Saturday, 14th December 2024

ಜ್ಞಾನಕ್ಕೆ ಸಾವಿಲ್ಲ, ಜ್ಞಾನಿಗಳಿಗೂ. ನಿಜಾರ್ಥದಲ್ಲಿ ಅವರು ಬುದ್ದಿಗಳು !

ನೂರೆಂಟು ವಿಶ್ವ

vbhat@me.com

ಪೂಜ್ಯ ಸಿದ್ದೇಶ್ವರ ಶೀಗಳ ಬಗ್ಗೆ ಯೋಚಿಸಿದಾಗಲೆಲ್ಲ ನೆನಪಾಗುವುದು ಅವರ ಪ್ರವಚನ. ನಾನು ಅವರ ಹತ್ತಾರು ಪ್ರವಚನ ಕಾರ್ಯಕ್ರಮಗಳಲ್ಲಿ ಖುದ್ದಾಗಿ ಭಾಗವಹಿಸಿದ್ದೇನೆ. ನೂರಾರು ಪ್ರವಚನಗಳನ್ನು ಯೂಟ್ಯೂಬ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿದ್ದೇನೆ. ಸುಮಾರು ಹತ್ತೊಂಬತ್ತು ವರ್ಷಗಳ ಹಿಂದೆ, ಕರ್ನಾಟಕದ ಗಡಿಭಾಗದ, ಆದರೆ ಮಹಾರಾಷ್ಟ್ರಕ್ಕೆ ಸೇರಿದ ಜತ್‌ದಲ್ಲಿ ನಡೆದ ಪ್ರವಚನದಲ್ಲಿ ಸುಮಾರು ಹದಿನೈದು ಸಾವಿರ ಮಂದಿ ಸೇರಿದ್ದರು.

ಬೆಳಗಿನ ಜಾವ ಮೂರು-ನಾಲ್ಕು ಗಂಟೆಗೆ ಎದ್ದು ಚಕ್ಕಡಿ ಗಾಡಿ, ಟ್ರಾಕ್ಟರುಗಳಲ್ಲಿ ಜನ ದೂರದ ಊರುಗಳಿಂದ ಒಂದೆರಡು ಗಂಟೆ ಪ್ರಯಾಣ ಮಾಡಿ ಅವರ ಪ್ರವಚನಕ್ಕೆ ಆಗಮಿಸಿದ್ದನ್ನು ಕಣ್ಣಾರೆ ನೋಡಿದ್ದೇನೆ. ಇದು ಒಂದೆರಡು ದಿನವಲ್ಲ. ತಿಂಗಳು ಗಟ್ಟಲೆ ನಡೆದ ಕಾರ್ಯಕ್ರಮದಲ್ಲಿ ಎಲ್ಲ ದಿನವೂ ಜನ ತಪ್ಪದೇ ಹಾಜರಾಗುತ್ತಿದ್ದರು. ಮೊದಲ ದಿನ ಬಂದವರು, ಒಂದೂ ದಿನ ತಪ್ಪಿಸದೇ, ಕೊನೆ ದಿನದ ಕಾರ್ಯಕ್ರಮ ದವರೆಗೂ ಭಾಗವಹಿಸಿದವರೇ ಹೆಚ್ಚಿನವರಿದ್ದರು. ಆ ಸಂದರ್ಭದಲ್ಲಿ ಊರಲ್ಲಿ ಬೇರಾವ ಕಾರ್ಯಕ್ರಮಗಳೂ ಇರುತ್ತಿರಲಿಲ್ಲ.

ದಿನದಲ್ಲಿ ಒಂದು ಗಂಟೆ ಪ್ರವಚನ ಕೇಳಲು ಮನೆ-ಮಂದಿಯೆಲ್ಲ ಆಗಮಿಸುತ್ತಿದ್ದರು. ಅದು ನಾನು ಮೊದಲ ಬಾರಿಗೆ ಕೇಳಿದ ಅವರ ಪ್ರವಚನವಾಗಿತ್ತು. ಸಿದ್ದೇಶ್ವರ ಶ್ರೀಗಳು ಅಂದು ಗ್ರಾಮೀಣ ಜನರೇ ಹೆಚ್ಚಾಗಿ ಸೇರಿದ್ದ ಆ ಪ್ರವಚನ ಕಾರ್ಯಕ್ರಮದಲ್ಲಿ,
‘ಗಣಿತ ಮತ್ತು ಜೀವನ’ದ ಬಗ್ಗೆ ಮಾತಾಡಿದ್ದರು. ‘ನಾನು ನಿಮಗೆ ಇಂದು ಗಣಿತದ ಬಗ್ಗೆ ಮಾತಾಡುತೇನೆ..’ ಎಂದು ಆರಂಭಿಸಿ ದಾಗ, ನನಗೆ ನಿಜಕ್ಕೂ ಆಶ್ಚರ್ಯವಾಗಿತ್ತು. ಈ ಹಳ್ಳಿ ಜನರಿಗೆ ಈ ವಿಷಯ ಹೇಗೆ ತಟ್ಟುತ್ತದೆ, ಅದನ್ನು ಅವರು ಹೇಗೆ
ಸ್ವೀಕರಿಸುತ್ತಾರೆ ಎಂದು ಅನಿಸಿತ್ತು.

ಒಂದು ವೇಳೆ ನನಗೆ ಆ ವಿಷಯದ ಬಗ್ಗೆ ಒಂದು ಗಂಟೆ ಮಾತಾಡುವಂತೆ ಹೇಳಿದ್ದಿದ್ದರೆ ಸಾಧ್ಯವೇ ಇರಲಿಲ್ಲ. ಬೇರೆಯವರಿಗೆ ಹೆಚ್ಚಾಗಿ ಗೊತ್ತಿಲ್ಲದ, ಗಡುಚಾದ ವಿಷಯವನ್ನು, ಸಾಮಾನ್ಯರಲ್ಲಿ ಸಾಮಾನ್ಯನಿಗೂ ಅರ್ಥವಾಗುವಂತೆ ಹೇಳುವುದು ಸಾಮಾನ್ಯ ಕೆಲಸವಲ್ಲ. ನೀವು ಒಂದು ವಿಷಯವನ್ನು ಸ್ಪಷ್ಟವಾಗಿ, ಆಳವಾಗಿ, ತಲಸ್ಪರ್ಶಿಯಾಗಿ ತಿಳಿದಿದ್ದರೆ ಮಾತ್ರ ಬೇರೆ ಯವರಿಗೆ ಸರಿಯಾಗಿ, ಸುಲಭವಾಗಿ ಅರ್ಥವಾಗುವಂತೆ ತಿಳಿಸಲು ಸಾಧ್ಯ. ವಿಷಯ ಗೊತ್ತಿದ್ದರೂ ನಿಮಗೆ ಬೇರೆಯವರಿಗೆ ಅರ್ಥವಾಗುವಂತೆ ಹೇಳಲು ಬರುವುದಿಲ್ಲ ಅಂದ್ರೆ ಹೇಳಬೇಕೆಂದಿರುವ ವಿಷಯ ನಿಮಗೇ ಸಂಪೂರ್ಣವಾಗಿ ಅರ್ಥವಾಗಿಲ್ಲ ಎಂದರ್ಥ. ಕೆಲವರು ಬೇರೆಯವರಿಗೆ ವಿವರಿಸುವಾಗ, ‘ಇದನ್ನು ನಿನಗೆ ಹೇಗೆ ಹೇಳುವುದೋ ಗೊತ್ತಾಗ್ತಾ ಇಲ್ಲ’ ಎಂದು ಹೇಳುವುದನ್ನು ಕೇಳಿರಬಹುದು.

ನಾವು ಚೆನ್ನಾಗಿ ತಿಳಿದುಕೊಂಡರೆ ಮಾತ್ರ ಇತರರಿಗೆ ತಿಳಿಯುವಂತೆ ಹೇಳುವುದು ಸಾಧ್ಯ. ಅದರಲ್ಲೂ ಬೇರೆಯವರಿಗೆ
ಗೊತ್ತಿಲ್ಲದ ವಿಷಯವನ್ನು ‘ತಿಳಿ’ ಹೇಳುವುದು ಸವಾಲು. ಆ ದಿನ ಸಿದ್ದೇಶ್ವರ ಶ್ರೀಗಳು ಹಳ್ಳಿಗರಿಗೆ ಗಣಿತದ ಪೈಥಾಗರಸ್ ಥೇರಮ, ಗುರುತ್ವಾಕರ್ಷಣ ನಿಯಮ, E=mc2, ವ್ಯಾಸ, ತ್ರಿಜ್ಯ, ಥರ್ಮೋಡೈನಮಿಕ್ಸ್ ಬಗ್ಗೆ ಮಾತಾಡುತ್ತ, ಅದನ್ನು ನೀವು (ಹಳ್ಳಿಗರು) ತಿಳಿದುಕೊಳ್ಳುವ ಪ್ರಯೋಜನದ ಬಗ್ಗೆ ವಿವರಿಸಿದ್ದರು. ನಾನು ವಿಜ್ಞಾನದ ವಿದ್ಯಾರ್ಥಿಯಾಗಿ ಅವನ್ನೆಲ್ಲ ಓದಿದ್ದರೂ, ನಿಜ ಜೀವನದಲ್ಲಿ ಗಣಿತ, ವಿಜ್ಞಾನದ ಸೂತ್ರಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂದು ಯೋಚಿಸಿರಲಿಲ್ಲ. ಮರುದಿನದ ಪ್ರವಚನದಲ್ಲಿ, ‘ವಿಮಾನ ಹೇಗೆ ಹಾರುತ್ತದೆ’ ಎಂಬ ವಿಷಯದ ಬಗ್ಗೆ ಮಾತಾಡಿದ್ದರು. ಸಭೆಯಲ್ಲಿ ಒಬ್ಬೇ ಒಬ್ಬ ನಿದ್ರಿಸಿದ್ದಾಗಲಿ,
ಆಕಳಿಸಿದ್ದಾಗಲಿ ಇಲ್ಲವೇ ಇಲ್ಲ. ಅಂದು ಅವರು ಏರೋಡೈನಮಿಕ್ಸ್ ಥಿಯರಿ ಬಗ್ಗೆ ಹೇಳಿದ್ದರು.

ಹತ್ತಾರು ವಿಜ್ಞಾನಿಗಳ ಹೆಸರನ್ನು ಪ್ರಸ್ತಾಪಿಸಿದ್ದರು. ಏರೋಡೈನಮಿಕ್ಸ್ ಥಿಯರಿ ಬಗ್ಗೆ ಹೇಳುವಾಗ ದುಂಬಿಯ ಕತೆ ಹೇಳಿದ್ದರು.
‘ನೀವೆಲ್ಲ ದುಂಬಿಯನ್ನು ನೋಡಿದ್ದೀರಿ. ಅದರ ದೇಹ ದೊಡ್ಡದು. ಅದರ ರೆಕ್ಕೆ ತೆಳು. ದೇಹದ ಗಾತ್ರಕ್ಕೂ, ರೆಕ್ಕೆಗೂ ಬಹಳ ವ್ಯತ್ಯಾಸ. ಏರೋಡೈನಮಿಕ್ಸ್ ನಿಯಮದ ಪ್ರಕಾರ, ದುಂಬಿ ಹಾರಲೇಬಾರದು. ಹಾರುವುದು ಸಾಧ್ಯವೂ ಇಲ್ಲ. ಆದರೂ ಅದು ಅವೆಷ್ಟೋ ಸಾವಿರ ವರ್ಷಗಳಿಂದ ಹಾರುತ್ತಿದೆ. ವಿಮಾನವನ್ನು ಕಂಡು ಹಿಡಿಯುವ ಮೊದಲಿನಿಂದಲೂ ದುಂಬಿಗಳು ಹಾರುತ್ತಿವೆ. ಹೇಗೆ?’ ಎಂದು ಕೇಳಿದ್ದರು.

ನಂತರ ಶ್ರೀಗಳೇ ವಿವರಿಸಿದ್ದರು – ‘ಯಾಕಂದ್ರ ಆ ದುಂಬಿಗಳಿಗೆ ಏರೋಡೈನಮಿಕ್ಸ್ ಥಿಯರಿ ಅಂದ್ರೆ ಏನೆಂಬುದು ಗೊತ್ತಿಲ್ಲ. ಅವು ಆ ಥಿಯರಿಯನ್ನು ಓದಿಲ್ಲ. ಹೀಗಾಗಿ ಹಾರುತ್ತಿವೆ. ಮನುಷ್ಯ ಈ ಥಿಯರಿಯನ್ನು ಕಂಡು ಹಿಡಿಯಲು ದುಂಬಿಗಳೂ ಒಂದು ಕಾರಣ. ದುಂಬಿಯ ಥರಾ ವಿಮಾನವನ್ನು ಡಿಸೈನ್ ಮಾಡಿದರೆ ಹಾರುತ್ತದೆ, ಆದರೆ ಬಹಳ ದೂರ ಹಾರೊಲ್ಲ’ ಎಂದು ಸಾಮಾನ್ಯರಿಗೂ ತಿಳಿಯುವ ಹಾಗೆ ವಿವರಿಸಿದ್ದರು. ‘ಮನುಷ್ಯನೂ ಈ ದುಂಬಿಗಳ ಹಾಗೆ. ನಮಗೆ ನಮ್ಮ ಬಲ ಮತ್ತು
ಬಲಹೀನತೆಗಳು ಗೊತ್ತಿರಬೇಕು. ಭೀಮನಿಗೆ ಆತನ ಬಲ ಗೊತ್ತಿರಲಿಲ್ಲವಂತೆ. ಹೀಗಾಗಿ ಆತ ಹತ್ತು ಆನೆಗಳಿಗೆ ತೊಡೆತಟ್ಟಿದ. ಕೃಷ್ಣನಿಗೆ ತನ್ನ ಬಲಹೀನತೆಗಳು ಗೊತ್ತಿರಲಿಲ್ಲ.

ಹೀಗಾಗಿ ದೇವರಾದ’ ಎಂದು ಶ್ರೀಗಳು ಆ ಪ್ರಸಂಗವನ್ನು ನಿಜ ಜೀವನಕ್ಕೆ ಸಮೀಕರಿಸಿದ್ದರು. ಅನೇಕ ಸಲ ನನಗೆ ಅನಿಸಿದೆ, ಸಿದ್ದೇಶ್ವರ ಶ್ರೀಗಳು ಉತ್ತಮ ಭಾಷಣಕಾರರಿಗಿಂತ ಅದ್ಭುತ ಸಂವಹನಕಾರರೆಂದು. ಭಾಷಣ ಕಾರನ ಯಾವುದೇ ಆರ್ಭಟ, ಅತಿಶಯೋಕ್ತಿ, ಬಣ್ಣ, ಬಣ್ಣನೆ, ಬೇಗಡೆ ಯಾವುದೂ ಇರಲಿಲ್ಲ. ಅಲ್ಲಿ ಉದ್ವೇಗ, ಉದ್ಘೋಷ, ಅಬ್ಬರ, ಮೂದಲಿಕೆ ಸಹ ಇರಲಿಲ್ಲ. ಅವರ ಪ್ರವಚನ ಅಂದ್ರೆ ಒಂಥರ ತಿಳಿನೀರ ಮಂದಗತಿಯ ಶಾಲ್ಮಲಾ ಹರಿವು. ಅಲ್ಲಿ ಯಾವ ಘೋಷಣೆ, ಮೇಲಾಟ, ಆತ್ಮಪ್ರಶಂಸೆ ಏನೂ ಇಲ್ಲ.

ಅವರ ಮಾತು ಅವಿದ್ಯಾವಂತನಿಂದ ವಿದ್ವಾಂಸರವರೆಗೆ ಒಂದೇ ತರಂಗಾಂತರದಲ್ಲಿ ತಲುಪುತ್ತಿತ್ತು. ಅವರು ತಾವು ಹೇಳುವ
ವಿಷಯಗಳಿಂದ ಸಭಿಕರನ್ನು ತಬ್ಬಿಬ್ಬು ಮಾಡುತ್ತಿರಲಿಲ್ಲ. ಯಾರೂ ಕೇಳಿರದ ದೊಡ್ಡ ದೊಡ್ಡ ತತ್ತ್ವಜ್ಞಾನಿಗಳು, ವಿಚಾರವಂತರು, ಬುದ್ಧೀಜೀವಿಗಳ ಹೆಸರುಗಳನ್ನು ಅವರು ಪ್ರಸ್ತಾಪಿಸುತ್ತಿದ್ದರು. ಬಸವ, ಬುದ್ಧ, ಅರಿಸ್ಟಾಟಲ್, ಪ್ಲುಟೊ, ಕನ್ಯೂಶಿಯಸ್, ಗುಡ್ಜೀಫ್, ಥಾಮಸ್ ಅಕ್ವಿನಾಸ್, ಎಮರ್ಸನ್, ಡೇವಿಡ್ ಹೂಮ, ಜಾನ್ ಲೋಕೆ… ಹೀಗೆ ಅನೇಕ ತತ್ತ್ವಜ್ಞಾನಿಗಳ ವಿಚಾರಗಳನ್ನು ಪ್ರವಚನದಲ್ಲಿ ಪ್ರಸ್ತಾಪಿಸುತ್ತಿದ್ದರು.

ಅಲ್ಲಿ ವಿಜೃಂಭಿಸುತ್ತಿದ್ದುದು ಆ ತತ್ತ್ವeನಿಗಳ ಸಿದ್ಧಾಂತವೇ ಹೊರತು ತನಗೆ ಅವರೆಲ್ಲ ಗೊತ್ತು ಎಂಬ ಆತ್ಮರತಿಯಲ್ಲ. ದೊಡ್ಡ ತತ್ತ್ವಜ್ಞಾನಿಯ ವಿಚಾರ ನಮ್ಮ ಸಾಮಾನ್ಯ ರೈತ, ಹಳ್ಳಿಗಾಡಿನ ಜನರ ಜ್ಞಾನ, ಯೋಚನೆಗೆ ಎಷ್ಟು ಸಮಾನವಾಗಿದೆ ಎಂಬು ದನ್ನು ಹೇಳಲು ಅವರು ಆ ಎಲ್ಲರ ಹೆಸರುಗಳನ್ನೂ ಹೇಳುತ್ತಿದ್ದರು. ಅವರಿಗೆ ಯಾವ ವಿಷಯವೂ ವರ್ಜ್ಯ ಆಗಿರಲಿಲ್ಲ. ಒಮ್ಮೆ ಅವರು ಪ್ರವಚನ ಆರಂಭಿಸುವ ಮುನ್ನ ಪಕ್ಕದ ಹಕ್ಕಿಗಳು ಚಿಲಿಪಿಲಿ ಸದ್ದು ಮಾಡುತ್ತಿದ್ದವು. ಅಂದು ಅವರು ಹಕ್ಕಿಗಳ ಸ್ವಾರಸ್ಯ ಮತ್ತು ರೋಚಕ ಲೋಕದ ಬಗ್ಗೆಯೇ ಒಂದು ಗಂಟೆ ಮಾತಾಡಿದ್ದರು. ಅವರ ಪ್ರವಚನಕ್ಕೆ ಸಜ್ಜು ಮಾಡಿದ್ದ ವೇದಿಕೆಯ ಮುಂಭಾ ಗದಲ್ಲಿ ಚೆಂದವಾಗಿ ಬಿಡಿಸಿದ್ದ ರಂಗೋಲಿಯನ್ನು ನೋಡಿ, ‘ರಂಗೋಲಿಯನ್ನು ಯಾಕೆ ಹಾಕಬೇಕು, ಅದರ ಮಹತ್ವ ವೇನು?’ ಎಂಬುದರ ಬಗ್ಗೆಯೇ ಪ್ರವಚನವನ್ನು ಮೀಸಲಿಟ್ಟಿದ್ದರು.

ಅಲ್ಲಿ ಹತ್ತಾರು ಕತೆ, ದೃಷ್ಟಾಂತಗಳು, ಪ್ರಸಂಗಗಳು, ನೀತಿ ಸಂದೇಶಗಳು ಬಂದು ಹೋಗುತ್ತಿದ್ದವು. ಶ್ರೀಗಳು ಯಾವ ಪ್ರವಚನವನ್ನೂ ಮೊದಲೇ ನಿರ್ಧರಿಸುತ್ತಿರಲಿಲ್ಲ. ಸಣ್ಣ ಚೀಟಿಯನ್ನೂ ಬರೆದಿಟ್ಟುಕೊಳ್ಳುತ್ತಿರಲಿಲ್ಲ. ಟಿಪ್ಪಣಿಯನ್ನಂತೂ ಕೇಳಲೇ ಬೇಡಿ. ಚಿಕ್ಕಮಕ್ಕಳಿಗೂ ರಾಕೆಟ್ ಸೈನ್ಸ್ ಅರ್ಥವಾಗುವ ಹಾಗೆ, ಕುತೂಹಲ ಉಂಟಾಗುವ ಹಾಗೆ ಅವರು ಹೇಳುತ್ತಿದ್ದರು. ಅವರ ಬಳಿ ಕೈಗಡಿಯಾರ ಇರುತ್ತಿರಲಿಲ್ಲ. ಸರಿಯಾಗಿ ಒಂದು ತಾಸು ಆಗುತ್ತಿದ್ದಂತೆ, ಪ್ರವಚನ ಮುಗಿಸುತ್ತಿದ್ದರು. ಮತ್ತೆ ನಾಳೆ ಎಲ್ಲವೂ ಹೊಸತು. ಶ್ರೀಗಳ ಮಾತಿನಲ್ಲಿ ಹಿಡನ್ ಅಜೆಂಡಾಗಳು ಇರುತ್ತಿರಲಿಲ್ಲ.

ಜಾತಿ, ಧರ್ಮ, ಪಂಥ, ಕುಲ-ಗೋತ್ರಗಳ ಪ್ರವರ್ತಕತನ, ವಕ್ತಾರಿಕೆ ಇರುತ್ತಿರಲಿಲ್ಲ. ಅವರ ಮುಖ್ಯ ಕಾಳಜಿ ಮಾನವನ
ಒಳಿತು, ಸಮಾಜ ಹಿತ. ಹೀಗಾಗಿ ಅವರನ್ನು ಎಲ್ಲಾ ಧರ್ಮದವರೂ ಇಷ್ಟಪಟ್ಟರು. ಸಾಮಾನ್ಯವಾಗಿ ಮನುಷ್ಯನಾದವನು
ಎಡೆ ತನ್ನ ವಿಚಾರ, ಸಿದ್ಧಾಂತ, ಅಸ್ತಿತ್ವವನ್ನು ಸ್ಥಾಪಿಸಲು ಬಯಸುತ್ತಾನೆ. ಆತನಿಗೆ ಸಣ್ಣದೋ, ದೊಡ್ಡದೋ, ಆದರೆ ತನ್ನದೇ ಆದ ಒಂದು ಸಾಮ್ರಾಜ್ಯವನ್ನು ಸ್ಥಾಪಿಸುವುದರಲ್ಲಿ ಆಸ್ಥೆ ಇರುತ್ತದೆ . ಆದರೆ ಸಿದ್ದೇಶ್ವರ ಶ್ರೀಗಳ ಆಸ್ಥೆ ತಮ್ಮನ್ನು ಎಡೆ ನಿರಾಕರಿಸಿಕೊಳ್ಳುವುದರಲ್ಲಿತ್ತು.

ಲೌಕಿಕದಿಂದ ದೂರವಾಗುವುದರಲ್ಲಿತ್ತು. ಅವರು ತಮಗಾಗಿ ಏನನ್ನೂ ಬಯಸಲಿಲ್ಲ. ಅವರಿಗೆ ಖಾಸಗಿ ಮತ್ತು ವೈಯಕ್ತಿಕ ವೆಂಬುದು ಇರಲೇ ಇಲ್ಲ. ಮನುಷ್ಯನಿಗೆ ನೆಮ್ಮದಿಯಿಂದ ಬಾಳಲು ಹಣ ಬೇಕು. ಆದರೆ ಅವರು ಅದನ್ನೂ ಬಯಸಲಿಲ್ಲ. ಹಣ ಕಂಡರೆ ಬೆಂಕಿ ಕಂಡಂತಾಗುತ್ತಿದ್ದರು. ಅದನ್ನು ಕಿರುಬೆರಳಿನಿಂದಲೂ ಮುಟ್ಟಲಿಲ್ಲ. ಅವರು ಜ್ಞಾನಲೋಕದಲ್ಲಿ ಮಹಲು
ಕಟ್ಟಿಕೊಂಡಿದ್ದರು. ಆ ಲೋಕದಲ್ಲಿ ಹಣದ ವ್ಯವಹಾರವೇ ಇರಲಿಲ್ಲ. ಹೀಗಾಗಿ ಅವರು ಹಣದ ಮೂಲದಿಂದ ಹುಟ್ಟಿಕೊಳ್ಳುವ ಏನನ್ನೂ ಅಪೇಕ್ಷಿಸಲಿಲ್ಲ.

ಜ್ಞಾನ ಮತ್ತು ವಿವೇಕಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ, ಹಣವೂ ಅದರ ಮುಂದೆ ಸಪ್ಪೆ ಎಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದರು. ಹೀಗಾಗಿ ತಮ್ಮ ಸನಿಹ ಬಂದವರಿಗೆ ಅವರು ಜ್ಞಾನ ಮತ್ತು ವಿವೇಕವನ್ನು ಹಂಚಿದರು. ಅದರಲ್ಲಿಯೇ ನೆಮ್ಮದಿ ಕಂಡರು. ಅಷ್ಟೇ ಅಲ್ಲ, ಅದಕ್ಕಾಗಿಯೇ ತಮ್ಮ ಇಡೀ ಬದುಕನ್ನು ಮುಡಿಪಾಗಿಟ್ಟರು. ಜ್ಞಾನವನ್ನು ಯಾರೂ ಕದಿಯ ಲಾರರು, ನಾಶಪಡಿಸಲಾರರು. ಅದರ ನಿಕ್ಷೇಪವನ್ನು ಯಾರೂ ಅರಿಯಲಾರರು.

ಹೀಗಾಗಿ ಶ್ರೀಗಳು ಜ್ಞಾನಾರ್ಜನೆಯ ಮಾರ್ಗವೊಂದನ್ನೇ ತುಳಿದರು ಮತ್ತು ಆ ವ್ಯವಹಾರದಲ್ಲಿ ಯಶಸ್ವಿಯೂ ಆದರು. ಅಪಾರ ಜ್ಞಾನವನ್ನು ಸಂಪಾದಿಸಿದರು. ಅದನ್ನು ತಾವೊಂದೇ ಭೋಗಿಸಲಿಲ್ಲ. ಅದನ್ನು ಇಡೀ ಲೋಕಕ್ಕೆ ಹಂಚಿದರು. ತಮ್ಮ ವಾಸವನ್ನೇ eನ ಯೋಗಾಶ್ರಮವನ್ನಾಗಿ ಮಾಡಿಕೊಂಡರು. ಜ್ಞಾನ ಯೋಗಿಗಳಾದರು. ಆ ಲೋಕದಲ್ಲಿ ಇರುವಷ್ಟು ನೆಮ್ಮದಿ ಬೇರೆಲ್ಲೂ ಇರಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿಕೊಟ್ಟರು. ಹೀಗಾಗಿ ಅವರಿಗೆ ಭಾರತ ಸರಕಾರ ‘ಪದ್ಮಶ್ರೀ’ ಪ್ರಶಸ್ತಿ ಕೊಟ್ಟಾಗ ‘ವ’ ಅಂದುಬಿಟ್ಟರು.

ಮನುಷ್ಯನಿಗೆ ನೆಮ್ಮದಿಯಿಂದ ಬದುಕಲು ಯಾವ ಹೆಸರೂ ಬೇಕಿಲ್ಲ. ಹೆಸರೂ ಹೊರೆಯೇ. ಗುರುತಿಗಾಗಿ ಅದಿರಬೇಕೇ
ಹೊರತು ಅದೇ ಅಸ್ತಿತ್ವವಾಗಬಾರದು. ಹೀಗಿರುವಾಗ ಹೆಸರಿನ ಮೊದಲು ಬಾಲಂಗೋಚಿ ಪದ್ಮಶ್ರೀ ಬೇಕೇ? ಎಂದು ಬಿಟ್ಟರು. ಶ್ರೀಗಳು ಮನಸ್ಸು ಮಾಡಿದ್ದರೆ, ಅವರ eನಯೋಗಾಶ್ರಮಕ್ಕೆ ಹಣದ ಹೊಳೆಯೇ ಹರಿದು ಬರುತ್ತಿತ್ತು. ಅವರಿಗೆ ಅಂಥ ಭಕ್ತರು, ಅಭಿಮಾನಿಗಳು ಇದ್ದರು. ಅವರು ಬರೀ ಕಣ್ಸನ್ನೆ ಮಾಡಿದರೆ ಸಾಕಿತ್ತು. ಆದರೆ ಜ್ಞಾನದ ಮುಂದೆ ಎಲ್ಲವೂ ನಶ್ವರ ಎಂದು ನಂಬಿದ್ದ ಆ ಸುಜ್ಞಾನಿ, ಯಕಃಶ್ಚಿತವಾದವುಗಳಿಗೆ ಕೈಯೊಡ್ಡಲೇ ಇಲ್ಲ. ವ್ಯಕ್ತಿ ಎಂದ ಮೇಲೆ ಗುಣ-ದೋಷಗಳು ಸಹಜ.

ಇಲ್ಲದಿದ್ದರೆ ಆತ ದೇವರಾಗಿ ಬಿಡುತ್ತಾನೆ. ಹಾಗೆಂದು ದೇವರಲ್ಲೂ ಗುಣದೋಷಗಳಿಲ್ಲವೇ? ಆದರೆ ಸಿದ್ದೇಶ್ವರ ಶ್ರೀಗಳಲ್ಲಿ ಅಂಥ ದೋಷಗಳೂ ಇರಲಿಲ್ಲ. ಆದರೆ ಈ ಮಾತನ್ನು ಅವರ ಮುಂದೆ ಹೇಳಿದರೆ ಅವರಿಗೆ ಸಹ್ಯವಾಗುತ್ತಿರಲಿಲ್ಲ. ಸಂಕೋಚದಿಂದ ಮುದುಡಿ ಹೋಗುತ್ತಿದ್ದರು. ಕಾರಣ ಈ ಪ್ರಶಂಸೆಯಲ್ಲಿರುವ ಅಪಾಯ, ಕೃತ್ರಿಮತೆಯ ಜಿನುಗು ಅವರಿಗೆ ಗೊತ್ತಿತ್ತು. ಜ್ಞಾನಿ ಎಂಬ ಚಾದರ ಹೊದ್ದವರಿಗೆ ಬಿರುದು-ಬಾವಲಿ, ಪ್ರಶಂಸೆಗಳೆಲ್ಲ ಪುಟಗೋಸಿ!

ಅವರ ನಡೆ-ನುಡಿಗಳಲ್ಲಿ ಸಮ-ಸಮವನ್ನು ಕಂಡುಕೊಂಡಿದ್ದ ಶ್ರೀಗಳು, ಬದುಕಿನ ನಕಾರಗಳು ಕರೆಯುವ ಯಾವ ಮಾತನ್ನೂ ಕಿವಿ ಮೇಲೆ ಹಾಕಿಕೊಳ್ಳಲೇ ಇಲ್ಲ. ಒಬ್ಬ ಸಂತ ಇರಬೇಕಾದುದು ಹೀಗೇ ಎಂಬ ಸ್ಪಷ್ಟತೆ ಇತ್ತು. ಆ ಗಮ್ಯವನ್ನು ಕಾಪಾಡಿಕೊಂಡ ಅವರು ಕೊನೆ ತನಕ, ಬೆಂಕಿಯ ಪಕ್ಕದಲ್ಲಿದ್ದರೂ ಶಾಖ ತಟ್ಟಿಸಿಕೊಳ್ಳದ ಬಕುಲ, ದತ್ತುರಿಯಂತೆ ಇದ್ದುಬಿಟ್ಟರು! ಶ್ರೀಗಳ ಜತೆಗೆ ನನಗೆ ಸುಮಾರು ಎರಡು ದಶಕಗಳ ಆತ್ಮೀಯ ಒಡನಾಟವಿತ್ತು. ಅವರು ಯಾವ ಊರಿನಲ್ಲಿದ್ದರೂ ನನ್ನ ಸಂಪಾದಕತ್ವದ ಪತ್ರಿಕೆಗಳನ್ನು ನಿತ್ಯವೂ ಓದುತ್ತಿದ್ದರು.

ಸಿಕ್ಕಾಗ ಅವರು ಆ ಬಗ್ಗೆ ಸವಿಸ್ತಾರವಾಗಿ ಮಾತಾಡುತ್ತಿದ್ದರು. ನಾವು ನೀಡಿದ ಶೀರ್ಷಿಕೆಗಳನ್ನೂ ನೆನಪಿಟ್ಟು ಉದ್ಧರಿಸುತ್ತಿದ್ದ
(quote)ರು. ಅದರಿಂದ ಅವರು ಎಷ್ಟು ಗಂಭೀರವಾಗಿ ಪತ್ರಿಕೆಯನ್ನು ಓದುತ್ತಿದ್ದರು ಎಂಬುದು ಮನವರಿಕೆ ಆಗುತ್ತಿತ್ತು. ಕರ್ನಾಟಕದ ಯಾವ ಊರಿನಲ್ಲಿ ಪ್ರವಚನವಿದ್ದರೂ, ನನಗೆ ಪರಿಚಿತರಿರುವ ಸ್ನೇಹಿತರ ಮೂಲಕ ಆಹ್ವಾನ ನೀಡುತ್ತಿದ್ದರು. ಶ್ರೀಗಳ ಸೂಚನೆ ಮೇರೆಗೆ, ೨೦೨೧ರ ನವೆಂಬರಿನಲ್ಲಿ ಭಾಲ್ಕಿಯಲ್ಲಿ ನಡೆದ ಅಧ್ಯಾತ್ಮಿಕ ಪ್ರವಚನ ಕಾರ್ಯಕ್ರಮಕೆ ಹೋಗಿದ್ದೆ. ಆ ಸಂದರ್ಭದಲ್ಲಿ ಒಂದು ವಿಶಾಲ ಹೊಲದಲ್ಲಿನ ಮರದ ಕೆಳಗೆ ನಾವಿಬ್ಬರೇ ಕುರ್ಚಿಯಲ್ಲಿ ಕುಳಿತು ಸುಮಾರು ಎರಡು ಗಂಟೆ ಲೋಕಾಭಿರಾಮ ಮಾತಾಡಿದ್ದನ್ನು ಮರೆಯುವಂತೆಯೇ ಇಲ್ಲ. ಆ ದಿನವಿಡೀ ಅವರ ಜತೆ ಕಳೆದ ಕ್ಷಣಗಳು ಒಂದು ಸುಂದರ ನೆನಪು.

ಮರುದಿನ ಬೆಳಗ್ಗೆ ಪ್ರವಚನ. ಆ ದಿನ ಶ್ರೀಗಳ ಮಾತು ಕೇಳಲು ಎಂದಿನಂತೆ ಸಹಸ್ರಾರು ಜನ ಆಗಮಿಸಿದ್ದರು. ಎಡೆ ಅಚ್ಚು ಕಟ್ಟುತನ, ಶಿಸ್ತು. ಆಗಮಿಸಿದವರೆಲ್ಲ ಸ್ನಾನ ಮಾಡಿ, ಹಣೆಗೆ ವಿಭೂತಿ ಬಳಿದುಕೊಂಡು, ಶುಭ್ರ ದಿರಿಸು ಧರಿಸಿ ಆಗಮಿಸಿದ್ದರು. ಬೇರೆ ಧರ್ಮದವರೂ ಪ್ರೇಕ್ಷಕರ ಸಾಲಿನಲ್ಲಿದ್ದರು. ಆದರೆ ಅಂದು ಶ್ರೀಗಳು ಮಾತಾಡಲೇ ಇಲ್ಲ. ‘ಇಂದು ಭಟ್ಟರು ಮಾತಾಡಲಿ’ ಎಂದುಬಿಟ್ಟರು! ಆ ಪವಿತ್ರ ವೇದಿಕೆ ಯಲ್ಲಿ ಮಾತಾಡುವ ಸೌಭಾಗ್ಯವನ್ನು ಶ್ರೀಗಳು ಕರುಣಿಸಿದ್ದರು.

ಅಂದು ವೇದಿಕೆಯಲ್ಲಿ ಭಾಲ್ಕಿಯ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು ಮತ್ತು ಸುತ್ತೂರು ಮಠದ
ಜಯರಾಜೇಂದ್ರ ಸ್ವಾಮಿಗಳು ಸಹ ವೇದಿಕೆಯ ಮೇಲಿದ್ದರು. ಸಿದ್ದೇಶ್ವರ ಶ್ರೀಗಳು ನೀಡಿದ ಆ ‘ಉಡುಗೊರೆ’ ನನ್ನ ಪಾಲಿಗೆ
ಶಾಶ್ವತ ನೆನಪಿರುವಂಥದ್ದು. ಜ್ಞಾನಕ್ಕೆ ಸಾವಿಲ್ಲ, ಅದು ಶಾಶ್ವತ. ಹಾಗೆ ಜ್ಞಾನಿಗಳಿಗೂ. ಹಾಗೆ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳಿಗೂ. ಅವರು ಅಮರ. ಅವರು ಎರಡೂ ಅರ್ಥಗಳಲ್ಲಿ ’ಬುದ್ಧಿ’ಗಳು!