Saturday, 14th December 2024

ಕನ್ನಡಿಗರಿಗೇ ಕನ್ನಡಕ ಹಾಕಿ ಕನ್ನಡ ಕಾಣಿಸಿದ ಕಸ್ತೂರಿ

ತನ್ನಿಮಿತ್ತ

ಬೇಲೂರು ರಾಮಮೂರ್ತಿ

belururamamurthy@gmail.com

ನಾ. ಕಸ್ತೂರಿ (ಜನನ : 25.12.1897 – ಮರಣ 14.8.1987) ಎಂದು ಖ್ಯಾತರಾದ ನಾರಾಯಣ ರಂಗನಾಥ ಕಸ್ತೂರಿಯವರು ಹುಟ್ಟಿದ್ದು ಕೇರಳದ ತಿರುಪುನಿತ್ತೂರು ಎಂಬ ಗ್ರಾಮದಲ್ಲಿ. ಅವರ ತಂದೆ ನಾರಾಯಣ ವಕೀಲರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು.

ಕಸ್ತೂರಿಯವರಿಗೆ ಕೇವಲ ೬ ವರ್ಷ ವಯಸ್ಸಾಗಿದ್ದಾಗ ಅವರ ತಂದೆ ತೀರಿಕೊಂಡರು. ನಂತರ ಕಸ್ತೂರಿಯವರು ಅವರ ತಾಯಿಯ ತಂದೆ ಅಂದರೆ ಅಜ್ಜನ ಆರೈಕೆಯಲ್ಲಿ ಬೆಳೆದರು. ಎಸ್‌ಎಸ್‌ಎಲ್‌ಸಿ ಪಾಸಾದ ಮೇಲೆ ಎರ್ನಾಕುಲಮ್ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಓದಿದರು. ನಂತರ ತಿರುವನಂತಪುರದ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ತಿರುವನಂತಪುರದ ಪ್ರೌಢಶಾಲೆಯಲ್ಲಿ ಕಸ್ತೂರಿಯವರು ಅಧ್ಯಾಪಕ ವೃತ್ತಿ ಹಿಡಿದರು. ಜತೆ ಜತೆಗೆ ಸಂಜೆ ಕಾಲೇಜಿನಲ್ಲಿ ಕಾನೂನು ಓದನ್ನೂ ಮುಂದುವರಿಸಿದರು.

ಅವರಲ್ಲಿ ಬರವಣಿಗೆ ಹುಚ್ಚು ಪ್ರಾರಂಭವಾದದ್ದು ಪೀಪಲ್ -ಫ್ರೆಂಡ್ ಎನ್ನುವ ಪತ್ರಿಕೆಗೆ ಲೇಖನಗಳನ್ನು ಬರೆಯುವುದರ ಮೂಲಕ. ಜೊತೆಗೆ ಹೈಸ್ಕೂಲು ಮತ್ತೆ ಕಾಲೇಜಿನಲ್ಲಿ ತಾವೇ ನಾಟಕ ಗಳನ್ನು ಬರೆದು ಆಡಿಸುತ್ತಿದ್ದರು. ಕಸ್ತೂರಿಯವರು ತಮ್ಮ 14ನೆ ವಯಸ್ಸಿನಲ್ಲಿಯೇ ತಂದೆಯ ತಂಗಿಯ ಮಗಳನ್ನು ಮದುವೆಯಾಗಿ ಹಸ್ಥಾಶ್ರಮಕ್ಕೂ ಕಾಲಿಟ್ಟರು. ಅವರು ಕನ್ನಡದ ಬಗೆಗೆ ಅರಿವೇ ಇರದ ದಿನಗಳಲ್ಲಿ ಅವರು ಮೈಸೂರಿನ ಡಿಬಿಸಿ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಸೇರಿದರು. ಅಲ್ಲಿಂದ ಮುಂದೆ ಅವರು ಬನುಮಯ್ಯ ಕಾಲೇಜಿನಲ್ಲಿ ಉಪನ್ಯಾಸಕರಾದರು. ಚರಿತ್ರೆ, ಇಂಗ್ಲಿಷ್ ಮತ್ತು ಅರ್ಥಶಾಸ್ತ್ರ ಬೋಧಿಸುತ್ತಿದ್ದರು. ಆಗ ಕನ್ನಡ ಕಲಿಯಲು ಪ್ರಾರಂಭಿಸಿದ ಕಸ್ತೂರಿಯವರು ಕನ್ನಡದಲ್ಲಿ ಇರುವ ಸೊಗಡನ್ನು ಈ ಹಿಂದೆ ಯಾರೂ ಅನಾವರಣಗೊಳಿಸಿರದ ರೀತಿ ಹೊರತಂದರು. ಕನ್ನಡಕ್ಕೆ ಒಂದು ಘನತೆಯನ್ನು ತಂದುಕೊಟ್ಟರು. ಕಸ್ತೂರಿಯವರು ಮೈಸೂರಿ ನಲ್ಲೇ ಅಲ್ಲದೇ, ಶಿವಮೊಗ್ಗ, ದಾವಣಗೆರೆ ಕಾಲೇಜಿಗಳಲ್ಲೂ ಅಧ್ಯಾಪಕ ವೃತ್ತಿ ನಡೆಸಿದರು. ಹುಟ್ಟಿನಿಂದ ಮಲೆಯಾಳಿ ಆದರೂ ಮೈಸೂರಿಗೆ ಬಂದು ಕನ್ನಡ ಕಲಿತು ಕನ್ನಡ ಕಸ್ತೂರಿ ಎನ್ನುವುದನ್ನು ಸಾಬೀತು ಮಾಡಿದವರು ನಾ. ಕಸ್ತೂರಿಯವರು.

ಕನ್ನಡವನ್ನು ಇಷ್ಟು ಶ್ರೀಮಂತವಾಗಿ ಬಳಸಬಹುದೇ ಅಂತ ಕನ್ನಡಿಗರೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದ ಕೀರ್ತಿ ಕಸ್ತೂರಿ ಯವರದು. ಅವರು ವೃತ್ತಿ ಪ್ರಾರಂಭ ಮಾಡಿದ್ದು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಇತಿಹಾಸದ ಉಪಾದ್ಯಾಯರಾಗಿ. ನಂತರ ಅವರು ಕನ್ನಡ ಕಲಿತು ಕನ್ನಡ ಅಧ್ಯಾಪಕರಾದರು. ಮೈಸೂರು ನಗರಪಾಲಿಕೆಯವರು ಕೊಟ್ಟ ಅನುದಾನದಿಂದ ಮತ್ತು ಗೋಪಾಲಸ್ವಾಮಿಯವರು ಹಾಲೆಂಡಿನಿಂದ ತಂದ ಒಂದು ಟ್ರಾನ್ಸ್ಮಿಟರ್ ಸಹಾಯದಿಂದ ಕೆಲಸ ಪ್ರಾರಂಭವಾಯಿತು. ಆದರೆ ಈ ಕೇಂದ್ರಕ್ಕೆ ಏನು ಹೆಸರಿಡಬೇಕು ಎನ್ನುವ ಜಿಜ್ಞಾಸೆ ಮೂಡಿದಾಗ ಕಸ್ತೂರಿಯವರು ಸೂಚಿಸಿದ ಆಕಾಶವಾಣಿ ಎನ್ನುವ ಹೆಸರು ಎಲ್ಲರಿಗೂ ಸಮ್ಮತಿಯಾಯಿತು.

ಕೈಲಾಸಂ ಅವರದು ಒಂದು ರೀತಿಯ ಮಾತುಗಾರಿಕೆಯಾದರೆ, ಕಸ್ತೂರಿಯವರದು ಇನ್ನೊಂದು ರೀತಿ. ಕಸ್ತೂರಿಯವರು ರಾಶಿಯವರ ಜತೆ ಸೇರಿ ಕೊರವಂಜಿ ಹಾಸ್ಯ ಮಾಸಪತ್ರಿಕೆಯನ್ನು ಇಪ್ಪತೈದು ವರ್ಷಗಳ ಕಾಲ ಸಮರ್ಥವಾಗಿ ನಡೆಸಿಕೊಂಡು ಬಂದಿದ್ದು ಕನ್ನಡದ ಹಾಸ್ಯ ಸಾಹಿತ್ಯಕ್ಕೆ ಒಂದು ಭದ್ರವಾದ ಬುನಾದಿ ಹಾಕಿಕೊಟ್ಟಿತು. ಅಣಕು ಹಾಡುಗಳು ಕಸ್ತೂರಿಯವರ ಹಾಸ್ಯದ ಇನ್ನೊಂದು ಮಗ್ಗುಲು. ಅವರ ಬಹು ಮೆಚ್ಚುಗೆಯ ಕೃತಿ ಪಾತಾಳದಲ್ಲಿ ಪಾಪಚ್ಚಿ. ಅದರಲ್ಲಿ ಪಾಪಚ್ಚಿಯ ಚಮತ್ಕಾರಗಳು ಅನೇಕ. ಪಾಪಚ್ಚಿ ಇರುವ ಕವನಗಳನ್ನು ತಿರುಚಿ ತಿರುಚಿ ಹೇಳುವು ದರಲ್ಲಿ ನಿಷ್ಣಾತಳು. ನಮಗೆಲ್ಲ ಗೊತ್ತಿರುವ ಹಾಗೆ ನಾಯಿ ಇಲಿಯನ್ನು ಕಂಡರೆ ಅಟ್ಟಿಸಿಕೊಂಡು ಹೋಗುತ್ತದೆ. ಕೆಲವು ವೇಳೆ ಅದನ್ನು ನುಂಗಿಬಿಡುತ್ತದೆ. ಒಂದು ಹಾಡಿನ ಅಥವಾ ಪದ್ಯದ ಸಾಲಿಗೆ ಇನ್ನೊಂದು ಮುದ ಕೊಡುವಂಥ ಸಾಲನ್ನು ಸೇರಿಸುವುದರಲ್ಲಿ ಕಸ್ತೂರಿ ಸಿದ್ದಹಸ್ತರು.

ಅಣಕುವಾಡುಗಳ ಕೆಲವು ಝಲಕ್ ನೋಡಬೇಕೆಂದರೆ : ಕುಮಾರ ಸ್ವಾಮಿಯು ಹಾಡಿದನೆಂದರೆ ಸಭೆಯಲಿ ಗುಡುಗೇ ಮೊಳಗುವುದು ಕೋಪವು ಕಣ್ಣಲಿ ಸಿಡಿಯುವುದು, ಬಾಯಲಿ ಶಾಪದ ಪದ ತುಳುಕಾಡುವುದು ಹಾಸ್ಯವನ್ನು ವಿಜೃಂಬಿಸುವುದೇ ಅದರ ಮಾತಿನ ಮತ್ತು ಬರವಣಿಗೆಯ ಮುಖ್ಯ ಇದ್ದೇಶ. ತಮಗೆ ಅನಾರೋಗ್ಯವಾದಾಗ ಡಾಕ್ಟರ್‌ಬಳಿ ಹೋಗಬೇಕಾಗಿ ಬಂದಾಗ ಮಲ ವನ್ನು ಶೀಷೆಯಲ್ಲಿ ಹಾಕಿಕೊಂಡು ಹೋಗಬೇಕಾದ ಪ್ರಸಂಗವನ್ನು ವಿವರಿಸುತ್ತಾ ಕಸ್ತೂರಿ ಯವರು ಡಾಕ್ಟರ್ ಷಾಪಿಗೆ ಹೋಗುವಾಗ ಮಲ ತುಂಬಿದ ಶೀಷೆಯ ಮೇಲೆ ಕಸ್ತೂರಿ ಅಂತ ರ‍್ಕೊಂಡು ಹೋಗಬೇಕಲ್ಲ ಎನ್ನುತ್ತಾರೆ. ದೊಡ್ಡವರೊಂದಿಗೆ ದೊಡ್ಡ ವರಾಗಿ ಮಕ್ಕಳೊಂದಿಗೆ ಮಕ್ಕಳಾಗಿ ಇದ್ದವರು ಕಸ್ತೂರಿ.

ಕಸ್ತೂರಿಯವರು ರಾಶಿಯವರನ್ನು ಆಗಾಗ ಭೇಟಿಯಾಗುತ್ತಿದ್ದಾಗ ಅವರು ತರಿಸುತ್ತಿದ್ದ ಇಂಗ್ಲಿಷಿನ ಪಂಚ್ ಪತ್ರಿಕೆಯನ್ನು ಓದುತ್ತಿದ್ದರು. ಅದರಲ್ಲಿರುತ್ತಿದ್ದ ಹಾಸ್ಯ ಬರಹಗಳು, ವ್ಯಂಗ್ಯಚಿತ್ರಗಳು ಮುಂತಾದುವು ಕಸ್ತೂರಿಯವರನ್ನು ಸೆಳೆಯುತ್ತಿದ್ದವು. ಆಗ ಅವರ ಮನದಲ್ಲಿ ಹುದುಗಿದ್ದೆ ಒಂದು ಆಸೆ, ನಮ್ಮ ಕನ್ನಡದಲ್ಲೂ ಇಂಥಾ ಪತ್ರಿಕೆಯೊಂದು ಇದ್ದರೆ ಎಷ್ಟು ನ್ನಾಗಿರೋದು ಅಂತ. ಹಾಗೆ ಹುಟ್ಟಿದ್ದೇ ಕನ್ನಡದ `ಕೊರವಂಜಿ ಹಾಸ್ಯ’ ಮಾಸ ಪತ್ರಿಕೆ. ರಾಶಿಯವರ ಜತೆ ಸೇರಿ ಇಂಗ್ಲಿಷ್‌ನ ಪಂಚ್ ಮಾದರಿ ಪತ್ರಿಕೆಯಾದ ಕೊರವಂಜಿಯನ್ನು 25 ವರ್ಷಗಳ ಕಾಲ ಸಮರ್ಥವಾಗಿ ನಡೆಸಿಕೊಂಡು ಬಂದಿದ್ದು ಕನ್ನಡದ ಹಾಸ್ಯ ಸಾಹಿತ್ಯಕ್ಕೆ ಒಂದು ಭದ್ರವಾದ ಬುನಾದಿ ಹಾಕಿಕೊಟ್ಟಿತು.

ಹಾಸ್ಯವನ್ನು ವಿಜೃಂಬಿಸುವುದೇ ಅದರ ಮುಖ್ಯ ಇದ್ದೇಶ. ಇಂದಿನ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯ ವ್ಯಂಗ್ಯ ಚಿತ್ರಕಾರ ಆರ್.ಕೆ. ಲಕ್ಷ್ಮಣ್ ಅವರು ತಮ್ಮ ವ್ಯಂಗ್ಯಚಿತ್ರ ರಚನೆ ಪ್ರಾರಂಭ
ಮಾಡಿದ್ದು ಕನ್ನಡದ ಕೊರವಂಜಿಯಿಂದ ಎನ್ನುವುದು ಕನ್ನಡದ ಮಟ್ಟಿಗೆ ಒಂದು ಹೆಗ್ಗಳಿಕೆ. ಅಷ್ಟೇಕೆ, ಕನ್ನಡದ ಪ್ರಮುಖ ಹಾಸ್ಯ ಬರಹಗಾರರಾದ ದಾಶರಥಿ ದೀಕ್ಷಿತ್, ಟಿ. ಸುನಂದಮ್ಮ, ಕೊಳ್ಳೇಗಾಲದ ರಾಮಾನುಜ, ಕೇಫ, ಹಾ.ರಾ. ಮುಂತಾದವರೆಲ್ಲ ಬರಹ ಪ್ರಾರಂಭಿಸಿದ್ದು ಕೊರವಂಜಿಯಿಂದ.

25 ವರ್ಷ ನಡೆಸಿದ ಬಳಿಕ ಆರ್ಥಿಕವಾಗಿ ಕುಸಿದು ಬಿದ್ದು ಪತ್ರಿಕೆ ಪ್ರಕಟಣೆಯನ್ನು ನಿಲ್ಲಿಸಿತು. ಆಗ ಉದಯಿಸಿದ್ದೇ ಅಪರಂಜಿ ಮಾಸಪತ್ರಿಕೆ. ಕೊರವಂಜಿಗೆ ಆದ ಗತಿಯೇ ಅಪರಂಜಿಗೂ ಆಗದೇ ಇರಲಿ ಎಂತ ಕೊರವಂಜಿ ಅಪರಂಜಿ ಟ್ರಸ್ಟ್ ಪ್ರಾರಂಭಿಸಿ ಅದರ ಮೂಲಕ ರಾಶಿಯವರ ಮಗ ಎಂ.ಶಿವಕುಮಾರ್ ಅವರು ಸಂಪಾದಕರಾಗಿಯೂ, ಬೇಲೂರು ರಾಮಮೂರ್ತಿಯವರು ಉಪಸಂಪಾದಕರಾಗಿಯೂ ಕಾರ್ಯನಿರ್ವಹಿಸುತ್ತಾ ಇಂದಿಗೂ ಅಪರಂಜಿ ಜೀವಂತವಾಗಿರುವಂತೆ ನೋಡಿಕೊಂಡಿದ್ದಾರೆ.

ಸಹೋದ್ಯೋಗಿಯೊಬ್ಬರು ಕಸ್ತೂರಿಯವರಿಗೆ ಬಂದ ಪ್ರಮೋಷನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಾಲೇಜಿನಲ್ಲಿ ಎಲ್ಲರೊಂದಿಗೂ ಮಾತಾಡುತ್ತಿದ್ದರಂತೆ, ಆಗ ಕಸ್ತೂರಿಯವರು ಸ್ವಲ್ಪವೂ ಸಿಟ್ಟು ಮಾಡಿಕೊಳ್ಳದೇ ಅವರನ್ನು ತಮ್ಮ ಕೋಣೆಗೆ ಕರೆಸಿ ನೋಡು ಯಾವುದೋ ಒಂದು ಕೆಲಸವನ್ನು ನಾನು ಮಾತ್ರ ಮಾಡೋಕೆ ಸಾಧ್ಯ, ಅದು ನಿನ್ನಿಂದ ಸಾಧ್ಯವಿಲ್ಲ ಅದಕ್ಕೇ ನನ್ನನ್ನು ಪ್ರಿನ್ಸಿಪಾಲ್
ಆಗಿ ಪ್ರಮೋಷನ್ ಮಾಡಿದಾರೆ ಅಂದರು. ಆಗ ಅವರು ಮತ್ತೆ ಛಾಲೆಂಜ್ ಮಾಡಿದಾಗ ಒಂದು ಒಪ್ಪಂದಕ್ಕೆ ಬಂದರು. ಕಾಲೇಜಿನ ಕಾಮನ್ ರೂಮಿಗೆ ಎಲ್ಲರನ್ನೂ ಕರೆಸೋದು. ಅವರೆಲ್ಲರ ಎದುರಿಗೆ ಕಸ್ತೂರಿಯವರು ಒಂದು ಕೆಲಸವನ್ನು ಮಾಡುವುದು. ಅದೇ ಕೆಲಸವನ್ನು ಸಹೋದ್ಯೋಗಿಯೂ ಮಾಡಿದರೆ ಅವರಿಗೆ ಪ್ರಿನ್ಸಿಪಾಲ್ ಹುದ್ದೆಯನ್ನು ಬಿಟ್ಟುಕೊಡುವುದು.

ಇಲ್ಲವಾದಲ್ಲಿ ಸಹೋದ್ಯೋಗಿಯು ಎಲ್ಲರಿಗೂ ಮಸಾಲೆ ದೋಸೆ ಕೊಡಿಸಬೇಕು ಎನ್ನುವ ಷರತ್ತು. ಸಹೋದ್ಯೋಗಿಯು ಷರತ್ತಿಗೆ ಒಪ್ಪಿಕೊಂಡರು. ಆಗ ಕಸ್ತೂರಿಯವರು ದೊಡ್ಡದಾಗಿ ಬಾಯಿ ತೆಗೆದು ತಮ್ಮ ಕಟ್ಟಿಸಿದ ಹಲ್ಲು ಸೆಟ್ಟನ್ನು ತೆಗೆದಿಟ್ಟರು. ಸಹೋದ್ಯೋಗಿಯ ಕಡೆ ನೋಡಿ ನೀವೂ ತೆಗೆದಿಡಿ, ನಿಮಗೇ ಪ್ರಿನ್ಸಿಪಾಲ್ ಹುದ್ದೆ ಕೊಡಿಸುತ್ತೇನೆ ಅಂದರು. ಸಹೋದ್ಯೋಗಿ ನಾಚಿಕೆ ಯಿಂದ ತಲೆ ತಗ್ಗಿಸಿದರು. ಯಾಕೆಂದರೆ ಅವರದು ಕಟ್ಟಿಸಿದ ಹಲ್ಲಲ್ಲ. ಸಾಮಾನ್ಯವಾಗಿ ಇಂದು ನಮಗೆಲ್ಲ ಭಾನುವಾರ ಬಂದರೆ ಏನು ಮಾಡೋದು ಎನ್ನುವ ಯೋಚನೆ ಇರುತ್ತದೆ. ಭಾನುವಾರ ಮಾಡೋಣ ಅಂತ ಅನೇಕ ಕೆಲಸಗಳನ್ನು ಮುಂದುಮುಂದಕ್ಕೆ ಹಾಕಿಕೊಂಡು ಬಂದಿರುತ್ತೇವೆ. ಆದರೆ ಭಾನುವಾರ ಬಂದರೆ ಮಾತ್ರ ಯಾವ ಕೆಲಸ ಮಾಡೋದು ಯಾವ ಕೆಲಸ ಬಿಡೋದು
ಎನ್ನುವ ಚಿಂತೆ ಕಾಡಿ ಕೊನೆಗೆ ಯಾವ ಕೆಲಸವನ್ನೂ ಮಾಡದೇ ಎಲ್ಲವನ್ನೂ ಮುಂದಿನ ಭಾನುವಾರಕ್ಕೆ ಮುಂದೂಡಲಾಗುತ್ತದೆ. ಅಂದಿನ ದಿನಗಳಲ್ಲಿಯೂ ಈತರದ ಜಿಜ್ಞಾಸೆ ಮೂಡುತ್ತಿತ್ತಂತೆ. ಅದನ್ನು ಕಸ್ತೂರಿಯವರು ತುಂಬಾ ಚನ್ನಾಗಿ ಒಂದು ಕವನದ ಮೂಲಕ ವಿವರಿಸಿದ್ದಾರೆ.

ಅದು ಹೀಗಿದೆ.
ಸಂಡೇ ಸಂದೇಹ
ಪೇಪರೋದಲೆ ? ಷೇವು ಮಾಡಲೇ?
ಸಂನೆ ಕುರ್ಚಿಲಿ ಕೂರಲೇ
ಮಕ್ಕಳಿಬ್ಬರ ಹೋಮುವರ್ಕನು
ಮಾಡಿಕೊಡಲೇ ಈಗಲೇ
ಭಾನುವಾರವು ಹಾಳು ಬಂದರೆ
ಏನು ಮಾಡುವುದೆಂದು ತೋಚದು
ಗಾಣದೆತ್ತನು ಬಿಚ್ಚಿ ಬಿಟ್ಟರೆ
ಮತ್ತೆ ರೌಂಡೇ ಹೊಡೆವುದು
ಇನ್ನು ಕೆಲವು ಹಾಸ್ಯ ಪ್ರಶ್ನೋತ್ತರಗಳು
ಅಳಿಯ ಮಾವನಿಗೆ ಹೇಳೋ ಮಾತು
ನಾನ್ಯಾಕೆ ಬಡವನು ನಾನ್ಯಾಕೆ ಪರದೇಶಿ
ಸೋಮಾರಿ ಹೇ ಮಾವ ನೀನಿರುವ ತನಕ
ಪುಟ್ಟಿಸಿದ ತಾಯಿ ತಂದೆ ಎಷ್ಟು ಮಾತ್ರದ ನಂಟು
ಕಷ್ಟದಲಿ ಕೈ ಹಿಡಿದ ಸತಿಯ ತಂದೆ
ಪೆಟ್ಟಿಗೆಯೊಳಗಿನ ಚೆಕ್ಕು ಬುಕ್ಕಿನ ಹಾಳೆ
ನೆಟ್ಟಗೆ ರುಜು ಹಾಕಿ ನೀ ಕೊಡುವ ತನಕ
ಪರೀಕ್ಷೆಗೆ ಸಂಬಂಧ ಪಟ್ಟ ಗಾದೆಗಳು
ಕೊಡುವುದು ಒಂದು ಕ್ವೆಶ್ಚನ್ – ಬಿಡುವುದು ನೂರೆಂಟು
ಬುರುಡೆ
ಆನ್ಸರ್ ತೋರಿಸಿ ಅವಲಕ್ಷಣ ಅಂತ ಅನಿಸಿಕೊಂಡ ಹಾಗೆ
ಗುರುಗಳು ಕಲಿಸಿದ್ದು ಠಕ್ಕು ಹುಡುಗ ನಂಬಿದ್ದು ಲಕ್ಕು
ದಡ್ಡನ ಹಿಂದಿನ ಸೀಟಿನಲ್ಲಿ ಕೂರಬಾರದು ಪೆಚ್ಚನ
ಪಕ್ಕದ ಸೀಟಿನಲ್ಲಿ ಕೂರಬಾರದು
ಕೆಟ್ಟ ಮೇಲೆ ಬುದ್ದಿ ಬಂತು ಕೊಟ್ಟ ಮೇಲೆ ಉತ್ತರ
ಹೊಳೆಯಿತು
ಕಾಪಿ ಮಾಡಕ್ಕೆ ಬರದವನು ಕ್ವಶ್ಚನ್ ಪೇಪರ್ ದೂರಿದ
ಅಣಕ ಹಾಡು
( ಡಿವಿಜಿ ಯವರ ಕ್ಷಮೆ ಕೋರಿ )
ಮಾತು
ಕೋಪ ಸಹಜದ ಧರ್ಮ ರೇಗುವುದು ಪತಿ ಧರ್ಮ
ರೇಗಿ ರೇಗಿಸುತಿಹುದೇ ಪತಿದರ್ಮ
ರೇಗಿ ರೇಗಿಸಿ ಉರಿದು ಸತಿಯ ಗೋಳಾಡಿಸುವ
ವರವ ನಿಮಗಿತ್ತನಲ ದೇವ ಬೊಮ್ಮ

ಕಡೆಯದಾಗಿ ಕಸ್ತೂರಿಯವರು ತಮ್ಮಲ್ಲಿದ್ದ ಹಾಸ್ಯಪ್ರಜ್ಞೆಯನ್ನು ಹೀಗೆ ಒಟ್ಟುಗೂಡಿಸುತ್ತಾರೆ. ಹಾಸ್ಯಪ್ರಜ್ಞೆ ಇದ್ದರೆ ಜೀವನದಲ್ಲಿ ಕ್ಷುದ್ರವಾದುದು ಯಾವುದು ಮುಖ್ಯವಾದುದು ಯಾವುದು ಎಂಬ
ಸಾರಾಸಾರ ಜ್ಞಾನ, ಮೌಲ್ಯ, ವಿವೇಚನೆ, ಸುಖ-ದು:ಖ ಭಯ-ಕ್ಷೇಷ ಏರಿಳಿತಗಳನ್ನು ಪ್ರಸನ್ನ ಚಿತ್ತದಿಂದ ನೋಡುವ ಸಮತೋಲಿತ ಮನೋಧರ್ಮ ಬೆಳೆಯುತ್ತದೆ. ಅದಮ್ಯವಾದ ಕುತೂಹಲ,
ವಿಸ್ಮಯಗಳು ನಮಗೆ ನಾವೇ ತಂದುಕೊಳ್ಳುವ ತಾಪತ್ರಯಗಳ ಬಗ್ಗೆ ಔದಾಸೀನ್ಯ ನನ್ನ ಸ್ವಭಾವದಲ್ಲಿ ಬೆಳೆದು ಬಂದ ಗುಣಗಳು.