ಅಭಿಮತ
ಮರಿಲಿಂಗ ಗೌಡ ಮಾಲಿಪಾಟೀಲ್
ಸಾರಿಗೆ ನೌಕರರ ಮುಷ್ಕರ ಹಳಿತಪ್ಪಿರುವುದು ನಿಚ್ಚಳವಾಗಿ ಗೋಚರಿಸುತ್ತಿದೆ. ‘ನಾವು ಕೆಲಸ ಮಾಡುವುದಿಲ್ಲ’ ಎನ್ನುವುದನ್ನು ಒತ್ತಟ್ಟಿಗಿಟ್ಟರೂ ‘ಇತರರು ಕೆಲಸ ಮಾಡಲು ಬಿಡುವುದೂ ಇಲ್ಲ’ ಎನ್ನುವ ನಿಲುವನ್ನು ಸಹಿಸಿಕೊಳ್ಳುವುದಾದರೂ ಹೇಗೆ? ಡ್ರೈವರ್ ಒಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ಕಲ್ಲುತೂರಾಟ ನಡೆದ ಪರಿಣಾಮವಾಗಿ ಮೃತರಾಗಿದ್ದಾರೆ.
ಈ ಸಾವಿಗೆ ಯಾರು ಹೊಣೆ? ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಉತ್ತರಿಸುತ್ತಾರಾ? ಈಗ ಬರುತ್ತಿರುವ ಸಂಬಳ ಕಡಿಮೆ, 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ನೀಡಿ ಎನ್ನುವುದು ನೌಕರರ ಬೇಡಿಕೆ. ಡ್ರೈವರ್, ಕಂಡಕ್ಟರ್‌ಗಳಿಗೆ ಹತ್ತು
ಸಾವಿರ, ಹದಿನೈದು ಸಾವಿರ ಸಂಬಳ ಬರುತ್ತದಂತೆ ಇತ್ಯಾದಿ ವದಂತಿಗಳು ಹರಿದಾಡಿ ಅಮಾಯಕ ಶ್ರೀ ಸಾಮಾನ್ಯರು ಅಯ್ಯೋ ಪಾಪ ಎಂದು ಲೊಚಗುಟ್ಟಿದ್ದೂ ಆಗಿತ್ತು. ಹಾಗೆಂದು ಸಂಬಳ ಎಷ್ಟು ಎಂದು ವಿಚಾರಿಸಲು ಹೋದರೆ ಬರುವ ಉತ್ತರ ಬೇರೆಯೇ. ಚಾಲಕರು, ನಿರ್ವಾಹಕರು ಭತ್ಯೆಗಳೆಲ್ಲವೂ ಸೇರಿ ಮೂವತ್ತು ಸಾವಿರಕ್ಕೂ ಹೆಚ್ಚು ಸಂಬಳ ತೆಗೆದುಕೊಳ್ಳುತ್ತಾರೆ.
ಸಹಾಯಕರು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಸಂಬಳ ತೆಗೆದುಕೊಳ್ಳುತ್ತಾರೆ. ಇಂದಿನ ದುಬಾರಿ ದುನಿಯಾದಲ್ಲಿ ಇದು ಭಾರೀ ಒಳ್ಳೆಯ ಸಂಬಳವೇನೂ ಅಲ್ಲ. ಆದರೆ ತೃಪ್ತಿಕರ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಅಷ್ಟಕ್ಕೆ ತೃಪ್ತಿ ಪಡದೆ ಕರೋನಾ ಕಂಟಕದ ಕಾಲದಲ್ಲಿಯೂ ಮುಷ್ಕರ ಆರಂಭಿಸಿದ ಸಾರಿಗೆ ನೌಕರರು ಈಗ ಬರುತ್ತಿದ್ದುದನ್ನು ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ.
‘ಯಾರಿಗೆ ಸಾಲುತ್ತೆ ಸಂಬಳ’ ಎನ್ನುವ ಸಾರಿಗೆ ನೌಕರರ ಅಸಮಾಧಾನಕ್ಕೆ ‘ನಿಗಮ ನಷ್ಟದಲ್ಲಿರುವುದರಿಂದ ಸಂಬಳ ಕೊಡುವುದೇ ಕಷ್ಟದಲ್ಲಿ, ಹೀಗಿರುವಾಗ ಸಂಬಳ ಹೆಚ್ಚಿಸುವುದಾದರೂ ಹೇಗೆ?’ ಎಂಬುದು ಸರಕಾರದ ಪ್ರತಿಪಾದನೆ. ಸರಕಾರ ಮತ್ತು ನೌಕರರ ಮಧ್ಯೆ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ನುಸುಳಿಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ. ಉಭಯ ಪಕ್ಷಗಳೂ ತಮ್ಮ ತಮ್ಮ ನಿಲುವಿಗೆ ಬಿಗಿಯಾಗಿ ಅಂಟಿಕೊಂಡಂತೆ ಕಂಡರೂ ನೌಕರರ ಮಧ್ಯೆಯೇ ಭಿನ್ನಾಭಿಪ್ರಾಯ ಬರುವಂತೆ ಮಾಡುವಲ್ಲಿ ಸರಕಾರದ ಒತ್ತಡ ತಂತ್ರಗಳು ಯಶಸ್ವಿಯಾಗುವ ಹಂತದಲ್ಲಿದೆ.
ಪರಿಣಾಮವಾಗಿ ದಿನದಿಂದ ದಿನಕ್ಕೆ ರಸ್ತೆಗಿಳಿಯುವ ಬಸ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಮುಷ್ಕರವನ್ನು ತೀವ್ರಗೊಳಿಸಲು ಸಾರಿಗೆ ನೌಕರರ ಕುಟುಂಬದವರೂ ಬೀದಿಗಿಳಿದು ‘ತಟ್ಟೆ, ಲೋಟ ಚಳವಳಿ’ ಇತ್ಯಾದಿ ನಡೆಸುತ್ತಾ ಶತಾಯಗತಾಯ ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಬೇಕೆಂಬ ಹಠದಲ್ಲಿದ್ದಾರೆ. ಸರಕಾರ ಈ ಬಾರಿ ಬುಲ್ಡೋಜರ್‌ನಂತೆ ವರ್ತಿಸುತ್ತಿದೆ. ಸಾರಿಗೆ ನೌಕರರ ಒಗ್ಗಟ್ಟನ್ನು ಮುರಿಯಲು ಆಕ್ರಮಣ ಕಾರಿ ತಂತ್ರಗಳನ್ನೇ ಬಳಸಿದೆ. ಮುಷ್ಕರ ನಿರತ ಸಿಬ್ಬಂದಿಗೆ ಮಾರ್ಚ್ ತಿಂಗಳ ಸಂಬಳ ಕೊಡುವುದಿಲ್ಲ ಎಂಬ ನಿಲುವು, ಸಿಬ್ಬಂದಿಗಳನ್ನು ವಜಾ ಮಾಡುವಿಕೆ, ಖಾಸಗಿ ವಾಹನಗಳನ್ನು ಬಳಸಿಕೊಳ್ಳುವಿಕೆ ಇತ್ಯಾದಿ ಬಿಗಿ ಕ್ರಮಗಳ ಮೂಲಕ ನೌಕರರ ಮನದಲ್ಲಿ ಭಯವನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಕೆಲವು ನೌಕರರು ಬಲಿಯಾಗುವುದರೊಂದಿಗೆ ಸರಕಾರ ಮೇಲುಗೈ ಸಾಧಿಸಿದೆ.
ನಮ್ಮನ್ನು ಮಾತುಕತೆಗಾದರೂ ಕರೆಯಿರಿ ಎನ್ನುವ ನೌಕರರ ವಿನಂತಿಗೂ ಸರಕಾರ ಕಿವಿಗೊಡುತ್ತಿಲ್ಲ. ಒಂದಷ್ಟು ಕಡೆಗಳಲ್ಲಿ ಮುಷ್ಕರಕ್ಕೆ ಪ್ರಚೋದನೆ, ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ 142 ಎಫ್ಐಆರ್‌ಗಳು ದಾಖಲಾಗಿವೆ. 69 ಮಂದಿಯ ಬಂಧನವಾಗಿದೆ. 240 ಖಾಯಂ ನೌಕರರನ್ನು ವಜಾ ಮಾಡಲಾಗಿದೆ. 223 ಮಂದಿಯನ್ನು ಅಮಾನತು ಮಾಡಲಾಗಿದೆ. ಈ ಕ್ರಮಗಳು ಸಾರಿಗೆ ನೌಕರರ ಮನದಲ್ಲಿ ಭೀತಿ ಹುಟ್ಟಿಸಿದ ಪರಿಣಾಮವಾಗಿ ನೌಕರರು ನಿಧಾನಕ್ಕೆ ಕರ್ತವ್ಯಕ್ಕೆ ಮರಳುತ್ತಿದ್ದಾರೆ.
ಈ ಮೂಲಕ ಮುಷ್ಕರವನ್ನು ಮುರಿಯುವ ಹಾದಿಯಲ್ಲಿ ಸರಕಾರ ಒಂದಿಷ್ಟು ಯಶಸ್ಸು ಗಳಿಸಿತು. ನೌಕರರಿಗೆ ಸಂಬಳ ಕಡಿಮೆ ಎನ್ನುವ ಬಗ್ಗೆ ಸಾರ್ವಜನಿಕರಿಗೂ ಸಹಾನುಭೂತಿ ಇದೆ. ಹೀಗಾಗಿ ಕಳೆದ ಬಾರಿಯ ನೌಕರರ ಮುಷ್ಕರ ಯಶಸ್ವಿಯಾಗಿತ್ತು. ಸಾರಿಗೆ ನೌಕರರ ಬಗ್ಗೆ ಸಾರ್ವಜನಿಕರಿಗೆ ಅನುಕಂಪವಿದೆ ಎನ್ನುವ ಕಾರಣಕ್ಕೆ ಅಂಜಿದ ಸರಕಾರ ಹಿಂದಿನ ಮುಷ್ಕರಕ್ಕೆ ಮಣಿದು ನೌಕರರ
ಬೇಡಿಕೆಗಳನ್ನು ಈಡೇರಿಸಲು ಒಪ್ಪಿತ್ತು.
ಇದಾದ ಮೂರು ತಿಂಗಳಿಗೆ ಮತ್ತೆ ಸಾರಿಗೆ ನೌಕರರು ಮುಷ್ಕರ ಆರಂಭಿಸಿದರು. ಸಾರಿಗೆ ನೌಕರರ ಹತ್ತು ಬೇಡಿಕೆಗಳಲ್ಲಿ ೮ನ್ನು ನಾವು ಈಡೇರಿಸಿದ್ದೇವೆ ಎನ್ನುವ ಸರಕಾರದ ಮಾತು. ಉಳಿದೆರಡು ಬೇಡಿಕೆಗಳಾದ 6ನೇ ವೇತನ ಆಯೋಗದ ಪ್ರಕಾರ ಸಂಬಳ ನೀಡುವಿಕೆ ಮತ್ತು ಸರಕಾರಿ ನೌಕರರೆಂದು ಪರಿಗಣಿಸುವುದು -ಇವೆರಡನ್ನೂ ಈಡೇರಿಸುವುದು ಸಾಧ್ಯವೇ ಇಲ್ಲ ಎಂದು ಸರಕಾರ
ಆರಂಭದ ಸ್ಪಷ್ಟಪಡಿಸಿತ್ತು.
ಸಾರಿಗೆ ನೌಕರರು ಮುಷ್ಕರ ಮಾಡಿದರೆಂದರೆ ಅದರ ನೇರ ಪರಿಣಾಮವಾಗುವುದು ಸಾರ್ವಜನಿಕರ ಮೇಲೆ. ಏಪ್ರಿಲ್ 7ರಂದು ಮುಷ್ಕರ ಎಂದು ನೌಕರರ ಒಕ್ಕೂಟ ಹೇಳಿತ್ತಾದರೂ ಏಪ್ರಿಲ್ 6ರ ಸಂಜೆಯೇ ಕೆಲವು ಕಡೆಗಳಲ್ಲಿ ಬಸ್ ಸಂಚಾರ ಸ್ಥಗಿತವಾಗಿತ್ತು. ಬಸ್‌ಗಳಿಲ್ಲದೇ ವೃದ್ಧರು, ಹಸುಗೂಸುಗಳು ಜೊತೆಯಲ್ಲಿದ್ದ ಮಹಿಳೆಯರು ಸಂಕಷ್ಟಕ್ಕೀಡಾದರು. ಸರಕಾರಿ ಸಾರಿಗೆ ಇಲ್ಲ ಎನ್ನುವು ದನ್ನೇ ತಮ್ಮ ಲಾಭಕ್ಕೆ ಬಳಸಿಕೊಂಡ ಖಾಸಗಿ ವಾಹನಗಳು ಅಕ್ಷರಶಃ ಪ್ರಯಾಣಿಕರ ಸುಲಿಗೆಗಿಳಿದರು. ಇದರಿಂದಾಗಿ
ಜನಸಾಮಾನ್ಯರು ಸಾರಿಗೆ ನೌಕರರಿಗೆ ಹಿಡಿಶಾಪ ಹಾಕುವಂತಾಯಿತು.
ಜನರಿಲ್ಲದೆ ಸಾರಿಗೆ ನೌಕರರಿಲ್ಲ. ಸಾರಿಗೆ ನೌಕರರಿಗೆ ಏನಾದರೂ ಆದರೆ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಸ್ಪಂದಿಸು ತ್ತಾರೋ ಇಲ್ಲವೋ? ಸರಕಾರ ಸ್ಪಂದಿಸುತ್ತದೋ ಇಲ್ಲವೋ? ಹೇಳಲಾಗದು. ಆದರೆ ಜನ ಮಾತ್ರ ಖಂಡಿತ ಸ್ಪಂದಿಸುತ್ತಾರೆ. ಯಾಕೆಂದರೆ ಸಾರಿಗೆ ನೌಕರರಿಗೂ, ಜನರಿಗೂ ಅವಿನಾಭಾವ ಸಂಬಂಧ. ದಿನಬೆಳಗಾದರೆ ಕೆಲಸಕ್ಕೆ ಮಾರ್ಕೆಟ್‌ಗೆ ಹೀಗೆ ಎಲ್ಲಿಗೆ
ಹೋಗಬೇಕಾದರೂ ಸರಕಾರಿ ಸಾರಿಗೆಯನ್ನೇ ಜನ ಅವಲಂಬಿಸುತ್ತಾರೆ. ಅಂತಹ ಜನರಿಗೆ ತೊಂದರೆಯಾಗುವಂತೆ ಮುಷ್ಕರ ನಡೆಸಿದರೆ ಅದನ್ನು ಜನ ಯಾವ ರೀತಿ ತೆಗೆದುಕೊಳ್ಳುತ್ತಾರೆ ಎಂದು ಸಾರಿಗೆ ನೌಕರರು ಯೋಚಿಸಬೇಕಿತ್ತು.
ಸಾರಿಗೆ ನಿಗಮಗಳು ನೌಕರರಿಗೆ ಮತ್ತು ಅವರ ಕುಟುಂಬಕ್ಕೂ ಸವಲತ್ತುಗಳನ್ನು ಒದಗಿಸಿತ್ತು. ಇದೆಲ್ಲವನ್ನೂ ಮರೆತು ಮಾತೃ ಸಂಸ್ಥೆಗೆ ತೊಂದರೆಯಾಗುವಂತೆ ವರ್ತಿಸುವುದನ್ನು ದ್ರೋಹ ಎನ್ನಬಹುದಲ್ಲವೇ? ಜಪಾನ್‌ನಲ್ಲಿ ಕಂಡಕ್ಟರ್‌ಗಳು ಜನರಿಗೆ ಬಸ್ ಟಿಕೆಟ್ ನೀಡದೆ ಮುಷ್ಕರ ಮಾಡುತ್ತಾರೆ. ಇದರಿಂದ ಜನರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಸಂಬಳದ ಬಗ್ಗೆ
ಅಸಮಾಧಾನವಿದ್ದರೆ ಕಾನೂನಿನ ಮೂಲಕ ಹೋರಾಟ ಮಾಡಬಹುದಿತ್ತು. ಅದರ ಬದಲು ಕೆಲಸ ನಿಲ್ಲಿಸಿದ ಪರಿಣಾಮವಾಗಿ ಸಾರಿಗೆ ಇಲಾಖೆಗೆ 187 ಕೋಟಿ ನಷ್ಟವಾಗಿದೆ.
ಕೆಲಸ ನಿಲ್ಲಿಸುವುದನ್ನು ಬ್ಲಾಕ್‌ಮೇಲ್ ಎಂದಲ್ಲದೆ ಬೇರೇನೆಂದು ವರ್ಣಿಸಬಹುದು? ಇಂದು ಸಾರಿಗೆ ನೌಕರರ ಮುಷ್ಕರಕ್ಕೆ ಮಣಿದರೆ ನಾಳೆ ಬೆಸ್ಕಾಮ್‌ನವರೂ ಇದೇ ಸೂತ್ರ ಅನುಸರಿಸಬಹುದು. ಕರೆಂಟ್ ನಿಲ್ಲಿಸಿ, ನೀರು ನಿಲ್ಲಿಸಿ ಸಂಬಳ ಹೆಚ್ಚಳ ಮಾಡಿಕೊಳ್ಳಬಹುದು ಎಂದು ಎಲ್ಲರೂ ಭಾವಿಸುವಂತಾಗುತ್ತದೆ. ಆಶಾ ಕಾರ್ಯಕರ್ತೆಯರ ಸಂಬಳಕ್ಕೆ ಹೋಲಿಸಿದರೆ ಸಾರಿಗೆ
ನೌಕರರ ಸಂಬಳ ತೃಪ್ತಿಕರವೇ ಅಲ್ಲವೇ? ಅಷ್ಟಕ್ಕೂ ಸಾರಿಗೆ ನೌಕರರು ಮುಷ್ಕರಕ್ಕೆ ಆರಿಸಿಕೊಂಡ ಸಮಯವಾದರೂ
ಯಾವುದು? ಕರೋನಾ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಮುಷ್ಕರ ಮಾಡಿ ತುಂಬಿ ತುಳುಕುತ್ತಿದ್ದ ಖಾಸಗಿ ಬಸ್‌ಗಳಲ್ಲಿ ಜನ ಅಂತರ ಮರೆತು ಪ್ರಯಾಣಿಸಿ ತಮ್ಮ ಆರೋಗ್ಯಕ್ಕೆ ಸಂಚಕಾರ ತಂದುಕೊಂಡಿದ್ದರೆ ಅದಕ್ಕೆ ಹೊಣೆ ಯಾರು? ಸಂಬಳ ಕಡಿಮೆ ಎನ್ನುವುದೇನೋ ಸರಿ.
ಆ ಸಂಬಳವೂ ಇಲ್ಲ ಎಂದಾದರೆ? ಎನ್ನುವ ಭಯವೇ ಕೆಲವು ನೌಕರರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಮಾಡಿದೆ. ಆದರೆ
ಈಗಾಗಲೇ ಸರಕಾರ ಹಲವು ನೌಕರರನ್ನು ವಜಾ ಮಾಡಿದೆ. ಇಂದಲ್ಲ ನಾಳೆ ಮುಷ್ಕರ ಅನಿವಾರ್ಯವಾಗಿ ಮುಕ್ತಾಯವಾಗ ಬಹುದು. ಆಗ ಕೆಲಸ ಕಳೆದುಕೊಂಡವರ ಕತೆ ಏನು?
6ನೇ ವೇತನ ಆಯೋಗದ ಪ್ರಕಾರ ಸಂಬಳ ಕೊಡುವುದು ಸಾಧ್ಯವೇ ಇಲ್ಲ ಎಂದು ಸರಕಾರ ಹೇಳಿದರೂ ಸಂಬಳ ಹೆಚ್ಚಿಸುವ ಸಾಧ್ಯತೆಗಳ ಬಗ್ಗೆ ಸರಕಾರ ಸಮ್ಮತಿ ವ್ಯಕ್ತಪಡಿಸಿತ್ತು. ನೌಕರರ ವೇತನ ಪರಿಷ್ಕರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದರು. ಈ ಸಂದರ್ಭದಲ್ಲಿ ಶೇ.8ರಷ್ಟು ವೇತನ ಹೆಚ್ಚಳ ಸಾಧ್ಯತೆಯ ಸುಳಿವು
ನೀಡಿದ್ದರು. ಸಾರಿಗೆ ನಿಗಮಗಳ ಆದಾಯ ನೌಕರರ ಸಂಬಳ ಮತ್ತು ಡೀಸೆಲ್ ಖರ್ಚಿಗೆ ಸಾಕಾಗುವುದಿಲ್ಲ.
ಒಟ್ಟು 1962 ಕೋಟಿ ರು.ಗಳ ನಷ್ಟದಲ್ಲಿ ನಿಗಮಗಳಿವೆ. ಕರೋನಾ ಕಂಟಕದ ಪರಿಣಾಮವಾಗಿ ಒಂದು ವರ್ಷದಲ್ಲಿ ಬಹಳಷ್ಟು ನಷ್ಟಕ್ಕೆ ನಿಗಮಗಳು ಈಡಾಗಿವೆ. ಕರೋನಾ ವ್ಯಾಧಿ ಆವರಿಸುವುದಕ್ಕೂ ಮೊದಲು 4 ನಿಗಮಗಳು ಸೇರಿದಂತೆ ಒಂದು ಕೋಟಿ ಜನರು ಪ್ರಯಾಣಿಸುತ್ತಿದ್ದರು. ಕರೋನಾದ ಬಳಿಕ ಪ್ರಯಾಣಿಕರ ಸಂಖ್ಯೆ 65 ಲಕ್ಷಕ್ಕೆ ಇಳಿದಿದೆ. ಕರೋನಾದ 2ನೆಯ ಅಲೆಯಿಂದಾಗಿ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಕಡಿಮೆಯಾಗಿದೆ.
ಹೀಗಿದ್ದರೂ ಸರಕಾರ ಚುನಾವಣೆಗಳ ಬಳಿಕ ವೇತನ ಹೆಚ್ಚಿಸಲಿದೆ, ಮೇ 4ರ ಬಳಿಕ ಈ ಬಗ್ಗೆ ಮಾತುಕತೆ ನಡೆಸೋಣ ಎಂದು ಸಚಿವರು ಹೇಳಿದ್ದರು. ನೌಕರರು ಇದನ್ನು ಒಪ್ಪಿ ಮುಷ್ಕರವನ್ನು ಇನ್ನೊಂದು ತಿಂಗಳು ಮುಂದೂಡಬಹುದಿತ್ತು. ಆದರೆ ನೌಕರರು ಆತುರಪಟ್ಟರು ಎಂದೇ ಅನಿಸುತ್ತದೆ. ಮುಷ್ಕರ ಮುರಿದುಬಿದ್ದರೆ ನೌಕರರ ಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಇಂದು ನೌಕರಿ ಸಿಗುವುದೇ ಕಷ್ಟ. ಇರುವ ನೌಕರಿಯನ್ನು ಕಳೆದುಕೊಂಡರೆ ಅವರನ್ನು ನಂಬಿದವರ ಬದುಕು ವಿಷಮಿಸುತ್ತದೆ.
ಸರಕಾರ ಮೊದಲೇ ಸಾರಿಗೆ ನಿಗಮವನ್ನು ಖಾಸಗೀಕರಣಗೊಳಿಸುವ ಉದ್ದೇಶದಲ್ಲಿತ್ತು. ಆದರೆ ಖಾಸಗೀಕರಣಕ್ಕೆ ವ್ಯಾಪಕ
ವಿರೋಧವೂ ಇರುವುದರಿಂದ ಸರಕಾರ ಸುಮ್ಮನಿತ್ತು. ಈಗ ಸಾರಿಗೆ ನೌಕರರ ಮುಷ್ಕರದ ಬೆಳವಣಿಗೆಗಳನ್ನು ಗಮನಿಸಿದರೆ ಖಾಸಗೀಕರಣದ ಒಳಸಂಚಿನ ವಾಸನೆ ಬಡಿಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅನುಮಾನ ವ್ಯಕ್ತಪಡಿಸಿದ್ದಾರೆ. ಯುಗಾದಿ ಸಂದರ್ಭದಲ್ಲಿ ಸಾರಿಗೆ ಇಲಾಖೆಗೆ 25 ಕೋಟಿ ರು.ಗಳ ಆದಾಯ ಬರುತ್ತಿತ್ತು. ಈ ಮುಷ್ಕರದಿಂದ ನಿಗಮಕ್ಕೆ ದೊಡ್ಡ ನಷ್ಟವಾಗಿದೆ. ಇದಕ್ಕೆ ಮುಷ್ಕರನಿರತ ನೌಕರರೇ ಹೊಣೆ ಎಂದು ಸ್ವತಃ ಮುಖ್ಯಮಂತ್ರಿ ಹೇಳಿದ್ದಾರೆ.
ಇದನ್ನೆಲ್ಲಾ ನೋಡಿದರೆ ಭವಿಷ್ಯದಲ್ಲಿ ಸಾರಿಗೆ ನೌಕರರಿಗೆ ತೊಂದರೆಗಳೇ ಹೆಚ್ಚು ಎನಿಸುತ್ತದೆ. ಎಲ್ಲಾ ಓಕೆ ಕೋಡಿಹಳ್ಳಿ ಯಾಕೆ?
ಕಳೆದ ಬಾರಿಯ ಮುಷ್ಕರದಲ್ಲಿ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ನೌಕರರ ಮುಂದಾಳುವಾಗಿ ದಿಡೀರನೇ ಪ್ರತ್ಯಕ್ಷವಾಗಿದ್ದರು. ರೈತ ನಾಯಕ ಕೋಡಿಹಳ್ಳಿಯವರಿಗೂ ಸಾರಿಗೆ ನೌಕರರಿಗೂ ಏನು ಸಂಬಂಧ? ವಾಸ್ತವವಾಗಿ ಎಚ್.ವಿ. ಅನಂತಸುಬ್ಬರಾವ್ ಈ ಮುಷ್ಕರದ ನೇತೃತ್ವವನ್ನು ವಹಿಸಬೇಕಾಗಿತ್ತು.
ಆದರೆ ಅವರು ಮುಷ್ಕರವನ್ನು ಒಪ್ಪಲಿಲ್ಲವಾದ್ದರಿಂದ ಕೋಡಿಹಳ್ಳಿ ದಿಢೀರ್ ನಾಯಕನಾಗಿ ಹೊರಹೊಮ್ಮಿದರು. ಇದರಿಂದ
ಅವರಿಗೆ ಲಾಭವಾಯಿತಷ್ಟೇ ಹೊರತು ನೌಕರರು ಹಳ್ಳಕ್ಕೆ ಬಿದ್ದರು. ಕೋಡಿಹಳ್ಳಿ ಹೋರಾಟಕ್ಕೆ ಬೆಂಬಲವನ್ನಷ್ಟೇ ವ್ಯಕ್ತಪಡಿಸ ಬೇಕಿತ್ತು. ಆದರೆ ನೌಕರರ ಮುಷ್ಕರದ ನೇತೃತ್ವ ವಹಿಸಿದ ಕೋಡಿಹಳ್ಳಿ ಈಗ ಅಪಖ್ಯಾತಿಗೆ ಗುರಿಯಾಗಬೇಕಾಗಿದೆ.
ಸಂಬಂಧಪಡದವರು ಮುಷ್ಕರದ ನೇತೃತ್ವ ವಹಿಸಿದರೆ ಏನಾಗುತ್ತದೆ ಎನ್ನುವುದರ ಉದಾಹರಣೆಯೊಂದನ್ನು ನೋಡೋಣ. ಅದು 1983ರ ಸಮಯ. ಮುಂಬೈಯಲ್ಲಿ ಹತ್ತಿ ಗಿರಣಿಗಳ ಕಾರ್ಮಿಕರಿಗೂ ವೇತನದ ಬಗ್ಗೆ ಅಸಮಾಧಾನವಿತ್ತು. ಸಂಬಳ ಹೆಚ್ಚಳಕ್ಕಾಗಿ ಎರಡೂವರೆ ಲಕ್ಷದಷ್ಟು ಕಾರ್ಮಿಕರು ಮುಷ್ಕರಕ್ಕೆ ಸಿದ್ಧರಾಗಿದ್ದರು. ಆಗ ಆ ಮುಷ್ಕರದ ನೇತೃತ್ವ ವಹಿಸಿದ್ದವರು ಡಾ. ದತ್ತಾ ಸಾವಂತ್. ಅವರಿಗೂ ಹತ್ತಿ ಗಿರಣಿಗಳಿಗೂ ಏನೇನೂ ಸಂಬಂಧವಿಲ್ಲದಿದ್ದರೂ ಹತ್ತಿ ಗಿರಣಿಗಳ ಕಾರ್ಮಿಕರು ದತ್ತಾ ಸಾವಂತ್‌ರನ್ನು ನಂಬಿ ಅವರ ಹಿಂದೆ ನಿಂತದ್ದು ಒಂದೇ ಕಾರಣಕ್ಕೆ. -ಅದಕ್ಕೂ ಮೊದಲು ಆಟೋಮೊಬೈಲ್ಸ್‌ಗೆ ಸಂಬಂಧಪಟ್ಟ ಮುಷ್ಕರ ಒಂದರ ನೇತೃತ್ವ ವಹಿಸಿದಾಗ ಡಾ. ದತ್ತಾ ಸಾವಂತ್ ಯಶಸ್ವಿಯಾಗಿದ್ದರು.
ಹೀಗಾಗಿ ಅವರ ನೇತೃತ್ವದಲ್ಲಿ ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದೆಂಬ ವಿಶ್ವಾಸದಲ್ಲಿ ಹತ್ತಿ ಗಿರಣಿಗಳ ಕಾರ್ಮಿಕರು ಡಾ. ದತ್ತಾ ಸಾವಂತ್ ಅವರನ್ನು ನಂಬಿದರು. ಆದರೆ ಪ್ರತಿ ಬಾರಿಯೂ ಗೆಲುವು ಒಬ್ಬರದೇ ಆಗಿರುವುದಿಲ್ಲ. ವರ್ಷಗಳ ಕಾಲ ಪ್ರತಿಭಟನೆ ನಡೆದರೂ ಸರಕಾರ ಅಲ್ಲಾಡಲಿಲ್ಲ. ಕಾರ್ಮಿಕರೂ ಪಟ್ಟು ಬಿಡಲಿಲ್ಲ. ಹತ್ತಿ ಗಿರಣಿಗಳ ಮಾಲೀಕರು ಬೇಸತ್ತು ಮುಂಬೈ ಬಿಟ್ಟು ಹೋದರು. ಗಿರಣಿಗಳು ಮುಚ್ಚಲ್ಪಟ್ಟವು.
ಲಕ್ಷಾಂತರ ಕಾರ್ಮಿಕರು ಬೀದಿ ಪಾಲಾದರು. ಡಾ. ದತ್ತಾ ಸಾವಂತ್ ಮಾತ್ರ ರಾಜಕೀಯಕ್ಕೆ ಧುಮುಕಿ ದೊಡ್ಡ ನೇತಾರರಾದರು. ಈಗ ಕೋಡಿಹಳ್ಳಿಯವರ ಹಿಂದೆ ನಿಂತ ಕಾರ್ಮಿಕರಿಗೆ ಹಾಗಾಗದಿರಲಿ. ಅದೇನೇ ಇದ್ದರೂ ಸರಕಾರ ತನ್ನ ಕಠೋರ ನಿಲುವಿನಿಂದ ಹಿಂದೆ ಸರಿಯುವುದು ಒಳ್ಳೆಯದು. ಸಾರಿಗೆ ನೌಕರರೂ ನಮ್ಮವರೇ. ಸದ್ಯಕ್ಕೆ ಯಾರದೇ ಕೆಲಸವನ್ನೂ ಕಳೆಯದೇ ಸಾಧ್ಯವಿದ್ದಷ್ಟು ಸಂಬಳ ಹೆಚ್ಚಳದ ಆಶ್ವಾಸನೆ ಕೊಡಲಿ. ನೌಕರರು ಹಠ ಬಿಟ್ಟು ಕೆಲಸಕ್ಕೆ ಬರಲಿ. ಪ್ರಕರಣ ಸುಖಾಂತ್ಯವಾಗಲಿ ಎನ್ನುವುದಷ್ಟೇ ನಮ್ಮ ಆಶಯ.