Friday, 20th September 2024

ನಿಜಾರ್ಥದ ಜನನಾಯಕ ಕರ್ಪೂರಿ ಠಾಕೂರ್‌

ಸಂಸ್ಮರಣೆ

ನರೇಂದ್ರ ಮೋದಿ

ಇಂದು (ಜ.೨೪) ಜನನಾಯಕ ಕರ್ಪೂರಿ ಠಾಕೂರ್‌ಜಿ ಅವರ ಜನ್ಮ ಶತಮಾನೋತ್ಸವ. ಅವರ ನಿರಂತರ ಸಾಮಾಜಿಕ ನ್ಯಾಯದ ಅನ್ವೇಷಣೆಯು ಕೋಟ್ಯಂತರ ಜನರ ಜೀವನದಲ್ಲಿ ಸಕಾರಾತ್ಮಕ ಪರಿಣಾಮವನ್ನು ಸೃಷ್ಟಿಸಿತು. ಕರ್ಪೂರಿಜಿ ಅವರನ್ನು ಭೇಟಿಯಾಗುವ ಅವಕಾಶ ನನಗೆ ಎಂದೂ
ಸಿಕ್ಕಿರಲಿಲ್ಲ. ಆದರೆ, ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ ಕೈಲಾಸಪತಿ ಮಿಶ್ರಾ ಅವರಿಂದ ನಾನು ಅವರ ಬಗ್ಗೆ ಸಾಕಷ್ಟು ಕೇಳಿದ್ದೇನೆ. ಅವರು ಸಮಾಜದ ಅತ್ಯಂತ ಹಿಂದುಳಿದ ವರ್ಗಗಳಲ್ಲಿ ಒಂದಾದ ನಾಯ್ ಸಮುದಾಯಕ್ಕೆ ಸೇರಿದವರು. ಹಲವಾರು ಅಡೆತಡೆಗಳನ್ನು ಮೆಟ್ಟಿ ನಿಂತು ಸಮಾಜ ಸುಧಾರಣೆಗೆ ಶ್ರಮಿಸಿದವರು.

ಜನನಾಯಕ ಕರ್ಪೂರಿ ಠಾಕೂರ್ ಅವರ ಜೀವನವು ಸರಳತೆ ಮತ್ತು ಸಾಮಾಜಿಕ ನ್ಯಾಯದ ಅವಳಿ ಆಧಾರ ಸ್ತಂಭಗಳ ಸುತ್ತ ಸುತ್ತುತ್ತದೆ. ಅವರ ಕೊನೆಯುಸಿರು ಇರುವ ತನಕ, ಅವರ ಸರಳ ಜೀವನಶೈಲಿ ಮತ್ತು ವಿನಮ್ರ ಸ್ವಭಾವವು ಸಾಮಾನ್ಯ ಜನರನ್ನು ಆಳವಾಗಿ ಪ್ರಭಾವಿಸಿತು. ಅವರ ಸರಳತೆ ಎತ್ತಿ ತೋರಿಸುವ ಹಲವಾರು ಉಪಾಖ್ಯಾನಗಳಿವೆ. ತಮ್ಮ ಮಗಳ ವಿವಾಹ ಸೇರಿದಂತೆ ಯಾವುದೇ ವೈಯಕ್ತಿಕ ವಿಷಯಕ್ಕೆ ಸ್ವಂತ ಹಣ ಖರ್ಚುಮಾಡಲು ಅವರು ಹೇಗೆ ಆದ್ಯತೆ ನೀಡುತ್ತಿದ್ದರು ಎಂಬುದನ್ನು ಅವರೊಂದಿಗೆ ಕೆಲಸ ಮಾಡಿದವರು ನೆನಪಿಸಿಕೊಳ್ಳುತ್ತಾರೆ.

ಬಿಹಾರದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಾಜಕೀಯ ನಾಯಕರಿಗಾಗಿ ಕಾಲೊನಿ ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಠಾಕೂರ್
ಅವರು ಯಾವುದೇ ಭೂಮಿ ಅಥವಾ ಹಣವನ್ನೂ ತೆಗೆದುಕೊಳ್ಳಲಿಲ್ಲ. ೧೯೮೮ರಲ್ಲಿ ಅವರು ನಿಧನರಾದಾಗ ಹಲವಾರು ನಾಯಕರು ಶ್ರದ್ಧಾಂಜಲಿ ಸಲ್ಲಿಸಲು ಅವರ ಗ್ರಾಮಕ್ಕೆ ತೆರಳಿದ್ದರು. ಅವರ ಮನೆಯ ಸ್ಥಿತಿ ಕಂಡು ಆ ನಾಯಕರು ಕಣ್ಣೀರು ಹಾಕಿದ್ದರು- ಇಷ್ಟು ಎತ್ತರಕ್ಕೇರಿದ ವ್ಯಕ್ತಿಯೊಬ್ಬರು ಇಷ್ಟೊಂದು ಸರಳವಾದ ಮನೆ ಹೊಂದಲು ಹೇಗೆ ತಾನೇ ಸಾಧ್ಯ ಎಂದು!

೧೯೭೭ರಲ್ಲಿ ಅವರು ಬಿಹಾರದ ಸಿಎಂ ಆಗಿ ಅಧಿಕಾರ ವಹಿಸಿಕೊಂಡಾಗಿನ ಸಂದರ್ಭ ಅವರ ಸರಳತೆಗೆ ಮತ್ತೊಂದು ನಿದರ್ಶನ. ದೆಹಲಿ ಮತ್ತು ಪಟನಾ ದಲ್ಲಿ ಜನತಾ ಸರಕಾರ ಅಧಿಕಾರದಲ್ಲಿತ್ತು. ಆ ಸಮಯದಲ್ಲಿ ಲೋಕನಾಯಕ ಜೆಪಿ ಅವರ ಜನ್ಮದಿನ ಆಚರಿಸಲು ಜನತಾ ನಾಯಕರು ಪಟನಾದಲ್ಲಿ ಜಮಾಯಿಸಿದ್ದರು. ಆಗ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರು ಹರಿದ ಕುರ್ತಾದಲ್ಲೇ ನಡೆದಾಡುತ್ತಿದ್ದರು- ತಮ್ಮದೇ ಶೈಲಿಯಲ್ಲಿ. ಅವರಿಗೆ ಹೊಸ ಕುರ್ತಾ ಖರೀದಿಸಲು ಸ್ವಲ್ಪ ಹಣ ದೇಣಿಗೆ ನೀಡುವಂತೆ ಚಂದ್ರಶೇಖರ್ ಜನರನ್ನು ಕೇಳಿದರು. ಆದರೆ, ಕರ್ಪೂರಿ ಅವರು ಆ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದರು.

ಕರ್ಪೂರಿ ಠಾಕೂರ್ ಅವರಿಗೆ ಸಾಮಾಜಿಕ ನ್ಯಾಯ ಅತ್ಯಂತ ಪ್ರಿಯವಾಗಿತ್ತು. ಅವರ ರಾಜಕೀಯ ಪ್ರಯಾಣವು ಸಂಪನ್ಮೂಲಗಳನ್ನು ನ್ಯಾಯಯುತವಾಗಿ ವಿತರಿಸುವ ಸಮಾಜವನ್ನು ರೂಪಿಸುವ ಸ್ಮರಣೀಯ ಪ್ರಯತ್ನಗಳಿಂದ ಗುರುತಿಸಲ್ಪಟ್ಟಿದೆ. ಪ್ರತಿಯೊಬ್ಬರೂ ತಮ್ಮ ಸಾಮಾಜಿಕ ಸ್ಥಾನಮಾನ ಲೆಕ್ಕಿಸದೆ ಅವಕಾಶಗಳ ಲಭ್ಯತೆಯನ್ನು ಹೊಂದಿದ್ದರು. ಆದರೆ ಠಾಕೂರ್‌ಜಿ ಭಾರತೀಯ ಸಮಾಜವನ್ನು ಕಾಡುತ್ತಿರುವ ವ್ಯವಸ್ಥಿತ ಅಸಮಾನತೆಗಳನ್ನು ಪರಿಹರಿಸಲು ಬಯಸಿದ್ದರು. ತಮ್ಮ ಆದರ್ಶಗಳಿಗೆ ಅವರ ಬದ್ಧತೆ ಎಷ್ಟಿತ್ತೆಂದರೆ, ಕಾಂಗ್ರೆಸ್ ಪಕ್ಷವು ಸರ್ವವ್ಯಾಪಿಯಾಗಿದ್ದ ಯುಗದಲ್ಲಿ ಜೀವಿಸುತ್ತಿದ್ದರೂ,
ಅವರು ಸ್ಪಷ್ಟವಾಗಿ ಕಾಂಗ್ರೆಸ್-ವಿರೋಧಿ ಧೋರಣೆ ಅನುಸರಿಸಿದರು.

ಏಕೆಂದರೆ ಕಾಂಗ್ರೆಸ್ ತನ್ನ ಸ್ಥಾಪನಾ ತತ್ವಗಳಿಂದ ವಿಮುಖವಾಗಿದೆ ಎಂಬುದು ಅವರಿಗೆ ಬಹಳ ಬೇಗ ಮನವರಿಕೆಯಾಯಿತು. ಅವರ ಚುನಾವಣಾ ವೃತ್ತಿಜೀವನವು ೧೯೫೦ರ ದಶಕದ ಶುರುವಿನಲ್ಲಿ ಪ್ರಾರಂಭವಾಯಿತು. ಅಂದಿನಿಂದ ಅವರು ಶಾಸಕಾಂಗ ಕೊಠಡಿಗಳ ಶಕ್ತಿಯಾದರು; ನೌಕರ ವರ್ಗ,
ಕಾರ್ಮಿಕರು, ಸಣ್ಣ ರೈತರು ಮತ್ತು ಯುವಕರ ಹೋರಾಟಗಳಿಗೆ ಶಕ್ತಿಯುತವಾಗಿ ಧ್ವನಿ ನೀಡಿದರು. ಶಿಕ್ಷಣ ಅವರ ಹೃದಯಕ್ಕೆ ಬಹಳ ಹತ್ತಿರವಾದ ವಿಷಯವಾಗಿತ್ತು. ತಮ್ಮ ರಾಜಕೀಯ ಜೀವನದುದ್ದಕ್ಕೂ ಅವರು ಬಡವರಿಗಾಗಿನ ಶಿಕ್ಷಣ ಸೌಲಭ್ಯಗಳನ್ನು ಸುಧಾರಿಸಲು ಶ್ರಮಿಸಿದರು. ಅವರು ಸ್ಥಳೀಯ ಭಾಷೆಗಳಲ್ಲಿನ ಶಿಕ್ಷಣದ ಪ್ರತಿಪಾದಕರಾಗಿದ್ದರು; ಇದರಿಂದ ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳ ಜನರು ಉನ್ನತಿಗೇರಲು ಮತ್ತು ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಅವರು ನಂಬಿದ್ದರು. ಅವರು ಮುಖ್ಯಮಂತ್ರಿಯಾಗಿ ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗೆ ಹಲವು ಕ್ರಮಗಳನ್ನು
ಕೈಗೊಂಡಿ ದ್ದಾರೆ.

ಪ್ರಜಾಪ್ರಭುತ್ವ, ಚರ್ಚೆ ಮತ್ತು ಸಮಾಲೋಚನೆ (ಸಂವಾದ) ಕರ್ಪೂರಿ ಅವರ ವ್ಯಕ್ತಿತ್ವದ ಅವಿಭಾಜ್ಯ ಅಂಗವಾಗಿತ್ತು. ಚಿಕ್ಕವಯಸ್ಸಿನಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡಿದ್ದಾಗ ಕಂಡ ಈ ಚೈತನ್ಯ ಮತ್ತೆ ತುರ್ತು ಪರಿಸ್ಥಿತಿ ವಿರೋಧಿಸಿದಾಗಲೂ ಅವರಲ್ಲಿ ಕಾಣಿಸಿತು. ಅವರ ವಿಶಿಷ್ಟ ದೃಷ್ಟಿಕೋನಗಳನ್ನು ಜೆಪಿ, ಡಾ.ಲೋಹಿಯಾ ಮತ್ತು ಚರಣ್ ಸಿಂಗ್ ಮುಂತಾದವರು ಮೆಚ್ಚಿಕೊಂಡಿದ್ದರು. ಕರ್ಪೂರಿ ಠಾಕೂರ್ ಅವರು ಭಾರತಕ್ಕೆ ನೀಡಿದ ಮಹತ್ವದ ಕೊಡುಗೆಗಳಲ್ಲಿ ಒಂದೆಂದರೆ, ಹಿಂದುಳಿದ ವರ್ಗಗಳಿಗೆ ಅರ್ಹ ಪ್ರಾತಿನಿಧ್ಯ ಮತ್ತು ಅವಕಾಶ ಒದಗಿಸುವ ಭರವಸೆಗಳ ಈಡೇರಿಕೆಗೆ ಕೈಗೊಂಡ ಕ್ರಮಗಳು. ಹಿಂದುಳಿದ ವರ್ಗಗಳ ಬಲವರ್ಧನೆಗೆ ಕೈಗೊಂಡ ಈ ಕ್ರಮಗಳಲ್ಲಿ ಅವರ ಪಾತ್ರ ದೊಡ್ಡದು.

ತಮ್ಮ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾದರೂ ಅವರು ಯಾವುದೇ ಒತ್ತಡಕ್ಕೆ ಮಣಿಯಲಿಲ್ಲ. ಒಬ್ಬರ ಜನ್ಮವು ಒಬ್ಬರ ಹಣೆಬರಹವನ್ನು ನಿಶ್ಚಯಿಸು ವುದಿಲ್ಲ ಎಂಬುದು ಅವರ ಪ್ರತಿಪಾದನೆಯಾಗಿತ್ತು. ಅವರ ನಾಯಕತ್ವದಲ್ಲಿ, ಎಲ್ಲರನ್ನೂ ಒಳಗೊಂಡ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕುವ ನೀತಿಗಳನ್ನು ಜಾರಿಗೆ ತರಲಾಯಿತು. ಅವರು ಸಮಾಜದ ಅತ್ಯಂತ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರೂ, ಎಲ್ಲ ವರ್ಗದ ಜನರಿಗಾಗಿ ಕೆಲಸ
ಮಾಡಿದರು. ಅವರಲ್ಲಿ ಕಹಿಯ ಯಾವುದೇ ಕುರುಹು ಇರಲಿಲ್ಲ, ಅದು ಅವರನ್ನು ನಿಜವಾಗಿಯೂ ಶ್ರೇಷ್ಠ ನಾಯಕನನ್ನಾಗಿ ಮಾಡಿದೆ.

ಕಳೆದ ೧೦ ವರ್ಷಗಳಲ್ಲಿ, ನಮ್ಮ ಸರಕಾರವು ಪರಿವರ್ತನೀಯ ಸಬಲೀಕರಣದ ಯೋಜನೆಗಳು ಮತ್ತು ನೀತಿಗಳನ್ನು ಜಾರಿಗೆ ತಂದು, ಕರ್ಪೂರಿ ಠಾಕೂರ್ ಅವರ ಹಾದಿಯಲ್ಲಿ ಸಾಗಿದೆ. ನಮ್ಮ ರಾಜಕೀಯದ ದೊಡ್ಡ ದುರಂತವೆಂದರೆ, ಕರ್ಪೂರಿ ಅವರಂಥ ಕೆಲವು ನಾಯಕರನ್ನು ಹೊರತುಪಡಿಸಿ, ಸಾಮಾಜಿಕ ನ್ಯಾಯದ ಕರೆಯನ್ನು ರಾಜಕೀಯ ಘೋಷಣೆಯಾಗಿ ಸೀಮಿತಗೊಳಿಸಲಾಗಿದೆ. ಕರ್ಪೂರಿ ಅವರ ದೃಷ್ಟಿಕೋನದಿಂದ ಪ್ರೇರಿತರಾಗಿ ನಾವು ಅದನ್ನು ಪರಿಣಾಮಕಾರಿ ಆಡಳಿತ ಮಾದರಿಯಾಗಿ ಜಾರಿಗೆ ತಂದಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ ೨೫ ಕೋಟಿ ಜನರನ್ನು ಬಡತನದ ಹಿಡಿತದಿಂದ ಮುಕ್ತ ಗೊಳಿಸಿದ ಭಾರತದ ಸಾಧನೆಯ ಬಗ್ಗೆ ಜನನಾಯಕ ಕರ್ಪೂರಿ ಠಾಕೂರ್ ಇದ್ದಿದ್ದರೆ ತುಂಬಾ ಹೆಮ್ಮೆಪಡುತ್ತಿದ್ದರು ಎಂದು ನಾನು ಆತ್ಮವಿಶ್ವಾಸ ಮತ್ತು ಹೆಮ್ಮೆಯಿಂದ ಹೇಳಬಲ್ಲೆ.

ವಸಾಹತುಶಾಹಿ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ಸುಮಾರು ೭ ದಶಕ ಗಳ ನಂತರ ಮೂಲಭೂತ ಸೌಲಭ್ಯ ಗಳನ್ನು ನಿರಾಕರಿಸಲಾದ ಸಮಾಜದ ಅತ್ಯಂತ ಹಿಂದುಳಿದ ವರ್ಗಗಳ ಜನರು ಇವರು. ಅದೇ ಸಮಯದಲ್ಲಿ, ಸಂತೃಪ್ತಿಯ ಕಡೆಗೆ ನಮ್ಮ ಪ್ರಯತ್ನಗಳು- ಪ್ರತಿ ಯೋಜನೆಯು ಶೇ.೧೦೦ರಷ್ಟು ವ್ಯಾಪ್ತಿ ತಲುಪುವುದನ್ನು ಖಚಿತಪಡಿಸಿ ಕೊಳ್ಳುವುದು, ಸಾಮಾಜಿಕ ಕಲ್ಯಾಣಕ್ಕಾಗಿನ ಅವರ ಬದ್ಧತೆಯನ್ನು ಪ್ರತಿಧ್ವನಿಸುತ್ತದೆ. ಇಂದು, ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಜನರು ಮುದ್ರಾ ಸಾಲಗಳಿಂದ ಉದ್ಯಮಿಗಳಾಗುತ್ತಿದ್ದು, ಇದು ಕರ್ಪೂರಿ ಅವರ ಆರ್ಥಿಕ ಸ್ವಾತಂತ್ರ್ಯದ ದೃಷ್ಟಿಕೋನ ವನ್ನು ಪೂರೈಸುತ್ತದೆ. ಅಂತೆಯೇ, ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿಯನ್ನು ವಿಸ್ತರಿಸುವ ಸವಲತ್ತು ನಮ್ಮ ಸರಕಾರಕ್ಕೆ ಇತ್ತು.

ಕರ್ಪೂರಿ ಅವರು ತೋರಿಸಿದ ಹಾದಿಯಲ್ಲಿ ಕೆಲಸ ಮಾಡುತ್ತಿರುವ ಒಬಿಸಿ ಆಯೋಗವನ್ನು ಸ್ಥಾಪಿಸಿದ ಗೌರವವೂ ನಮಗಿದೆ (ಇದನ್ನು ಕಾಂಗ್ರೆಸ್ ಕೆಟ್ಟದಾಗಿ ವಿರೋಧಿಸಿತು). ನಮ್ಮ ಪ್ರಧಾನ ಮಂತ್ರಿ-ವಿಶ್ವಕರ್ಮ ಯೋಜನೆಯು ಭಾರತದಾದ್ಯಂತ ಒಬಿಸಿ ಸಮುದಾಯಗಳಿಗೆ ಸೇರಿದ ಕೋಟಿಗಟ್ಟಲೆ ಜನರಿಗೆ ಸಮೃದ್ಧಿಯ ಹೊಸ ಮಾರ್ಗಗಳನ್ನು ತೋರುತ್ತಿದೆ. ನಾನು ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಯಾಗಿ, ಜನನಾಯಕ ಕರ್ಪೂರಿ ಠಾಕೂರ್ ಅವರಿಗೆ ತುಂಬಾ ಧನ್ಯವಾದ ಹೇಳಬೇಕು. ದುರದೃಷ್ಟವಶಾತ್, ನಾವು ೬೪ನೇ ವಯಸ್ಸಿನಲ್ಲಿ ಕರ್ಪೂರಿ ಅವರನ್ನು ಕಳೆದುಕೊಂಡೆವು. ನಮಗೆ ಹೆಚ್ಚು ಅಗತ್ಯವಿರುವಾಗ ಅವರನ್ನು ಕಳೆದುಕೊಂಡಿದ್ದೇವೆ. ಆದರೂ, ಅವರು ತಮ್ಮ ಕೆಲಸದಿಂದ ಕೋಟ್ಯಂತರ ಜನರ ಹೃದಯ ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಏಕೆಂದರೆ ಅವರು ನಿಜವಾದ ಜನನಾಯಕರಾಗಿದ್ದರು.

(ಲೇಖಕರು ಭಾರತದ ಪ್ರಧಾನ ಮಂತ್ರಿ)