ಮೂರ್ತಿಪೂಜೆ
ಆರ್.ಟಿ.ವಿಠ್ಠಲಮೂರ್ತಿ
ಹದಿನಾಲ್ಕು ವರ್ಷಗಳ ನಂತರ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳ ಮತ್ತೆ ಅಂತಹ ಆತಂಕವನ್ನು ಎದುರಿಸುತ್ತಿದೆ. ಮೊದಲ ಬಾರಿ, ಅಂದರೆ 2006ರಲ್ಲಿ ಅದು ಇಂತಹದೇ ಆತಂಕವನ್ನು ಎದುರಿಸಿತ್ತು. ಮತ್ತು ಇಂತಹ ಆತಂಕವನ್ನು ನಿವಾರಿಸಿ
ಕೊಳ್ಳುವ ಸಲುವಾಗಿ ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಯ ಜತೆ ಕೈ ಜೋಡಿಸಿದ್ದರು.
ಈಗ ಕೂಡಾ ಅಷ್ಟೇ. ಹದಿನಾಲ್ಕು ವರ್ಷಗಳ ಹಿಂದೆ ಯಾವ ಆತಂಕವನ್ನು ಪಕ್ಷ ಎದುರಿಸಿತ್ತೋ? ಅಂತಹದೇ ಆತಂಕ ಮತ್ತೆ ಎದುರಾಗಿದೆ. ಇದೇ ಕಾರಣಕ್ಕಾಗಿ ಕುಮಾರಸ್ವಾಮಿ ಪುನಃ ಬಿಜೆಪಿಯ ಜತೆ ಕೈ ಜೋಡಿಸಲು ಮುಂದಾಗಿದ್ಧಾರೆ. ಕುತೂಹಲದ ಸಂಗತಿ ಎಂದರೆ ಈ ಎರಡೂ ಸಂದರ್ಭ ಗಳಲ್ಲಿ ಜೆಡಿಎಸ್‌ಗೆ ಆತಂಕ ತಂದೊಡ್ಡಿದ್ದು ಕಾಂಗ್ರೆಸ್ ಪಕ್ಷ. ಮತ್ತು ನಿರ್ದಿಷ್ಟವಾಗಿ ಹೇಳಬೇಕೆಂದರೆ ಸಿದ್ಧರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್.
2006ರಲ್ಲಿ ಜೆಡಿಎಸ್ ವಿರುದ್ಧ ಈ ಇಬ್ಬರು ನಾಯಕರು ಮುಗಿಬಿದ್ದ ಕಾಲದಲ್ಲಿ ಅವರ ಬೆನ್ನಿಗಿದ್ದ ಮತ್ತೊಬ್ಬ ನಾಯಕರೆಂದರೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ. ಅವತ್ತು ಜೆಡಿಎಸ್ ವಿರುದ್ಧ ಮುಗಿಬೀಳಲು ಈ ಎಲ್ಲ ನಾಯಕರಿಗೆ ತಮ್ಮದೇ ಆದ ವೈಯಕ್ತಿಕ ಕಾರಣಗಳೂ ಇದ್ದವು. ಉದಾಹರಣೆಗೆ ಎಸ್.ಎಂ. ಕೃಷ್ಣ ಅವರನ್ನೇ ತೆಗೆದುಕೊಳ್ಳಿ. 2004ರ ವಿಧಾನಸಭಾ ಚುನಾವಣೆಯ ನಂತರ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿ ಮೈತ್ರಿ ಕೂಟ ಸರಕಾರದ ರಚನೆ ಅನಿವಾರ್ಯವಾಯಿತಲ್ಲ? ಆ ಸಂದರ್ಭದಲ್ಲಿ ಮೈತ್ರಿಕೂಟ ಸರಕಾರದ ಚುಕ್ಕಾಣಿ ಹಿಡಿಯಲು ತಮಗೆ ಅವಕಾಶ ನೀಡಿ ಎಂದು ಕೃಷ್ಣ ಅವರು ದೇವೇಗೌಡರನ್ನು ಕೇಳಿಕೊಂಡಿದ್ದರು.
ಆದರೆ ಈ ಪ್ರಸ್ತಾಪವನ್ನು ದೇವೇಗೌಡರು ತಿರಸ್ಕರಿಸಿದರು. ಹೀಗಾಗಿ ಕೃಷ್ಣ ಅವರಲ್ಲಿ ಅಸಮಾಧಾನ ಉಳಿದುಕೊಂಡಿತ್ತು. ಈ ಮಧ್ಯೆ ಧರ್ಮಸಿಂಗ್ ನೇತೃತ್ವದಲ್ಲಿ ಮೈತ್ರಿಕೂಟ ಸರಕಾರ ರಚನೆಯಾದಾಗ ಡಿ.ಕೆ. ಶಿವಕುಮಾರ್ ಅವರು ಮಂತ್ರಿ ಮಂಡಲಕ್ಕೆ ಸೇರದಂತೆ ದೇವೇಗೌಡರು ನೋಡಿಕೊಂಡಿದ್ದರು. ಪರಿಣಾಮ ಈ ಇಬ್ಬರು ನಾಯಕರು ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ – ಜೆಡಿಎಸ್ ಮೈತ್ರಿಕೂಟ ಸರಕಾರದ ವಿರುದ್ಧ ಕುದಿಯುತ್ತಲೇ ಇದ್ದರು. ಮುಂದೆ ಇವರಿಗೆ ದಾಳವಾಗಿ ಸಿಕ್ಕವರು ಆಗ ಉಪ ಮುಖ್ಯಮಂತ್ರಿಯಾಗಿದ್ದಸಿದ್ಧರಾಮಯ್ಯ.
ಈ ಹೊತ್ತಿಗಾಗಲೇ ಸಿದ್ಧರಾಮಯ್ಯ ಅವರಿಗೂ ದೇವೇಗೌಡರ ವಿಷಯದಲ್ಲಿ ಅಸಮಾಧಾನ ಎಂಬುದು ಜ್ವಾಲಾಮುಖಿ ಯಾಗಿತ್ತು.ಇದಕ್ಕೆ ಮುಖ್ಯ ಕಾರಣವೆಂದರೆ, ಮೈತ್ರಿಕೂಟ ಸರಕಾರದಲ್ಲಿ ಮುಖ್ಯಮಂತ್ರಿಯಾಗಲು ತಮಗಿದ್ದ ಅವಕಾಶವನ್ನು ಗೌಡರು ಕೈ ಬಿಟ್ಟರು ಎಂಬುದು. ಇದೇ ಕಾರಣಕ್ಕಾಗಿ ಮುಂದೆ ಸಿದ್ದರಾಮಯ್ಯ ಮತ್ತು ದೇವೇಗೌಡರ ನಡುವೆ ಸಂಘರ್ಷ ಶುರು ವಾಯಿತು.
ಅದು ಯಾವ ಮಟ್ಟಕ್ಕೆ ತಲುಪಿತೆಂದರೆ ಸಿದ್ದರಾಮಯ್ಯ ಜೆಡಿಎಸ್ ಕಾಂಪೌಂಡಿನಿಂದ ಹೊರಬೀಳಬೇಕಾಯಿತು. ಇದಾದ ನಂತರ ಅವರ ಹೆಜ್ಜೆಗಳಿಗೆ ಕೃಷ್ಣ ಅವರು ಬಲ ತುಂಬಿದರು. ಮುಂದೆ ಇದೇ ಸಿದ್ದರಾಮಯ್ಯ ಅವರು ತಮ್ಮ ಶಕ್ತಿ ಬಳಸಿ ಹಿರಿಯ ನಾಯಕ ಎಂ.ಪಿ. ಪ್ರಕಾಶ್ ಅವರ ನೇತೃತ್ವದಲ್ಲಿ ಜೆಡಿಎಸ್ ಶಾಸಕರ ಒಂದು ಗುಂಪನ್ನು ಹೊರಗೆಳೆಯಲು ಯತ್ನಿಸಿದರು ಎಂಬ ಮಾಹಿತಿ ಅವತ್ತು ದೇವೇಗೌಡರ ನಿದ್ದೆಗೆಡಿಸಿದ್ದು ರಹಸ್ಯವೇನಲ್ಲ.
ಇಂತಹ ಕಾಲದಲ್ಲಿ ರಾಜ್ಯ ರಾಜಕಾರಣದ ಮುಖ್ಯ ಭೂಮಿಕೆಗೆ ಪ್ರವೇಶ ಪಡೆದ ದೇವೇಗೌಡರ ಪುತ್ರ ಎಚ್.ಡಿ.ಕುಮಾರಸ್ವಾಮಿ ಒಳಗಿಂದೊಳಗೇ ಕೆಲಸ ಮಾಡಿದರು. ಎಲ್ಲರೂ ದಿಗ್ಭ್ರಮೆಗೊಳ್ಳುವಷ್ಟು ವೇಗದಲ್ಲಿ ಯಡಿಯೂರಪ್ಪ ಅವರ ಜತೆ ಕೈ ಜೋಡಿಸಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟ ಸರಕಾರ ಉರುಳಿಸಿ ಜೆಡಿಎಸ್ – ಬಿಜೆಪಿ ಮೈತ್ರಿಕೂಟ ಸರಕಾರ ಮೇಲೆದ್ದು ನಿಲ್ಲುವಂತೆ ಮಾಡಿದರು. ಮುಂದಿನದು ಇತಿಹಾಸ.
ಈಗ ಮತ್ತೆ ಇತಿಹಾಸ ಮರುಕಳಿಸಿದೆ. ಯಥಾ ಪ್ರಕಾರ ಜೆಡಿಎಸ್ ಶಾಸಕರ ಒಂದು ಗುಂಪು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಂಪರ್ಕದಲ್ಲಿದೆ. ಹೀಗೆ ಹಲವು ಶಾಸಕರು ಸಿದ್ದರಾಮಯ್ಯ ಹಾಗೂ ಡಿಕೆಶಿ
ಜತೆ ಸಂಪರ್ಕದಲ್ಲಿರುವುದನ್ನು ಬಲ್ಲ ಜೆಡಿಎಸ್‌ನ ಇನ್ನಷ್ಟು ಶಾಸಕರು ಬಿಜೆಪಿಯ ಸಂಪರ್ಕದಲ್ಲಿದ್ದಾರೆ. ಮುಂದಿನ ಚುನಾವಣೆ ಯ ವೇಳೆಗೆ ಪಕ್ಷ ಒಡೆದರೆ ಜೆಡಿಎಸ್‌ನಲ್ಲಿದ್ದು ಪ್ರಯೋಜನವೇನು? ಇದರ ಬದಲು ಬಿಜೆಪಿಗೆ ಹೋದರೆ ಗೆಲುವಿನ ಅವಕಾಶ ಹೆಚ್ಚುತ್ತದೆ ಎಂಬುದು ಹಲವು ಶಾಸಕರ ಲೆಕ್ಕಾಚಾರ.
ಯಾವಾಗ ಇದು ಗೊತ್ತಾಯಿತೋ? ಆಗ ಕುಮಾರಸ್ವಾಮಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯಲು ಮುಂದಾಗಿದ್ಧಾರೆ. ಬಿಜೆಪಿಯ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಅವರು ಬಯಸಿದ್ದು ಇದೇ ಕಾರಣಕ್ಕಾಗಿ. ಮೊದಲನೆಯದಾಗಿ ಬಿಜೆಪಿ ವಿರುದ್ಧದ ಮತಗಳನ್ನು ಒಂದುಗೂಡಿಸಲು ಕಾಂಗ್ರೆಸ್‌ಗೆ ಅವಕಾಶ ಸಿಗದಂತೆ ಮಾಡುವುದು, ಎರಡನೆಯದಾಗಿ, ತಮ್ಮ ಪಕ್ಷದ ಶಾಸಕರು
ಬಿಜೆಪಿ ಕಡೆ ಹೋಗುವ ಮುನ್ನ ತಾವೇ ಆ ಪಕ್ಷದ ಜತೆ ಕೈ ಜೋಡಿಸಿ ಮುಂದಾಗಲಿರುವ ಅಪಾಯವನ್ನು ತಪ್ಪಿಸುವುದು ಅವರ ಗುರಿ.
ಈ ಎರಡು ಗುರಿಗಳು ಈಡೇರಿದರೆ ತಮ್ಮ ಕಡು ರಾಜಕೀಯ ವಿರೋಧಿಗಳಾದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಬಲ ಕುಸಿದು ಹೋಗುತ್ತದೆ. ಕಾಂಗ್ರೆಸ್ ನೆಲ ಕಚ್ಚುತ್ತದೆ ಎಂಬುದು ಕುಮಾರಸ್ವಾಮಿ ಅವರ ಲೆಕ್ಕಾಚಾರ. ಇದೇ ರೀತಿ ಬಿಜೆಪಿಯ ಜತೆ ಕೈ ಜೋಡಿಸಿದರೆ ಭವಿಷ್ಯದಲ್ಲಿ ಜೆಡಿಎಸ್‌ಗೆ ಕೆಲವು ಲಾಭಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಮುಂದಿನ ದಿನಗಳಲ್ಲಿ ಸಂಭವಿಸಬಹು ದಾದ ಕೆಲ ಬೆಳವಣಿಗೆಗಳು ಬಿಜೆಪಿ ಸರಕಾರದಲ್ಲಿ ಜೆಡಿಎಸ್ ಪಕ್ಷಕ್ಕೂ ಅನುಕೂಲ ತಂದುಕೊಡಬಹುದು.
ಅನುಕೂಲ ಎಂದರೆ ಬೇರೇನೂ ಅಲ್ಲ. ಅಧಿಕಾರದಲ್ಲಿ ಒಂದು ಪಾಲು ಸಿಗಬಹುದು. ಮತ್ತು ಜೆಡಿಎಸ್‌ನ ಕೆಲವರು ಬಿಜೆಪಿ ಸರಕಾರದಲ್ಲಿ ಮಂತ್ರಿಗಳಾಗುವ ಅವಕಾಶವನ್ನೂ ಪಡೆಯಬಹುದು. ಹಾಗೇನಾದರೂ ಆದರೆ ಜೆಡಿಎಸ್ ಬಲ ಮತ್ತೆ ವೃದ್ಧಿಯಾಗು ತ್ತದೆ ಮತ್ತು ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ಕಾಂಗ್ರೆಸ್ ವಿರೋಧಿ ಮತಗಳು ದೊಡ್ಡ ಮಟ್ಟದಲ್ಲಿ ಒಂದು ಗೂಡಲು ವೇದಿಕೆ ಸೃಷ್ಟಿಯಾಗುತ್ತದೆ.
ಗಮನಿಸಬೇಕಾದ ಸಂಗತಿ ಎಂದರೆ ಜೆಡಿಎಸ್ ಮತಗಳನ್ನು ದೊಡ್ಡ ಮಟ್ಟದಲ್ಲಿ ಸೆಳೆಯದೇ ಹೋದರೆ ಕರ್ನಾಟಕದ ನೆಲೆಯಲ್ಲಿ ಕಾಂಗ್ರೆಸ್ ಮೇಲೇಳುವುದು ಕಷ್ಟ. 1999ರವರೆಗೂ ಕಾಂಗ್ರೆಸ್ ಪಕ್ಷಕ್ಕೆ ಈ ಸಮಸ್ಯೆ ಇರಲಿಲ್ಲ. ಯಾಕೆಂದರೆ 1983ರ ನಂತರ ಒಕ್ಕಲಿಗ, ಲಿಂಗಾಯತ ಮತ ಬ್ಯಾಂಕ್‌ಗಳ ಹೆಚ್ಚಿನ ಷೇರುಗಳು ಕಾಲಕಾಲಕ್ಕೆ ಕಾಂಗ್ರೆಸ್‌ನಿಂದ ದೂರ ಹೋದರೂ ಅನಿವಾರ್ಯ ಸಂದರ್ಭಗಳಲ್ಲಿ ಮತ್ತೆ ಮರಳುತ್ತಿದ್ದವು. ಆದರೆ 1999ರಲ್ಲಿ ಜನತಾದಳ ಇಬ್ಬಾಗವಾದ ಮೇಲೆ, ಜೆಡಿಎಸ್ ಹಾಗೂ ಸಂಯುಕ್ತ ಜನತಾದಳದ ಹೆಸರಿನಲ್ಲಿ ಎರಡು ಶಕ್ತಿಗಳು ಮೇಲೆದ್ದ ಮೇಲೆ ಕರ್ನಾಟಕದ ರಾಜಕೀಯ ಚಿತ್ರವೇ ಬದಲಾಗಿ ಹೋಯಿತು.
ಯಾಕೆಂದರೆ ಜನತಾದಳದ ಮಡಿಲಿನಿಂದಲೇ ಮೇಲೆದ್ದು ನಿಂತ ಸಂಯಕ್ತ ಜನತಾದಳ ಬಿಜೆಪಿಯ ಜತೆ ಕೈ ಜೋಡಿಸಿತು.
ಮತ್ತು ಆ ಪಕ್ಷದ ಬಹುತೇಕರು ಬಿಜೆಪಿಯ ಕರಗಿ ಹೋದರು. ಇದರ ಪರಿಣಾಮವಾಗಿಯೇ 2004ರ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿ ಅತ್ಯಂತ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದ್ದು.
ಯಾವಾಗ ಈ ಬೆಳವಣಿಗೆ ನಡೆಯಿತೋ? ಇದಾದ ನಂತರ ಲಿಂಗಾಯತ ಮತಬ್ಯಾಂಕ್ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಕಡೆ
ಬರಲಿಲ್ಲ. ಒಕ್ಕಲಿಗ ಮತ ಬ್ಯಾಂಕ್ ಕೂಡಾ ಕಾಂಗ್ರೆಸ್ ಕಡೆ ವಿಶೇಷ ಒಲವು ತೋರಲಿಲ್ಲ. 2013ರಲ್ಲಿ ಯಡಿಯೂರಪ್ಪ
ಅವರೇನಾದರೂ ಬಿಜೆಪಿಯಿಂದ ಹೊರಹೋಗಿ ಕೆಜೆಪಿಗೆ ಸುಣ್ಣ – ಬಣ್ಣ ಹೊಡೆಯಲು ನಿಲ್ಲದೇ ಇದ್ದಿದ್ದರೆ ಕಾಂಗ್ರೆಸ್ ಪಕ್ಷ ಸ್ವಯಂ ಬಲದ ಮೇಲೆ ಅಽಕಾರಕ್ಕೆ ಬರಲು ಸಾಧ್ಯವೇ ಇರಲಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೀಗ ಒಕ್ಕಲಿಗ ಮತಬ್ಯಾಂಕಿನಲ್ಲಿ ದೊಡ್ಡ ಷೇರು ಬೇಕೇ ಬೇಕು. ಇದೇ ಕಾರಣಕ್ಕಾಗಿ ಅದು ಜಾತ್ಯಾತೀತ ಜನತಾದಳದ ಶಕ್ತಿ ಹೀರಲು 2004ರ ನಂತರ ಸತತ ಪ್ರಯತ್ನ ನಡೆಸುತ್ತಲೇ ಇದೆ.
ಈಗಲೂ ಅದು ಜೆಡಿಎಸ್ ಬಲವನ್ನು ಕುಗ್ಗಿಸಿ, ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇದೆ. ಅದರ ಈ ಪ್ರಯತ್ನಕ್ಕೆ ತಿರುಗೇಟು ನೀಡುವ ಸಲುವಾಗಿಯೇ ಕುಮಾರಸ್ವಾಮಿ ಅವರು ಬಿಜೆಪಿಯ ಜತೆ ಕೈ ಜೋಡಿಸಲು ಮುಂದಾಗಿರುವುದು. ಪರಿಣಾಮ? ಇದುವರೆಗೂ ತ್ರಿಕೋನ ಸ್ಪರ್ಧೆಯ ವೇದಿಕೆಯಾಗಿದ್ದ ಕರ್ನಾಟಕದ ವಿಧಾನಸಭಾ ಚುನಾವಣೆಗಳು ಮುಂದಿನ ದಿನಗಳಲ್ಲಿ ಎರಡೇ ಶಕ್ತಿಗಳ ಮುಖಾಮುಖಿಗೆ ಸಾಕ್ಷಿಯಾಗುವ ಲಕ್ಷಣಗಳು ಕಂಡು ಬಂದಿವೆ. ಮುಂದೇನೋ? ಕಾದು ನೋಡಬೇಕು.