Saturday, 14th December 2024

ಹೃದಯವಂತಿಕೆಯ ಬರ

ಅಭಿಮತ

ಪ್ರೊ.ಬಿ.ಕೆ.ಚಂದ್ರಶೇಖರ್‌

ರಾಜ್ಯದ ರೈತರು ಮಳೆಯಿಲ್ಲದೆ ತೀವ್ರ ಸಂಕಷ್ಟದಲ್ಲಿರುವ ಸಂದರ್ಭವಿದು. ಆದರೆ, ಕರ್ನಾಟಕದಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿಸಿ ಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಶೂನ್ಯ ಮಾಹಿತಿಯಿಂದ ಜನರ ದಿಕ್ಕು ತಪ್ಪಿಸಲೆಂದು, ‘ಕಾಂಗ್ರೆಸ್‌ನಿಂದ ಮಹಿಳೆಯರ ಮಾಂಗಲ್ಯಕ್ಕೆ ಕುತ್ತು ಬರಲಿದೆ; ಮುಸ್ಲಿಂ ಜನಾಂಗದ ಜನಸಂಖ್ಯೆ ಹೆಚ್ಚುತ್ತಿದೆ (ಜನಸಂಖ್ಯೆಯ ಜಿಹಾದ್!)’ ಎಂದೆಲ್ಲಾ ಭಾಷಣ ಮಾಡುವ ಮೂಲಕ, ಚುನಾವಣೆ ಗೆದ್ದು ಅಧಿಕಾರ ಹಿಡಿಯುವ ಪ್ರಯತ್ನ ಮಾಡಿದ್ದಾರೆ.

ಇದು ಮಾತುಗಳ ಮಾಲಿನ್ಯವಲ್ಲವೇ? ಬರದ ಏಟು ತಪ್ಪಿಸಿಕೊಳ್ಳಲಾಗದೆ ಬಿಸಿಲಿನಲ್ಲಿ ಕುದಿಯುತ್ತಿದ್ದ ರೈತರಿಗೆ, ನಿರುದ್ಯೋಗದಿಂದ ಪರಿತಪಿಸುತ್ತಿರುವ ಯುವ ಜನಾಂಗಕ್ಕೆ ಮೋದಿಯವರು ಕೊಟ್ಟ ಸಂದೇಶವಾದರೂ ಏನು? ಸಂಪೂರ್ಣ ಮೌನ!

ರಾಷ್ಟ್ರಕವಿ ಕುವೆಂಪು ಅವರು, ‘ಒಮ್ಮೆ ಗೆದ್ದು ಅಧಿಕಾರ ಸೂತ್ರವನ್ನು ಹಿಡಿದರಾಯ್ತು; ನಾಡಿನ ಸರ್ವ ಪ್ರಚಾರ ಮಾರ್ಗಗಳನ್ನೂ ಅಧಿಕಾರ ಭಯ ದಿಂದಲೂ, ದುಡ್ಡಿನ ಬಲದಿಂದಲೂ ವಶಪಡಿಸಿಕೊಂಡು ತಮ್ಮ ಸರ್ವಾಧಿಕಾರಕ್ಕೆ ವ್ಯಾಘಾತ ಒದಗದಂತೆ ನೋಡಿಕೊಳ್ಳಬಹುದು’ ಎಂದು ೧೯೭೪ರಲ್ಲೇ ಎಚ್ಚರಿಸಿದ್ದರು. ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಅಧಿಕೃತವಾಗಿ ಸಿದ್ಧಪಡಿಸಿದ ದಾಖಲೆಯಲ್ಲಿ ಉಲ್ಲೇಖಿಸಿರುವಂತೆ, ರಾಜ್ಯದ ಮುಖ್ಯಮಂತ್ರಿ ಮತ್ತಿತರ ಸಚಿವರುಗಳು ಹಲವಾರು ನಿವೇದನೆಗಳೊಂದಿಗೆ ಪ್ರಧಾನಿಯನ್ನೂ ಒಳಗೊಂಡಂತೆ ಕೇಂದ್ರದ ಅನೇಕ ಸಚಿವರನ್ನು ಭೇಟಿ ಮಾಡಿ ರಾಜ್ಯದ ಬರ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ಕೇಂದ್ರದ ತುರ್ತು ಅನುದಾನಕ್ಕಾಗಿ ಮನವಿ ಮಾಡಿದ್ದರು. ಆದರೆ ಕೇಂದ್ರದಿಂದ ಯಾರೊಬ್ಬರೂ ಸ್ಪಂದಿಸ ಲಿಲ್ಲ, ಅವರ ಮೌನವೇ ಇದಕ್ಕೆ ಉತ್ತರವಾಗಿತ್ತು.

ಕಟ್ಟಕಡೆಗೆ ರಾಜ್ಯ ಸರಕಾರವು ಅನಿವಾರ್ಯವಾಗಿ ಸುಪ್ರೀಂ ಕೋರ್ಟಿನ ಬಾಗಿಲು ತಟ್ಟಬೇಕಾಯಿತು. ನ್ಯಾಯಾಲಯದ ಆದೇಶದಿಂದ ಎಚ್ಚೆತ್ತುಕೊಂಡ ಕೇಂದ್ರ ಸರಕಾರ, ರಾಜ್ಯ ಕೇಳಿದ್ದ ೧೮,೧೭೦ ಕೋಟಿಗೆ ಬದಲಾಗಿ ೩,೪೫೪ ಕೋಟಿ ರುಪಾಯಿ ಅನುದಾನವನ್ನು ದಯಪಾಲಿಸಿತು. ಇದಕ್ಕೆ ತಿಂಗಳುಗಳ ಮುಂಚೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ೨೦೨೪-೨೫ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರಕಾರದ ಹಣದಿಂದಲೇ ಬರ ಪರಿಹಾರಕ್ಕೆ ಒದಗಿಸಿದ ಹಣವನ್ನು ಅಂಕಿ-ಅಂಶಗಳ ಸಮೇತ ವಿವರಿಸಿದ್ದಾರೆ.

ಕೇಂದ್ರದ ಇಂದಿನ ನಡವಳಿಕೆಯನ್ನು, ೨೦೦೯ರಲ್ಲಿ ಅಂದಿನ ಕಾಂಗ್ರೆಸ್ ಪಕ್ಷದ ಪ್ರಧಾನಿ ಮನಮೋಹನ್ ಸಿಂಗ್ ಅವರು ಸ್ಪಂದಿಸಿದ ರೀತಿಗೆ ಹೋಲಿಸಿ ನೋಡಿ. ರಾಯಚೂರು ಜಿಲ್ಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಾದ ನೆರೆ ಹಾವಳಿಯಿಂದ ಉಂಟಾದ ಅಪಾರ ನಷ್ಟವನ್ನು ಸ್ವತಃ ಪ್ರಧಾನಿಯವರೇ ವೀಕ್ಷಿಸಬೇಕು ಎಂಬ ಅಂದಿನ ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮನವಿಯನ್ನು ಪ್ರಧಾನಿ ಸಿಂಗ್ ಪುರಸ್ಕರಿಸಿ, ಭೇಟಿ ಕೊಟ್ಟು, ಸಂವಾದದ ನಂತರ ತಕ್ಷಣವೇ ೧,೦೦೦ ಕೋಟಿ ರುಪಾಯಿ ಮಂಜೂರು ಮಾಡಿದ್ದರು!

(ಲೇಖಕರು ಮಾಜಿ ಸಚಿವರು)