ಅಭಿವ್ಯಕ್ತಿ
ನಾಗೇಶ್ ಯು ಸಿದ್ದೇಶ್ವರ
ಇಸವಿ ೧೬೬೬. ಇಂಗ್ಲೆಂಡಿನಲ್ಲಿ ಬೇಸಿಗೆ ಮುಕ್ತಾಯವಾಗುತ್ತಿರುವ ಸಮಯ. ಒಬ್ಬ ಹುಡುಗ ವೂಲ್ಸ ಥ್ರೋಪೆ ಮೆನೋರ್ ಗಾರ್ಡನ್ನಲ್ಲಿ ಸೇಬಿನ ಮರದ ಕೆಳಗೆ ಕುಳಿತಿದ್ದ. ಮರದ ಮೇಲಿಂದ ಒಂದು ಸೇಬಿನ ಹಣ್ಣು ಅವನ ಹತ್ತಿರದಲ್ಲಿಯೇ ಬಿತ್ತು. ಅದೊಂದು ಸಾಮಾನ್ಯ ಘಟನೆ.
ಎಲ್ಲರಂತೆ ಆ ಹುಡುಗ ಬಿದ್ದ ಹಣ್ಣನ್ನು ಎತ್ತಿ ತಿಂದು ಹೋಗಬಹುದಿತ್ತು. ಅವನ ಮನದಲ್ಲಿ ಕುತೂಹಲ ಮೂಡಿ ಆಹಾ ಎಂಬ
ಉದ್ಗಾರದೊಂದಿಗೆ ಅನೇಕ ಪ್ರಶ್ನೆಗಳು ಎದುರಾದವು. ಈ ಹಣ್ಣು ಮರದಿಂದ ಭೂಮಿಯ ಮೇಲೆ ಏಕೆ ಬಿತ್ತು ? ಕಾರಣವೇನು ?ಮೇಲೆ ಯಾಕೆ ಹಾರಿ ಹೋಗಲಿಲ್ಲ? ಅಡ್ಡಾದಿಡ್ಡಿಯಾಗಿ ಯಾಕೆ ಚಲಿಸಲಿಲ್ಲ ? ಅಂದು ಆ ಹುಡುಗನ ಮನದಲ್ಲಿ ಎದ್ದ ಪ್ರಶ್ನೆಗಳು
ಭೌತಶಾಸ ಲೋಕದಲ್ಲಿ ಒಂದು ಅಭೂತಪೂರ್ವ ಕ್ರಾಂತಿಯನ್ನೇ ಮಾಡಿಬಿಟ್ಟಿತು.
ಒಂದು ದೊಡ್ಡ ಸಂಶೋಧನೆಗೆ ವಸ್ತುವಾಯಿತು. ವಿeನ ಜಗತ್ತಿನಲ್ಲಿ ಆ ಹುಡುಗನ ಬಾಯಿಂದ ಬಂದ ಉದ್ಗಾರದ ಕ್ಷಣವನ್ನು ‘ಆಹಾ ಮೊಮೆಂಟ್ ಒಫ್ ಸೆವೆಂಟಿನ್ಥ್ ಸೆಂಚುರಿ’ ಎಂದು ಗೌರವದಿಂದ ನಮೂದಿಸಲಾಗಿದೆ. ಆ ಹುಡುಗನ ಹೆಸರು ಐಸ್ಸಾಕ್ ನ್ಯೂಟನ್. ಮುಂದೆ ಈ ಜಗತ್ಪ್ರಸಿದ್ಧ ವಿಜ್ಞಾನಿ ಗುರುತ್ವಾಕರ್ಷಣದ ಸಾರ್ವತ್ರಿಕ ನಿಯಮಗಳನ್ನು (ಯೂನಿವರ್ಸಲ್ ಲಾ
ಒಫ್ ಗ್ರಾವಿಟೇಷನ್) ಜಗತ್ತಿಗೇ ಕೊಡುಗೆಯಾಗಿ ನೀಡಿದ. ಇದು ಭೂಮಿಯ ಮೇಲಿರುವ ವಸ್ತುಗಳಿಗಷ್ಟೇ ಅಲ್ಲ ಬ್ರಹ್ಮಾಂಡದಲ್ಲಿ ನಡೆಯುವ ಕ್ರಿಯೆಗಳು ಅಂದರೆ ಪ್ರಥ್ವಿ, ಚಂದ್ರ ಮುಂತಾದ ಗ್ರಹಗಳ ಚಲನೆಯ ಅಭ್ಯಾಸದ ಮೇಲೂ ಬೆಳಕು ಚೆಲ್ಲಿತು.!!
ಈ ಘಟನೆಯ ಹಿಂದೆ ಇಂದಿನ ಪೀಳಿಗೆಗೆ ಒಂದು ದಿವ್ಯ ಸಂದೇಶ ಇದೆ. ಶಾಲೆಯ ಪಠ್ಯ ಪುಸ್ತಕಗಳ ಅಭ್ಯಾಸವಷ್ಟೇ ಅಲ್ಲ ಸುತ್ತಮುತ್ತ ನಡೆಯುವ ಘಟನೆ, ವಿಚಾರ ವಿನಿಮಯಗಳ ಕುರಿತು ಕುತೂಹಲದಿಂದ ನೋಡೋಣ, ಯೋಚಿಸಿ ಪ್ರಶ್ನಿಸಿ ಸರಿಯಾದ ಉತ್ತರ ಪಡೆಯಲು ಪ್ರಯತ್ನಿಸೋಣ. ನ್ಯೂಟನ್ನ ಮಾತಿನ ಹೇಳುವದಾದರೆ ಈ ಜಗತ್ತಿನಲ್ಲಿ ಕೇವಲ ವಿವರಣೆ ಪಡೆಯುವ ಬದುಕಿನಗಿಂತ, ಚಕಿತರಾಗಿ ಕುತೂಹಲದಿಂದ ನೋಡುತ್ತ ಬದುಕಿರಿ (Live your life as an exclamation rather than an explanation).
ಓದಿದ ಅಥವಾ ನೋಡಿದ ಘಟನೆಗಳನ್ನು ಆಸಕ್ತಿಯಿಂದ ಅವಲೋಕಿಸಿದರೆ ಮಗುವಿನ ಮನಸ್ಸಿನಲ್ಲಿ ಕುತೂಹಲಭರಿತ ಪ್ರಶ್ನೆಗಳು ಏಳುತ್ತಿರುತ್ತದೆ. ಆ ಪ್ರಶ್ನೆಗಳಿಗೆ ಪೋಷಕರಿಂದ ಅಥವಾ ಗುರುಗಳಿಂದ ಸಮಾಧಾನಕರ ಉತ್ತರ ಸಿಗುವವರೆಗೂ ಪ್ರಯತ್ನ
ಮುಂದುವರಿಯಲಿ. ಅದೊಂದು ಪ್ರವೃತ್ತಿಯಾಗಿ ಬೆಳೆಯಲಿ.
ಇಂದಿನ ಧಾವಂತ ಜೀವನ ಪದ್ಧತಿಯಲ್ಲಿ ವಿಶೇಷತಃ ಉದ್ಯೋಗಕ್ಕೆ ಹೋಗುವ ತಂದೆ ತಾಯಿಯರಿಗೆ ಇದು ಸ್ವಲ್ಪ ಕಠಿಣವೇ ಸರಿ ತಾಳ್ಮೆಯೇ ಅಪ್ರತಿಮ ಪ್ರತಿಭೆಎಂಬುದನ್ನು ಯಾರೂ ಮರೆಯಬಾರದು. ಮಕ್ಕಳ ಕೆಲವು ಪ್ರಶ್ನೆಗಳಿಗೆ ಉತ್ತರಿಸುವದು ಸುಲಭವಲ್ಲ ಅಮ್ಮಾ ನಾನು ತಿನ್ನುತ್ತಿರುವ ಈ ಬಾಳೆಹಣ್ಣು ಯಾಕೆ ಮಾವಿನಹಣ್ಣಿನ ಆಕಾರದಲ್ಲಿ ಇಲ್ಲ ? ಹಲಸಿನ ಹಣ್ಣಿಗೆ ಮುಳ್ಳು ಯಾಕೆ
ಇದೆಯಮ್ಮಾ ? ಎಂಬ ತರಲೆ ಪ್ರಶ್ನೆಗಳಲ್ಲದೇ ಅನೇಕ ಮುಜುಗರದ ಪ್ರಶ್ನೆಗಳನ್ನೂ ಮಕ್ಕಳು ಕೇಳಿಬಿಡುತ್ತಾರೆ.
ಮಕ್ಕಳಿಗೆ ಅತೃಪ್ತಿ ಯಾಗದಂತೆ ಉತ್ತರಿಸುವುದು ಒಂದು ಕಲೆ .!! ಮಕ್ಕಳ ಪ್ರಶ್ನೆಗೆ ಯೋಗ್ಯವಾಗಿ ಸ್ಪಂದಿಸಿ ಪ್ರಶ್ನೆ ಕೇಳುವಂತೆ ಪ್ರೋತ್ಸಾಹಿಸಲು ಪಾಲಕರಿಗೆ ಈ ಅಂಶಗಳು ತಿಳಿದಿರಿರಲಿ. ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವಾಗ ಹಿರಿಯರೂ ಮಕ್ಕಳ ಮಟ್ಟಕ್ಕೆ ಇಳಿಯಬೇಕಾಗುತ್ತದೆ. ಮಕ್ಕಳ ಕಲ್ಪನೆಗೆ ನಿಲುಕುವಂತೆ ಉತ್ತರಿಸಬೇಕು. ಗಹನವಾದ ವಿಚಾರಗಳನ್ನು ಸರಳವಾಗಿ ಹೇಳುವ ಕಲೆ ಯನ್ನು ಬೆಳೆಸಿಕೊಳ್ಳಬೇಕು.
ಭೂಮಿಯೂ ತನ್ನ ಸುತ್ತಲೂ ತಿರುಗುತ್ತ ಸೂರ್ಯನ ಸುತ್ತಲೂ ತಿರುಗುತ್ತದೆ ಎಂಬ ಖಗೋಳ ಶಾಸ್ತ್ರವನ್ನೂ ಒಂದು ಬುಗುರಿಗೆ ಹೋಲಿಸಿ, ಬುಗುರಿಯನ್ನು ನೆಲದ ಮೇಲೆ ಉರುಳಿಸಿ ವಿವರಿಸಿ ಹೇಳಿದ ಪ್ರಾಥಮಿಕ ಶಿಕ್ಷಕರೂ ಇದ್ದಾರೆ. ಜತೆಗೆ ಕವಿ ದಿನಕರ ದೇಸಾಯಿಯವರ ಕವಿತೆ ತಿರುಗುವ ಪ್ರಥ್ವಿಯೂ ಆ ದೇವನ ಬುಗುರಿ, ಗಗನದ ಗುಡುಗೇ ಅವನ ನಗಾರಿ ಎಂದು ಹಾಡಿದ ಗುರುಗಳು
ಎಂದೆಂದೂ ಮರೆಯದಂತೆ ವಿಜ್ಞಾನವನ್ನು ಸರಳವಾಗಿ ಚಿಕ್ಕ ಮಕ್ಕಳಿಗೆ ಅರುಹಿದ ಪಾಠವನ್ನು ನಾವು ಮರೆಯಲು ಸಾಧ್ಯವಿಲ್ಲ.
ಕೆಲವೊಮ್ಮೆ ಮಕ್ಕಳು ಒಂದೇ ಪ್ರಶ್ನೆಯನ್ನು ಪದೇ ಪದೇ ಕೇಳುತ್ತಾರೆ. ಬಹುಶಃ ಸಿಕ್ಕ ಉತ್ತರ ಅವರಿಗೆ ಸಮಾಧಾನ ತಂದಿರಲಿಕ್ಕಿಲ್ಲ ಅಥವಾ ಆ ಮಗು ತನ್ನ ಕಲ್ಪನೆಯಲ್ಲಿರುವ ಒಂದು ಉತ್ತರದ ನಿರೀಕ್ಷೆಯಲ್ಲಿ ಇರಬಹುದು. ಇದನ್ನು ಅರ್ಥ ಮಾಡಿಕೊಂಡು
ಪೋಷಕರು ಉತ್ತರಿಸಬೇಕು. ಎಷ್ಟೋ ಪೋಷಕರು ತಮ್ಮ ಹಾವ-ಭಾವ, ನಡೆ ನುಡಿಗಳಿಂದಲೂ ಮಕ್ಕಳಿಗೆ ಅರ್ಥವಾಗುವಂತೆ
ಉತ್ತರಿಸುತ್ತಾರೆ. ನಮ್ಮ ಗೆಳೆಯನ ಮೊಮ್ಮಗ ಅಮ್ಮಾ, ಗುಮ್ಮ’ ಎಂದರೇನು ಎಂದು ಪ್ರಶ್ನಿಸಲು ಪ್ರಾರಂಭಿಸಿದ. ಆ ಶಬ್ಧವನ್ನು ಯಾರೋ ಆ ಹುಡುಗನಿಗೆ ಹೇಳಿ ಭಯ ಹುಟ್ಟಿಸಿದ್ದರು.
ಒಂದು ದಿನ ಅಮ್ಮ ತನ್ನ ತಲೆ ಮುಖ ಮತ್ತು ಅರ್ಧ ದೇಹವನ್ನು ಚಾದರದಿಂದ ಮುಚ್ಚಿಕೊಂಡು ಮಗನಿಗೆ ತೋರಿಸಿ ಇಲ್ಲಿದೆ ಗುಮ್ಮ ಎಂದಳು. ಚಾದರವನ್ನು ಸರಿಸಿ ಮುಗುಳ್ನಕ್ಕು ಪ್ರೀತಿಯಿಂದ ಮೈದಡವಿ ಪುಟ್ಟಾ ನಾನೇ ಗುಮ್ಮ ಎಂದಳು. ಆ ಪುಟ್ಟ ಹುಡುಗ ಒಮ್ಮೆ ಹೆದರಿದರೂ ಗುಮ್ಮನ ಬಗ್ಗೆ ಮುಂದೆಂದೂ ಕೇಳಲಿಲ್ಲ!!
ಮಕ್ಕಳ ಪ್ರಶ್ನೆಗೆ ಉತ್ತರಿಸುವಾಗ ಪೋಷಕರು ಸಣ್ಣ ಸಣ್ಣ ಕತೆಗಳು ಮತ್ತು ನಮ್ಮ ಸುತ್ತ ಮುತ್ತ ಕಾಣಸಿಗುವ ದೃಶ್ಯಗಳ ಮೂಲಕ ಉತ್ತರಿಸಿದರೆ ಒಳ್ಳೆಯದು. ಹಿತೋಪದೇಶದ ಕತೆಗಳು, ರಾಮಾಯಣ ಮಹಾ ಭಾರತದ ಸಂದರ್ಭಗಳ ಆಧಾರದಲ್ಲಿ ಉತ್ತರಿಸಿದರೆ
ಮಕ್ಕಳಿಗೆ ಸಮಾಧಾನಕರ ಉತ್ತರದೊಂದಿಗೆ ರಂಜನೆಯೂ ಸಿಗುತ್ತದೆ.
ಮನೆಯಿರಲಿ, ಶಾಲೆಯಿರಲಿ ಮಕ್ಕಳಿಗೆ ಪ್ರಶ್ನೆ ಕೇಳಲು ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯ ಆಹಾ ಎಷ್ಟೊಂದು ಸುಂದರ ಪ್ರಶ್ನೆ ! ನೀನೆಷ್ಟು ಬುದ್ಧಿವಂತ ! ಎಂದು ಹೇಳಿ ಮಕ್ಕಳನ್ನು ಪ್ರಶ್ನೆ ಕೇಳುವಂತೆ ಪ್ರೇರೇಪಿಸಬಹುದು. ಕರೋನಾ ಅವಾಂತರ ಪ್ರಾರಂಭವಾಗಿ ೧೦ ತಿಂಗಳುಗಳೇ ಕಳೆದಿವೆ. ಮಕ್ಕಳ ವಿದ್ಯಾಭಾಸ ಪದ್ಧತಿಯಲ್ಲಿ ಏರುಪೇರಾಗಿದೆ. ವಿದ್ಯಾರ್ಥಿಗಳು ಪೋಷಕರು ಮತ್ತು ಶಿಕ್ಷಕರಿಗೆ ಇದೊಂದು ದೊಡ್ಡ ಸವಾಲು !
ಕ್ಲಾಸ್ ರೂಮ್ ಅಭ್ಯಾಸದ ಬದಲಾಗಿ ಆನ್ಲೈನ್ ಶಿಕ್ಷಣ ಅನಿವಾರ್ಯವಾಗಿದೆ. ವಿದ್ಯಾರ್ಥಿಗಳಿಗೆ ವಿಶೇಷವಾಗಿ ಗ್ರಾಮೀಣ ಭಾಗದಲ್ಲಿರುವವರಿಗೆ ಕಷ್ಟವಾಗಿರುವದಂತೂ ನಿಜ. ಮುಖ್ಯವಾಗಿ ಈ ರೀತಿಯ ಕಲಿಯುವಿಕೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮದ್ಯೆ ಪ್ರಶ್ನೋತ್ತರ ಪ್ರಕ್ರಿಯೆಗೆ ಇತಿಮಿತಿ ಇದೆ. ಅನೇಕ ಪೋಷಕರು ಮಕ್ಕಳ ಸಮಸ್ಯೆಗಳನ್ನು ಅರಿತು ಅವುಗಳ ಪರಿಹಾರಕ್ಕಾಗಿ ಈ ಸಮಯದಲ್ಲಿ ಮಾಡಿದ ಪ್ರಯತ್ನ ಸ್ವಾಗತಾರ್ಹ.
ಮಕ್ಕಳಲ್ಲಿ ಪ್ರಶ್ನಿಸುವ ಪ್ರವೃತ್ತಿಯನ್ನು ಪ್ರೋತ್ಸಾಹಿಸಬೇಕು ಎಂದು ಆಶಿಸುವ ನಾವು ಹಿರಿಯರು, ನಮಗೆ ಆ ಅಭ್ಯಾಸ ಇದೆಯೇ ?ಎಂದು ನಮ್ಮನ್ನು ನಾವೇ ಕೇಳಿಕೊಳ್ಳಬೇಕಾಗುತ್ತದೆ. ಇಂದು ನಮ್ಮ ಸುತ್ತಲೂ ಸಾಮಾಜಿಕ ಧಾರ್ಮಿಕ ಮತ್ತು ರಾಜಕೀಯವಾಗಿ ನಡೆಯುವ ಅನೇಕ ಸಮಸ್ಯೆ ಮತ್ತು ಅನ್ಯಾಯಗಳ ಬಗ್ಗೆ ದನಿ ಎತ್ತುವ ಧೈರ್ಯ ನಮಗಿದೆಯೇ? ನಮ್ಮ ಸ್ವಾರ್ಥ ದುರಾಸೆ ಮತ್ತು ಸಂಕುಚಿತ ಭಾವನೆಗಳಿಂದ ಮೇಲೆದ್ದು ಪ್ರಶ್ನಿಸುವ ಶಿಸ್ತು ಸಂಯಮ ನಾವು ಹೊಂದಿದ್ದೇವೆಯೇ?.
ಮುಂದಿನ ಪೀಳಿಗೆಗೆ ನಾವು ಮಾರ್ಗದರ್ಶಕರಾಗಬೇಕಾದರೆ ಈ ಪ್ರಶ್ನೆಗಳಿಗೆ ಸಕಾರಾತ್ಮಕವಾಗಿ ಉತ್ತರಿಸಬೇಕಾಗುತ್ತದೆ. ನಮ್ಮ ದೇಶದಲ್ಲಿ ಆಗಿಹೋದ ಮತ್ತು ಇಂದಿಗೂ ಅನ್ಯಾಯದ ಕುರಿತು ಪ್ರಶ್ನಿಸುವ ಆದರ್ಶವಾದಿಗಳನ್ನು ನಾವು ಅನುಕರಿಸಬೇಕು.
ಕೊನೆಯದಾಗಿ, ಮಕ್ಕಳಿಗೆ ಮತ್ತು ಯುವಕರಿಗೊಂದು ಕಿವಿಮಾತು. ಹೌದು, ಪ್ರಶ್ನಿಸಿ, ಉತ್ತರ ಸಿಗುವವರೆಗೂ ಪ್ರಶ್ನಿಸಿ. ಆದರೆ ಕೇವಲ ತೋರಿಕೆಗಾಗಿ ಅಥವಾ ಬೇರೆಯವರ ಜ್ಞಾನ ಪರೀಕ್ಷಿಸಲು ಪ್ರಶ್ನೆ ಕೇಳಬೇಡಿ.
ಒಂದು ಕತೆ ಆ ಊರಿಗೆ ಒಬ್ಬ ಸಂತ ಬಂದ. ಆತನ ಪ್ರವಚನಕ್ಕೆ ಜನಸಾಗರ ಸೇರುತ್ತಿತ್ತು. ಸಂತನ ಅಪಾರ ಜ್ಞಾನಕ್ಕೆ ಜನ ಬೆರಗಾಗಿದ್ದರು. ಜನರು ಎಷ್ಟೋ ಪ್ರಶ್ನೆಗಳನ್ನು ಕೇಳಿ ಸಂತನಿಂದ ಉತ್ತರ ಪಡೆದು ಕೃತಾರ್ಥರಾಗಿದ್ದರು. ಒಬ್ಬ ಹುಡುಗನಿಗೆ ಆ ಸಂತನನ್ನು ಪರೀಕ್ಷಿಸುವ ಬುದ್ಧಿ ಬಂತು. ಒಂದು ಗುಬ್ಬಿಯನ್ನು ತನ್ನ ಮುಷ್ಠಿಯಲ್ಲಿ ಹಿಡಿದು ಸಂತನ ಎದುರು ನಿಂತು
ಗುರುಗಳೇ ಈ ಹಕ್ಕಿ ಸತ್ತಿದೆಯಾ? ಜೀವಂತ ಇದೆಯಾ? ಎಂದು ಕೇಳಿದ. ಮಗು ಹಕ್ಕಿಯ ಭವಿಷ್ಯ ನಿನ್ನ ಕೈಲ್ಲಿದೆ. ಮುಷ್ಠಿ ಬಿಚ್ಚಿದರೆ ಹಕ್ಕಿ ಹಾರಬಲ್ಲದು ಮುಷ್ಠಿಯನ್ನು ಬಿಗಿ ಮಾಡಿದರೆ ಸಾಯುತ್ತದೆ ಎಂದು, ಮುಗುಳ್ನಕ್ಕ ಜ್ಞಾನಿ ಸಂತ.
ಹುಡುಗ ತನ್ನ ತಪ್ಪಿನ ಅರಿವಾಗಿ ಸಂತನ ಕಾಲಿಗೆರಗಿದ !. ಮಕ್ಕಳೇ ನಿಮ್ಮ ಕುತೂಹಲ ಕೇವಲ ಪಠ್ಯ ಪುಸ್ತಕ ಮತ್ತು ಶಾಲೆಯ ಪರೀಕ್ಷೆಗಳಿಗಷ್ಟೇ ಸೀಮಿತವಾಗದಿರಲಿ. ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಬೇಕೆಂಬ ನಿಮ್ಮ ಗುರಿಯೇನೋ ಸರಿ, ಆದರೆ ನಿಮ್ಮ ಗುರಿಯ ಜತೆಗೆ ಈ ಕೆಳಗಿನ ನಾಲ್ಕು ಪ್ರಶ್ನೆಗಳಿಗೆ ನೀವು ಉತ್ತರಿಸುತ್ತಿರಬೇಕು ಯಾಕೆ? ಯಾಕಾಗಬಾರದು? ನನ್ನಿಂದ ಯಾಕಾಗ ಬಾರದು? ಮತ್ತು ಈಗಲೇ ಯಾಕೆ ಮಾಡಬಾರದು? ಈ ನಾಲ್ಕು ಪ್ರಶ್ನೆಗಳ ಪ್ರಾಮಾಣಿಕ ಉತ್ತರಗಳೇ ಜಗತ್ತಿನ ಎಲ್ಲಾ ಸಾಧಕರ ಯಶಸ್ಸಿನ ಗುಟ್ಟು.
ಜಗತ್ಪ್ರಸಿದ್ಧ ವಿeನಿಯ ಯುವಾವಸ್ಥೆಯಲ್ಲಿಯೇ ಬಂದಂತಹ ಆಹಾ ಕ್ಷಣ ಪ್ರತಿಯೊಬ್ಬನೂ ಪಡೆಯಲು ಸಾಧ್ಯವಿದೆ. ಬೇಕಾಗಿರು ವದು ಕುತೂಹಲ ಮತ್ತು ನಮ್ಮ ಅಭ್ಯಾಸ/ ಕಂಡ ಘಟನೆಗಳಲ್ಲಿ ಏಳುವ ಪ್ರಶ್ನೆಗಳಿಗೆ ಉತ್ತರ ಪಡೆಯುವ ಶ್ರಮ!. ಮಕ್ಕಳೇ, ನಿಮಗೆ ಕುತೂಹಲದ ಕ್ಷಣಗಳು ಬರಲಿ , ಮುಂದಿನ ಜನಾಂಗಕ್ಕೆ ಐಸಾಕ್ ನ್ಯೂಟನ್ ನಂತಹ ವಿಜ್ಞಾನಿ, ಬ್ರಿಟಿಷರನ್ನು ಸತ್ಯ ಅಹಿಂಸೆ ಗಳಿಂದ ಪ್ರಶ್ನಿಸಿ ನಮಗೆ ಸ್ವಾತಂತ್ರ ತಂದ ಮಹಾತ್ಮಾ ಗಾಂಧಿ, ಪ್ರಧಾನಿ ಮೋದಿಜಿಯವರಂತ ರಾಜನೀತಿಜ್ಞ ಮತ್ತು ವಿಜ್ಞಾನಿ/
ಜನಾನುರಾಗಿ ನಾಯಕ ಅಬ್ದುಲ್ ಕಲಾಮ್ ಜಿ, ಸಿಗುವಂತಾಗಲಿ.
ಮಕ್ಕಳೇ ಇದು ನಿಮ್ಮ ಕೈಲ್ಲಿದೆ !! ಐಸಾಕ್ ನ್ಯೂಟನ್ನ ಒಂದು ಮಾತು ಸದಾ ನೆನಪಿರಲಿ ನಮಗೆ ಗೊತ್ತಿಲ್ಲದಿರುವದು ಸಾಗರದಷ್ಟು
ಗೊತ್ತಿರುವದು ಕೇವಲ ಒಂದು ಹನಿ ಮಾತ್ರ (What we know is a drop,what we don’t know is an ocean)