Wednesday, 11th December 2024

ಕೌಸಲ್ಯಾತನಯನ ಕಲ್ಯಾಣಗುಣವ ಕಂಡಿರಾ ?

ರಾಮರಥ-೯

ಯಗಟಿ ರಘು ನಾಡಿಗ್

naadigru@gmail.com

‘ಗುಹನಲ್ಲಿ ಸೋದರ ವಾತ್ಸಲ್ಯ ಕಂಡೆ, ಶಬರಿಯ ಎಂಜಲ ಪ್ರೇಮದ ತಿಂದೆ…’ ಇದು ರಾಮನ ಗುಣಗಾನ ಮಾಡಿರುವ ಹಾಡೊಂದರಲ್ಲಿ ಬರುವ ಸಾಲು. ಇದು ಉತ್ಪ್ರೇಕ್ಷೆಯೇನಲ್ಲ. ಹಲವು ಕಲ್ಯಾಣಗುಣಗಳ ಮೂರ್ತರೂಪವಾಗಿದ್ದವನೇ ಶ್ರೀರಾಮ. ಸತ್ಯವೆಂಬ ಸದ್ಗುಣಕ್ಕೆ ‘ವ್ಯಕ್ತಿ’ಯ ರೂಪ ವನ್ನು ನೀಡಿರುವ ನಿದರ್ಶನ ವೇನಾದರೂ ನಿಮಗೆ ಬೇಕಿದ್ದರೆ ಅದು ರಾಮನೇ.

ಜೀವನ ಮೌಲ್ಯಗಳ ಪಾಲನೆ, ಬಾಂಧವ್ಯಗಳ ನಿರ್ವಹಣೆ, ನೀತಿ-ನಿಯಮಗಳ ಅನುಸರಣೆ ಹೀಗೆ ಯಾವೆಲ್ಲ ಅಂಶ ಗಳನ್ನು ಪರಿಗಣಿಸಿದರೂ ರಾಮನ ಬದುಕು ಅವಕ್ಕೆ ಸಾಕ್ಷಿರೂಪವೇ ಆಗಿದೆ. ಹುಲುಮಾನವರಿಂದ ರಾಮನನ್ನು ಪ್ರತ್ಯೇಕಿಸುವ ಇಂಥ ವೈಶಿಷ್ಟ್ಯಗಳನ್ನು ಸವಿಯುತ್ತಾ ಹೋಗುವುದೇ ಒಂದು ಅನನ್ಯ
ಅನುಭವ. ಸಾಮಾಜಿಕ ಸ್ತರ ಅಥವಾ ಶ್ರೀಮಂತಿಕೆಗೆ ಮಹತ್ವ ನೀಡದೆ ಯಾವುದೇ ವ್ಯಕ್ತಿಯೆಡೆಗೆ ಸಮಾನವಾಗಿ ಸ್ನೇಹಧಾರೆ ಹರಿಸುತ್ತಿದ್ದುದು ರಾಮನ ವೈಶಿಷ್ಟ್ಯ. ಬೇಟೆಗಾರರ ನಾಯಕ ಗುಹನನ್ನು, ಕಪಿರಾಜ ಸುಗ್ರೀವನನ್ನು ತನ್ನ ಸೋದರರನ್ನಾಗಿ, ಹನುಮಂತ ನನ್ನು ನಿಷ್ಠಾವಂತ ಭಕ್ತನನ್ನಾಗಿ ಪರಿಗ್ರಹಿಸಿದ,
ಶತ್ರುಪಾಳಯದ ರಾಕ್ಷಸ ಕುಲದಲ್ಲಿ ಜನಿಸಿದ್ದೂ ಸಾತ್ವಿಕತೆಯನ್ನು ಮೈಗೂಡಿಸಿಕೊಂಡಿದ್ದ ವಿಭೀಷಣ ನನನ್ನು ಗುರುತಿಸಿದ ವ್ಯಕ್ತಿತ್ವ ರಾಮನದು.

ರಾವಣನ ಸಂಹಾರವಾದ ನಂತರ, ಈ ಸಂಕಲ್ಪ ನೆರವೇರಿದ್ದು ತನ್ನೊಬ್ಬನಿಂದಲೇ ಎಂಬ ಠೇಂಕಾರ ಮೆರೆಯದೆ, ಸೀತಾಶೋಧನೆಯ ವಿವಿಧ ಮಜಲು ಗಳಲ್ಲಿ, ಸಮುದ್ರ ಮಾರ್ಗವಾಗಿ ಸೇತುವೆ ಕಟ್ಟುವ ಕೈಂಕರ್ಯದಲ್ಲಿ, ರಾವಣನ ಪಡೆ ಯೊಂದಿಗಿನ ಯುದ್ಧದಲ್ಲಿ ಕಪಿಸೇನೆಯು ನೀಡಿದ ಸಹಕಾರ ಹಸ್ತವನ್ನು ಹೃತ್ಪೂರ್ವಕ ವಾಗಿ ನೆನೆದು ಧನ್ಯವಾದ ಗಳನ್ನು ಸಮರ್ಪಿಸುತ್ತಾನೆ ರಾಮ. ‘ನೀವೆಲ್ಲ ಇಲ್ಲದಿ ದ್ದಿದ್ದರೆ ಇವಿಷ್ಟೂ ಸಂಕಲ್ಪಗಳು ನೆರವೇರುತ್ತಿರಲಿಲ್ಲ’ ಎನ್ನುವ ಮೂಲಕ ಉಪಕಾರ
ಸ್ಮರಣೆಯ ಪ್ರತಿ ರೂಪವೇ ಆಗುತ್ತಾನೆ ರಾಮ.

‘ಸರ್ವಕಾರ್ಯ ಸಮರ್ಥ’ನಾಗಿದ್ದರೂ ಎಲ್ಲ ಕೆಲಸಕ್ಕೂ ತಾನೊಬ್ಬನೇ ಮುಂದಾಗದೆ, ಕಪಿ ಸೇನೆಯ ವಿವಿಧ ಸ್ತರಗಳಲ್ಲಿದ್ದ ವಾನರರ ವೈಯಕ್ತಿಕ ಸಾಮರ್ಥ್ಯಗಳನ್ನು ಗುರುತಿಸಿ, ನಿರ್ದಿಷ್ಟ ಜವಾಬ್ದಾರಿಗಳನ್ನು ಹೊರಿಸಿ, ಅವರು ಕಾರ್ಯತತ್ಪರರಾಗುವಂತೆ ಮಾಡುತ್ತಾನೆ, ಗುರಿಸಾಽಸುವಂತೆ ಹುಮ್ಮಸ್ಸು ತುಂಬುತ್ತಾನೆ ರಾಮ. ನಾಯಕನಾದ ವನು ‘ವಿಭಿನ್ನ’ ಸಾಮರ್ಥ್ಯದವರ ‘ತಂಡ’ವನ್ನು ಕಟ್ಟಬೇಕೇ ಹೊರತು, ‘ಭಿನ್ನಮತ’ದ ‘ಬಣ’ ಗಳನ್ನು ರೂಪಿಸಬಾರದು; ಕಾರ್ಯಕ್ಷೇತ್ರ ದಲ್ಲಿನ ಪ್ರತಿ ಯೊಬ್ಬ ಪಾಲುದಾರನಿಗೂ (ಅವನ ವಯಸ್ಸು ಎಷ್ಟೇ ಇರಲಿ, ಶ್ರೇಣಿ ಎಂಥದ್ದೇ ಆಗಿರಲಿ) ಮಹತ್ವ ನೀಡಬೇಕು ಎಂಬ ಗ್ರಹಿಕೆಗೆ ಹೀಗೆ ಒತ್ತುನೀಡುತ್ತಾನೆ ಆದರ್ಶನಾಯಕ ಶ್ರೀರಾಮ.

ಅಸಾಮಾನ್ಯ ಶಕ್ತಿವಂತನೂ, ವೀರಯೋಧನೂ ಆಗಿದ್ದ ಶ್ರೀರಾಮ ತನ್ನೀ ಶಕ್ತಿಯನ್ನು ಎಂದಿಗೂ ದುರಪಯೋಗಪಡಿಸಿಕೊಳ್ಳಲಿಲ್ಲ ಅಥವಾ ಅಸಹಾ ಯಕರ/ದುರ್ಬಲರ ಮೇಲೆ ಅದನ್ನು ಪ್ರಯೋಗಿಸಲಿಲ್ಲ. ಅಮಾಯಕರ ಮೇಲಿನ ಅನ್ಯಾಯ ವನ್ನು ಕಂಡಾಗ ರಾಮ ಕೋಪಗೊಂಡಿದ್ದು ಹೌದಾದರೂ, ತನ್ನ ಯೋಧತ್ವದ ಜತೆಜತೆಗೆ ಹದವಾಗಿ ಮಿಳಿತ ವಾಗಿದ್ದ ಸೌಶೀಲ್ಯ ಮತ್ತು ವಿವೇಕಗಳಿಂದಾಗಿ ರಾಮ ಹದತಪ್ಪಲಿಲ್ಲ. ‘ಸತ್ಯ- ಸದಾಚಾರ ಇಲ್ಲದವನು ಜಪ ಹತ್ತು ಸಾವಿರ ಮಾಡಿ Pಲವೇನೋ ರಂಗಾ?’ ಎಂದಿದ್ದಾರೆ ದಾಸವರೇಣ್ಯರು. ಸತ್ಯ ಮತ್ತು ಸದಾ ಚಾರದ ನಿಟ್ಟಿನಲ್ಲಿ ದೃಢನಿಶ್ಚಯ ಹೊಂದಿದ್ದ ವನು ರಾಮ. ಅಪರಿಮಿತ ಸವಾಲು-ಸಂಕಷ್ಟಗಳು ಎದು ರಾದಾಗಲೂ ಧರ್ಮ ಮಾರ್ಗವನ್ನು ಕೈಬಿಡದಿ ದ್ದುದು, ಸದಾಚಾರದಲ್ಲೇ ಹೆಜ್ಜೆಹಾಕಿದ್ದು ರಾಮನ ಮತ್ತೊಂದು ವೈಶಿಷ್ಟ್ಯ. ಕೈಕೇಯಿ- ಮಂಥರೆಯರ ಸಂಚಿನಂತೆ ವನವಾಸಕ್ಕೆ ಸಂತೋಷದಿಂದಲೇ ತೆರಳಿದ ಶ್ರೀರಾಮನ ಭೇಟಿಗೆ ಧಾವಿಸಿ ಬರುವ ಸೋದರ ಭರತನು, ‘ಅಯೋಧ್ಯೆಗೆ ದಯವಿಟ್ಟು ಹಿಂದಿರುಗು, ಸಾಮ್ರಾ ಜ್ಯಕ್ಕೆ ನೀನೇ ಅಧಿಪತಿ ಯಾಗು’ ಎಂದು ಗೋಗರೆಯುತ್ತಾನೆ.

ಅಷ್ಟು ಹೊತ್ತಿಗೆ ಆತನ ತಂದೆ ದಶರಥ, ರಾಮವಿಯೋಗದ ದುಃಖದಲ್ಲಿ ಅಸು ನೀಗಿರುತ್ತಾನೆ; ಹೀಗಾಗಿ ರಾಮ ಅಯೋಧ್ಯೆಗೆ ಮರಳಿ ಸಿಂಹಾಸನವನ್ನೇರಿದ್ದರೂ ಯಾರೂ ಆಕ್ಷೇಪಿಸುತ್ತಿರಲಿಲ್ಲ ವೇನೋ? ಆ ವೇಳೆಗಾಗಲೇ ಪಶ್ಚಾತ್ತಾಪದ ಬೆಂಕಿಯಲ್ಲಿ ಬೆಂದಿದ್ದ ಮಲತಾಯಿ ಕೈಕೇಯಿಯೂ ಪ್ರಾಯಶಃ ತಡೆಯು ತ್ತಿರಲಿಲ್ಲವೇನೋ? ಆದರೂ ಭರತನ ಕೋರಿಕೆಯನ್ನು ನಯ ವಾಗಿಯೇ ನಿರಾಕರಿಸುವ ರಾಮ, ೧೪ ವರ್ಷ ವನವಾಸ ಮುಗಿಸಿಯೇ ಮರಳು ವುದಾಗಿ ಹೇಳುತ್ತಾನೆ; ತನ್ಮೂಲಕ, ಅಪ್ಪ ದಶರಥನಿಗೆ ಕೊಟ್ಟಿದ್ದ ವಚನಕ್ಕೆ ಬದ್ಧನಾಗಿದ್ದುದನ್ನು ಪ್ರಮಾಣೀ ಕರಿಸುತ್ತಾನೆ. ನಿಜಾರ್ಥದಲ್ಲಿ ‘ಕಾರುಣ್ಯಸಿಂಧು’ವೇ ಆಗಿದ್ದ ವನು
ಶ್ರೀರಾಮ. ಸೀತೆಯನ್ನು ಅಪಹರಿಸಿ ಪುಷ್ಪಕ ವಿಮಾನದಲ್ಲಿ ಹೊತ್ತೊಯ್ಯುತ್ತಿದ್ದ ರಾವಣನನ್ನು ತಡೆಯಲು ಇನ್ನಿಲ್ಲದಂತೆ ಹರಸಾಹಸಪಡುವ ವಯೋವೃದ್ಧ ಪಕ್ಷಿರಾಜ ‘ಜಟಾಯು’ ಅವ ನೊಂದಿಗೆ ಯುದ್ಧಕ್ಕೆ ನಿಲ್ಲುತ್ತದೆ. ಆದರೆ ಜಟಾಯುವನ್ನು ಹಣಿದಿದ್ದು ಸಾಲದೆಂಬಂತೆ ಅದರ ಎರಡೂ ರೆಕ್ಕೆಗಳನ್ನು ಕತ್ತರಿಸಿ ಬಿಡುತ್ತಾನೆ ರಾವಣ. ಜಟಾಯು ಧರೆಗೆ ಉರುಳುತ್ತದೆ.

ಸೀತೆ ಯನ್ನು ಹುಡುಕುತ್ತಾ ಬಂದ ರಾಮ-ಲಕ್ಷ್ಮಣರಿಗೆ, ಅಪ ಹೃತ ಸೀತೆಯೊಂದಿಗೆ ರಾವಣನು ದಕ್ಷಿಣ ದಿಕ್ಕಿನೆಡೆಗೆ ತೆರಳಿದ ವರ್ತಮಾನ ನೀಡುವುದು ಇದೇ ಜಟಾಯು. ಮರಣಶಯ್ಯೆ ಯಲ್ಲಿದ್ದ ಜಟಾಯು ವಿನ ಅಂತ್ಯಸಂಸ್ಕಾರವನ್ನು ಸ್ವತಃ ರಾಮನೇ ನೆರವೇರಿಸುತ್ತಾನೆ, ತಾನೊಬ್ಬ ರಾಜವಂಶದವ ಎಂಬ ಹಮ್ಮು- ಬಿಮ್ಮು ಇಲ್ಲದೆ! ಗೌತಮರಿಂದ ಶಾಪಗ್ರಸ್ತಳಾಗಿ ಕಲ್ಲಾಗಿ ಮಾರ್ಪಟ್ಟಿದ್ದ ಅಹಲ್ಯೆಗೆ ರಾಮಸ್ಪರ್ಶದಿಂದಾಗಿ ಮತ್ತೆ ಮಾನವರೂಪದ ಸೌಭಾಗ್ಯ ದಕ್ಕುತ್ತದೆ, ಶಾಪ ವಿಮೋಚನೆಯಾಗು ತ್ತದೆ. ತನಗಾಗಿ ಕಾಯುತ್ತಿದ್ದ ಮುದುಕಿ ಶಬರಿಗೆ ಆಕೆ ನೆಲೆಸಿದ್ದ ಆಶ್ರಮಕ್ಕೇ ತೆರಳಿ ದರ್ಶನಭಾಗ್ಯ ಕರುಣಿಸಿ, ಆಕೆ ಎಂಜಲುಮಾಡಿಕೊಟ್ಟ ಹಣ್ಣನ್ನೇ (ಲಕ್ಷ್ಮಣನ ಆಕ್ಷೇಪದ ಹೊರತಾಗಿಯೂ) ಆತಿಥ್ಯದ ರೂಪದಲ್ಲಿ ಸ್ವೀಕರಿಸಿ ಸೇವಿಸಿದವನು ಶ್ರೀರಾಮ.

ಈತ ಕರುಣೆಯ ಸಮುದ್ರವೇ ಆಗಿದ್ದ ಎಂಬುದಕ್ಕೆ ಇಷ್ಟು ಸಾಕಲ್ಲವೇ? ವೀರತ್ವದ ಪ್ರತಿರೂಪವೇ ಶ್ರೀರಾಮ. ಋಷಿ ವಿಶ್ವಾಮಿತ್ರರ ಯಜ್ಞ-ಯಾಗಾದಿಗಳಿಗೆ ತೊಂದರೆ ಕೊಡುತ್ತಿದ್ದ ರಾಕ್ಷಸಿ ತಾಟಕಿ ಯನ್ನು ಹದಿಹರೆಯದ ಹುಡುಗನಾಗಿದ್ದಾಗಲೇ ಸಂಹರಿಸಿ ಈ ವೀರತ್ವವನ್ನು ಮೆರೆದಿದ್ದ ಶ್ರೀರಾಮ. ಕೆಲ ಕಾಲದ ನಂತರ
ಮಿಥಿಲೆಯಲ್ಲಿ ಸೀತಾ ಸ್ವಯಂವರ ಏರ್ಪಾಡಾಗಿ ದ್ದಾಗ, ಅದ ರಲ್ಲಿ ಪಾಲ್ಗೊಂಡಿದ್ದ ಅತಿರಥ-ಮಹಾ ರಥರಿಗೂ ಎತ್ತಲಾಗದ ಶಿವಧನಸ್ಸನ್ನು ಲೀಲಜಾಲ ವಾಗಿ ಎತ್ತುವಂತಾಗಿದ್ದಕ್ಕೆ, ಹೆದೆಯೇರಿ ಸುವಾಗಲೇ ಅದು ಮುರಿದುಹೋಗುವಂತಾಗುವುದಕ್ಕೆ ಕಾರಣವಾಗಿದ್ದೂ ರಾಮನ ವೀರತ್ವವೇ.

ರಾಮನನ್ನು ‘ಜಿತಕ್ರೋಧಃ’ ಎಂಬ ಕಲ್ಯಾಣ ಗುಣದೊಂದಿಗೆ ಬಣ್ಣಿಸಲಾಗಿದೆ. ಅಂದರೆ ‘ಕೋಪ ವನ್ನು ಗೆದ್ದವನು’ ಎಂದರ್ಥ. ‘ಹಾಗಾದರೆ ರಾಮ ನಿಗೆ ಕೋಪವೇ ಬರುತ್ತಿರಲಿಲ್ಲವೇ?’ ಎಂದು ಕೆಲವರು ಕೇಳಬಹುದು. ಅಮಾಯಕರಿಗೆ, ತನ್ನನ್ನು ನೆಚ್ಚಿದವರಿಗೆ ಅನ್ಯಾಯವಾದಾಗ ಮಾತ್ರವೇ ರಾಮ ಕೋಪವನ್ನು ‘ತೋರಿಸುತ್ತಿದ್ದನೇ’ ಹೊರತು ಕೋಪದ ಭಾವದಲ್ಲೇ ಧಗಧಗಿಸುತ್ತಿರಲಿಲ್ಲ, ಮೈ- ಮನಸ್ಸಿನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಿರಲಿಲ್ಲ. ಯುದ್ಧದ ಒಂದು ಘಟ್ಟದಲ್ಲಿ ರಾವಣನು ತನ್ನನ್ನು ನಿಂದಿಸಿದಾಗಲೂ ತಾಳ್ಮೆ ಯಿಂದಿದ್ದ ರಾಮ, ಅದೇ ರಾವಣನು ಹನುಮಂತ ನನ್ನು ನಿಂದಿಸುತ್ತಿದ್ದಂತೆ ‘ಕೋಪ ತೋರಿಸಿ’ ಪ್ರತ್ಯಾ ಕ್ರಮಣ ಮಾಡಿ ರಾವಣನನ್ನು ಹಣಿಯುತ್ತಾನೆ.

ತನ್ನನ್ನು ನಿಂದಿಸಿದಾಗ ಕೋಪ ಗೊಳ್ಳದ ರಾಮ, ತನ್ನ ಭಕ್ತನಿಗೆ ಅದೇ ಅನ್ಯಾಯವಾದಾಗ ಕ್ಷಿಪ್ರವಾಗಿ ಸ್ಪಂದಿಸುತ್ತಾನೆ. ರಾಮನಲ್ಲಿ ಅಸೀಮವಾಗಿ ಕೆನೆಗಟ್ಟಿದ್ದ ಮತ್ತೊಂದು ವೈಶಿಷ್ಟ್ಯ ವೆಂದರೆ ‘ಕ್ಷಮಾಗುಣ’. ಇದಕ್ಕೊಂದು ನಿದರ್ಶನವನ್ನು ಇಲ್ಲಿ ಉಲ್ಲೇಖಿಸಲೇಬೇಕು. ಮಗ ರಾಮನನ್ನು ವಿನಾಕಾರಣ ಕಾಡಿ ಗಟ್ಟಿದ ನಂತರ ಅತೀವವಾಗಿ ಶೋಕಿಸುವ ದಶರಥ, ಆ ನೋವಿ ನಲ್ಲೇ ಕೊನೆಯುಸಿರೆಳೆ ಯುತ್ತಾನೆ. ಸಾಲದೆಂಬಂತೆ, ‘ಅಯೋ ಧ್ಯೆಯ ಸಿಂಹಾಸನವು ಅಣ್ಣ ಶ್ರೀರಾಮನ ಜನ್ಮಸಿದ್ಧ ಹಕ್ಕಾಗಿರುವು ದರಿಂದ ನಾನೆಂದೂ ಸಿಂಹಾಸನಾ ರೋಹಣ ಮಾಡುವುದಿಲ್ಲ’ ಎಂದು ಪ್ರತಿಜ್ಞೆ ಮಾಡುವ ಭರತನು ತಾಯಿ ಕೈಕೇಯಿಯನ್ನುದ್ದೇಶಿಸಿ, ‘ತಂದೆಯ ಸಾವಿಗೆ ಕಾರಣರಾದ ನಿಮ್ಮನ್ನು ಇನ್ನೆಂದೂ ‘ಆಮ್ಮ’ ಎಂದು ಕೂಗುವುದಿಲ್ಲ’ ಎಂದೂ ಶಪಥಗೈಯುತ್ತಾನೆ.

ಅಯೋಧ್ಯೆಯ ಅರಮನೆಯಲ್ಲಿ ರೂಪುಗೊಂಡ ವಿಲಕ್ಷಣ ಪರಿಸ್ಥಿತಿಗೆ ತಾನೇ ಕಾರಣ ಎಂದು ಆತ್ಮ ನಿಂದನೆಯಲ್ಲಿ ತೊಡಗುವ ಕೈಕೇಯಿ, ರಾಮನನ್ನು ವನವಾಸಕ್ಕೆ ಕಳಿಸಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಾಳೆ. ೧೪ ವರ್ಷ ವನವಾಸ ಮುಗಿಸಿ ಬರುವ ರಾಮನ ಕೈಹಿಡಿದು ಆಕೆ ತಾನು ಮಾಡಿದ ಪಾಪಗಳಿಗೆ ಕ್ಷಮೆ ಕೋರಿದಾಗ,
ಆಕೆಯ ಪಾದಗಳಿಗೆ ನಮಿಸುವ ರಾಮ, ‘ವನವಾಸದಿಂದ ಮತ್ತು ತರುವಾಯದಲ್ಲಿ ಸಂಭವಿಸಿದ ಘಟನೆಗಳಿಂದ ನನಗೇನೂ ವಿಷಾದ ವಾಗಿಲ್ಲ, ಹೀಗಾಗಿ ನೀವು ಕ್ಷಮೆ ಕೋರುವ ಅಗತ್ಯ ವಿಲ್ಲ ತಾಯೀ’ ಎಂಬ ಸವಿಮಾತಾಡುತ್ತಾನೆ. ಮಾತ್ರ ವಲ್ಲ, ತನ್ನ ಅಮ್ಮ ನನ್ನು ಕ್ಷಮಿಸುವಂತೆಯೂ ಭರತ ನನ್ನು ಆಗ್ರಹಿಸುತ್ತಾನೆ. ಅದಕ್ಕೆ
ಭರತ ಓಗೊಡದಿ ದ್ದಾಗ ಆತನ ಕೈಹಿಡಿದು, ‘ಬಹುತೇಕ ತಾಯಿ ಯರ ವರ್ತನೆ ಇದೇ ಆಗಿರುತ್ತದೆ; ಒಳ್ಳೆಯದೋ ಅಥವಾ ಕೆಟ್ಟದೋ, ತಾಯಿ ಎನಿಸಿಕೊಂಡವಳು ಇಡುವ ಪ್ರತಿಯೊಂದು ಹೆಜ್ಜೆಯೂ ತನ್ನ ಮಕ್ಕಳ ಏಳಿಗೆಗಾ ಗಿನ ಯತ್ನವಾಗಿರುತ್ತದೆಯೇ ಹೊರತು, ಅದರ ಹಿಂದೆ ತಾಯಿಯ ಸ್ವಹಿತಾಸಕ್ತಿ, ಸ್ವಾರ್ಥಸಾಧನೆ
ಇರುವುದಿಲ್ಲ; ಹೀಗಾಗಿ ತಾಯಿಯ ಮೇಲೆ ನೀನು ಕೋಪ ಸಾಽಸುವುದು ಸೂಕ್ತವಲ್ಲ’ ಎನ್ನುವ ಮೂಲಕ ಕೈಕೇಯಿಯನ್ನು ಸಮರ್ಥಿಸಿಕೊಳ್ಳುತ್ತಾನೆ ರಾಮ. ದಯನಿಧಿ ರಾಮನ ಕ್ಷಮಾಗುಣಕ್ಕೆ ಇದಕ್ಕಿಂತ ಬೇರೇನು ನಿದರ್ಶನ ಬೇಕು?