Wednesday, 11th December 2024

ಖೇಲೋ ಇಂಡಿಯಾ – ಜೀತೋ ಇಂಡಿಯಾ

ಅಭಿಮತ

ಪ್ರಕಾಶ್ ಶೇಷರಾಘವಾಚಾರ್‌

sprakashbjp@gmail.com

ಕೇವಲ ಕ್ರಿಕೆಟಿಗರು ಮಾತ್ರ ಎಲ್ಲ ಗಮನವನ್ನು ಸೆಳೆಯುತ್ತಿದ್ದ ಕಾಲವು ಬದಲಾಗಿ, ಅಂತಾರಾಷ್ಟ್ರೀಯ ವಿವಿಧ ಕ್ರೀಡೆ ಗಳಲ್ಲಿ ಭಾಗವಹಿಸಿದವರು ದೇಶದ ಜನತೆಯ ಗಮನ ಮಾತ್ರವಲ್ಲ, ಪ್ರಧಾನಿಗಳ ವಿಶೇಷ ಗಮನಕ್ಕೆ ಪಾತ್ರರಾಗು ತ್ತಿದ್ದಾರೆ. ಈ ಬೆಳವಣಿಗೆ ಯಿಂದ ಕ್ರೀಡಾಪಟುಗಳಿಗೂ ಉತ್ಸಾಹವು ಇಮ್ಮಡಿಸಿ ಹೆಚ್ಚಿನ ಸಾಧನೆ ಮಾಡಲು ಪ್ರೇರಕ ಶಕ್ತಿಯಾಗುತ್ತಿದೆ.

ಖೇಲೋ ಇಂಡಿಯಾ ಯುವ ಕ್ರೀಡಾಕೂಟ ಜೂನ್ ೪ರಿಂದ ಹರಿಯಾಣದಲ್ಲಿ ಆರಂಭ ವಾಗಿದೆ. ಭಾರತದ ಕ್ರೀಡಾ ಪ್ರತಿಭೆಗಳಿಗೆ ಉತ್ತಮ ವೇದಿಕೆಯೊದಗಿಸಲು ಮತ್ತು ಹೊಸ ಪ್ರತಿಭೆಗಳನ್ನು ಬೆಳಕಿಗೆ ತರಲು ‘ಖೇಲೋ ಇಂಡಿಯಾ’ ಯೋಜನೆಯಡಿಯಲ್ಲಿ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ.

ಕ್ರೀಡಾ ಕ್ಷೇತ್ರದಲ್ಲಿ ಭಾರತವು ಪ್ರಭಾವಿ ಶಕ್ತಿಯಾಗಿ ಬೆಳೆಯಲು ಭಾರತ ಸರಕಾರ 2017-18 ರಲ್ಲಿ ಖೇಲೋ ಇಂಡಿಯಾ ಯೋಜನೆಗೆ ಚಾಲನೆ ನೀಡಿತು. ಇದರ ಉದ್ದೇಶ ದೇಶದಲ್ಲಿ ಕ್ರೀಡಾ ಮೂಲಭೂತ ಸೌಕರ್ಯ ಹೆಚ್ಚಿಸುವುದು, ಕ್ರೀಡಾಪಟುಗಳಿಗೆ ತರಬೇತಿ ಪಡೆಯಲು ಸಹಾಯ ನೀಡುವುದು. ಜಿಲ್ಲೆಗೊಂದು ಖೆಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸುವುದು. ಮತ್ತು ಪ್ರತಿಯೊಂದು ಕೇಂದ್ರದಲ್ಲಿಯೂ ಮೂರು ಕ್ರೀಡೆಗಳ ಮೇಲೆ ಹೆಚ್ಚಿನ ಗಮನ ನೀಡುವುದು.

130ಕೋಟಿ ಜನಸಂಖ್ಯೆಯ ದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ, ಅದರಲ್ಲೂ ವಿಶೇಷವಾಗಿ ಒಲಿಂಪಿಕ್ ಸ್ಪರ್ಧೆಗಳಲ್ಲಿನ ಸಾಧನೆಯು ಅತ್ಯಂತ ಕಳಪೆಯಾಗಿದೆ. ಭಾರತಕ್ಕಿಂತ ಅತ್ಯಂತ ಸಣ್ಣಪುಟ್ಟ ರಾಷ್ಟ್ರ ಗಳಾದ ದಕ್ಷಿಣ ಕೊರಿಯಾ, ಜಪಾನ್ ದೇಶಗಳು ಕ್ರೀಡಾ ಸ್ಪರ್ಧೆಗಳಲ್ಲಿ ಮಹತ್ವದ ಸಾಧನೆ ತೋರುತ್ತಿರುವಾಗ ಭಾರತ ಮಾತ್ರ ಪರಿಸ್ಥಿತಿ ಬದಲಿಸಲು ಪ್ರಯತ್ನಿಸದೇ ಯಥಾಸ್ಥಿತಿ ಯನ್ನು ಜೋಪಾನವಾಗಿ ಕಾಪಾಡಿಕೊಂಡು ಬಂದಿತ್ತು. ಈ ಸನ್ನಿವೇಶವನ್ನು ಬದಲಾಯಿಸಬೇಕೆಂಬ ಛಲ ಸರಕಾರಗಳಿಗೂ ಇರಲಿಲ್ಲ ಮತ್ತು ಕ್ರೀಡಾಧಿಕಾರಿಗಳಿಗೂ ಯಾವ ಉಮೇದೂ ಇರಲಿಲ್ಲ.

ಹೊಸ ಹೊಸ ಪ್ರತಿಭೆಗಳನ್ನು ಶೋಧಿಸಿ ಅವರಿಗೆ ತರಬೇತಿ ಹಾಗೂ ಸೌಕರ್ಯ ಕಲ್ಪಿಸಬೇಕು ಎಂಬ ಆಸಕ್ತಿಯೇ ಇಲ್ಲವಾಗಿತ್ತು. ಇಂತಹ ನಿಸ್ತೇಜ ವಾತಾವರಣದಲ್ಲಿ ಸಿಲುಕಿದ್ದ ಕ್ರೀಡಾಪಟುಗಳು ಅತಿ ಸಾಧಾರಣ ಪ್ರದರ್ಶನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಿತ್ತು.
1928 ರಿಂದ 2020 ರವರೆಗಿನ ಸರಿಸುಮಾರು ಒಂದು ಶತಮಾನದ ಒಲಿಂಪಿಕ್ ಸ್ಪರ್ಧೆಗಳಲ್ಲಿ ಭಾರತ ಗಳಿಸಿದ್ದು, ಒಟ್ಟು ಕೇವಲ ಹತ್ತು ಚಿನ್ನದ ಪದಕಗಳನ್ನಷ್ಟೇ. ಅದರಲ್ಲೂ ಎಂಟು ಪದಕಗಳನ್ನು ಹಾಕಿಯಲ್ಲೇ ಗಳಿಸಿದ್ದು.

2008ರಲ್ಲಿ ಅಭಿನವ ಬಿಂದ್ರ ಶೂಟಿಂಗ್ ಸ್ಪರ್ಧೆಯಲ್ಲಿ ಮೊಟ್ಟ ಮೊದಲ ವೈಯಕ್ತಿಕ ಚಿನ್ನದ ಪದಕವನ್ನು ಗೆದ್ದರು. 2020 ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನೀರಜ್ ಛೋಪ್ರ ಜಾವಲಿನ್ ಥ್ರೋ ದಲ್ಲಿ ಮತ್ತೊಂದು ಚಿನ್ನವನ್ನು ಭಾರತಕ್ಕೆ ತಂದರು.
ಭಾರತ 1900ರಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿತು. ನಾರ್ಮನ್ ಪ್ರಿಟ್ ಚಾಡ್ ಅಥ್ಲಟಿಕ್ಸ್‌ನಲ್ಲಿ ಎರಡು ರಜತ ಪದಕ ಗೆದ್ದು ಒಲಿಂಪಿಕ್‌ನಲ್ಲಿ ಪದಕ ಗೆದ್ದ ಏಷ್ಯದ ಮೊದಲ ಕ್ರೀಡಾಪಟುವಾದರು. ಇಲ್ಲಿಯತನಕ ನಡೆದಿರುವ ಒಲಿಂಪಿಕ್ ಸ್ಪರ್ಧೆಗಳಲ್ಲಿ ಒಟ್ಟು 35 ಪದಕಗಳನ್ನು ಮಾತ್ರ ಭಾರತ ಗೆದ್ದಿರುವುದು. 2012ರಲ್ಲಿ ಆರು ಗೆದ್ದರೆ 2020 ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಗೆದ್ದ ಏಳು ಪದಕ ಈವರೆಗಿನ ಅತಿ ಹೆಚ್ಚು ಪದಕ ಗೆದ್ದಿರುವ ಸಾಧನೆಯಾಗಿದೆ.

ಇನ್ನು ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ನಾವು ಭಾಗವಹಿಸುತ್ತಿದ್ದೇವೆ ಎಂಬ ಹೆಗ್ಗಳಿಕೆ ಬಿಟ್ಟರೆ ಇಲ್ಲಿಯತನಕ ಒಂದೇ ಒಂದು ಪದಕ ಗೆಲಲೂ ಸಾಧ್ಯವಾಗಿಲ್ಲ. ಬಹಳ ವರ್ಷಗಳು ಭಾರತದಲ್ಲಿ ಕ್ರೀಡೆ ಎಂದರೆ ಕೇವಲ ಕ್ರಿಕೆಟ್ ಮಾತ್ರವೇನು ಎಂದು ಭಾಸವಾಗುವಷ್ಟು ದೇಶವನ್ನು ಆವರಿಸಿಕೊಂಡಿತ್ತು. ಕ್ರಿಕೆಟ್ ಮೋಹದ ಪರವಶೆಯಿಂದ ಇತರ ಕ್ರೀಡೆಗಳು ಸೊರಗಿ ಹೋಗಿದ್ದವು. ಟೆಲಿವಿಷನ್ ಆವಿಷ್ಕಾರದ ತರುವಾಯ ದೊಡ್ಡ ದೊಡ್ಡ ಉದ್ದಿ ಮೆಗಳು ಕ್ರಿಕೆಟ್‌ಗೆ ಮಾತ್ರ ತಮ್ಮ ಪ್ರಾಯೋಜಕತ್ವವನ್ನು ಸೀಮಿತಗೊಳಿಸಿದ್ದವು.

ಷಟಲ್ ಬ್ಯಾಡ್ಮಿಂಟನ್, ಚೆಸ್, ಬಿಲ್ಲುಗಾರಿಕೆ ಮುಂತಾದ ಕ್ರೀಡೆಯಲ್ಲಿ ಭಾರತ ಗಮನಾರ್ಹ ಸಾಧನೆಗೈದಿದ್ದರು ಅವು ಯಾವುದೂ ಮುನ್ನೆಲೆಗೆ ಬರಲೇ ಇಲ್ಲ. ಕ್ರೀಡಾ ಸಂಸ್ಥೆಗಳು ಕೆಲವೇ ಹಿಡಿಯಷ್ಟು ರಾಜಕಾರಣಿಗಳ ಕೈಯಲ್ಲಿ ಸಿಲುಕಿ ನಲುಗಿ ಹೋಗಿದ್ದವು. ಇಂಥವರು ದಶಕಗಳೇ ಕಳೆದರೂ ಸ್ಥಾನವನ್ನು ಬಿಟ್ಟುಕೊಡದೆ ತಳವೂರಿದ್ದರು. ಅಂತಿಮವಾಗಿ 2010ರಲ್ಲಿ ಕೇಂದ್ರ ಸರಕಾರ ಆರು ವರ್ಷಗಳ ಮಿತಿ ಹೇರಿದ ತರುವಾಯ ಅನೇಕರು ಸ್ಥಾನಪಲ್ಲಟಗೊಂಡರು.

ವಾಸ್ತವವಾಗಿ ರಾಜಕಾರಣಿಗಳು ಕ್ರೀಡಾಕ್ಷೇತ್ರದಿಂದ ದೂರವಿರಬೇಕು ಎಂದು ನ್ಯಾಯಾಲಯಗಳೂ ಅಭಿಮತವನ್ನು ವ್ಯಕ್ತ ಪಡಿಸಿವೆ. ಆದರೆ ಕೆಲವೊಮ್ಮೆ ಪ್ರಭಾವಿ ನಾಯಕರ ಉಪಸ್ಥಿತಿಯು ಕ್ರೀಡಾ ಚಟುವಟಿಕೆಗೆ ಹೆಚ್ಚು ಲಾಭದಾಯಕ ಆಗಿರುವುದರಲ್ಲಿ ಯಾವ ಸಂದೇಹವಿಲ್ಲ. 2010 ರಲ್ಲಿ ದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಸುರೇಶ್ ಕಲ್ಮಾಡಿಯವರು ಭ್ರಷ್ಟಾಚಾರ ಆರೋಪದ ಮೇಲೆ ಜೈಲು ಪಾಲಾಗಿದ್ದರು. 70000 ಕೋಟಿ ರುಗಳ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿಯೂ ಲಂಡನ್ ಒಲಿಂಪಿಕ್ಸ್ ನಲ್ಲಿ ಭಾರತದ ಪ್ರತಿನಿಧಿಯಾಗಿ ಇವರನ್ನು ಅಂದಿನ ಯುಪಿಎ ಸರಕಾರ ಕಳಿಸಲು ಅಣಿಯಾಗಿತ್ತು. ಆದರೆ ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ತಡೆಹಿಡಿಯಲಾಯಿತು.

ಕ್ರೀಡಾ ಕ್ಷೇತ್ರಕ್ಕೆ ದಟ್ಟವಾಗಿ ರಾಜಕೀಯದ ಹೊಲಸು ಮೆತ್ತಿಕೊಂಡು ಕ್ರೀಡಾಪಟುಗಳಲ್ಲಿ ಉತ್ಸಾಹ ಬತ್ತಿ ಹೋಗುವ ವಾತಾವರಣ ನಿರ್ಮಾಣವಾಗಿತ್ತು. ವಶೀಲಿಬಾಜಿ, ಹಣದ ಪ್ರಭಾವ, ಕಳಪೆ ಮೂಲಭೂತ ಸೌಕರ್ಯಗಳಿಂದ ಭಾರತೀಯ ಕ್ರೀಡೆಯಲ್ಲಿ ಪ್ರತಿಭೆ ಗಳು ಕಮರಿ ಹೋಗಿ ಸಾಲು ಸಾಲು ಕಳಪೆ ಪ್ರದರ್ಶನಕ್ಕೆ ಕಾರಣವಾಗಿತ್ತು. ಹೀಗಾಗಿ ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಮೇಜರ್ ಸರ್ಜರಿಯ ಅಗತ್ಯವಿತ್ತು. ಸ್ವತಃ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ನರೇಂದ್ರ ಮೋದಿಯವರು ಕ್ರೀಡಾ ಕ್ಷೇತ್ರಕ್ಕೆ ಹೊಸ ದಿಕ್ಕು ತೋರಲು ಉತ್ಸುಕರಾಗಿ, ಹೊಸ ಆರಂಭಕ್ಕೆ ಮುಂದಾದ ಫಲವೇ 2016ರಲ್ಲಿ ಭಾರತ ಸರಕಾರವು ‘ಖೇಲೋ
ಇಂಡಿಯಾ’ ಯೋಜನೆಯನ್ನು ಆರಂಭಿಸಿರುವುದು.

ಖೇಲೋ ಇಂಡಿಯಾ ಅಡಿಯಲ್ಲಿ ದೇಶಾದ್ಯಂತ ಪ್ರತಿಭೆಗಳನ್ನು ಹುಡುಕಲು ಮತ್ತು ಅವರಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸಲು ಖೇಲೋ ಇಂಡಿಯಾ ವಿಶ್ವವಿದ್ಯಾಲಯಗಳ ಕ್ರೀಡಾಕೂಟ, ಖೇಲೋ ಇಂಡಿಯಾ ಯೂತ್ ಗೇಮ್ಸ್ ಮತ್ತು ಖೇಲೋ ಇಂಡಿಯಾ ಚಳಿಗಾಲದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ. ದೇಶದ ಜಿಲ್ಲಾ ಕೇಂದ್ರಗಳಲ್ಲಿ ಖೇಲೋ ಇಂಡಿಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.

ಕ್ರೀಡಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಗ್ರಾಮೀಣ ಪ್ರತಿಭೆಗಳನ್ನು ಬೆಳಕಿಗೆ ತರುವುದಕ್ಕೆ ಸಹಾಯಕವಾಗಿದೆ. ಕೇಂದ್ರ ಸರಕಾರವು ಈ ಕೇಂದ್ರಗಳಿಗೆ ಅನುದಾನವನ್ನು ನೀಡುತ್ತಿದೆ. ಇನ್ನು ಕ್ರೀಡಾ ಮೂಲಭೂತ ಸೌಕರ್ಯ ಕಲ್ಪಿಸಲು ನಮ್ಮ ರಾಜ್ಯಕ್ಕೆ ಈಗಾಗಲೇ 50 ಕೋಟಿ ರು.ಗಳನ್ನು ನೀಡಲಾಗಿದೆ. ಕಳೆದ ತಿಂಗಳು ಖೇಲೋ ಇಂಡಿಯಾ ಕಾರ್ಯಕ್ರಮದ ಅಂಗವಾಗಿ ವಿಶ್ವವಿದ್ಯಾ ಲಯಗಳ ಕ್ರೀಡಾ ಕೂಟಕ್ಕೆ ಬೆಂಗಳೂರು ಆತಿಥ್ಯವಹಿಸಿತ್ತು. ಜೈನ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ರಾಜ್ಯ ಸರಕಾರ ಯಶಸ್ವಿಯಾಗಿ ಕ್ರೀಡಾಕೂಟವನ್ನು ಆಯೋಜಿಸಿತ್ತು. ಈ ಕ್ರೀಡಾ ಕೂಟಗಳು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಡೆಯುತ್ತವೆ. ಅತ್ಯುತ್ತಮ ಮೂಲಭೂತ ಸೌಕರ್ಯ ಕಲ್ಪಿಸಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಉತ್ತಮ ತರಬೇತುದಾರರ ಲಭ್ಯತೆ ಇರುವ ಕಾರಣ ಹೊಸ ಹೊಸ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ.

2024ರ ಒಲಿಂಪಿಕ್ ಕ್ರೀಡಾ ಕೂಟಕ್ಕೆ ಭಾರತದ ಸಿದ್ಧತೆ ಈಗಾಗಲೇ ಆರಂಭವಾಗಿದೆ. ನರೇಂದ್ರ ಮೋದಿಯವರು ಪ್ರತಿ ರಂಗದಲ್ಲಿಯು ಭಾರತೀಯರು ಶ್ರೇಷ್ಠತೆಯನ್ನು ಗಳಿಸಲು ಗಮನ ನೀಡಿದ್ದಾರೆ. ಕ್ರೀಡೆಯು ಅವರ ಆದ್ಯತೆಯ ಪಟ್ಟಿಯಲ್ಲಿ ಇದ್ದ
ಕಾರಣ ಮತ್ತು ಕ್ರೀಡಾ ಸಾಧನೆಯು ದೇಶದ ಗೌರವವನ್ನು ಹೆಚ್ಚಿಸುವ ಸಾಧನೆ ಎಂಬುದನ್ನು ಚನ್ನಾಗಿ ಅರಿತಿದ್ದಾರೆ. ಕ್ರೀಡಾ ಪಟುವಿಗೆ ಬೆನ್ನು ತಟ್ಟುವವರು, ಅವರ ಸಾಧನೆ ಯನ್ನು ಪ್ರೋತ್ಸಾಹಿಸುವವರು ಅತ್ಯಗತ್ಯ. ಮೈದಾನದಲ್ಲಿ ಪ್ರೇಕ್ಷಕರ ಕರತಾಡನ ಮತ್ತು ಹುರಿದುಂಬಿಸುವ ಕೂಗು ಕ್ರೀಡಾಪಟುವಿನ ಪ್ರದರ್ಶನವನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ.

ಹಾಗೆಯೇ ಗೆದ್ದ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳನ್ನು ದೇಶದ ಪ್ರಧಾನಿ ಸ್ವತಃ ತಮ್ಮ ನಿವಾಸಕ್ಕೆ ಕರೆದು ಬೆನ್ನು ತಟ್ಟುವ ಕೆಲಸ ಮಾಡುತ್ತಿದ್ದಾರೆ. ಇದು ನೂರಾರು ಕ್ರೀಡಾಪಟುಗಳಿಗೆ ಸೂರ್ತಿಯ ಸೆಲೆಯಾಗಿದೆ. ಮೋದಿಯವರು ಹುರಿದುಂಬಿಸುವ ರೀತಿಯಲ್ಲಿ ಈ ತನಕ ಯಾವುದೇ ಯಾವುದೇ ಪ್ರಧಾನಿಯವರು ಮಾಡಿದ ಉದಾಹರಣೆಯು ದೊರೆಯುವು ದಿಲ್ಲ. ರೋನಾ ಬಂದ್ ಕರೊ. ಟೋಕಿಯೋ ಒಲಿಂಪಿಕ್‌ನಲ್ಲಿ ಮಹಿಳಾ ಹಾಕಿ ತಂಡವು ಕಂಚಿನ ಪದಕವನ್ನು ಗೆಲ್ಲುವಲ್ಲಿ
ವಿಫಲರಾಗಿದ್ದರು. ದೂರವಾಣಿಯ ಮೂಲಕ ಮೋದಿಯವರು ಅವರಿಗೆ ಸಮಾಧಾನ ಹೇಳುವ ವೇಳೆ ದುಃಖಿತರಾಗಿ ಅವರು ಜೋರಾಗಿ ಅಳ ತೊಡಗಿದರು. ಮನೆಯ ಹಿರಿಯಣ್ಣನ ಹಾಗೆ ಮೋದಿಯವರು ‘ರೋನಾ ಬಂದ್ ಕರೊ’ ಎಂದು ಅವರನ್ನು ಗದರಿಸಿ ಸಾಂತ್ವನ ಹೇಳಿ ಆತ್ಮವಿಶ್ವಾಸವನ್ನು ತುಂಬುಲು ಮಾಡಿದ ಪ್ರಯತ್ನ ಈ ಕ್ರೀಡಾಪಟುಗಳ ಜೀವನದಲ್ಲಿ ಚಿರಸ್ಥಾಯಿ ಯಾಗಿ ಉಳಿಯಲಿದೆ.

ಥಾಮಸ್ ಕಪ್ ಗೆದ್ದ ಪುರುಷರ ಶಟಲ್ ಬ್ಯಾಡ್ಮಂಟಿನ್ ತಂಡದೊಂದಿಗೆ, ಉಬರ್ ಕಪ್‌ನಲ್ಲಿ ಭಾಗವಹಿಸಿದ ಮಹಿಳಾ ತಂಡವನ್ನು ತಮ್ಮ ನಿವಾಸದಲ್ಲಿ ಗೌರವಿಸಿದರು. 14 ವರ್ಷದ ಉನ್ನತಿ ಹೂಡಾ ತನ್ನ ಅನುಭವ ಹೇಳುವಾಗ ತಾವು ಮೆಡಲ್ ಗೆದ್ದವರು ಮತ್ತು ಗೆಲ್ಲದವರನ್ನು ಸಮಾನ ಗೌರವದಿಂದ ಕಾಣುತ್ತಾರೆ. ಇದು ಕ್ರೀಡಾಪಟುಗಳಿಗೆ ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದು ಹೇಳುತ್ತಾರೆ.

ಕಿವುಡರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ ಸ್ಪರ್ಧಿಗಳನ್ನು ಪ್ರಧಾನಿಯವರು ತಮ್ಮ ನಿವಾಸಕ್ಕೆ ಕರೆದು ಗೌರವ ಸಲ್ಲಿಸಿ ಅವರಿಗೆ ಆತ್ಮವಿಶ್ವಾಸ ಮೂಡಿಸುವ ಮಾತುಗಳನ್ನು ಹೇಳಿದ್ದಾರೆ. ಪ್ರಧಾನಿಗಳು ಕೇವಲ ಕ್ರೀಡೆಯೊಂದಕ್ಕೇ ಗಮನ ನೀಡಲಿಲ್ಲ. ದೈಹಿಕ ಸದೃಢತೆಯು ಎಲ್ಲರಿಗೂ ಅಗತ್ಯ ಎಂದು ‘ಫಿಟ್ ಇಂಡಿಯಾ’ ಅಭಿಯಾನಕ್ಕೂ ಚಾಲನೆ ನೀಡಿದ್ದಾರೆ. ಇದರಡಿಯಲ್ಲಿ ದೇಶೀಯ ಕ್ರೀಡೆಗೂ ಉತ್ತೇಜನ ನೀಡಲಾಗುತ್ತಿದೆ. ದೈಹಿಕ ಸದೃಢತೆಯ ಮಹತ್ವ ಮನದಟ್ಟು ಮಾಡಿ ಎಲ್ಲರೂ ತಮ್ಮ ಆರೋಗ್ಯದತ್ತ ಗಮನ ಹರಿಸಲು ‘ಫಿಟ್ ಇಂಡಿಯಾ ಮೊಬೈಲ್ ಆಪ್’ ಕೂಡ ಬಿಡುಗಡೆ ಮಾಡಿದ್ದಾರೆ.

ನಾಗರಿಕರನ್ನು ದಿನನಿತ್ಯ ವ್ಯಾಯಾಮ ಮತ್ತು ದೈಹಿಕ ಕಸರತ್ತಿನ ಮೂಲಕ ಸದೃಢರಾಗಿರಲು ಪ್ರೇರೇಪಿಸಲಾಗುತ್ತಿದೆ. ಕೇವಲ ಕ್ರಿಕೆಟಿಗರು ಮಾತ್ರ ಎಲ್ಲ ಗಮನವನ್ನು ಸೆಳೆಯುತ್ತಿದ್ದ ಕಾಲವು ಬದಲಾಗಿ, ಅಂತಾರಾಷ್ಟ್ರೀಯ ವಿವಿಧ ಕ್ರೀಡೆಗಳಲ್ಲಿ ಭಾಗ ವಹಿಸಿದವರು ದೇಶದ ಜನತೆಯ ಗಮನ ಮಾತ್ರವಲ್ಲ ಪ್ರಧಾನಿಗಳ ವಿಶೇಷ ಗಮನಕ್ಕೆ ಪಾತ್ರರಾಗುತ್ತಿದ್ದಾರೆ. ಈ ಬೆಳವಣಿಗೆಯಿಂದ ಕ್ರೀಡಾಪಟುಗಳಿಗೂ ಉತ್ಸಾಹವು ಇಮ್ಮಡಿಸಿ ಹೆಚ್ಚಿನ ಸಾಧನೆ ಮಾಡಲು ಪ್ರೇರಕ ಶಕ್ತಿಯಾಗುತ್ತಿದೆ.

ಇಂದು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸುವವರಿಗೆ ಹಣಕಾಸು ಕೊರತೆ ಇಲ್ಲ. ಉತ್ತಮ ತರಬೇತುದಾರರು ಲಭ್ಯ ವಿದ್ದಾರೆ ಮತ್ತು ತರಬೇತಿ ಪಡೆಯಲು ಉತ್ತಮ ಮೂಲಭೂತ ಸೌಕರ್ಯವು ಕಲ್ಪಿಸಲಾಗುತ್ತಿದೆ. ಈ ಎಲ್ಲ ಬದಲಾವಣೆಯಲ್ಲಿ ಖೇಲೋ ಇಂಡಿಯ ಯೋಜನೆ ಬಹು ಮುಖ್ಯ ಪಾತ್ರವಹಿಸುತ್ತಿದೆ. ಮುಂಬರುವ ದಿನಗಳಲ್ಲಿ ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ಕ್ರೀಡಾಶಕ್ತಿ ಯಾಗಿ ಎದ್ದು ನಿಲ್ಲುವ ದಿನ ಬಹು ದೂರವಿಲ್ಲ.