Saturday, 14th December 2024

ತಾಷ್ಕೆಂಟಿನಲ್ಲಿ ಶಾಸ್ತ್ರಿ ಪ್ರತಿಮೆ ಮುಂದೆ ಅವರ ಮಗನಿಗೆ ನೀಡಿದ ವಚನ !

ಇದೇ ಅಂತರಂಗ ಸುದ್ದಿ

vbhat@me.com

ಉಜ್ಬೇಕಿಸ್ತಾನದ ರಾಜಧಾನಿ ತಾಷ್ಕೆಂಟಿಗೆ ಮೊನ್ನೆ ಎರಡನೇ ಬಾರಿಗೆ ಹೋಗಿದ್ದೆ. ಮೊದಲ ಬಾರಿಗೆ ಹೋಗಿದ್ದು ಏಳು ವರ್ಷಗಳ ಹಿಂದೆ. ಭಾರತದ ಹೆಮ್ಮೆಯ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಕೊನೆಯುಸಿರೆಳೆದಿದ್ದು ಅ. ಹೀಗಾಗಿ ತಾಷ್ಕೆಂಟ್ ಅಂದ ಕೂಡಲೇ ತಕ್ಷಣ ನೆನಪಾಗುವವರು ಶಾಸ್ತ್ರಿ. ಮೊದಲ ಬಾರಿಗೆ ಅಲ್ಲಿಗೆ ಹೋದಾಗ, ಶಾಸ್ತ್ರಿಯವರ ಸ್ಮಾರಕಕ್ಕೆ ಭೇಟಿ ಕೊಟ್ಟು, ಅಲ್ಲಿ ಎರಡು ಗಂಟೆ ಕಳೆದು ಬಂದಿದ್ದೆ. ಅಲ್ಲಿನ ಒಂದು ಪ್ರಮುಖ ರಸ್ತೆಗೆ ಶಾಸ್ತ್ರಿಯವರ ಹೆಸರನ್ನು ಇಟ್ಟುದ್ದು ನೋಡಿ ಪುಳಕಿತನಾಗಿದ್ದೆ.

‘ಶಾಸ್ತ್ರಿ ಸ್ಟ್ರೀಟ್’ ಫಲಕದ ಕೆಳಗೆ ನಿಂತು ಫೋಟೋ ತೆಗೆಸಿಕೊಂಡಿದ್ದೆ. ಮೊನ್ನೆ ನನಗೆ ಅಲ್ಲಿಗೆ ಹೋಗುವ ಕೆಲಸವಿರಲಿಲ್ಲ. ಆದರೆ ಸ್ನೇಹಿತರಾದ ಕಿರಣ್ ಉಪಾ ಧ್ಯಾಯ ಅವರು, ಉಜ್ಬೇಕಿಸ್ತಾನಕ್ಕೂ ಹೋಗಿ ಬರೋಣ ಎಂದು ವರಾತ ಮಾಡಿದಾಗ, ಇಲ್ಲವೆನ್ನಲು ಮನಸ್ಸು ಬರಲಿಲ್ಲ. ಕನಿಷ್ಠ ಶಾಸ್ತ್ರಿಯವರ ಸ್ಮಾರಕಕ್ಕಾದರೂ ಹೋಗಿ ಬರಬಹುದಲ್ಲ ಎಂದು ಅನಿಸಿ ಆಯಿತು ಎಂದೆ. ಮೊನ್ನೆ ಹೋದಾಗಲೂ ಶಾಸ್ತ್ರಿಯವರ ಸ್ಮಾರಕಕ್ಕೆ ಭೇಟಿ ನೀಡಿ, ಅಲ್ಲಿ ಸುಮಾರು ಎರಡು ಗಂಟೆ ಕಾಲ ಕಳೆದು ಬಂದೆವು. ಭಾರತದ ಪ್ರಧಾನಿ ಹೋಗಿ ಹೋಗಿ ಅಂದಿನ ಅವಿಭಜಿತ ರಷ್ಯಾದ ಭಾಗವಾಗಿದ್ದ ತಾಷ್ಕೆಂಟಿನಲ್ಲಿ ಪ್ರಾಣ ಬಿಡಬೇಕಾಗಿ ಬಂದಿದ್ದು ವಿಧಿಯಾಟ.

ಒಂದು ದೇಶದ ಪ್ರಧಾನಿ ಅಥವಾ ಅಧ್ಯಕ್ಷರು ಬೇರೆ ದೇಶಕ್ಕೆ ಹೋದಾಗ ಅಲ್ಲಿ ವಿಧಿವಶರಾದ ಘಟನೆ ಇಲ್ಲವೇ ಇಲ್ಲ ಎಂದು ಹೇಳಬೇಕು. ಶಾಸ್ತ್ರಿಯವರು ನಿಧನ ರಾದ ಮರುದಿನ, ಅವರ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ತರಲಾಯಿತು. ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಮತ್ತು ರಷ್ಯಾದ ಅಧ್ಯಕ್ಷ ಅಲೆಕ್ಸಿ ಕೊಸಿಗಿನ್ ಶಾಸ್ತ್ರಿಯವರ ಕಳೇಬರಕ್ಕೆ ಹೆಗಲುಕೊಟ್ಟಿದ್ದು ವಿಶೇಷವಾಗಿತ್ತು. ಒಂದು ದೇಶದ ಪ್ರಧಾನಿಯ ಪಾರ್ಥಿವ ಶರೀರವನ್ನು ಮತ್ತೆರಡು ದೇಶಗಳ ಮುಖ್ಯಸ್ಥರು ವಿಮಾನದ ತನಕ ಹೊತ್ತೊಯ್ದಿದ್ದು ಅದೇ ಮೊದಲು ಮತ್ತು ಕೊನೆಯದ್ದಿರಬಹುದು.

ಶಾಸ್ತ್ರಿಯವರು ನಿಧನರಾಗಿಯೇ ಐವತ್ತೇಳು (೧೯೬೬) ವರ್ಷಗಳಾದವು. ಇಂದಿಗೂ ಅವರ ನಿಧನ ನಿಗೂಢವಾಗಿಯೇ ಉಳಿದಿದೆ. ಈ ಕುರಿತು ಹಲವು ಪುಸ್ತಕಗಳು ಬಂದಿವೆ. ನಾಲ್ಕು ವರ್ಷಗಳ ಹಿಂದೆ, ವಿವೇಕ ಅಗ್ನಿಹೋತ್ರಿ ನಿರ್ದೇಶನದ ’ ‘The Tashkent Files- Who Killed Shastri?’ ’ ಎಂಬ ಸಿನಿಮಾ ಕೂಡ ಬಂತು. ಶಾಸಿಯವರು ಪ್ರಧಾನಿಯಾಗಿದ್ದಾಗ ಅವರಿಗೆ ಪ್ರಿನ್ಸಿಪಾಲ್ ಸೆಕ್ರೆಟರಿ, ನಿಕಟವರ್ತಿ, ಸ್ನೇಹಿತರಾಗಿದ್ದ ಸಿ.ಪಿ.ಶ್ರೀವಾಸ್ತವ ಬರೆದ ’A life of Truth in Politics Shri Lal Bahadur Shastri’ ’ ಪುಸ್ತಕದಲ್ಲೂ ಅನೇಕ ಘಟನಾವಳಿಗಳನ್ನು ವಿವರಿಸಿದ್ದಾರೆ. ಈ ಪುಸ್ತಕಗಳನ್ನು ಓದಿದರೆ ಮತ್ತು ಸಿನಿಮಾ ನೋಡಿದರೆ, ಶಾಸ್ತ್ರಿಯವರ ನಿಧನ ಮತ್ತಷ್ಟು ನಿಗೂಢವಾಗಿ ಕಾಣುತ್ತದೆಯೇ ಹೊರತು, ಬಹಳ ಗುರುತರವಾದ – Who Killed Shastri? -ಪ್ರಶ್ನೆಗೆ ಉತ್ತರ ಸಿಗುವುದಿಲ್ಲ.

ಶಾಸ್ತ್ರಿ ತಾಷ್ಕೆಂಟಿಗೆ ಹೋಗಿದ್ದೇಕೆ, ಅಂಥ ಪರಿಸ್ಥಿತಿ ಒದಗಿ ಬಂದಿದ್ದೇಕೆ, ಭಾರತದಿಂದ ಹೊರಡು ವಾಗ ಅವರು ಯಾವ ಮನಸ್ಥಿತಿಯಲ್ಲಿದ್ದರು, ತಾಷ್ಕೆಂಟಿನಲ್ಲಿ ಏನಾಯಿತು, ಹಿಂದಿನ ದಿನದ ಘಟನಾವಳಿಗಳೇನು, ಅವರು ನಿಧನರಾಗುವುದಕ್ಕೆ ಮುನ್ನ ಏನೇನಾದವು, ನಂತರ ಏನೆಲ್ಲ ನಡೆದವು ಎಂಬುದನ್ನೆಲ್ಲ ಶ್ರೀವಾಸ್ತವ ಸವಿಸ್ತಾರವಾಗಿ ಬರೆದಿದ್ದಾರೆ. ಇನ್ನಿಬ್ಬರು ಬ್ಯುರೋಕ್ರೆಟ್‌ ಗಳಾದ ರಾಜೇಶ್ವರ ಪ್ರಸಾದ ಮತ್ತು ಎಲ್.ಪಿ.ಸಿಂಗ್ ಕೂಡ ಶಾಸ್ತ್ರಿಯವರ ಬಗ್ಗೆ ಬರೆದಿದ್ದಾರೆ. ಪತ್ರಕರ್ತ ದಿವಂಗತ ಕುಲದೀಪ್ ನಯ್ಯರ್, ಜನಾರ್ದನ ಠಾಕೂರ್ ಸಹ ಬರೆದಿದ್ದಾರೆ.

ಇವರೆಲ್ಲರ ಕೃತಿಗಳನ್ನು ಓದಿದರೆ ಶಾಸ್ತ್ರಿಯವರ ಮರಣ ಮತ್ತಷ್ಟು ಗೋಜಲಾಗುತ್ತದೆ. ಶಾಸ್ತ್ರಿಯವರ ನಿಧನದ ನಂತರ, ಅವರ ಪತ್ನಿ ಲಲಿತಾ ಶಾಸ್ತ್ರಿ ಅವರ ಒಂದು ಹೇಳಿಕೆ ಇಡೀ ಪ್ರಕರಣವನ್ನು ಮತ್ತಷ್ಟು ರಹಸ್ಯಮಯವಾಗಿಸಿತು. ‘ಶಾಸ್ತ್ರಿಯವರು ಹೃದಯಾಘಾತದಿಂದ ನಿಧನರಾಗಿಲ್ಲ, ಅವರಿಗೆ ವಿಷವನ್ನು ಉಣಿಸ ಲಾಯಿತು’ ಎಂಬ ಅವರ ಹೇಳಿಕೆ ದೇಶಾದ್ಯಂತ ಭಾರಿ ಕೋಲಾಹಲವನ್ನೇ ಉಂಟು ಮಾಡಿತ್ತು. ಇದು ಶಾಸ್ತ್ರಿಯವರ ನಿಧನವನ್ನು ಮತ್ತಷ್ಟು ನಿಗೂಢವಾಗಿಸಿತು. ಅನಂತರ, ಅಂದರೆ ಶಾಸ್ತ್ರಿಯವರು ನಿಧನರಾದ ಹನ್ನೆರಡು ವರ್ಷಗಳ ನಂತರ (೧೯೭೮ ರಲ್ಲಿ), ಕೆ.ಎಂ.ಎಲ್.ವರ್ಮ ಅವರು ಹಿಂದಿಯಲ್ಲಿ ‘ಲಲಿತಾ ಕೆ ಆನ್ಸೂ’ (ಲಲಿತಾ ಅವರ ಕಣ್ಣೀರು) ಎಂಬ ಪುಸ್ತಕ ಬರೆದರು. ಈ ಪುಸ್ತಕಕ್ಕಾಗಿ ಅವರು ಲಲಿತಾ ಶಾಸ್ತ್ರಿಯವರನ್ನು ಸಂದರ್ಶಿಸಿದರು.

ಆ ಸಂದರ್ಭದಲ್ಲೂ ಲಲಿತಾ, ‘ಶಾಸ್ತ್ರಿಯವರಿಗೆ ವಿಷಪ್ರಾಶನ ಮಾಡಿಸಲಾಯಿತು’ ಎಂಬುದನ್ನು ಸಾದ್ಯಂತವಾಗಿ ವಿವರಿಸಿದ್ದರು. ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ, ೧೯೭೭ ರಲ್ಲಿ ರಾಜ್ ನಾರಾಯಣ ನೇತೃತ್ವದಲ್ಲಿ ಶಾಸ್ತ್ರಿ ನಿಧನದ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ಸಮಿತಿಯೊಂದನ್ನು ರಚಿಸಲಾಯಿತು. ಆ
ಪ್ರಯುಕ್ತ ರಾಜ್ ನಾರಾಯಣ ಅವರು ತಾಷ್ಕೆಂಟಿಗೆ ಹೋಗಿ ಅಲ್ಲಿನ ದಾಖಲೆಗಳನ್ನು ಪರಿಶೀಲಿಸಿ ಬಂದರು. ಶಾಸ್ತ್ರಿಯವರು ನಿಧನರಾದ ದಿನ ತಂಗಿದ್ದ ಜಾಗಕ್ಕೆ ಭೇಟಿ ನೀಡಿ, ರಷ್ಯಾದ ಅಧಿಕಾರಿಗಳ ಜತೆ ಮಾತುಕತೆ ಮಾಡಿ, ನಂತರ ವರದಿಯನ್ನು ಸಲ್ಲಿಸಿದರು. ಅಷ್ಟರೊಳಗೆ ಜನತಾ ಸರಕಾರ ಪತನವಾಯಿತು.

ನಂತರ ಬಂದ ಯಾವ ಸರಕಾರವೂ ಆ ವರದಿಯನ್ನು ತೆರೆದು ನೋಡಲೇ ಇಲ್ಲ. ಇಂದಿನ ತನಕ ಆ ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಅನಂತರ ಅಧಿಕಾರಕ್ಕೆ ಬಂದವರು, ಶಾಸ್ತ್ರಿಯವರ ನಿಧನದ ಅಸಲಿ ಕಾರಣವನ್ನು ತಿಳಿಯುವ ಮನಸ್ಸನ್ನೇ ಮಾಡದೇ ಹೋದುದು ದುರ್ದೈವ. ಈ ನಿಟ್ಟಿನಲ್ಲಿ ವಿವೇಕ್ ರಂಜನ್ ಅಗ್ನಿಹೋತ್ರಿ ಅವರ ಪ್ರಯತ್ನವನ್ನು ಮೆಚ್ಚಬೇಕು. ಶಾಸ್ತ್ರಿಯವರ ನಿಧನ ಮತ್ತು ಅದಕ್ಕೆ ಹೊಂದಿಕೊಂಡ ಅನೇಕ ಘಟನಾವಳಿಗಳ ಬಗ್ಗೆ ಸಾಕಷ್ಟು
ಅಧ್ಯಯನ, ಸಂಶೋಧನೆ ಮಾಡಿ ಅವರು ಬೆಳಕು ಚೆಲ್ಲಿದ್ದಾರೆ. ’ತಾಷ್ಕೆಂಟ್ ಫೈಲ್ಸ್’ ಸಿನಿಮಾಕ್ಕೆ ಮಾಡಿದ ಅಧ್ಯಯನವನ್ನೇ ಆಧಾರವಾಗಿಟ್ಟುಕೊಂಡು ’Who Killed Shastri?’ ಎಂಬ ಕೃತಿಯನ್ನು ಬರೆದಿದ್ದಾರೆ.

ಹದಿನೆಂಟು ತಿಂಗಳುಗಳ ಕಾಲ ಭಾರತದ ಪ್ರಧಾನಿಯಾಗಿದ್ದ ಶಾಸ್ತ್ರಿಯವರು ನಿಧನರಾದಾಗ ಅವರzನ್ನುವ ಬ್ಯಾಂಕ್ ಖಾತೆಯಲ್ಲಿ ಹಣವಿರಲಿಲ್ಲ. ಅವರದ್ದೆನ್ನುವ ಮನೆಯಿರಲಿಲ್ಲ, ನಿವೇಶನವೂ ಇರಲಿಲ್ಲ. ಅವರ ಬಳಿಯಿದ್ದ ಪ್ರೀಮಿಯರ್ ಪದ್ಮಿನಿ ಕಾರು ಸಾಲ ಮಾಡಿ ಖರೀದಿಸಿದ್ದು ಎಂಬ ಸಂಗತಿ ಶಾಸ್ತ್ರಿಯವರ ನಿಧನದ ಬಳಿಕ ಗೊತ್ತಾದಾಗ, ದೇಶವಾಸಿಗಳು ಸ್ವಯಂಪ್ರೇರಣೆ ಯಿಂದ ಮನಿಯಾರ್ಡರ್ ಮಾಡಿ ಹಣ ಕಳಿಸಿದ್ದರು. ಆದರೆ ಲಲಿತಾ ಶಾಸ್ತ್ರಿ ಆ ಹಣವನ್ನು ಸ್ವೀಕರಿಸಲಿಲ್ಲ, ಅದು ಬೇರೆ ಮಾತು.

ದಿಲ್ಲಿಯಲ್ಲಿರುವ ಶಾಸ್ತ್ರಿಯವರ ಸಮಾಧಿಯ ಮೇಲೆ ನೆಟ್ಟ ಫಲಕದಲ್ಲಿ (Epitaph) ಒಂದು ಸಾಲಿನ ವಾಕ್ಯವಿದೆ -Lal Bahadur Shastri, 2 October 1904 to 11 January 1966. In deep respect for ‘A life of Truth in Politics’.. ಮೊನ್ನೆ ತಾಷ್ಕೆಂಟಿನಲ್ಲಿರುವ ಶಾಸ್ತ್ರಿಯವರ ಪ್ರತಿಮೆ ಮುಂದೆ ನಿಂತಾಗ ನೆನಪಾದವರು ಅವರ ಮಗ ಸುನಿಲ್ ಶಾಸ್ತ್ರಿ. ತಕ್ಷಣ ಅವರಿಗೆ ಫೋನ್ ಮಾಡಿದೆ. ಅವರು ನನ್ನ ಕರೆಯನ್ನು ಸ್ವೀಕರಿಸಲಿಲ್ಲ. ಅವರು ಮಾತಿಗೆ ಸಿಕ್ಕಿದ್ದರೆ ಚೆನ್ನಾಗಿತ್ತು ಅಂದುಕೊಂಡೆ.

ಅದಾಗಿ ಐದು ನಿಮಿಷಗಳ ನಂತರ ನನ್ನ ಮೊಬೈಲ್ ರಿಂಗಣಿಸಿತು. ಆ ಕಡೆಯಿಂದ ಸುನಿಲ್ ಶಾಸ್ತ್ರಿ! ಉಭಯಕುಶಲೋಪರಿ ಬಳಿಕ, ‘ಶಾಸ್ತ್ರೀಜಿ, ನಾನು ಎಲ್ಲಿದ್ದೇನೆ, ಊಹಿಸಬಹುದಾ?’ ಎಂದು ಕೇಳಿದೆ. ‘ದಿಲ್ಲಿಗೆ ಬಂದಿದ್ದೀರಾ? ಬಂದಿದ್ದರೆ ಮನೆಗೆ ಬನ್ನಿ’ ಅಂದರು. ಆಗ ನಾನು, ‘ಇಲ್ಲ, ನಾನು ಈಗ ಉಜ್ಬೇಕಿಸ್ತಾನದ ರಾಜಧಾನಿ ತಾಷ್ಕೆಂಟಿನಲ್ಲಿ ನಿಮ್ಮ ತಂದೆಯವರ ಪ್ರತಿಮೆಯ ಮುಂದೆ ನಿಂತು ಮಾತಾಡುತ್ತಿದ್ದೇನೆ. ಮೊಬೈಲಿನ ಸ್ಪೀಕರ್ ಆನ್ ಮಾಡಿದ್ದೇನೆ. ನಿಮ್ಮ ಮಾತು ಗಳನ್ನು ಶಾಸ್ತ್ರಿಯವರೂ ಕೇಳಿಸಿಕೊಳ್ಳುತ್ತಿದ್ದಾರೆ’ ಎಂದು ಹೇಳಿದೆ.

ಆ ಕಡೆಯಿಂದ ಮೌನ. ನಾನು ‘ಹಲೋ… ಹಲೋ.. ಎಂದೆ. ಮಾತೇ ಇಲ್ಲ. ’ ‘ಸಾರ್, ನಾನು ಮಾತಾಡುತ್ತಿರುವುದು ಕೇಳಿಸುತ್ತಿದೆಯಾ?’ ಎಂದು ಕೇಳಿದೆ. ಮಾತಿಲ್ಲ, ಕತೆಯಿಲ್ಲ. ೭೩ ವರ್ಷದ ಸುನಿಲ್ ಶಾಸ್ತ್ರಿಯವರು ನೆನಪಿಗೆ ಜಾರಿದ್ದರು. ‘ಈ ಹೊತ್ತಿನಲ್ಲಿ ನೀವು ತಾಷ್ಕೆಂಟಿನಲ್ಲಿರುವ ಬಾಬೂಜಿ (ಅವರು ತಮ್ಮ ತಂದೆ ಶಾಸ್ತ್ರಿಯವರನ್ನು ಕರೆಯುತ್ತಿದ್ದುದು ಹಾಗೆ) ಪ್ರತಿಮೆ ನಿಂತು ಮಾತಾಡುತ್ತಿದ್ದೀರಿ ಮತ್ತು ನನ್ನ ಮಾತುಗಳನ್ನು ಅವರಿಗೆ ಕೇಳಿಸುತ್ತಿದ್ದೀರಿ ಎಂಬುದನ್ನು ನಾನು ಕನಸು ಮನಸಿ ನಲ್ಲಿಯೂ ಎಣಿಸಿರಲಿಲ್ಲ. ನಾನು ಊಹಿಸಿರದ ಸಿಹಿ ಅಚ್ಚರಿ ಯನ್ನು ನೀಡಿದಿರಿ. ಅಲ್ಲಿಗೆ ಭೇಟಿ ನೀಡಿ ಬಂದ ಬಳಿಕ ಅನೇಕರು ತಾವು ಅಲ್ಲಿಗೆ ಹೋಗಿದ್ದನ್ನು ನನ್ನ ಮುಂದೆ ಹೇಳಿಕೊಳ್ಳುತ್ತಾರೆ.

ಆದರೆ ನೀವು ಅವರ ಪ್ರತಿಮೆ ಮುಂದೆಯೇ ನಿಂತು ಮಾತಾಡಿದ್ದು ಮತ್ತು ನನ್ನ ಮಾತನ್ನು ಸ್ಪೀಕರ್ ಫೋನ್ ಮೂಲಕ ಅವರಿಗೆ ಕೇಳಿಸಿದ್ದು ವಿಶೇಷವೆನಿಸಿತು’ ಎಂದರು ಸುನಿಲ್ ಶಾಸ್ತ್ರಿ. ಆಗ ಮೌನಕ್ಕೆ ಸರಿಯುವ ಸರದಿ ನನ್ನದು. ನಂತರ ಕೆಲ ಹೊತ್ತು ಉಭಯ ಕುಶಲೋಪರಿ. ತಾಷ್ಕೆಂಟಿಗೆ ಭೇಟಿ ನೀಡಿದ ಕಾರಣಗಳ ನ್ನೆಲ್ಲ ಕೇಳಿದರು. ನಾನು ಸವಿಸ್ತಾರವಾಗಿ ಹೇಳಿದೆ. ಅವರಿಗೆ ಬಹಳ ಖುಷಿ ಆಯಿತೆಂಬುದು ಅವರ ಮಾತಿನಲ್ಲಿ ವ್ಯಕ್ತವಾಗುತ್ತಿತ್ತು. ‘ನಾನು ತಾಷ್ಕೆಂಟಿಗೆ ಹೋಗದೇ ಅವೆಷ್ಟೋ ವರ್ಷಗಳಾದವು, ನನಗೆ ನೆನಪಿಲ್ಲ. ಅಲ್ಲಿಗೆ ಹೋದರೆ, ಆ ಕೆಟ್ಟ ಘಟನೆಯ ನೆನಪು ಕಾಡುತ್ತದೆ. ಕರುಳು ಕಿತ್ತು ಬಂದಂತಾಗುತ್ತದೆ. ಹೀಗಾಗಿ ಅಲ್ಲಿಗೆ ಹೋಗಲು ಮನಸ್ಸೇ ಆಗುವುದಿಲ್ಲ. ಒಮ್ಮೆ ಅಲ್ಲಿಗೆ ಹೋಗಿಬರಬೇಕು ಅಂತ ಅನಿಸುತ್ತದೆ. ಯಾವಾಗಲೋ, ಗೊತ್ತಿಲ್ಲ’ ಎಂದರು.

ಈ ಮಧ್ಯೆ, ನಾನಾಗಿಯೇ ಮತ್ತೊಂದು ವಿಷಯ ಪ್ರಸ್ತಾಪಿಸಿದೆ. (ಅದರ ಹಿನ್ನೆಲೆ ಹೇಳಬೇಕು.) ಸುನಿಲ್ ಶಾಸ್ತ್ರಿಯವರು ತಮ್ಮ ತಂದೆಯವರ ಕುರಿತು ಹಿಂದಿಯಲ್ಲಿ ಒಂದು ಪುಸ್ತಕ ಬರೆದಿದ್ದಾರೆ. ಅದರ ಶೀರ್ಷಿಕೆ – ‘ಮೇರಾ ಬಾಬೂಜಿ’. ಶಾಸ್ತ್ರಿಯವರ ವ್ಯಕ್ತಿತ್ವವನ್ನು ಅವರ ಮಗ ಬರೆದರೆ ಹೇಗಿರಬಹುದು, ಹಾಗಿದೆ ಅದು. ಸುಮಾರು ಹದಿನೈದು ವರ್ಷಗಳ ಹಿಂದೆ, ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದಾಗ, ಆ ಪುಸ್ತಕಕ್ಕೆ ಹಸ್ತಾಕ್ಷರ ಹಾಕಿ ನನಗೆ ನೀಡಿದ್ದರು. ‘ಈ ಕೃತಿಯನ್ನು ನಾನು ಕನ್ನಡಕ್ಕೆ ಅನುವಾದಿಸಲೇ ?’ ಎಂದು ಕೇಳಿದಾಗ, ಅಲ್ಲಿಯೇ ಅನುಮತಿ ನೀಡಿದ್ದರು.

ಅದಾಗಿ ಆರು ತಿಂಗಳಿಗೆ ನಾನು ಆ ಕೃತಿಯನ್ನು ಅನುವಾದ ಮಾಡಿದೆ. ಅಂಕಿತ ಪ್ರಕಾಶನದ ಸ್ನೇಹಿತರಾದ ಪ್ರಕಾಶ ಕಂಬತ್ತಳ್ಳಿ ಆ ಪುಸ್ತಕವನ್ನು ಡಿಟಿಪಿ ಮಾಡಿಸಿ, ಪ್ರೂಫ್ ರೀಡ್ ಮಾಡಲು ನನಗೆ ಕೊಟ್ಟರು. ಈ ಮಧ್ಯೆ ಸುನಿಲ್ ಶಾಸ್ತ್ರಿಯವರು ಇಂಗ್ಲಿಷಿನಲ್ಲಿ ತಮ್ಮ ತಂದೆಯವರ ಬಗ್ಗೆ ’Lal Bahadur Shastri : Past
Forward’ ಎಂಬ ಪುಸ್ತಕ ಬರೆದರು. ಅದನ್ನೂ ನನಗೆ ಕಳಿಸಿ ಕೊಟ್ಟು, ‘ಈ ಪುಸ್ತಕದಲ್ಲಿ ಮತ್ತಷ್ಟು ವಿವರಗಳಿವೆ. ಅವನ್ನೂ ನೀವು ಅನುವಾದಿಸಿದ ಪುಸ್ತಕಕ್ಕೆ ಸೇರಿಸಿ’ ಎಂದು ಹೇಳಿದರು. ನಾನು ಅವರ ಇಂಗ್ಲಿಷ್ ಪುಸ್ತಕದಲ್ಲಿರುವ ಅನೇಕ ಹೊಸ ವಿಷಯಗಳನ್ನು ಅನುವಾದಿಸಿ ಸೇರಿಸಿದೆ. ಅದಕ್ಕೆ ಕಂಬತ್ತಳ್ಳಿಯವರೂ ಒಪ್ಪಿದರು. ಪುಸ್ತಕದ ಗಾತ್ರ ದೊಡ್ಡದಾಯಿತು. ಹೊಸತಾಗಿ ಸೇರಿಸಿದ್ದನ್ನೂ ಡಿಟಿಪಿ ಮಾಡಿಸಿ, ಪ್ರೂಫ್ ರೀಡ್ ಮಾಡಲು ಮತ್ತೊಮ್ಮೆ ನನಗೆ ಕೊಟ್ಟರು.

ಅದೇನಾಯಿತೋ, ನಾನು ಬಾಡಿಗೆ ಮನೆ ಬಿಟ್ಟು ಸ್ವಂತ ಮನೆಗೆ ಬರುವಾಗ, ಡಿಟಿಪಿ ಮಾಡಿದ ಪ್ರತಿ ಕಳೆದು ಹೋಯಿತು. ಕಂಬತ್ತಳ್ಳಿಯವರು ಇನ್ನೊಮ್ಮೆ ಪ್ರಿಂಟ್ ಔಟ್ ತೆಗೆಸಿ ಕಳುಹಿಸಿಕೊಟ್ಟರು. ಅಷ್ಟೊತ್ತಿಗೆ ಒಂದು ವರ್ಷ ದಾಟಿತ್ತು. ರಾಜ್ ನಾರಾಯಣ ವರದಿಯಂತೆ, ನಾನು ಮಾಡಿದ ಅನುವಾದ ಪುಸ್ತಕವಾಗಿ ಹೊರಬರಲೇ ಇಲ್ಲ. ಈಗಲೂ ಅದು ನನ್ನನ್ನು ಅಣಕಿಸುತ್ತದೆ.

ಈ ವಿಷಯವನ್ನು ನಾನಾಗಿಯೇ ಶಾಸ್ತ್ರಿಯವರ ಪ್ರತಿಮೆ ಮುಂದೆ ನಿಂತು, ಸುನಿಲ್ ಶಾಸ್ತ್ರಿಯವರ ಹತ್ತಿರ ಪ್ರಸ್ತಾಪಿಸಿದೆ. ‘ಹೌದು, ನನಗೆ ನೆನಪಿದೆ. ನೀವು ಅನುವಾದ ಮಾಡಿ ಮುಗಿಸಿದ್ದೀರಿ ಎಂದೂ ಹೇಳಿದ್ದಿರಿ. ಅದೇಕೋ ಪುಸ್ತಕವಾಗಿ ಪ್ರಕಟವಾಗಲೇ ಇಲ್ಲವಲ್ಲ ಅಂತ ನಾನು ಹಲವು ಬಾರಿ ಅಂದುಕೊಂಡಿದ್ದಿದೆ.
ಈಗ ನೀವೇ ಪ್ರಸ್ತಾಪಿಸಿದಿರಿ, ಒಳ್ಳೆಯದೇ ಆಯಿತು’ ಎಂದರು. ‘ಶಾಸ್ತ್ರಿಯವರೇ, ನಿಮ್ಮ ತಂದೆಯವರ ಪ್ರತಿಮೆ ಮುಂದೆ ನಿಂತು ನಿಮಗೆ ವಚನ ನೀಡುತ್ತಿದ್ದೇನೆ. ಆದಷ್ಟು ಬೇಗ ಆ ಪುಸ್ತಕವನ್ನು ಪ್ರಕಟಿಸಿ ನಿಮ್ಮ ಕೈಗಿಡುತ್ತೇನೆ, ಪ್ರಾಮಿಸ್’ ಎಂದೆ. ‘ಹಾಗಾದರೆ ಅದರ ಬಿಡುಗಡೆಗೆ ನಾನೇ ಬೆಂಗಳೂರಿಗೆ ಬರುತ್ತೇನೆ, ಪ್ರಾಮಿಸ್’ ಎಂದರು.

ಶಾಸ್ತ್ರಿಯವರ ಪ್ರತಿಮೆ ನೋಡಿದೆ. ನಗುಮೊಗದ ಆ ಕಲ್ಲಿನ ಮೂರ್ತಿ ನಿಜಕ್ಕೂ ನಗೆ ಬೀರಿದಂತೆನಿಸಿತು.

ಊರನ್ನೇ ಅವರ ಹೆಸರಿಗೆ ಬರೆದರು ನಮ್ಮಲ್ಲಿ ಒಬ್ಬ ವ್ಯಕ್ತಿಯ ಹೆಸರನ್ನು ಒಂದು ನಗರಕ್ಕಿಡುವ ಸಂಪ್ರದಾಯ ವಿರಳ. ಒಂದು ನಗರದಲ್ಲಿರುವ ಪ್ರದೇಶಕ್ಕೆ,
ಬೀದಿಗೆ, ರಸ್ತೆಗೆ ಇಡುತ್ತೇವೆ. ಆದರೆ ಇಡೀ ನಗರಕ್ಕೆ ಇಡುವುದು ಕಡಿಮೆಯೇ. ಇದಕ್ಕೆ ತಮಿಳುನಾಡು ಮತ್ತು ಆಂಧ್ರ ಪ್ರದೇಶಗಳಲ್ಲಿ ಅಪವಾದಗಳಿವೆ. ಅದರಲ್ಲೂ ಒಬ್ಬ ವ್ಯಕ್ತಿಯ ಹೆಸರನ್ನು ಒಂದಕ್ಕಿಂತ ಹೆಚ್ಚು ನಗರಗಳಿಗೂ ಇಡುವುದಿಲ್ಲ. ನಮ್ಮಲ್ಲಿ ನೆಹರು, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹೆಸರುಗಳಲ್ಲಿ ನೂರಾರು ಸಂಸ್ಥೆ, ವಿಮಾನ ನಿಲ್ದಾಣ, ರಸ್ತೆಗಳಿವೆ. ಅವರೆಲ್ಲ ಈ ದೇಶದ ಪ್ರಧಾನ ಮಂತ್ರಿಗಳಾಗಿದ್ದವರು.

ಆದರೆ ನಮ್ಮ ದೇಶದಲ್ಲಿ ಒಬ್ಬ ಕವಿ, ಸಾಹಿತಿ, ಕಾದಂಬರಿಕಾರರ ಹೆಸರುಗಳನ್ನೆಲ್ಲ ನಗರಕ್ಕೊ, ಊರಿಗೋ ಇತ್ತ ನಿದರ್ಶನಗಳು ಕಡಿಮೆ. ವರಕವಿದ.ರಾ.ಬೇಂದ್ರೆ ಅವರ ಹೆಸರನ್ನು ಬಸ್ಸಿನ ಬೋರ್ಡಿನಲ್ಲಿ ಮಾತ್ರ ಬೇಂದ್ರೆನಗರ (ಧಾರವಾಡ) ಎಂದು ನಾಮಕರಣ ಮಾಡಿದ್ದೇವೆ. ಮೈಸೂರಿನಲ್ಲಿ ಕುವೆಂಪುನಗರ ಎಂಬ
ಬಡಾವಣೆ ಇದೆ. ಆದರೆ ಇಡೀ ನಗರವನ್ನು ನಾವು ಯಾವ ಕವಿ ಅಥವಾ ಸಾಹಿತಿ ಹೆಸಾರಿಗೆ ಮುಡಿಪಾಗಿಟ್ಟಿಲ್ಲ.

ಕೆಲವು ವರ್ಷಗಳ ಹಿಂದೆ ನಾನು ರಷ್ಯಾಕ್ಕೆ ಹೋದಾಗ ಸ್ನೇಹಿತರೊಬ್ಬರು ನನ್ನನ್ನು ಪುಷ್ಕಿನ್ ಸ್ಮಾರಕಕ್ಕೆ ಕರೆದುಕೊಂಡು ಹೋಗಿದ್ದರು. ರಷ್ಯಾದ ಪ್ರಮುಖ ಪ್ರದೇಶದಲ್ಲಿ ನಿಲ್ಲಿಸಿರುವ ವಿಗ್ರಹವನ್ನು ನೋಡಲು ಪ್ರತಿದಿನ ಸಾವಿರಾರು ಜನ ಬರುತ್ತಾರೆ. ಆ ಭವ್ಯ ವಿಗ್ರಹ ಮತ್ತು ಸುತ್ತಲಿನ ಪ್ರದೇಶ ಗಮನಿಸಿದರೆ, ಅವರು
ಮಹಾನ್ ವ್ಯಕ್ತಿಯಾಗಿರಬಹುದು ಎಂದು ತಟ್ಟನೆ ತೀರ್ಮಾನಿಸಬಹುದು. ರಷ್ಯನ್‌ರ ಪಾಲಿಗೆ ಅವರು ಮಹಾನ್ ವ್ಯಕ್ತಿಯೇ.

ಅಂಥ ವ್ಯಕ್ತಿ ನಮ್ಮಲ್ಲಿ ಇದ್ದಿದ್ದರೆ ನಾವು ಅವರಿಗೆ ಅದೇ ರೀತಿಯ ಮರ್ಯಾದೆ, ಮಹತ್ವ ಕೊಡುತ್ತಿದ್ದಾವಾ ಎಂಬುದು ಪ್ರಶ್ನೆ. ಅನಂತರ ನಾನು ರಷ್ಯಾದ ಅನೇಕ ಊರುಗಳಿಗೆ ಹೋದಾಗ, ಸಾಮಾನ್ಯವಾಗಿ ಎಡೆ ಅಲ್ಲಿನ ಕವಿಗಳ ಮತ್ತು ಸಾಹಿತಿಗಳ ಹೆಸರಿನಲ್ಲಿರುವ ಊರುಗಳನ್ನು ನೋಡಿ ಅಲ್ಲಿನ ಜನರಿಗೆ ಸಾರಸ್ವತ ಲೋಕದ ಅಕ್ಷರ ಜೀವಿಗಳ ಬಗೆಗಿರುವ ಗೌರವ ಮತ್ತು ಪ್ರೀತಿ ಕಂಡು ಅಭಿಮಾನವೆನಿಸಿತು. ಪುಷ್ಕಿನ್, ದಾಸ್ತೋವಸ್ಕಿ, ಚೆಕೋವ್, ಮಾರ್ಕ್ಸಿಮ್ ಗಾರ್ಕಿ, ತೋಲ್ ಸ್ತಾಯ್ ಮುಂತಾದವರ ಹೆಸರಿನಲ್ಲಿ ಹತ್ತಾರು ಊರುಗಳಿರುವುದನ್ನು ನೋಡಿ ಅಚ್ಚರಿಯೆನಿಸಿತು. ರಷ್ಯನ್‌ರಿಗೆ ತಮ್ಮ ಸಾಹಿತಿ, ಕವಿ, ಲೇಖಕರನ್ನು ಕಂಡರೆ ಅಂಥ ಅಭಿಮಾನ!

ರಷ್ಯಾದಲ್ಲಿ ಅಲೆಕ್ಸಾಂಡರ್ ಸೆರ್ಗೆಯೆವಿಚ್ ಪುಷ್ಕಿನ್ ಬಗ್ಗೆ ವಿಶೇಷ ಮಮತೆ, ಪ್ರೀತಿ, ಮರ್ಯಾದೆ. ಕೇವಲ ಮೂವತ್ತೆಂಟು ವರ್ಷಗಳ ಕಾಲಬದುಕಿದ್ದ (೧೭೯೯ – ೧೮೩೭ ) ಪುಷ್ಕಿನ್ ರಷ್ಯಾ ಜನಮಾನಸವನ್ನು ಆವರಿಸಿದ ಪರಿ ಮಾತ್ರ ಇಂದಿಗೂ ವಿಸ್ಮಯ ಹುಟ್ಟಿಸುವಂಥದ್ದು. ಕವಿ, ಕಾದಂಬರಿಕಾರ, ನಾಟಕಕಾರನಾಗಿದ್ದ
ಪುಷ್ಕಿನ್, ಹೊಸ ಅಲೆಯ ಸಾಹಿತ್ಯವನ್ನೇ ಸೃಷ್ಟಿಸಿದ ಸೃಜನಶೀಲ ಸಾಹಿತಿ. ಆತ ಸತ್ತು ೧೮೧ ವರ್ಷಗಳಾದರೂ, ಇಂದಿಗೂ ಪುಷ್ಕಿನ್ ನ ಬರಹ ಶೈಲಿಯನ್ನು ಅನುಸರಿಸುವವರಿದ್ದಾರೆ.

ರಷ್ಯಾದಲ್ಲಿ ರೊಮ್ಯಾಂಟಿಸಿಸಂ ಮತ್ತು ರಿಯಲಿಸಂ ಸಾಹಿತ್ಯ ಚಳವಳಿಯನ್ನೇ ಹುಟ್ಟು ಹಾಕಿದ ಅಪ್ರತಿಮ ಬರಹಗಾರನಾದ ಪುಷ್ಕಿನ್, ಇಂದಿಗೂ ಅಲ್ಲಿನ ಸಾಂಸ್ಕೃತಿಕ ಲೋಕದ ಮಹಾ ಚೇತನ. ತನ್ನ ಹದಿನೈದನೇ ವಯಸ್ಸಿನಲ್ಲಿ ಕವಿ ಎಂದು ಕರೆಯಿಸಿಕೊಂಡ ಪುಷ್ಕಿನ್, ,Eugene Onegin, The Captain Daughter ,Boris Godunov ಮುಂತಾದ ಕೃತಿಗಳಿಂದ ರಷ್ಯನ್ ಸಾಹಿತ್ಯದಲ್ಲಿ ಚಿರಸ್ಥಾಯಿಯಾಗಿದ್ದಾನೆ.