Friday, 13th December 2024

ಕೃಷ್ಣ ಎಂಬ ಅಪ್ರತಿಮ ಟ್ಯಾಲೆಂಟ್ ಮ್ಯಾನೇಜರ್

– ವೀರನಾರಾಯಣ

ಕೃಷ್ಣ ಎಂದೂ ಅಣ್ಣ ಬಲರಾಮನ ಕಾಲೆಳೆಯಲಿಲ್ಲ, ಆತನೊಂದಿಗೆ ಸ್ಪರ್ಧೆಗೆ ಬೀಳಲಿಲ್ಲ. ಬದಲಿಗೆ ಹಲವು ಕಠಿಣ ಪರಿಸ್ಥಿತಿಗಳಲ್ಲಿ ಬಲರಾಮನನ್ನು ಕಾಪಾಡಿದ. ಕಡೆವರೆಗೂ ದೊರೆಯಾಗುವುದಿರಲಿ, ಯುವರಾಜನೂ ಆಗದೆ ಯದುಕುಲದ ಒಬ್ಬ ಸಾಮಾನ್ಯ ಸದಸ್ಯನಾಗಿಯೇ ಉಳಿದು ಲೋಕೋತ್ತರನಾದ.

ಒಬ್ಬ ಪ್ರತಿಭಾನ್ವಿತ, ತನ್ನಷ್ಟೇ ಅಥವಾ ತನಗಿಂತ ಪ್ರತಿಭಾನ್ವಿತನನ್ನು ಸ್ಪರ್ಧಿಯಂತೆಕಾಣುವುದು, ಕಾಲೆಳೆಯುವುದು, ಒಂದು ಅವಕಾಶ ದೊರಕಿಬಿಟ್ಟರೆ ಎಲ್ಲಿ ತನಗಿಂತಲೂ ಮೇಲೇರಿಬಿಡುವನೋ ಎಂದು ಅಸೂಯೆಪಡುವುದು, ಮೂಲೆಗುಂಪು ಮಾಡುವುದನ್ನು ರಾಜಕೀಯ ವಲಯದಲ್ಲಿ, ಕಾರ್ಪೊರೇಟ್ ಜಗತ್ತಿನಲ್ಲಿ, ಹಲವು ಸಂಸ್ಥೆ-ಕಚೇರಿಗಳಲ್ಲಿ, ಸ್ನೇಹಿತರ ವಲಯದಲ್ಲಿ ಕಂಡಿದ್ದೇವೆ. ಅಷ್ಟೇಕೆ, ಕುಟುಂಬಗಳಲ್ಲೂ
ಸೋದರ-ಕಲಹಗಳನ್ನು ಗಮನಿಸಿದ್ದೇವೆ. ಇಂಥ ಕಾಲೆಳೆಯುವಿಕೆ, ಅನಾರೋಗ್ಯಕರ ಸ್ಪರ್ಧೆ ಆಯಾ ಪ್ರತಿಭೆಗಳ ಬೆಳವಣಿಗೆಗೆ ಮಾರಕವಾಗುವುದು ಮಾತ್ರವಲ್ಲದೆ ಆಯಾ ಸಂಸ್ಥೆ, ಸಮುದಾಯ, ಕುಟುಂಬದ ಪಾಲಿಗೂ ಬಹುದೊಡ್ಡ ನಷ್ಟವಷ್ಟೇ. ಇಂಥವನ್ನು ತಡೆಯಲು ಕಾರ್ಪೊರೇಟ್ ವಲಯದಲ್ಲಿ ಇತ್ತೀಚೆಗೆ ಹಲವು ಸ್ತರದ, ವೈವಿಧ್ಯಮಯ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಕ್ರಮವನ್ನು ಅನುಸರಿಸಲಾಗುತ್ತದೆ. ಹಾಗೆ ನೋಡಿದರೆ ಯಾರೂ ಯಾರಿಗೂ ಸ್ಪರ್ಧಿಯಲ್ಲ. ಈ ಲೋಕದಲ್ಲಿ ಪ್ರತಿಯೊಬ್ಬರ ಪ್ರತಿಭೆಯೂ ಅನನ್ಯ. ಅವರವರ ಮಾದರಿ-ಮಾರ್ಗದಲ್ಲಿ ಅವರು ಬೆಳೆಯಬೇಕು. ಇದನ್ನರಿತ ನಿಜನಾಯಕ ಮತ್ತೊಂದು ಪ್ರತಿಭೆಯನ್ನು ಸ್ಪರ್ಧಿಯಂತೆ ಕಾಣುವುದಿಲ್ಲ. ಆತನ ಕಾಲೆಳೆಯುತ್ತಾ ವೃಥಾ ತನ್ನ ಕಾಲಹರಣ, ವ್ಯಕ್ತಿತ್ವಹರಣ ಮಾಡಿಕೊಳ್ಳುವುದಿಲ್ಲ.

ಬದಲಿಗೆ ಆ ಪ್ರತಿಭೆಗೆ ಸೂಕ್ತ ಅವಕಾಶ ನೀಡಿ, ಆತನ ಬೆಳವಣಿಗೆಗೆ ಕೈಲಾದ ನೆರವು ನೀಡಿದರೆ, ಆ ಮೂಲಕ ತನ್ನ ಬೆಳವಣಿಗೆಯೂ ಆಗಿ ತನ್ನ ಬಲವೂ ವರ್ಧಿಸುತ್ತದೆ ಎಂಬುದನ್ನು ಅರಿತಿರುತ್ತಾನೆ. ಶ್ರೀಕೃಷ್ಣ ಇಂಥ ಪ್ರೌಢ ನಾಯಕನಾಗಿದ್ದ. ಆತ ಯಾರೊಂದಿಗಾದರೂ ಸ್ಪರ್ಧೆಗೆ ಬಿದ್ದನಾ? ಯಾರ ಬೆಳವಣಿಗೆಗಾದರೂ ಅಡ್ಡಿಯಾಗಿ ಅವಕಾಶ ಕಸಿದುಕೊಂಡನಾ? ಎಂದಿಗೂ ಇಲ್ಲ. ಇತರರನ್ನು ಸ್ಪರ್ಧಿಯಂತೆ ಕಾಣುವುದು, ಅಸೂಯೆಪಡುವುದು ಕೂಡಾ ಅಹಂ ಅಥವಾ ಸ್ವಾರ್ಥದ ವಿಸ್ತೃತ ರೂಪವಷ್ಟೇ. ಆದರೆ ತಾನೆಂಬುದೇ ಇಲ್ಲ ಎಂಬ ಶೂನ್ಯತೆ ಅಥವಾ ಇರುವುದೆಲ್ಲಾ ನಾನೆ ಎಂಬ ಪೂರ್ಣತೆಯ ಸಾಕಾರ ರೂಪನಾಗಿದ್ದ ಕೃಷ್ಣನಿಗೆ ಯಾರೊಂದಿಗೂ ಸ್ಪರ್ಧೆಗೆ ಬೀಳುವ ಅಗತ್ಯವಿರಲಿಲ್ಲ. ತನ್ನ ಕಾಲಕ್ಕೆ ಶೌರ್ಯ, ಸಾಹಸ, ಬುದ್ಧಿಮತ್ತೆ, ನಾಯಕತ್ವ, ಸಂಯಮ ಇತ್ಯಾದಿ ಗುಣಗಳಲ್ಲಿ ಯುವರಾಜ ಬಲರಾಮನಿಗಿಂತಲೂ ಕೃಷ್ಣ ಜನಪ್ರಿಯನಾಗಿದ್ದ. ವ್ಯಕ್ತಿತ್ವದಲ್ಲಂತೂ ಸಾರ್ವಕಾಲಿಕ ಆಕರ್ಷಣೆ ಕೃಷ್ಣನದ್ದು. ಆತ ಮನಸ್ಸು ಮಾಡಿದ್ದರೆ ಯದುಕುಲ ಸಿಂಹಾಸನ ಏರುವುದು ಚಿಟಿಕೆ ಹೊಡೆದಷ್ಟು ಸರಳವಿತ್ತು. ಯದುಕುಲದವನೇ ಆದ ಕಂಸ ಅಭಿಷಕ್ತ ದೊರೆಯಾಗಿದ್ದ ಪಿತನನ್ನೇ ಬದಿಗೆ ಸರಿಸಿ ಸಿಂಹಾಸನವೇರಿದ್ದನಲ್ಲ! ಆದರೆ ಕೃಷ್ಣ ಎಂದೂ ಅಣ್ಣ ಬಲರಾಮನ ಕಾಲೆಳೆಯಲಿಲ್ಲ, ಆತನೊಂದಿಗೆ ಸ್ಪರ್ಧೆಗೆ ಬೀಳಲಿಲ್ಲ. ಬದಲಿಗೆ ಹಲವು ಕಠಿಣ ಪರಿಸ್ಥಿತಿಗಳಲ್ಲಿ ಬಲರಾಮನನ್ನು ಕಾಪಾಡಿದ.

ಕಡೆವರೆಗೂ ದೊರೆಯಾಗುವುದಿರಲಿ, ಯುವರಾಜನೂ ಆಗದೆ ಯದುಕುಲದ ಒಬ್ಬ ಸಾಮಾನ್ಯ ಸದಸ್ಯನಾಗಿಯೇ ಉಳಿದು ಲೋಕೋತ್ತರನಾದ. ಯದುಕುಲದವರು ಮದ್ಯವ್ಯಸನಿಗಳು, ಜಗಳಗಂಟರು, ಮುಂಗೋಪಿಗಳು, ಕಾಲೆಳೆಯುವವರು ಎಂಬ ಮಾತು ಆ ಕಾಲಕ್ಕೆ ಜನಜನಿತವಾಗಿತ್ತು. ಇಂಥ ಚಾಳಿಗಳಿಂದಾಗಿಯೇ ಬಹುತೇಕ ಯಾದವರು ಸತ್ತರೆನ್ನಲಾಗುತ್ತದೆ. ಬಲರಾಮ ಕೂಡಾ ಜಗಳಗಂಟನೂ, ಮುಂಗೋಪಿಯೂ, ಕೆಲವೊಮ್ಮೆ ಅವಿವೇಕಿಯೂ ಆಗಿದ್ದನೆಂಬುದಕ್ಕೆ ನಿದರ್ಶನಗಳಿವೆ. ಆದರೆ ಇಂಥ ಅನೇಕ ಸಂದರ್ಭದಲ್ಲಿ ಆತನನ್ನು ಕೃಷ್ಣ ಕಾಪಾಡಿದ್ದ. ಕುರುಕ್ಷೇತ್ರ ಯುದ್ಧದಲ್ಲಿ ಕೃತವರ್ಮನೊಂದಿಗೆ ಬಲ
ರಾಮನೂ ದುರ್ಯೋಧನನ ಪಾಳಯ ಸೇರುವ ಹವಣಿಕೆಯಲ್ಲಿದ್ದ. ಆದರೆ ಭವಿಷ್ಯದ ಅಪಾಯ ಗ್ರಹಿಸಿದ್ದ ಕೃಷ್ಣ, ಉಪಾಯವಾಗಿ ತೀರ್ಥಯಾತ್ರೆಗೆ ಕಳುಹಿಸುವ ಮೂಲಕ ಬಲರಾಮನನ್ನು ಕಾಪಾಡಿದ.

***

ವ್ಯಾಸ ಮಹಾಭಾರತದಲ್ಲಿ ಕೃಷ್ಣನ ಮೊದಲ ಪರಿಚಯವಾಗುವುದು ದ್ರೌಪದಿ ಸ್ವಯಂವರದವೇಳೆ. ಆ ಕಾಲಕ್ಕೆ ಅತ್ಯಂತ ಸಂಪದ್ಭರಿತವೂ, ಶಕ್ತಿ ಶಾಲಿಯೂ ಆಗಿತ್ತು ಪಾಂಚಾಲ ರಾಜ್ಯ. ಹೀಗಾಗಿ ವೈವಾಹಿಕ ಸಂಬಂಧ ಬೆಳೆಸಲು ನೂರಾರು ರಾಜರು, ರಾಜಕುಮಾರರು ಸ್ವಯಂವರಕ್ಕೆ ಆಗಮಿಸಿದ್ದರು. ಪಾಂಚಾಲ ದೊರೆ ದ್ರುಪದನಿಗೆ ಆರ್ಥಿಕ ಬಲ ಇರುವವನಿಗಿಂತ ವೀರ-ಶೂರ, ಪ್ರತಿಭಾನ್ವಿತ ನೊಬ್ಬನನ್ನು ಅಳಿಯನಾಗಿ ಪಡೆಯುವ ಜರೂರಿತ್ತು. ಹೀಗಾಗಿ ಅತಿಕ್ಲಿಷ್ಟವಾಗಿದ್ದ ಮತ್ಸ್ಯಯಂತ್ರದ ಸ್ಪರ್ಧೆಯನ್ನೊಡ್ಡಿದ. ಆಗಮಿಸಿದ್ದವರ ಪೈಕಿ ಶ್ರೀಕೃಷ್ಣನೂ ಒಬ್ಬನಾದರೂ ಆತ ಸ್ಪರ್ಧಾಕಾಂಕ್ಷಿಯಾಗಿರಲಿಲ್ಲ. ಸ್ಪರ್ಧೆಗೆ ಯಾರೆಲ್ಲಾ ಬಂದಿದ್ದಾರೆ ನೋಡೋಣ ಎಂಬ ಕುತೂಹಲದಿಂದ ಬಂದಿದ್ದ. ಬಾಲ್ಯದಲ್ಲಿ, ತಾನು ಮತ್ತು ತನ್ನವರು ವಿನಾಕಾರಣ ಎದುರಿಸಿದ ಅಪಾಯಗಳು, ಯೌವನದಲ್ಲಿ ಕಂಡ ರಾಜಕೀಯ ಪಲ್ಲಟಗಳಿಂದಾಗಿ ಕೃಷ್ಣನಲ್ಲಿ ವಯಸ್ಸಿಗೆ ಮೀರಿದ ಪ್ರೌಢಿಮೆ, ಮುತ್ಸದ್ದಿತನವಿತ್ತು. ತನ್ನ ಕಾಲದಲ್ಲಿ ಹಲವೆಡೆ ಇದ್ದ ಅರಾಜಕತೆ ಕೊನೆಗಾಣಿಸಲು ಆತನಿಗೆ ಸಮಾನಮನಸ್ಕರ ಅಗತ್ಯವಿತ್ತು. ಹೀಗಾಗಿ ಯಾವುದೇ ಪ್ರಮುಖ ಘಟನಾವಳಿ, ಕಾರ್ಯಕ್ರಮಗಳಲ್ಲಿ ಹಾಜರಾಗುತ್ತಿದ್ದ ಅಥವಾ ಅವುಗಳ ಮಾಹಿತಿ ಪಡೆಯುತ್ತಿದ್ದ.

ಸ್ವಯಂವರದಲ್ಲಿ ಬಹುತೇಕ ಕ್ಷತ್ರಿಯರು ಮತ್ಸ್ಯ ಯಂತ್ರ ಭೇದಿಸಲು ವಿಫಲವಾದಾಗ, ಬ್ರಾಹ್ಮಣ ವೇಷದಲ್ಲಿದ್ದ ಅರ್ಜುನ ತನಗೂ ಅವಕಾಶ ಕೊಡುವಂತೆ ಕೇಳಿದ. ದ್ರುಪದನಿಗೆ ವರ್ಣಶ್ರೇಣಿ ವ್ಯತ್ಯಾಸ ಮುಖ್ಯವಾಗಿರಲಿಲ್ಲ. ಹೀಗಾಗಿ ಅರ್ಜುನನಿಗೂ ಅವಕಾಶ ದೊರೆತು ಮತ್ಸ್ಯಯಂತ್ರ ಭೇದನವೂ ಆಯಿತು. ಇದನ್ನು ನಿರೀಕ್ಷಿಸಿರದಿದ್ದ ಉಳಿದ ಸ್ಪರ್ಧಾಳುಗಳು ಒಮ್ಮೆಗೇ ಮುಗಿಬಿದ್ದರು. ಎಲ್ಲವನ್ನೂ ಗಮನಿಸುತ್ತಿದ್ದ ಕೃಷ್ಣ, ಅರ್ಜುನನ ಬಿಲ್ವಿದ್ಯೆಗೆ ಮಾರುಹೋಗಿದ್ದ. ಮುಗಿಬಿದ್ದ ಕ್ಷತ್ರಿಯರನ್ನು ಈಡಾಡುತ್ತಿದ್ದ ಭೀಮನ ವಿರಾಟ್ ಪ್ರತಿಭೆಗೆ ಬೆರಗಾಗಿದ್ದ. ಬ್ರಾಹ್ಮಣ ರೂಪದ ಈ ಪ್ರತಿಭೆಗಳ ಅಸಾಧಾರಣ ಸಾಮರ್ಥ್ಯದ ಹಿನ್ನೆಲೆ ಏನು?
ಇವರನ್ನು ಲೋಕಕಲ್ಯಾಣಕ್ಕಾಗಿ ಹೇಗೆ ಸದ್ವಿನಿಯೋಗ ಪಡಿಸಬಹುದು ಎಂಬ ಲೆಕ್ಕಾಚಾರದಲ್ಲಿದ್ದ. ಕೃಷ್ಣನಿಗೆ ಸಮಕಾಲೀನ ಜನಹಿತ ದೃಷ್ಟಿಯಿಂದ ಕೆಲವು ಗುರಿಗಳಿದ್ದವು. ಜನರಿಗೆ ಕಂಟಕಪ್ರಾಯ ನಾಗಿದ್ದ ಮಗಧ ರಾಜ ಜರಾಸಂಧನನ್ನು ಮಟ್ಟಹಾಕುವುದು ಇಂಥದೊಂದು ಪ್ರಮುಖ ಗುರಿಯಾಗಿತ್ತು.

ಆ ಕಾಲದಲ್ಲಿ ಯಾವುದೇ ರಾಜ್ಯ ಮತ್ತೊಂದನ್ನು ವಶಪಡಿಸಿಕೊಳ್ಳುವ, ತನ್ನಲ್ಲಿ ವಿಲೀನ ಮಾಡಿಕೊಳ್ಳುವ ಹವಣಿಕೆಗಳು ಇರಲಿಲ್ಲ. ಯುದ್ಧಗಳಾಗುತ್ತಿದ್ದವು. ಗೆದ್ದ ರಾಜ್ಯ ಹೆಚ್ಚೆಂದರೆ ದನಕರು, ಕುದುರೆ, ಧನ-ಕನಕ-ವಸಾದಿ ಸಂಪತ್ತನ್ನು ಸೂರೆಗೈದು ತೆರಳುತ್ತಿತ್ತೇ ವಿನಾ, ರಾಜ್ಯಗಳನ್ನು ಕಬಳಿಸುತ್ತಿರಲಿಲ್ಲ. ಆದರೆ ಜರಾಸಂಧ ಇಂಥ ವ್ಯವಸ್ಥೆಯನ್ನು ಹಾಳುಗೆಡವಿದ್ದ. ಮತ್ತೆ ಹಲವರು ಜರಾಸಂಧನ ದಾರಿ ತುಳಿಯು ವವರಿದ್ದರು. ಇದನ್ನು ಸರಿದಾರಿಗೆ ತರಲು ಯತ್ನಿಸುತ್ತಿದ್ದ ಕೃಷ್ಣ ಈ ಕಾರ್ಯದಲ್ಲಿ ನೆರವಾಗಬಲ್ಲ ಪ್ರತಿಭೆಯ ತಲಾಶೆಯಲ್ಲಿದ್ದ. ಸ್ವಯಂವರದಲ್ಲಿ ಆತನಿಗೆ ಇಬ್ಬರು ಪ್ರತಿಭೆಗಳು ಸಿಕ್ಕ ಪರಿಣಾಮ, ಭೀಮನ ಪ್ರೊಫೈಲ್‌ನಲ್ಲಿ ಜರಾ
ಸಂಧ ವಧೆ ಪ್ರಮುಖ ಸಾಧನೆಯಾಯಿತು. ನಂತರ ರಾಜನೈತಿಕ ಸುವ್ಯವಸ್ಥೆ ಮರುಪ್ರತಿಷ್ಠಾಪನೆಯಾಯಿತು. ಭೀಮಾರ್ಜುನರು ಕ್ರಮವಾಗಿ ಮಲ್ಲಯುದ್ಧ, ಬಿಲ್ವಿದ್ಯೆಯಲ್ಲಿ ಅಪ್ರತಿಮ ಪ್ರತಿಭೆಗಳಾದರೂ ಕೃಷ್ಣನ ಮಾರ್ಗದರ್ಶನ ಇಲ್ಲದಿದ್ದಿದ್ದರೆ ಆ ಪ್ರತಿಭೆ ಸದ್ವನಿಯೋಗವಾಗುತ್ತಿರಲಿಲ್ಲ. ಪ್ರತಿಭೆಗಳನ್ನು ಗುರುತಿಸಿ ಪೋಷಿಸುವಲ್ಲಿ ಕೃಷ್ಣ ಅಪ್ರತಿಮನಾಗಿದ್ದ. ಖಾಂಡವವನ ದಹನದ ವೇಳೆ ಅರಣ್ಯದ ಜೀವಜಂತುಗಳು ಆಹುತಿಯಾಗುತ್ತಿರುವಾಗ ಅದರೊಳಗಿದ್ದ ಮಯಾಸುರನ ನಿರ್ಮಾಣ ಕೌಶಲ ಅರಿತಿದ್ದ ಕೃಷ್ಣ ಆತನನ್ನು ಸಂರಕ್ಷಿಸಿದ.

ಮಯಾಸುರನ ವಾಸ್ತುಶಿಲ್ಪ ಕೌಶಲ ಮುಂದೆ ಇಂದ್ರಪ್ರಸ್ಥ ನಗರ ನಿರ್ಮಾಣಕ್ಕೆ ಸದ್ಬಳಕೆಯಾಯಿತು. ಕೃಷ್ಣ ನೀಡಿದ ಅವಕಾಶದಿಂದಾಗಿ ಮಯಾಸುರನ ನಿರ್ಮಾಣ ಪ್ರತಿಭೆ ಲೋಕೋತ್ತರವಾಯಿತು. ಲೋಕಹಿತದ ವಿವೇಕವಿಲ್ಲದೇ ಹೋದರೆ ಅದೆಷ್ಟೇ ಪ್ರತಿಭೆಯಿದ್ದರೂ ಪ್ರಯೋಜನವಾಗದು. ಹೀಗಾಗಿಯೇ ಕೆಲ ಪ್ರತಿಭೆಗಳು ಜನಕಲ್ಯಾಣಕ್ಕೆ ಕಾರಣವಾದರೆ, ಮತ್ತೆ ಕೆಲವು ಲೋಕಕಂಟಕವಾಗಿರುವುದನ್ನು ಕಾಣಬಹುದು. ಜನಹಿತಕ್ಕೆ ಮಾರಕವಾಗುವ ಯಾವುದೇ ವಿವೇಕಹೀನ ಪ್ರತಿಭೆಯನ್ನು ನಿರ್ದಾಕ್ಷಿಣ್ಯವಾಗಿ ದಮನಿಸುವ ಬಗ್ಗೆ ಕೃಷ್ಣನಿಗೆ ಸ್ಪಷ್ಟತೆಯಿತ್ತು. ಬರ್ಭರಕ ಇಂಥ ಪ್ರತಿಭೆಯಾಗಿದ್ದ. ಮಹಾಭಾರತ ಯುದ್ಧದಲ್ಲಿ ಧರ್ಮ ಸಂಸ್ಥಾಪನೆಗಾಗಿ
ಪಾಂಡವರ ಗೆಲುವು, ಪಾಂಡವರಿಗಿಂತಲೂ ಕೃಷ್ಣನಿಗೆ ಅನಿವಾರ್ಯವಿತ್ತು. ಹೀಗಾಗಿ ಆತ ಸಾಧ್ಯವಿರುವ ಎಲ್ಲ ಪ್ರಯತ್ನವನ್ನೂ ಮಾಡಿದ. ಅದೇನೇ ಧರ್ಮಾ ಧರ್ಮ ತರ್ಕಗಳು ನಡೆದರೂ ಅದಾಗಲೇ ಅಭಿಷಕ್ತ
ರಾಜನಾಗಿದ್ದ ದುರ್ಯೋಧನನಿಗೆ ೧೧ ಅಕ್ಷೋಹಿಣಿ ಸೇನೆಗಳು ಒಟ್ಟಾದವು. ಕೃಷ್ಣನ ಯತ್ನಗಳ ನಡುವೆಯೂ ಪಾಂಡವರಿಗೆ ಒಲಿದಿದ್ದು ೭ ಅಕ್ಷೋಹಿಣಿ ಮಾತ್ರ. ಪಾಂಡವರ ಬಲ ಹೆಚ್ಚಿಸುವ ಯತ್ನದಲ್ಲಿದ್ದಾಗಲೆ ಕೃಷ್ಣನಿಗೆ ಬರ್ಭರಕನ ವಿಷಯ ತಿಳಿದು ಆತನನ್ನು ಸಂಪರ್ಕಿಸಿ ಆತನ ಸಾಮರ್ಥ್ಯ ವನ್ನು ಪರಾಮರ್ಶಿಸಿದ.

ಅಪ್ರತಿಮ ಬಲಶಾಲಿಯಾಗಿದ್ದ ಬರ್ಭರಕನಿಗೆ ಅದೆಷ್ಟೇ ಅಕ್ಷೋಹಿಣಿ ಸೇನೆಯಾದರೂ ಹೊಡೆದುರುಳಿಸುವ ಸಾಮರ್ಥ್ಯವಿತ್ತು. ಆದರೆ ಧರ್ಮ ವಿವೇಚನೆಯಿಲ್ಲದೆ, ಯಾರು ದುರ್ಬಲರೋ ಅವರ ಬೆಂಬಲವಾಗಿ ಯುದ್ಧವಾಡುವುದು ಬರ್ಭರಕನ ತರ್ಕವಾಗಿತ್ತು. ಅದರಂತೆ ಕೌರವರ ೧೧ ಅಕ್ಷೋಹಿಣಿ ಎದುರು ೭ ಅಕ್ಷೋಹಿಣಿ ಸೇನೆ ಹೊಂದಿದ್ದ ದುರ್ಬಲ ಪಾಂಡವರನ್ನು ಬರ್ಭರಕ ಬೆಂಬಲಿಸುವುದು ಸಹಜವಿತ್ತು. ಆ ವೇಳೆ
ಯಾವುದೇ ನಾಯಕನಾದರೂ ಬರ್ಭರಕನನ್ನು ಕರೆದೊಯ್ದು ಪಾಂಡವರ ಸೇನೆಯ ಮುಂಚೂಣಿ ಅಧಿಪತಿಯಾಗಿ ನೇಮಿಸುತ್ತಿದ್ದ. ಆದರೆ ದೂರ ದೃಷ್ಟಿಯ ನಾಯಕನಾಗಿದ್ದ ಕೃಷ್ಣ, ವಿವೇಕರಹಿತ ಬರ್ಭರಕನ ತರ್ಕವನ್ನು ಮತ್ತಷ್ಟು ಪರಿಶೀಲಿಸಿದ.

‘ತತ್‌ಕ್ಷಣದಲ್ಲೇನೋ ೧೧:೭ ಅನುಪಾತದಲ್ಲಿ ಪಾಂಡವರು ದುರ್ಬಲರಾಗಿದ್ದಾರೆ; ಮುಂದೆ ಯುದ್ಧ ನಡೆದಂತೆ ಒಂದು ಹಂತದಲ್ಲಿ ಪಾಂಡವರ ಕೈ ಮೇಲಾಗಿ, ಕೌರವರ ಸಂಖ್ಯೆ ಕಡಿಮೆಯಾಗುತ್ತದೆ. ಆಗ ನೀನು ಯಾರ ಪರ ಯುದ್ಧವಾಡುತ್ತೀಯೆ?’ ಕೃಷ್ಣ ಪ್ರಶ್ನಿಸಿದ. ‘ಆಗಲೂ ಅಷ್ಟೆ. ದುರ್ಬಲರಿಗೆ ನನ್ನ ಬೆಂಬಲ. ಬಣ ಬದಲಾಯಿಸುತ್ತೇನೆ. ಕೌರವರ ಪರ ಯುದ್ಧವಾಡುತ್ತೇನೆ’ ಬರ್ಭರಕ ಗುಡುಗಿದ. ‘ಮತ್ತೆ ಯುದ್ಧ ಮುಂದುವರಿದಂತೆ ಕೌರವರ ಕೈ ಮೇಲಾಗಿ, ಪಾಂಡವರ ಸೇನೆಯ ಸಂಖ್ಯೆ ಇಳಿಯಬಹುದು. ಪಾಂಡವರ ಪಡೆ ದುರ್ಬಲವಾಗಬಹುದು. ಆಗ ಏನು ಮಾಡುತ್ತಿ?’ ಕೃಷ್ಣ ಕೇಳಿದ. ‘ಮತ್ತೆ ಬಣ ಬದಲಿಸುತ್ತೇನೆ. ಪಾಂಡವರ ಪರ ಯುದ್ಧವಾಡುತ್ತೇನೆ’ ಎಂದ ಬರ್ಭರಕ. ಹೀಗೆ ಧರ್ಮ ವಿವೇಚನೆಯಿಲ್ಲದೆ ದುರ್ಬಲರಿಗೆ ಬಲ ನೀಡುವ ವಿವೇಕಶೂನ್ಯತೆಯಿಂದ ಅಂತಿಮವಾಗಿ ಎರಡೂ ಬಣ ನಿಶ್ಶೇಷವಾಗುವುದರಲ್ಲಿ ಸಂಶಯವಿಲ್ಲ ಎಂದು ಕೃಷ್ಣ ಅರಿತ. ಆತನ ನೆರವು ಪಡೆಯುವುದಿರಲಿ, ಹಾಗೆಯೇ ಬಿಟ್ಟರೆ ಜನಹಿತಕ್ಕೆ ಈತನಿಂದ ಅಪಾಯ ತಪ್ಪಿದಲ್ಲ ಎಂದರಿತ ಕೃಷ್ಣ ಆತನನ್ನು ಸಂಹಹರಿಸಿದ. ಲೋಕಹಿತಕ್ಕಾಗಿ ಸಜ್ಜನ ಪ್ರತಿಭೆಗಳನ್ನು ಪೋಷಿಸುವುದು ಎಷ್ಟು ಮುಖ್ಯವೋ, ವಿವೇಕವಿಲ್ಲದ, ಲೋಕಕಂಟಕವಾಗಬಹುದಾದ ಪ್ರತಿಭೆಗಳನ್ನು ನಿರ್ಮೂಲನೆ ಮಾಡುವುದು ಕೂಡಾ ಅಷ್ಟೇ ಮುಖ್ಯ ಎಂಬ ಕೃಷ್ಣನ ದೂರದೃಷ್ಟಿ ಸಾರ್ವಕಾಲಿಕ ಮಾದರಿ.
(ಲೇಖಕರು ಹಿರಿಯ ಪತ್ರಕರ್ತರು, ಬಹುಶಿಸ್ತೀಯ ವಿದ್ವಾಂಸರು)