Saturday, 14th December 2024

ಕಾಶ್ಮೀರ ಕಣಿವೆ ಮತ್ತೆ ಸ್ವರ್ಗ ಸೀಮೆಯಾದೀತೇ ?

ಸಕಾಲಿಕ

ವಿಜಯ್‌ ದರ್‌ಡ

ಒಂದಂತೂ ಸತ್ಯ. ಅಲ್ಲಿನ ಇಂದಿನ ಸ್ಥಿತಿ ಹಿಂದಿನಂತಿಲ್ಲ. ಕಾಶ್ಮೀರವನ್ನು ಮತ್ತೆ ಸ್ವರ್ಗ ಸೀಮೆಯಾಗಿಸಬೇಕಾದರೆ ಅದನ್ನು ಸ್ವಿಜರ್ ಲ್ಯಾಂಡ್ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು. ಯುವಕರಿಗೆ ಕೆಲಸ ಸಿಗಬೇಕು. ಚೀನಾರ್ ಮರಗಳು ಮತ್ತೆ ಗತವೈಭವವನ್ನು ಹೊತ್ತು ನಿಲ್ಲುವಂತೆ ಮಾಡಬೇಕು.

ಅತ್ಯಂತ ಸುಂದರವೂ ನಯನ ಮನೋಹರವೂ ಆದ ಕಾಶ್ಮೀರ ಕಣಿವೆಗೆ ಕಳೆದ ವಾರ ನಾನು ಹೋಗಿದ್ದೆ. ಹಳೆಯ ನೆನಪುಗಳ ಬುತ್ತಿಯನ್ನು ಹೊತ್ತು ನಾನಲ್ಲಿದ್ದೆ. ಹೊಸ ಶಕೆಯೊಂದನ್ನು ವೀಕ್ಷಿಸುವುದು ನನ್ನ ಉದ್ದೇಶವಾಗಿತ್ತು. ಅಲ್ಲಿ ಕಾಲಿಟ್ಟ ಕ್ಷಣದಲ್ಲಿಯೇ ಹಳೆಯ ನೆನಪುಗಳೆಲ್ಲವೂ ಸುರಳಿ ಬಿಚ್ಚಿ ಕೊಂಡು ನನ್ನನ್ನು ಬೆಚ್ಚಿಬೀಳಿಸತೊಡಗಿದವು. ಅಂಥ ಒಂದಷ್ಟು ಹಳೆಯ ನೆನಪುಗಳ ಬುತ್ತಿಯನ್ನು ನಿಮ್ಮ ಮುಂದೆ ತೆರೆದಿಡುತ್ತೇನೆ.

ತದನಂತರ ಹೊಸ ವಿಚಾರಗಳತ್ತ ಬರೋಣ. ಅದು 2016ರ ಫೆಬ್ರವರಿ. ಶ್ರೀನಗರ ವಿಮಾನ ನಿಲ್ದಾಣದಲ್ಲಿ ಇಳಿದಿದ್ದೆ. ನನಗೆ ಗುಲ್ಮಾರ್ಗ್ ಗೆ ಹೋಗಬೇಕಿತ್ತು. ಆದರೆ ಅಂದು ಅಲ್ಲಿನ ಪರಿಸ್ಥಿತಿ ಭೀಕರವೆನಿಸುವಂತಿತ್ತು. ಸರಕಾರಿ ವಾಹನಗಳ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿತ್ತು. ಬಾರಾಮು ಸಮೀಪದಲ್ಲಿ ಅಮೆರಿಕ ಅಧ್ಯಕ್ಷರ ಫೋಟೋವನ್ನು ಕತ್ತೆಯೊಂದರ ಚಿತ್ರಕ್ಕೆ ಅಳವಡಿಸಲಾಗಿತ್ತು. ಜನ ಅದಕ್ಕೆ ಚಪ್ಪಲಿಯಿಂದ ಹೊಡೆ
ಯುತ್ತಿದ್ದರು. ಅಂದಿನ ಪ್ರಯಾಣ ಅತ್ಯಂತ ಭೀಕರವೆನಿಸುವಂತಿತ್ತು.

ನಾವು ಗುಲ್ಮಾರ್ಗಿನಲ್ಲಿರುವ ಐಷಾರಾಮಿ ಖೈಬರ್ ಹೋಟೆಲಿನಲ್ಲಿ ಉಳಿದುಕೊಂಡಿದ್ದೆವು. ಹೊರಗಡೆ ಮಂಜು ಬೀಳುತ್ತಿತ್ತು. ಒಳಗಡೆ ಕುಳಿತ ನಾವು ಇಂಡಿಯಾ- ಪಾಕಿಸ್ತಾನ್ ನಡುವಣ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿದ್ದೆವು. ಭಾರತ ಗೆಲ್ಲುತ್ತಿದ್ದಂತೆ ಅಲ್ಲಿದ್ದ ಎಲ್ಲರಿಗೂ ಸಿಹಿ ಹಂಚುವಂತೆ ಹೋಟೆಲಿನ ಜನರಲ್ ಮ್ಯಾನೇಜರ್ ಅವರಲ್ಲಿ ನಾನು ಕೇಳಿಕೊಂಡೆ. ‘ಸಂಭ್ರಮಾಚರಣೆ ಬೇಡ’ ಎಂದವರು ನನಗೆ ವಿನಯಪೂರ್ವಕ ಕೇಳಿಕೊಂಡರು.

ಪಾಕಿಸ್ತಾನದ ಸೋಲಿನ ಬಗ್ಗೆ ಇಲ್ಲಿನ ಜನ ಖಿನ್ನರಾಗಿದ್ದಾರೆ ಎಂದೂ ಅವರು ತಿಳಿಸಿದರು. ಕೆಲವರು ಅಂದು ಊಟವನ್ನೂ ಮಾಡಲಿಲ್ಲ. ನನಗೆ ಅಚ್ಚರಿಯೆನಿಸಿತು. ಇದೇ ಪ್ರದೇಶದಲ್ಲಿ ವಿಪುಲವಾಗಿ ಬೆಳೆಯುವ ವಾಲ್‌ನಟ್ ಮತ್ತು ಪೈನ್ ಮರಗಳನ್ನು ಬಳಸಿ ಕ್ರಿಕೆಟ್ ಬ್ಯಾಟ್‌ಗಳು ತಯಾರಾಗುತ್ತವೆ. ಅವೇ ಬ್ಯಾಟುಗಳನ್ನು ಬಳಸಿ ಗವಾಸ್ಕರರಿಂದ ಹಿಡಿದು ಸಚಿನ್ ತನಕ ಎಲ್ಲರೂ ಆಟವಾಡಿದ್ದಾರೆ. ಆದರೆ, ಅಲ್ಲಿನ ಯುವಕರು ತಮ್ಮ ಬ್ಯಾಟುಗಳ ಮೇಲೆ ಪಾಕಿಸ್ತಾನಿ ಕ್ರಿಕೆಟ್ ಆಟಗಾರರ ಚಿತ್ರಗಳನ್ನು ಅಂಟಿಸಿರುವುದನ್ನೂ ನಾನು ಅಲ್ಲಿ ಗಮನಿಸಿದೆ.

ಕಾಶ್ಮೀರದೊಂದಿಗಿನ ನನ್ನ ಆಕರ್ಷಣೆ ತುಂಬಾ ಹಳೆಯದು. ಹೇಳಹೊರಟರೆ ನನ್ನ ಶಾಲಾ ದಿನಗಳ ನೆನಪಾಗುತ್ತದೆ. ನಾನು ಹತ್ತನೇ ತರಗತಿಯಲ್ಲಿದ್ದಾಗ ಮೊದಲಿಗೆ ಕಾಶ್ಮೀರಕ್ಕೆ ಹೋಗಿದ್ದೆ. ಆ ವಯಸ್ಸಿನ ನನಗೆ ಕಾಶ್ಮೀರದ ಮೋಹ ಅಂಟಿಕೊಅಡಿತ್ತು. ಮದುವೆಯಾದ ನಂತರದಲ್ಲಿ ನಾನು ಮತ್ತು ಜ್ಯೋತ್ಸ್ನಾ ಮತ್ತದೇ ಕಾಶ್ಮೀರ ಕಣಿವೆಗೆ ಮಧುಚಂದ್ರಕ್ಕೆಂದು ಹೋದೆವು. ಕಳೆದ ಕೆಲವರ್ಷಗಳ ಹಿಂದೆ ನಮ್ಮ ಸಿಬ್ಬಂದಿ ವರ್ಗದವರನ್ನು ದೀಪಾವಳಿಯ ಸಂದರ್ಭ ದಲ್ಲಿ ಕಾಶ್ಮೀರಕ್ಕೆ ಕಳಿಸಿದ್ದೆವು. ಆಗ ನಮ್ಮ ತಂಡ ಅಲ್ಲಿ ಕಸೆತಕ್ಕೆ ಗುರಿಯಾಗಬೇಕಾಯ್ತು. ಆದರೆ ನಾವದಕ್ಕೆ ಆತಂಕ ಪಡಲಿಲ್ಲ. ಕಳೆದ 24 ವರುಷಗಳಲ್ಲಿ ಅಲ್ಲಿ ಹುಟ್ಟಿದ ಮಕ್ಕಳು ಶಾಲೆಗೆ ಹೋಗಲಿಲ್ಲ, ಆಟದ ಮೈದಾನ ನೋಡಲಿಲ್ಲ, ಫುಟ್‌ಬಾಲ, ಕ್ರಿಕೆಟ್ ಆಡಲಿಲ್ಲ, ಅವರುಗಳ ಬಳಿ ಫೋನ್ ಕೂಡ ಇರಲಿಲ್ಲ.

ಅವರು ನೋಡಿದ್ದು ಕರ್ಫ್ಯೂಗಳನ್ನು, ದೊಂಬಿ, ಗಲಾಟೆ ಮತ್ತು ಗುಂಡಿನ ಚಕಮಕಿಯನ್ನು ಮಾತ್ರ. ಆ ಕಾಲಘಟ್ಟದ ದುರ್ಭರ ಸನ್ನಿವೇಶಗಳನ್ನು ಮತ್ತೆ ಮತ್ತೆ ಹೇಳುವುದು ನನಗೂ ಇಷ್ಟವಿಲ್ಲ.ಅದೆಂತಹ ಕೆಟ್ಟ ದಿನಗಳು. ರುಬಯ್ಯಾ ಸಯೀದಾಳನ್ನು ಕಾಪಾಡಲು ನಾವೆಂಥ ಬೆಲೆ ತೆತ್ತೆವು. ಮತ್ತು ಆಕೆಯ ಸೋದರಿ ಮೆಹಬೂಬಾ ಮುಫ್ತಿ ಈಗ ಏನು ಮಾಡುತ್ತಿದ್ದಾಳೆ ! ಇದೀಗ, ಭಾರತ ಸರಕಾರ ತೆಗೆದುಕೊಂಡ ಕ್ರಮಗಳಿಂದಾಗಿ ಮತ್ತು ಆರ್ಟಿಕಲ-370 ರದ್ದತಿ ಯ ಕಾರಣದಿಂದ ಸಾಕಷ್ಟು ಬದಲಾವಣೆಗಳಾಗಿವೆ. ಇನ್ನೊಮ್ಮೆ ಯಾಕೆ ಕಾಶ್ಮೀರಕ್ಕೆ ಹೋಗಬಾರದು ಎಂದು ನನ್ನ ಮನಸ್ಸು ಹೇಳುತ್ತಲಿತ್ತು.

ಹಾಗಾಗಿ ಮತ್ತೆ ನಾನು ಕಾಶ್ಮೀರ ಕಣಿವೆಯತ್ತ ಮುಖ ಮಾಡಿದೆ. ಶ್ರೀನಗರ ವಿಮಾನ ನಿಲ್ದಾಣದಲ್ಲಿ ಮೂರು ಹಂತದ ಸುರಕ್ಷಾ ಕ್ರಮವಿದೆ. ಅಲ್ಲಿರುವ ಸಿಐಎಸ್‌ಎಫ್ ಮತ್ತು ಸಿಆರ್‌ಪಿಎಫ್ ಜವಾನರ ಹದ್ದಿನಕಣ್ಣುಗಳಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಈ ಹಿಂದೆ ನನ್ನ ಬದುಕಿನ ಅತ್ಯಂತ ಸುಮಧುರ ಕ್ಷಣಗಳನ್ನು ಕಳೆದ ಪ್ರದೇಶಗಳಿಗೆ ನಾನು ಮತ್ತೆ ಹೋಗಲು ಬಯಸಿದ್ದೆ. 50 ವರುಷಗಳ ಹಿಂದೆ ದಾಲ್ ಲೇಕ್ ನಲ್ಲಿ ಜ್ಯೋತ್ಸ್ನಾ ಜತೆ ಕಳೆದಿದ್ದ ಜಾಗಕ್ಕೆ ಮತ್ತೆ ಹೋಗಲು ಬಯಸಿದ್ದೆ. ಅಲ್ಲಿನ ಹೌಸ್ ಬೋಟ್ ನನಗೆ ತುಂಬಾ ಪ್ರಿಯವಾದದ್ದು. ಮೊದಲೇ ಹೇಳಿದ್ದರೆ ಬೋಟನ್ನು ಸುಂದರ ವಾಗಿ ಅಲಂಕರಿಸುತ್ತಿದ್ದೆವು ಎಂದು ಅಲ್ಲಿನ ಸಿಬ್ಬಂದಿ ಹೇಳಿದರು. ಹಳೆಯದೆಲ್ಲವೂ ನೆನಪಾಯಿತು.

ಹಳೆಯ ದಿನಗಳಲ್ಲಿ ದಾಲ್ ಲೇಕ್ ನವವಿವಾಹಿತರಿಗೆ ಅತ್ಯಂತ ರೊಮಾಂಟಿಕ್ ಅನುಭವಗಳನ್ನು ಕೊಡುತ್ತಿತ್ತು. ನವ ವಿವಾಹಿತರು ಬೋಟ್‌ಗಳಲ್ಲಿ ಕುಳಿತು ಹಿಂದೀ ಹಾಡುಗಳನ್ನು ಗುನುಗುತ್ತಿದ್ದರು. ಅತ್ಯಂತ ಖುಷಿಯ ಕ್ಷಣಗಳವು. ಆಕಾಶ ಶುಭ್ರವಾಗಿತ್ತು, ನಕ್ಷತ್ರಗಳು ಕಣ್ಣು ಮಿಟುಕಿಸುತ್ತಿದ್ದವು. ಗಾಳಿ ಯಲ್ಲಿ ಕೇಸರಿಯ ಸುಗಂಧ ಪರಿಸಿರುತ್ತಿತ್ತು. ಲಾಲ್‌ಚೌಕ್‌ನ ಊಟೋಪಾಹರಗಳು ನನಗೆ ಅತ್ಯಂತ ಪ್ರಿಯವಾಗಿದ್ದವು. ಕೃಷ್ಣಾ ಢಾಬಾದ ರಾಜಮಾ
ರೈಸ್‌ನ ಪರಿಮಳವನ್ನು ನಾನಿನ್ನೂ ಮರೆತಿಲ್ಲ. ಆದರೆ ಪಕ್ಕದ ದೇಶ ಹುಟ್ಟುಹಾಕಿದ ದ್ವೇಷದ ದಳ್ಳುರಿಯಿಂದ ಕಣಿವೆಯ ಸೌಂದರ್ಯಕ್ಕೆ ಕುಂದುಂಟಾ ಯಿತು.

ಈ ಬಾರಿ ಹೋದಾಗ ನಾನು ದಾಲ್ ಕಾಲುವೆಯ ಸುತ್ತೆಲ್ಲ ನಡೆದಾಡಿದೆ. ಅಂದು ಹತಾಶೆಯ ಭಾವ ತುಂಬಿತ್ತು. ಸುಮಾರು 22 ಚದರ ಕಿಮೀಗಳಲ್ಲಿ ಹರಡಿರುವ ಆ ಕಾಲುವೆ ಈಗ ಕುಗ್ಗಿ ಸಣ್ಣಗಾಗಿದೆಯೇನೋ ಎಂಬ ಭಾವ ನನ್ನ ಮನದಲ್ಲಿ ಮೂಡಿತು. ಅಲ್ಲಲ್ಲಿ ಪೋಲೀಸರು ಗಸ್ತು ಕಾರ್ಯದಲ್ಲಿದ್ದರು. ಕಾಲುವೆಯ ತಟದಲ್ಲಿ ಶಸ್ತಸಜ್ಜಿತ ಸಿಆರ್‌ಪಿಎಫ್ ಜವಾನರಿದ್ದರು. ಶಸ್ತಸಜ್ಜಿತ ವಾಹನಗಳು ಅಲ್ಲಲ್ಲಿ ಕಾಣುತ್ತಿದ್ದವು. ಅ ಪಕ್ಕದಲ್ಲಿರುವ ಸೆಂಟೌರ್ ಹೋಟೇಲು ಉಸಿರು ಬಿಗಿಹಿಡಿದುಕೊಂಡಂತೆ ಕಾಣುತ್ತಿತ್ತು. ನಾನು ಯಾನ ಮಾಡಿದ ಬೋಟ್ ಕೂಡ ಅಸಹಾಯಕವಾಗಿತ್ತು. ಅದರ ಹೃದಯವೂ ಚೂರುಚೂರಾದಂತೆ ಭಾಸವಾಗುತ್ತಿತ್ತು. ನನ್ನ ಪ್ರಯಾಣದಲ್ಲಿ ಸಿಕ್ಕ ಬಹುತೇಕ ಎಲ್ಲರ ಮಾತೂ ಒಂದೇ ಆಗಿತ್ತು. ಟ್ಯಾಕ್ಸಿ ಚಾಲಕರು, ದೋಣಿಚಾಲಕರು, ಅಂಗಡಿ ಹೋಟೆಲು ನಡೆಸುವವರು ಎಲ್ಲರ ಮಾತೂ ಒಂದೇ ಆಗಿತ್ತು, ನಾವೆಲ್ಲರೂ ಭಾರತೀಯರು. ಪ್ರವಾಸೋದ್ಯಮ ಚಿಗಿತುಕೊಂಡರೆ ಅಲ್ಲಿನವರ ಬದುಕು ಸುಂದರವಾಗುತ್ತದೆ.

ಒಂದು ದೇಶ, ಒಂದು ಧ್ವಜ, ಒಂದು ಕಾನೂನಿನ ಅಗತ್ಯವಿಲ್ಲ ಎಂದು ನಾನವರಿಗೆ ಹೇಳಿದೆ. ಒಳನುಸುಳುಕೋರರನ್ನು ತಡೆಹಿಡಿದರೆ ಅಲ್ಲಿನ ಪರಿಸ್ಥಿತಿ ಸುಧಾರಿಸುತ್ತದೆ, ಮತ್ತೆ ಕಾಶ್ಮೀರ ಸ್ವರ್ಗವಾಗುತ್ತದೆ. ಆರ್ಟಿಕಲ್ 370 ರದ್ದುಪಡಿಸಿದ್ದಕ್ಕೆ ಅಲ್ಲಿನ ಜನ ಬೇಸರ ಮತ್ತು ಸಿಟ್ಟನ್ನು ವ್ಯಕ್ತಪಡಿಸುತ್ತಾರೆ. ಜಮ್ಮು ಮತ್ತು ಕಾಶ್ಮೀರ ಮತ್ತು ಶಾಂತಿ ಇವೆರಡೂ ಪದಗಳು ಒಂದೇ ಕಡೆ ಇರಲು ಸಾಧ್ಯವಿಲ್ಲ ಅಥವಾ ತಾಳೆ ಹಾಕುವುದಿಲ್ಲ. ಸಾಮಾನ್ಯವಾಗಿ ಸಂಘರ್ಷ, ಗಲಭೆ, ಹಿಂಸಾಚಾರದಿಂದಲೇ ಕಣಿವೆ ನಾಡು ಹೆಚ್ಚು ಸದ್ದು ಮಾಡುತ್ತಿರುತ್ತದೆ. ಇದು ಇಂದು ನಿನ್ನೆಯ ಮಾತಲ್ಲ, ಅನೇಕ ವರ್ಷಗಳಿಂದ ಹೀಗೇ ಸಾಗಿ ಬಂದಿದೆ. ಹೀಗಾಗೇ ಈ ಪ್ರದೇಶದಲ್ಲಿ ಶಾಂತಿಯ ಬಗ್ಗೆ ಯಾರಾದರೂ ಮಾತನಾಡಿದರೆ ಜನರು ಆಶ್ಚರ್ಯ ಪಡುತ್ತಾರೆ.

ಯಾರಿಗೆ ಈ ಕಣಿವೆ ರಾಜ್ಯದ ಬಗ್ಗೆ ಸ್ಪಷ್ಟವಾಗಿ ತಿಳಿದಿದೆಯೋ ಅವರೆಲ್ಲರಿಗೂ 2019 ರಿಂದ ಆಗಸ್ಟ್ 5ರಿಂದ ಜಮ್ಮು ಮತ್ತು ಕಾಶ್ಮೀರದ ಭಾಗವನ್ನು ಭಾರತ ಜೊತೆ ಸಂಪೂರ್ಣವಾಗಿ ಏಕೀಕರಿಸುವ ಅಜೆಂಡಾ ಭಾರತಕ್ಕಿತ್ತು ಎಂಬುವುದು ಅರಿವಿಗೆ ಬಂದಿರುತ್ತದೆ. ಆರ್ಟಿಕಲ್ 370ನ್ನು ತೆಗೆದು ಹಾಕಿ ಸರ್ಕಾರ ಕಣಿವೆ ನಾಡು ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದೆ. ಈ ಪ್ರಕ್ರಿಯೆ ಬಳಿಕ ಇದು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಆಗಿ ಮಾರ್ಪಟ್ಟಿದೆ. ಈ ನಡುವೆ ಇಲ್ಲಿ ಭಯೋತ್ಪಾದನಾ ಚಟುವಟಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭದ್ರತಾ ಪಡೆ ನಿಯೋಜಿಸ ಲಾಗಿದೆ.

ಆಡಳಿತ ದಕ್ಷತೆಯನ್ನು ಹೆಚ್ಚಿಸಲು ಮತ್ತು ಭ್ರಷ್ಟಾಚಾರವನ್ನು ಕಡಿಮೆ ಮಾಡಲು ಮತ್ತು ನಾಗರಿಕರಿಗೆ ಮತ್ತಷ್ಟು ಹತ್ತಿರವಾಗಲು ಇಲ್ಲಿನ ಕೇಂದ್ರಾಡಳಿತ ಅಧಿಕಾರಿಗಳು ಭಾರೀ ಪ್ರಯತ್ನ ನಡೆಸುತ್ತಿವೆ. ಜನರಲ್ಲೂ ಉತ್ತಮ ಭವಿಷ್ಯದ ಆಕಾಂಕ್ಷೆ ಇತ್ತಾದರೂ, ಪ್ರತ್ಯೇಕತೆವಾದ ದೂರವಾಗಿರಲಿಲ್ಲ. ಹೀಗಾಗಿ ಆರ್ಟಿಕಲ್ ೩೭೦ ರದ್ದುಗೊಂಡ ಬೆನ್ನ ಭದ್ರತಾ ಪಡೆಗಳು ಪ್ರತ್ಯೇಕತಾವಾದಿ ನಾಯಕರನ್ನು ವಶಕ್ಕೆ ತೆಗೆದುಕೊಂಡಿದ್ದರು. ಇದು ಇಲ್ಲಿನ ಜನರನ್ನು ಕೆರಳಿಸಿತ್ತು. ಹೀಗಾಗಿ ಅನೇಕರು ಬೀದಿಗಿಳಿದು ಪ್ರತಿಭಟಿಸಿದ್ದರು. ಇಂಟರ್ನೆಟ್ ಮೊಬೈಲ್ ಸಂವಹನವನ್ನು ದೀರ್ಘಕಾಲದವರೆಗೆ ಸ್ಥಗಿತಗೊಳಿಸ ಲಾಯಿತು.

ನಿಯಂತ್ರಣ ರೇಖೆಯಾದ್ಯಂತ ಪ್ರಾಕ್ಸಿ ಮಾಸ್ಟರ್ಸ್‌ನೊಂದಿಗೆ ಸಮನ್ವಯ, ತರಬೇತಿ, ಪ್ರೇರಣೆ ಮತ್ತು ಬಾಹ್ಯ ಸಂವಹನವು ಹೆಚ್ಚಾಗಿ ನಿಷ್ಪರಿಣಾಮ ಕಾರಿಯಾಗಿ ಉಳಿದಿದೆ ಎಂದು ಖಚಿತಪಡಿಸಲಾಯಿತು. ಈ ನಡೆ ಅನೇಕ ಮಾನವ ಹಕ್ಕುಗಳ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿತ್ತು. ಜಿಲ್ಲಾ ವಿಕಾಸ್ ಪರಿಷತ್ ಚುನಾವಣೆಗಳು ಇಲ್ಲಿ ನಡೆದಿದ್ದರೂ ಜಮ್ಮು ಕಾಶ್ಮೀರಕ್ಕೆ ಕೇಂದ್ರಾಡಳಿತ ಪ್ರದೇಶದಿಂದ, ರಾಜ್ಯದ ಯದಾಗಿಸ್ಥಾನಮಾನ ನೀಡಿ ವಿಧಾನಸಭಾ
ಚುನಾವಣೆ ನಡೆಸದಿರಲು ಎರಡು ಕಾರಣಗಳಿವೆ. ಮೊದಲನೆಯದಾಗಿ ಕೊರೋನಾ ಸೋಂಕು ಹಾಗೂ ಎರಡನೆಯದಾಗಿ ರಾಜಕೀಯ ಮನಸ್ಥಿತಿ ಮತ್ತು ವಾಸ್ತವಿಕತೆಯು ಹೊಸ ಸಾಂವಿಧಾನಿಕ ಪರಿಸ್ಥಿತಿಯಿಂದ ತಂದ ಬದಲಾವಣೆಗಳಿಂದಾಗಿ ಹೀಗೆ ಮಾಡಿರಲಿಲ್ಲ.

ಜಮ್ಮು ಮತ್ತು ಕಾಶ್ಮೀರದಲ್ಲಿ ಆಂತರಿಕ ಪರಿಸ್ಥಿತಿ ಮತ್ತು ಹೊಸ ರಾಜಕೀಯ ಕ್ರಮಗಳ ಬಗ್ಗೆ ಕೇಂದ್ರ ನಾಯಕತ್ವದ ಮೌಲ್ಯಮಾಪನದ ಗತ್ಯವಿದೆ. ಆದರೂ ಸದ್ಯ ಅಂತಾರಾಷ್ಟ್ರೀಯ ಮತ್ತು ಪ್ರಾದೇಶಿಕ ಭದ್ರತಾ ವಾತಾವರಣ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಮತ್ತಷ್ಟು ಸರಿಪಡಿಸಲು ಹಾಗೂ ಶಾಂತಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಅವಕಾಶ ಒದಗಿಸಿದೆ ಈ ಬಾರಿಯ ಭೇಟಿಯ ವೇಳೆ ನಾನು ನನ್ನ ಅತ್ಯಾಪ್ತ ಗೆಳೆಯ ಕಾಶ್ಮೀರದ ರಾಜ್ಯಪಾಲ ಮನೋಜ್ ಸಿನ್ಹಾ ಜತೆಗೂ ಮಾತನಾಡಿದೆ. ನಾನು ಹೋದ ಸಮಯದಲ್ಲಿನ್ನೂ ಟುಲಿಪ್ ಗಾರ್ಡನ್‌ನಲ್ಲಿ ಹೂವರಳಿರಲಿಲ್ಲ.

ಸೇಬಿನ ತೋಪುಗಳಲ್ಲಿ ಹಣ್ಣುಗಳಿರಲಿಲ್ಲ. ಕೇಸರಿ ಹೊಲಗಳಲ್ಲಿ ಸೌಂದರ್ಯವಿರಲಿಲ್ಲ. ಆದರೆ ಅಕ್ಕಪಕ್ಕದ ಅಂಗಡಿಗಳಿಂದ ಕೇಸರಿಯ ಸುಗಂಧ ಪಸರಿಸಿತ್ತು. ಭೂಮಿಯ ಮೇಲೆ ಸ್ವರ್ಗವೆಂಬುದು ಇದ್ದರೆ, ಅದಿರುವುದು ಇ ಎಂಬ ಮಾತುಗಳನ್ನು ನನ್ನ ಗುನುಗಿಕೊಂಡೆ. ಒಂದಂತೂ ಸತ್ಯ. ಅಲ್ಲಿನ ಇಂದಿನ ಸ್ಥಿತಿ ಹಿಂದಿನಂತಿಲ್ಲ. ಕಾಶ್ಮೀರವನ್ನು ಮತ್ತೆ ಸ್ವರ್ಗ ಸೀಮೆಯಾಗಿಸಬೇಕಾದರೆ ಅದನ್ನು ಸ್ವಿಜರ್ ಲ್ಯಾಂಡ್ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು. ಯುವಕರಿಗೆ ಕೆಲಸ ಸಿಗಬೇಕು. ಚೀನಾರ್ ಮರಗಳು ಮತ್ತೆ ಗತವೈಭವವನ್ನು ಹೊತ್ತು ನಿಲ್ಲುವಂತೆ ಮಾಡಬೇಕು. ಬೋಟ್‌ಗಳನ್ನು ಮತ್ತೆ ಸುಂದರವಾಗಿ ಸಜ್ಜುಗೊಳಿಸಬೇಕು. ಲಾಲ್ ಚೌಕಕ್ಕೆ ಹೋಗಿ ದೇಶದ ಧ್ವಜಕ್ಕೆ ಸೆಲ್ಯೂಟ್ ಹೊಡೆಯುವುದಕ್ಕೆ ಯಾರಿಗೂ ಅಳುಕು ಇರಬಾರದು.

ಬಹಳ ಪ್ರಮುಖ ಸಂಗತಿಯೆ ಅದರೆ ನಾವು ಸುಂದರ ಕಾಶ್ಮೀರ ಕಣಿವೆಯಲ್ಲಿ ಪ್ರೀತಿ ಮತ್ತು ನಂಬಿಕೆಯ ಸಂದೇಶವನ್ನು ಸಾರಬೇಕು. ಹಾಗಾದಾಗ ಮಾತ್ರ ಭೂಮಿಯ ಮೇಲೆ ಸ್ವರ್ಗವೆಂಬುದು ಇದ್ದರೆ ಅದು ಇರುವುದು ಇಲ್ಲಿಯೇ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು.