Friday, 13th December 2024

ಕಾಶಿಯಲ್ಲಿ ಬಿಟ್ಟು ಬಂದರೂ ಕೆಣಕಿದರೆ ಕೆಂಡವಾಗುವ ಕೋಪ !

Kashi

ಯಶೋ ಬೆಳಗು

ಯಶೋಮತಿ ಬೆಳಗೆರೆ

yashomathy@gmail.com

ಕೋಪವೆಂಬುದು ಬಲಹೀನತೆಯೂ ಹೌದು ಹಾಗೆಯೇ ದೈತ್ಯ ಶಕ್ತಿಯೂ ಹೌದು. ಅದರೆ ನಾನಾ ಕಾರಣ ಗಳಿಂದ ಉದ್ಭವವಾಗುವ ಸಿಟ್ಟು ಮನುಜನ ಮೂಲಭೂತ ಗುಣಗಳಲ್ಲಿ ಒಂದು. ವಿವೇಕಯುತವಾಗಿ ಬಳಸಿ ತಮಗಾದ ಲೋಪ, ಅನ್ಯಾಯವನ್ನು ಸರಿಪಡಿಸಿ ಆರೋಗ್ಯ ಕಾಪಾಡಿಕೊಳ್ಳಬಹುದು. ಅನಿಯಂತ್ರಿತ ಕೋಪದಿಂದಾಗಿ ವ್ಯತಿರಿಕ್ತ ಪರಿಣಾಮ.

ವಿನೂತನವಾಗಿ ಪುನರುಜ್ಜೀವಗೊಂಡು ಕಂಗೊಳಿಸುತ್ತಿದ್ದ ಕಾಶಿಯನ್ನೊಮ್ಮೆ ನೋಡಿಬರಬೇಕು ಅಂದಾಗ ಈಗಲೇ ಅವಸರವೇನು? ಇನ್ನೂ ಎಷ್ಟೆಲ್ಲ ಜವಾಬ್ದಾರಿಗಳಿವೆ. ಅವನ್ನೆಲ್ಲ ಮುಗಿಸಿದ ನಂತರ ಆರಾಮಾಗಿ ಹೋಗಿ ಬರವಂತೆ ಅಂದರು ಮನೆಯಲ್ಲಿ ಎಲ್ಲರೂ. ವಿಶ್ವಕ್ಕೇ ಒಡೆಯನಾದ ವಿಶ್ವನಾಥನ ಸನ್ನಿಧಿಯಲ್ಲಿ, ಜ್ಞಾನದ ಆಗರವಾಗಿ, ಪವಿತ್ರ ಗಂಗೆಯ ಒಡಲಲ್ಲಿ ಮೋಕ್ಷದ ಬೀಡಾಗಿರುವ ವಾರಾಣಸಿಯ ಕಾಶಿಗೆ ವಿಶೇಷ ಸೆಳೆತವಿದೆ.

ವೈದಿಕ ಸಂಪ್ರದಾಯದ ವಿವಾಹ ಪದ್ಧತಿಯಲ್ಲಿ ವಧುವನ್ನು ಧಾರೆಯೆರೆಯುವ ಮುನ್ನ ಕಾಶಿಯಾತ್ರೆಗೆ ಹೊರಟು ನಿಂತ ವರನನ್ನು ಕನ್ಯಾ ಪಿತೃ ತಡೆದು ನಿಲ್ಲಿಸಿ, ದಯವಿಟ್ಟು ಕಾಶಿಗೆ ತೆರಳದೆ ತಮ್ಮ ಸುಸಂಸ್ಕೃತ ಮಗಳನ್ನು ಕೈ ಹಿಡಿದು ಬ್ರಹ್ಮಚರ್ಯ ತೊರೆದು ಗೃಹಸ್ಥಾಶ್ರಮಕ್ಕೆ ಕಾಲಿರಿಸಬೇಕೆಂದು ಮನ ವೊಲಿಸಿ, ಮದುವೆ ಮಂಟಪಕ್ಕೆ ಕರೆತರುವ ಪದ್ಧತಿಯ ಹಿಂದಿರುವ ಕತೆಯೆಂದರೆ, ಹಿಂದೆಲ್ಲ ಕಾಶಿ ವಿದ್ಯಾಪೀಠಕ್ಕೆ ಬಾಲ್ಯಾವಸ್ಥೆಯಲ್ಲಿಯೇ ವಿದ್ಯಾರ್ಜನೆಗೆಂದು ಸೇರಿಸುತ್ತಿದ್ದರು.

ಒಂದು ಹಂತದ ಪದವಿಯನ್ನು ಗಳಿಸಿದ ನಂತರ ಸ್ನಾತಕೋತ್ತರ ಅಧ್ಯಯನಕ್ಕೆಂದು ಮತ್ತೆ ಕಾಶಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ವಯಸ್ಸಿಗೆ ಬಂದ ಮಗನನ್ನು ತಡೆದು ನಿಲ್ಲಿಸಿ, ಓದಿದ್ದು ಸಾಕು. ಇನ್ನಾದರೂ ಮದುವೆಯಾಗಿ ಗೃಹಸ್ಥಾಶ್ರಮ ಸೇರಿ ಸಂಸಾರದ ಜವಾಬ್ದಾರಿ ಹೊರುವಂತೆ ಹೇಳ ಲಾಗುತ್ತಿತ್ತು. ಕ್ರಮೇಣ ಅದು ಸಂಪ್ರದಾಯದ ಒಂದು ಭಾಗವಾಗಿ ಇಂದಿಗೂ ಆಚರಣೆಯಲ್ಲಿ ಉಳಿದುಕೊಂಡಿದೆ. ಹಾಗೆಯೇ ಕಾಶಿಗೆ ಹೋದವರು ತಮ್ಮ ಇಷ್ಟದ ಒಂದು ವಸ್ತುವನ್ನು ಬಿಟ್ಟು ಬರುವುದು ರೂಢಿ. ಕಾರಣ ಕೊನೆ ಯಿರದ ಆಸೆಗಳೇ ದುಃಖಕ್ಕೆ ಮೂಲ ಕಾರಣ.

ಹೀಗಾಗಿ ಎಲ್ಲ ಆಸೆಗಳನ್ನು ಒಂದೇ ಬಾರಿ ಬಿಡಲು ಸಾಧ್ಯವಿಲ್ಲವಾದ್ದರಿಂದ ಕಾಶಿಯಂಥ ಪುಣ್ಯ ಕ್ಷೇತ್ರದಲ್ಲಿ ತಮ್ಮ ಇಷ್ಟದ ಒಂದು ವಸ್ತುವನ್ನು ಬಿಟ್ಟು ನಂತರ ಅದನ್ನು ಜೀವನಪೂರ್ತಿ ಬಳಸದೇ ಇದ್ದರೆ ಮನಸ್ಸು, ಬುದ್ಧಿ, ಶರೀರ ಹತೋಟಿಯಲ್ಲಿದ್ದು ಪ್ರಸನ್ನತೆಯಿಂದಿರುತ್ತದೆ ಎನ್ನುವ ನಂಬಿಕೆ. ಅದ ರಂತೆಯೇ ಕಾಶಿಗೆ ಹೋದವರೊಬ್ಬರು ತಮ್ಮ ಪತ್ನಿಯ ಕೋರಿಕೆಯ ಮೇರೆಗೆ ಕೋಪ ಬಿಟ್ಟು ಬಂದರಂತೆ. ಈ ಮಾತು ಕೇಳಿ ನಂಬಲಾಗದ ಜನ ಹೌದಾ? ನಿಜಕ್ಕೂ ನೀವು ಕೋಪ ಬಿಟ್ರಾ? ಎಂದು ಪದೇಪದೆ ಕೇಳುವಾಗ, ತಡೆದಿಟ್ಟು ಕೊಂಡಿದ್ದ ಕೋಪವೆಲ್ಲ ಒಂದೇ ಬಾರಿಗೆ ಸೋಟಗೊಂಡು,
ಹೌದ್ರೀ ನಾನು ಕೋಪ ಬಿಟ್ಟಿದೀನಿ ಏನೀಗ? ಎನ್ನುತ್ತಾ ಬಂದೇ ಬಿಟ್ಟಿತ್ತಂತೆ ಕೆಂಡದಂಥ ಮಹಾ ಕೋಪ!

ಕೋಪ, ಸಿಟ್ಟು, ಕ್ರೋಧ, ಆವೇಶ, ಮುನಿಸು, ರೋಷ ಹೀಗೆ ಹಲವು ಹೆಸರಿನಿಂದ ಬಣ್ಣಿಸುವ ಸಿಟ್ಟು ಪಶು, ಪಕ್ಷಿ, ಪ್ರಾಣಿಯಾದಿಯಾಗಿ ಎಲ್ಲರಲ್ಲೂ ಅವರವರ ಮಟ್ಟಿಗೆ ಇದ್ದೇ ಇರುತ್ತದೆ. ಸಣ್ಣ ವಯಸ್ಸಿನಿಂದಲೂ ಅಪ್ಪನ ಕೋಪ ನೋಡುತ್ತಲೇ ಬೆಳೆದೆನಾದರೂ ಅದು ನನ್ನ ಮೇಲೆ ಅಂಥಾ ಪ್ರಭಾವ ವನ್ನು ಬೀರಿರಲಿಲ್ಲ. ಹೆಚ್ಚಂದ್ರೆ ಸಿಟ್ಟು ಬಂದಾಗ ಯಾರ ಜತೆಯೂ ಮಾತನಾಡದೆ ನನ್ನ ಪಾಡಿಗಿದ್ದು ಬಿಡುತ್ತಿದ್ದೆ.

ಆದರೆ ಕಚೇರಿಯಲ್ಲಿ ಯಾವ ಕ್ಷಣದಲ್ಲಿ ಯಾವ ಕಾರಣಕ್ಕೆ ಯಾರ ಮೇಲೆ ಬಾಸ್ ಚೇಂಬರಿನಿಂದ ಸಿಟ್ಟಿನ ಪಟಾಕಿ ಹಾರುತ್ತದೋ ತಿಳಿಯದೆ ಕಕ್ಕಾಬಿಕ್ಕಿ ಯಾಗಿ ಬಿಡುತ್ತಿದ್ದೆ. ನೋಡುತ್ತ ನೋಡುತ್ತ ಸಿಟ್ಟು ನನ್ನರಿವಿಗೇ ಬಾರದಂತೆ ನನ್ನೊಳಗೇ ಮನೆಮಾಡಿಕೊಂಡು ದಿನಕಳೆದಂತೆಲ್ಲ ಬೆಳೆಯತೊಡಗಿತು. ಎಲ್ಲೆಡೆಯಿಂದ ಒತ್ತಡಗಳು ಹೆಚ್ಚಾಗತೊಡಗಿದಾಗ ಹತ್ತಿರದಲ್ಲಿ ಯಾರಿದ್ದರೆ ಅವರ ಮೇಲೆ ದೊಡ್ಡ ದನಿಯೊಂದಿಗೆ ಸಿಡಿದುಬಿಡುತ್ತಿತ್ತು.

ಹೀಗೇ ಒಮ್ಮೆ ಸಣ್ಣ ಕಾರಣಕ್ಕೆ ಭುಗಿಲೆದ್ದ ಸಿಟ್ಟಿನ ತೀವ್ರತೆಯ ವೇಗಕ್ಕೆ ಸಿಕ್ಕು ಸ್ಕೂಟಿ ಹತ್ತಿದವಳು ಅಗತ್ಯಕ್ಕಿಂತ ಎರಡು ಪಟ್ಟು ಎಕ್ಸಲೇಟರ್ ಕೊಟ್ಟು ರಸ್ತೆಯ ನಡುವಿನಲ್ಲಿ ಅಚಾನಕ್ಕಾಗಿ ಎದುರಾದ ದೊಡ್ಡ ಹಳ್ಳ ಕಂಡಾಗ ಬ್ರೇಕಿನ ನಿಯಂತ್ರಣಕ್ಕೆ ಬಾರದೆ ಸ್ಕೂಟಿಯೊಂದಿಗೆ ನಾನೂ ರಸ್ತೆಯ ಮೇಲೆ
ಉಜ್ಜಿಕೊಂಡು ಹೋಗಿದ್ದೆ. ಬಿದ್ದ ಏಟಿಗೆ ತುಟಿ ಒಡೆದು, ಹಲ್ಲು ಮುರಿದು, ಅಂಗೈ ಹಾಗೂ ಬಲಗೆನ್ನೆ ಪೂರ್ತಿ ತರಚಿಹೋಗಿ ನೆತ್ತರಿನಿಂದ ಕೆಂಪಗಾಗಿ ಹೋಗಿತ್ತು.

ಬಲಗಾಲಿನ ಹಾಗೂ ಬಲತೋಳಿನ ಮೂಳೆ ಮುರಿದು ಎಚ್ಚರತಪ್ಪಿಹೋಗಿದ್ದೆ. ಆಗಲೇ ಗೊತ್ತಾದದ್ದು ಹಾವಿನ ಮೈಯಂತೆ ನುಣ್ಣಗೆ ಕಾಣುವ ರಸ್ತೆ ಅದೆಷ್ಟು ಒರಟಾಗಿರುತ್ತದೆ ಎಂದು. ರಸ್ತೆಯಲ್ಲಿದ್ದವರು ನನ್ನ ಬ್ಯಾಗಿನಲ್ಲಿದ್ದ ವಿಳಾಸವನ್ನು ನೋಡಿ ಮನೆಗೆ ಬಿಟ್ಟು ಹೋಗಿದ್ದರು. ಸಿಟ್ಟಿನಿಂದಾಗಿ ಅನುಕೂಲಗಳಿಗಿಂತ ಹೆಚ್ಚಾಗಿ ಅನಾನುಕೂಲಗಳೇ ಹೆಚ್ಚಾಗತೊಡಗಿದಾಗ ನನ್ನನ್ನು ನಾನೇ ಅವಲೋಕಿಸಿಕೊಂಡಾಗ ಸಿಟ್ಟಿನ ಕೆನ್ನಾಲಿಗೆಗಳು ನನ್ನನ್ನ
ದಹಿಸಿ ಹಾಕುತ್ತಿರುವುದು ಅರಿವಿಗೆ ಬಂತು. ಇದರಿಂದ ವಿನಾಶವೇ ಹೊರತು ಯಾವುದೇ ಉಪಯೋಗವಿಲ್ಲ ಎಂಬುದು ತಿಳಿದಾಗ ಅದಕ್ಕೆ ಕಾರಣಗಳನ್ನು ಹುಡುಕಿ ಅದರಿಂದ ಹೊರಬರಲಾರಂಭಿಸಿದೆನಾದರೂ ಅದರಿಂದ ಇವತ್ತಿಗೂ ಸಂಪೂರ್ಣ ಮುಕ್ತಳಾಗಲು ಸಾಧ್ಯವಾಗಿಲ್ಲ.

ಸಿಟ್ಟಿನ ಮತ್ತೊಂದು ಹೆಸರೇ ಎಂಬಂತಿರುವ ದೂರ್ವಾಸ ಮುನಿಯಿಂದ ವರವನ್ನು ಪಡೆದ ಕುಂತಿ ಆರು ಮಕ್ಕಳನ್ನು ಹೆತ್ತು ಅದರಲ್ಲಿ ಒಂದನ್ನು ನಡುನೀರಿನಲ್ಲಿ ಬಿಟ್ಟು ಪಂಚಪಾಂಡವ ಮಾತೆಯೆನಿಸಿ, ಅರ್ಜುನನು ಸ್ವಯಂವರದಲ್ಲಿ ಮತ್ಸ್ಯಯಂತ್ರ ಭೇದಿಸಿ ವರಿಸಿದ ಪಾಂಚಾಲಿಯನ್ನು ಸಮನಾಗಿ ಹಂಚಿಕೊಳ್ಳಿ ಎಂದು ಹೇಳಿ ಇತಿಹಾಸ ಸೃಷ್ಟಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ದ್ರುಪದನ ಮಗಳಾದ ಕೃಷ್ಣೆ ಹುಟ್ಟಿದ್ದೇ ಅಗ್ನಿಕುಂಡದಲ್ಲಿ ಅಂಥವಳನ್ನು
ಪಣಕ್ಕಿಟ್ಟು ದ್ಯೂತದಲ್ಲಿ ಸೋತು ತಲೆತಗ್ಗಿಸಿ ನಿಂತಾಗ ಸಿಕ್ಕ ಅವಕಾಶವನ್ನು ಬಳಸಿ ಸಭೆಯಲ್ಲಿ ಅತಿರಥ ಮಹಾರಥರೆದುರಿನಲ್ಲೇ ತನ್ನ ತೊಡೆಯೇರೆಂದು ತೊಡೆ ತಟ್ಟಿದ ದುರ್ಯೋಧನ ಹಾಗೂ ತನ್ನ ಮುಡಿ ಹಿಡಿದೆಳೆದ ದುಶ್ಶಾಸನನನ್ನು ಆಹುತಿ ತೆಗೆದುಕೊಳ್ಳುವವರೆಗೂ ಮುಡಿಕಟ್ಟುವುದಿಲ್ಲವೆಂದು ಪಣತೊಟ್ಟ ಅಗ್ನಿಕನ್ಯೆಯಿಂದಾಗಿ ಕುರುಕ್ಷೇತ್ರದಲ್ಲಿ ಕುರುವಂಶವೇ ನಾಶವಾಗಿ ಹೋಯಿತು.

ಶಿವ, ವೀರಭದ್ರ, ಕಾಳಿ, ಉಗ್ರ ನರಸಿಂಹ, ಎಲ್ಲರೂ ಸಿಟ್ಟಿನ ಪ್ರತಿರೂಪಗಳೇ. ಹುಡುಕುತ್ತಾ ಹೋದರೆ ಮುಗಿಯದಷ್ಟು ಕತೆಗಳು ಈ ಸಿಟ್ಟಿನ ಮೇಲೆ ಸಿಗುತ್ತವೆ.
ಯಾಗದ ಆಹುತಿಯನ್ನು ಸ್ವೀಕರಿಸುವ ಅರ್ಹತೆ ತ್ರಿಮೂರ್ತಿಗಳಲ್ಲಿ ಯಾರಿಗಿದೆ ಎಂದು ಪರೀಕ್ಷಿಸುವ ಸಲುವಾಗಿ ಕೈಲಾಸ, ಸತ್ಯಲೋಕ, ಹಾಗೂ  ವೈಕುಂಠಕ್ಕೆ ಭೇಟಿ ನೀಡಿದ ಭೃಗು ಮಹರ್ಷಿಯ ಆಗಮನವನ್ನು ಅರಿಯದೆ ಲಕ್ಷ್ಮೀ ನಾರಾಯಣರು ಸಲ್ಲಾಪದಲ್ಲಿ ತೊಡಗಿದ್ದುದನ್ನು ಕಂಡು ಕೋಪ ದಿಂದ ವಿಷ್ಣುವಿನ ವಕ್ಷಸ್ಥಳವನ್ನು ಒದ್ದಾಗ ಅದರಿಂದ ಕುಪಿತನಾಗದೆ ನಾರಾಯಣನು ಭೃಗು ಮಹರ್ಷಿಯ ಪಾದಸೇವೆ ಮಾಡುವುದನ್ನು ಕಂಡು ಸಿಟ್ಟಿಗೆದ್ದ ಮಹಾಲಕ್ಷ್ಮೀಯು ವೈಕುಂಠವನ್ನು ತೊರೆದು ಭೂಲೋಕಕ್ಕೆ ಬಂದುಬಿಡುತ್ತಾಳೆ.

ಲಕ್ಷ್ಮೀಯನ್ನು ಒಂದರೆ ಕ್ಷಣವೂ ಅಗಲಿರಲಾಗದ ವಿಷ್ಣು, ಪತ್ನಿಯನ್ನರಿಸಿಕೊಂಡು ಭೂಲೋಕಕ್ಕೆ ಬಂದು ಶ್ರೀನಿವಾಸನಾಗಿ ಇಲ್ಲಿ ಪದ್ಮಾವತಿಯನ್ನು ವರಿಸಿದಾಗ ವಿಷಯ ತಿಳಿದು ಅಲ್ಲಿಗೆ ಬಂದ ಲಕ್ಷ್ಮೀದೇವಿ, ಪದ್ಮಾವತಿಯೊಡನೆ ವಾಗ್ವಾದಕ್ಕಿಳಿದಾಗ ಅದನ್ನು ಕಂಡು ಯಾರ ಪರ ವಹಿಸುವುದೆಂದು ತಿಳಿಯದೆ, ಕಲ್ಲಿನ ಪ್ರತಿಮೆಯಾಗಿ ಹೋದ ವೆಂಕಟರಮಣನನ್ನು ತಿರುಪತಿಯಲ್ಲಿ ಇಂದಿಗೂ ಕಾಣಬಹುದು.

ಗಂಡ ಹೆಂಡತಿಯರ ನಡುವಿನ ಸಿಟ್ಟಿನ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತೇ ಇದೆಯಾದರೂ, ಹೆಂಡತಿಯ ಸಿಟ್ಟಿಗೆ ಅಡುಗೆ ಮನೆಯ ಪಾತ್ರೆಗಳೆಲ್ಲ ಸದ್ದು ಮಾಡುತ್ತಿರುತ್ತವೆ. ಕೋಪದ ಫಲವಾಗಿ ಮನೆ, ನಗು-ಸಂತೋಷ-ಸರಸ ಸಂಭಾಷಣೆಗಳಿಲ್ಲದೆ ಸೂತಕದ ಮನೆಯಂತಾಗಿ ಬಿಟ್ಟಿರುತ್ತದೆ. ಮನೆಯ ಸದಸ್ಯರ ನಡುವೆ ಸಣ್ಣಪುಟ್ಟ ಕಾರಣಗಳಿಗೆ ಹೆಡೆಯೆತ್ತುವ ಕೋಪ ಕ್ಷಣಿಕವಾದದ್ದು. ಅದು ಆ ಕ್ಷಣದ ಮಾತು, ನಡತೆಗೆ ತಕ್ಕಂತಿರುತ್ತದೆ. ಕೆಲ ಸಮಯದ ನಂತರ ಮರೆತೂ ಹೋಗುತ್ತದೆ. ಆಟೋ ಚಾಲಕರೊಂದಿಗೆ ಚಿಲ್ಲರೆಯ ವಿಷಯಕ್ಕಾಗಿ ಮೂಡುವ ಸಿಟ್ಟು, ತರಕಾರಿ-ಹಣ್ಣಿಗೆ ಹೆಚ್ಚಿನ
ಬೆಲೆ ಹೇಳಿದಾಗ ಬರುವ ಚೌಕಾಸಿ ಸಿಟ್ಟು, ರಸ್ತೆಯಲ್ಲಿ ಕಸ ಎಸೆದು ಹೋದವರೆಡಗೆ ಮೂಡುವ ನಾಗರಿಕ ಸಿಟ್ಟು, ಕೆಲಸದವರು ಬಾರದೆ ಕೆಲಸದ ಹೊರೆ ಹೆಚ್ಚಾದ ಭರದಲ್ಲಿ ಮೂಡುವ ಹೊರೆಯ ಸಿಟ್ಟು, ಹೇಳಿದ ಕೆಲಸ ಮಾಡಿಲ್ಲವೆಂಬ ಅಸಹನೆಯ ಸಿಟ್ಟು, ಇಟ್ಟ ನಂಬಿಕೆಗೆ ಮೋಸವಾಯಿತೆಂಬ ಸೇಡಿನ ಸಿಟ್ಟು, ಕೂಡಿಟ್ಟ ಹಣ ದಕ್ಕದೇ ಹೋದ ಅಸಹಾಯಕ ಸಿಟ್ಟುಗಳೆಲ್ಲ ವ್ಯಕ್ತಿಗತ ಸಿಟ್ಟುಗಳು.

ಅವು ಅಲ್ಲೇ ಹೊತ್ತಿ ಉರಿದು ಕ್ರಮೇಣ ತಣ್ಣಗಾಗಿ ಹೋಗುತ್ತವೆ. ಆದರೆ ನಿರಂತರ ಅನ್ಯಾಯ, ದಬ್ಬಾಳಿಕೆ ಹಾಗೂ ಶೋಷಣೆಗಳಿಂದ ಉಂಟಾಗುವ ತಿರುಗಿಬೀಳುವಂಥ ಆವೇಶಭರಿತ ಸಿಟ್ಟು ಪ್ರತೀಕಾರದೊಂದಿಗೆ ಸಮಾಪ್ತಿಗೊಳ್ಳುತ್ತದೆ. ಮತೀಯ ಅಸಹನೆಗಳು, ಜಾತಿ ವೈಷಮ್ಯಗಳು, ವಿವಿಧ ವರ್ಗಗಳ ನಡುವಿನ ಕಂದರಗಳು ಧಾರ್ಮಿಕವಾಗಿಸಾಮಾಜಿಕವಾಗಿ ರಾಷ್ಟ್ರ ರಾಷ್ಟ್ರಗಳ ನಡುವೆ, ರಾಜ್ಯ ರಾಜ್ಯಗಳ ನಡುವೆ, ಗ್ರಾಮ ಗ್ರಾಮಗಳ ನಡುವೆ, ಮನುಷ್ಯ
ಮನುಷ್ಯರ ನಡುವೆ ತಮ್ಮ ನಿಲುವೇ ಸರಿ ಎನ್ನುವ ವಾದ ವಿವಾದಗಳ ನಡುವೆ ಭುಗಿಲೇಳುವ ಕ್ರೋಧಾಗ್ನಿಯ ಕೆನ್ನಾಲಿಗೆಗಳು ಜನತೆಯ ನಡುವಿನ ಸಾಮರಸ್ಯ, ಸೌಹಾರ್ದವನ್ನು ನುಂಗಿ ಹಾಕುತ್ತವೆ.

ಉಚ್ಚಸ್ಥಾನದಲ್ಲಿರುವ ನಾಯಕರು ಮಾತಿನ ಭರದಲ್ಲಿ ವಿನೋದವಾಗಿ, ವ್ಯಂಗ್ಯವಾಗಿ ಆಡುವ ಮಾತುಗಳಿಗೆ ಸಾರ್ವಜನಿಕರ ಆಕ್ರೋಶದ ನಿಂದನೆಗಳಿಗೆ ಒಳಗಾಗುವ ಪ್ರಸಂಗಗಳನ್ನು ತಂದೊಡ್ಡುತ್ತದೆ. ಹೀಗಾಗಿ ಉನ್ನತ ಸ್ಥಾನದಲ್ಲಿರುವವರು ತಾವು ನಿಂತ ಜಾಗವೆಂಥದ್ದು ಎಂದು ಅರಿತು ಮಾತನಾಡುವ
ವಿವೇಕವನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ.

ಕೋಪವೆಂಬುದು ಬಲಹೀನತೆಯೂ ಹೌದು ಹಾಗೆಯೇ ದೈತ್ಯ ಶಕ್ತಿಯೂ ಹೌದು. ಅದರೆ ನಾನಾ ಕಾರಣಗಳಿಂದ ಉದ್ಭವವಾಗುವ ಸಿಟ್ಟು ಮನುಜನ ಮೂಲಭೂತ ಗುಣಗಳಲ್ಲಿ ಒಂದು. ಇದನ್ನು ವಿವೇಕಯುತವಾಗಿ ಬಳಸಿ ತಮಗಾದ ಲೋಪ, ಅನ್ಯಾಯವನ್ನು ಸರಿಪಡಿಸಲು ಉಪಯುಕ್ತವಾಗಿ ಬಳಸಿ ಆರೋಗ್ಯ ಕಾಪಾಡಿಕೊಳ್ಳಬಹುದು. ಆದರೆ ಅನಿಯಂತ್ರಿತ ಕೋಪದಿಂದಾಗಿ ವಿವೇಕವನ್ನು ಕಳೆದುಕೊಂಡು ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಹಾಗೆಯೇ ಸಿಟ್ಟಿನ ಭರದಲ್ಲಿ ಆಡಿದ ಮಾತುಗಳಿಂದ ಮನಸಿಗಾದ ನೋವು ಮಾಯದೇ ಉಳಿದುಬಿಡುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿ ನಮ್ಮ ಸಿಟ್ಟು ನಮ್ಮ ಹತೋಟಿಯಲ್ಲೇ ಇರಲಿ.

ಎಲ್ಲ ಸರಿ, ಆದರೆ ನಾವು ಯಾರನ್ನು ಅತಿಯಾಗಿ ಪ್ರೀತಿಸುತ್ತೇವೆಯೋ ಅವರ ಮೇಲೆಯೇ ಅತಿಯಾಗಿ ಸಿಟ್ಟು ಬರುವುದು ಏಕೆ? ಏಕೆಂದರೆ ಸಿಟ್ಟಿಗೂ ಪ್ರೀತಿಗೂ ಅವಿನಾಭಾವದ ನಂಟಿದೆ. ಹಿರಣ್ಯಕಶಿಪುವಿನ ಎದೆಬಗೆದು ಆವೇಶಭರಿತನಾಗಿದ್ದ ನರಸಿಂಹನನ್ನು ಶಾಂತಗೊಳಿಸಿದ್ದು ಲಕ್ಷ್ಮಿದೇವಿಯ ಸಾಮಿಪ್ಯವೇ. ಹಾಗೆಯೇ ರಾಕ್ಷಸರ ರುಂಡ ಚೆಂಡಾಡುತ್ತ ಉಗ್ರಳಾಗಿದ್ದ ಕಾಳಿಯನ್ನು ಶಾಂತಗೊಳಿಸಿದ್ದೂ ಶಿವನ ಸ್ಪರ್ಶವೇ. ಹೀಗಾಗಿ ಸಿಟ್ಟು ದ್ವೇಷವಾಗಿ
ಪರಿವರ್ತನೆಗೊಳ್ಳದೆ ಎಲ್ಲರೆದೆಯಲಿ ಪ್ರೀತಿಯ ಬಳ್ಳಿ ಹಬ್ಬಿ ನಿಲ್ಲಲಿ.