Wednesday, 11th December 2024

ಮರೆಯಲ್ಲಿ ನಿಂತು ವಾಲಿಯನ್ನು ವಧಿಸಿದ್ದು ಮೋಸವಲ್ಲವೇ ?

ರಾಮರಥ-೮

ಯಗಟಿ ರಘು ನಾಡಿಗ್

ರಾಮಾಯಣ ಕಥಾಪ್ರಸಂಗವನ್ನು ಓದಿದವರಿಗೆ ಮತ್ತು ದೃಶ್ಯರೂಪದಲ್ಲಿ ವೀಕ್ಷಿಸಿದವರಿಗೆ ಕಾಡುವ ಒಂದಷ್ಟು ಸಂಶಯ ಅಥವಾ ಪ್ರಶ್ನೆಗಳಲ್ಲಿ, ‘ಧರ್ಮಪರಾಯಣನಾದ, ಯುದ್ಧದ ನಿಯಮಗಳನ್ನು ಎಂದೂ ಉಲ್ಲಂಘಿಸದ ರಾಮನು, ಕಪಿರಾಜ ವಾಲಿಯೊಂದಿಗೆ ನೇರವಾಗಿ ಸೆಣಸದೆ, ಮರದ ಮರೆಯಲ್ಲಿ ನಿಂತು ಬಾಣ ಬಿಟ್ಟು ಕೊಂದಿದ್ದು ತರವೇ?’ ಎಂಬುದೂ ಒಂದು.

‘ವಾಲಿ ವಧೆ’ಯ ವೀಕ್ಷಕ ವಿವರಣೆಯನ್ನು ಓದುವುದಕ್ಕೂ ಮುನ್ನ, ಅದಕ್ಕೆ ಕಾರಣವಾಗಿದ್ದ ಅಥವಾ ಅದನ್ನು ಸುತ್ತುವರಿದಿದ್ದ ಒಂದಷ್ಟು ಸಂಗತಿಗಳನ್ನು ಅವಲೋಕಿ
ಸೋಣ. ರಾಕ್ಷಸರಾಜ ರಾವಣನಿಂದ ಸೀತಾಪಹರಣವಾದ ನಂತರ ರಾಮ-ಲಕ್ಷ್ಮಣರು ಆಕೆಯನ್ನು ಹುಡುಕುತ್ತಾ ದಕ್ಷಿಣ ಭಾರತದವರೆಗೆ ಬರುತ್ತಾರೆ. ಆಗ ಅವರಿಗೆ ಎದುರಾಗುವುದೇ ಋಷ್ಯಮೂಕ ಪರ್ವತ. ಅಲ್ಲಿ ಅವರಿಗೆ ಹನುಮಂತನ ಭೇಟಿಯಾಗುತ್ತದೆ. ತನ್ನೆದುರು ನಿಂತಿರುವುದು ಬೇರಾರೂ ಅಲ್ಲ, ತಾನು ವರ್ಷಗಳಿಂದ ಕಾಯುತ್ತಿದ್ದ, ಆರಾಧಿಸುತ್ತಿದ್ದ ‘ರಘುಕುಲಸೋಮ’ ಶ್ರೀರಾಮನೇ ಎಂದು ಅರಿವಾಗುತ್ತಿದ್ದಂತೆ ಹನುಮನ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಹೀಗಾಗಿ ಅವರಿಬ್ಬರನ್ನೂ ತನ್ನ ಒಡೆಯ ಸುಗ್ರೀವನ ಬಳಿಗೆ ಕೊಂಡೊಯ್ಯುತ್ತಾನೆ.

ಈ ಸುಗ್ರೀವನೂ ಒಂದು ತರಹದ ಸಂಕಷ್ಟದಲ್ಲಿ ಸಿಲುಕಿರುತ್ತಾನೆ. ಸುಗ್ರೀವನ ಪ್ರಿಯಪತ್ನಿ ರುಮೆಯನ್ನು ಆತನ ಅಣ್ಣ ವಾಲಿ ಅಪಹರಿಸಿ ಬಲವಂತವಾಗಿ ತನ್ನ
ಹೆಂಡತಿಯನ್ನಾಗಿ ಮಾಡಿಕೊಂಡಿರುತ್ತಾನೆ. ಸಾಲದೆಂಬಂತೆ, ಸುಗ್ರೀವನ ಸಾಮ್ರಾಜ್ಯ, ರಾಜಪರಿವಾರ, ಅರಮನೆ, ಸಿರಿ-ಸಂಪತ್ತು ಎಲ್ಲಕ್ಕೂ ವಾಲಿ ಲಗ್ಗೆಹಾಕಿ ತನ್ನ ವಶಮಾಡಿಕೊಂಡಿರುತ್ತಾನೆ. ಒಟ್ಟಾರೆ ಹೇಳುವುದಾದರೆ, ಪದಚ್ಯುತ ರಾಜ ಸುಗ್ರೀವ ಸಾಕಷ್ಟು ತೊಂದರೆಯಲ್ಲಿರುತ್ತಾನೆ. ಇಂಥವನ ಬಳಿಗೆ ಬರುವ ರಾಮ, ತನ್ನ ಆಗಮನದ ಕಾರಣ ಹೇಳಿದಾಗ, ‘ಸೀತಾಮಾತೆಯ ಶೋಧಕ್ಕೆ ನಮ್ಮ ಕಪಿಕುಲ ನಿಮಗೆ ನೆರವಾಗುತ್ತದೆ; ಪ್ರತಿಯಾಗಿ ನಿಮ್ಮಿಂದಲೂ ನಮಗೆ ಒತ್ತಾಸೆ ಬೇಕು’ ಎನ್ನುತ್ತಾನೆ ಸುಗ್ರೀವ.

‘ಅದೇನು ಬೇಕು, ಹೇಳು’ ಎನ್ನುತ್ತಾನೆ ರಾಮ. ಆಗ ಸುಗ್ರೀವ ತನ್ನ ನೋವಿನ ಕಥೆಯನ್ನೆಲ್ಲಾ ಹೇಳಿ ‘ನನ್ನ ಬಗ್ಗೆ ಅಪಾರ್ಥ ಮಾಡಿಕೊಂಡಿರುವ ಸೋದರ ವಾಲಿ,
ನನ್ನನ್ನು ಕೊಲ್ಲುವುದಾಗಿ ಹಠ ತೊಟ್ಟಿದ್ದಾನೆ. ಆತ ಯಾವುದನ್ನು ಬಿಟ್ಟರೂ ಛಲವನ್ನು ಬಿಡದ ಆಸಾಮಿ. ಹೀಗಾಗಿ, ನನಗೆ ನಿನ್ನ ನೆರವು ಬೇಕು ಪ್ರಭೂ’ ಎನ್ನುತ್ತಾನೆ.
ಅದಕ್ಕೆ ರಾಮನ ಮನಕರಗಿ, ವಾಲಿಯನ್ನು ಸಂಹರಿಸು ವುದಾಗಿ ಸುಗ್ರೀವನಿಗೆ ವಚನ ನೀಡಿಬಿಡುತ್ತಾನೆ. ಆದರೆ ವಾಲಿಯನ್ನು ಹಣಿಯುವುದು ಅಂದುಕೊಂಡಷ್ಟು ಸುಲಭದ ತುತ್ತಾಗಿರುವುದಿಲ್ಲ. ದೇವತೆಗಳ ರಾಜ ಇಂದ್ರನು ವರದ ರೂಪದಲ್ಲಿ ನೀಡಿದ ವಿಶಿಷ್ಟ ಹೂವಿನ ಹಾರವೊಂದು ವಾಲಿಯ ಕೊರಳಲ್ಲಿ ಯಾವಾಗಲೂ ರಾರಾಜಿಸುತ್ತಿರುತ್ತದೆ; ಅದನ್ನು ಧರಿಸಿರುವವರೆಗೆ ಮತ್ತೊಬ್ಬರು ವಾಲಿಯ ಕೂದಲು ಕೊಂಕಿಸುವುದೂ ದುಸ್ತರವಾಗಿರುತ್ತದೆ.

ಈ ಹಾರದ ಪ್ರಭಾವದಿಂದಾಗಿ ವಾಲಿಯು ತನ್ನ ಯಾವುದೇ ಎದುರಾಳಿಗೆ ಮಣ್ಣು ಮುಕ್ಕಿಸಬಲ್ಲಷ್ಟು ಸಮರ್ಥನಾಗಿರುತ್ತಾನೆ ಮತ್ತು ಅದರ ದುರುಪಯೋಗವನ್ನೂ ಪಡೆಯುತ್ತಿರುತ್ತಾನೆ. ಇಷ್ಟಾಗಿಯೂ, ವಾಲಿಯೊಂದಿಗೆ ದ್ವಂದ್ವಯುದ್ಧಕ್ಕೆ ತೊಡಗುವಂತೆ ರಾಮನು ಸುಗ್ರೀವನನ್ನು ಪ್ರೇರೇಪಿಸಿ ತಾನು ಮರವೊಂದರ ಮರೆಯಲ್ಲಿ ನಿಲ್ಲುತ್ತಾನೆ. ಮೊದಲೇ ಹೇಳಿದಂತೆ, ವಾಲಿಯ ವಿಶೇಷ ಶಕ್ತಿಯ ಮುಂದೆ ಸುಗ್ರೀವನ ಆಟ ಸಾಗುವುದಿಲ್ಲ. ಹೀಗಾಗಿ ಹೋರಾಟ ದಿಂದ ಸುಗ್ರೀವ ಕ್ಷಣಕ್ಷಣವೂ ಸುಸ್ತಾಗತೊಡಗುತ್ತಾನೆಯೇ ವಿನಾ ಅವನು ನಿರೀಕ್ಷಿಸಿದ ಪವಾಡವೇನೂ ಜರುಗುವುದಿಲ್ಲ.

ಹೀಗಾಗಿ ರಾಮ ಎಲ್ಲಿ ನಿಂತಿದ್ದಾನೆ, ಏನು ಮಾಡಲಿದ್ದಾನೆ ಎಂಬುದನ್ನು ಕಂಡುಕೊಳ್ಳಲು ಹಣಾಹಣಿಯ ಮಧ್ಯೆ ಆಗಾಗ ಕತ್ತು ಹೊರಳಿಸಿ ನೋಡುತ್ತಿರುತ್ತಾನೆ.
ಸುಗ್ರೀವ ಮತ್ತಷ್ಟು ಕುಸಿಯುತ್ತಿರುವುದು ರಾಮನಿಗೆ ಅರಿವಾಗಿ ತನ್ನ ಬಿಲ್ಲಿನ ಹೆದೆಯೇರಿಸಿ ಒಮ್ಮೆ ಮೀಟುತ್ತಾನೆ. ಅದರ ಠೇಂಕಾರಕ್ಕೆ ವಿಚಲಿತನಾಗುವ ವಾಲಿಯು
ಸುಗ್ರೀವನ ಮೇಲಿನ ಹಿಡಿತವನ್ನು ಕ್ಷಣಕಾಲ ಸಡಿಲಿಸಿ ಕೊಂಚ ತಿರುಗಿ ನೋಡುತ್ತಾನೆ. ಅಷ್ಟೇ! ಕ್ಷಣಾರ್ಧದಲ್ಲಿ ತೂರಿಬರುವ ರಾಮನ ಬಾಣ ವಾಲಿಯ ಎದೆಗೆ ನಾಟಿ ಆತ ಧರಾಶಾಯಿಯಾಗುತ್ತಾನೆ.

ವಾಲಿ ಮತ್ತೆ ಮೈಕೊಡವಿಕೊಂಡು ಎದ್ದು ನಿಲ್ಲುವುದು ದುಸ್ತರ ಎಂದು ಖಾತ್ರಿಯಾಗುತ್ತಿದ್ದಂತೆ ಸುಗ್ರೀವ, ಆತನ ಮಂತ್ರಿಗಳು, ಪರಿವಾರದವರು ಹಾಗೂ ರಾಮ-
ಲಕ್ಷ್ಮಣರು ವಾಲಿಯನ್ನು ಸುತ್ತುವರಿಯುತ್ತಾರೆ. ದಿವ್ಯ ತೇಜದ ರಾಮನನ್ನು ನೋಡುತ್ತಿದ್ದಂತೆಯೇ, ಏನೆಲ್ಲಾ ‘ಪೂರ್ವವೃತ್ತಾಂತ’ ನಡೆದಿರಬಹುದು ಎಂಬುದನ್ನು ವಾಲಿ ಗ್ರಹಿಸುತ್ತಾನೆ. ಶ್ರೀರಾಮನ ಒತ್ತಾಸೆಯೊಂದಿಗೆ ಸುಗ್ರೀವ ತನಗೊಂದು ಗತಿ ಕಾಣಿಸಿದ್ದು ಅವನಿಗೆ ಅರಿವಾಗುತ್ತದೆ. ಆದರೆ ಅಷ್ಟರಲ್ಲಿ ಕಾಲ ಮಿಂಚಿಹೋಗಿರುತ್ತದೆ… ಮರಣಶಯ್ಯೆಯಲ್ಲಿದ್ದ ವಾಲಿ ಆಗ ರಾಮನನ್ನು ಕೇಳುವ ‘ಧರ್ಮಸೂಕ್ಷ್ಮ’ದ ಪ್ರಶ್ನೆಯೇ, ರಾಮನು ನಿಯಮೋಲ್ಲಂಘನೆ ಮಾಡಿದ ಎಂದು ಭಾವಿಸಿರುವ ಬಹುತೇಕರ ಪ್ರಶ್ನೆಯೂ ಆಗಿದೆ.

ಮರಣಸಂಕಟದಲ್ಲೇ ಮಾತಿಗೆ ಮುಂದಾಗುವ ವಾಲಿ, ‘ಅಯ್ಯಾ ರಾಮಾ, ನಿನ್ನನ್ನು ಧರ್ಮದ ಪ್ರತಿರೂಪ ಎಂದೇ ಭಾವಿಸಿದ್ದೆ. ಆದರೆ ನೀನು, ಮರದ ಮರೆಯಲ್ಲಿ ನಿಂತು ನನ್ನ ಮೇಲೆ ಬಾಣಬಿಟ್ಟೆ. ಇದು ಯುದ್ಧ ನಿಯಮದ ಉಲ್ಲಂಘನೆ ಯಲ್ಲವೇ? ಇದಕ್ಕೆ ನಿನ್ನಂಥ ಶೂರನೇ ಬೇಕಿತ್ತೇ? ಧನ- ಕನಕ, ವಜ್ರ-ವೈಡೂರ್ಯದಂಥ ಸಿರಿ- ಸಂಪತ್ತಿಗೋ, ಸಿಂಹಾಸನ-ಸಾಮ್ರಾಜ್ಯವೇ ಮೊದಲಾದ ಅಧಿಕಾರದ ಲಾಲಸೆಗೋ ಯುದ್ಧ ಮಾಡುವುದು ವಾಡಿಕೆ; ಆದರೆ ರಾಮಾ, ನಮ್ಮಿಬ್ಬರ ಮಧ್ಯೆ ಇದ್ಯಾವುದೂ ಇಲ್ಲವಲ್ಲಪ್ಪಾ? ನನ್ನ ಚರ್ಮವನ್ನಂತೂ ನೀನು ಧರಿಸಲಾರೆ, ನನ್ನ ಮಾಂಸವನ್ನೂ ತಿನ್ನಲಾರೆ.

ಮರಗಳ ಎಲೆ-ಹಣ್ಣು ತಿಂದು ಬದುಕುವ ಪ್ರಾಣಿಯಾದ ನನಗೆ ನಿನ್ನಿಂದ ಈ ಸ್ಥಿತಿ ಒದಗಿದ್ದು, ಮನುಷ್ಯನಾದ ನಿನ್ನಿಂದಾದ ಪ್ರಾಣಿಹಿಂಸೆ ಯಾಗಲಿಲ್ಲವೇ?
ಇದೇನಾ ನಿಮ್ಮಂಥ ಮನುಷ್ಯರ ಧರ್ಮ? ಇದನ್ನೇ ಹೇಳುತ್ತದಾ ನಿನ್ನ ರಾಜಧರ್ಮ? ನೀನು ನನ್ನೆದುರಿಗೆ ಬಂದು ಸೆಣಸಾಟಕ್ಕಿಳಿದಿದ್ದರೆ ನಿನ್ನನ್ನು ಯಮಪುರಿಗೇ
ಅಟ್ಟುತ್ತಿದ್ದೆ ಎಂಬುದನ್ನು ಬಲ್ಲೆಯಾ? ಅಪಹೃತ ಪತ್ನಿಗಾಗಿ ನೀನು ಹುಡುಕುತ್ತಿರುವೆಯೆಂದೂ, ಹಾಗೆ ಅಪಹರಿಸಿ ದವನು ರಾವಣನೆಂದೂ ನನಗೆ ಗೊತ್ತಾಯಿತು.
ನೀನೊಂದು ಮಾತು ಹೇಳಿದ್ದಿದ್ದರೆ ಆತನ ಹೆಡೆಮುರಿ ಕಟ್ಟಿ ನಿನ್ನ ಪಾದಗಳಿಗೆ ಬೀಳಿಸುತ್ತಿದ್ದೆ; ಆದರೆ ಅಪಹರಣದ ವಿಷಯವನ್ನು ನೀನು ನನ್ನಲ್ಲಿ ಅರಿಕೆ ಮಾಡಿಕೊಳ್ಳದೆ ತನ್ನನ್ನೇ ರಕ್ಷಿಸಿಕೊಳ್ಳಲಾಗದ ಸುಗ್ರೀವನಲ್ಲಿ ನೆರವು ಕೇಳಿರುವೆಯಲ್ಲಾ? ಈ ರಣಹೇಡಿ ಸುಗ್ರೀವನಿಗಾಗಿ ನನ್ನ ಮೇಲೆ ಬಾಣ ಬಿಟ್ಟಿದ್ದು ಮೋಸವಲ್ಲವೇ?’ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ.

ವಾಲಿಯ ಈ ಒಂದೊಂದು ಮಾತು ಓದಿದಾಗಲೂ, ‘ಹೌದಲ್ಲಾ? ರಾಮ ಮಾಡಿದ್ದು ಮೋಸವಲ್ಲವೇ?’ ಎಂದು ಶ್ರದ್ಧಾವಂತರ ಮನಸ್ಸು ಅರೆಕ್ಷಣ ಹೊಯ್ದಾಡುವುದು ಖರೆ. ಆದರೆ ತನ್ನ ಈ ಕೃತ್ಯಕ್ಕೆ ರಾಮ ನೀಡಿದ ಸಮರ್ಥನೆ ಅರಿವಾದರೆ, ಅಂಥ ಸಂಶಯದ ಮೋಡಗಳೆಲ್ಲ ಅರೆಕ್ಷಣ ದಲ್ಲೇ ಮಾಯವಾಗುತ್ತವೆ. ವಾಲಿಯ ಅಷ್ಟೂ ಅಳಲನ್ನು ಗಮನವಿಟ್ಟು ಕೇಳಿಸಿಕೊಳ್ಳುವ ರಾಮ ಹೇಳುತ್ತಾನೆ: “ಅಯ್ಯಾ ವಾಲಿ, ಧರ್ಮ ಮತ್ತು ಯುದ್ಧನಿಯಮಗಳನ್ನು ಪರಿಪೂರ್ಣವಾಗಿ ಅರಿಯದೆ ನನ್ನ ಮೇಲೆಯೇ ಆರೋಪಿ ಸುತ್ತಿರುವ ನಿನ್ನ ಅಲ್ಪಜ್ಞಾನಕ್ಕೆ ಏನನ್ನುವುದು? ಕೇಳು ಇಲ್ಲಿ, ನೀವೆಲ್ಲಾ ನೆಲೆಸಿರುವ ಈ ಭೂಭಾಗವು ಇಕ್ಷ್ವಾಕು ವಂಶಕ್ಕೆ ಸೇರಿದ್ದು; ನಮ್ಮ ಸಾಮ್ರಾಜ್ಯದ ವ್ಯಾಪ್ತಿಯಲ್ಲಿನ ಯಾವುದೇ ಪ್ರದೇಶದಲ್ಲಿ ಅನ್ಯಾಯ-ಅಧರ್ಮ-ಅಕ್ರಮ ನಡೆದರೆ ಅದರ ದಮನಕ್ಕೆ ಇಕ್ಷ್ವಾಕು ಕುಲಸಂಜಾತರು ಸರ್ವತಂತ್ರ
ಸ್ವತಂತ್ರರು.

ಒಡಹುಟ್ಟಿದ ತಮ್ಮನು ದೊಡ್ಡಣ್ಣನಿಗೆ ಮಗನಿಗೆ ಸಮಾನ; ಅಂದರೆ ಸುಗ್ರೀವನಿಗೆ ನೀನು ತಂದೆಯ ಸಮಾನ. ಆತನ ಪತ್ನಿ ರುಮೆ ವರಸೆಯಲ್ಲಿ ನಿನಗೆ ಸೊಸೆ
ಯಾಗಬೇಕು. ಆದರೆ, ಸುಗ್ರೀವ ಬದುಕಿರುವಾಗಲೇ ಆಕೆಯನ್ನು ಲಪಟಾಯಿಸಿ ಬಲವಂತವಾಗಿ ಪತ್ನಿಯನ್ನಾಗಿಸಿಕೊಂಡಿರುವೆಯಲ್ಲಾ, ನಿನಗೆ ಹೆಣ್ಣಲ್ಲಿ ಕಾಮವನ್ನು ಬಿಟ್ಟರೆ ಬೇರೇನೂ ಕಾಣುವುದಿಲ್ಲವೇ? ‘ಧರ್ಮಾನುಯಾಯಿ’ ಆಗಬೇಕಿರುವ ರಾಜ ‘ಕಾಮಾನುಯಾಯಿ’ ಆದರೆ ಧರ್ಮಾಧರ್ಮದ ಕುರಿತು ಪ್ರಶ್ನಿಸುವ ಹಕ್ಕನ್ನೇ ಕಳೆದು ಕೊಳ್ಳುತ್ತಾನೆ. ಮಾವ ಎನಿಸಿಕೊಂಡವನು ಸೊಸೆಯನ್ನೇ ಕಾಮಿಸಿದರೆ ಎಷ್ಟು ಪಾಪವೋ, ನಿನ್ನ ಕುಕೃತ್ಯಕ್ಕೂ ಅಷ್ಟೇ ದೋಷವಿದೆ. ಧರ್ಮಸೂತ್ರದ ಪ್ರಕಾರ ಸಾವೇ ಇದಕ್ಕೆ ಶಿಕ್ಷೆ. ಕ್ಷತ್ರಿಯನಾದ ಮತ್ತು ಈ ಸಾಮ್ರಾಜ್ಯದ ಧಣಿಯಾದ ನನಗೆ ನಿನ್ನನ್ನು ಶಿಕ್ಷಿಸುವ ಅಧಿಕಾರವಿದೆ.

ನಿನ್ನ ಕಾಮಾಂಧತೆಯ ಅರಿವಾಗಿಯೂ ನಿನ್ನನ್ನು ಶಿಕ್ಷಿಸದಿದ್ದರೆ, ನಿನ್ನ ಪಾಪ ನನಗೆ ಸುತ್ತಿಕೊಳ್ಳುತ್ತದೆ. ಸುಗ್ರೀವನ ಬದಲಿಗೆ ನಿನ್ನೊಂದಿಗೆ ಗೆಳೆತನ ಮಾಡಿದ್ದರೆ ರಾವಣನ ಹೆಡೆಮುರಿ ಕಟ್ಟಿ ಸೀತೆಯನ್ನು ತಂದುಕೊಡುತ್ತಿದ್ದೆ ಎಂಬ ನಿನ್ನ ಪ್ರಲಾಪವೂ ಹಾಸ್ಯಾಸ್ಪದ; ಏಕೆಂದರೆ, ಮೊದಲಿಗೆ ನಿನ್ನಂಥ ಅಧರ್ಮಿಯೆಡೆಗೆ ನಾನು ಸ್ನೇಹಹಸ್ತ ಕೈಚಾಚುವುದೇ ಇಲ್ಲ; ಹೀಗಿರುವಾಗ ನಿನ್ನಿಂದ ನೆರವು-ಆಶ್ರಯ ಕೋರುವ ಮಾತೆಲ್ಲಿಯದು?! ನೀನು ಸುಗ್ರೀವನೊಂದಿಗೆ ಸೆಣಸುತ್ತಿರುವಾಗ, ಸಂಬಂಧವೇ ಇರದ ನಾನು ಮರದ ಮರೆಯಲ್ಲಿ ನಿಂತು ನಿನ್ನ ಮೇಲೆ ಬಾಣ ಪ್ರಯೋಗಿಸಿದ್ದಕ್ಕೆ ಆಕ್ಷೇಪಿಸುತ್ತಿರುವೆಯಲ್ಲವೇ? ಕೇಳು ಇಲ್ಲಿ, ಬೇಟೆಯ ನಿಯಮ
ಗಳು ನಿನಗೆ ಗೊತ್ತಿಲ್ಲವೆನಿಸುತ್ತದೆ.

ಹೇಳಿ ಕೇಳಿ ನೀನು ವಾನರ. ನನ್ನಂಥ ಮಾಂಸಾಹಾರಿ ಕ್ಷತ್ರಿಯನು ಯಾವುದೇ ಪ್ರಾಣಿಯನ್ನು ಬೇಟೆಯಾಡಬೇಕಾದರೂ, ಆ ಪ್ರಾಣಿಯು ತನ್ನ ಸಂಗಾತಿಯೊಂದಿಗೆ ಪ್ರಣಯಕೇಳಿಯಲ್ಲಿ ನಿರತವಾಗಿ ರುವ ವೇಳೆಯ ಹೊರತಾಗಿ ಯಾವಾಗ ಬೇಕಿದ್ದರೂ, ಯಾವ ವಿಧಾನದಿಂದಲೂ ಅದನ್ನು ಕೊಲ್ಲಬಹುದು. ಅದರಲ್ಲೂ, ಅತಿರೇಕವಾಗಿ ತೊಂದರೆ ಕೊಡುವ ಪ್ರಾಣಿಗಳನ್ನು ಯಾವ ವಿನಾಯಿತಿ ನೀಡದೆ ಕೊಲ್ಲುವುದು ಕ್ಷತ್ರಿಯ ಧರ್ಮದ ಪರಿಪಾಲನೆಯೇ ವಿನಾ, ನೀನು ಹೇಳಿದಂತೆ ಅಧರ್ಮವಲ್ಲ, ನಿಯಮೋಲ್ಲಂಘನೆಯಲ್ಲ. ಈ ಎಲ್ಲ ನೀತಿ-ನಿಯಮಗಳ ಅನುಸಾರವಾಗಿಯೇ ನಾನು ನಿನ್ನ ಮೇಲೆ ಬಾಣಪ್ರಯೋಗಿಸಿದ್ದೇನೆ”.

ರಾಮನ ಮಾತುಗಳಿಗೆ ಮಾರುತ್ತರ ನೀಡುವ ಚೈತನ್ಯ ವಾಗಲೀ, ಜ್ಞಾನವಾಗಲೀ ವಾಲಿಯಲ್ಲಿ ಅಂತರ್ಗತವಾಗಿ ರಲಿಲ್ಲ. ಸುಮ್ಮನೆ ‘ರಾಮವಾಣಿ’ ಕೇಳಿಸಿಕೊ ಳ್ಳುತ್ತ ಅವನ ರೂಪವನ್ನು ಕಣ್ತುಂಬಿಕೊಳ್ಳುತ್ತಿದ್ದ ವಾಲಿ, ರಾಮನ ನುಡಿ ಸಂಪನ್ನಗೊಳ್ಳುತ್ತಿದ್ದಂತೆ ಕಣ್ಣುಗಳನ್ನು ಶಾಶ್ವತವಾಗಿ ಮುಚ್ಚಿದ. ತನ್ನ ಅಷ್ಟೆಲ್ಲ ಕುಕೃತ್ಯಗಳು, ಕಾಮಾಂಧತೆ, ವಾಲಿಗೆ ಮಾಡಿದ ವಂಚನೆಯ ಹೊರತಾ ಗಿಯೂ ವಾಲಿಯು ಮರಣಾನಂತರ ಉತ್ತಮಲೋಕ ವನ್ನೇ ಸೇರಿ ಕೊಂಡನಂತೆ! ಕಾರಣವೇನು ಗೊತ್ತೇ? ತಾನು ಶಾಶ್ವತವಾಗಿ ಕಣ್ಣುಮುಚ್ಚುವ ಸಮಯದಲ್ಲಿ ಸಾಕ್ಷಾತ್ ಶ್ರೀರಾಮನ ದರ್ಶನ ಪಡೆಯುವ ಪುಣ್ಯಕ್ಷಣ ಆತನಿಗೆ ಒದಗಿಬಂದಿತ್ತು!

ಹೀಗೆ ಪರಮಪಾಪಿಗಳು, ಪತಿತರನ್ನೂ ಪಾವನರನ್ನಾಗಿಸಿ ಮೋಕ್ಷನೀಡುವ ದಿವ್ಯಶಕ್ತಿಯಿರುವುದು, ರಾಮನಿಗೆ ಮತ್ತು ರಾಮನಾಮ ಸ್ಮರಣೆಗೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ ವಷ್ಟೇ? ಈಗ ಹೇಳಿ, ನಿಮಗೇನನ್ನಿ ಸುತ್ತೆ? ಸುಗ್ರೀವನ ಅಣ್ಣ ವಾಲಿಯನ್ನು ರಾಮ ಕೊಂದ ರೀತಿ ಮೋಸದ್ದೇ?

(ಲೇಖಕರು ಪತ್ರಕರ್ತರು)