Friday, 13th December 2024

ಕೈ ಕಚ್ಚುತ್ತಿದೆ ಕೇಸರಿ ಧ್ವಜ

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಅಹೋರಾತ್ರಿ ಧರಣಿಯಂತಹ ಹೋರಾಟಗಳು ವಿಧಾನಮಂಡಲಕ್ಕೆ ಹೊಸತೇನಲ್ಲ. ಈ ಹಿಂದೆ ಅಕ್ರಮ ಗಣಿಗಾರಿಕೆಯ ವಿಷಯವನ್ನು
ಹಿಡಿದುಕೊಂಡು ಕಾಂಗ್ರೆಸ್ ಹಲವು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿತ್ತು. ಆದರೆ ಇಂತಹ ಧರಣಿಗೆ ಒಂದು ಅರ್ಥವಾದರೂ ಇತ್ತು.

ಸಾರ್ವಜನಿಕರ ದುಡ್ಡನ್ನು ವಿನಾಕಾರಣ ಪೋಲು ಮಾಡುವುದು ಹೇಗೆ ಅನ್ನುವುದನ್ನು ಅಧ್ಯಯನ ಮಾಡಲು ಬಯಸುವವರು ಕರ್ನಾಟಕ ವಿಧಾನಮಂಡಲವನ್ನು ಒಂದು ಮಾದರಿಯಾಗಿ ಪರಿಗಣಿಸಬಹುದು. ಯಾಕೆಂದರೆ, ರಾಜ್ಯಪಾಲರ ಜಂಟಿ ಅಧಿವೇಶನಕ್ಕೆಂದು ಸೇರಿದ ಕರ್ನಾಟಕ ವಿಧಾನಮಂಡಲದಲ್ಲಿ ಕಳೆದ ವಾರ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದೇ ಬಹುದೊಡ್ಡ ಕಾರ್ಯಕಲಾಪ.

ಒಂದು ವೇಳೆ ರಾಜ್ಯಪಾಲರ ಭಾಷಣದೊಂದಿಗೆ ಕಲಾಪ ಆರಂಭವಾಗಬೇಕು ಎಂಬ ನಿಯಮ ಇಲ್ಲವಾಗಿದ್ದರೆ ಬಹುಶ: ಇಡೀ ವಾರ ರಾಜ್ಯ ಪಾಲರ ಭಾಷಣ ಕೂಡ ಸಾಧ್ಯ ವಾಗುತ್ತಿರಲಿಲ್ಲವೇನೋ? ಅಂದ ಹಾಗೆ ವಿಧಾನಮಂಡಲದ ಉಭಯ ಸದನಗಳ ಒಂದು ದಿನದ ಕಲಾಪಕ್ಕಾಗಿ ಸುಮಾರು ಎರಡು ಕೋಟಿ ರೂಪಾಯಿಗಳಷ್ಟು ಹಣ ವೆಚ್ಚ ವಾಗುತ್ತದೆ ಎಂಬುದು ಗೊತ್ತಿದ್ದರೂ ವಾರದ ಬಹುತೇಕ ದಿನಗಳನ್ನು ವ್ಯರ್ಥಗೊಳಿಸಿದ ಬೆಳವಣಿಗೆ ಏನಿದೆ? ಇದು ಪ್ರಜಾಪ್ರಭುತ್ವಕ್ಕೆ ಭೂಷಣ ಪ್ರಾಯವಂತೂ ಅಲ್ಲ. ಹೀಗೆ ಉಭಯ ಸದನಗಳ ಕಾರ್ಯ ಕಲಾಪಗಳಿಗೆ ತಡೆಯಾಗಿದ್ದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಒಂದು ಹೇಳಿಕೆ.

ದೆಹಲಿಯ ಕೆಂಪು ಕೋಟೆಯ ಮೇಲೆ ಈಗಲ್ಲವಾದರೂ ಮುಂದೆ ಕೇಸರಿ ಧ್ವಜ ಹಾರ ಬಹುದು ಎಂಬ ಅವರ ಅಭಿಪ್ರಾಯ ಪ್ರತಿಪಕ್ಷ ಕಾಂಗ್ರೆಸ್ ಪಾಲಿಗೆ ದೊಡ್ಡ ಅಸವಾಗಿ ಹೋಯಿತು. ಇಂತಹ ಹೇಳಿಕೆ ನೀಡುವ ಮೂಲಕ ಸಚಿವ ಈಶ್ವರಪ್ಪ ಅವರು ಸಂವಿಧಾನವನ್ನು ಅಗೌರವಿಸಿದ್ದಾರೆ. ಹೀಗಾಗಿ ಅವರನ್ನು ಮುಖ್ಯಮಂತ್ರಿಗಳು ಸಂಪುಟದಿಂದ ಕೈ ಬಿಡಬೇಕು. ಇಲ್ಲವೇ ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ಕ್ರಮಕೈಗೊಳ್ಳಬೇಕು ಎಂದು ಕಾಂಗ್ರೆಸ್ ಪಟ್ಟು ಹಿಡಿಯಿತು. ಅಷ್ಟೇ ಅಲ್ಲ, ಇದು ಸಾಧ್ಯವಾಗುವವರೆಗೆ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಅದು ತೀರ್ಮಾ ನಿಸಿತು. ಅದರ ಈ ತೀರ್ಮಾನವನ್ನು ಈಗ ಸಾರ್ವಜನಿಕರು ಗಂಭೀರವಾಗಿ ಪರಿಗಣಿಸುವ ಕಾಲ ಬಂದಿದೆ. ಯಾಕೆಂದರೆ ಸಚಿವ ಈಶ್ವರಪ್ಪ ಅವರ ಹೇಳಿಕೆ ಸಂವಿಧಾನ ಬಾಹಿರವಾಗಿದ್ದರೆ, ವಿಧಾನ ಮಂಡಲದಲ್ಲಿ ಸಾಂಕೇತಿಕವಾಗಿ ಅದನ್ನು ಪ್ರತಿಭಟಿಸುವ ಕೆಲಸಕ್ಕೆ ಕಾಂಗ್ರೆಸ್ ಸೀಮಿತವಾಗಬೇಕಿತ್ತು.

ಸಂವಿಧಾನವನ್ನು ರಕ್ಷಿಸಲು ರಾಷ್ಟ್ರಪತಿಗಳ ಪ್ರತಿನಿಧಿಯಾಗಿ ಕರ್ನಾಟಕದಲ್ಲಿ ರಾಜ್ಯಪಾಲರೂ ಇದ್ದಾರಲ್ಲ? ಈಶ್ವರಪ್ಪ ಅವರ ಹೇಳಿಕೆ ಸಂವಿಧಾನ ಬಾಹಿರವಾಗಿದ್ದರೆ, ಅದನ್ನು ರಾಜ್ಯಪಾಲರ ಗಮನಕ್ಕೂ ತರುವ ಕೆಲಸವನ್ನು ಕಾಂಗ್ರೆಸ್ ಮಾಡಬೇಕಿತ್ತು. ಅದೇ ರೀತಿ ಈ ವಿಷಯವನ್ನು ಜನತಾ ನ್ಯಾಯಾಲಯಕ್ಕೂ ತೆಗೆದುಕೊಂಡು ಹೋಗುವ ಅವಕಾಶವನ್ನು ಅದು ಬಳಸಿಕೊಳ್ಳಬಹುದಿತ್ತು. ಆದರೆ ಇದನ್ನು
ಮಾಡದೇ ವಿಧಾನಮಂಡಲದ ಉಭಯ ಸದನಗಳನ್ನೇ ಕುರುಕ್ಷೇತ್ರವನ್ನಾಗಿಸಿದ ಅದರ ನಡೆ ನಿಶ್ಚಿತವಾಗಿ ಸರಿಯಲ್ಲ.

ಯಾಕೆಂದರೆ,ಅದರ ಈ ನಡೆಯ ಮೂಲಕ ಸಾರ್ವಜನಿಕರ ತೆರಿಗೆ ಹಣ ವಿನಾಕಾರಣ ಪೋಲಾಗುತ್ತಿದೆಯೇ ವಿನಾ ದೊಡ್ಡ ಸಾಧನೆ ಯೇನೂ ಆಗುತ್ತಿಲ್ಲ. ವಸ್ತುಸ್ಥಿತಿಯೆಂದರೆ, ಈ ಹೋರಾಟ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪ್ರತಿಷ್ಠೆಯ ಹೋರಾಟವೇ ವಿನಾ
ಬೇರೇನಲ್ಲ. ಹಿಜಾಬ್ ವಿವಾದ ಭುಗಿಲೆದ್ದಾಗ, ಶಿವಮೊಗ್ಗದಲ್ಲಿ ಒಬ್ಬ ಮಂತ್ರಿಯ ಮಗನೇ ಕೇಸರಿ ಧ್ವಜಗಳನ್ನು ವಿದ್ಯಾರ್ಥಿಗಳಿಗೆ ಪೂರೈಸಿ ದ್ದಾರೆ. ಸೂರತ್‌ನಿಂದ ಈ ಕೇಸರಿ ಧ್ವಜಗಳನ್ನು ತರಿಸಲಾಗಿದೆ ಎಂದು ಅಧಿವೇಶನಕ್ಕೂ ಮುನ್ನ ಡಿ.ಕೆ.ಶಿವಕುಮಾರ್ ಆರೋಪಿಸಿದ್ದರು. ಎದುರಾಳಿಗಳನ್ನು ಗಪ್ಪಂತ ಹಿಡಿದು ಮೈ ಮೇಲೆ ಎಳೆದುಕೊಳ್ಳುವ ಗುಣದ ಸಚಿವ ಈಶ್ವರಪ್ಪ ಕೂಡಾ: ಹೌದು, ಕೇಸರಿ ಧ್ವಜಗಳನ್ನು
ತರಿಸಿದ್ದು ನಾವೇ, ಅಯೋಧ್ಯೆಯ ಶ್ರೀರಾಮನ ಫ್ಯಾಕ್ಟರಿಯಿಂದ ಖರೀದಿಸಿ, ಹನುಮಾನ್ ಟ್ರಾನ್ಸ್‌ಪೋರ್ಟ್ ನಲ್ಲಿ ಅವನ್ನು ತರಿಸಲಾಗಿದೆ ಎಂದರು.

ಇದರ ಬೆನ್ನಲ್ಲೇ, ಧ್ವಜ ತರಿಸಿದ್ದನ್ನು ಧೈರ್ಯವಾಗಿ ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಕನಕಪುರದಲ್ಲಿ ಬಂಡೆಗಳನ್ನು ನುಂಗಿ ಎಲ್ಲ ಕಡೆ ಮಾರುತ್ತಿರುವ ಡಿ.ಕೆ.ಬ್ರದರ್ಸ್ ಇದನ್ನು ಒಪ್ಪಿಕೊಳ್ಳುತ್ತಾರಾ? ಎಂದು ಪ್ರತಿಸವಾಲು ಹಾಕಿದರು. ವಸ್ತುಸ್ಥಿತಿ ಎಂದರೆ ಈಶ್ವರಪ್ಪ ಹಾಕಿದ ಪ್ರತಿಸವಾಲು ಡಿ.ಕೆ.ಶಿವಕುಮಾರ್ ಅವರನ್ನು ಕೆರಳಿಸಿತು. ತಮಗೆ ಯಾರೇ ಸವಾಲು ಒಡ್ಡಲಿ, ಅವರನ್ನು ಸೈಡ್ ಲೈನಿಗೆ ಸರಿಸುವುದು ಡಿ.ಕೆ.ಶಿವಕುಮಾರ್ ಅವರ ಹಠ. ಈ ಹಠವನ್ನೇ ವಿಧಾನಮಂಡಲ ಅಧಿವೇಶದಲ್ಲಿ ಎನ್‌ಕ್ಯಾಶ್ ಮಾಡಿಕೊಳ್ಳಲು ಮುಂದಾದ ಅವರು ಈಶ್ವರಪ್ಪ ಅವರನ್ನು ವಜಾ ಮಾಡುವಂತೆ ಒತ್ತಾಯಿಸಿ, ಅಹೋರಾತ್ರಿ ಹೋರಾಟಕ್ಕೆ ಅಣಿಯಾಗಿಬಿಟ್ಟರು. ಅದರ ಪ್ರತಿಫಲವೇ
ಸಾರ್ವಜನಿಕರ ತೆರಿಗೆ ಹಣದ ಸೋರಿಕೆಯಾಗುತ್ತಿರುವುದು.

ಅಂದ ಹಾಗೆ ಅಹೋರಾತ್ರಿ ಧರಣಿಯಂತಹ ಹೋರಾಟಗಳು ವಿಧಾನಮಂಡಲಕ್ಕೆ ಹೊಸತೇನಲ್ಲ. ಈ ಹಿಂದೆ ಅಕ್ರಮ ಗಣಿಗಾರಿಕೆಯ ವಿಷಯವನ್ನು ಹಿಡಿದುಕೊಂಡು ಕಾಂಗ್ರೆಸ್ ಹಲವು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿತ್ತು. ಆದರೆ ಇಂತಹ ಧರಣಿಗೆ ಒಂದು ಅರ್ಥವಾದರೂ ಇತ್ತು. ಅದೆಂದರೆ, ಲಕ್ಷ ಕೋಟಿ ರು.ಗಳಿಗಿಂತ ಅಧಿಕ ಮೌಲ್ಯದ ಕಬ್ಬಿಣದ ಅದಿರಿನ ಸಾಗಾಟದಿಂದ ರಾಜ್ಯದ ಬೊಕ್ಕಸಕ್ಕೆ ಹೊಡೆತ ಬಿದ್ದಿತ್ತು. ಹೀಗಾಗಿ ಇದರ ವಿರುದ್ಧದ ಹೋರಾಟ ಅನಿವಾರ್ಯವೂ ಆಗಿತ್ತು. ಆದರೆ ಈಗಿನ ಅಹೋರಾತ್ರಿ ಹೋರಾಟಕ್ಕೆ ಅಂತಹ ಅನಿವಾರ್ಯವೇನೂ ಇಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಈಶ್ವರಪ್ಪ ಅವರ ಹೇಳಿಕೆ ಏನಿದೆ? ಇದು ಮುಕ್ಕಾಲು ಶತಮಾನಗಳಷ್ಟು ಕಾಲದಿಂದ ಈ ದೇಶದಲ್ಲಿ ಚರ್ಚೆ ಯಾಗುತ್ತಲೇ ಬಂದಿರುವ ವಿಷಯ. ಬ್ರಿಟಿಷರಿಂದ ಸ್ವಾತಂತ್ರ ಪಡೆಯುವ ಕಾಲದಲ್ಲಿ ಈ ದೇಶದ ಬಾವುಟ ಹೇಗಿರಬೇಕು? ಎಂಬುದನ್ನು ನಿರ್ಧರಿಸಲು ಧ್ವಜ ಸಮಿತಿಯನ್ನು ರಚಿಸಲಾಯಿತು. ಮತ್ತು ಧ್ವಜದ ಮಾದರಿಯ ಬಗ್ಗೆ ವ್ಯಾಪಕ ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸಾವರ್ಕರ್ ಅವರು, ಕೇಸರಿ ಬಣ್ಣ ತ್ಯಾಗದ ಸಂಕೇತ, ಹಿಂದೂಸ್ಥಾನದಲ್ಲಿ ಅದೇ ಬಣ್ಣ ಧ್ವಜದ ಬಣ್ಣವಾಗುವುದು ನ್ಯಾಯ ಎಂದಿದ್ದರು.

ಅವತ್ತು ಸಾವರ್ಕರ್ ಅವರ ಸಲಹೆಯನ್ನು ಧ್ವಜ ಸಮಿತಿಯ ಯಾರೂ ವಿರೋಧಿಸಲಿಲ್ಲ. ಆದರೆ ಬಹುಮತದ ಆಧಾರದ ಮೇಲೆ ತ್ರಿವರ್ಣ ಧ್ವಜ ಅಂಗೀಕೃತವಾಯಿತು. ಇದಾದ ನಂತರದ ದಿನಗಳಲ್ಲಿ ನಮಗೆ ಕೇಸರಿ ಧ್ವಜ ಇರಬೇಕು ಎಂಬ ಚಿಂತನೆ ಹರಿದು ಬರುತ್ತಲೇ ಇದೆ. ಅರ್ಥಾತ್, ಇದು ಒಂದು ಚರ್ಚೆಯ ವಿಷಯವಾಗಿ ಚಾಲ್ತಿಯಲ್ಲಿ ಇದ್ದೇ ಇದೆ. ಇಂತಹ ಒಂದು ಭಾವನಾತ್ಮಕ ವಿಷಯ ಜನರ ಮಧ್ಯೆ ಚರ್ಚೆ
ಯಾಗಬೇಕೇ ಹೊರತು, ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸಲು ಇರುವ ವೇದಿಕೆಯನ್ನು ರಣಾಂಗಣ ಮಾಡುವ ಕೆಲಸವಾಗಬಾರದು.

ವಸ್ತುಸ್ಥಿತಿ ಎಂದರೆ, ವಿಧಾನಮಂಡಲದ ಉಭಯ ಸದನಗಳು ಚರ್ಚಿಸಬೇಕಾದ ತುರ್ತು ವಿಷಯಗಳ ದೊಡ್ಡ ಪಟ್ಟಿಯೇ ಇದೆ. ಇಂತಹ ಕಾಲದಲ್ಲಿ ಆ ಬಗ್ಗೆ ಗಮನ ಹರಿಸುವುದು ಮುಖ್ಯವಾಗಿತ್ತೇ, ಹೊರತು ಧ್ವಜವನ್ನು ವಿವಾದದ ಕೇಂದ್ರವಾಗಿಸಿಕೊಂಡು ಸದನ ಕಲಾಪ ವನ್ನು ವ್ಯರ್ಥಗೊಳಿಸುವುದಲ್ಲ. ಇವತ್ತು ಜನಜೀವನ ದಿನದಿಂದ ದಿನಕ್ಕೆ ದುಬಾರಿಯಾಗುತ್ತಾ ಬಡ, ಮಧ್ಯಮ ವರ್ಗದ ಜನರ ಬದುಕು ದೈನೇಸಿ ಯಾಗುತ್ತಾ ನಡೆದಿದೆ. ಇದಕ್ಕೆ ಭ್ರಷ್ಟಾಚಾರದಿಂದ ಹಿಡಿದು ಹಲವು ಕಾರಣಗಳೂ ಇವೆ. ಈ ಬಗ್ಗೆ ವಿವರವಾಗಿ ಚರ್ಚಿಸುವ, ಆ ಮೂಲಕ ಒಂದು ಮಟ್ಟದಲ್ಲಾದರೂ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ವಿಧಾನಮಂಡಲದ ಉಭಯ ಸದನಗಳಿಂದ ಆಗಬೇಕಿತ್ತು.

ಇದೇ ರೀತಿ ಸರಕಾರದ ಕಾಮಗಾರಿಗಳನ್ನು ಪಡೆದವರು ಶೇ.40ರಷ್ಟು ಕಮಿಷನ್ ಕೊಡಬೇಕು ಎಂದು ಗುತ್ತಿಗೆದಾರರ ಸಂಘದ ಮುಖ್ಯಸ್ಥರು ಒಂದಲ್ಲ, ಎರಡು ಬಾರಿ ಹೇಳಿಕೆ ನೀಡಿದರು. ಅಷ್ಟೇ ಅಲ್ಲ, ತಮ್ಮ ಬಳಿಯಿರುವ ದಾಖಲೆಗಳನ್ನು ಬಿಡುಗಡೆ ಮಾಡಿದರೆ ಕನಿಷ್ಠ ಇಪ್ಪತ್ತೈದು ಮಂದಿ ಶಾಸಕರು ರಾಜೀನಾಮೆ ನೀಡಬೇಕಾಗುತ್ತದೆ. ಸರಕಾರವೇ ಪತನವಾಗುತ್ತದೆ ಎಂದು ಅಬ್ಬರಿಸಿದರು. ಅವರ ಈ ಅಬ್ಬರಕ್ಕೆ ಉತ್ತರ ನೀಡುವ ಕೆಲಸ ಸರಕಾರ ದಿಂದಾಗಬೇಕಿತ್ತು. ಅಂದ ಹಾಗೆ ಮೂರೂ ಪ್ರಮುಖ ರಾಜಕೀಯ ಪಕ್ಷಗಳಿಗೆ ಸರಕಾರ ನಡೆಸಿದ ಅನುಭವವಿದಯಲ್ಲವೇ? ಹೀಗಾಗಿ ಹಾಲಿ ಸರಕಾರ ಮಾತ್ರವಲ್ಲ, ಮೂರೂ ರಾಜಕೀಯ ಪಕ್ಷಗಳು ಸೇರಿ ವಿಧಾನಮಂಡಲದಲ್ಲೇ ಇದಕ್ಕೆ ಉತ್ತರ ನೀಡುವ ಕೆಲಸ ಮಾಡಬೇಕಿತ್ತು. ಆದರೆ ಇದುವರೆಗೆ ಗುತ್ತಿಗೆದಾರರ ಸಂಘಟನೆಯ ಸವಾಲವನ್ನು ಸ್ವೀಕರಿಸುವುದಿರಲಿ, ದುಸುರಾ ಮಾತನಾಡುವ ಶಕ್ತಿಯೂ ನಮ್ಮ ರಾಜಕೀಯ ಪಕ್ಷಗಳಲ್ಲಿಲ್ಲ.

ಅರ್ಥಾತ್, ಗುತ್ತಿಗೆದಾರರ ಸಂಘಟನೆ ಏನು ಆರೋಪ ಮಾಡಿದೆ? ಈ ಆರೋಪದ ಆಳಕ್ಕಿಳಿದರೆ ಮುಖಕ್ಕೆ ಮಸಿಯಿಲ್ಲದೆ ಹೊರಬರುವ ಧೈರ್ಯ ಯಾರಿಗೂ ಇಲ್ಲ. ಇದೇ ಕಾರಣಕ್ಕಾಗಿ ಈ ಆರೋಪ ಬಂದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲರ ಕಾಲದ ಕಾಮಗಾರಿಗಳ ಬಗ್ಗೆ ತನಿಖೆ ಮಾಡಿಸೋಣ ಎಂದಿದ್ದು. ಅರ್ಥಾತ್, ಗುತ್ತಿಗೆದಾರರ ಸಂಘಟನೆಯ ಆರೋಪಗಳಿಗೆ ಪ್ರತಿಸವಾಲು ಹಾಕುವ ಶಕ್ತಿಯೇ ನಮ್ಮ ರಾಜಕೀಯ ವ್ಯವಸ್ಥೆಗಿಲ್ಲ. ಇಂತಹ ಕಾಲಘಟ್ಟದಲ್ಲಿ ಸಚಿವ ಈಶ್ವರಪ್ಪ ಅವರ ಹೇಳಿಕೆಯನ್ನು ಹಿಡಿದು ಜಗ್ಗಾಡುವುದಿದೆ ಯಲ್ಲ? ಇದಕ್ಕಿಂತ ವ್ಯರ್ಥಾಲಾಪ ಬೇರೊಂದಿಲ್ಲ, ಹಾಗೊಂದು ವೇಳೆ ಈಗ ಕಾಂಗ್ರೆಸ್ ಮಾಡುತ್ತಿರುವುದೇ ನ್ಯಾಯ ಎಂಬುದಾದರೆ ರಾಜ್ಯಪಾಲರು ಏನು ಮಾಡುತ್ತಿದ್ದಾರೆ? ಸಂವಿಧಾನ ರಕ್ಷಣೆಯ ಕೆಲಸ ತಮಗೆ ಸಂಬಂಧಿಸಿದ್ದಲ್ಲ.

ಅದೇನಿದ್ದರೂ ಕಾಂಗ್ರೆಸ್ ಪಕ್ಷದ್ದು ಎಂಬ ತೀರ್ಮಾನಕ್ಕೆ ಬಂದು ಸುಮ್ಮನೆ ಕುಳಿತಿದ್ದಾರೆಯೇ? ಇವತ್ತು ಹೇಳುತ್ತ ಹೋದರೆ ಸರಕಾರದ ಯಾವ ಇಲಾಖೆ ಪರಿಶುದ್ಧವಾಗಿ, ಪ್ರಾಮಾಣಿಕವಾಗಿ ನಡೆಯುತ್ತಿದೆ? ಇಂತಹ ಇಲಾಖೆಯಲ್ಲಿ ಲಂಚ ಕೊಡದೇ ನಮ್ಮ ಕೆಲಸವನ್ನು ಮಾಡಿಕೊಂಡು ಬರಬಹುದು? ಎಂದು ಜನ ಎದೆ ತಟ್ಟಿ ಹೇಳುವ ಪರಿಸ್ಥಿತಿಯಿದೆ? ಜನರ ಜೀವನದ ಸಂಕಟ ಎಲ್ಲಿದೆ? ಎಂಬುದನ್ನರಿ ಯಲು ಪ್ರತಿಪಕ್ಷಕ್ಕೆ ಇದೊಂದು ವಿಷಯವೇ ಸಾಕು. ಅದು ಈ ಕೆಲಸ ಮಾಡುವುದನ್ನು ಬಿಟ್ಟು ಈಶ್ವರಪ್ಪ ಅವರ ಹೇಳಿಕೆಯನ್ನು ಜಗ್ಗಾಡುತ್ತಾ ಕೂರುವುದಲ್ಲ. ಹೀಗೆ ಜಗ್ಗಾಡುತ್ತಾ ಕೂರುವುದರಿಂದ ಏನೂ ಪ್ರಯೋಜನವಿಲ್ಲ.

ಜನಸಾಮಾನ್ಯರ ತೆರಿಗೆ ಹಣವನ್ನು ಪೋಲು ಮಾಡುವುದನ್ನುಹೊರತು ಪಡಿಸಿ ಕಾಂಗ್ರೆಸ್ ಪಕ್ಷದ ಈ ಹೋರಾಟದಿಂದ ಬೇರೆ ಏನೂ ಸಾಧನೆಯಾಗುವುದಿಲ್ಲ. ಧ್ವಜದ ವಿಷಯವನ್ನು ಚರ್ಚೆ ಮಾಡಲು ಬಿಜೆಪಿ ಪಾಳೆಯದಲ್ಲಿ ಈಶ್ವರಪ್ಪ ಇಲ್ಲದಿದ್ದರೆ ಇನ್ನೊಬ್ಬರು ಹುಟ್ಟಿಕೊಳ್ಳು ತ್ತಾರೆ. ಪ್ರತಿಪಕ್ಷ ಕಾಂಗ್ರೆಸ್ ಇದನ್ನರ್ಥ ಮಾಡಿಕೊಂಡರೆ ಅದಕ್ಕೂ ಒಳ್ಳೆಯದು, ನಾಡಿಗೂ ಒಳ್ಳೆಯದು.