Friday, 13th December 2024

Kiran Upadhyay Column: ಕೊಲ್ಲಿಯಲ್ಲೂ ಹಬ್ಬಿದ ಯಕ್ಷಗಾನದ ಹಬ್ಬ

ವಿದೇಶವಾಸಿ

ಕಿರಣ್‌ ಉಪಾಧ್ಯಾಯ, ಬಹ್ರೈನ್

dhyapaa@gmail.com

ತೈತೈ ತದ್ದಿನ ಧೇಂ, ಕಡ್ತ ಧಿತ್ತಾತೈ ತದ್ದಿನ ಧೇಂ… ಹೀಗೊಂದು ಹೆಜ್ಜೆ ಹಾಕುವ ಅವಕಾಶ ಸಿಕ್ಕಿದ್ದು ಮೊನ್ನೆ ಅಬುಧಾಬಿಯಲ್ಲಿ. ಯಕ್ಷ ಯಾಮಿನಿ ತಂಡದವರು ಇತ್ತೀಚೆಗೆ ಆಯೋಜಿಸಿದ್ದ 2 ಯಕ್ಷಗಾನ ಕಾರ್ಯಕ್ರಮ ಜನರನ್ನು ರಂಜಿಸಿತು ಎಂದರೆ ಪೂರ್ತಿ ಹೇಳಿದಂತಾಗುವುದಿಲ್ಲ.

ಮುಂದುವರಿಯುವುದಕ್ಕಿಂತ ಮೊದಲು ಚಿಕ್ಕದಾಗಿ ಹೇಳಿಬಿಡುತ್ತೇನೆ. ಸೆಪ್ಟೆಂಬರ್ 20, ಬಹ್ರೈನ್‌ನಲ್ಲಿ ‘ಶ್ರೀನಿವಾಸ ಕಲ್ಯಾಣೋತ್ಸವ’, 21ರಂದು ದುಬೈನಲ್ಲಿ ‘ವೀರ ಬರ್ಬರೀಕ’, 22ರಂದು ಅಬುಧಾಬಿಯಲ್ಲಿ ‘ಭೀಷ್ಮ ವಿಜಯ’ ಯಕ್ಷಗಾನ. ಅಲ್ಲಿಗೇ ಮುಗಿಯಿತು ಅಂದುಕೊಳ್ಳಬೇಡಿ, ಅಕ್ಟೋಬರ್ 18 ಸೌದಿ ಅರೇಬಿಯಾದ ರಿಯಾದ್‌ನಲ್ಲಿ ‘ಪಂಚವಟಿ’, ನವೆಂಬರ್ 1ಕ್ಕೆ ಬಹ್ರೈನ್‌ನಲ್ಲಿ ‘ಅಭಿಮನ್ಯು ಕಾಳಗ’. ಅಕ್ಟೋಬರ್ 25ಕ್ಕೆ ಕುವೈತ್‌ನಲ್ಲಿ ಒಂದು ಯಕ್ಷಗಾನ ಆಗಬೇಕಿತ್ತು, ಕಾರಣಾಂತರದಿಂದ ಆಗುತ್ತಿಲ್ಲ.

ಈ ನಡುವೆ ದುಬೈನಲ್ಲಿ ಇನ್ನೊಂದು ಯಕ್ಷಗಾನ ಆಯೋಜಿಸುವ ಆಲೋಚನೆಯೂ ನಡೆಯುತ್ತಿದೆ. ಈ ಅಂಕಣ ನೀವು ಓದುವ ಹೊತ್ತಿಗೆ ಇನ್ನೂ ಕೆಲವು ಯಕ್ಷಗಾನ ನಿಕ್ಕಿಯಾದರೂ ಆಶ್ಚರ್ಯಪಡಬೇಕಾಗಿಲ್ಲ. ಇದೇನು ಗಲ್ಫ್ ‌ ರಾಷ್ಟ್ರಕ್ಕೆ ಯಾವುದಾದರೂ ಮೇಳ ತಿರುಗಾಟಕ್ಕೆ ಹೋಗಿದೆಯಾ ಎಂದು ಕೇಳಬೇಡಿ. ಮಳೆಗಾಲದಲ್ಲಿ ಮೇಳ ಇರುವುದಿಲ್ಲವಾದುದರಿಂದ ಕಲಾವಿದರು ಬೇರೆ ಬೇರೆ ಊರುಗಳಲ್ಲಿ ಪ್ರದರ್ಶನ ನೀಡುವುದು ಬಹಳ ಮೊದಲಿ ನಿಂದಲೂ ವಾಡಿಕೆ.

ಒಂದು ಕಾಲದಲ್ಲಿ ಬೆಂಗಳೂರಿಗಿಂತ ಮುಂಬೈನಲ್ಲಿ ಹೆಚ್ಚು ಮಳೆಗಾಲದ ಆಟ (ಯಕ್ಷಗಾನ) ಆಗುತ್ತಿತ್ತು. ಇತ್ತೀಚೆಗೆ
ಬೆಂಗಳೂರಿನಲ್ಲಿ ಸಾಕೆಂಬಷ್ಟು ಆಟ ಆಗುತ್ತದೆ. ಹಾಗೆಯೇ ಕೊಲ್ಲಿ ರಾಷ್ಟ್ರಗಳಲ್ಲೂ. ಒಂದು ಹಳೆಯ ಕಥೆ ನೀವೆಲ್ಲ ಕೇಳಿರುತ್ತೀರಿ. ತನ್ನ ತಂದೆಯನ್ನು ಕೊಂದದ್ದು ಒಬ್ಬ ಕ್ಷತ್ರಿಯ ಎಂದು ತಿಳಿದಾಗ, ಭೂಮಿಯ ಮೇಲೆ ಇರುವ ಎಲ್ಲ ಕ್ಷತ್ರಿಯರನ್ನೂ ಕೊಲ್ಲುವುದಾಗಿ ಪರಶುರಾಮ ಶಪಥಮಾಡಿದ್ದು, ಅದಕ್ಕಾಗಿಯೇ ಭೂಪರ್ಯಟನೆ ಮಾಡಿದ್ದು
ನಿಮಗೆ ಗೊತ್ತೇ ಇದೆ. ಆ ಪರಶುರಾಮ ಎಲ್ಲಿ ಸುತ್ತಾಡಿದ್ದನೋ ಗೊತ್ತಿಲ್ಲ, ಯಕ್ಷಗಾನದ ಪರಶುರಾಮ ಮಾತ್ರ 1982 ರಲ್ಲಿ ಬಹ್ರೈನ್‌ನ ಪ್ಯಾರಡೈಸ್ ಹೋಟೆಲಿಗೆ ಬಂದಿದ್ದ. ಗಾಬರಿಗೊಳ್ಳಬೇಡಿ, ನಾನು ಹೇಳುತ್ತಿರುವುದು ಕೊಲ್ಲಿ ರಾಷ್ಟ್ರಗಳ ಬಹುಶಃ ಮೊದಲನೆಯ ಯಕ್ಷಗಾನ ಎಂದು ಕರೆಸಿಕೊಳ್ಳುವ ಪ್ರಸಂಗದ್ದು. ಬಹ್ರೈನ್‌ನಲ್ಲಿರುವ ಕೆಲವು ಯಕ್ಷಗಾನ ಆಸಕ್ತರು ಸೇರಿಕೊಂಡು ಅಂದು ಮೊದಲ ಬಾರಿಗೆ ಮುತ್ತಿನ ದ್ವೀಪದಲ್ಲಿ ಯಕ್ಷಗಾನದ ಧಿಂ ಕಿಟಕ್ಕೆ ಹೆಜ್ಜೆ ಹಾಕಿದ್ದರು.

ನಿಜ, ಗಲ ರಾಷ್ಟ್ರಗಳಲ್ಲಿ ಯಕ್ಷಗಾನದ ಗೆಜ್ಜೆಯ ಸದ್ದು ಕೇಳಿದ್ದು ಇತ್ತೀಚಿಗಲ್ಲ. ಸುಮಾರು 4 ದಶಕದ ಹಿಂದೆಯೇ ಬಹ್ರೈನ್‌ನಲ್ಲಿ ಮೊತ್ತಮೊದಲ ಬಾರಿಗೆ ಬಡಗುತಿಟ್ಟಿನ ಕೆರೆಮನೆ ಶಂಭು ಹೆಗಡೆ ಅವರ ನೇತೃತ್ವದಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಪ್ರದರ್ಶನ ನೀಡಿತ್ತು. ಕನ್ನಡ ಸಂಘ ಬಹ್ರೈನ್ ಆಶ್ರಯದಲ್ಲಿ 1983ರ ಅಕ್ಟೋ ಬರ್ 07 ಮತ್ತು 08ರಂದು ಬಹ್ರೈನ್‌ನ ಹಿಲ್ಟನ್ ಹೋಟೆಲ್‌ನಲ್ಲಿ ನಡೆದ ಯಕ್ಷಗಾನದಲ್ಲಿ ಶಂಭು ಹೆಗಡೆಯವರಿಗೆ ಬಳ್ಕೂರು ಕೃಷ್ಣ ಯಾಜಿ, ಕೆಪ್ಪೆಕೆರೆ ಮಾದೇವ ಹೆಗಡೆ ಮೊದಲಾದ ದಿಗ್ಗಜರು ಜತೆಯಾಗಿದ್ದರು. 1985ರ ಅಕ್ಟೋಬರ್ 23 ಮತ್ತು 24ರಂದು, ಅಂದಿನ ಸಾಲಿಗ್ರಾಮದ ಮಕ್ಕಳ ಮೇಳದವರು ಬಹ್ರೈನ್‌ಗೆ ಆಗಮಿಸಿ, ‘ವೃಷಸೇನ ಕಾಳಗ’ ಮತ್ತು ‘ಕೃಷ್ಣಾರ್ಜುನ ಕಾಳಗ’ ಎಂಬ ಕಥಾಭಾಗವನ್ನು ಪ್ರದರ್ಶಿಸಿದರು.

1988ರಲ್ಲಿ ಎಂ.ಎಂ.ಹೆಗಡೆಯವರ ನೇತೃತ್ವದಲ್ಲಿ ಗುಂಡ್ಮಿ ಕಾಳಿಂಗ ನಾವಡ, ಮಂಟಪ ಪ್ರಭಾಕರ್ ಉಪಾಧ್ಯಾಯ, ಕೋಳ್ಯೂರು ರಾಮಚಂದ್ರರಾವ್, ಪ್ರೊ. ಎಂ.ಎಲ್.ಸಾಮಗ, ಬೆಳಿಯೂರು ಕೃಷ್ಣಮೂರ್ತಿ ಮೊದಲಾದವರು ‘ಕುಮಾರ ವಿಜಯ’ ಮತ್ತು ‘ಭೀಷ್ಮ ವಿಜಯ’ ಆಖ್ಯಾನವನ್ನು ಆಡಿ ತೋರಿಸಿದರು. 1991 ಅಕ್ಟೋಬರ್31೩೧ ಮತ್ತು ನವೆಂಬರ್ 1ರಂದು ಅಮೃತ ಸೋಮೇಶ್ವರರ ಮುಂದಾಳತ್ವದಲ್ಲಿ ಶೇಣಿ ಗೋಪಾಲಕೃಷ್ಣ ಭಟ್, ಕುಂಬ್ಳೆ ಸುಂದರ್ ರಾವ್, ಕೆ.ಗೋವಿಂದ ಭಟ್, ಎಂ.ಪ್ರಭಾಕರ್ ಜೋಶಿ, ಪೊಲ್ಯ ಲಕ್ಷಿ ನಾರಾಯಣ ಶೆಟ್ಟಿ, ಪದ್ಯಾಣ ಶಂಕರನಾರಾ ಯಣ, ಶ್ರೀಧರ ಭಂಡಾರಿ ಪುತ್ತೂರು ಸೇರಿದಂತೆ ಸುಮಾರು 15 ಕಲಾವಿದರು ‘ತ್ರಿಪುರ ಮಥನ’ ಮತ್ತು ‘ತುಳುನಾಡ ಸಿರಿ’ ತೆಂಕುತಿಟ್ಟಿನ ಕಥಾನಕವನ್ನು ಆಡಿ ತೋರಿಸಿದರು. ಅದರ ಮರುದಿನ ತಾಳಮದ್ದಲೆಯನ್ನೂ ಆಯೋಜಿಸ ಲಾಗಿತ್ತು.

ನಂತರದ ದಿನಗಳಲ್ಲಿ ಗಲ್ಫ್‌ ದೇಶಗಳಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ. ಈಗಂತೂ ಬಹ್ರೈನ್ ಕನ್ನಡ ಸಂಘದ ಆಶ್ರಯದ ಯಕ್ಷೋಪಾಸನಾ ಕೇಂದ್ರದಲ್ಲಿ ‘ಯಕ್ಷದೀಪಕ’ ದೀಪಕ್‌ ರಾವ್ ಪೇಜಾವರ ನಿರ್ದೇಶನದಲ್ಲಿ ಉಚಿತವಾಗಿ ಯಕ್ಷಗಾನ ತರಬೇತಿಯನ್ನು ನೀಡಲಾಗುತ್ತಿದೆ. ಇಲ್ಲಿ ಸುಮಾರು ೩೦ಕ್ಕೂ ಅಽಕ ಉತ್ಸಾಹಿಗಳು ಹಿಮ್ಮೇಳ ಮತ್ತು ಮುಮ್ಮೇಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಪ್ರತಿವರ್ಷ ಕನ್ನಡ ಸಂಘದ ಆಶ್ರಯದಲ್ಲಿ ಒಂದು, ಯಕ್ಷಧ್ರುವ ಪಟ್ಲ ಫೌಂಡೇಷನ್, ಬಹ್ರೈನ್ -ಸೌದಿ ಘಟಕದ ಆಶ್ರಯದಲ್ಲಿ ಒಂದು, ಹೀಗೆ ಕಮ್ಮಿ ಎಂದರೂ 2 ಯಕ್ಷಗಾನ ಕಾರ್ಯಕ್ರಮ ನಿಕ್ಕಿ ಆಗುತ್ತದೆ. ಕೆಲವೊಮ್ಮೆ ಅದಕ್ಕಿಂತ ಹೆಚ್ಚಾಗುವುದೂ ಇದೆ. ಇನ್ನು ದುಬೈನಲ್ಲಿ ಕೂಡ ‘ಯಕ್ಷ ಮಿತ್ರರು ದುಬೈ’ ಕಳೆದ 2 ದಶಕದಿಂದ ಯಕ್ಷಗಾನವನ್ನು ಆಯೋಜಿಸುತ್ತಿದ್ದಾರೆ. ಒಂದು ದಶಕದಿಂದ ‘ಯಕ್ಷಗಾನ ಅಭ್ಯಾಸ ಕೇಂದ್ರ’ ನಡೆಯುತ್ತಿದೆ. ‘ಯಕ್ಷ ಮಯೂರ’ ಡಿ.ಶೇಖರ್ ಶೆಟ್ಟಿಗಾರ್ ನಿರ್ದೇಶನದಲ್ಲಿ ಯಕ್ಷಗಾನದ ಅಭ್ಯಾಸವೂ, ಪ್ರದರ್ಶನಗಳೂ ನಡೆಯುತ್ತಿವೆ.

ಕಳೆದ ವರ್ಷದಿಂದ ಬಡಗು ತಿಟ್ಟಿನ ಗಾಳಿಯೂ ಕೊಲ್ಲಿ ರಾಷ್ಟ್ರವನ್ನು ತಟ್ಟಿದೆ. ‘ಯಕ್ಷ ಯಾಮಿನಿ’ ತಂಡ ಕಳೆದ
ವರ್ಷದಿಂದ ದುಬೈ ಮತ್ತು ಅಬುಧಾಬಿಯಲ್ಲಿ ಪ್ರದರ್ಶನವನ್ನು ಯಶಸ್ವಿಯಾಗಿ ಆಯೋಜಿಸಿದ್ದು, ಮುಂದಿನ ವರ್ಷಗಳಲ್ಲೂ ಕಾರ್ಯಕ್ರಮವನ್ನು ಆಯೋಜಿಸುವ ಪಣತೊಟ್ಟಿದೆ. ಹಾಗಂತ ಯುಎಇಯಲ್ಲಿ ಬಡಗುತಿಟ್ಟಿನ ಪ್ರದರ್ಶನ ಇದೇ ಮೊದಲನೆಯದಲ್ಲ. ಸುಮಾರು ಒಂದು ದಶಕದ ಹಿಂದೆಯೇ ದುಬೈ ಮತ್ತು ಅಬುಧಾಬಿಯಲ್ಲಿ
ಕೊಂಡದಕುಳಿ ರಾಮಚಂದ್ರ ಹೆಗಡೆ ಮತ್ತು ತೋಟಿಮನೆ ಗಣಪತಿ ಹೆಗಡೆ ತಂಡದವರು ಒಂದೊಂದು ಪ್ರದರ್ಶನ ವನ್ನು ನೀಡಿದ್ದಾರೆ. 1988ರ ನಂತರ ಬಹ್ರೈನ್‌ನಲ್ಲಿ ಬಡಗಿನ ಯಕ್ಷಗಾನ ಪ್ರದರ್ಶನ ಕಂಡಿರಲಿಲ್ಲ. ಸುಮಾರು 25 ವರ್ಷದ ನಂತರ, 2013ರಲ್ಲಿ ಸಾರ್ಥ ಫೌಂಡೇಷನ್ ಆಯೋಜಿಸಿದ್ದ ಬಂಗಾರುಮಕ್ಕಿ ಮೇಳದ ‘ಮಾಗಧ ವಧೆ’ ಮತ್ತು ‘ಕೃಷ್ಣಾರ್ಜುನ ಕಾಳಗ’ ಪ್ರದರ್ಶನದಿಂದ ಬಡಗು ತಿಟ್ಟು ಪುನರುತ್ಥಾನ ಕಂಡಿತು. ಅಂದು ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ, ಸುಬ್ರಹ್ಮಣ್ಯ ಚಿಟ್ಟಾಣಿ, ಶಂಕರ ಹೆಗದೆ ನೀಲ್ಕೋಡು ಮೊದಲಾದ ಹೆಸರಾಂತ ಕಲಾವಿದರು ಭಾಗಿಯಾಗಿದ್ದರು.

ಯಕ್ಷಗಾನ ಆಯೋಜಿಸುವ ವಿಷಯದಲ್ಲಿ ಕುವೈತ್ ಮತ್ತು ಒಮಾನ್ ದೇಶಗಳೂ ಹಿಂದೆ ಬಿದ್ದಿಲ್ಲ. ಒಮಾನ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಯಕ್ಷಗಾನ ಪ್ರದರ್ಶನವಂತೂ ಆಗುತ್ತಿದೆ, ಈ ವರ್ಷ ಗೆಜ್ಜೆಗಿರಿ ಮೇಳ ಮತ್ತು ಕಟೀಲು ಮೇಳದ ಆಯ್ದ ಕಲಾವಿದರಿಂದ ಮಸ್ಕತ್‌ನಲ್ಲಿ ಯಕ್ಷಗಾನ ಪ್ರದರ್ಶನ ನಡೆಯಿತು. ಕೆಲವು ವರ್ಷಗಳ ಹಿಂದೆ ಬಹ್ರೈನ್ ತಂಡ ದವರೂ ಮಸ್ಕತ್‌ಗೆ ಹೋಗಿ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ ಎಂದರೆ ನೀವು ನಂಬಲೇಬೇಕು.

ಕೆಲವು ವರ್ಷದ ಹಿಂದೆ ಕತಾರ್‌ನಲ್ಲಿಯೂ ಪಟ್ಲ ಫೌಂಡೇಷನ್ ವತಿಯಿಂದ ‘ಚಂದ್ರಹಾಸ’ ಯಕ್ಷಗಾನ ಪ್ರದರ್ಶನ ವಾಗಿದೆ. ಈ ಪ್ರದೇಶದಲ್ಲಿ ಇಂದು ಯಕ್ಷಗಾನ ಅಷ್ಟರಮಟ್ಟಿಗೆ ಬೇರುಬಿಟ್ಟು ನಿಂತಿದೆ. ಅದೆಲ್ಲ ಇರಲಿ, ಸೌದಿ ಅರೇಬಿಯಾದಂಥ ದೇಶದಲ್ಲೂ ಯಕ್ಷಗಾನದ ಅಭಿಮಾನಿಗಳು, ಆಸಕ್ತರು ಇದ್ದಾರೆ ಎಂದರೆ ನಂಬುತ್ತೀರಾ? ಒಂದು ದಶಕದ ಹಿಂದೆಯೇ MASA (ಮಂಗಳೂರು ಅಸೋಸಿಯೇಷನ್ ಆಫ್ ಸೌದಿ ಅರೇಬಿಯಾ) ಸಂಸ್ಥೆಯವರು ಸೌದಿ ಅರೇಬಿಯಾದಲ್ಲಿ ಯಕ್ಷಗಾನ ಪ್ರದರ್ಶನವನ್ನು‌ ಏರ್ಪಡಿಸಿಕೊಂಡಿದ್ದರು.

ಅದಕ್ಕೆ ಸಾಕಷ್ಟು ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಒಂದು ಹಂತದಲ್ಲಿ, ವೇಷ-ಭೂಷಣಗಳು ಸೌದಿ ತಲುಪಿ, ಇನ್ನೇನು ಪ್ರದರ್ಶನ ಆಗಬೇಕು ಎನ್ನುವಷ್ಟರಲ್ಲಿ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಆ ದೇಶದಲ್ಲಿ ಪ್ರದರ್ಶನ
ಏರ್ಪಡಿಸಲು ಸಾಧ್ಯವಾಗಲಿಲ್ಲ. ಆದರೂ ಹಠ ಬಿಡದ ಅಲ್ಲಿಯ ಕಲಾವಿದರು ಪಕ್ಕದಲ್ಲಿರುವ ಬಹ್ರೈನ್
ದೇಶದ ರಾಜಧಾನಿ ಮನಾಮಾಕ್ಕೆ ಬಂದು ಯಕ್ಷಗಾನ ಪ್ರದರ್ಶನ ನೀಡಿದರು. ಈ ವರ್ಷದ ಆರಂಭದಲ್ಲಿ ನಡೆದ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿಯೂ ಕಿರು ಯಕ್ಷಗಾನ ‘ಮಾಯಾ ಶೂರ್ಪನಖಿ’ ಪ್ರದರ್ಶನಗೊಂಡಿತು. ಹೀಗೆ ಕೊಲ್ಲಿಯ ಎಲ್ಲ 6 ದೇಶಗಳಲ್ಲೂ ಯಕ್ಷಗಾನ ತಳವೂರಿರುವಾಗ, ಎಲ್ಲರನ್ನೂ ಒಟ್ಟು ಸೇರಿಸುವ ಸಾಹಸ ಮಾಡದಿ ದ್ದರೆ ಹೇಗೆ? ಅದಕ್ಕಾಗಿ 2016ರಲ್ಲಿ ಬಹ್ರೈನ್‌ನಲ್ಲಿ 2 ದಿನದ ಬಡಗು ಮತ್ತು ತೆಂಕು ತಿಟ್ಟಿನ ‘ಗಲ ಯಕ್ಷ ವೈಭವ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅದರಲ್ಲಿ ಬಹ್ರೈನ್ ಮತ್ತು ಸೌದಿ ಅರೇಬಿಯಾದ ಯಕ್ಷಗಾನ ತಂಡದವ ರೊಂದಿಗೆ ದುಬೈ ಮತ್ತು ಭಾರತದ ಕಲಾವಿದರು, ಒಮಾನ್ ಮತ್ತು ಕುವೈತ್‌ನ ಯಕ್ಷಗಾನ ಆಸಕ್ತರು, ಪೋಷಕರು ಭಾಗವಹಿಸಿ ದಾಖಲೆ ಬರೆದರು.

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಕಂಡುಬರುವ ಯಕ್ಷಗಾನ ಕಲೆಯ ಕಾರ್ಯಕ್ಷೇತ್ರ ಇಂದು ಕರ್ನಾಟಕ, ಭಾರತವನ್ನು ಮೀರಿ ವಿದೇಶಗಳಲ್ಲೂ ವ್ಯಾಪಿಸಿದೆ. ಯಕ್ಷಗಾನಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದೆ. ಅಂದಿನ ಕಾಲದಲ್ಲಿ ವಿಜಯನಗರ ಸಾಮ್ರಾಜ್ಯ ಮತ್ತು ಹೈದರಾಬಾದಿನ ನಿಜಾಮರ ಆಸ್ಥಾನದಲ್ಲೂ ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದವಂತೆ. ಅಂದಿನ ದಿನಗಳಲ್ಲಿ ಮೇಳದ ಕಲಾವಿದರು ತಮ್ಮ ವೇಷಭೂಷಣದ ಸಾಮಗ್ರಿಗಳನ್ನು ಪೆಟ್ಟಿಗೆಯಲ್ಲಿ ತುಂಬಿ ತಲೆಯ ಮೇಲೆ ಹೊತ್ತು
ಊರಿಂದ ಊರಿಗೆ ತಿರುಗಾಡುತ್ತಿದ್ದರಂತೆ. ಈಗ ಕಾಲ ಬದಲಾಗಿದೆ. ಯಕ್ಷಗಾನ ಕಲಾವಿದರು ದೇಶದಿಂದ
ವಿದೇಶಕ್ಕೆ ವಿಮಾನದಲ್ಲಿ ಹಾರಿಹೋಗುತ್ತಿದ್ದಾರೆ.

ನನ್ನಂಥವರು ಸಾಧ್ಯವಾದರೆ ಕಾರಿನಲ್ಲಿಯೇ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗಿ ಯಕ್ಷಗಾನವನ್ನು
ನೋಡಿ, ಸಾಧ್ಯವಾದರೆ ಸಣ್ಣ ಪಾತ್ರ ಮಾಡಿ ಆನಂದಿಸುವುದಿದೆ! ಆದರೆ ಅಂದಿನಿಂದ ಇಂದಿನವರೆಗೂ ಯಕ್ಷಗಾನ ಬದಲಾಗಲಿಲ್ಲ. ಅಲ್ಲಿ-ಇಲ್ಲಿ ಸ್ವಲ್ಪಮಟ್ಟಿನ ಸುಧಾರಣೆಯ ದೃಷ್ಟಿಯಲ್ಲಿ ಬದಲಾದರೂ, ಇಂದಿಗೂ ಅದೇ ತಾಳ, ಅದೇ ನಾಟ್ಯ, ಅದೇ ವೇಷ ಭೂಷಣ. ಹೊಸ ಪ್ರಸಂಗಗಳ ಅಲೆಯ ನಡುವೆಯೂ ತನ್ನ ಅಸ್ತಿತ್ವವನ್ನು ಕಳೆದು ಕೊಳ್ಳದ ಹಳೆಯ ಪೌರಾಣಿಕ ಪ್ರಸಂಗಗಳು. ಭಾಗವತ, ರಾಮಾಯಣ ಮತ್ತು ಮಹಾಭಾರತದ ಕಥಾನಕಗಳು. ಅದೇ ಪುಂಡುವೇಷ, ಅದೇ ಕಿರೀಟವೇಷ, ಅದೇ ಎದುರುವೇಷ, ಅದೇ ಸ್ತ್ರೀ ವೇಷ, ಅದೇ ಹಾಸ್ಯವೇಷ. ಅದೇ ಚೆಂಡೆ, ಅದೇ ಮದ್ದಳೆ, ಅದೇ ಅಬ್ಬರ, ಅದೇ ಶೃಂಗಾರ, ಅದೇ ಭಾಮಿನಿ.

ತಂತ್ರಜ್ಞಾನದ ಅಳವಡಿಕೆಯಿಂದಾಗಿ ಧ್ವನಿ ಹಾಗೂ ಬೆಳಕು ಆಟಕ್ಕೆ ಇನ್ನಷ್ಟು ಮೆರಗು ನೀಡುತ್ತಿದೆ. ಕೃಷ್ಣ ಪಾರಿಜಾತ, ಹೇಳಿಕೆ, ಮೂಡಲಪಾಯ ಮೊದಲಾದವು ಯಕ್ಷಗಾನಕ್ಕೆ ಸಾಮ್ಯತೆ ಹೊಂದಿದ್ದರೂ ಯಕ್ಷಗಾನದಲ್ಲಿ ಕಂಡುಬರುವ ವೇಷಭೂಷಣ, ನಾಟ್ಯ, ತಾಳ, ರಾಗ, ಮಟ್ಟು, ಲಕ್ಷಣ, ಶುದ್ಧ ಭಾಷೆ, ಭಾವನೆ, ಅಭಿನಯ, ಸಂಭಾಷಣೆ, ಸಂವಾದ ಇತ್ಯಾದಿ ಯಕ್ಷಗಾನ ಕಲೆಗೆ ತನ್ನದೇ ಆದ ಸ್ಥಾನವನ್ನು ಕಲ್ಪಿಸಿಕೊಟ್ಟಿದೆ. ಅಷ್ಟೇ ಅಲ್ಲ, ಕರ್ನಾಟಕದ ಗಂಡುಕಲೆ ಎಂಬ ಪ್ರಸಿದ್ಧಿಯನ್ನೂ ಕೊಟ್ಟಿದೆ. ಸಾಮಾನ್ಯವಾಗಿ ರಾತ್ರಿಯಿಂದ ಬೆಳಗಿನವರೆಗೆ ನಡೆಯುವ ಕಾರ್ಯ ಕ್ರಮಗಳು ಇಂದಿನ ಬಿಡುವಿಲ್ಲದ ಜಗತ್ತಿನೊಂದಿಗೆ ಹೊಂದಿಕೊಂಡು, ಕಾಲಮಿತಿಗೆ ಇಳಿದಿವೆ. ಇಂದು ಸುಮಾರು 30ಕ್ಕೂ ಹೆಚ್ಚು ವೃತ್ತಿಪರ ಮೇಳಗಳು, 200ರಷ್ಟು ಹವ್ಯಾಸಿ ಮೇಳಗಳು, ತೆಂಕು, ಬಡಗು, ಬಡಾಬಡಗು ತಿಟ್ಟಿನ ಯಕ್ಷಗಾನವನ್ನು ಪ್ರದರ್ಶಿಸುತ್ತವೆ. ಆಟ-ಬಯಲಾಟಗಳನ್ನು ಪ್ರದರ್ಶಿಸುತ್ತಿರುವ ಸುಮಾರು 5000ಕ್ಕೂ ಹೆಚ್ಚು ಕಲಾವಿದರು ಯಕ್ಷಗಾನವನ್ನು ತಮ್ಮ ಪ್ರಮುಖ ವೃತ್ತಿಯನ್ನಾಗಿಸಿಕೊಂಡಿದ್ದಾರೆ.

ಧರ್ಮಸ್ಥಳ, ಕಟೀಲು, ಮಂದರ್ತಿಯಂಥ ಕ್ಷೇತ್ರದ ಮೇಳಗಳ ಮುಂದಿನ ಕೆಲವು ವರ್ಷಗಳ ಪ್ರದರ್ಶನಗಳು ಈಗಾಗಲೇ ನಿಗದಿಯಾಗಿವೆ ಎಂದರೆ ಈ ಕಲೆಯ ಮಹತ್ವ, ಮಹಿಮೆ ಏನು ಎಂಬುದು ಸುಲಭವಾಗಿ ಅರ್ಥವಾಗುತ್ತದೆ.
ಕೊಲ್ಲಿ ರಾಷ್ಟ್ರಗಳಲ್ಲಿ ಯಕ್ಷಗಾನವನ್ನು ಸ್ಥೂಲವಾಗಿ ಅವಲೋಕಿಸಿದಾಗ, ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಯಕ್ಷಗಾನ ಪ್ರದರ್ಶನದಲ್ಲಿ ಏರಿಕೆ ಕಾಣಿಸುತ್ತಿದೆ.

ಯಕ್ಷಗಾನ ಇಂದು ಕೇವಲ ಪ್ರದರ್ಶನವಾಗಿ ಉಳಿಯದೆ, ಹಬ್ಬವಾಗಿ ಹಬ್ಬುತ್ತಿದೆ. ನಾವೆಲ್ಲ ಹಬ್ಬಕ್ಕೆ ಹೇಗೆ ತಯಾರಿ ಮಾಡಿಕೊಳ್ಳುತ್ತೇವೆಯೋ ಅದೇ ರೀತಿಯಲ್ಲಿ ಅಥವಾ ಅದಕ್ಕೂ ಹೆಚ್ಚಿನ ರೀತಿಯಲ್ಲಿ ಯಕ್ಷಗಾನದ ಸಿದ್ಧತೆಯಾಗು ತ್ತದೆ. ಒಂದು ವಿಷಯ ನೆನಪಿರಲಿ, ಯಕ್ಷಗಾನವನ್ನು ನಮ್ಮ ನಾಡಿನಲ್ಲಿ ಆಯೋಜಿಸುವುದಕ್ಕೂ, ಆರಬರ ದೇಶದಲ್ಲಿ ಆಯೋಜಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ಆಯಾ ದೇಶದ ನೆಲದ ಕಾನೂನಿಗೆ ಮೀರದಂತೆ, ಅವರ ಸಂಸ್ಕೃತಿಗೆ ಧಕ್ಕೆಯಾಗದಂತೆ ಕಾಳಜಿವಹಿಸಬೇಕು. ಈ ಕುರಿತು ಹೆಚ್ಚು ಹೇಳಬೇಕಾಗಿಲ್ಲ ಎಂದೆನಿಸುತ್ತದೆ. ಹೇಳದಿ ದ್ದರೂ ಇಲ್ಲಿಯ ಕಷ್ಟ ನಿಮಗೇ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ. ಆದರೆ, ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಯಕ್ಷಗಾನ ಕಲೆ ನಶಿಸಿಹೋಗುತ್ತಿದೆ ಎಂಬ ಮಾತು ಆಗಾಗ ಕೇಳಿಬರುವುದಿದೆ. ರಾಜ್ಯದ ವಿಷಯ ಗೊತ್ತಿಲ್ಲ. ಒಂದಂತೂ ಸತ್ಯ, ಎಲ್ಲಿಯವರೆಗೆ ಯಕ್ಷಗಾನದಲ್ಲಿ ಸತ್ವವಿರುತ್ತದೆಯೋ, ಎಲ್ಲಿಯವರೆಗೆ ಕೊಲ್ಲಿಯಲ್ಲಿ ಕರಾವಳಿಯ ಕನ್ನಡಿಗರು ಇರುತ್ತಾರೋ, ಆ ಕನ್ನಡಿಗರಲ್ಲಿ ಸಾಮರ್ಥ್ಯವಿರುತ್ತದೆಯೋ ಅಲ್ಲಿಯವರೆಗೂ ಯಕ್ಷಗಾನಕ್ಕೆ ಅಳಿವಿಲ್ಲ. ವರ್ಷದಿಂದ ವರ್ಷಕ್ಕೆ ಹಬ್ಬ ಹೆಚ್ಚು ಹಬ್ಬುತ್ತಲೇ ಇರುತ್ತದೆಯೇ ವಿನಾ ಕಮ್ಮಿಯಾಗುವುದಿಲ್ಲ.

ಇದನ್ನೂ ಓದಿ: Kiran Upadhyay Column: ಬಗೆಬಗೆಯ ಬಯಕೆ ಸಿರಿಯ ಕಂಡು…