂ ತೆಗೆದುಕೊಳ್ಳುತ್ತಾರೆ, ೩. ಸಿದ್ಧಾಂತ, ವಿಚಾರಧಾರೆ ಗಳೆಲ್ಲ ಬರೀ ಬೋಗಸ್ ೪.

ಮೂರೂ ಪಕ್ಷಗಳು ಪಕ್ಕಾ ಅವಕಾಶವಾದಿಗಳು ೫. ಅಧಿಕಾರ ರಾಜಕಾರಣ (Power Politics) ದ ಮುಂದೆ ಎಲ್ಲ ಪಕ್ಷಗಳೂ ಒಂದೇ ೬. ಈ ಮೂವರ ಪೈಕಿ ಯಾರೇ ಅಧಿಕಾರಕ್ಕೆ ಬಂದರೂ, ಯಾವ ಗುಣಾತ್ಮಕ ಬದಲಾವಣೆಯೂ ಆಗುವುದಿಲ್ಲ. ಈ ಮೂರೂ ಪಕ್ಷಗಳಿಂದ ಹೆಚ್ಚಿನದೇನನ್ನೂ ನಿರೀಕ್ಷೆ ಮಾಡು ವಂತಿಲ್ಲ. ೭. ಈ ಮೂರೂ ಪಕ್ಷಗಳ ಮನಸ್ಥಿತಿ ಒಂದೇ. ಅಂದರೆ ಅಂಗಡಿ ಹೆಸರು ಬೇರೆ ಬೇರೆ, ಆದರೆ ಒಳಗಿನ ಮಾಲು ಅಥವಾ ಸರಕುಗಳು ಒಂದೇ. ೮. ಚುನಾವಣೆ ಬಯಲಲ್ಲಿ ಎಲ್ಲರೂ ಬೆತ್ತಲೆ. ೯. ಪ್ರಜಾಪ್ರಭುತ್ವದ ಆರಂಭಿಕ ಹಂತವಾದ ಚುನಾವಣೆ ಪ್ರಕ್ರಿಯೆಯೇ ಕಲುಷಿತವಾದರೆ, ಯಾರು ಎಷ್ಟೇ ಶ್ರಮಿಸಿದರೂ ವ್ಯವಸ್ಥೆ ಯನ್ನು ಸ್ವಚ್ಛ ಮಾಡಲು ಸಾಧ್ಯವಿಲ್ಲ. ೧೦. ಮತದಾರನ ಮುಂದೆ ಬೇರೆ ಯಾವ ಆಯ್ಕೆಗಳೂ ಇಲ್ಲ.

ಹೌದೋ, ಅಲ್ಲವೋ ನೀವೇ ಒಂದು ಕ್ಷಣ ಕುಳಿತು ಯೋಚಿಸಿ. ಕಳೆದ ಹದಿನೈದು ದಿನಗಳಲ್ಲಿ ನಡೆಯುತ್ತಿರುವ ಟಿಕೆಟ್ ಹಂಚಿಕೆ ಪ್ರಹಸನವನ್ನು ನೋಡಿದರೆ, ರಾಜ್ಯದ ಮತದಾರರು ಶತಮೂರ್ಖರು ಎಂದೇ ಮೂರೂ ಪಕ್ಷಗಳ ನಾಯಕರು ಭಾವಿಸಿ ದಂತಿದೆ. ನಿನ್ನೆ ತನಕ ಒಂದು ಪಕ್ಷದಲ್ಲಿದ್ದವರು ಇಂದು ಮತ್ತೊಂದು ಪಕ್ಷ ಸೇರುತ್ತಿzರೆ. ತಮ್ಮದು ಶಿಸ್ತಿನ ಪಕ್ಷ, ಸೈದ್ಧಾಂತಿಕ ಪಕ್ಷ ಎಂದು ಹೇಳುತ್ತಿದ್ದ ಬಿಜೆಪಿ ಸಹ ಎಲ್ಲ ನೀತಿ-ನಿಯಮ, ಸಿದ್ಧಾಂತಗಳನ್ನು ಗಾಳಿಗೆ ತೂರಿದೆ.

ಟಿಕೆಟ್ ಹಂಚಿಕೆಯಲ್ಲಿ ಅನುಸರಿಸಬೇಕಾದ ಕನಿಷ್ಠ ಮಾನದಂಡವನ್ನೂ ಅದು ಅನುಸರಿಸಿಲ್ಲ. ಇಷ್ಟು ದಿನಗಳ ಕಾಲ ತಾನೇ ಬೊಂಬಡಾ ಬಜಾಯಿಸಿಕೊಂಡು ಬಂದಿದ್ದ ವಂಶಪಾರಂಪರ್ಯ ವಿರೋಧಿ ನೀತಿಗೆ ಕುಠಾರಘಾತ ಹಾಕಿದೆ. ಅಣ್ಣ-ತಮ್ಮ,
ಅಣ್ಣ-ತಂಗಿ,ಗಂಡ-ಹೆಂಡತಿ, ಮಾವ-ಸೊಸೆ, ಚಿಕ್ಕಪ್ಪ-ದೊಡ್ಡಪ್ಪ.. ಹೀಗೆ ಸಾಲು ಸಂಬಂಧಿಕರಿಗೆಲ್ಲ ಬಿಜೆಪಿ ಟಿಕೆಟ್ ಹಂಚಿ ಬಿಟ್ಟಿದ್ದಾರೆ.

ಬಿಜೆಪಿ ಪ್ರಣೀತ ವಂಶಪಾರಂಪರ್ಯ ಆಡಳಿತ ವಿರೋಧ ಎನ್ನುವುದು ಕೇವಲ ನೆಹರು-ಗಾಂಧಿ ಕುಟುಂಬ ವಂಶಪಾರಂಪ ರ್ಯಕ್ಕೆ ಮಾತ್ರ ಸೀಮಿತವಾ? ಅಥವಾ ತಮಗೆ ಬೇಡದವರಿಗೆ ಟಿಕೆಟ್ ತಪ್ಪಿಸಲು ಮಾತ್ರ ಈ ಸಿದ್ಧಾಂತವಾ? ಆರು ಸಲ ಗೆದ್ದವರಿಗೆ ಟಿಕೆಟ್ ಇಲ್ಲ, ಎಷ್ಟು ಸಲ ಒಬ್ಬರ ಮುಖವನ್ನೇ ನೋಡೋದು ಎಂದು ಜಗದೀಶ ಶೆಟ್ಟರರನ್ನು ಹೊರಗಿಟ್ಟ ಬಿಜೆಪಿ, ಆರು ಸಲ ಆರಿಸಿ ಬಂದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಟಿಕೆಟ್ ನೀಡುತ್ತದೆ.

ಇದು ಯಾವ ಲಾಜಿಕ್? ಹಳೆ ಮುಖಗಳು ಬೇಡ, ಹೊಸಬರಿಗೆ ಮಣೆ ಹಾಕೋಣ ಎನ್ನುತ್ತಾ, ಸುರೇಶಕುಮಾರ ಅವರಂಥ ಹಳೆ ಮುಖಕ್ಕೆ ಟಿಕೆಟ್ ಕೊಡುತ್ತದೆ. ಪಕ್ಷ, ಸಂಘಟನೆಯಲ್ಲಿ ದುಡಿದವರಿಗೆ ಮಾತ್ರ ಟಿಕೆಟ್ ಎನ್ನುವ ಬಿಜೆಪಿ, ಆರಂಭದಿಂದಲೂ ಕಾಂಗ್ರೆಸ್ಸಿನಲ್ಲಿದ್ದು, ನಿನ್ನೆ ಬಿಜೆಪಿಗೆ ಮರಳಿದ ನಾಗರಾಜ ಛಬ್ಬಿಯವರಿಗೆ ಕಲಘಟಗಿ ಟಿಕೆಟ್ ನೀಡುತ್ತದೆ. ಅದಕ್ಕೂ ಎರಡು ದಿನ ಮುನ್ನ ಪಕ್ಷವನ್ನು ಸೇರಿದ ನಾಗಮಂಗಲದ ಶಿವರಾಮೇಗೌಡರ ಪತ್ನಿಗೆ ಟಿಕೆಟ್ ನೀಡಿದ್ದನ್ನು ನೋಡಿದರೆ, ಆ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷ ಎನಿಸಿರುವ ಬಿಜೆಪಿಗೆ ತಮ್ಮದೇ ಸ್ವಂತ ಅಭ್ಯರ್ಥಿ ಇರಲಿಲ್ಲ ಎಂದೇ ಭಾವಿಸಬೇಕಾಗುತ್ತದೆ.

ಮಾತೆತ್ತಿದರೆ ಸಾಮಾನ್ಯ ಕಾರ್ಯಕರ್ತರನ್ನೂ ಗುರುತಿಸುವ ಪಕ್ಷ ಎನ್ನುವ ಬಿಜೆಪಿ ನಾಯಕರು, ಅಲ್ಲ ಕಾರ್ಯಕರ್ತರಿಗೆ ಟಿಕೆಟ್ ಕೊಡಬಹುದಿತ್ತಲ್ಲ? ಹಲವು ಕ್ಷೇತ್ರಗಳಲ್ಲಿ ನಿಷ್ಠಾವಂತ ಕಾರ್ಯಕರ್ತರಿದ್ದರೂ, ಅವರನ್ನು ಕಡೆಗಣಿಸಿ, ಬೇರೆ ಪಕ್ಷಗಳಿಂದ ಬಂದವರಿಗೆ ಕೆಂಪುಗಂಬಳಿ ಹಾಸುವ ಕೆಟ್ಟ ಸಂಪ್ರದಾಯವನ್ನು ಬಿಜೆಪಿಯೂ ಮುಂದುವರಿಸಿದ್ದು ಅದರ ಸೈದ್ಧಾಂತಿಕ ದ್ವಿಮುಖ
ನೀತಿಯನ್ನು ತೋರಿಸುತ್ತದೆ.

ನೂರೈವತ್ತು ಕ್ಷೇತ್ರಗಳಲ್ಲಿ ಆರಿಸಿ ಬರುತ್ತೇವೆ ಎನ್ನುವ ಬಿಜೆಪಿ ನಾಯಕರ ಮಂಡೆಗೆ, ಟಿಕೆಟ್ ಹಂಚಿಕೆ ಪ್ರಕ್ರಿಯೆ ಆರಂಭವಾಗಿ, ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆಯಾಗಿ ಒಂದು ವಾರವಾದರೂ, ಅಸಲಿಗೆ ವರುಣಾ ಮತ್ತು ಕನಕಪುರ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಯಾರು ಎಂಬುದೇ ತೋಚಿರಲಿಲ್ಲ. ಅಕ್ಷರಶಃ ಆ ಎರಡು ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳೇ ಇರಲಿಲ್ಲ. ಸೋಮಣ್ಣ ಮತ್ತು ಅಶೋಕ್ ಅವರ ಮೇಲೆ ಒತ್ತಡ ಹೇರಿ, ಒಲ್ಲದ ಮನಸ್ಸಿನಲ್ಲಿದ್ದ ಅವರನ್ನು ಕಣಕ್ಕೆ ದೂಡಬೇಕಾಯಿತು. ಒಟ್ಟಾರೆ ಈ ಸಲ ಇಂಥ ಅಪಸವ್ಯಗಳು ಒಂದಾ? ಎರಡಾ? ನಾವು ಹೊಸ ಮುಖಗಳಿಗೆ ಟಿಕೆಟ್ ಕೊಟ್ಟಿದ್ದೇವೆ ಎಂದು
ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದಾರೆ.

ಸರಿ, ಆದರೆ ಅವರೆಂಥವರು ಎಂಬುದನ್ನು ಹೇಳಬೇಕಿತ್ತು. ಹೊಸಬರನ್ನು ಆಯ್ಕೆ ಮಾಡುವಾಗ ಅವರ ಗುಣಕಥನಗಳನ್ನು
ಹೇಳಬೇಕಲ್ಲವೇ? ಕೇವಲ ಹೊಸಬರು ಎಂಬ ಒಂದೇ ಕಾರಣಕ್ಕೆ ಅವರನ್ನು ಒಪ್ಪಿಕೊಳ್ಳಬೇಕಾ? ಅಷ್ಟಕ್ಕೂ ಹೊಸಬರು ಅಂದರೆ ಏನು? ರಾಜಕಾರಣಕ್ಕೆ ಹೊಸಬರು ಅಂತಾನಾ? ಬೀಜ ಬಿತ್ತುವಾಗ, ಯಾವ ತಳಿ, ಸಂಕರ ಎಂಬುದನ್ನು ನೋಡಬೇಡವೇ? ಕಾರಣ ಈ ಹೊಸಬರನ್ನು ಹಳತಾಗುವ ತನಕ ಸಹಿಸಿಕೊಳ್ಳಬೇಕಲ್ಲ? ಹೊಸಬರ ಮಂದೆಯಲ್ಲಿ ಅಯೋಗ್ಯರು ನುಸುಳಿದರೆ, ಮುಂದೆ ಅವರು ಪಕ್ಷವನ್ನು ಗಬ್ಬೆಬ್ಬಿಸುತ್ತಲೇ ಹೋಗುತ್ತಾರೆ. ಹೊಸಬ ಎನ್ನುವುದೇ ಅರ್ಹತೆ ಆಗಬಾರದು, ಆಗುವುದೂ
ಇಲ್ಲ.

ಹೀಗಾಗಿ ನಾವು ಹೊಸಬರಿಗೆ ಟಿಕೆಟ್ ಕೊಟ್ಟಿದ್ದೇವೆ ಎಂಬುದು ಅಗ್ಗಳಿಕೆಯ ಮಾತಲ್ಲ. ಇಷ್ಟು ಮಂದಿ ಯೋಗ್ಯರಿಗೆ, ಅರ್ಹರಿಗೆ, ಸಂಭಾವಿತರಿಗೆ, ಲಾಯಕ್ಕಾದವರಿಗೆ, ಉತ್ತಮಚಾರಿತ್ರ್ಯ ಇರುವವರಿಗೆ ಟಿಕೆಟ್ ಕೊಟ್ಟಿದ್ದೇವೆ ಎಂದು ಹೇಳಬೇಕಿತ್ತು . ಬಿಜೆಪಿ ಪಟ್ಟಿಯಲ್ಲಿ ಅಂಥ ಎಷ್ಟು ಮಂದಿಯಿದ್ದಾರೆ? ಬಿಜೆಪಿಯ ಹೊಸಬರ ಪಟ್ಟಿಯಲ್ಲಿ ಜೈಲಿಗೆ ಹೋಗಿ ಬಂದವರು, ಕ್ರಿಮಿನಲ್ ಆರೋಪ ಎದುರಿಸುತ್ತಿರುವವರು, ಸಾರ್ವಜನಿಕ ಜೀವನದ ಅನುಭವ ಇಲ್ಲದವರು, ಪಡ್ಡೆಗಳು, ಗೂಂಡಾಗಳು, ತೀರಾ
ಎಳಸಲುಗಳೆ ಇದ್ದಾರೆ.

ಪಕ್ಷದ ಹೆಸರಿನಲ್ಲಿ, ಮೋದಿ ಹವಾದಲ್ಲಿ, ಬೇರೆ ಆಯ್ಕೆಗಳಿಲ್ಲವೆಂದು ಇವರಲ್ಲಿ ಹಲವರು ಆರಿಸಿಯೂ ಬರಬಹುದು. ಹೊಸಬರಿಗೆ ಟಿಕೆಟ್ ಕೊಡುವ ಭರದಲ್ಲಿ ರಾಜ್ಯಸಭೆಗೆ ಕಳುಹಿಸಿದ ಸ್ಪ್ಯಾನ್ ನಾರಾಯಣನಂಥ ಬಲರಾಮನ ಗೋವಿನಂಥ (ಹಾಲೂ ಕೊಡೊಲ್ಲ, ಸಗಣಿಯನ್ನೂ ಹಾಕೊಲ್ಲ)ವರೂ ಇದ್ದರೆ ಅದರಿಂದ ಏನು ಸಾಧಿಸಿದಂತಾಯಿತು? ಅಂಥವರನ್ನು ಆರಿಸಿದರೆ,
ಸಮಾಜಕ್ಕಾಗಲಿ, ಪಕ್ಷಕ್ಕಾಗಲಿ ಏನು ಪ್ರಯೋಜನ? ಹಿರಿಯ ನಾಯಕರಿಗೆ ಟಿಕೆಟ್ ತಪ್ಪಿಸಲು ಅವರ ಹೆಂಡತಿಗೆ ಟಿಕೆಟ್ ಕೊಡುವ ವಿಚಿತ್ರ, ಹೊಸ ಸಂಪ್ರದಾಯಕ್ಕೆ ಬಿಜೆಪಿ ನಾಂದಿ ಹಾಡಿದೆ. ಗಂಡಂದಿರ ಅವಕಾಶವನ್ನು, ಬೆಳೆಯುವ ನಾಯಕತ್ವ ವನ್ನು ಕತ್ತರಿಸುವುದು ಇದರ ಉದ್ದೇಶ.

‘ಕೊಂದ ಪಾಪವನ್ನು ತಿಂದು ತೀರಿಸಿಕೊಂಡರಂತೆ’ ಎನ್ನುವ ಹಾಗೆ, ಇದು ಒಂಥರ ಗಂಡನಿಗೆ ಟಿಕೆಟ್ ಕೊಡದ ಪಾಪವನ್ನು
ಹೆಂಡತಿಗೆ ಕೊಟ್ಟು ಪರಿಹರಿಸಿಕೊಂಡಂತೆ. ಉದಾಹರಣೆಗೆ, ಅರವಿಂದ ಲಿಂಬಾವಳಿ. ಅವರಿಗೆ ಟಿಕೆಟ್ ತಪ್ಪಿಸಿದ್ದು ಯಾಕೋ
ಗೊತ್ತಿಲ್ಲ. ಅದರ ಹಿಂದಿನ ಲಾಜಿಕ್ ಏನಿದ್ದಿರಬಹುದು? ಅವರಿಗೆ ತಪ್ಪಿಸಿದ ಟಿಕೆಟನ್ನು ಅವರ ಪತ್ನಿಗೆ ಕೊಡುವ ಹಿಂದಿನ
ಮರ್ಮವೇನು? ರಾಜಕೀಯದ ಗಂಧ-ಗಾಳಿ ಇಲ್ಲದ ಅವರ ಪತ್ನಿ ಆರಿಸಿ ಬಂದು, ಶಾಸನಸಭೆಯಲ್ಲಿ ಏನು ಮಾತಾಡಬಹುದು? ಇಷ್ಟು ದಿನ ಮನೆಯಲ್ಲಿದ್ದ ಗೃಹಿಣಿಯನ್ನು ಏಕಾಏಕಿ ರಣರಂಗಕ್ಕೆ ಕರೆತರುವ ಹಿಂದಿನ ತರ್ಕವೇನು? ಹೊಸಮುಖಗಳು ಎಂಬ ಪಟ್ಟಿಯಲ್ಲಿ ಇಂಥ ನಲವತ್ತು-ಐವತ್ತು ಮಂದಿ ಆರಿಸಿ ಬಂದರೆ, ಶಾಸನಸಭೆಯ ಗುಣಮಟ್ಟ ಹೇಗಿರಬಹುದು? ಇದರಿಂದ ಯಾವ ಗುಣಾತ್ಮಕ ಬದಲಾವಣೆ ಆಗಬಹುದು? ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೂ ಮಣ್ಣಂಗಟ್ಟೆ ಏನೂ ಆಗುವುದಿಲ್ಲ!

ಆಗ ಸರಕಾರ ರಚಿಸುವಾಗ ‘ಬಾಂಬೇ ಬಾಯ್ಸ್’ ಅನಿವಾರ್ಯವಾಗಿದ್ದರು. ಅವರೆಲ್ಲ ಯಾವ ಹಿನ್ನೆಲೆಯವರು ಎಂಬುದು
ಗೊತ್ತಿತ್ತು. ಅವರೆ ಪಕ್ಕಾ ಅಧಿಕಾರಕ್ಕಾಗಿ ಬಂದವರು. ಅವರೆಲ್ಲ ಏನೆ ಬೇಡಿಕೆಗಳನ್ನು ಇಟ್ಟಿದ್ದರು ಎಂಬುದೂ ಗೊತ್ತಿತ್ತು. ಈಗ ಆ ಪೈಕಿ ಎಲ್ಲರನ್ನೂ ಪಕ್ಷದ ಉಳಿಸಿಕೊಳ್ಳುವ ದರ್ದು ಏನಿತ್ತು? ಪಕ್ಷದಲ್ಲಿದ್ದ ಮೂಲನಿವಾಸಿಗಳಿಗೆ, ನಿಷ್ಠಾವಂತರಿಗೆ ಟಿಕೆಟ್ ತಪ್ಪಿಸಿ, ‘ಬಾಂಬೇ ಬಾಯ್ಸ’ಗಳಿಗೆಲ್ಲ ಮಣೆ ಹಾಕಿದ್ದೇಕೆ? ಇಂಥ ‘ಮಿಶ್ರಣ’ಗಳೇ ತುಂಬಿರುವ ಬಿಜೆಪಿಯಿಂದ ಯಾವ ಹೊಸ ಬದಲಾವಣೆ ಗಳನ್ನು ನಿರೀಕ್ಷಿಸಬಹುದು? ಸಾಧ್ಯವೇ ಇಲ್ಲ. ಕಳಪೆ ಬೀಜ ಬಿತ್ತಿದರೆ, ಕಳಪೆ ಫಲವೇ ಸಿಗುತ್ತದೆ!

ಹೀಗಾಗಿ ಬಿಜೆಪಿ ಏನೋ ಕಡಿದು ಕಟ್ಟೆ ಹಾಕಿಬಿಡುತ್ತದೆ ಎಂಬ ಭ್ರಮೆ ಬೇಡ. ಇನ್ನು ಕಾಂಗ್ರೆಸ್. ಆ ಪಕ್ಷದ ಪಟ್ಟಿಯಲ್ಲೂ ಅದೇ ಅದೇ ಮುಖಗಳು. ಅವರಲ್ಲಿ ಬಹುತೇಕರ ಸಾಧನೆ, ಸಾಮರ್ಥ್ಯಗಳೆಲ್ಲ ಗೊತ್ತಿರುವಂಥದ್ದೇ. ಕಾಂಗ್ರೆಸ್ ಸರಕಾರ ಬರುತ್ತಿದ್ದಂತೆ ಅವರು ಏನೋ ಮ್ಯಾಜಿಕ್ ಮಾಡಿಬಿಡುತ್ತಾರೆ ಎಂಬ ಭರವಸೆಯನ್ನು ಇಟ್ಟುಕೊಳ್ಳಬೇಕಿಲ್ಲ. ಕಾರಣ ಕ್ಯಾಪ್ಟನ್, ಟೀಮ, ತಂತ್ರ ಎಲ್ಲಾ ಒಂದೇ.

ಹೊಸತನದಚಿಂತನೆಯಿಲ್ಲದೇ ಬಳಲುತ್ತಿರುವ ಆ ಪಕ್ಷದ ನಾಯಕರಿಗೆ ತಮ್ಮ ಪಕ್ಷಕ್ಕೆ ಬೇಕಾದ ಕಸುವು ಏನು ಎಂಬುದೇ
ಅರ್ಥವಾಗಿಲ್ಲ. ಇನ್ನೂ ಹಳೇ ಪಾಕಕ್ಕೆ ಒಗ್ಗರಣೆ ಹಾಕುವುದರ ಆಸಕ್ತರಾಗಿದ್ದಾರೆ. ಟಿಕೆಟ್ ಹಂಚಿಕೆ ಪ್ರಕ್ರಿಯೆಯನ್ನು ಮುಂಚಿತ ವಾಗಿಯೇ ಆರಂಭಿಸಿದ್ದರೂ, ಸಮಾಜಕಾರಣ ನಿರೀಕ್ಷಿಸುತ್ತಿದ್ದ ಹೊಸ ಅಚ್ಚರಿಗಳನ್ನು ನೀಡುವಲ್ಲಿ ಆ ಪಕ್ಷ ಸೋತಿತು. ಮೊದಲ ಪಟ್ಟಿಯನ್ನೇನನ್ನೋ ಬಿಡುಗಡೆ ಮಾಡಿತು, ಆದರೆ ಎರಡನೆಯದನ್ನು ಬಿಡುಗಡೆ ಮಾಡುವ ಹೊತ್ತಿಗೆ steam ಖಾಲಿಯಾಗಿತ್ತು.

ಕೆಲವು ಕ್ಷೇತ್ರಗಳಲ್ಲಿ ಅನಾಯಾಸವಾಗಿ ಎಡವಿಬಿದ್ದಿತು. ನಾಲ್ಕು ಸಲ ಸೋತವರಿಗೆ, ಮತ್ತೆ ಸೋಲುತ್ತಾರೆ ಎಂಬುದು
ಗೊತ್ತಿದ್ದ ವರಿಗೆ, ನಾಯಕರ ಮೇಲಾಟದಿಂದ ಟಿಕೆಟ್ ಘೋಷಿಸಿ ಯಡವಟ್ಟು ಮಾಡಿಕೊಂಡಿತು. ಕಳೆದ ಮೂರ್ನಾಲ್ಕು ಚುನಾವಣೆಗಳಲ್ಲಿ ಸತತ ಸೋತ ಕ್ಷೇತ್ರಗಳಲ್ಲಿ, ಈ ಸಲ ಗೆಲ್ಲಲೇಬೇಕು ಎಂಬ ಯಾವ ನಿಶ್ಚಿತ ಯೋಜನೆ, ಕಾರ್ಯತಂತ್ರಗಳು ಇಲ್ಲ ಎಂಬುದನ್ನು ಪಕ್ಷದ ನಾಯಕರು ಸಾಬೀತುಪಡಿಸಿಬಿಟ್ಟರು. ಕಾಂಗ್ರೆಸ್ ಬಿಡುಗಡೆ ಮಾಡಿದ ಮೊದಲ ಪಟ್ಟಿ ಬಗ್ಗೆ (124 ಅಭ್ಯರ್ಥಿಗಳಿದ್ದರು) ಚರ್ಚೆಯೇ ಆಗಲಿಲ್ಲ. ಅಲ್ಲಿನ ಎಲ್ಲ ಹೆಸರುಗಳೂ ಬಹುತೇಕ ನಿರೀಕ್ಷಿತವಾಗಿದ್ದವು.

ಕಾಂಗ್ರೆಸ್ ಕೂಡ ಪಕ್ಷ ಬಿಟ್ಟವರಿಗೆ, ನಿನ್ನೆ ಮೊನ್ನೆ ಪಕ್ಷ ಸೇರಿದವರಿಗೆ ಮಣೆ ಹಾಕಿತು. ಬಿಜೆಪಿಯಲ್ಲಿ ಟಿಕೆಟ್ ಸಿಗದವರನ್ನು ಹಿಡಿದು ಆಲಂಗಿಸಿತು. ಕ್ಷೇತ್ರದಲ್ಲಿ ನೆಲೆಯೇ ಇಲ್ಲದ ಅಪಾತ್ರರಿಗೆ ಏನೇನೋ ಕಾರಣಗಳಿಗೆ ಟಿಕೆಟ್ ನೀಡಿತು. ಅದರಲ್ಲಿ ಕ್ಲಾಸಿಕ್ ನಿದರ್ಶನ ಅಂದ್ರೆ ಕುಮಟಾ. ಆ ಕ್ಷೇತ್ರದಲ್ಲಿ ಕ್ರಿಶ್ಚಿಯನ್ ಮತದಾರರ ಸಂಖ್ಯೆ ಹೆಚ್ಚೆಂದರೆ ನಾಲ್ಕು ಸಾವಿರವಿರಬಹುದು. ಅಲ್ಲಿ ಅಸ್ತಿತ್ವವೇ ಇಲ್ಲದ ಮಾಜಿ ನಾಯಕಿ ಮಾರ್ಗರೆಟ್ ಆಳ್ವಾ ಮಗ ನಿವೇದಿತ್ ಆಳ್ವಾಗೆ ಟಿಕೆಟ್ ನೀಡಿದ್ದು ಮಾತ್ರ self goal. ಆ
ಕ್ಷೇತ್ರದ ಬಗ್ಗೆ ನಿವೇದಿತ್ ಆಳ್ವಾಗೆ ಅ.ಬ.ಕ.ಡ. ಗೊತ್ತಿಲ್ಲ.

ಇನ್ನೂ ದುರಂತವೆಂದರೆ, ಅಲ್ಲಿನ ಹತ್ತು ಮತದಾರರ ಪೈಕಿ ಎಂಟು ಮಂದಿ ನಿವೇದಿತ್ ಆಳ್ವಾನನ್ನು ಹೆಂಗಸು ಎಂದು
ಭಾವಿ ಸಿರುವುದು! ಇನ್ನು ಜೆಡಿಎಸ್ ಬಗ್ಗೆ ಹೆಚ್ಚಿಗೆ ಹೇಳುವುದೇನೂ ಇಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ಸಿನಲ್ಲಿ ಬಸ್ ತಪ್ಪಿಸಿ ಕೊಂಡವರಿಗಾಗಿ ಎದುರು ನೋಡುತ್ತಾ, ಓಡೋಡಿ ಬರುವ ಪ್ರಯಾಣಿಕರಿಗೆ ಗಂಟೆಗಟ್ಟಲೆ ಕಾಯುತ್ತಾ, ಅವರನ್ನೆಲ್ಲ ಹತ್ತಿಸಿ ಕೊಂಡು ಬರುವ ‘ಉದಯರಂಗ’ ಬಸ್ಸಿನ ಡ್ರೈವರ್ ಥರ ಕುಮಾರಸ್ವಾಮಿಯವರು ಕಾಣುತ್ತಿದ್ದಾರೆ!

ಪುಗಸಟ್ಟೆ ಸಿಕ್ಕ ದನದ ಹಲ್ಲು ಎಣಿಸಬೇಡ ಎಂಬಂತೆ ಬಂದವರನ್ನೆ ಬಸ್ಸಿಗೆ ಹತ್ತಿಸಿಕೊಳ್ಳುತ್ತಿದ್ದಾರೆ. ಬಸ್ ಸ್ಟಾಂಡ್, ಏರ್ ಪೋರ್ಟ್‌ಗಳಲ್ಲಿ ತಮ್ಮ ಪಕ್ಷದ ಬಿ ಫಾರ್ಮ್ ಹಂಚುತ್ತಿದ್ದಾರೆ. ಟಾಯ್ಲೆಟ್‌ಗೆ ಹೋಗುವಾಗಲೂ ಅವರು ಬಿ ಫಾರ್ಮ್ ಒಯ್ಯುತ್ತಿರ ಬಹುದೇ ಎಂದು ವ್ಯಂಗ್ಯಚಿತ್ರಕಾರರು ಲೇವಡಿ ಮಾಡುವ ಹಂತಕ್ಕೆ ಹೋಗಿದ್ದಾರೆ. ಬೆಳಗ್ಗೆ ಎದ್ದು ಯಾವ ಪಕ್ಷಗಳ ಅತೃಪ್ತ ಆತ್ಮಗಳಿಗೆ ಗಾಳ ಹಾಕಬೇಕು ಎಂಬ ಯೋಚನೆಯಲ್ಲಿ ಅವರು ಮುಳುಗಿದಂತೆ ಕಾಣುತ್ತದೆ.

ತಮ್ಮ ಪಕ್ಷ ಬಿಟ್ಟು, ಕಾಂಗ್ರೆಸ್ ಸೇರಿ, ಅಲ್ಲಿ ಟಿಕೆಟ್ ಸಿಗದೇ, ಮತ್ತೆ ಮರಳಿದವರಿಗೂ ಅವರು ಟಿಕೆಟ್ ಕರುಣಿಸಿದ್ದಾರೆ. ಸದ್ಯ ಅವರು ಯಾವ ನೀತಿ-ಸಿದ್ಧಾಂತಗಳ ಬಗ್ಗೆ ಮಾತಾಡುತ್ತಿಲ್ಲ. ಅವರಿಗೆ ಅಷ್ಟಕ್ಕೂ ಇಪ್ಪತ್ತೈದು-ಮೂವತ್ತು ಸೀಟು ಬಂದರೆ ಸಾಕು.
ನರಪೇತಲನಾಗಿಯೇ ಸುಮೋ ಕುಸ್ತಿಪಟುವನ್ನು ಮಣಿಸಬಹುದು ಎಂಬುದು ಅವರ ಸರಳ ಲೆಕ್ಕಾಚಾರ. ಅವರಿಗೆ ಎವರೆ ಏರುವ ತಾಕತ್ತಿಲ್ಲ. ಉಳಿದ ಇಬ್ಬರಲ್ಲಿ ಒಬ್ಬರು ತನ್ನನ್ನು ಹೆಗಲ ಮೇಲೆ ಹೊತ್ತುಕೊಂಡು ಎವರೆ ತುದಿ ಕಾಣಿಸುತ್ತಾರೆ ಎಂಬುದು ಅವರ ಯೋಚನೆ.

ಈಗ ಹೇಳಿ, ಯಾರು ಬಂದರೂ ಅಷ್ಟೇ ತಾನೇ? ಹಿಂದಿನ ಚುನಾವಣೆಯಲ್ಲಿ ಯಾವ ಪರಿಸ್ಥಿತಿ ಇತ್ತೋ, ಈಗಲೂ ಅದೇ.
ಅದೇ ಮುಖ, ಅದೇ ಮಾತು, ಅದೇ ಭರವಸೆ, ಅದೇ, ಅದೇ. ಅಂಗಡಿ ಹೆಸರು ಬೇರೆಯಾಗಬಹುದು, ಆದರೆ ಒಳಗಿನ ಮಾಲು ಅಥವಾ ಸರಕುಗಳು ಒಂದೇ. ಹೀಗಾಗಿ ಯಾರೇ ಗೆದ್ದು ಬಂದರೂ ಸೋಲುವವನು ಮಾತ್ರ ಬಡಪಾಯಿ ಮತದಾರನೇ. ಅವನ ಮುಂದೆ ಬೇರೆ ಯಾವ ಆಯ್ಕೆಗಳಿವೆ? ನಾನು ನಿರಾಶಾವಾದಿಯಲ್ಲ. ಆದರೆ ವಾಸ್ತವ ನಾವು ಅಂದುಕೊಂಡಿರುವುದಕ್ಕಿಂತ ಭೀಕರ. ಈ ಸಂದರ್ಭದಲ್ಲಿ ಯಾಕೆ ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ಸಾಲುಗಳು ನೆನಪಾಗುತ್ತಿವೆ..ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ ನಿನ್ನ ಜೊತೆಯಿಲ್ಲದೆ ಮಾತಿಲ್ಲದೆ ಮನ ವಿಭ್ರಾಂತ.