Wednesday, 11th December 2024

ಮೋದಿ- ರಾಜ್ಯ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ

ವರ್ತಮಾನ

maapala@gmail.com

ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಸಮರಕ್ಕೆ ಅಖಾಡ ಸಿದ್ಧವಾಗುತ್ತಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಮತ್ತು ಆಡಳಿತಾರೂಢ ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ನಡೆಯುತ್ತಿದೆಯಾದರೂ ಇಲ್ಲಿ ನಿಜವಾದ ಹೋರಾಟವಿರುವುದು ಪ್ರಧಾನಿ ಮೋದಿ ಮತ್ತು ರಾಜ್ಯ ಕಾಂಗ್ರೆಸ್ ನಡುವೆ ಎಂಬುದು ಜಗಜ್ಜಾಹೀರು.

ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದ ಮತದಾನಕ್ಕೆ ಅಂತಿಮ ಹಂತದ ಸಿದ್ಧತೆಗಳು ಜೋರಾಗಿದ್ದು, ಅದಕ್ಕೆ ಪೂರಕವಾಗಿ ಪಕ್ಷಾಂತರ ಚಟುವಟಿಕೆಗಳೂ ನಡೆಯುತ್ತಿವೆ. ಬಿಜೆಪಿ, ಜೆಡಿಎಸ್ ನವರನ್ನು ಸೆಳೆಯಲು ಕಾಂಗ್ರೆಸ್ ಮತ್ತು ಕಾಂಗ್ರೆಸ್
ನವರನ್ನು ಸೆಳೆಯಲು ಬಿಜೆಪಿ-ಜೆಡಿಎಸ್ ಪೈಪೋಟಿಗೆ ಬಿದ್ದಿವೆ. ಈ ಬಾರಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಮಧ್ಯೆ ನೇರ ಹಣಾಹಣಿ ಇದ್ದು, ಮೈತ್ರಿಕೂಟವೇ ಹೆಚ್ಚು ಸ್ಥಾನಗಳನ್ನು ಪಡೆಯವುದು ಖಚಿತ.

ಆದರೆ, ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಪಡೆದು ರಾಜ್ಯದ ರಾಜಕೀಯ ಇತಿಹಾಸದಲ್ಲೇ ಹೀನಾಯ ಸ್ಥಿತಿಗೆ ತಲುಪಿದ ಕಾಂಗ್ರೆಸ್ ಈ ಬಾರಿ ಸುಧಾರಿತ ಪ್ರದರ್ಶನ ತೋರುವುದು ಸ್ಪಷ್ಟ. ಅದಕ್ಕೆ ಪೂರಕವಾದ ಕಾರ್ಯತಂತ್ರವನ್ನೂ  ಅದು ಸಿದ್ಧ ಮಾಡಿಟ್ಟುಕೊಂಡಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಅಸಮಾಧಾನಗೊಂಡವರನ್ನು ಸೆಳೆದು ತನ್ನ ಮತಬ್ಯಾಂಕ್ ಗಟ್ಟಿಗೊಳಿಸುವ ಪ್ರಯತ್ನ ಮಾಡುತ್ತಿದ್ದು, ಅದರಲ್ಲಿ ತಕ್ಕಮಟ್ಟಿಗೆ ಯಶಸ್ವಿಯೂ ಆಗಿದೆ. ಸಾಕಷ್ಟು ಮಂದಿ ಮುಖಂಡರನ್ನು ಕಾಂಗ್ರೆಸ್ ಸೆಳೆದುಕೊಂಡಿದೆಯಾ ದರೂ ಅವರ ಕಾರ್ಯಕರ್ತ ಪಡೆ ಮಾತ್ರ ಕಾಂಗ್ರೆಸ್ ಸೇರಲು ಇನ್ನೂ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ. ಅದೇ ರೀತಿ ಬಿಜೆಪಿ ಮತ್ತು ಜೆಡಿಎಸ್ ಕೂಡ ಕಾಂಗ್ರೆಸ್‌ನವರನ್ನು ಸೆಳೆಯುವ ಸಾಹಸ ಮಾಡುತ್ತಲೇ ಇದೆ. ಕಾಂಗ್ರೆಸ್‌ ನಷ್ಟು ತೀವ್ರವಾಗಿ ಅಲ್ಲದೇ ಇದ್ದರೂ ಪ್ರಯತ್ನವಂತೂ ನಡೆಯುತ್ತಲೇ ಇದೆ.

ಇದರ ಫಲಿತಾಂಶ ಏನೇ ಆದರೂ ರಾಜ್ಯದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆ ನಡೆಯುವುದು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ- ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಮಧ್ಯೆ. ಏಕೆಂದರೆ,
ಕಾಂಗ್ರೆಸ್‌ಗೆ ರಾಷ್ಟ್ರ ಮಟ್ಟದಲ್ಲಿ ಹೇಳಿಕೊಳ್ಳುವಂಥ ನಾಯಕತ್ವ ಇಲ್ಲ. ‘ಇಂಡಿಯ’ ಮೈತ್ರಿಕೂಟ ರಚಿಸಿಕೊಂಡಿರುವ ಕಾಂಗ್ರೆಸ್  ಇನ್ನೂ ತನ್ನ ಪ್ರಧಾನಿ ಅಭ್ಯರ್ಥಿ ಘೋಷಿಸಿಲ್ಲ.

ಘೋಷಣೆ ಮಾಡಿಲ್ಲ ಎನ್ನುವುದಕ್ಕಿಂತ ಅಂಥ ಪ್ರಬಲ ಅಭ್ಯರ್ಥಿ ಆ ಪಕ್ಷದಲ್ಲಾಗಲೀ, ಮಿತ್ರಪಕ್ಷಗಳಲ್ಲಾಗಲೀ ಕಾಣಿಸುತ್ತಿಲ್ಲ. ಹೀಗಾಗಿ ಸರಕಾರ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹೆಸರಲ್ಲೇ ಕಾಂಗ್ರೆಸ್ ಜನರ ಮುಂದೆ ಹೋಗುವ ಪರಿಸ್ಥಿತಿ ಬಂದಿದೆ. ಇನ್ನು ಬಿಜೆಪಿ-ಜೆಡಿಎಸ್ ಪ್ರತಿಪಕ್ಷದಲ್ಲಿರುವುದರಿಂದ ಸಹಜವಾಗಿಯೇ ಅವಕ್ಕೆ ಆಡಳಿತದ ಬೆಂಬಲ ಇಲ್ಲ.

ರಾಜ್ಯದಲ್ಲಿ ಪಕ್ಷವನ್ನು ಅತಿ ಹೆಚ್ಚು ಸ್ಥಾನದಲ್ಲಿ ಗೆಲ್ಲಿಸಿಕೊಂಡು ಬರುತ್ತೇವೆ ಎನ್ನುವ ನಾಯಕತ್ವವೂ ಇಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲೇ ಬಿಜೆಪಿ ಮತ್ತು ಜೆಡಿಎಸ್ ಜನರ ಬಳಿ ಹೋಗಲು ಸಿದ್ಧವಾಗಿದೆ. ಎರಡೂ ತಂಡಗಳು ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯತಂತ್ರಗಳನ್ನು ಸಿದ್ಧಪಡಿಸಿಕೊಂಡು ಲೋಕಸಭೆ ಚುನಾವಣೆಗೆ ಅಣಿಯಾಗುತ್ತಿವೆ.

ಅದರಲ್ಲೂ ಮುಖ್ಯವಾಗಿ ಈ ಬಾರಿಯ ಚುನಾವಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಧಾನಿ ಮೋದಿ ನಡುವಿನ ಹೋರಾಟ ಎನ್ನುವಂತಾಗಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಜೋಡೆತ್ತುಗಳಂತೆ ಕೆಲಸ ಮಾಡುತ್ತಿದ್ದಾರಾದರೂ, ಸಿದ್ದರಾಮಯ್ಯ ಮತ್ತು ಅವರ ಬಣ ಬಿಜೆಪಿ ಮತ್ತು ಮೋದಿ ಅವರ ವಿರುದ್ಧ ಹೋಗುತ್ತಿರುವಷ್ಟು ವೇಗವಾಗಿ ಮತ್ತು ಬಲವಾಗಿ
ಡಿ.ಕೆ.ಶಿವಕುಮಾರ್ ಮತ್ತು ಬಣ ಹೋಗುತ್ತಿಲ್ಲ.

ಕಳೆದ ೨-೩ ತಿಂಗಳುಗಳಿಂದ ಬರ ಪರಿಹಾರ, ಕೇಂದ್ರದ ತೆರಿಗೆ ಹಂಚಿಕೆ ಮತ್ತು ಅನುದಾನ ನೀಡುವಲ್ಲಿನ ತಾರತಮ್ಯ ವಿಚಾರ ಗಳನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ನಡೆಸುತ್ತಿರುವ ಹೋರಾಟ ವಂತೂ ಬಿಜೆಪಿಯನ್ನು ಸಾಕಷ್ಟು ಮುಜುಗರಕ್ಕೆ ತಳ್ಳಿದೆ. ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿ ಯವರನ್ನು ಎಷ್ಟೇ ಗಟ್ಟಿ ಯಾಗಿ ಸಮರ್ಥಿಸಿಕೊಂಡರೂ ಸಿದ್ದರಾಮಯ್ಯ ಅವರಂತೆ ಅಂಕಿ- ಅಂಶಗಳೊಂದಿಗೆ ಆಟವಾಡಲು ಸಾಧ್ಯವಾಗದೆ ಹಿನ್ನಡೆ ಅನುಭವಿಸುವಂತಾಗಿದೆ. ಆದರೆ, ಸಿದ್ದರಾಮಯ್ಯ ನೀಡಿರುವ ಅಂಕಿ-ಅಂಶಗಳು ಮತ್ತು ಮಾಡಿರುವ ಆರೋಪಗಳು ಜನರ ಮೇಲೆ
ಎಷ್ಟರ ಮಟ್ಟಿಗೆ ಪರಿಣಾಮ ಬೀರಿವೆ ಎಂಬುದು ಚುನಾವಣಾ ಫಲಿತಾಂಶದಲ್ಲಷ್ಟೇ ಹೊರಬರಬೇಕು.

ಹಾಗೆಂದು ಮೋದಿಯವರ ಜನಪ್ರಿಯತೆಯನ್ನು ಕಡಿಮೆ ಮಾಡಿ ಅದನ್ನು ಮತಗಳಾಗಿ ಪರಿವರ್ತಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ವಿಧಾನಸಭೆ ಚುನಾವಣೆ ವೇಳೆ ಮೋದಿ ೧೮ ಬಾರಿ ದಂಡಯಾತ್ರೆ ನಡೆಸಿದರೂ ಬಿಜೆಪಿ ಹೀನಾಯವಾಗಿ
ಸೋಲುವುದು ತಪ್ಪಲಿಲ್ಲ. ಮೋದಿ ಹೋದೆಡೆಯೆಲ್ಲಾ ಬಿಜೆಪಿ ಸೋತಿದೆ ಎಂದು ಹೇಳಿಕೊಂಡು ಕಾಂಗ್ರೆಸ್ ಬೀಗಿದರೂ ಲೋಕ ಸಭೆ ಚುನಾವಣೆ ಎಂಬುದು ವಿಧಾನಸಭೆ ಚುನಾವಣೆಯಂತಲ್ಲ.

ಏಕೆಂದರೆ, ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಇತ್ತು. ಪಕ್ಷದಲ್ಲಿ ಸಾಕಷ್ಟು ಗೊಂದಲ, ಅಸಮಾಧಾನ, ನಾಯಕರ ಮಧ್ಯೆ ಅಸಹನೆ ಇತ್ತು. ಹೀಗಾಗಿ ಮೋದಿ ಅವರ ಪ್ರಚಾರ ಅಷ್ಟೊಂದು ಪರಿಣಾಮ ಬೀರಲಿಲ್ಲ. ಆದರೆ, ಲೋಕಸಭೆ ಚುನಾವಣೆ ಹಾಗಲ್ಲ. ಅದು ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಹೋರಾಟ. ರಾಜ್ಯದ ಮತದಾರರಿಗೆ ರಾಜ್ಯ ಬಿಜೆಪಿ ಮತ್ತು ಅದರ ನಾಯಕರ ಮೇಲೆ ಸಿಟ್ಟಿದ್ದರೂ ಮೋದಿ ಅವರ ಮೇಲೆ ಪ್ರೀತಿ ಇದೆ. ಮೇಲಾಗಿ ದಕ್ಷಿಣದ ರಾಜ್ಯಗಳನ್ನು ಹೊರತುಪಡಿಸಿ ಉಳಿದೆಲ್ಲೆಡೆ ಮೋದಿ ಅಲೆ ಇದೆ. ಈ ಬಾರಿಯೂ ಅವರು ಬಹುಮತದೊಂದಿಗೆ ಪ್ರಧಾನಿಯಾಗುವುದು ಖಚಿತ ಎಂದು ಸಮೀಕ್ಷೆಗಳು ಮಾತ್ರವಲ್ಲ, ದೇಶದ ರಾಜಕೀಯ ವಾತಾವರಣವೂ ಹೇಳುತ್ತಿದೆ.

ಜನರೂ ಅದೇರೀತಿ ಭಾವಿಸಿದ್ದಾರೆ. ಖಂಡಿತವಾಗಿಯೂ ಇದು ಚುನಾವಣೆ ಮೇಲೆ ಪರಿಮಾಮ ಬೀರುತ್ತದೆ. ತಮ್ಮ ಒಂದು ಮತ ಮೋದಿ ಅವರನ್ನು ಪ್ರಧಾನಿ ಮಾಡುವುದಕ್ಕೆ ಎಂದು ಭಾವಿಸಿ ಜನ ಮತಗಟ್ಟೆಗೆ ಹೋದರೆ ಕಾಂಗ್ರೆಸ್‌ನ ಲೆಕ್ಕಾಚಾರಗಳು
ತಲೆಕೆಳಗಾಗುತ್ತವೆ. ಇನ್ನು ಬಿಜೆಪಿಗೆ ಜೆಡಿಎಸ್ ಜತೆಗಿನ ಮೈತ್ರಿಯ ಬಲವೂ ಸಿಕ್ಕಿದೆ. ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಮಲೆನಾಡು ಮತ್ತು ಮಧ್ಯ ಕರ್ನಾಟಕ ಭಾಗದಲ್ಲಿ ಬಿಜೆಪಿ ಕಳೆದ ೨ ದಶಕದಿಂದ ತನ್ನ ಸಾಮರ್ಥ್ಯವನ್ನು ತೋರಿಸುತ್ತಲೇ ಇದೆ. ಹಳೇ ಮೈಸೂರು ಭಾಗದಲ್ಲಿ ಆಗಾಗ ಎಡವುತ್ತಿದೆ. ಆದರೆ, ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ನಷ್ಟೇ ರಾಜಕೀಯ ಪ್ರಭಾವ ಹೊಂದಿರುವ ಜೆಡಿಎಸ್ ಬೆಂಬಲ ಸಿಕ್ಕಿರುವುದು, ಎರಡೂ ಪಕ್ಷಗಳು ಸ್ಥಾನ ಹೊಂದಾಣಿಕೆ ಮಾಡಿಕೊಂಡು
ಕಣಕ್ಕಿಳಿ ದಿರುವುದು ಬಿಜೆಪಿ ಪಾಲಿಗೆ ಪ್ಲಸ್ ಪಾಯಿಂಟ್ ಆದರೆ, ಕಾಂಗ್ರೆಸ್ ಗೆ ಮೈನಸ್ ಪಾಯಿಂಟ್ ಆಗಬಹುದು.

ಹಾಸನ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಬಲವಾಗಿದ್ದರೆ, ಕಳೆದ ೬ ವರ್ಷಗಳಲ್ಲಿ ಬಿಜೆಪಿ ಕೂಡ ತನ್ನ ಶಕ್ತಿ ವೃದ್ಧಿಸಿಕೊಂಡಿದೆ. ಹೀಗಿರುವಾಗ
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕಾರ್ಯಕರ್ತರ ಹಂತದಲ್ಲೂ ದೃಢವಾಗಿ ಮುಂದುವರಿದರೆ ಕಾಂಗ್ರೆಸ್ ಸಮಸ್ಯೆಗೆ ಸಿಲುಕುವುದು ಸ್ಪಷ್ಟ. ಒಂದೊಮ್ಮೆ ಈ ಮೈತ್ರಿ ಬಗ್ಗೆ ಸ್ಥಳೀಯವಾಗಿ ಬೆಂಬಲ ಸಿಗದಿದ್ದರೆ ಮಿತ್ರಪಕ್ಷಗಳು ತೊಂದರೆಗೆ ಸಿಲುಕಬೇಕಾಗುತ್ತದೆ. ಸದ್ಯದ ಮಟ್ಟಿಗೆ ಮೈತ್ರಿ ಗಟ್ಟಿಯಾಗಿದೆ ಎಂದು ಕಾಣುತ್ತಿದೆಯಾದರೂ ಮತದಾರರೂ ಅದೇ ರೀತಿ ನಡೆದುಕೊಳ್ಳುತ್ತಾರೆಯೇ ಎಂಬುದು ಫಲಿತಾಂಶ ಬಂದ ಮೇಲಷ್ಟೇ ಗೊತ್ತಾಗಬೇಕು.

ಮೇಲ್ನೋಟಕ್ಕೆ ಮೈತ್ರಿಶಕ್ತಿಯೇ ಹೆಚ್ಚಿದ್ದಂತೆ ಕಂಡುಬರುತ್ತಿದೆ. ಆದರೆ, ಕಾಂಗ್ರೆಸ್‌ಗೆ ಹೋಲಿಸಿದರೆ ಬಿಜೆಪಿ- ಜೆಡಿಎಸ್‌ಗೆ ಒಳೇಟಿನ ಭೀತಿ ಹೆಚ್ಚಾಗಿದೆ. ಕಾಂಗ್ರೆಸ್ ಗೆ ಕೋಲಾರ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಅಸಮಾಧಾನದ ಹೊಗೆ ಇದ್ದು, ಇದು ಮತದಾನದ
ಮೇಲೆ ಪರಿಣಾಮ ಬೀರಿದರೆ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಅನುಕೂಲವಾಗಬಹುದು. ಆದರೆ, ಬಿಜೆಪಿ-ಜೆಡಿಎಸ್‌ಗೆ ಹಾಗಲ್ಲ. ಹಾಸನದಲ್ಲಿ ಬಿಜೆಪಿ ಬೆಳೆಯಲು ಕಾರಣರಾಗಿರುವ ಮಾಜಿ ಶಾಸಕ ಪ್ರೀತಂ ಗೌಡ ಮುನಿಸು ಇನ್ನೂ ಶಮನವಾಗಿಲ್ಲ.

ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್‌ಗೆ ಟಿಕೆಟ್ ನೀಡಿರುವ ಬಗ್ಗೆ ಆ ಕ್ಷೇತ್ರ ವ್ಯಾಪ್ತಿಯ ಹಲವು ಬಿಜೆಪಿ ಮುಖಂಡರಿಗೇ ಆಕ್ರೋಶವಿದೆ. ಕೋಲಾರ ದಲ್ಲೂ ಎರಡೂ ಪಕ್ಷಗಳ ಮಧ್ಯೆ ಹೇಳಿಕೊಳ್ಳುವಂಥ ಮಿತ್ರತ್ವ ಬೆಳೆದಿಲ್ಲ. ತುಮಕೂರಿನಲ್ಲಿ ವಿ. ಸೋಮಣ್ಣಗೆ ಟಿಕೆಟ್ ನೀಡಿರುವುದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿಗೆ ಸಮಾಧಾನವಿಲ್ಲ.

ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಬಂಡಾಯದಿಂದ ಹಿಂದೆ ಸರಿಯುವ ಲಕ್ಷಣ ಕಾಣಿಸುತ್ತಿಲ್ಲ. ಬೀದರ್ ನಲ್ಲಿ ಭಗವಂತ ಖೂಬಾ ಕಣಕ್ಕಿಳಿದಿರುವ ಬಗ್ಗೆ ಸ್ಥಳೀಯ ಶಾಸಕರಿಗೆ ಬೇಸರವಿದೆ. ಬೆಳಗಾವಿ, ಚಿಕ್ಕೋಡಿ, ಕೊಪ್ಪಳ, ವಿಜಯಪುರ, ಚಿತ್ರದುರ್ಗ, ಚಾಮರಾಜ ನಗರ, ಉತ್ತರ ಕನ್ನಡ ಮುಂತಾದ ಕ್ಷೇತ್ರಗಳಲ್ಲಿ ಅಸಮಾಧಾನವು ಬೂದಿ ಮುಚ್ಚಿದ ಕೆಂಡದಂತೆ ಇದೆ. ಸ್ವಲ್ಪ ಹೆಚ್ಚುಕಮ್ಮಿ ಯಾದರೂ ಬೆಂಕಿ ವ್ಯಾಪಿಸಿ ಪಕ್ಷದ ಅಭ್ಯರ್ಥಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ. ಹೀಗಾಗಿ ಸಮಸ್ಯೆ ಬಗೆಹರಿದಂತೆ ಕಾಣುತ್ತಿದ್ದರೂ ರಾಜ್ಯ ಬಿಜೆಪಿ ನಾಯಕರು ಈ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ.

ಹೀಗಾಗಿ ಬಿಜೆಪಿಯ ರಾಜ್ಯ ನಾಯಕರು ಸ್ಥಳೀಯ ಮುಖಂಡರಿಗಿಂತ ಕಾರ್ಯಕರ್ತರು ಮತ್ತು ಮತದಾರರನ್ನೇ ನಂಬಿಕೊಂಡು ಚುನಾವಣೆಗೆ ಸಿದ್ಧತೆ ನಡೆಸುವಂತಾಗಿದೆ. ಈ ಕಾರಣಗಳಿಂದ ಬಿಜೆಪಿ ನೇರವಾಗಿ ಪ್ರಧಾನಿ ಮೋದಿ ಅವರ ಹೆಸರಿನಲ್ಲೇ ಮತ ಕೇಳುತ್ತಿದೆ. ಅಭ್ಯರ್ಥಿಗಿಂತ ಪ್ರಧಾನಿಯವರನ್ನು ನೋಡಿ ಮತಗಟ್ಟೆಗೆ ಬನ್ನಿ ಎನ್ನುತ್ತಿದೆ. ಅದರಲ್ಲೂ ಸ್ಥಳೀಯವಾಗಿ ಕಾರ್ಯ ಕರ್ತರು ಅಭ್ಯರ್ಥಿಗಿಂತ ಮೋದಿ ಹೆಸರನ್ನೇ ಹೆಚ್ಚಾಗಿ ಪ್ರಸ್ತಾಪಿಸುತ್ತಿದ್ದಾರೆ. ರಾಜ್ಯಕ್ಕೆ ಬರುತ್ತಿರುವ ಕೇಂದ್ರ ನಾಯಕರೂ ಕೇಂದ್ರ
ಸರಕಾರದ ಸಾಧನೆ, ಮೋದಿ ಅವರ ಅವಧಿಯಲ್ಲಿ ದೇಶ ವಿಶ್ವಮಾನ್ಯತೆ ಪಡೆದಿರುವುದನ್ನೇ ಮುಂದಿಟ್ಟುಕೊಂಡು ಜನರಲ್ಲಿ ಮತ ಕೇಳುತ್ತಿದ್ದಾರೆ.

ಆದರೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವುದರಿಂದ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡರೂ ಬಿಜೆಪಿ ೨೦೧೯ರಲ್ಲಿ ಗೆದ್ದ ೨೫ ಸ್ಥಾನಗಳನ್ನು ಈ ಬಾರಿ ಗೆಲ್ಲುವುದು ಕಷ್ಟ ಎನ್ನುವ ಪರಿಸ್ಥಿತಿ ಇದೆ. ಇದಕ್ಕೆ ೨೦೧೪ರ ಲೋಕಸಭೆ
ಚುನಾವಣೆಯ ಉದಾಹರಣೆಯೂ ಕಣ್ಣಮುಂದಿದೆ. ಲೋಕಸಭೆ ಚುನಾವಣೆಯಲ್ಲಿ ೨೦೦೪ರಲ್ಲಿ ೧೮, ೨೦೦೯ರಲ್ಲಿ ೧೯ ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ೨೦೧೪ರಲ್ಲಿ ೧೭ ಸ್ಥಾನಗಳಿಗೆ ಇಳಿದಿತ್ತು. ದೇಶಾದ್ಯಂತ ವ್ಯಾಪಿಸಿದ್ದ ‘ಮೋದಿ ಪ್ರಧಾನಿ ಯಾಗುತ್ತಾರೆ’ ಎಂಬ ಅಲೆಯ ಮಧ್ಯೆಯೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬಿಜೆಪಿಯ ಸ್ಥಾನಗಳನ್ನು
ಕಸಿದುಕೊಂಡಿತ್ತು.

೨೦೧೯ರಲ್ಲಿ ಬಿಜೆಪಿ ಮತ್ತೆ ದಾಖಲೆಯ ಸ್ಥಾನಗಳೊಂದಿಗೆ ಗೆಲುವು ಸಾಧಿಸಿತ್ತಾದರೂ ಈಗ ರಾಜ್ಯದಲ್ಲಿ ಮತ್ತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವಿದೆ. ಡಿ.ಕೆ.ಶಿವಕುಮಾರ್ ಅವರಂಥ ಟ್ರಬಲ್ ಶೂಟರ್ ರಾಜ್ಯ ಕಾಂಗ್ರೆಸ್‌ನ ಚುಕ್ಕಾಣಿ ಹಿಡಿದಿದ್ದಾರೆ. ಜತೆಗೆ ಕಾಂಗ್ರೆಸ್‌ಗೆ ಗ್ಯಾರಂಟಿ ಬಲವೂ ಇದೆ. ಇದೆಲ್ಲದರ ಜತೆಗೆ ಕಳೆದ ೩ ತಿಂಗಳಿನಿಂದ ರಾಜ್ಯ ಕಾಂಗ್ರೆಸ್ ಸರಕಾರವು, ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಮಾಡಿರುವ ತೆರಿಗೆ ಹಂಚಿಕೆ, ಅನುದಾನ ತಾರತಮ್ಯದ ಆರೋಪಗಳು ಇನ್ನೂ
ಜೀವಂತವಾಗಿದೆ. ಹೀಗಾಗಿ ಕೇವಲ ಮೋದಿ ಹೆಸರಿನಲ್ಲಿ ಮತ ಬೀಳುತ್ತದೆ, ೨೮ಕ್ಕೆ ೨೮ ಸ್ಥಾನಗಳನ್ನೂ ಗೆದ್ದೇ ಗೆಲ್ಲುತ್ತೇವೆ ಎಂದರೂ ಎಲ್ಲೋ ಒಂದು ಕಡೆ ಅವರಲ್ಲೇ ಅನುಮಾನವೂ ಇದೆ. ಅದೇನೇ ಇದ್ದರೂ ಈ ಬಾರಿ ಚುನಾವಣೆ ನಡೆಯುವುದು ನರೇಂದ್ರ
ಮೋದಿ ಮತ್ತು ರಾಜ್ಯ ಕಾಂಗ್ರೆಸ್ ನಡುವೆಯೇ ಹೊರತು ರಾಷ್ಟ್ರೀಯ ಕಾಂಗ್ರೆಸ್ ಇಲ್ಲಿ ನೆಪಮಾತ್ರ.

ಲಾಸ್ಟ್ ಸಿಪ್: ದೇಶ ಮೊದಲು, ಪಕ್ಷ ನಂತರ, ವ್ಯಕ್ತಿ ಕೊನೆಗೆ ಎಂಬುದು ಬಿಜೆಪಿಯಲ್ಲಿ ಬಾಯಿಮಾತಿಗಷ್ಟೇ ಸೀಮಿತ ಎಂಬುದಕ್ಕೆ ಮೋದಿ ಹೆಸರಲ್ಲಿ ನಡೆಯುತ್ತಿರುವ ಈ ಚುನಾವಣೆಯೇ ಸಾಕ್ಷಿ.