ಸ್ಮರಣೆ
ಕೆ.ಶ್ರೀನಿವಾಸ್ ರಾವ್
ಈನಾ ಮೀನಾ ಡೀಕಾ (1958) ಚಲ್ತಿಕಾ ನಾಮ್ ಗಾಡಿ ಚಿತ್ರದ ಈ ಗೀತೆ ಅಂದು ಸೃಷ್ಟಿಸಿದ್ದ ಹವಾ ಅಷ್ಟಿಷ್ಟಲ್ಲ. ಯುವ ಗಾಯಕ ಕಿಶೋರ್ ಕುಮಾರ್ರವರ ಸಾಂಪ್ರದಾಯಕವಲ್ಲದ ಯುಡಿಲೀ… ಸ್ಟೆ ಲ್ ಯುವ ಜನರನ್ನು ಮೋಡಿ ಮಾಡಿತ್ತು.
ಯಶಸ್ವಿ ನಟ, ನಿರ್ಮಾಪಕ, ನಿರ್ದೇಶಕ, ಕಥೆಗಾರ, ಸಾಹಿತಿ, ಸಂಭಾಷಣೆಗಾರ, ಗಾಯಕ, ಸಂಗೀತ ನಿರ್ದೇಶಕ ಎಲ್ಲವೂ ತಾನೇ ಆಗಿದ್ದ ಅಪ್ಪಟ ಪ್ರತಿಭಾಶಾಲಿ ಕಿಶೋರ್ ಒಂದರ್ಥದಲ್ಲಿ ಒನ್ ಮ್ಯಾನ್ ಆರ್ಮಿ. 1929ರ ಆಗಸ್ಟ್ 6 ರಂದು ಮಧ್ಯಪ್ರದೇಶದ ಖಾಂಡ್ವಾದಲ್ಲಿ ವಕೀಲರ ಪುತ್ರರಾಗಿ ಜನಿಸಿದ (ಅಭಾಸ್ ಕುಮಾರ್ ಗಂಗೂಲಿ, ಕಿಶೋರ್) ನಟನಾಗುವ ತಹತಹ ಹೊಂದಿದ್ದರು. ಅಣ್ಣ ಅಶೋಕ್ ಕುಮಾರ್ ಹಾಗೂ ತಮ್ಮ ಅನೂಪ್ ಕುಮಾರ್ ರದು ಹಿಂದಿ ಚಿತ್ರರಂಗದಲ್ಲಿ ಆವಾಗಲೇ ದೊಡ್ಡ ಹೆಸರು. ಸೈಗಲ್ರ ಕಟ್ಟಾ ಅಭಿಮಾನಿಯಾಗಿದ್ದ ಕಿಶೋರ್ ವೃಂದಗಾನದಲ್ಲಿ ಒಬ್ಬರಾಗಿ ಹಾಡುವುದರೊಂದಿಗೆ ಶಿಕಾರಿ (1946) ಚಿತ್ರದಲ್ಲಿ ನಟಿಸಿದರು.
ಗಾಯಕರಾಗಿ ಮೊದಲ ಚಿತ್ರ ಜಿದ್ದಿ (1948) ಸಂಗೀತ ಖೇಮ್ಚಂದ್ ಪ್ರಕಾಶ್, ಗೀತೆ ಮರ್ನೇಕೀ ದುವಾಯೇ ಕ್ಯೂಂ ಮಾಂಗೂ
ಹಾಡು ಸೂಪರ್ ಹಿಟ್. ನಂತರ ಸಾಲು ಸಾಲು ನಟನೆ. ಲಡ್ಕಿ (1953), ನೌಕರಿ (1954) ಭಾಯಿಭಾಯಿ (1956), ಆಶಾ, ಮುಸಾಫಿರ್ (1957) ಹಮ್ಸಬ್ ಉಸ್ತಾದ್ ಹೈ (1965) ಪಡೋಸನ್ (1968) ಇತರೆ, ಇತರೆ. ಗಾಯಕನಾಗಿ ಮುನೀಮ್ ಜೀ ಟ್ಯಾಕ್ಸಿ ಡ್ರೈವರ್, ಹೌಸ್ ನಂಬರ್: 44, ಫಟೂಸ್, ನೌ ದೋ ಗ್ಯಾರಹ, ಪೇಯಿಂಗ್ ಗೆಸ್ಟ್, ಗೈಡ್, ಜುವೆಲ್ ತೀಫ್, ಫ್ರೇಮ್ ಪೂಜಾರಿ, ತೇರೇ ಮೇರೆ ಸಪ್ನೇ ಮುಂತಾದ ಚಿತ್ರಗಳಲ್ಲಿ ತಮ್ಮ ಕಂಠಸಿರಿಯಿಂದ ಮೋಡಿಗೊಳಿಸಿದರು.
ತಾವೇ ನಿರ್ಮಾಪಕ ನಿರ್ದೇಶಕ ನಟ, ನಾಯಕ, ಗಾಯಕ, ಸಂಗೀತಗಾರ, ಕಥೆಗಾರ, ಗೀತ ರಚನೆಕಾರ ಎಲ್ಲವೂ ಆಗಿ ಹಲವು ಚಿತ್ರಗಳನ್ನು (ಚಲ್ತಿಕಾ ನಾಮ್ ಗಾಡಿ, ಜುಮ್ರೂ, ದೂರ್ ಗಗನ್ ಕೀ ಚಾವೋಮೇ ಇತರೆ) ನಿರ್ಮಿಸಿದರು. ಆಗಿನ ಕಾಲದಲ್ಲಿ ಪ್ರೇಮಗೀತೆಗಳಿಗೆ ಮಹಮ್ಮದ್ ರಫಿ, ದುಃಖದ ಗೀತೆಗಳಿಗೆ ಮುಕೇಶ್ ಹೆಸರಾಗಿದ್ದರು. ಕಿಶೋರ್ ನವರಸಗಳನ್ನು ಪ್ರದರ್ಶಿಸಿ ಹಾಡ ಬಲ್ಲವರಾಗಿದ್ದರು. ಸಂಗೀತ ನಿರ್ದೇಶಕ ಸಚಿನ್ ದೇವ್ ಬರ್ಮನ್ ಹಾಗೂ ಅವರಿಗೆ ಸಹಾಯಕರಾಗಿದ್ದ ರಾಹುಲ್ ದೇವ್ ಬರ್ಮನ್ ಇವರಲ್ಲಿದ್ದ ಸುಪ್ತ ಪ್ರತಿಭೆಯನ್ನು ಒರೆಗೆ ಹಚ್ಚಿ ಅಸಂಖ್ಯ ಅವಕಾಶ ನೀಡಿದರು. ಶಕ್ತಿ ಸಾಮಂತರ ನಿರ್ದೇಶನದಲ್ಲಿ ರಾಜೇಶ್ ಖನ್ನಾ ದ್ವಿಪಾತ್ರದಲ್ಲಿದ್ದ ಆರಾಧನಾ (1969) ಚಿತ್ರದ 3 ಗೀತೆಗಳು ಕಿಶೋರ್ರನ್ನು ಜನಪ್ರಿಯತೆಯ ಬಾಂದಳದಲ್ಲಿ ಮೇರು ಶಿಖರಕ್ಕೇರಿಸಿ ಪ್ರಶಸ್ತಿಗಳ ಮಾಲೆಯನ್ನೇ ಪೋಣಿಸಿತು.
ಅಂದಿನಿಂದ ಕಿಶೋರ್ ಹಿಂದೆ ನೋಡಲಿಲ್ಲ. ಎಲ್ಲೆಡೆ ರೂಪ್ ತೇರಾ ಮಸ್ತಾನಾ, ಮೇರೆ ಸಪುನೋಂಕಿ ರಾಣಿ ಗೀತೆಗಳೇ ಅನುರಣಿಸು ತ್ತಿದ್ದವು. ರಾಜೇಶ್ ಖನ್ನಾ, ಜಿತೇಂದ್ರ, ಅತಾಬ್ ಬಚ್ಚನ್, ದೇವ್ ಆನಂದ್ರಿಗೆ ಅವರೇ ಹೇಳುತ್ತಿರುವಂತೆ ಭಾಸವಾಗುವಂತೆ ಕಿಶೋರ್ ಧ್ವನಿ ಬದಲಾಯಿಸಿ ಹಾಡುತ್ತಿದ್ದರು. ಕಿಶೋರ್ ಭಾರತೀಯ ಚಿತ್ರಪ್ರೇಮಿಗಳಿಗೆ ನಗು, ಅಳು, ಪ್ರೀತಿ, ರೌದ್ರ, ಹಾಸ್ಯ, ಭೀಭತ್ಸ, ಮಮತೆ ಎಲ್ಲ ರೀತಿಯ ನವರಸಗಳನ್ನೂ ತಮ್ಮ ಗೀತೆಗಳಲ್ಲಿ ಉಣಬಡಿಸಿದರು. ಒಟ್ಟು 92 ಚಿತ್ರಗಳಲ್ಲಿ ನಟಿಸಿದ ಕಿಶೋರ್ದಾ 10 ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಸುಮಾರು 2600 ಸುಶ್ರಾವ್ಯ ಗೀತೆ ಹಾಡಿದ್ದಾರೆ. ಹಿಂದಿ, ಅಸ್ಸಾಮಿ,
ಮಲಯಾಳಂ, ಉರ್ದು, ಗುಜರಾತಿ, ಮರಾಠಿ ಚಿತ್ರಗಳೊಂದಿಗೆ ಕನ್ನಡದ ಕುಳ್ಳ ಏಜೆಂಟ್ 000 ಚಿತ್ರಕ್ಕಾಗಿ ರಾಜನ್ ನಾಗೇಂದ್ರರ ಸಂಗೀತ ನಿರ್ದೇಶನದಲ್ಲಿ ಆಡೂ ಆಟ ಆಡು ಗೀತೆ ಹಾಡಿ ರಂಜಿಸಿದ್ದಾರೆ.
ಒಟ್ಟು 8 ಬಾರಿ ಫಿಲಂಫೇರ್ ಪ್ರಶಸ್ತಿಗಳಲ್ಲದೇ ಅನೇಕ ಸಂಘ ಸಂಸ್ಥೆಗಳ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಿಶೋರ್ರಿಗೆ ನಾಲ್ಕು ಜನ ಪತ್ನಿಯರು. ರೂಮಾಗುಹಾ ಠಾಕೋರ್ (1950-58), ಮಧುಬಾಲಾ (1969-75), ಯೋಗಿತಾಬಾಲಿ (1876-78) ಲೀನಾ ಚಂದಾ ವರ್ಕರ್ (1980-87). ಇಬ್ಬರು ಮಕ್ಕಳು, ಅಮಿತ್ ಕುಮಾರ್ ತಂದೆಯಂತೆ ಪ್ರಸಿದ್ಧ ಹಿನ್ನೆಲೆ ಗಾಯಕರು. ಇನ್ನೋರ್ವ ಮಗ ಸುಮಿತ್ಕುಮಾರ್. ಕುಚ್ ಲೋ ಲೋಗ್ ಕಹೇಂಗೇ ಎನ್ನುತ್ತ ತಲೆ ಕೆಡಿಸಿಕೊಳ್ಳದೆ ತಮ್ಮ ಜೀತಾಂತ್ಯದವರೆಗೂ ಗಾತಾ ರಹೇ ಮೇರಾ ದಿಲ್ ಎಂದು ಹಾಡುತ್ತಲೇ 1987ರ ಅಕ್ಟೋಬರ್ 13ರಂದು ಹೃದಯಾಘಾತದೊಂದಿಗೆ ವಿಧಾತನನ್ನು ಹಾಡಿ ರಂಜಿಸಲು ತಮ್ಮ ೫೮ನೇ ವಯಸ್ಸಿನಲ್ಲಿ ಹೊರಟೇ ಬಿಟ್ಟರು.