Saturday, 14th December 2024

Kiran Upadhyay Column: ಲೋಕೋಮೋಟಿವ್‌ಗಿಂತ ದೊಡ್ಡದು ಮೋಟಿವೇಷನ್‌

ವಿದೇಶವಾಸಿ

ಕಿರಣ್‌ ಉಪಾಧ್ಯಾಯ, ಬಹ್ರೈನ್

ಇಂದು ನಾವು ರತನ್ ಟಾಟಾ ಅವರನ್ನು ಭಾರತದ ವಾರೆನ್ ಬಫೆಟ್ ಎಂದು ಹೇಳುತ್ತೇವೆ. ತಮ್ಮ ಆದಾಯದ ಶೇ.೬೬ರಷ್ಟನ್ನು ಅವರು ದಾನ ಮಾಡುತ್ತಾರೆ ಎಂಬ ಕಥೆ ಕೇಳುತ್ತೇವೆ, ವರದಿ ಓದುತ್ತೇವೆ. ಯಾಕಾಗಬಾರದು? ಅವರು ನಡೆದದ್ದು ಹಿರಿಯರಾದ ಜೆಆರ್‌ಡಿ ಹಾಕಿಕೊಟ್ಟ ಸ್ಪೂರ್ತಿಯ ಹಾದಿಯಲ್ಲಿ ತಾನೆ?

ಭಾರತದ, ಅಲ್ಲ, ವಿಶ್ವದ ಅಪ್ಪಟ ರತ್ನ, ರತನ್ ಟಾಟಾ ಇನ್ನಿಲ್ಲ ಎನ್ನುವುದು ನಿಜಕ್ಕೂ ಖೇದಕರ ವಿಷಯ. ಈ
ವಿಷಯ ಕೇಳಿದಾಗಿನಿಂದಲೂ ಮನದಲ್ಲಿ ಒಂದು ದ್ವಂದ್ವ. ಈ ವಾರದ ಅಂಕಣ ರತನ್ ಟಾಟಾ ಬಗ್ಗೆ ಬರೆಯು ವುದೋ, ಬೇಡವೋ? ‘ಟಾಟಾ’ ಎಂಬ ಹೆಸರೇ ಅಂಥದ್ದು. ನಾನಷ್ಟೇ ಅಲ್ಲ, ವಿಶ್ವದಾದ್ಯಂತ ಜನರು ಒಂದಲ್ಲ ಒಂದು ರೀತಿಯಲ್ಲಿ ಅವರಿಗೆ ಅಂತಿಮ ನಮನ ಸಲ್ಲಿಸುತ್ತಿರುವಾಗ, ನಾನು ಮನಸಾರೆ ಇಷ್ಟಪಟ್ಟ ವ್ಯಕ್ತಿಗೆ ಅಂತಿಮ ನಮನ ಸಲ್ಲಿಸದಿದ್ದರೆ ಹೇಗೆ? ಅಂಕಣದ ರೂಪದಲ್ಲಿ ನಮಿಸೋಣ ಎಂದರೆ, ಅವರು ನಮ್ಮನ್ನು ಬಿಟ್ಟು ಹೋದಾಗಿನಿಂದ ಎಲ್ಲ ಮಾಧ್ಯಮಗಳಲ್ಲೂ ಅವರದ್ದೇ ಸುದ್ದಿ.

ಅವರ ಜೀವನ, ಸಾಧನೆ, ದಯೆ, ದಾನ, ವ್ಯಾಪಾರ-ವ್ಯವಹಾರ, ಎಲ್ಲವೂ ವಿವರವಾಗಿ ಸುದ್ದಿಯಾಗಿದೆ. ಸುದ್ದಿಮನೆ ಯವರು ಹೇಳಿದ ಅಂಶಗಳನ್ನೇ ನಾನು ಆರಿಸಿಕೊಂಡು ಸಾಣಿಸಿ, ಸೂಸಿ ಬರೆಯುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ. ಅವರಿಗೆ ಗೊತ್ತಿಲ್ಲದ, ನನಗೆ ಮಾತ್ರ ತಿಳಿದ ವಿಷಯ ಏನಾದರೂ ಇದೆಯೇ ಎಂದರೆ ಅದೂ ಇಲ್ಲ. ರತನ್ ಟಾಟಾ ಆಪ್ತರಾದ ಪ್ರಸಿದ್ಧ ನ್ಯಾಯವಾದಿ ಹರೀಶ್ ಸಾಲ್ವೆಯವರಿಂದ ಹಿಡಿದು, ಬರಹಗಾರ-ಉದ್ಯಮಿ ಸುಹೇಲ್ ಸೇಠ್‌ವರೆಗೆ ಎಲ್ಲರೂ ಅವರ ಕುರಿತು ಮಾತನಾಡಿದ್ದಾರೆ.

ಆದ್ದರಿಂದ ಈ ವಾರ ರತನ್ ಟಾಟಾ ಕುರಿತು ಅಂಕಣ ಬರೆಯುವ ನಿರ್ಧಾರವನ್ನು ಅಲ್ಲಿಗೇ ಬಿಟ್ಟಿದ್ದೆ. ಯಾರೇ ನಮನ ಸಲ್ಲಿಸಲಿ, ಬಿಡಲಿ, ಯಾರೇ ಅವರ ಬಗ್ಗೆ ಬರೆಯಲಿ, ಬಿಡಲಿ, ಆ ಮಹಾನ್ ಚೇತನದ ಹೆಸರು ಭಾರತದ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿರುತ್ತದೆ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.

ವ್ಯಾಪಾರ ಹೇಗೆ ಮಾಡಬೇಕು, ಉದ್ಯಮವನ್ನು ಹೇಗೆ ಬೆಳೆಸಬೇಕು, ಸಿಬ್ಬಂದಿಗಳನ್ನು ಹೇಗೆ ನೋಡಿಕೊಳ್ಳಬೇಕು,
ಸಮಾಜಕ್ಕೆ ಏನು ಕೊಡಬೇಕು, ಒಟ್ಟಿನಲ್ಲಿ ಆದರ್ಶ ವ್ಯಕ್ತಿಯಾಗಿ ಹೇಗೆ ಬದುಕಬೇಕು ಎಂದು ತೋರಿಸಿಕೊಟ್ಟವರು ರತನ್ ಟಾಟಾ, ಅಥವಾ ಅವರ ಪೂರ್ವಜರು. ಇದನ್ನು ಭಾರತೀಯನಾಗಿ ನಾನು ಹೇಳುವುದಕ್ಕಿಂತ, ಭಾರತೀಯರ ಬಾಯಿಂದ ಕೇಳುವುದಕ್ಕಿಂತ, ಬೇರೆಯವರ ಬಾಯಿಂದ ಕೇಳಿದಾಗ ಗೌರವ ನೂರ್ಮಡಿಯಾಗುತ್ತದೆ.

ಬಹ್ರೈನ್ ಉದ್ಯಮಿ ಫರೀದ್ ಬದರ್ ಅವರ ಕಚೇರಿಗೆ ನಿನ್ನೆ ಹೋಗಿದ್ದೆ. ಈ ಮೊದಲೂ ಅವರ ಕುರಿತಾಗಿ ಒಂದು ಅಂಕಣದಲ್ಲಿ ಬರೆದಿದ್ದೆ. ಅವರ ಬಳಿ ಹೋದರೆ ಬುದ್ಧಿಗೆ ಏನಾದರೂ ಆಹಾರ ಸಿಗುತ್ತದೆ. ನಿನ್ನೆ ಮಾತು ಆರಂಭಿಸು ತ್ತಿದ್ದಂತೆಯೇ ಅವರು ಟಾಟಾ ಹೆಸರನ್ನು ಪ್ರಸ್ತಾಪ ಮಾಡಿದ್ದರು. ‘ನಿಮ್ಮ ದೇಶದ ಹೆಸರಾಂತ ಉದ್ಯಮಿ ರತನ್ ಟಾಟಾ ತೀರಿಹೋದರಂತೆ, ನಿಮ್ಮ ದೇಶ ಒಬ್ಬ ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಿತು’ ಎಂದರು. ‘ನಿಮಗೆ ಅವರ ಹೆಸರಿನ ಅರ್ಥ ಗೊತ್ತೇ?’ ಎಂದು ಕೇಳಿದೆ.

‘ಅಮೂಲ್ಯವಾದ ರತ್ನ ಅಂತ ತಿಳಿಯಿತು, ಆ ಹೆಸರು ಅವರಿಗೆ ಸರಿಯಾಗಿ ಹೊಂದುತ್ತದೆ’ ಎಂದರು. ಹಾಗೆಯೇ ಅವರ ಮತ್ತು ಜೆಆರ್‌ಡಿ ಟಾಟಾ ಕುರಿತಾದ ಒಂದಿಷ್ಟು ಕಥೆ, ಘಟನೆಗಳನ್ನು ಹೇಳಲಾರಂಭಿಸಿದರು. ಎರಡನೆಯ ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ನಡೆದ ಒಂದು ಘಟನೆಯನ್ನು ಸಂಕ್ಷಿಪ್ತವಾಗಿ ಹೇಳುತ್ತ, ‘ಇದರ ವಿವರವನ್ನು ನಿಮಗೆ ವಾಟ್ಸ್ ಆಪ್‌ನಲ್ಲಿ ಕಳಿಸುತ್ತೇನೆ’ ಎಂದು ಸಂದೇಶವನ್ನು ರವಾನಿಸಿದರು.

ಅವರ ಮಾತು ಕೇಳುತ್ತಿದ್ದಾಗ, ‘ಪರವಾಗಿಲ್ಲ, ಕೆಲವು ಭಾರತೀಯರಿಗೂ ತಿಳಿಯದ ವಿಷಯಗಳನ್ನು ಇವರು ತಿಳಿದು ಕೊಂಡಿದ್ದಾರೆ’ ಅನ್ನಿಸಿತು. ಇದು ಎರಡನೆಯ ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ನಡೆದ ಘಟನೆ. ಆ ಮಹಾ ಯುದ್ಧದಲ್ಲಿ ಜರ್ಮನಿ ಸಾಕಷ್ಟು ಹಾನಿಗೊಳಗಾಗಿತ್ತು. ವಿರೋಧಿಗಳ ಸೇನೆ ಜರ್ಮನಿಯ ಎಲ್ಲ ನಗರಗಳ ಮೇಲೂ ಬಾಂಬ್ ದಾಳಿ ನಡೆಸಿತ್ತು.

ಜರ್ಮನಿಯ ಬಹುತೇಕ ನಗರಗಳೆಲ್ಲ ಧ್ವಂಸಗೊಂಡಿದ್ದವು. ಅದಕ್ಕೆ ಮ್ಯೂನಿಕ್ ನಗರವೂ ಹೊರತಾಗಿರಲಿಲ್ಲ. ಜರ್ಮನಿಯ ಬವೇರಿಯನ್ ಪ್ರಾಂತ್ಯದ ಮ್ಯೂನಿಕ್ ನಗರದ ಮೇಲೆ ಬರೋಬ್ಬರಿ 74 ವೈಮಾನಿಕ ದಾಳಿ ನಡೆದಿತ್ತು.
ಮ್ಯೂನಿಕ್ ನಗರದ ಅರ್ಧಕ್ಕಿಂತಲೂ ಹೆಚ್ಚು ಭಾಗ ಈ ದಾಳಿಗೆ ಛಿದ್ರವಾಗಿತ್ತು. ಆ ಕಾಲದಲ್ಲಿ ಮ್ಯೂನಿಕ್ ನಗರ ಡೀಸೆಲ್ ಎಂಜಿನ್‌ಗಳ ತಯಾರಿಕೆಗೆ ಹೆಸರುವಾಸಿಯಾಗಿತ್ತು. ಯುದ್ಧದ ಪರಿಣಾಮದಿಂದ ಅಲ್ಲಿಯ ಜನರಿಗೆ ರಾತ್ರಿ ಮಾತ್ರವಲ್ಲ, ಪ್ರತಿ ದಿನವೂ, ಮುಂಜಾನೆಯೂ ಕರಾಳವಾಗಿತ್ತು. ಆ ಕಾಲದಲ್ಲಿ ಮ್ಯೂನಿಕ್ ನಗರದಲ್ಲಿ ‘ಕ್ರಾಸ್ ಮಾಫಿ’ ಹೆಸರಿನ ಸಂಸ್ಥೆಯೊಂದು ಲೋಕೊಮೋಟಿವ್ ಎಂಜಿನ್ ತಯಾರಿಸುತ್ತಿತ್ತು.

ಮ್ಯೂನಿಕ್ ನಗರ ಯಂತ್ರಗಳ ತಯಾರಿಕೆಗೆ ಹೆಸರಾಗುವುದರಲ್ಲಿ ಈ ಸಂಸ್ಥೆಯ ಕೊಡುಗೆಯೂ ಪ್ರಮುಖವಾಗಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ. ಕ್ರಾಸ್ ಮಾಫಿ, 1838ರಲ್ಲಿ ಆರಂಭಗೊಂಡು, ನೂರಕ್ಕೂ ಹೆಚ್ಚು ವರ್ಷ ಪೂರೈಸಿತ್ತು. ಆದರೆ ವಿಶ್ವಯುದ್ಧದ ಸಂದರ್ಭದಲ್ಲಿ ಅತೀವ ಹಾನಿಗೊಳಗಾಗಿತ್ತು. ಕ್ರಾಸ್ ಮಾಫಿ ಕಾರ್ಖಾನೆಯಲ್ಲಿ, ಕಚೇರಿಯಲ್ಲಿ ಕೆಲಸಮಾಡುತ್ತಿದ್ದ ಅನೇಕ ಎಂಜಿನಿಯರ್ ಗಳು, ಇತರ ನೌಕರರು ಯುದ್ಧದ ಪ್ರಭಾವಕ್ಕೆ ಒಳಗಾಗಿದ್ದರು. ಉದ್ಯೋಗ ಕಳೆದುಕೊಂಡಿದ್ದ ಜನರಿಗೆ ಸಂಸಾರ ನಡೆಸುವುದೇ ಕಷ್ಟವಾಗಿತ್ತು.

ಒಂದು ಮುಂಜಾನೆ ಕ್ರಾಸ್ ಮಾಫಿ ಸಂಸ್ಥೆಯ ನಿರ್ದೇಶಕರು ಮ್ಯೂನಿಕ್ ರೈಲು ನಿಲ್ದಾಣದಲ್ಲಿ ಭಾರತದಿಂದ ಬರಲಿರುವ ತಮ್ಮ ಅತಿಥಿಗಾಗಿ ಕಾಯುತ್ತಿದ್ದರು. ರೈಲು ಬಂದು ನಿಂತಾಗ ಅದರಿಂದ 42 ವರ್ಷದ, ಸುಂದರ, ನೀಳಕಾಯದ ಜೆಆರ್‌ಡಿ ಟಾಟಾ ಕೆಳಗೆ ಇಳಿದರು. ಜೆಆರ್‌ಡಿ ಆಗ ಟಾಟಾ ಗ್ರೂಪ್ಸ್‌ನ ಅಧ್ಯಕ್ಷರಾಗಿದ್ದರು. ಅವರ ಜತೆಗೆ
ಟಾಟಾದ ಅಂಗಸಂಸ್ಥೆ ಟೆಲ್ಕೊದ ಸುಮಂತ್ ಮೂಲಗಾಂವ್ಕರ್ ಇದ್ದರು. ಭಾರತದಲ್ಲಿ ಲೋಕೊಮೋಟಿವ್ ಯಂತ್ರ ತಯಾರಿಸಲು ಕ್ರಾಸ್ ಮಾಫಿ ಸಂಸ್ಥೆಯ ಸಹಾಯ ಕೇಳಲು ಅವರು ಬಂದಿದ್ದರು.

ಆದರೆ ಅವರಿಗೆ ಯುದ್ಧದ ಪಳೆಯುಳಿಕೆಗಳನ್ನು ಬಿಟ್ಟರೆ ಬೇರೇನೂ ಕಾಣಲಿಲ್ಲ. ಅಂದು ಸಹಾಯ ಕೇಳಲು ಬಂದಿದ್ದ ಟಾಟಾ ಅವರನ್ನು ಕ್ರಾಸ್ ಮಾಫಿ ಸಂಸ್ಥೆಯ ನಿರ್ದೇಶಕರೇ ತಮಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು.
‘ನಮ್ಮ ಸಂಸ್ಥೆಯಲ್ಲಿ ಕೆಲಸ ಕಳೆದುಕೊಂಡ ಎಂಜಿನಿಯರ್‌ಗಳನ್ನು ಸಂಸಾರ ಸಮೇತ ನಿಮ್ಮಲ್ಲಿ ಕರೆದುಕೊಂಡು ಹೋಗಿ. ಅವರಿಗೆ ಉದ್ಯೋಗ, ತಲೆಯ ಮೇಲೊಂದು ಸೂರು, ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ಮಾಡಿಕೊಡಿ. ಅವರು ಒಳ್ಳೆಯ ಕೆಲಸಗಾರರು, ನೀವು ಹೇಳಿದ ಕೆಲಸವನ್ನು ಮಾಡುವುದಷ್ಟೇ ಅಲ್ಲ, ತಮ್ಮ ವಿದ್ಯೆಯನ್ನು ನಿಮ್ಮ ಜನರಿಗೆ
ಹೇಳಿಕೊಡುತ್ತಾರೆ. ಆದರೆ ಈ ಒಪ್ಪಂದ ಯಾವುದೇ ಕರಾರುಪತ್ರ ಇಲ್ಲದೆಯೇ ಆಗಬೇಕು’ ಎಂದಿದ್ದರು.

ಅದಕ್ಕೆ ಬಲವಾದ ಕಾರಣವಿತ್ತು. ಆಗ ಭಾರತದಲ್ಲಿ ಇನ್ನೂ ಬ್ರಿಟಿಷರ ಆಳ್ವಿಕೆ ಇತ್ತು. ವಿಶ್ವಯುದ್ಧದ ಸಂದರ್ಭ ವಾದದ್ದರಿಂದ ಜರ್ಮನಿಯೊಂದಿಗೆ ಯಾವುದೇ ರೀತಿಯ ಒಪ್ಪಂದ ಮಾಡಿಕೊಳ್ಳದಂತೆ ನಿರ್ಬಂಧ ಹೇರಲಾಗಿತ್ತು. ಹಾಗಾಗಿ ಇದನ್ನು ಕರಾರುಪತ್ರವಿಲ್ಲದೆ, ಗುಪ್ತವಾಗಿ, ಕೇವಲ ಭರವಸೆಯ ಮೇಲೆ ಮಾಡಬೇಕಿತ್ತು. ಟಾಟಾ ಸಂಸ್ಥೆಯ ಅಧ್ಯಕ್ಷರಾಗಿದ್ದ ಜೆಆರ್‌ಡಿ ಮತ್ತು ನಿರ್ದೇಶಕರಾಗಿದ್ದ ಮೂಲಗಾಂವ್ಕರ್ ಇದಕ್ಕೆ ಒಪ್ಪಿದ್ದರು. ಆ ಕಾಲದಲ್ಲಿ ಅವರು
ತೆಗೆದುಕೊಂಡ ದೊಡ್ಡ ರಿಸ್ಕ್ ಅದಾಗಿತ್ತು. ‌

ರಿಸ್ಕ್ ತೆಗೆದುಕೊಂಡದ್ದಷ್ಟೇ ಅಲ್ಲ, ಜರ್ಮನ್ ಎಂಜಿನಿಯರ್‌ಗಳಿಗೆ ಒಳ್ಳೆಯ ಉದ್ಯೋಗ ನೀಡಿದ ಟಾಟಾ ಗ್ರೂ ಒಳ್ಳೆಯ ಸಂಬಳ, ಉತ್ತಮವಾದ ವಸತಿಯ ಸೌಲಭ್ಯವನ್ನು ನೀಡಿ ಚೆನ್ನಾಗಿ ನೋಡಿಕೊಂಡಿತು. ಅದು ಫಲ ನೀಡಿತು.
1945ರಲ್ಲಿ ಟಾಟಾ ಮೋಟರ್ಸ್, ಇಂಡಿಯನ್ ರೇಲ್ವೇಸ್‌ಗೆ ಉಗಿಬಂಡಿ ತಯಾರಿಸಿ ಕೊಡುವ ಒಪ್ಪಂದಕ್ಕೆ ಸಹಿ ಹಾಕಿತು. ರೇಲ್ವೆ ಯಂತ್ರದ ತಯಾರಿಕೆಗೆ ಟಾಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್‌ಗಳು ಸಹಾಯ ಮಾಡಿದರು. ಅದರಿಂದ ಭಾರತದ ಮೊದಲ ಲೋಕೊಮೋಟಿವ್ ಎಂಜಿನ್ ತಯಾರಿಸಿದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಟಾಟಾ ಸಂಸ್ಥೆ ಪಾತ್ರವಾಯಿತು. ಅದಾಗಿ 2 ವರ್ಷದಲ್ಲಿ ಭಾರತಕ್ಕೆ ಸ್ವಾತಂತ್ರ ಸಿಕ್ಕಿತು. 1950ರ ವೇಳೆಗೆ ಜರ್ಮನಿಯ ಡೈಮ್ಲರ್ ಬೆಂಜ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಟಾಟಾ ಸಂಸ್ಥೆ ಭಾರತದಲ್ಲಿ ಟ್ರಕ್ ನಿರ್ಮಾಣಕ್ಕೆ ಮುಂದಾಯಿತು. ಯುದ್ಧವೂ ಸಮಾಪ್ತಿಯಾಗಿದ್ದರಿಂದ ಜರ್ಮನಿ ವೇಗವಾಗಿ ಚೇತರಿಸಿಕೊಂಡಿತು. ಆದರೆ ಕಥೆ ಅಲ್ಲಿಗೇ ನಿಲ್ಲಲಿಲ್ಲ.

ಒಂದು ದಿನ ಕ್ರಾಸ್ ಮಾಫಿ ಸಂಸ್ಥೆಯ ನಿರ್ದೇಶಕ ಮಂಡಳಿಗೆ ಒಂದು ಪತ್ರ ಬಂತು. ತೆರೆದು ನೋಡಿದರೆ ಅದು ಟಾಟಾ ನಿರ್ದೇಶಕರಾಗಿದ್ದ ಜೆಆರ್‌ಡಿ ಬರೆದ ಪತ್ರವಾಗಿತ್ತು. ಪತ್ರದಲ್ಲಿ, ಲೋಕೊಮೋಟಿವ್ ಯಂತ್ರ ತಯಾರಿಕೆಗೆ ಕ್ರಾಸ್ ಮಾಫಿ ಎಂಜಿನಿಯರ್‌ಗಳು ನೀಡಿದ ತಂತ್ರಜ್ಞಾನ ಮತ್ತು ಕೌಶಲಕ್ಕೆ ಧನ್ಯವಾದ ಸಲ್ಲಿಸಲಾಗಿತ್ತು. ಅಷ್ಟೇ
ಅಲ್ಲ, ಅದಕ್ಕೆ ಗೌರವಧನ ನೀಡುವುದಾಗಿ ಪ್ರಸ್ತಾಪಿಸಲಾಗಿತ್ತು. ಇದನ್ನು ಕಂಡ ಕ್ರಾಸ್ ಮಾಫಿ ಸಂಸ್ಥೆಯವರು ಅತೀವ ಆಶ್ಚರ್ಯಕ್ಕೊಳಗಾಗಿದ್ದರು.

ಕಾರಣ, ಎರಡು ಸಂಸ್ಥೆಯ ನಡುವೆ ಈ ರೀತಿಯ ಯಾವುದೇ ಒಪ್ಪಂದವಾಗಿರಲಿಲ್ಲ, ಯಾವುದೇ ಕರಾರುಪತ್ರ ಇರಲಿಲ್ಲ. ತಂತ್ರeನ ನೀಡಿದ್ದಕ್ಕೆ ಹಣ ಸಂದಾಯ ಮಾಡುವ ಯಾವ ಬದ್ಧತೆಯೂ ಟಾಟಾ ಸಂಸ್ಥೆಗೆ ಇರಲಿಲ್ಲ. ನಿಜ ಹೇಳಬೇಕು ಎಂದರೆ, ಆ ಸಂಕಷ್ಟದ ಕಾಲದಲ್ಲಿ ಯಾವುದೇ ಕರಾರು ಇಲ್ಲದೆಯೇ, ನಿರುದ್ಯೋಗಿಗಳಾಗಿದ್ದ ಜರ್ಮನ್
ಎಂಜಿನಿಯರ್‌ಗಳಿಗೆ ಟಾಟಾ ಸಂಸ್ಥೆ ಉದ್ಯೋಗ ನೀಡಿತ್ತು. ಅವರನ್ನು ಚೆನ್ನಾಗಿ ನೋಡಿಕೊಂಡು ಜರ್ಮನಿಗೆ, ಸಂಸ್ಥೆಗೆ ಉಪಕಾರ ಮಾಡಿತ್ತು.

ಮೇಲಾಗಿ ಇಂಥದ್ದೊಂದು ಪತ್ರ ಬಂದಿದೆ ಎಂದರೆ ಅವರಲ್ಲಿ ಮಾತೇ ಇರಲಿಲ್ಲ. ಬಹಳ ವರ್ಷಗಳವರೆಗೆ ಗೌಪ್ಯ ವಾಗಿದ್ದ ಈ ವಿಷಯವನ್ನು ಸುಮಾರು 20 ವರ್ಷದ ನಂತರ ಕ್ರಾಸ್ ಮಾಫಿ ಸಂಸ್ಥೆಯ ನಿರ್ದೇಶಕರೊಬ್ಬರು ಮಲೇಷಿಯಾದಲ್ಲಿ ಬಹಿರಂಗ ಪಡಿಸಿದ್ದರು. ‘ಅಂದು ಟಾಟಾ ಸಂಸ್ಥೆ ಗೌರವಧನ ನೀಡಿ, ಕರಾರು-ಕಾನೂನಿನ ಕಟ್ಟುಪಾಡು ಇಲ್ಲದೆಯೂ ಒಳ್ಳೆಯ ವ್ಯವಹಾರ ಮಾಡಬಹುದು ಎಂದು ತೋರಿಸಿಕೊಟ್ಟಿತು’ ಎಂದಿದ್ದರು.
ಇನ್ನೊಂದು ವಿಷಯ ಗೊತ್ತೇ? 70ರ ದಶಕದಲ್ಲಿ ಜರ್ಮನಿಯ ಸಂಸ್ಥೆಗಳೊಂದಿಗೆ ವ್ಯಾಪಾರ ಮಾಡಲು ಬ್ಯಾಂಕ್ ಗ್ಯಾರಂಟಿ (ಕಾನೂನುಬದ್ಧ ಹಣಕಾಸಿನ ಖಾತರಿ) ನೀಡುವಂತೆ ಕೇಳಲಾಗಿತ್ತು. ಆ ಸಮಯದಲ್ಲಿ ಭಾರತ ಸರಕಾರದ ನಿಯಮಗಳಿಂದಾಗಿ ಇದು ಕಷ್ಟದ ಕೆಲಸವಾಗಿತ್ತು. ಇದು ಜರ್ಮನಿಯ ಬ್ಯಾಂಕ್ ಅಧಿಕಾರಿಗಳಿಗೆ ತಿಳಿದಾಗ,
‘ಟಾಟಾ ಸಂಸ್ಥೆಯ ಲೆಟರ್‌ಹೆಡ್‌ನಲ್ಲಿ ಅಧ್ಯಕ್ಷರು ಸಹಿ ಮಾಡಿದ ಗ್ಯಾರಂಟಿ ಪತ್ರ ಯಾವುದೇ ಬ್ಯಾಂಕ್ ಗ್ಯಾರಂಟಿ ಗಿಂತಲೂ ಹೆಚ್ಚಿನ ಮೌಲ್ಯ ಹೊಂದಿದೆ’ ಎಂದು ಹೇಳಿದ್ದರು.

ವ್ಯಾಪಾರದಲ್ಲಿ ಉಳಿಸಿಕೊಳ್ಳ ಬೇಕಾದದ್ದು ಇದೇ ಅಲ್ಲವೇ? ಆ ಕಾಲದಲ್ಲಿಯೇ ಟಾಟಾ ಸಂಸ್ಥೆ ಆ ಭರವಸೆಯನ್ನು ಬೆಳೆಸಿಕೊಂಡಿತ್ತು, ಉಳಿಸಿಕೊಂಡಿತ್ತು. ಫರೀದ್ ಹೇಳುತ್ತಿದ್ದ ಕಥೆ ಕೇಳುತ್ತಿದ್ದಂತೆ ಟಾಟಾ ಸಂಸ್ಥೆ, ಜೆಆರ್‌ಡಿಯವರ ಕುರಿತು ಇದ್ದ ಗೌರವ ಇನ್ನಷ್ಟು ಹೆಚ್ಚಿತು. ಈ ಕಥೆಯನ್ನು ನಾನ್ನು ಈ ಮೊದಲು ಕೇಳಿರಲಿಲ್ಲ. ನಮ್ಮ ದೇಶದ ಯಶಸ್ವಿ ಉದ್ಯಮಿಯ ಕಥೆಯೊಂದು ಬಹ್ರೈನ್ ದೇಶದಲ್ಲಿ ಹುಟ್ಟಿ ಬೆಳೆದವರಿಂದ ತಿಳಿಯಿತು. ಬೇಸರಪಡಬೇಕೋ, ಸಂತೋಷಪಟ್ಟುಕೊಳ್ಳಬೇಕೋ ಗೊತ್ತಾಗಲಿಲ್ಲ. ಈ ಕಥೆಯ ಸತ್ಯಾಸತ್ಯತೆ ತಿಳಿದುಕೊಳ್ಳಬೇಕಿತ್ತು. ಗೊತ್ತಲ್ಲ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬರುವ ಯಾವ ವಿಷಯವನ್ನೂ ಸಲೀಸಾಗಿ ನಂಬುವಂತಿಲ್ಲ. ಫರೀದ್ ಬದರ್ ನನಗೆ ಕಳುಹಿಸಿದ ಲೇಖನ ಸತ್ಯವೋ, ಸುಳ್ಳೋ ಎಂದು ಒಮ್ಮೆ ನೋಡಬೇಕು ಎಂದು ಹುಡುಕಿದೆ.

ಅವರು ನನಗೆ ಕಳುಹಿಸಿದ್ದು, ಮುಂಬೈ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಶಿಕ್ಷಣ ತಜ್ಞೆ, ಲೇಖಕಿ, ಪ್ರಮಿಳಾ
ಕುಡ್ವ ಇಂದಿಗೆ 3 ವರ್ಷದ ಹಿಂದೆ ಬರೆದು ಪ್ರಕಟಿಸಿದ ಲೇಖನ ಎಂಬ ಮಾಹಿತಿ ದೊರಕಿತು. ಒಂದಂತೂ ನಿಜ, ಜೆಆರ್‌ಡಿ ಟಾಟಾ ಅಂದು ದೇಶಕ್ಕೆ ಲೋಕೊಮೋಟಿವ್ ಯಂತ್ರವನ್ನು ಮಾತ್ರ ಕೊಟ್ಟಿರಲಿಲ್ಲ, ಅದಕ್ಕಿಂತಲೂ ದೊಡ್ದದಾದ ಮೋಟಿವೇಷನ್ ಮಂತ್ರವನ್ನೂ ಕೊಟ್ಟಿದ್ದರು. ಇಂದಿಗೂ ಟಾಟಾ ಸಂಸ್ಥೆ ಆ ಭರವಸೆಯನ್ನು ಕಾಪಿಟ್ಟುಕೊಂಡಿದೆ. ಟಾಟಾ ಸಂಸ್ಥೆ ದಗಾ ಹಾಕಿದ ಕಥೆಯ ನ್ನಾಗಲಿ, ಅನ್ಯಾಯದ ಮಾರ್ಗದಲ್ಲಿ ಹಣ ಗಳಿಸಿದ
ಆಪಾದನೆಯಾಗಲಿ ನಾನಂತೂ ಕೇಳಲಿಲ್ಲ.

ಇಂದು ನಾವು ರತನ್ ಟಾಟಾ ಅವರನ್ನು ಭಾರತದ ವಾರೆನ್ ಬಫೆಟ್ ಎಂದು ಹೇಳುತ್ತೇವೆ. ತಮ್ಮ ಆದಾಯದ ಶೇ.೬೬ರಷ್ಟನ್ನು ಅವರು ದಾನ ಮಾಡುತ್ತಾರೆ ಎಂಬ ಕಥೆ ಕೇಳುತ್ತೇವೆ, ವರದಿ ಓದುತ್ತೇವೆ. ಯಾಕಾಗಬಾರದು? ಅವರು
ನಡೆದದ್ದು ಹಿರಿಯರಾದ ಜೆಆರ್‌ಡಿ ಹಾಕಿಕೊಟ್ಟ ಸ್ಪೂರ್ತಿಯ ಹಾದಿಯಲ್ಲಿ ತಾನೆ? ರತನ್ ಟಾಟಾ ಕೂಡ ತಾವೊಬ್ಬರೇ ನಡೆಯಲಿಲ್ಲ. ತಾವು ನಡೆಯುವುದರೊಂದಿಗೆ ಪಕ್ಕದಲ್ಲಿಯೇ ಇನ್ನೊಂದು ಸ್ಪೂರ್ತಿಯ ಹಾದಿಗೂ ಕಲ್ಲು ಹಾಸಿ ಹೋಗಿದ್ದಾರೆ. ಆ ಹಾದಿಯಲ್ಲಿ ಮುಂದಿನ ತಲೆಮಾರಿನವರು ಹೂವು ಬೆಳೆಯಲು ಮಾದರಿಯಾಗಿ ಹೋಗಿದ್ದಾರೆ. ಬದುಕಿರಲಿ, ಇಲ್ಲದಿರಲಿ, ಆನೆ ಆನೆಯೇ! ನಮಗೆ ಮಾದರಿಯೇ!

ಇದನ್ನೂ ಓದಿ: Kiran Upadhyay Column: ಕೊಲ್ಲಿಯಲ್ಲೂ ಹಬ್ಬಿದ ಯಕ್ಷಗಾನದ ಹಬ್ಬ