Wednesday, 11th December 2024

ಯುದ್ದದ ಹಿಂದಿದೆ ಭೂರಾಜಕೀಯ

ವಿಶ್ಲೇಷಣೆ

ಡಾ.ಜಗದೀಶ ಮಾನೆ

ಜರ್ಮನಿಯಲ್ಲಿ ನೆಮ್ಮದಿಯಿಂದಿದ್ದ ಯೆಹೂದಿಗಳಿಗೆ ಕಂಟಕ ಶುರುವಾಗಿದ್ದು ಮೊದಲ ಮಹಾಯುದ್ಧದ ವೇಳೆ. ಈ ಯುದ್ಧದಲ್ಲಿ ಜರ್ಮನಿ ಯು ಹೀನಾಯವಾಗಿ ಸೋತ ಬಳಿಕ, ಈ ಸೋಲಿಗೆ ಯೆಹೂದಿಗಳೇ ಕಾರಣ ಎಂದು ಭಾವಿಸಿದ ಹಿಟ್ಲರ್ ಅವರನ್ನು ಅಲ್ಲಿಂದ ಹೊರದಬ್ಬಲು ನಿರ್ಧರಿಸಿದ, ಅವರ ಮೇಲೆ ನಿರ್ಬಂಧ ವಿಧಿಸಿದ.

ಇಸ್ರೇಲ್-ಹಮಾಸ್ ಸಂಘರ್ಷ ಶುರುವಾಗಿ ೨೦ ದಿನಗಳು ಕಳೆದಿವೆ. ಇಸ್ರೇಲ್ ಗಡಿಭಾಗದಲ್ಲಿ ಹಮಾಸ್ ಉಗ್ರರು ನಡೆಸಿರುವ ನರಮೇಧವನ್ನು ನೆನೆಸಿ ಕೊಂಡರೆ ಕರುಳು ಕಿತ್ತುಬರುತ್ತದೆ. ಜತೆಗೆ ಆಕ್ರೋಶದ ಕಟ್ಟೆಯೂ ಒಡೆಯುತ್ತದೆ. ಗಡಿಭಾಗದ ಮನೆಗಳಿಗೆ ನುಗ್ಗಿದ ಹಮಾಸ್ ಉಗ್ರರು ಕಂಡಕಂಡವರನ್ನು ಹತ್ಯೆಗೈದಿದ್ದಾರೆ, ಚಿಕ್ಕ ಮಕ್ಕಳೆಂದು ಕರುಣೆ ತೋರದೆ ತಲೆ ತರಿದಿದ್ದಾರೆ, ಕೆಲವರನ್ನು ಜೀವಂತ ದಹಿಸಿದ್ದಾರೆ. ಈ ನರಮೇಧದಿಂದಾಗಿ ದಕ್ಷಿಣ ಇಸ್ರೇಲ್ ಭಾಗದ ಅನೇಕ ಗ್ರಾಮಗಳು ಸ್ಮಶಾನವಾಗಿ ಮಾರ್ಪಟ್ಟವು ಎನ್ನಬೇಕು.

ಹಮಾಸ್ ಉಗ್ರರಿಗೆ ಅಷ್ಟೊಂದು ದರ್ದು ಇದ್ದಿದ್ದರೆ ಇಸ್ರೇಲ್ ಸೇನೆಯೊಂದಿಗೆ ನೇರವಾಗಿ ಯುದ್ಧ ಮಾಡಬೇಕಿತ್ತು. ಅದನ್ನು ಬಿಟ್ಟು ಸಾಮಾನ್ಯ ನಾಗರಿಕರ ಮೇಲೆ, ಜಗತ್ತನ್ನೇ ನೋಡದ ಮಕ್ಕಳ ಮೇಲೆ ಅವರು ಪೌರುಷ ತೋರಿಸಿದ್ದು ತರವಲ್ಲ. ಹಮಾಸ್ ಉಗ್ರರ ಈ ಆಟಾಟೋಪವು ಮನುಷ್ಯತ್ವದ ಮೇಲಾ ದಂಥ ದಾಳಿಯೇ ಸರಿ. ಇದಕ್ಕೆ ಪ್ರತ್ಯುತ್ತರವಾಗಿ ಹಮಾಸ್‌ಗಳ ಹುಟ್ಟಡಗಿಸಲು ಇಸ್ರೇಲ್ ಸಜ್ಜಾಗಿದೆ. ಇದಕ್ಕೆ ಬೇಕಾದ ರಾಜತಾಂತ್ರಿಕ ಬೆಂಬಲದೊಂದಿಗೆ ಯುದ್ಧಸಾಮಗ್ರಿಗಳನ್ನೂ ಅಮೆರಿಕ ಒದಗಿಸುತ್ತಿದೆ. ಆದರೆ ಈ ಯುದ್ಧದಿಂದಾಗಿ ಇಸ್ರೇಲ್‌ನಲ್ಲಿನ ಬಹುರಾಷ್ಟ್ರೀಯ ಕಂಪನಿಗಳು ಆತಂಕಕ್ಕೊಳಗಾಗಿವೆ.

ಭಾರತದ ಟಿಸಿಎಸ್, ವಿಪ್ರೋ, ಇನೋಸಿಸ್ ಸೇರಿದಂತೆ ವಿವಿಧ ದೇಶಗಳ ಐನೂರಕ್ಕೂ ಹೆಚ್ಚು ಸಾಫ್ಟ್ ವೇರ್ ಕಂಪನಿಗಳು, ಸೈಬರ್ ಭದ್ರತೆಯ ಕಂಪನಿಗಳು ಇವುಗಳಲ್ಲಿ ಸೇರಿದ್ದು, ಆ ಪೈಕಿ ಕೆಲವು ಭಾರತ ಮತ್ತು ಬೇರೆ ಬೇರೆ ದೇಶಗಳಿಗೆ ತಾತ್ಕಾಲಿಕವಾಗಿ ವರ್ಗಾವಣೆಗೊಳ್ಳುತ್ತಿವೆ. ಇಸ್ರೇಲ್ ಮೇಲಿನ ಉಗ್ರದಾಳಿ ಯನ್ನು ಭಾರತ ತೀವ್ರವಾಗಿ ಖಂಡಿಸಿ ಸಹಾನುಭೂತಿ ವ್ಯಕ್ತಪಡಿಸಿದೆ. ಭಾರತ ಮತ್ತು ಇಸ್ರೇಲ್ ಸಂಬಂಧಗಳು ಅದೆಷ್ಟೇ ಗಾಢವಾಗಿದ್ದರೂ, ಪ್ಯಾಲೆ
ಸ್ತೀನನ್ನು ಭಾರತ ಬಿಟ್ಟುಕೊಟ್ಟಿಲ್ಲ ಮತ್ತು ಪ್ಯಾಲೆಸ್ತೀನ್ ಒಂದು ಪ್ರತ್ಯೇಕ ರಾಷ್ಟ್ರ ಆಗಲೇಬಾರದೆಂದು ಭಾರತ ಎಲ್ಲೂ ಹೇಳಿಕೆ ಕೊಟ್ಟಿಲ್ಲ.

ಬದಲಿಗೆ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಎರಡೂ ತನ್ನೊಟ್ಟಿಗೇ ಇರಲಿ ಎಂಬುದೇ ಭಾರತದ ಅಭಿಪ್ರಾಯ. ಏಕೆಂದರೆ, ಯಾವುದೇ ವಿದೇಶಿ ಸಂಬಂಧ ಗಳಾಗಲಿ, ರಾಜ ತಾಂತ್ರಿಕ ಮೈತ್ರಿಗಳಾಗಲಿ ಅವು ಲಾಭ-ನಷ್ಟಗಳ ಲೆಕ್ಕಾಚಾರದ ಮೇಲೆಯೇ ನಡೆಯುವಂಥವು. ಇಸ್ರೇಲ್-ಹಮಾಸ್ ಸಂಘರ್ಷದ ಹಿಂದೆ ದೊಡ್ಡ ಷಡ್ಯಂತ್ರ ಇರುವಂತಿದೆ. ವರ್ಷ ಉರುಳಿದರೂ ನಿಂತಿಲ್ಲದ ರಷ್ಯಾ- ಉಕ್ರೇನ್ ಯುದ್ಧದಂತೆ, ಇಸ್ರೇಲ್-ಹಮಾಸ್ ನಡುವಿನ ತಿಕ್ಕಾಟವನ್ನು ಮತ್ತಷ್ಟು ಎಳೆಸಿ ಅರಬ್ ಸಂಘರ್ಷವಾಗಿ ರೂಪಾಂತರಿಸಿ ಅಮೆರಿಕವನ್ನು ಕಣಕ್ಕಿಳಿಯುವಂತೆ ಮಾಡುವ, ತನ್ಮೂಲಕ ದೊಡ್ಡಣ್ಣನ್ನು ಸಂಪೂರ್ಣ ಕಟ್ಟಿಹಾಕುವ ತಂತ್ರವನ್ನು ಅರಬ್ ದೇಶಗಳ ಒಕ್ಕೂಟ ರೂಪಿಸಿದಂತೆ ತೋರುತ್ತಿದೆ.

ಹಮಾಸ್ ಉಗ್ರರು ಗಾಜಾದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಸುರಂಗಗಳನ್ನು ನಿರ್ಮಿಸಿಕೊಂಡು ಅದರಲ್ಲಿ ಶಸಾಸಗಳು, ಉಡಾವಣಾ ವ್ಯವಸ್ಥೆಗಳನ್ನು ಸಜ್ಜುಗೊಳಿಸಿಕೊಂಡಿದ್ದಾರೆ. ಇವುಗಳ ನಾಶಕ್ಕೆ ‘ಬಂಕರ್ ಡೆಸ್ಟ್ರಾಯರ್’ಗಳನ್ನೇ ಬಳಸಲು ಇಸ್ರೇಲ್ ಸಜ್ಜಾಗಿದೆ. ಆದರೆ ಮತ್ತೊಂದೆಡೆ, ಇಸ್ರೇಲ್ ದಾಳಿ
ಯನ್ನು ವೈಭವೀಕರಿಸುವ ಪೋಸ್ಟರ್‌ಗಳು, ಸುಳ್ಳು ಸುದ್ದಿಗಳು ಅಂತರ್ಜಾಲದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಇಸ್ರೇಲನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಯತ್ನಗಳಾಗುತ್ತಿವೆ. ಇಂಥ ಸಾಮಾಜಿಕ ಮಾಧ್ಯಮಗಳ ಹಿಂದೆ ಒಂದು ದೊಡ್ಡ ಕಾರ್ಯಜಾಲವು
ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ. ಶತ್ರುರಾಷ್ಟ್ರಗಳಿಂದ ಸುತ್ತುವರಿಯಲ್ಪಟ್ಟ ನೆಲೆ ಇಸ್ರೇಲ್. ಪ್ಯಾಲೆಸ್ತೀನ್, ಇರಾನ್, ಇರಾಕ್, ಸಿರಿಯಾ, ಲೆಬನಾನ್, ಟರ್ಕಿ ಹೀಗೆ ಎಲ್ಲ ಮುಸ್ಲಿಂ ರಾಷ್ಟ್ರಗಳು ಇಸ್ರೇಲನ್ನು ಹಣಿಯಲು ಇನ್ನಿಲ್ಲದಂತೆ ಹೊಂಚು ಹಾಕುತ್ತಿವೆ.

ಆದರೆ ಸತತವಾಗಿ ಹೊಡೆತ ತಿನ್ನುತ್ತಾ ಬಂದವರು ಒಮ್ಮೆ ಮೈಕೊಡವಿಕೊಂಡು ಎದ್ದುನಿಂತರೆ ಅದರ ಪರಿಣಾಮ ಹೇಗಿರುತ್ತದೆ ಎಂಬುದರ ಪ್ರತ್ಯಕ್ಷ ನಿದರ್ಶನದಂತೆ ಇಸ್ರೇಲಿನ ಯೆಹೂದಿಗಳು ತೀವ್ರ ವಾಗೇ ಪ್ರತಿಕ್ರಿಯಿಸುತ್ತಿದ್ದಾರೆ. ಈಗಿನ ಪರಿಸ್ಥಿತಿಯನ್ನು ನೋಡಿದರೆ, ಹಮಾಸ್ ಉಗ್ರರು ಈ ದಾಳಿಯನ್ನು ಉದ್ದೇಶ ಪೂರ್ವಕವಾಗಿಯೇ ಮಾಡಿದಂತಿದೆ. ಅಂದರೆ, ಕಾಲುಕೆರೆದು ಜಗಳಕ್ಕೆ ಬರುವ ತಂತ್ರಗಾರಿಕೆಯೊಂದಿಗೆ ಇಸ್ರೇಲನ್ನು ಯುದ್ಧಕ್ಕೆ ಎಳೆಯುವುದು, ನಂತರ ಅರಬ್ ರಾಷ್ಟ್ರಗಳೆಲ್ಲ ಒಂದೊಂದಾಗಿ ಇಸ್ರೇಲ್ ಮೇಲೆ ಮುರಕೊಂಡು ಬೀಳು ವಂತಾಗುವ ತ್ವೇಷಮಯ ವಾತಾವರಣವನ್ನು ಸೃಷ್ಟಿಸುವುದು ಈ ನಡೆಯ ಹಿಂದಿನ ಕುತ್ಸಿತ ಕಾರ್ಯತಂತ್ರವಾಗಿದ್ದಿರ ಬಹುದು.

ಜಗತ್ತಿನ ಇತಿಹಾಸದಲ್ಲಿ, ನಗಣ್ಯ ಸಂಖ್ಯೆಯಲ್ಲಿರುವ ಸಮುದಾಯಗಳು/ಜನಾಂಗೀಯರ ಮೇಲೆ ನಿರಂತರ ದೌರ್ಜನ್ಯ ನಡೆದ ಉದಾಹರಣೆಗಳಿವೆ. ಯೆಹೂದಿಗಳ ಮೇಲಂತೂ ಸಾವಿರಾರು ವರ್ಷಗಳಿಂದ ದಬ್ಬಾಳಿಕೆ ನಡೆಯುತ್ತಾ ಬಂದಿದೆ. ಈಜಿಪ್ಟ್‌ನಲ್ಲಿ ಪೆರೋಗಳ ದಬ್ಬಾಳಿಕೆಯಿಂದ ಯೆಹೂದಿ ಗಳನ್ನು ರಕ್ಷಿಸಿದ ಪ್ರವಾದಿ ಮೂಸಾ ಅವರನ್ನು ಇಸ್ರೇಲ್‌ಗೆ ಕಳುಹಿಸಿಕೊಟ್ಟಿದ್ದ. ಬಳಿಕ ಕ್ರೈಸ್ತರ ಪ್ರಭಾವ ಹೆಚ್ಚಾದ ಮೇಲೆ ಯೆಹೂದಿಗಳು ರೋಮನ್ನರ ದಾಳಿಗೆ ತುತ್ತಾಗಿ ಅಲ್ಲಿಂದ ಕಾಲುಕೀಳಬೇಕಾಯಿತು. ಹೀಗೆ ತಮ್ಮ ಪ್ರಾಣ ಉಳಿಸಿಕೊಳ್ಳಲು ಯೆಹೂದಿಗಳು ಬೇರೆ ಬೇರೆ ರಾಷ್ಟ್ರಗಳತ್ತ ವಲಸೆ ಹೋಗುತ್ತಾರೆ.

ಹಾಗೆ ವಲಸೆ ಆರಂಭಿಸಿದವರು ಇವತ್ತಿನ ಮಧ್ಯ ಏಷ್ಯಾ, ಯುರೇಷಿಯಾ ಮತ್ತು ಯುರೋಪ್‌ಗಳಲ್ಲಿ ಹೆಚ್ಚಾಗಿ ನೆಲೆ ನಿಂತರೆ, ಒಂದಿಷ್ಟು ಮಂದಿ ತಮ್ಮದೇ ನೆಲೆಯಲ್ಲಿದ್ದರು. ಕ್ರಿ.ಶ. ೧೦೬೬ರಲ್ಲಿ ಗ್ರನೇಡಾದಲ್ಲಿ ಮುಸ್ಲಿಮರು ಮತ್ತು ಯೆಹೂದಿಗಳ ಮಧ್ಯೆ ಗಲಭೆ ನಡೆದು ಸಾವಿರಾರು ಯೆಹೂದಿಗಳು ಸಾವನ್ನಪ್ಪಿ ದರು. ಜರ್ಮನಿಯಲ್ಲಿ ನೆಮ್ಮದಿಯಿಂದ ದಿನದೂಡುತ್ತಿದ್ದ ಯೆಹೂದಿಗಳಿಗೆ ಕಂಟಕ ಶುರುವಾಗಿದ್ದು ಮೊದಲ ಮಹಾ ಯುದ್ಧದ ಸಂದರ್ಭದಲ್ಲಿ. ಈ ಯುದ್ಧದಲ್ಲಿ ಜರ್ಮನಿಯು ಅತ್ಯಂತ ಹೀನಾಯವಾಗಿ ಸೋತ ಬಳಿಕ, ಈ ಸೋಲಿಗೆ ಯೆಹೂದಿಗಳೇ ಕಾರಣ ಎಂದು ಭಾವಿಸಿದ ಹಿಟ್ಲರ್ ಅವರನ್ನು ಅಲ್ಲಿಂದ ಹೊರದಬ್ಬಲು ನಿರ್ಧರಿಸಿದ, ಅದಕ್ಕಾಗಿ ಅವರ ಮೇಲೆ ನಿರ್ಬಂಧ ವಿಧಿಸಿದ.

೧೯೩೫ರಲ್ಲಿ ‘ನ್ಯೂರೆಂಬರ್ಗ್ ಲಾ’ ಎಂಬ ಕಾನೂನನ್ನು ಜಾರಿಗೊಳಿಸಿದ. ಆ ಕಾನೂನು ಅದೆಷ್ಟು ಕ್ರೂರವಾಗಿತ್ತೆಂದರೆ, ಜರ್ಮನಿಯ ಅಧಿಕೃತ ನಾಗರಿ ಕತ್ವ ಜರ್ಮನ್ನರಿಗೆ ಮಾತ್ರ ಎನ್ನುವಂತಿತ್ತು. ಜರ್ಮನ್ನರು ಯಾವುದೇ ಕಾರಣಕ್ಕೂ ಯೆಹೂದಿಗಳೊಂದಿಗೆ ವಿವಾಹವಾಗು ವಂತಿರಲಿಲ್ಲ. ಅವರೊಂದಿಗೆ ಯಾವುದೇ ರೀತಿಯ ವ್ಯಾಪಾರ -ವಹಿವಾಟು ನಡೆಸುವುದನ್ನು ಈ ಕಾನೂನು ನಿಷೇಧಿಸುತ್ತಿತ್ತು. ಇಷ್ಟು ಸಾಲದೆಂಬಂತೆ, ವಿಷಾನಿಲದ ಕೊಠಡಿಗಳನ್ನು ನಿರ್ಮಿಸಿ ಅದರೊಳಗೆ ಯೆಹೂದಿಗಳನ್ನು ನೂಕಲಾಯಿತು; ಅದ ರೊಳಗೆ ಹೋದ ವರ ಉಸಿರಾಟ ೩೦ ನಿಮಿಷಗಳಲ್ಲಿ ನಿಂತು ಹೋಗುತ್ತಿತ್ತು. ಹೀಗೆ
ಹಿಟ್ಲರ್‌ನ ಕ್ರೌರ್ಯಕ್ಕೆ ಇಡೀ ವಿಶ್ವದ ಮೂರನೇ ಒಂದು ಭಾಗದಷ್ಟು ಯೆಹೂದಿಗಳು ಬಲಿಯಾದರು.

ಹೀಗೆ ಕಾಲಾನುಕಾಲಕ್ಕೆ ಇಂಥ ಸಾಕಷ್ಟು ದಾಳಿಗಳನ್ನು ಎದುರಿಸುತ್ತಲೇ ಬಂದ ಯೆಹೂದಿಗಳು ಇಂದು ತಾವಿರುವ ಇಸ್ರೇಲ್ ಎಂಬ ನೆಲೆಯಲ್ಲಿ ತಮ್ಮ ಆದ ರೀತಿಯಲ್ಲಿ ಮೈಕೊಡವಿಕೊಂಡು ಎದ್ದು, ಬೆಳೆದು ನಿಂತಿದ್ದಾರೆ. ಕೃಷಿ, ನೀರಿನ ಸದ್ಬಳಕೆ, ಮಾಹಿತಿ ತಂತ್ರಜ್ಞಾನ, ಬೇಹುಗಾರಿಕೆ ಸೇರಿದಂತೆ ಅನೇಕ  ಕ್ಷೇತ್ರಗಳಲ್ಲಿ ಪಾರಮ್ಯ ಮೆರೆದಿದ್ದಾರೆ. ಇಷ್ಟಾದರೂ ಅವರ ಮೇಲಿನ ದಾಳಿಗಳು ನಿಂತಿಲ್ಲ. ಇರಾನ್ ಮತ್ತು ಹೆಜಬುಲ್ಲಾಗಳ ಕುಮ್ಮಕ್ಕಿನಿಂದಾಗಿ ಹಮಾಸ್ ಉಗ್ರರು ಇಸ್ರೇಲ್‌ನಲ್ಲಿನ ಯೆಹೂದಿಗಳ ಮೇಲೆ ದಾಳಿ ಮಾಡುತ್ತಿದ್ದಾರೆ.

ಅದನ್ನೆದುರಿಸಲು ಇಸ್ರೇಲ್ ಪ್ರತಿದಾಳಿ ನಡೆಸಿದರೆ, ಅರಬ್ ಜಗತ್ತು ಅದನ್ನು ‘ಇಸ್ರೇಲಿಗರಿಂದ ಪ್ಯಾಲೆಸ್ತೀನಿಯರ ಮಾರಣ ಹೋಮ ನಡೆಯುತ್ತಿದೆ’ ಎಂದು ಬೊಬ್ಬೆಹಾಕುತ್ತಿದೆ. ವಾಸ್ತವವಾಗಿ ‘ಮಾರಣಹೋಮ’ ಎಂದರೇನು ಎಂಬುದು, ಅಂಥ ನೋವನ್ನು ಉಂಡಿರುವ ಯೆಹೂದಿಗಳಿಗೆ ಗೊತ್ತಿದೆಯೇ ವಿನಾ ಅರಬ್ಬರಿಗಲ್ಲ. ಹೀಗಾಗಿ ಸದ್ಯದ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಯುದ್ಧವು ಎಂದು ಮತ್ತು ಹೇಗೆ ನಿರ್ಣಾಯಕ ಘಟ್ಟವನ್ನು ಮುಟ್ಟುತ್ತದೆ ಎಂಬುದನ್ನು ಕಾದುನೋಡುವಂತಾಗಿದೆ.

(ಲೇಖಕರು ರಾಜ್ಯಶಾಸ್ತ್ರದ ಅಧ್ಯಾಪಕರು)