ಮೂರ್ತಿ ಪೂಜೆ
ಮುಂಬರುವ ವಿಧಾನಸಭಾ ಚುನಾವಣೆಗಿಂತ ಮುಂಚೆ ರಾಜ್ಯ ಬಿಜೆಪಿಯ ದೇಹದಲ್ಲಿ ಕೆಜೆಪಿಯ ಆತ್ಮ ಸೆಟ್ಲಾಗಲಿದೆಯೇ? ಕಳೆದ ಕೆಲ ದಿನ ಗಳಿಂದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕ್ಯಾಂಪಿನ ವರ್ತನೆಗಳನ್ನು ನೋಡಿದರೆ ಇಂತಹ ಅನುಮಾನ ಕಾಡುವುದು ಸಹಜ. ಅಂದ ಹಾಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಪುತ್ರ ವಿಜಯೇಂದ್ರ ಅವರಿಗೆ ಪಕ್ಷದ ಟಿಕೆಟ್ ಕೊಡಿಸುವ ಆ ಮೂಲಕ ಬೊಮ್ಮಾಯಿ ಸರಕಾರದ ಮೇಲೆ ನಿಯಂತ್ರಣ ಸಾಧಿಸುವುದು ಯಡಿಯೂರಪ್ಪ ಅವರ ಲೆಕ್ಕಾಚಾರವಾಗಿತ್ತು.
ಆದರೆ ಪಕ್ಷದ ಕೋರ್ ಕಮಿಟಿಯ ಮೂಲಕ ವಿಜಯೇಂದ್ರ ಅವರ ಹೆಸರು ದಿಲ್ಲಿಗೆ ಶಿಫಾರಸಾಗಿ ಹೋದರೂ, ಸಂತೋಷ್ ಹೊಡೆತ ದಿಂದ ಎಲ್ಲವೂ ಉಲ್ಟಾ ಆಯಿತು ಎಂಬುದು ಯಡಿಯೂರಪ್ಪ ಅವರ ಸಿಟ್ಟು. ಆದರೆ ಒಂದು ಕಡೆಯಿಂದ ಪಕ್ಷದ ಮೇಲೆ, ಮತ್ತೊಂದು ಕಡೆಯಿಂದ ಸರಕಾರದ ಮೇಲೆ ಸಂತೋಷ್ ಅವರು ನಿಯಂತ್ರಣ ಸಾಧಿಸಿರುವ ರೀತಿ ಯಡಿಯೂರಪ್ಪ ಅವರಿಗೆ ನುಂಗಲಾರದ ತುತ್ತಾಗಿ ಹೋಗಿದೆ.
ಹಾಗಂತ ಈ ಹಿಂದೆ ಮಾಡಿದಂತೆ ಪಕ್ಷ ತೊರೆದು ಬೇರೆ ಪಕ್ಷ ಕಟ್ಟುವ ಸ್ಥಿತಿಯಲ್ಲೂ ಅವರಿಲ್ಲ. ದಿಲ್ಲಿಯಲ್ಲಿ ಮೋದಿ-ಅಮಿತ್ ಶಾ ಜೋಡಿ ಇರುವಾಗ ಇಂತಹ ಸಾಹಸ ಮಾಡುವುದು ಕಷ್ಟ ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿ ಬಿಜೆಪಿಯಿಂದ ಹೊರಹೋಗಿ ಆಟ ಕಟ್ಟುವ ಬದಲು, ಒಳಗಿದ್ದೇ ಆಟ ಕಟ್ಟುವುದು ಅವರ ಯೋಚನೆ. ಪಕ್ಷದಿಂದ ಹೊರ ಹೋಗುತ್ತೇವೆ ಎಂದರೆ ತಾನೇ ಮೋದಿ- ಅಮಿತ್ ಶಾ ಜೋಡಿ ಮುಗಿ ಬೀಳುವುದು? ಹೀಗಾಗಿ ಒಳಗಿದ್ದೇ ಆಟ ಶುರು ಮಾಡುವುದು ಅವರ ಯೋಚನೆ.
ಅಂದ ಹಾಗೆ ಯಡಿಯೂರಪ್ಪ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದು ಹತ್ತು ತಿಂಗಳ ಮೇಲಾದರೂ ರಾಜ್ಯ ಬಿಜೆಪಿಯಲ್ಲಿ ಪರ್ಯಾಯ ನಾಯಕತ್ವ ಎಂಬುದು ಸೃಷ್ಟಿಯಾಗಿಲ್ಲ. ಪಿಕ್ಚರು ಮಾಡುವಾಗ ಒಂದೋ ಹೀರೋ ಇರಬೇಕು, ಇಲ್ಲವೇ ಸ್ಟೋರಿ ಇರಬೇಕು ಎಂಬ ಲೆಕ್ಕಾ ಚಾರದಲ್ಲಿರುವ ಬಿಜೆಪಿ ನಾಯಕರು ಈಗ ಸ್ಟೋರಿಗೆ ಜೋತು ಬಿದ್ದಿದ್ದಾರಾದರೂ, ತಾವು ತೋರಿಸುತ್ತಿರುವ ಸ್ಟೋರಿಯಿಂದ ಪಿಕ್ಚರಿನ ಕಲೆಕ್ಷನ್ನು(ಜನ ಬೆಂಬಲ)ಹೆಚ್ಚುತ್ತಿದೆ ಅಂತ ಅವರಿಗೂ ಅನ್ನಿಸುತ್ತಿಲ್ಲ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಿಜೆಪಿ ಪಿಕ್ಚರಿಗೆ ಸ್ಟೋರಿಗಿಂತ ಹೀರೋನೇ ಮುಖ್ಯ ಎಂಬುದು ಯಡಿಯೂರಪ್ಪ ಅವರಿಗೂ ಗೊತ್ತಲ್ಲ? ಹೀಗಾಗಿ ಅವರೀಗ ತಮ್ಮ ಹಿಡಿತದಿಂದ ದೂರ ಹೋಗಿರುವ ಸರಕಾರದ ಮೇಲೆ ಹಿಡಿತ ಸಾಧಿಸುವ ಕಸರತ್ತು ಆರಂಭಿಸಿದ್ದಾರೆ. ರಾಜ್ಯದ ಯಾವ ಭಾಗಕ್ಕೆ ಹೋದರೂ ಮುಂದಿನ ಸಿಎಂ ವಿಜಯೇಂದ್ರ ಎಂಬ ಕೂಗು ಏಳುತ್ತಿರುವುದು ಇದರ ಭಾಗ.
ಇದು ಗೊತ್ತಿರುವುದರಿಂದಲೇ ಇತ್ತೀಚಿಗೆ ಸಚಿವರಾದ ಮುರುಗೇಶ್ ನಿರಾಣಿ ಮತ್ತು ನಾರಾಯಣಗೌಡ ಅವರು, ವಿಜಯೇಂದ್ರ ಮುಂದಿನ ಸಿಎಂ ಆಗಬಹುದು ಎಂದು ಹೇಳಿದ್ದು. ಈ ಪೈಕಿ ನಾರಾಯಣಗೌಡರಿಗೆ ಒಂದು ಅನಿವಾರ್ಯತೆ ಇದೆ. ಅದೆಂದರೆ ಬಿಜೆಪಿಯಲ್ಲಿ ಯಡಿಯೂ ರಪ್ಪ ಪವರ್ ಕಡಿಮೆಯಾದರೆ ತಮಗೆ ಭವಿಷ್ಯವಿಲ್ಲ ಎಂಬುದು.ಹೀಗಾಗಿ ಯಡಿಯೂರಪ್ಪ ಅವರ ಪರವಾಗಿ ಅವರು ವಿಜಯೇಂದ್ರ ಅವರ ಪರ ಕೂಗು ಹಾಕಿದ್ದಾರೆ. ಇನ್ನು ನಿರಾಣಿ ಅವರಿಗೆ ಭವಿಷ್ಯದ ಲಿಂಗಾಯತ ನಾಯಕನ ಪಟ್ಟ ಬೇಕು. ಇಂತಹ ಕನಸಿರುವಾಗ ಸಮುದಾ ಯದ ನಾಯಕ ಯಡಿಯೂರಪ್ಪ ಅವರ ವಿರುದ್ದ ನಿಲ್ಲುವುದು ತಮಗೆ ಡೇಂಜರ್ ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿ ಅವರು ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಿದ್ದಾರೆ. ಅವರು ಈಗ ವಿಜಯೇಂದ್ರ ಮುಂದಿನ ಸಿಎಂ ಆಗಬಹುದು ಎನ್ನುವ ಮೂಲಕ ಯಡಿಯೂರಪ್ಪ
ಕ್ಯಾಂಪನ್ನು ಓಲೈಸಿದ್ದಾರೆ.
ಮತ್ತೊಂದು ಕಡೆಯಿಂದ ಅವರ ಮಾತು ಸಂತೋಷ್ ಗ್ಯಾಂಗಿನ ಕಣ್ಣು ಕುಕ್ಕುತ್ತಾ, ವಿಜಯೇಂದ್ರ ಅವರ ಮೇಲೆ ಇನ್ನೊಂದು ರೌಂಡು ಮುಗಿ ಬೀಳಲು ಕುಮ್ಮಕ್ಕು ಕೊಟ್ಟಿದೆ. ಆದರೆ ಅದೇನೇ ಇದ್ದರೂ ನಾರಾಯಣಗೌಡ, ಮುರುಗೇಶ್ ನಿರಾಣಿಯವರ ಮಾತುಗಳು ಯಡಿಯೂರಪ್ಪ ಕ್ಯಾಂಪಿಗೆ ಬೂಸ್ಟರ್ ಡೋಸ್ ಆಗಿರುವುದಂತೂ ನಿಜ. ಹೀಗಾಗಿ ಈ ಗುಂಪು ಈಗ ವಸತಿ ಸಚಿವ ವಿ.ಸೋಮಣ್ಣ ಅವರ ಮೇಲೆ ಮುಗಿ ಬಿದ್ದಿದೆ. ರಾಜ್ಯದಲ್ಲಿ ಬಿ.ಎಲ್.ಸಂತೋಷ್ ಪವರ್ ಹೆಚ್ಚಾಗುವುದರ ಹಿಂದೆ ಸೋಮಣ್ಣ ಅವರ ಪಾತ್ರವೂ ಇದೆ ಎಂಬುದು ಅದರ ಸಿಟ್ಟು.
ಅಂದ ಹಾಗೆ ಸೋಮಣ್ಣ ಅವರನ್ನು ಲಿಂಗಾಯತ ಮಠಗಳು ಇಷ್ಟಪಡುತ್ತವೆ. ಇದನ್ನೇ ಗುರುತಿಸಿ ಸೋಮಣ್ಣ ಅವರಿಗೆ ಸಂತೋಷ್ ಬೆಂಬಲ ಸಿಕ್ಕಿದೆ. ಈ ಬೆಂಬಲ ಯಾವ ಮಟ್ಟದಲ್ಲಿದೆ ಎಂದರೆ ಬೊಮ್ಮಾಯಿ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸುವುದಾದರೆ ಪರ್ಯಾಯ ನಾಯಕತ್ವಕ್ಕೆ ಸೋಮಣ್ಣ ಬೆಸ್ಟು ಅಂತ ಹವಾ ಎಬ್ಬಿಸುವ ಮಟ್ಟಿಗೆ ಬೆಳೆದಿದೆ. ಬೊಮ್ಮಾಯಿ ಅವರಿಗೆ ಯಡಿಯೂರಪ್ಪ ಅವರು ಬೆಂಬಲ ಕೊಟ್ಟರು. ಜನತಾ ಪರಿವಾರದಿಂದ ಬಂದು ಸಚಿವರಾಗಿರುವ ಕೆಲವರು ಈಗ ಬೆಂಬಲ ಕೊಡುತ್ತಿದ್ದಾರೆ. ಆದರೆ ಮೂಲ
ಬಿಜೆಪಿ ಗರಲ್ಲಿ ಒಂದಿಬ್ಬರನ್ನು ಹೊರತುಪಡಿಸಿ ಯಾರೂ ಬೆಂಬಲ ಕೊಡುತ್ತಿಲ್ಲ.
ಆದರೆ ಸೋಮಣ್ಣ ಸಿಎಂ ಆದರೆ ಲಿಂಗಾಯತ ಮಠಗಳು ಸಾಲಿಡ್ ಸಪೋರ್ಟ್ ಕೊಡುತ್ತವೆ.ಅವುಗಳ ಸಪೋರ್ಟ್ ಸಿಗುವುದರಿಂದ ಉಳಿದವರೂ ಒಪ್ಪುತ್ತಾರೆ ಅಂತ ಸಂತೋಷ್ ಹೈಕಮಾಂಡ್ ಲೆವೆಲ್ಲಿನಲ್ಲಿ ದೋಸೆ ತಿರುವಿ ಹಾಕಿದ್ದರು. ಅಷ್ಟೇ ಅಲ್ಲ,ಸೋಮಣ್ಣ ಸಿಎಂ ಆದರೆ ಯಡಿಯೂರಪ್ಪ ಅವರನ್ನು ಯಾವ ಕಾರಣಕ್ಕಾಗಿ ಪಕ್ಷ ನೆಚ್ಚಿಕೊಂಡಿದೆಯೋ? ಆ ಕಾರಣ ಫುಲ್ ಫೀಲ್ ಆಗಲಿದೆ ಎಂಬುದು ಅವರ ಷರಾ ಆಗಿತ್ತು. ಸಂತೋಷ್ ಹಾಕಿದ ಈ ಷರಾದ ಮಾಹಿತಿ ಗೊತ್ತಲ್ಲ? ಹೀಗಾಗಿ ಯಡಿಯೂರಪ್ಪ ಕ್ಯಾಂಪು ಈಗ ಸೋಮಣ್ಣ ವಿರುದ್ಧ ಎಲ್ಲಿ ಸಾಧ್ಯವೋ?ಅಲ್ಲಿ ಮುಗಿಬೀಳುತ್ತಿದೆ. ಕೆಲ ದಿನಗಳ ಹಿಂದೆ ಅಮಿತ್ ಶಾ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಬಂದರಲ್ಲ? ಆ ಸಂದರ್ಭದಲ್ಲಿ ಮಠದ ಕಾರ್ಯಕ್ರಮಗಳ ಉಸ್ತು ವಾರಿ ಸೋಮಣ್ಣ ಅವರ ಕೈಗೆ ಹೋಗದಂತೆ ನೋಡಿಕೊಂಡ ಯಡಿಯೂರಪ್ಪ, ಆ ಜವಾಬ್ದಾರಿ ವಿಜಯೇಂದ್ರ ಅವರಿಗೆ ಸಿಗುವಂತೆ ಮಾಡಿದರು.
ಕೆಲ ದಿನಗಳ ಹಿಂದೆ ನಡೆದ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಸೋಮಣ್ಣ ಅವರ ಭಾಷಣಕ್ಕೆ ಅಡ್ಡಿ ಮಾಡಿ: ಮುಂದಿನ ಸಿಎಂ ವಿಜಯೇಂದ್ರ ಎಂಬ ಘೋಷಣೆ ಮೊಳಗಿಸುವ ಕೆಲಸವಾಯಿತು. ಹೀಗೆ ಸೋಮಣ್ಣ ವಿರುದ್ಧ ಮುಗಿ ಬೀಳುವ ಮೂಲಕ ಬಿ.ಎಲ್.ಸಂತೋಷ್ ಅವರಿಗೆ ವಾರ್ನಿಂಗ್ ಕೊಡುವುದು ಯಡಿಯೂರಪ್ಪ ಕ್ಯಾಂಪಿನ ಲೆಕ್ಕಾಚಾರ. ಅರ್ಥಾತ್,ಪಕ್ಷದಲ್ಲಿ ಯಾರು ತಮ್ಮ ಜತೆಗಿದ್ದಾರೆ, ಯಾರು ಇಲ್ಲ ಎಂಬುದನ್ನು ಗುರುತಿಸುವ, ಆ ಮೂಲಕ ಮುಂದಿನ ಚುನಾವಣೆಯ ಹೊತ್ತಿಗೆ ನಿರ್ಣಾಯಕ ಆಟಕ್ಕೆ ಸಜ್ಜಾಗುವುದು ಈ ಕ್ಯಾಂಪಿನ
ಯೋಚನೆ. ಹಾಗೊಂದು ವೇಳೆ ತಮ್ಮ ಜತೆ ಇರುವವರು ಯಾರು? ತಮ್ಮಿಂದ ದೂರ ಇರುವವರು ಯಾರು? ಎಂಬುದು ನಿಕ್ಕಿಯಾದರೆ ಅಂತವರನ್ನು ಗೆಲ್ಲಿಸಲು, ಇಲ್ಲವೇ ಸೋಲಿಸಲು ಸ್ಕೆಚ್ ಹಾಕಬಹುದು.
ಹಿಂದೆ ಬಿಜೆಪಿಯಿಂದ ಹೊರಹೋಗಿ ಕೆಜೆಪಿ ಕಟ್ಟಿದ ಸಂದರ್ಭದಲ್ಲಿ ಯಡಿಯೂರಪ್ಪ ಹಾಕಿದ ಆಟವೇ ಇದು. ಆದರೆ ಅವತ್ತು ತಮ್ಮವರನ್ನು ಗೆಲ್ಲಿಸುವ ವಿಷಯದಲ್ಲಿ ಯಡಿಯೂರಪ್ಪ ಅವರ ಶಕ್ತಿ ಸಾಲದಾಗಿತ್ತು. ಹೀಗಾಗಿ ಅವತ್ತು ತಮಗಾಗದವರನ್ನು ಅವರು ಸೋಲಿಸುವ ಕೆಲಸ ಮಾಡಿದ್ದರು. ಈಗ ಬಿಜೆಪಿಯ ಇರುವುದರಿಂದ ಯಾರನ್ನು ಗೆಲ್ಲಿಸಬೇಕು? ಯಾರನ್ನು ಸೋಲಿಸಬೇಕು? ಅಂತ ಪೂರ್ವ ಸಿದ್ಧತೆ ಮಾಡಿ ಕೊಂಡು ಹೊರಡುವುದು ಸುಲಭ. ಇಂತಹ ಲೆಕ್ಕಾಚಾರಗಳು ಸ್ಪಷ್ಟ ರೂಪ ಪಡೆದಿರುವುದರಿಂದಲೇ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಮಾತುಗಳು ಬೆಂಕಿ ಉಂಡೆಯಂತೆ ಸಿಡಿಯುತ್ತಿರುವುದು.
ಈ ಪೈಕಿ ವಿಜಯೇಂದ್ರ ಅವರು: ‘ಕಾಡಿನಲ್ಲಿದ್ದ ಹುಲಿಯನ್ನು ನಾಡಿಗೆ ತಂದರೂ ಅದು ಹುಲ್ಲು ತಿನ್ನುವುದಿಲ್ಲ ಎಂದರೆ, ವಿಜಯೇಂದ್ರ ಅವರಿಗೆ ಒಳ್ಳೆಯ ಭವಿಷ್ಯ ಇದೆ. ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಗ್ಯಾರಂಟಿ ಅಂತ ಯಡಿಯೂರಪ್ಪ ಹೇಳಿದರು. ಇಂತಹ ಮಾತುಗಳ ಅರ್ಥ ಏನೆಂದರೆ, ಪಕ್ಷದಲ್ಲಿ ತಮ್ಮನ್ನು ತುಳಿಯುವ ಕೆಲಸ ಮುಂದುವರೆದಿದ್ದೇ ಆದರೆ ರಾಜ್ಯ ಬಿಜೆಪಿ
ಯ ದೇಹದಲ್ಲಿ ಕೆಜೆಪಿಯ ಆತ್ಮ ಸೆಟ್ಲಾಗುವಂತೆ ಅವರು ಮಾಡುತ್ತಾರೆ.
2013 ರ ವಿದಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಕೆಜೆಪಿ ಗೆದ್ದಿದ್ದು ಹತ್ತು ಸೀಟುಗಳಷ್ಟೇ ಆದರೂ ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲುವಂತೆ ಮಾಡಿತ್ತು. ಬಿಜೆಪಿಯ ಈ ಸೋಲು ಎಷ್ಟು ದಯನೀಯವಾಗಿತ್ತೆಂದರೆ ವಿಧಾನಸಭೆಯ ಪ್ರಮುಖ ಪ್ರತಿಪಕ್ಷವಾಗಿ ಕೂರಲು ಅದಕ್ಕೆ ಸಾಧ್ಯವಾಗಿರಲಿಲ್ಲ. ಈಗ ಬದಲಾದ ಸನ್ನಿವೇಶದಲ್ಲಿ ಬಿಜೆಪಿಯ ದೇಹದಲ್ಲಿ ಕೆಜೆಪಿಯ ಆತ್ಮ ಸೇರಿದರೆ ಪರಿಸ್ಥಿತಿ 2013 ರಷ್ಟು ದಯನೀಯವಾಗಿರುವುದಿಲ್ಲ. ಬದಲಿಗೆ ಮೈತ್ರಿಕೂಟ ಸರಕಾರ ರಚಿಸಲು ಬೇರೆ ಪಕ್ಷಗಳ ಕಡೆ ಕಣ್ಣು ಹಾಯಿಸುವ ಸ್ಥಿತಿ ಬರುತ್ತದೆ.
ಅಂತಹ ಸಂದರ್ಭದಲ್ಲಿ ತಮಗೆ ಬೇಕಾದವರೇ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬಂದಿರುತ್ತಾರಾದ್ದರಿಂದ ವಿಜಯೇಂದ್ರ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಯ ಮೇಲೆ ಕೂರಿಸಬಹುದು. ಆ ದೃಷ್ಟಿಯಿಂದ ಈ ಹಿಂದೆ ತಾವು ರೂಪಿಸಿದ್ದ ‘ಎ’ ಪ್ಲಾನ್ ಬದಲು ‘ಬಿ’ ಪ್ಲಾನ್ ಆದರೂ ಸಕ್ಸಸ್ ಆಗುತ್ತದೆ ಎಂಬುದು ಯಡಿಯೂರಪ್ಪ ಯೋಚನೆ. ಅಂದ ಹಾಗೆ ಸಿಎಂ ಆಗಿದ್ದ ಸಂದರ್ಭದಲ್ಲಿ ಶಿವಮೊಗ್ಗದ ತೋಟದ ಮನೆಯಲ್ಲಿ ತಮ್ಮ ಕುಟುಂಬದವರೊಂದಿಗೆ ಕುಳಿತು ಯಡಿಯೂರಪ್ಪ ಒಂದು ಪ್ಲಾನು ರೂಪಿಸಿದ್ದರು. ಆ ಪ್ಲಾನಿನ ಪ್ರಕಾರ, 2023 ರ ವಿಧಾನಸಭಾ ಚುನಾವಣೆಯಲ್ಲಿ ಆಯ್ದ ನೂರೈವತ್ತು ಅಭ್ಯರ್ಥಿಗಳ ಮೇಲೆ ಬಂಡವಾಳ ಹೂಡಬೇಕು.
ಆ ಮೂಲಕ ಗೆದ್ದು ಬರುವ ಬಹುತೇಕರು ತಮ್ಮವರೇ ಆಗಬೇಕು. ಹಾಗಾದಾಗ ಪಕ್ಷದ ಶಾಸಕಾಂಗ ನಾಯಕ ಯಾರಾಗಬೇಕು ಎಂದಾಗ ವಿಜಯೇಂದ್ರ ಅವರನ್ನು ಗದ್ದುಗೆಯ ಮೇಲೆ ತಂದು ಕೂರಿಸುವುದು ಸುಲಭ ಎಂದು ಅವರು ಯೋಚಿಸಿದ್ದರು. ಆದರೆ ಈಗ ಆ ಪ್ಲಾನು ಯಶಸ್ವಿಯಾಗದೆ ಇದ್ದರೂ ವಿಜಯೇಂದ್ರ ಉಪಮುಖ್ಯಮಂತ್ರಿ ಹುದ್ದೆಗಾದರೂ ಏರುವಂತೆ ಮಾಡಬಹುದು ಎಂಬುದು ‘ಬಿ’ ಪ್ಲಾನು. ಅಂದ ಹಾಗೆ ಇವತ್ತು ಸ್ವಯಂಬಲದ ಮೇಲೆ ರಚನೆ ಆಗಿರುವ ಸರಕಾರ ಇರುವುದರಿಂದ ಸಂತೋಷ್ ಆಟ ಆಡಬಹುದು. ಅವರ ಮಾತು ವರಿಷ್ಠರಿಗೂ ಇಷ್ಟವಾಗಬಹುದು.
ಆದರೆ ಬಹುಮತ ಬಾರದೆ, ತಮಗೆ ಬೇಕಾದವರೇ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಬಂದಾಗ ಸಂತೋಷ್ ಆಟಕ್ಕೆ ಶಕ್ತಿ ಇರುವುದಿಲ್ಲ. ಅದೇ ರೀತಿ ಮುಂದಿನ ಲೋಕಸಭಾ ಚುನಾವಣೆ ಒಂದು ವರ್ಷದಷ್ಟು ಸನಿಹದಲ್ಲಿರುವುದರಿಂದ ಮೋದಿ- ಅಮಿತ್ ಶಾ ಜೋಡಿಯೂ ತುಂಬ ರಿಸ್ಕು ತೆಗೆದುಕೊಳ್ಳಲು ಬಯಸುವುದಿಲ್ಲ ಎಂಬುದು ಯಡಿಯೂರಪ್ಪ ಕ್ಯಾಂಪಿನ ಲೆಕ್ಕಾಚಾರ. ಅದು ಎಷ್ಟರ ಮಟ್ಟಿಗೆ ಈಡೇರುತ್ತದೆ ಎಂಬುದು ಬೇರೆ ವಿಷಯ. ಆದರೆ ಸದ್ಯಕ್ಕಂತೂ ಈ ಕ್ಯಾಂಪು ಹರಾಬಿರಿಯಲ್ಲಿರುವುದಂತೂ ನಿಜ.