Saturday, 14th December 2024

ಕೈ ಪಾಳಯಕ್ಕೆ ಖರ್ಗೆ ವಾರ್ನಿಂಗ್

ಮೂರ್ತಿಪೂಜೆ

ಪಾರ್ಲಿಮೆಂಟ್ ಚುನಾವಣೆಯಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳು ವೋಟು ತರುತ್ತವೆ ಅಂತ ನಂಬಿಕೊಂಡು ಕೂರಬೇಡಿ. ಈ ಹಿಂದೆ ರಾಜಸ್ತಾನದಲ್ಲಿದ್ದ ಕಾಂಗ್ರೆಸ್ ಸರಕಾರವೂ ಜನರಿಗೆ ೭ ಗ್ಯಾರಂಟಿಗಳನ್ನು ಕೊಟ್ಟಿತ್ತು. ಆ ಗ್ಯಾರಂಟಿಗಳು ಜಾರಿಯಲ್ಲಿದ್ದರೂ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿ ಪರವಾಗಿ ಸೀಲು ಒತ್ತಿದರು ಅಂತ ಖರ್ಗೆಯವರು ರಾಜ್ಯ ಕಾಂಗ್ರೆಸಿಗರಿಗೆ ಎಚ್ಚರಿಸಿದ್ದಾರಂತೆ.

ಕರ್ನಾಟಕದಲ್ಲಿ ಪ್ರಧಾನಿ ಮೋದಿ ಅವರ ರಥವನ್ನು ತಡೆಯಲು ಮಮತಾ ಬ್ಯಾನರ್ಜಿ ಸೂತ್ರವನ್ನು ಅನುಸರಿಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿ ದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಟೀಮು ಫೆಬ್ರವರಿ ೭ರಂದು ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದೇ ಇದಕ್ಕೆ ಸಾಕ್ಷಿ. ಅಂದ ಹಾಗೆ, ಜನವರಿ ೨೨ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ನಂತರ ದೇಶದಲ್ಲಿ ಪುನಃ ಎದ್ದಿರುವ ಮೋದಿ ಪರ ಅಲೆ ಕರ್ನಾಟಕದ ಕಾಂಗ್ರೆಸ್ ನಾಯಕರನ್ನು ಸಹಜವಾಗಿಯೇ ಆತಂಕಕ್ಕೆ ತಳ್ಳಿದೆ.

ಅಷ್ಟೇ ಅಲ್ಲ, ಸರಕಾರ ಅಸ್ತಿತ್ವಕ್ಕೆ ಬಂದ ಕಾಲದಲ್ಲಿ ಪಾರ್ಲಿಮೆಂಟ್ ಚುನಾವಣೆಗೆ ನಿಲ್ಲಲು ತಯಾರಿದ್ದ ಬಹುತೇಕ ಸಚಿವರು ಹಿಂದೇಟು ಹೊಡೆಯು ವಂತೆ ಮಾಡಿದೆ. ಸಚಿವರು ಮಾತ್ರವಲ್ಲ, ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಮಾಜಿ ಸಚಿವ ಪ್ರಕಾಶ್ ಹುಕ್ಕೇರಿಯವರಂಥ ಶಾಸಕರು ಕೂಡಾ ಚುನಾವಣೆ ಯಲ್ಲಿ ಸ್ಪರ್ಧಿಸಲು ನಿರಾಕರಿಸುತ್ತಿದ್ದಾರೆ. ಪರಿಣಾಮ? ಕರ್ನಾಟಕದ ೨೮ ಪಾರ್ಲಿಮೆಂಟ್ ಕ್ಷೇತ್ರಗಳ ಪೈಕಿ ಬಹುತೇಕ ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬ ವಿಷಯದಲ್ಲಿ ರಾಜ್ಯದ ಕಾಂಗ್ರೆಸಿಗರು ಖಚಿತ ತೀರ್ಮಾನಕ್ಕೆ ಬರಲಾಗುತ್ತಿಲ್ಲ.

ಹೀಗೆ ರಾಜ್ಯದ ಕಾಂಗ್ರೆಸ್ ಪಾಳಯದ ಮೇಲೆ ಆತಂಕದ ಕಾರ್ಮೋಡ ಕವಿದ ಹೊತ್ತಿನಲ್ಲೇ ಅಳಂದ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲರು ಮೊನ್ನೆ ಪಕ್ಷದ ಟಾಪ್ ಲೀಡರುಗಳಿಗೆ ಒಂದು ಪ್ರಪೋಸಲ್ಲು ಕೊಟ್ಟಿದ್ದಾರೆ. ‘ರಾಮ, ರಾಮ ಅನ್ನುತ್ತಾ ಬಿಜೆಪಿಯವರು ಅಕ್ಷತೆ ಹಿಡಿದು ಕರ್ನಾಟಕದ ಮನೆ ಮನೆಗೆ ತಲುಪಿದ್ದಾರೆ. ಆದರೆ ನಾವು ಕೂತಲ್ಲೇ ಕುಳಿತಿದ್ದೇವೆ. ಇಂಥ ಟೈಮಿನಲ್ಲಿ ಮೇಲೆದ್ದು ನಿಂತು ಮಮತಾ ಬ್ಯಾನರ್ಜಿಯವರಂತೆ ಬಿಜೆಪಿಯನ್ನು ಎದುರಿಸ ದಿದ್ದರೆ ಕಷ್ಟವಾಗುತ್ತದೆ’ ಎಂಬುದು ಅವರ ಪ್ರಪೋಸಲ್ಲು. ಅರ್ಥಾತ್, ಪಶ್ಚಿಮ ಬಂಗಾಳದಲ್ಲಿ ತಮ್ಮನ್ನು ಹಣಿಯಲು ಬಿಜೆಪಿ ಏನೇ ಕಸರತ್ತು ಮಾಡಿದರೂ ಮಮತಾ ತಕ್ಷಣವೇ ಬೀದಿಗಿಳಿದು ಮೋದಿ ಸರಕಾರದ ವಿರುದ್ಧ ಧರಣಿ ಮಾಡುತ್ತಾರೆ. ಇವತ್ತು ನಾವೂ ಹಾಗೇ ಬಿಜೆಪಿಯನ್ನು ಎದುರಿಸ ದಿದ್ದರೆ ಪಾರ್ಲಿಮೆಂಟ್ ಚುನಾವಣೆಯ ಹೊತ್ತಿಗೆ ಪರಿಸ್ಥಿತಿ ಕೈಮೀರಿ ಹೋಗುತ್ತದೆ.

ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟದ ಸದಸ್ಯರು ಮಾತ್ರವಲ್ಲ, ರಾಜ್ಯದ ಎಲ್ಲ ಕಾಂಗ್ರೆಸ್ ಶಾಸಕರೂ ದಿಲ್ಲಿಗೇ ನುಗ್ಗಿ ಕೇಂದ್ರದ ವಿರುದ್ಧ ಪ್ರತಿ ಭಟಿಸಬೇಕು. ಹೀಗೆ ಪ್ರತಿಭಟನೆ ನಡೆಸಲು ನಮಗೆ ಬೇಕಾದಷ್ಟು ವಿಷಯಗಳಿವೆ. ಇವತ್ತು ರಾಜ್ಯದಲ್ಲಿ ಬರಗಾಲ ಆವರಿಸುತ್ತಿರುವಾಗ ಕೇಂದ್ರ ಸರಕಾರ ಉದ್ಯೋಗ ಖಾತ್ರಿ ಯೋಜನೆಗೆ ನೀಡುವ ನೆರವನ್ನು ಕಡಿತ ಮಾಡಿದೆ. ಉದ್ಯೋಗದ ದಿನಗಳನ್ನು ಹೆಚ್ಚಿಸಿ ಎಂದರೆ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಹಣಕಾಸು ಆಯೋಗ ನಿಗದಿ ಮಾಡಿದ ರಾಜ್ಯದ ಪಾಲಿನ ಹಣವನ್ನು ಕೊಡುತ್ತಿಲ್ಲ. ಅಷ್ಟೇಕೆ? ಕೇಂದ್ರದ ಸಹಯೋಗದೊಂದಿಗೆ ರಾಜ್ಯದಲ್ಲಿ ಜಾರಿಯಾಗಬೇಕಾದ ಯೋಜನೆಗಳಿಗೆ
ಕೊಡುವ ಪಾಲನ್ನೂ ಕಡಿಮೆ ಮಾಡಲಾಗಿದೆ.

ರಾಜ್ಯದಿಂದ ವಿವಿಧ ತೆರಿಗೆಗಳ ರೂಪದಲ್ಲಿ ದಂಡಿಯಾಗಿ ದಿಲ್ಲಿಗೆ ಹಣ ಹೋಗುತ್ತಿರುವಾಗ ನಮಗೆ ಆಗುತ್ತಿರುವ ಅನ್ಯಾಯವನ್ನು ದೇಶದ ಗಮನಕ್ಕೆ ತರೋಣ. ಹೀಗೆ ಕರ್ನಾಟಕದ ವಿಷಯದಲ್ಲಿ ಕೇಂದ್ರ ತೋರಿಸುತ್ತಿರುವ ಮಲತಾಯಿ ಧೋರಣೆಯನ್ನು ದೇಶದ ಜನರಿಗೆ ತಿಳಿಸಬೇಕೆಂದರೆ ನಮ್ಮ ಹೋರಾಟ ದಿಲ್ಲಿಯ ರಣರಂಗದಲ್ಲೇ ನಡೆಯಬೇಕು ಅಂತ ಬಿ.ಆರ್.ಪಾಟೀಲರು ಹೇಳಿದ್ದು ವರ್ಕ್ ಔಟ್ ಆಗಿದೆ. ಅಂತಿಮವಾಗಿ ಫೆಬ್ರವರಿ ೭ರಂದು ಸಿದ್ದರಾಮಯ್ಯ ಅಂಡ್ ಟೀಮು ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿದೆ.

ಅಂದ ಹಾಗೆ, ಬಿಜೆಪಿ ವಿರೋಧಿ ಒಕ್ಕೂಟದ ಪ್ರಮುಖ ಶಕ್ತಿಯಂತೆ ಮೇಲೆದ್ದು ನಿಂತಿದ್ದ ಮಮತಾ ಈಗ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಜತೆ ಹೊಂದಾ ಣಿಕೆ ಮಾಡಿಕೊಳ್ಳುವುದಿಲ್ಲ ಅಂತ ಟಕ್ಕರ್ ಕೊಟ್ಟಿದ್ದಾರೆ. ಆದರೂ ಬಿಜೆಪಿ ವಿರುದ್ಧ ಸೆಣಸಲು ಮಮತಾ ಮಾದರಿಯ ಹೋರಾಟಕ್ಕೆ ನುಗ್ಗದೆ ಬೇರೆ ದಾರಿಯಿಲ್ಲ ಎಂಬ ಭಾವನೆ ರಾಜ್ಯ ಕಾಂಗ್ರೆಸ್‌ನಲ್ಲಿ ದಟ್ಟವಾಗತೊಡಗಿದೆ. ಇಂಥ ಹೋರಾಟಕ್ಕೆ ರಾಜ್ಯ ಕಾಂಗ್ರೆಸ್ ತಯಾರಾಗುತ್ತಿದೆ ಎಂದರೆ ಮುಂದಿನ ದಿನಗಳಲ್ಲಿ ಕರ್ನಾಟಕ ರಫ್ -ಆಂಡ್-ಟಫ್ ರಾಜಕಾರಣಕ್ಕೆ ಸಾಕ್ಷಿಯಾಗುವುದು ನಿಶ್ಚಿತ ಮತ್ತು ಈ ಅಂಶ ರಾಜ್ಯ ರಾಜಕೀಯದ ಸ್ವರೂಪವನ್ನು ದೊಡ್ಡ ಮಟ್ಟದಲ್ಲಿ ಬದಲಿಸುವುದೂ ಖಚಿತ.

ಖರ್ಗೆ ವಾರ್ನಿಂಗ್

ಈ ಮಧ್ಯೆ ದಿಲ್ಲಿಗೆ ಹೋದಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿರುವ ಮಾತು ಕರ್ನಾಟಕದ ಕಾಂಗ್ರೆಸಿಗರನ್ನು ಚಿಂತೆಗೀಡು ಮಾಡಿದೆ.

‘ಪಾರ್ಲಿಮೆಂಟ್ ಚುನಾವಣೆಯಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳು ವೋಟು ತರುತ್ತವೆ ಅಂತ ನಂಬಿಕೊಂಡು ಕೂರಬೇಡಿ. ಈ ಹಿಂದೆ ರಾಜಸ್ತಾನದಲ್ಲಿದ್ದ ಕಾಂಗ್ರೆಸ್ ಸರಕಾರವೂ ಜನರಿಗೆ ೭ ಗ್ಯಾರಂಟಿಗಳನ್ನು ಕೊಟ್ಟಿತ್ತು. ಅವು ಜಾರಿಯಲ್ಲಿದ್ದರೂ ಅಸೆಂಬ್ಲಿ ಎಲೆಕ್ಷನ್ನಿನಲ್ಲಿ ಮತದಾರರು ಬಿಜೆಪಿ ಪರವಾಗಿ ಸೀಲು ಒತ್ತಿದರು’ ಅಂತ ಎಚ್ಚರಿಸಿರುವ ಖರ್ಗೆಯವರು ರಾಜ್ಯದ ಕಾಂಗ್ರೆಸ್ ನಾಯಕರಿಗೆ ಮತ್ತೊಂದು ಗುಟ್ಟು ಹೇಳಿದ್ದಾರಂತೆ. ಕರ್ನಾಟಕದ ನೆಲೆಯಲ್ಲಿ ಕಾಂಗ್ರೆಸ್
ಗಣನೀಯ ಸೀಟುಗಳನ್ನು ಗೆಲ್ಲದಿದ್ದರೆ ತಾವು ನೈತಿಕ ಹೊಣೆ ಹೊತ್ತು ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವುದು ಅನಿವಾರ್ಯವಾಗಬಹುದು ಎಂಬುದು ಈ ಸೀಕ್ರೆಟ್ಟು.

ಖರ್ಗೆಯವರು ಹೀಗೆನ್ನಲು ಅವರಿಗಿರುವ ಫೀಡ್‌ಬ್ಯಾಕು ಕಾರಣ. ಅದೆಂದರೆ, ಪಾರ್ಲಿಮೆಂಟ್ ಎಲೆಕ್ಷನ್ನಿನ ಕಣಕ್ಕಿಳಿಯಲು ಸಿದ್ದರಾಮಯ್ಯ ಸಂಪುಟದ ಬಹುತೇಕ ಸಚಿವರು ತಯಾರಿಲ್ಲ. ಇವತ್ತು ದೇಶದಲ್ಲಿ ಬಿಜೆಪಿ ಎಬ್ಬಿಸಿರುವ ರಾಮನ ಅಲೆಯನ್ನು ಎದುರಿಸಿ ಗೆಲ್ಲುವುದು ಸಣ್ಣ ರಿಸ್ಕು ಅಲ್ಲ. ಒಂದು ವೇಳೆ ಗೆದ್ದರೂ ದಿಲ್ಲಿಗೆ ಹೋಗಿ ಮಾಡುವುದೇನು? ಎಂಬು ದು ಅವರ ಚಿಂತೆ. ಇವತ್ತು ಬಿಜೆಪಿ-ವಿರೋಧಿ ರಾಜಕಾರಣದ ನೆಲೆ ಎಂದು ಗುರುತಿಸಲಾಗಿರುವ ‘ಇಂಡಿಯ’ ಒಕ್ಕೂಟ ದಿನಗಳೆದಂತೆ ದುರ್ಬಲವಾಗುತ್ತಿದೆ. ಶುರುವಿನಲ್ಲಿ ಬಬ್ರುವಾಹನನ ಪೋಸು ಕೊಟ್ಟ ಜೆಡಿಯು ನಾಯಕ ನಿತೀಶ್ ಕುಮಾರ್ ಈಗ ಬಿಹಾರದಲ್ಲಿ ಬಿಜೆಪಿ ಜತೆ ಸೇರಿ ಸರಕಾರ
ರಚಿಸಿದ್ದಾರೆ.

ಇನ್ನು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಪಶ್ಚಿಮಬಂಗಾಳದಲ್ಲಿ ನಮಗೆ ಕಾಂಗ್ರೆಸ್ ಸಹವಾಸವೇ ಬೇಡ ಎಂದಿದ್ದಾರೆ. ಹೀಗೇ ಒಂದು ಕಡೆಯಿಂದ ನೋಡುತ್ತಾ ಹೋದರೆ ‘ಇಂಡಿಯ’ ಒಕ್ಕೂಟದ ಹಲವು ನಾಯಕರು ಯೂ-ಟರ್ನ್ ಹೊಡೆದು ಕಾಂಗ್ರೆಸ್‌ನ ಆತ್ಮವಿಶ್ವಾಸ ಕಡಿಮೆಯಾಗುವಂತೆ ಮಾಡಿ ದ್ದಾರೆ. ಇಂಥ ಟೈಮಿನಲ್ಲಿ ಇರುವ ಮಂತ್ರಿಗಿರಿ ತೊರೆದು ದಿಲ್ಲಿಗೆ ಹೋಗುವುದೇ ಪ್ರಾಕ್ಟಿಕಲ್ ಅಲ್ಲ. ಹೋದರೂ ದಿಲ್ಲಿ ಗದ್ದುಗೆಯ ಮೇಲೆ ‘ಇಂಡಿಯ’ ಒಕ್ಕೂಟ ಸೆಟ್ಲಾಗುವು ದಿಲ್ಲ.

ಹೀಗಿರುವಾಗ ಕರ್ನಾಟಕದಲ್ಲಿ ನೆಲೆ, ದಿಲ್ಲಿಯಲ್ಲಿ ಬೆಲೆ ಕಳೆದುಕೊಂಡು ರಾಜಕಾರಣ ಮಾಡುವುದು ಬಹುತೇಕ ಸಚಿವರಿಗೆ ಇಷ್ಟವಿಲ್ಲ. ಅವರ ಈ ಪರಿಸ್ಥಿತಿ ಖರ್ಗೆಯವರಿಗೂ ಗೊತ್ತು. ಹೀಗಾಗಿ ನೀವು ಕಣಕ್ಕಿಳಿಯಿರಿ ಅಂತ ಅವರು ಯಾವ ಸಚಿವರ ಮೇಲೂ ಒತ್ತಡ ಹೇರುತ್ತಿಲ್ಲ. ಹಾಗಂತ ಕರ್ನಾಟಕದಲ್ಲಿ ೧೨-೧೫ ಸೀಟುಗಳನ್ನಾದರೂ ಪಕ್ಷ ಗೆಲ್ಲದೆ ಹೋದರೆ ತಮ್ಮ ಮೇಲೆ ಅಪವಾದ ಬರುವುದಂತೂ ಗ್ಯಾರಂಟಿ. ಸ್ವಂತ ರಾಜ್ಯದಲ್ಲೇ ಪಕ್ಷಕ್ಕೆ ಶಕ್ತಿ ತುಂಬದವರು ರಾಷ್ಟ್ರಮಟ್ಟದಲ್ಲಿ ಏನು ಶಕ್ತಿ ತುಂಬುತ್ತಾರೆ ಎಂಬ ಕುಹಕ ಕೇಳಿಬರುತ್ತದೆ. ಹಾಗಾದಾಗ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದು ಕಷ್ಟವಾಗುತ್ತದೆ ಎಂಬುದು
ಖರ್ಗೆಯವರ ಯೋಚನೆ. ಹೀಗಾಗಿ ದಿಲ್ಲಿಗೆ ಬಂದು ತಮ್ಮನ್ನು ಭೇಟಿ ಮಾಡಿದ ಹಲವು ಸಚಿವರ ಮುಂದೆ ಅವರು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ.

ಷಾ ಕೈಗೆ ‘ಅಮಿತ’ ಕಂಪ್ಲೇಂಟು

ಇನ್ನು ಫೆಬ್ರವರಿ ಎರಡನೇ ವಾರ ಕರ್ನಾಟಕಕ್ಕೆ ಬರಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಯಡಿಯೂರಪ್ಪ ವಿರೋಧಿ ಬಣ ಕಂಪ್ಲೇಂಟು ಕೊಡಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಅನುಭವಿಸಿದ ಸೋಲಿನ ನಂತರ ಕರ್ನಾಟಕಕ್ಕೆ ಬರುವ ಆಸಕ್ತಿಯನ್ನೇ ಕಳೆದುಕೊಂಡಿದ್ದ ಅಮಿತ್ ಶಾ ಈಗ ಪಾರ್ಲಿಮೆಂಟ್ ಎಲೆಕ್ಷನ್ನಿಗೆ ಸಂಬಂಽಸಿದಂತೆ ರಾಜ್ಯ ಬಿಜೆಪಿಗೆ ಟಾನಿಕ್ ಕೊಡಲು ಬರುತ್ತಿದ್ದಾರೆ. ಹೀಗೆ ಬಂದವರ ಕೈಗೆ ಕಂಪ್ಲೇಂಟು ಕೊಡುವುದು ಯಡಿಯೂರಪ್ಪ ವಿರೋಧಿ ಬಣದ ಯೋಚನೆ. ಕಾರಣ? ವಿಜಯೇಂದ್ರ ಅವರು ರಾಜ್ಯ ಬಿಜೆಪಿಯ ಅಧ್ಯಕ್ಷರಾದ ನಂತರ ಪಕ್ಷದಲ್ಲಿ ಅವರ ಆಪ್ತರೇ ತುಂಬಿಕೊಂಡು ಕೆಜೆಪಿ-೨ ಸಿನಿಮಾದಂತೆ ಕಾಣುತ್ತಿದೆ. ೩ ಜಿಲ್ಲೆಗಳಿಗೆ ಒಬ್ಬರು ಪ್ರಭಾರಿ ಮತ್ತು ಒಬ್ಬರು ಸಂಘಟನಾ ಕಾರ್ಯದರ್ಶಿ ಇರಬೇಕು ಎಂಬ ನಿಯಮವಿದ್ದರೆ ಸಂಘಟನಾ ಕಾರ್ಯದರ್ಶಿ ಹುದ್ದೆಗಳನ್ನು ಭರ್ತಿ ಮಾಡಲು ವಿಜಯೇಂದ್ರ ಉತ್ಸುಕತೆ ತೋರುತ್ತಿಲ್ಲ. ಈ ಸಂಬಂಧ ಸ್ವತಃ ಸಂಘಪರಿವಾರದ ನಾಯಕರು ಹೇಳಿದರೂ ವಿಜಯೇಂದ್ರ ಕೇರ್ ಮಾಡುತ್ತಿಲ್ಲ.

ಹೀಗೆ ಪಕ್ಷದ ಪದಾಧಿಕಾರಿಗಳ ಪಟ್ಟಿಯಿಂದ ಹಿಡಿದು ಎಲ್ಲ ಹಂತಗಳಲ್ಲೂ ಕೆಜೆಪಿ-೨ ತಲೆ ಎತ್ತಿರುವುದರಿಂದ ಪಾರ್ಲಿಮೆಂಟ್ ಚುನಾವಣೆಯಲ್ಲಿ ಹೈಕಮಾಂಡ್ ನಿರೀಕ್ಷಿಸಿದ ರಿಸಲ್ಟು ಬರುವುದಿಲ್ಲ. ಇವತ್ತು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ಸೇರಿ ಪಕ್ಷವನ್ನು ರೂಪಿಸಿರುವ ರೀತಿ ನೋಡಿ ದರೆ ಕರ್ನಾಟಕದ ೨೮ ಲೋಕಸಭಾ ಕ್ಷೇತ್ರಗಳ ಪೈಕಿ ಇವರು ೨೫ ಸೀಟುಗಳನ್ನು ಗೆಲ್ಲುವುದಿರಲಿ, ೨೦ರ ಬೌಂಡರಿಗೆ ತಲುಪಿದರೆ ಅದೇ ದೊಡ್ಡದು. ರಾಮಮಂದಿರದ ಅಲೆ ಏನಾದರೂ ಇಲ್ಲದೆ ಹೋಗಿದ್ದರೆ ೧೫ ಸೀಟುಗಳನ್ನು ಗೆಲ್ಲುವುದೂ ಕಷ್ಟವಿತ್ತು ಎಂಬುದು ಈ ಬಣದ ವಾದ. ಇದನ್ನು ಕೇಳಿ ಅಮಿತ್ ಶಾ ಏನು ಪರಿಹಾರ ನೀಡುತ್ತಾರೋ ಗೊತ್ತಿಲ್ಲ. ಆದರೆ ಯಡಿಯೂರಪ್ಪ ವಿರೋಧಿ ಬಣದ ಕಂಪ್ಲೇಂಟನ್ನು ಅವರು ಸಾರಾಸಗಟಾಗಿ ನಿರ್ಲಕ್ಷಿಸು ವುದೂ ಕಷ್ಟ. ಯಾಕೆಂದರೆ ಹಿಂದಿನಿಂದಲೂ ಈ ಬಣಕ್ಕೆ ತಾಯಿಪ್ರೀತಿ ಕೊಟ್ಟವರು ಅವರೇ ಅಲ್ಲವೇ?

ಕೇಂದ್ರ ಮಂತ್ರಿಗಿರಿಗೆ ‘ಕ್ಯೂ’

ಅಂದ ಹಾಗೆ, ಪಾರ್ಲಿಮೆಂಟ್ ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ಬಿಜೆಪಿಯ ಹಲವು ನಾಯಕರಲ್ಲಿ ಕೇಂದ್ರ ಸಚಿವರಾಗುವ ಕನಸು ಹುಟ್ಟಿ ಕೊಂಡಿದೆ. ಮೊನ್ನೆ ಮೊನ್ನೆಯ ತನಕ ರಾಜ್ಯಸಭೆಗೆ ಹೋಗುವ ಕನಸು ಕಾಣುತ್ತಿದ್ದ ಮಾಜಿ ಸಚಿವ ವಿ.ಸೋಮಣ್ಣ ಈಗ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸಲು ರೆಡಿ ಆಗುತ್ತಿರುವುದು ಇದೇ ಕಾರಣಕ್ಕಾಗಿ. ಮೂಲಗಳ ಪ್ರಕಾರ, ತುಮಕೂರಿನಿಂದ ಸ್ಪರ್ಧಿಸುವಂತೆ ಸೋಮಣ್ಣ ಅವರ ಮನವೊಲಿಸಿರುವ ಅಮಿತ್ ಶಾ, ‘ಹಿಂದೆ ವರುಣಾ ಕ್ಷೇತ್ರಕ್ಕೆ ನಿಮ್ಮ ಪರವಾಗಿ ಪ್ರಚಾರ ಮಾಡಲು ಬಂದಾಗ ನಾನೊಂದು ಮಾತು ಹೇಳಿದ್ದೆ. ಸೋಮಣ್ಣ ಅವರನ್ನು ತುಂಬ ಎತ್ತರದ ಸ್ಥಾನದಲ್ಲಿ ನೋಡುವುದು ನನ್ನಿಷ್ಟ ಎಂದಿದ್ದೆ. ಆ ಮಾತನ್ನು ನಾನು ಉಳಿಸಿಕೊಳ್ಳುತ್ತೇನೆ.

ಮೋದೀಜಿ ಸಂಪುಟದಲ್ಲಿ ನೀವು ಮಂತ್ರಿಯಾಗುವುದನ್ನು ನಿಶ್ಚಿತವಾಗಿ ನೋಡುತ್ತೇನೆ’ ಎಂದಿದ್ದಾರೆ. ಈ ಮಾತು ಕೇಳುತ್ತಿದ್ದಂತೆ, ನಂಗೆ ರಾಜ್ಯಸಭೆ ಇರಲಿ ಅಂತ ಹೇಳುತ್ತಿದ್ದ ಸೋಮಣ್ಣ ದಿಢೀರನೆ ಮನಸ್ಸು ಬದಲಿಸಿ ತುಮಕೂರು ಕ್ಷೇತ್ರದುದ್ದ ರಣರಣ ತಿರುಗಾಡತೊಡಗಿದ್ದಾರೆ. ಇನ್ನು ಮಾಜಿ ಸಚಿವ ಮುರುಗೇಶ್ ನಿರಾಣಿ ಅವರಿಗೂ ಕೇಂದ್ರ ಮಂತ್ರಿಯಾಗುವ ಕನಸು ಶುರುವಾಗಿದೆ. ಹೀಗಾಗಿ ಈ ಬಾರಿ ಬಾಗಲಕೋಟೆ ಕ್ಷೇತ್ರದಿಂದ ಟಿಕೆಟ್‌ಗೆ ಪಟ್ಟು ಹಿಡಿದಿರುವ ನಿರಾಣಿ ಅವರಿಗೆ ಸ್ವತಃ ಅಮಿತ್ ಶಾ ಅವರ ಬೆಂಬಲವಿದೆ. ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯು ವುದು ನಿಶ್ಚಿತವಾದಾಗ, ಅವರ ಜಾಗಕ್ಕೆ ನಿರಾಣಿಯವರನ್ನು ಕೂರಿಸಬೇಕು ಅಂತ ಕಸರತ್ತು ಮಾಡಿದವರಲ್ಲಿ ಅಮಿತ್ ಶಾ ಮುಖ್ಯರಾದವರು. ಅಂಥವರು, ಈ ಸಲ ಪಾರ್ಲಿಮೆಂಟಿಗೆ ಸ್ಪರ್ಧಿಸುತ್ತೇನೆ ಅಂತ ನಿರಾಣಿ ಹೇಳಿದಾಗಲೂ ‘ವೈ ನಾಟ್ ನಿರಾನೀಜೀ?’ ಅಂದಿದ್ದಾರಂತೆ.

ಇನ್ನು ರಾಜ್ಯ ಬಿಜೆಪಿಯಲ್ಲಿ ಪದೇ ಪದೆ ಗರ್ನಲ್ಲು ಸಿಡಿಸುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಇತ್ತೀಚೆಗೆ ಮೌನವಾಗಿದ್ದಾರಲ್ಲ? ಅವರಿಗೂ ಈಗ ಕೇಂದ್ರ ಮಂತ್ರಿಯಾಗುವ ನಿರೀಕ್ಷೆ ಇದೆ. ಇದಕ್ಕೆ ಯಥಾಪ್ರಕಾರ ಪಕ್ಷದ ವರಿಷ್ಠರೇ ಕಾರಣ. ಉಳಿದಂತೆ ಈ ಸಲ ಮರಳಿ ಶಿವಮೊಗ್ಗದಿಂದ ಗೆದ್ದು ಕೇಂದ್ರ ಮಂತ್ರಿಯಾಗುವ ಕನಸು ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರಲ್ಲೂ ಇದೆ. ಇದೇ ರೀತಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂಧ ಟಿಕೆಟ್ ಪಡೆಯಲು ಕಸರತ್ತು ನಡೆಸಿರುವ ಮಾಜಿ ಸಚಿವ ಸಿ.ಟಿ.ರವಿ, ಚುನಾವಣೆಯಲ್ಲಿ ಗೆದ್ದು ಒಕ್ಕಲಿಗರ ಕೋಟಾದಡಿ ಕೇಂದ್ರಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ.

ಇವರುಗಳಷ್ಟೇ ಅಲ್ಲ, ಇತ್ತೀಚೆಗೆ ಬಿಜೆಪಿಗೆ ವಾಪಸಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಇನ್ನೂ ಹಲಮಂದಿ ನಾಯಕರಿಗೆ ಮೋದಿ ಸಂಪುಟದಲ್ಲಿ ಮಂತ್ರಿಯಾಗುವ ಕನಸು ಶುರುವಾಗಿದೆ. ಅದು ಎಷ್ಟರ ಮಟ್ಟಿಗೆ ಈಡೇರುತ್ತದೆ ಅಂತ ಕಾದು ನೋಡಬೇಕು.