ವೀಕೆಂಡ್ ವಿತ್ ಮೋಹನ್
camohanbn@gmail.com
ನಾಯಕರಾದವರಿಗೆ ದೂರದೃಷ್ಟಿ ಇಲ್ಲದಿದ್ದರೆ ಆಗುವ ಅನಾಹುತಗಳಿಗೆ ಈ ಹಿಂದೆ ಭಾರತ ಸಾಕ್ಷಿಯಾಗಿದೆ. ಒಂದು ದೇಶವನ್ನು ನಡೆಸುವ ಪ್ರಧಾನಮಂತ್ರಿ ಮತ್ತು ರಾಜ್ಯವನ್ನು ನಡೆಸುವ ಮುಖ್ಯಮಂತ್ರಿ, ಅಧಿಕಾರ ನಡೆಸುವ ಸಂದರ್ಭದಲ್ಲಿ ದೇಶ ಮತ್ತು ರಾಜ್ಯದ ದೂರದೃಷ್ಟಿಯನ್ನು ಮುಂದಿಟ್ಟುಕೊಂಡು ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ದೂರದೃಷ್ಟಿಯ ಕೊರತೆಯಿಂದ ಬೇಜವಾಬ್ದಾರಿಯ ಹಲವು ನಿರ್ಣಯಗಳನ್ನು ಕೈಗೊಳ್ಳ ಲಾಗಿದೆ. ನೆಹರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವಕ್ಕೆ ಚೀನಾ ಹೆಸರನ್ನು ಸೂಚಿಸು ವುದು ಬೇಡವೆಂದು ಅಮೆರಿಕ ನಿರ್ಧರಿಸಿತ್ತು. ಆದರೆ ‘ಭಾರತ ಮತ್ತು ಚೀನಾ, ಭಾಯಿ-ಭಾಯಿ’ ಎಂಬ ಸಂದೇಶ ಹೊತ್ತಿದ್ದ ನೆಹರು ಅಮೆರಿಕದ ನಿರ್ಧಾರವನ್ನು ತಿರಸ್ಕರಿಸಿ ಚೀನಾಕ್ಕೆ ಶಾಶ್ವತ ಸ್ಥಾನಮಾನ ಸಿಗುವಂತೆ ಮಾಡಿದ್ದರು.
ನಾವು ಮಾಡಿದ ಸಹಾಯವನ್ನು ಚೀನಾ ಎಂದಿಗೂ ನೆನೆದಿಲ್ಲ. ಇಂದು ಭಾರತವು ವಿಶ್ವಸಂಸ್ಥೆಯಲ್ಲಿ ಶಾಶ್ವತ ಸ್ಥಾನಮಾನ ಪಡೆಯಲು ಕಷ್ಟ ಪಡುತ್ತಿದ್ದರೆ, ಚೀನಾ ನೇರವಾಗಿ ತನ್ನ ವೀಟೋ ಅಧಿಕಾರ ಬಳಸಿ ಅದನ್ನು ವಿರೋಧಿಸುತ್ತಿದೆ. ‘ಭಾರತ-ಚೀನಾ ಯುದ್ಧ ಬೇಡವೇ ಬೇಡ, ಚೀನಿಯರು ನಮ್ಮ ಅಣ್ಣ ತಮ್ಮಂದಿರು’ ಎಂದು ಹೇಳಿ ಭಾರತದ ಸೈನ್ಯವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿತ್ತು. ಇದರ ಪರಿಣಾಮ ಸುಮಾರು ೨೪,೦೦೦ ಚದರ ಕಿಲೋಮೀಟರುಗಳ ಅಕ್ಸಾಯ್ ಚಿನ್ ಭೂಮಿಯನ್ನು ೧೯೬೨ರ ಯುದ್ಧದಲ್ಲಿ ಚೀನಾ ವಶಪಡಿಸಿಕೊಂಡಿತ್ತು.
ಬಾಂಗ್ಲಾದೇಶದ ಉದಯದ ಸಂದರ್ಭದಲ್ಲಿ ಭಾರತವೇನೋ ಪಾಕಿಸ್ತಾನವನ್ನು ಬಗ್ಗುಬಡಿದು ಯುದ್ಧ ಗೆದ್ದಿತ್ತು. ಆದರೆ ಈಶಾನ್ಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಭೂಭಾಗದ ಒಟ್ಟಾರೆ ಸುತ್ತಳತೆ ಕಡಿಮೆಯಾಯಿತು. ಬಾಂಗ್ಲಾದೇಶದ ಉದಯದ ಸಂದರ್ಭ ದಲ್ಲಿ ಈಶಾನ್ಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಭೂಭಾಗವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವ ಅವಕಾಶವಿತ್ತು. ಆದರೆ ದೂರ
ದೃಷ್ಟಿಯ ಕೊರತೆಯಿಂದಾಗಿ ಇಂದಿರಾ ಗಾಂಧಿಯವರು ಅದರ ಬಗ್ಗೆ ಯೋಚಿಸಲಿಲ್ಲ. ಸಂಪರ್ಕ ಕಲ್ಪಿಸುವ ರಸ್ತೆಯ ಹತ್ತಿರದಲ್ಲಿ ದೋಕ್ಲಮ್ ಪ್ರದೇಶವಿದೆ.
ಭೂತಾನ್ ದೇಶಕ್ಕೆ ಸೇರಿದ ಈ ಪ್ರದೇಶದ ಮೇಲೆ ತನ್ನ ಹಕ್ಕು ಸ್ಥಾಪಿಸಲು ಚೀನಾ ತುದಿಗಾಲಿನಲ್ಲಿ ನಿಂತಿರುತ್ತದೆ. ದೋಕ್ಲಮ್ ವಶ ವಾದರೆ ಇಡೀ ಈಶಾನ್ಯ ರಾಜ್ಯಗಳೊಂದಿಗಿನ ಭಾರತದ ಸಂಪರ್ಕ ಕಡಿದುಹೋಗುತ್ತದೆಯೆಂಬುದು ಚೀನಾದ ದುರುದ್ದೇಶ. ದೂರ ದೃಷ್ಟಿಯ ಕೊರತೆಯಿಂದ ತೆಗೆದುಕೊಳ್ಳುವ ಕೆಲವು ನಿರ್ಣಯಗಳು ಶತಮಾನಗಳ ಕಾಲ ಮುಂದಿನ ಪೀಳಿಗೆಗಳನ್ನು ಅಪಾಯಕ್ಕೆ ದೂಡುತ್ತವೆ ಎಂಬುದಕ್ಕೆ ಈ ವಿದ್ಯಮಾನ ಸಾಕ್ಷಿ.
ಕಚ್ಚತೀವು ಎಂಬುದು ಶ್ರೀಲಂಕಾ ದೇಶಕ್ಕೆ ಭಾರತ ನೀಡಿದ ದ್ವೀಪ. ಕಚ್ಚತೀವು ಎಂದರೆ ತಮಿಳಿನಲ್ಲಿ ಬಂಜರು ದ್ವೀಪ ಎಂದರ್ಥ. ಭೌಗೋಳಿಕವಾಗಿ ಬಂಜರು ಎನಿಸಿದರೂ ಅದರ ಸುತ್ತಲಿನ ಜಲಚರಗಳ ದೃಷ್ಟಿಯಿಂದ ಅತ್ಯಂತ ಫಲವತ್ತಾದ ಪ್ರದೇಶವಿದು. ಇದು ಭಾರತ ಮತ್ತು ಶ್ರೀಲಂಕಾ ನಡುವಿನ ಪಾಕ್ ಜಲಸಂಧಿಯಲ್ಲಿ ನೆಲೆಗೊಂಡಿರುವ ೧.೧೫ ಚದರ ಕಿಲೋಮೀಟರ್ ವ್ಯಾಪ್ತಿಯ ಜನವಸತಿಯಿಲ್ಲದ ದ್ವೀಪ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ತನ್ನ ಅಸ್ತಿತ್ವವನ್ನು ವಿಸ್ತರಿಸಲು ಬಯಸುತ್ತಿರುವ ಸಂದರ್ಭದಲ್ಲಿ, ಕಚ್ಚತೀವು ದ್ವೀಪ ಭಾರತದ ಕಾರ್ಯತಂತ್ರದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ.
ಜತೆಗೆ ಭಾರತದ ಸಾವಿರಾರು ಮೀನುಗಾರರ, ಅದರಲ್ಲೂ ವಿಶೇಷವಾಗಿ ತಮಿಳುನಾಡಿನ ಮೀನುಗಾರರ ಪ್ರತಿನಿತ್ಯದ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಭಾರತಕ್ಕೆ ಕಚ್ಚತೀವು ದ್ವೀಪದ ಪ್ರಾಮುಖ್ಯವು ರಾಜಕೀಯವನ್ನು ಮೀರಿದ್ದು; ಅಲ್ಲಿನ ಧರ್ಮ, ಜೀವನೋಪಾಯ ಮತ್ತು ಭೌಗೋಳಿಕ ಅಂಶಗಳನ್ನೂ ಅದು ಒಳಗೊಂಡಿದೆ. ಶ್ರೀಲಂಕಾದಿಂದ ನಿಯಂತ್ರಿಸಲ್ಪಡುವ ಈ
ದ್ವೀಪಕ್ಕೆ ವರ್ಷದಲ್ಲಿ ೨ ದಿನ, ಸೇಂಟ್ ಆಂಟೋನಿ ದೇವಾಲಯದ ಉತ್ಸವದ ಸಮಯದಲ್ಲಿ ಮಾತ್ರ ಭಾರತೀಯ ನಾಗರಿಕರ ಪ್ರವೇಶಕ್ಕೆ ಅನುಮತಿಸಲಾಗುತ್ತದೆ. ಐತಿಹಾಸಿಕವಾಗಿ, ಕಚ್ಚತೀವು ದ್ವೀಪ ರಾಮನಾಡ್ ಜಮೀನ್ದಾರರಿಗೆ ಸೇರಿದ್ದು. ಮಧುರೈನ ನಾಯಕ ರಾಜವಂಶವು ೧೬೦೫ರಲ್ಲಿ ಈ ದ್ವೀಪಕ್ಕೆ ಪ್ರತ್ಯೇಕ ಗುರುತನ್ನು ನೀಡಿತು.
ಇದು ಕಚ್ಚತೀವು ಸೇರಿದಂತೆ ೬೯ ಕರಾವಳಿ ಗ್ರಾಮಗಳು ಮತ್ತು ೧೧ ದ್ವೀಪಗಳನ್ನು ಒಳಗೊಂಡಿತ್ತು. ಕಚ್ಚತೀವು ದ್ವೀಪವು ಸೇತುಪತಿ ರಾಜವಂಶಕ್ಕೆ ಆದಾಯದ ಪ್ರಮುಖ ಮೂಲವಾಗಿತ್ತು. ಏಕೆಂದರೆ ಈ ದ್ವೀಪವನ್ನು ಮೊದಲು ೧೭೬೭ರಲ್ಲಿ ಡಚ್ಚರಿಗೆ ಮತ್ತು ೧೮೨೨ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ೧೯೭೦ರ ದಶಕದಲ್ಲಿ ಇಂದಿರಾ ಗಾಂಧಿಯವರು
ಪ್ರಧಾನಿಯಾಗಿದ್ದಾಗ ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿಪಕ್ಷೀಯ ಒಪ್ಪಂದಗಳ ಭಾಗವಾಗಿ, ಜನವಸತಿಯಿಲ್ಲದ ಈ
ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಡಲಾಯಿತು.
ಇದು ತಮಿಳುನಾಡಿನ ರಾಮೇಶ್ವರಂ ಜಿಲ್ಲೆಯ ಮೀನುಗಾರರ ಮೇಲೆ ತೀವ್ರ ಪರಿಣಾಮ ಬೀರಿತ್ತು. ಭಾರತ ಸ್ವಾತಂತ್ರ್ಯದ ನಂತರ, ಪ್ರಧಾನಿ ನೆಹರು ಮತ್ತು ಇಂದಿರಾ ಗಾಂಧಿಯವರು ಈ ದ್ವೀಪಕ್ಕೆ ಹೆಚ್ಚಿನ ಪ್ರಾಮುಖ್ಯ ನೀಡಿರಲಿಲ್ಲ. ೧೯೭೪ರ ಇಂಡೋ-ಶ್ರೀಲಂಕಾದ ಸಮುದ್ರ ಗಡಿ ಒಪ್ಪಂದದ ಪ್ರಕಾರ ಶ್ರೀಲಂಕಾಕ್ಕೆ ಕಚ್ಚತೀವು ದ್ವೀಪವನ್ನು ಬಿಟ್ಟುಕೊಟ್ಟಾಗ, ಭಾರತೀಯ ಮೀನು ಗಾರರು ಕಚ್ಚತೀವಿಗೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಎರಡು ವರ್ಷಗಳ ನಂತರ, ೧೯೭೬ರಲ್ಲಿ ಎರಡು ದೇಶಗಳ ನಡುವೆ ಸೇತುಸಮುದ್ರಂ ಪ್ರದೇಶದಲ್ಲಿ ಕಡಲ ಗಡಿರೇಖೆಯನ್ನು ವಿಭಜಿಸಲಾಯಿತು.
ನಂತರ ಆ ದ್ವೀಪಕ್ಕೆ ಭಾರತೀಯ ಮೀನುಗಾರರ ಭೇಟಿಯನ್ನು ನಿಷೇಧಿಸಲಾಯಿತು. ಇದರ ಪರಿಣಾಮ ಕಚ್ಚತೀವು ಮತ್ತು ಅಕ್ಕಪಕ್ಕದ ಸಮುದ್ರದ ಭಾಗಗಳು ಸ್ವಾಭಾವಿಕವಾಗಿ ಶ್ರೀಲಂಕಾದ ವ್ಯಾಪ್ತಿಗೆ ಒಳಪಟ್ಟಿವೆ. ಭಾರತೀಯ ಮೀನುಗಾರರು, ವಿಶೇಷ ವಾಗಿ ತಮಿಳುನಾಡಿನವರು, ತಮ್ಮ ಬಲೆಗಳನ್ನು ಒಣಗಿಸಲು ಕಚ್ಚತೀವು ದ್ವೀಪವನ್ನು ಬಳಸುತ್ತಿದ್ದರು. ಆದರೆ ಈ ಒಪ್ಪಂದ
ಭಾರತೀಯ ಮೀನುಗಾರರಿಗೆ ವಿವಾದದ ಬಿಂದುವಾಗಿದೆ.
ಅವರ ಸಾಂಪ್ರದಾಯಿಕ ಮೀನುಗಾರಿಕಾ ಸ್ಥಳಗಳಿಗೆ ಹೇರಿರುವ ನಿರ್ಬಂಧ ಅವರ ಜೀವನೋಪಾಯದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಭಾರತೀಯ ಮೀನುಗಾರರು ಸಾಮಾನ್ಯವಾಗಿ ಉತ್ತಮ ಮೀನುಗಳ ಹುಡುಕಾಟದಲ್ಲಿ ಅಂತಾರಾಷ್ಟ್ರೀಯ ಸಮುದ್ರ ಗಡಿರೇಖೆಯನ್ನು ದಾಟುತ್ತಾರೆ. ಆಗ ಶ್ರೀಲಂಕಾದ ಅಧಿಕಾರಿಗಳು ಅವರನ್ನು ಬಂಧಿಸುತ್ತಾರೆ. ಹವಾಮಾನ ಬದಲಾವಣೆ, ಮೀನಿನ ಬೇಡಿಕೆಯ ಬೆಳವಣಿಗೆಯಿಂದಾಗಿ ಮೀನುಗಾರರಿಗೆ ತಮ್ಮ ತೀರದ ಸಮೀಪದಿಂದ ಉತ್ತಮ ಮೀನುಗಳನ್ನು ಪಡೆಯುವುದು ಕಷ್ಟಕರವಾಗುತ್ತದೆ.
ಕಚ್ಚತೀವು ದ್ವೀಪವು ಭಾರತದ ದಕ್ಷಿಣ ಕರಾವಳಿಯಿಂದ ೨೨ ಕಿ.ಮೀ. ಮತ್ತು ಜಾ-ದಿಂದ ನೈಋತ್ಯಕ್ಕೆ ೪೫ ಕಿ.ಮೀ. ದೂರದಲ್ಲಿದೆ. ಈ ದ್ವೀಪದಿಂದ ಸಮುದ್ರದ ಗಡಿಯನ್ನು ಮತ್ತು ಭಾರತೀಯ ವಿಶೇಷ ಆರ್ಥಿಕ ವಲಯವನ್ನು ಮತ್ತಷ್ಟು ನಾಟಿಕಲ್ ಮೈಲು ಗಳಷ್ಟು ವಿಸ್ತರಿಸಬಹುದು. ಇದು ಭಾರತೀಯ ಮೀನುಗಾರರಿಗೆ ವಿಸ್ತೃತ ಮೀನುಗಾರಿಕೆ ಪ್ರದೇಶವನ್ನು ನೀಡುತ್ತದೆ ಮತ್ತು ಲಂಕಾ ನೌಕಾಪಡೆಯಿಂದ ಆಗುವ ಅವರ ಬಂಧನವನ್ನು ತಡೆಯುತ್ತದೆ. ಈ ಪ್ರದೇಶದ ಮೀನುಗಾರರು ಐತಿಹಾಸಿಕವಾಗಿ ಅನುಭವಿಸು ತ್ತಿದ್ದಂಥ, ದ್ವೀಪದ ನೀರಿನ ಸುತ್ತಲಿನ ಸಾಂಪ್ರದಾಯಿಕ ಮೀನುಗಾರಿಕೆ ಪ್ರದೇಶವು ಶ್ರೀಲಂಕಾದ ಪಾಲಾಗಿದೆ.
ಕಳೆದ ೨೦ ವರ್ಷಗಳಲ್ಲಿ, ಶ್ರೀಲಂಕಾ ೬,೧೮೪ರಷ್ಟು ಭಾರತೀಯ ಮೀನುಗಾರರನ್ನು ಬಂಧಿಸಿದೆ ಮತ್ತು ೧,೧೭೫ ಭಾರತೀಯ ಮೀನುಗಾರಿಕಾ ಹಡಗುಗಳನ್ನು ವಶಪಡಿಸಿಕೊಂಡಿದೆ. ಕಳೆದ ೫ ವರ್ಷಗಳಲ್ಲಿ, ಕಚ್ಚತೀವು ವಿವಾದ ಮತ್ತು ಮೀನುಗಾರರ ಸಮಸ್ಯೆಯನ್ನು ಸಂಸತ್ತಿನಲ್ಲಿ ವಿವಿಧ ಪಕ್ಷಗಳು ಪದೇ ಪದೆ ಪ್ರಸ್ತಾಪಿಸಿವೆ. ಜನವರಿ ೨೦೨೪ರಿಂದ, ರಾಮೇಶ್ವರಂ ಒಂದರಿಂದಲೇ ೭೫ಕ್ಕೂ ಹೆಚ್ಚು ಮೀನುಗಾರರನ್ನು ಬಂಧಿಸಲಾಗಿದೆ ಮತ್ತು ೧೦ಕ್ಕೂ ಹೆಚ್ಚು ಹಡಗುಗಳನ್ನು ಶ್ರೀಲಂಕಾ ಪಡೆಗಳು ವಶಪಡಿಸಿ ಕೊಂಡಿವೆ ಎಂದು ಮಾರ್ಚ್ ೧೧ರ ‘ದಿ ಹಿಂದೂ’ ಪತ್ರಿಕೆ ವರದಿ ಹೇಳಿದೆ.
ಕಳೆದ ದಶಕದಲ್ಲಿ ಶ್ರೀಲಂಕಾದ ಸುತ್ತಮುತ್ತಲಲ್ಲಿ, ಚೀನಾದ ಸಾಗರೋತ್ತರ ಪ್ರದೇಶಗಳಲ್ಲಿನ ಬಂಡವಾಳ ಏರಿಕೆ, ಸಂಪೂರ್ಣ ಪಾಕ್ ಜಲಸಂಧಿಯಲ್ಲಿನ ಚೀನಾದ ಸಂಭಾವ್ಯ ಹಿಡಿತದ ಮನಸ್ಥಿತಿಯನ್ನು ಗ್ರಹಿಸಬಹುದು. ಕಚ್ಚತೀವು ಹಿಂಪಡೆದಾಗ ಮಾತ್ರ ಚೀನಾದ ವಿಸ್ತರಣಾ ನೀತಿಯ ಬೆದರಿಕೆಯನ್ನು ತಡೆಯಲು ನಮಗೆ ಸಾಧ್ಯವಾಗುತ್ತದೆ ಎಂದು ಶ್ರೀಪೆರಂಬದೂರ್ ಎಐಎಡಿಎಂಕೆ
ಸಂಸದ ಕೆ.ಎನ್.ರಾಮಚಂದ್ರನ್ ಸಂಸತ್ತಿನಲ್ಲಿ ೨೦೧೬ರಲ್ಲಿ ಹೇಳಿದ್ದರು. ಅದೇ ಭಯವನ್ನು ಮಾರ್ಚ್ ೨೦೨೧ರಲ್ಲಿ ಎಂಡಿ ಎಂಕೆಯ ರಾಜಕಾರಣಿ ವೈಕೋ ವ್ಯಕ್ತಪಡಿಸಿದ್ದರು.
ಆಯಕಟ್ಟಿನ ಕಚ್ಚತೀವು, ಪಾಕ್ ಜಲಸಂಧಿಯಲ್ಲಿ ಶ್ರೀಲಂಕಾದಿಂದ ಚೀನಾದ ಕಂಪನಿಗೆ ವಿಂಡ್‌ಮಿಲ್ ಯೋಜನೆಗಳನ್ನು ನೀಡುವುದರ ವಿರುದ್ಧ ಸರಕಾರವು ಯಾವುದೇ ಪ್ರತಿಭಟನೆಯನ್ನು ದಾಖಲಿಸಿದೆಯೇ ಎಂದು ರಾಜ್ಯಸಭೆಯಲ್ಲಿ ವೈಕೋ ಪ್ರಶ್ನಿಸಿ ದ್ದರು. ಆದರೆ ಆಯಕಟ್ಟಿನ ದ್ವೀಪದಲ್ಲಿನ ಯಾವುದೇ ಯೋಜನೆಯನ್ನು ಶ್ರೀಲಂಕಾ ಸರಕಾರ ಚೀನಾದ ಕಂಪನಿಗೆ ನೀಡುತ್ತಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟೀಕರಿಸಿತು. ಕಚ್ಚತೀವು ದ್ವೀಪದಲ್ಲಿ ಶ್ರೀಲಂಕಾದಿಂದ ಚೀನಾದ ಕಂಪನಿಗೆ ವಿಂಡ್ ಮಿಲ್ ಯೋಜನೆಗಳನ್ನು ನೀಡುತ್ತಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಉತ್ತರಿಸಿದ್ದರು.
ಕಚ್ಚತೀವು ಪಾಕ್ ಜಲಸಂಽಯಲ್ಲಿನ ಆಯಕಟ್ಟಿನ ಸ್ಥಳವಾಗಿದೆ, ಇದು ಬಂಗಾಳ ಕೊಲ್ಲಿಯನ್ನು ಮನ್ನಾರ್ ಕೊಲ್ಲಿ ಮತ್ತು
ಹಿಂದೂ ಮಹಾಸಾಗರದೊಂದಿಗೆ ಸಂಪರ್ಕಿಸುವ ನಿರ್ಣಾಯಕ ಕಡಲ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ. ಕಚ್ಚತೀವು ಮೇಲಿನ ನಿಯಂತ್ರಣವು, ಹಡಗುಗಳ ಚಲನವಲನಗಳು ಮತ್ತು ಸಂಭಾವ್ಯ ಭದ್ರತಾ ಬೆದರಿಕೆಗಳನ್ನು ಒಳಗೊಂಡಂತೆ ಈ ಪ್ರದೇಶದಲ್ಲಿ ಕಡಲ ಚಟುವಟಿಕೆಗಳ ಮೇಲ್ವಿಚಾರಣೆ ಮಾಡುವಲ್ಲಿ ಭಾರತಕ್ಕೆ ಕಾರ್ಯತಂತ್ರದ ಹತೋಟಿಯನ್ನು ಒದಗಿಸುತ್ತದೆ. ತಮಿಳುನಾಡಿನ ಮೀನುಗಾರರ ಜೀವನೋಪಾಯಕ್ಕೆ ಪ್ರಮುಖವಾದ ಮೀನು ಮತ್ತು ಇತರ ಜಲಚರಗಳು ಸೇರಿದಂತೆ ಕಚ್ಚತೀವು ಸುತ್ತಮುತ್ತಲಿನ ನೀರು ಸಮುದ್ರ ಸಂಪನ್ಮೂಲಗಳಿಂದ ಸಮೃದ್ಧವಾಗಿದೆ.
ಕಚ್ಚತೀವು ಮೇಲಿನ ನಿಯಂತ್ರಣವು ಮೀನುಗಾರಿಕೆ, ಜಲಚರ ಸಾಕಣೆ ಮತ್ತು ಪ್ರವಾಸೋದ್ಯಮದಂಥ ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿಯನ್ನು ಸುಗಮಗೊಳಿಸುತ್ತದೆ. ಇದರಿಂದಾಗಿ ಆ ಪ್ರದೇಶದ ಆರ್ಥಿಕ ಬೆಳವಣಿಗೆ ಹೆಚ್ಚುತ್ತದೆ. ಶತಮಾನಗಳಿಂದಲೂ ತಮಿಳುನಾಡಿನ ಮೀನುಗಾರರಿಗೆ ಸಾಂಪ್ರದಾಯಿಕ ಮೀನುಗಾರಿಕಾ ಹಕ್ಕುಗಳನ್ನು ನೀಡುವ ಮೂಲಕ ಕಚ್ಚತೀವು ಭಾರತ ದೊಂದಿಗೆ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಈ ದ್ವೀಪವು ಭಾರತ ಮತ್ತು ಶ್ರೀಲಂಕಾದ ತಮಿಳು ಸಮುದಾಯಗಳೊಂದಿಗೆ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಬೆಸೆದಿದೆ.
ಏಕೆಂದರೆ ಇದಕ್ಕೆ ತಮಿಳಿನ ಶ್ರೇಷ್ಠ ಋಷಿ ತಿರುವಳ್ಳುವರ್‌ರೊಂದಿಗೆ ಬಾಂಧವ್ಯವಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ನಡೆದ ದೊಡ್ಡ ಪ್ರಮಾದದಿಂದ ಕಚ್ಚತೀವು ದ್ವೀಪ ಶ್ರೀಲಂಕಾದ ಪಾಲಾಗಿದೆ. ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ ಸಮುದ್ರದ ನಡುವೆ ಇರುವ ದ್ವೀಪದ ಸುತ್ತಲ ಸುಮಾರು ೨೦೦ ನಾಟಿಕಲ್ ಮೈಲುಗಳಷ್ಟು ಜಾಗ ಆ ದೇಶದ ಹಿಡಿತದಲ್ಲಿರುತ್ತದೆ. ಕಚ್ಚತೀವು ದ್ವೀಪದ ಭೂಭಾಗ ಸಣ್ಣದಿರಬಹುದು, ಆದರೆ ಅದರ ಸುತ್ತಲಿನ ಜಾಗದಲ್ಲಿ ಸಿಗುವ, ತಮಿಳುನಾಡಿನ ಮೀನುಗಾರರಿಗೆ ಸೇರಬೇಕಿ ರುವ ಸಾವಿರಾರು ಟನ್ ಜಲಚರಗಳು ಶ್ರೀಲಂಕಾದ ಪಾಲಾಗುತ್ತಿವೆ.
ಭಾರತದ ಗಡಿ ಭದ್ರತೆಯ ದೃಷ್ಟಿಯಿಂದ ಕಚ್ಚತೀವು ದ್ವೀಪ ದೊಡ್ಡ ಮಹತ್ವವನ್ನು ಪಡೆದುಕೊಂಡಿದೆ. ಹಿಂದಿನ ನಾಯಕರು
ಕೇವಲ ಭೂಭಾಗವನ್ನಷ್ಟೇ ನೋಡಿ ಶ್ರೀಲಂಕಾಕ್ಕೆ ಬಿಟ್ಟುಕೊಟ್ಟು ದೊಡ್ಡ ಪ್ರಮಾದ ಮಾಡಿದ್ದಾರೆ. ಹೀಗೆ ಬಿಟ್ಟುಕೊಟ್ಟಿದ್ದರಿಂದ
ಭಾರತಕ್ಕಾಗುವ ನಷ್ಟದ ಅಂದಾಜು ಮಾಡದಿದ್ದದ್ದು ನಮ್ಮ ದುರಂತ.