Wednesday, 11th December 2024

ಸಂತ್ರಸ್ತರ ಮೊಗದಲ್ಲಿ ಕಂಡ ಧನ್ಯತಾ ಭಾವ

ಅನುಭವ

ಶರಣ್ ಶೆಟ್ಟಿ/ತನ್ಮಯ ಪ್ರಕಾಶ್

ಪ್ರಣಿತಾ ಫೌಂಡೇಶನ್ ಕಡೆಯಿಂದ ರೇಷನ್ ಕಿಟ್ ತೆಗೆದುಕೊಂಡ ಪ್ರವಾಹ ಪೀಡಿತ ಸಂತ್ರಸ್ತರು ಮನಸಾರೆ ನಮಗೆ ಕೃತಜ್ಞತೆ ಕೋರಿದರು. ಆ ಕ್ಷಣ, ನಮ್ಮಗೆ
ಆದಂತಹ ತೃಪ್ತಿ, ಎಷ್ಟು ಲಕ್ಷಗಳನ್ನು ಕೊಟ್ಟು ಐಷಾರಾಮಿ ವಸ್ತುಗಳನ್ನು ಖರೀದಿಸಿದರೂ ಸಿಗುವುದಿಲ್ಲ. ಅವರ ಕಣ್ಣಲ್ಲಿ ತುಂಬಿದ್ದ ಕಣ್ಣೀರು, ತುಟಿ ಅಂಚಿನ ನಗು ಎಲ್ಲವೂ ನಮ್ಮನ್ನು ಭಾವುಕರಾಗಿಸಿಬಿಟ್ಟಿತ್ತು.

ಇತ್ತೀಚೆಗೆ ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿನ, ಏಳು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿ, ಹೆಚ್ಚು ಮಳೆಯಾಗುವ ಮುನ್ಸೂಚನೆ ನೀಡಿತ್ತು. ಈ ಭಾಗಗಳಲ್ಲಿ ಧಾರಾಕಾರ ಮಳೆ ಸುರಿದು, ಭೂಕುಸಿತ ಉಂಟಾಗಿ, ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಜನರ ಜೀವನ, ಆಸ್ತಿ-ಪಾಸ್ತಿ ಎಲ್ಲದಕ್ಕೂ ಹಾನಿ ಉಂಟಾಗಿತ್ತು. ಇಂತಹ ದುಸ್ಥಿತಿಯ ಸಂದರ್ಭದಲ್ಲಿಯೇ, ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಅಲೆ ಬೀಸಿ, ರಾಜ್ಯದ ಜನತೆಯ ಗಮನವೆಲ್ಲವೂ ಅದರೆಡೆಯೇ ವಾಲಿತ್ತು.

ಈ ಸಂದರ್ಭದ ಕುರಿತು ತಿಳಿಯುತ್ತಿದ್ದಂತೆ, ಪ್ರಣಿತಾ ಸುಭಾಷ್ ಅವರು ತಕ್ಷಣವೇ ಪ್ರಣಿತಾ ಫೌಂಡೇಶನ್ ತಂಡಕ್ಕೆ ಕರೆ ನೀಡಿ, ಈ ಕಷ್ಟ ಕಾಲದಲ್ಲಿ ತೊಂದರೆಗೆ ಒಳಗಾಗಿರುವ ಜನರಿಗೆ ನಾವು ನೆರವಾಗಬೇಕು, ನಮ್ಮ ಶಕ್ತಿಯಲ್ಲಿ ಏನು ಮಾಡಬಹುದೋ ಅದನೆ ಮಾಡೋಣ. ನಮ್ಮ ರಾಜ್ಯದ ಜನರಿಗೆ ಸಹಾಯ ಹಸ್ತವನ್ನು ನೀಡೋಣ ಎಂದು ನುಡಿದರು. ತಡಮಾಡದೇ, ಶತಾಯ ಗತಾಯ ಏನಾದರೂ ಮಾಡಲೇ ಬೇಕು ಎಂದು ಪಣ ತೊಟ್ಟು, ಕೇವಲ 24 ಗಂಟೆಗಳಲ್ಲಿ, ಸುಮಾರು 300 ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ನಿರ್ಧರಿಸಿ, ರೇಷನ್ ಕಿಟ್ ತಯಾರು ಮಾಡಿ, ಪ್ರವಾಹ ಪೀಡಿತ ಜಾಗವಾಗಿದ್ದ ಉತ್ತರ ಕರ್ನಾಟಕಕ್ಕೇ ತೆರಳಲು ಸಿದ್ಧರಾದೆವು.

ಇಲ್ಲಿಯವರೆಗೆ ಮಾಧ್ಯಮಗಳಲ್ಲಿ ಪ್ರವಾಹದ ಬಗ್ಗೆ ನೋಡುತ್ತಿದ್ದೆವು. ಅದರಿಂದ ಉಂಟಾದ ಹಾನಿಯ ಬಗ್ಗೆ ಕೇಳುತ್ತಿದ್ದೆವು. ಆದರೆ ಮೊದಲ ಬಾರಿಗೆ ಆ ಪರಿಸ್ಥಿತಿಯನ್ನು ನೋಡಿ, ನೊಂದ ಜನರಿಗೆ ನಮ್ಮ ಕೈಯದ ಸಹಾಯ ನೀಡಲು ಹೋಗುತ್ತಿದ್ದ ಭಾವನೆಯನ್ನು, ವ್ಯಕ್ತ ಪಡಿಸಲು ಪದಗಳೇ ಸಾಲದು. ಸಮಾಜಕ್ಕೆ ಒಳಿತು ಮಾಡಲು ಇಚ್ಛಿಸುವವರು, ಕೇವಲ ತಮ್ಮ ಆರಾಮ ವಲಯದಲ್ಲಿ ಕೂತು, ಹೆಸರು- ಗುರುತಿಸುವಿಕೆಗಾಗಿ ಕೆಲಸ ಮಾಡಬಾರದು, ಎಂತಹ ಪರಿಸ್ಥಿತಿಯ ದರೂ ಜನರಿಗೆ ಸಹಾಯ ನೀಡಲು ಸದಾ ಮುಂದಿರಬೇಕು ಎಂದು ಪ್ರಣಿತಾ ಅವರು ಹೇಳಿದ್ದರಿಂದ, ಆ ಭಾಗಗಳಲ್ಲಿ ಉಂಟಾಗಿದ್ದ ವಾತಾವರಣವನ್ನು ಲೆಕ್ಕಿಸದೆ, 28 ಜೂಲೈ 2021 ಬುಧವಾರದಂದು, ಉತ್ತರ ಕನ್ನಡಕ್ಕೆ ಹೋದೆವು.

ಅಲ್ಲಿನ ಸ್ಥಳೀಯ ವ್ಯಕ್ತಿಯನ್ನು ಭೇಟಿ ಮಾಡಿ, ಅತ್ಯಂತ ಹಾನಿ ಉಂಟಾಗಿದ್ದಂತಹ ಜಾಗಗಳಿಗೆ ತೆರಳಿ, ಅಲ್ಲಿ ರೇಷನ್ ಕಿಟ್ ವಿತರಿಸಲು ಮುಂದಾದೆವು.
ಗಂಗಾವಳಿ ನದಿಯ ತೀರದಲ್ಲಿ ಇದ್ದ, ಅಂಕೋಲಾ ಹಳ್ಳಿಯಲ್ಲಿ ಜೀವನ ಸಾಗಿಸುತಿದ್ದ ಮೀನುಗಾರ ಸಮುದಾಯದವರು, ಬಹಳಷ್ಟು ತೊಂದರೆಗೀಡಾಗಿದ್ದರು. ಆದರಿಂದ ನಾವು ಮೊದಲು ಭೇಟಿ ನೀಡಿದ್ದು, ಗಂಗಾವಳಿ ನದಿ ತೀರಕ್ಕೆ. ಅಲ್ಲಿ ಹೋಗಿದ್ದ ನಂತರ, ಗಾಡಿಯಿಂದ ಕೆಳಗೆ ಇಳಿಯುತ್ತಿದ್ದಂತೆ, ಕಂಡ ದೃಶ್ಯಾವಳಿ
ಅತ್ಯಂತ ದುಃಖಕರವಾಗಿತ್ತು. ಪ್ರವಾಹದ ನೀರಿನ ಮಟ್ಟ ಕಮ್ಮಿ ಆಗಿತ್ತು, ಆದರೆ ಅದರಿಂದ ಉಂಟಾಗಿದ್ದ ಕಷ್ಟ-ನಷ್ಟಗಳಿಗೆ ಲೆಕ್ಕವೇ ಇಲ್ಲದಂತಾಗಿತ್ತು. ಕೆಲವರ ಮನೆ ಬಿದ್ದು ಹೋಗಿದ್ದರೇ, ಇನ್ನೂ ಕೆಲವರ ಮನೆಯ ವಸ್ತುಗಳು ನೀರು ಪಾಲಾಗಿದ್ದವು.

ಮೀನುಗಾರ ಸಮುದಾಯದ ಮುಖ್ಯ ಅಂಗವಾದ, ಬಲೆಗಳನ್ನುಕಳೆದುಕೊಂಡು, ಲಕ್ಷ ರುಪಾಯಿಗಿಂತಲೂ ಅಧಿಕ ನಷ್ಟ ಎದುರಿಸಿದ್ದರು. ನಾವು ಅಲ್ಲಿ ತೆರಳಿ ದೊಡನೆ, ಯಾರಿವರು ಎಂಬ ಗೊಂದಲದಲ್ಲಿ ನಮ್ಮನ್ನು ಕಂಡರು. ನಮ್ಮೊಡನೆ ಬಂದಿದ್ದ ಸ್ಥಳೀಯ ವ್ಯಕ್ತಿ, ನಮ್ಮ ಫೌಂಡೇಶನ್ ಬಗ್ಗೆ ಹಾಗೆಯೇ ನಮ್ಮ ಉದ್ದೇಶದ ಬಗ್ಗೆ ತಿಳಿಸಿದಾಗ, ಅವರ ಮುಖದಲ್ಲಿ ಮೂಡಿದ ಮುಗುಳುನಗೆ, ನಮಗಾಗಿ ಯಾರೋ ಬಂದಿದ್ದಾರೆ ಎಂಬ ಶಮನತೆಯೇ ಸಮಾಜ ಕಲ್ಯಾಣದ ಗುರಿ ಎಂಬುದನ್ನು ಅರ್ಥೈಸಿತು.

ಅಲ್ಲಿನ ಜನರು, ಅನುಭವಿಸಿದ್ದ ಮನಮಿಡಿಯುವ ಸಂಧರ್ಭವನ್ನು ಹೇಳಿದರು. ಕೇವಲ ಅರ್ಧ- ಮುಕ್ಕಾಲು ಗಂಟೆಯ ಅವಧಿಯಲ್ಲಿ, ಹೇಗೆ ಅವರ ಮನೆಗಳಲ್ಲಿ ಸುಮಾರು ನಾಲ್ಕು ಅಡಿ ನೀರು ತುಂಬಿಹೋಗಿತ್ತು, ತಕ್ಷಣವೇ ಎಲ್ಲರು, ಆಸ್ತಿ-ಇತರೆ ವಸ್ತುಗಳನ್ನು ಲೆಕ್ಕಿಸದೆ, ಜೀವ ಉಳಿದರೆ ಸಾಕು ಎಂಬಂತೆ, ದೋಣಿಯಲ್ಲಿ
ಹತ್ತಿರದಲ್ಲಿದ್ದ ಶಾಲೆಗೆ ಹೋಗಿದ್ದರು. ಬೇರೆ ಬೇರೆ ಕುಟುಂಬ ಅಥವಾ ಬೇರೆ ಬೇರೆ ಜಾತಿ, ಮತಗಳು ಎಂಬ ಯಾವುದೇ ಭಾವವು ತಲೆಗೆ ಹೊಕ್ಕದೆ, ಅಂದು ಅವರಿಗೆಲ್ಲರಿಗೂ ಇದ್ದಂತಹ ಗುರಿ, ಎಲ್ಲರನ್ನು ಸುರಕ್ಷಿತವಾಗಿ ಬೇರೆಡೆಗೆ ಕರೆದೊಯ್ಯುವುದು.

ಕಷ್ಟದ ಸಂಗತಿಯಲ್ಲಿ, ನೆನಪಾಗೋದು ಮನುಷತ್ವ ಒಂದೇ ಹೊರತು, ಮಾನವ ಹುಟ್ಟು ಹಾಕಿರುವ ಜಾತಿ-ಮತಗಳೆಂಬ ಭೇದಗಳಲ್ಲ ಎಂಬುದನ್ನು ಅವರೆಲ್ಲರೂ
ಸಾಬೀತುಪಡಿಸಿದರು. ನಂತರ ರೇಷನ್ ಕಿಟ್ ತೆಗೆದುಕೊಂಡು, ಮನಸಾರೆ ನಮಗೆ ಕೃತಜ್ಞತೆ ಕೋರಿದರು. ಆ ಕ್ಷಣ, ನಮ್ಮಗೆ ಆದಂತಹ ತೃಪ್ತಿ, ಎಷ್ಟು ಲಕ್ಷಗಳನ್ನು ಕೊಟ್ಟು ಐಷಾರಾಮಿ ವಸ್ತುಗಳನ್ನು ಖರೀದಿಸಿದರು ಸಿಗುವುದಿಲ್ಲ. ಅವರ ಕಣ್ಣಲ್ಲಿ ತುಂಬಿದ್ದ ಕಣ್ಣೀರು, ತುಟಿ ಅಂಚಿನ ನಗು ಎಲ್ಲವು ನಮ್ಮನ್ನು ಭಾವುಕರಾಗಿಸಿ ಬಿಟ್ಟಿತ್ತು. ಹೀಗೆ ಇನ್ನು ಕೆಲವು ಪ್ರವಾಹ ಪೀಡಿತ ಜಾಗಗಳಿಗೆ ಭೇಟಿ ನೀಡಿ, ಅಲ್ಲಿನ ಜನರ ನೋವುಗಳ ಬಗ್ಗೆ ತಿಳಿದು, ರೇಷನ್ ಕಿಟ್ ವಿತರಿಸಿದೆವು.

ಪ್ರಣಿತಾ ಫೌಂಡೇಶನ್‌ನ ಎಲ್ಲಾ ಸ್ವಯಂ ಸೇವಾಕರ್ತರು, ಬಹಳಷ್ಟು ಕಾಳಜಿ ವಹಿಸಿ ಅವರಿಗೆ ನೀಡಿದ್ದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಪಾಲಿಸಿದರು. ಸಂಜೆಯ ವೇಳೆಗೆ ವಿತರಣೆಯನ್ನು ಮುಗಿಸಿ ವಾಪಸ್ ಬೆಂಗಳೂರಿನೆಡೆಗೆ ನಮ್ಮ ಪಯಣ ಸಾಗಿತ್ತು. ಈ ರೀತಿಯ ಅನುಭವಗಳೇ, ನಿಜವಾಗಿಯೂ ಜೀವನವೆಂದರೆ ಏನು ಎಂಬುದನ್ನು ತೋರಿಸುತ್ತದೆ. ಜೀವಕ್ಕೆ ಸವಾಲೆನಿಸುವ ಕಷ್ಟಗಳ ಎದುರು, ನಮ್ಮ ಕಷ್ಟಗಳು ಏನು ಇಲ್ಲ. ಜೀವನ ಎಂಬುದು ಇತರೆ ಜೀವಿಗಳಿಗೆ ಬೆಲೆ ನೀಡಿ,
ಸಹಾಯ ಮಾಡುವುದೇ ಹೊರತು, ಐಷಾರಾಮಿ ವಸ್ತುಗಳನ್ನು ಖರೀದಿಸುವುದು, ಆಸ್ತಿ ಸಂಪಾದಿಸುವುದಲ್ಲ.

ಪ್ರಣಿತಾ ಫೌಂಡೇಶನ್ ತನ್ನ ಗುರಿಯಂತೆ, ತೊಂದರೆಗೀಡಾದವರಿಗೆ ಶಕ್ತಿ ಮೀರಿ ಸಹಾಯ ನೀಡಿ, ಅವರ ಜೀವನದ ಮೇಲೆ ಪರಿಣಾಮ ಬೀರಿ, ಅವರ ಮುಖದಲ್ಲಿ ನಗು ತರಿಸುವ ಕೆಲಸದಲ್ಲಿ ತೊಡಗಿತು. ಹೀಗೆ ಇನ್ನು ಹತ್ತು ಹಲವಾರು ಕೆಲಸ ಮಾಡಿ, ಮನುಷ್ಯತ್ವವೇ ಮನುಷ್ಯನ ಜೀವನದ ತತ್ವವಾಗಿರಬೇಕು ಎಂಬುದನ್ನು ಎಲ್ಲರು ಸಾಬೀತು ಮಾಡೋಣ.