ಚರ್ಚಾ ವೇದಿಕೆ
ಶಶಿಕುಮಾರ್ ಕೆ.
ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳ ಆರು ಧರ್ಮದವರು ಅಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಾಗಿ ದೌರ್ಜನ್ಯಕ್ಕೆ ಒಳಗಾಗಿ ದ್ದಾರೆ. ಆದರೆ ಶ್ರೀಲಂಕಾದ ತಮಿಳಿಗರು ಶ್ರೀಲಂಕಾವನ್ನು ವಿಭಜಿಸಿ ಪ್ರತ್ಯೇಕ ರಾಷ್ಟ್ರ ಮಾಡಿಕೊಳ್ಳುತ್ತೇವೆಂದು ಆಯುಧ ಹಿಡಿದು ಶ್ರೀಲಂಕಾ ಸರಕಾರದ ವಿರುದ್ಧ ಹೋರಾಡಿದರು.
ಸಂಸತ್ತಿನಲ್ಲಿ ೨೦೧೯ರಲ್ಲಿ ಅಂಗೀಕಾರಗೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಕೆಲದಿನಗಳ ಹಿಂದಷ್ಟೇ ಅಧಿಕೃತವಾಗಿ ಅಧಿಸೂಚನೆ ಮೂಲಕ ಜಾರಿಯಾಗಿದೆ. ತಮಿಳುನಾಡಿನ ಸ್ಟಾಲಿನ್ ಸರಕಾರವು ‘ಈ ಕಾಯ್ದೆಯು ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನದ ನಿರಾಶ್ರಿತರನ್ನು(ಆ ದೇಶಗಳ ಅಲ್ಪಸಂಖ್ಯಾತರು) ಮಾತ್ರ ಪರಿಗಣಿಸಿದೆ. ಆದರೆ ಶ್ರೀಲಂಕಾದ ತಮಿಳರನ್ನು ಈ ಕಾಯ್ದೆಯಡಿ ಪರಿಗಣಿಸಿಲ್ಲ. ಆದ್ದರಿಂದ ಈ ಕಾಯ್ದೆಯನ್ನು ತಮಿಳುನಾಡಿನಲ್ಲಿ ಜಾರಿಗೊಳಿಸುವುದಿಲ್ಲ’ ಎಂದು ಘೋಷಿಸಿದೆ.
ಆದರೆ ಇನ್ನೂ ಕೆಲವರು, ಶ್ರೀಲಂಕಾದಿಂದ ಬಂದ ನಿರಾಶ್ರಿತರ ಕುರಿತ ಸಹಾನುಭೂತಿಯಿಂದ ಈ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಆದರೆ ಈ ಕಾಯ್ದೆಯನ್ನು ವಿರೋಧಿಸುವವರು ಈ ವಿಷಯವನ್ನೇ ಪ್ರಧಾನವಾಗಿ ಎತ್ತಿ ತೋರಿಸುತ್ತಿದ್ದಾರೆ. ಗಮನಿಸಬೇಕಾದ ಅಂಶಗಳೆಂದರೆ ಶ್ರೀಲಂಕಾದಲ್ಲಿ ಎರಡು ರೀತಿಯ ಭಾರತೀಯ ಮೂಲಕ್ಕೆ ಸೇರಿದಂಥ ಜನರಿದ್ದಾರೆ. ಕೆಲವರು ಮಧ್ಯ ಶ್ರೀಲಂಕಾ, ಉತ್ತರ ಶ್ರೀಲಂಕಾ, ಪೂರ್ವ ಶ್ರೀಲಂಕಾದಲ್ಲಿ ಇರುವಂಥ ವ್ಯಕ್ತಿಗಳಾಗಿದ್ದು ಇವರೆಲ್ಲರೂ ಶತಮಾನಗಳ ಕಾಲ ಇಲ್ಲಿಯೇ ಇದ್ದ ಜನರಾಗಿದ್ದಾರೆ.
ಇವರ ಪೌರತ್ವದ ಕುರಿತು ಯಾವುದೇ ಸಂದೇಹವಿಲ್ಲ. ಆದರೆ ಬ್ರಿಟಿಷರು ಶ್ರೀಲಂಕಾದಲ್ಲಿ ಚಹಾ ತೋಟಗಳನ್ನು ಆರಂಭಿಸಿದಾಗ ಭಾರತದಿಂದ ಸಾಕಷ್ಟು ಜನರನ್ನು ಅಲ್ಲಿಗೆ ಕೆಲಸ ಮಾಡಲು ಕರೆದುಕೊಂಡುಹೋದರು. ಇವರೆಲ್ಲರಿಗೂ ಶಿಕ್ಷಣವಿರಲಿಲ್ಲ, ಶ್ರೀಲಂಕಾದ ಉಳಿದ ಪ್ರಜೆಗಳಿಂದ ಇವರನ್ನು ಪ್ರತ್ಯೇಕ ವಾಗಿಯೇ ಇಡಲಾಗಿತ್ತು. ಶತಮಾನ ಕಳೆದರೂ ಶ್ರೀಲಂಕಾದ ಉಳಿದ ಪ್ರಜೆಗಳೊಂದಿಗೆ ಇವರಿಗೆ ಸಂಬಂಧವಿಲ್ಲದ ಪರಿಸ್ಥಿತಿ.
ಶ್ರೀಲಂಕಾಗೆ ಸ್ವಾತಂತ್ರ್ಯ ಬರುತ್ತಲೇ ೧೯೪೮ರಲ್ಲಿ ‘ಸಿಲೋನ್ ಸಿಟಿಜನ್‌ಶಿಪ್ ಆಕ್ಟ್ ನಂಬರ್-೧೮’ ಎಂಬ ಕಾನೂನನ್ನು ಜಾರಿಗೊಳಿಸಿತು. ಇದರಲ್ಲಿ ಅವರು
ಕೆಲವು ನಿಬಂಧನೆಗಳನ್ನು ವಿಧಿಸಿದರು. ಅವುಗಳ ಪ್ರಕಾರ ಯಾವ ವಲಸಿಗ ಶ್ರೀಲಂಕಾದಲ್ಲಿ ವಾಸಿಸಿದ್ದನೋ ಅವರ ತಾತ ಶ್ರೀಲಂಕಾದಲ್ಲಿ ವಾಸಿಸಿರುವ
ಕುರಿತು ದಾಖಲೆ ತೋರಿಸಿದಾಗ ಮಾತ್ರ ಅಂಥವರಿಗೆ ಶ್ರೀಲಂಕಾದ ಪೌರತ್ವ ನೀಡಲಾಗುತ್ತದೆ ಎಂದು ಘೋಷಿಸಿದರು. ಅಥವಾ ೧೧ ವರ್ಷ ಶ್ರೀಲಂಕಾದಲ್ಲಿ
ನಿರಂತರವಾಗಿ ವಾಸಿಸಿದವರಿಗೆ ಮಾತ್ರ ಪೌರತ್ವ ಎಂದು ಘೋಷಿಸಿದರು. ಇವೆರಡೂ ನಿಬಂಧನೆಗಳು ಕಠಿಣವಾಗಿದ್ದವು. ಏಕೆಂದರೆ ಬಹಳ ಮಂದಿ ಲಂಕನ್ನರು ಹಲವಾರು ಉದ್ದೇಶಗಳಿಗಾಗಿ ತಮಿಳುನಾಡಿನಲ್ಲಿ ವರ್ಷಗಟ್ಟಲೆ ಇದ್ದು ನಂತರ ಶ್ರೀಲಂಕಾಗೆ ತೆರಳುತ್ತಿದ್ದರು.
ಇದರಿಂದ ಅವರ ಬಳಿ ಯಾವುದೇ ದಾಖಲೆಯ ಪತ್ರಗಳು ಇರಲಿಲ್ಲ. ಈ ಪೌರತ್ವದ ಕಾಯ್ದೆಯಲ್ಲಿ ಕೇವಲ ೫೦೦೦ ಮಂದಿ ಶ್ರೀಲಂಕಾದ ತಮಿಳರಿಗೆ ಪೌರತ್ವ ನೀಡಿ ಉಳಿದ ೭ ಲಕ್ಷ ಜನರನ್ನು ಆ ಕಡೆ ಶ್ರೀಲಂಕಾಗೂ ಸೇರಿಸದೆ ಈ ಕಡೆ ಭಾರತದ ಪ್ರಜೆಗಳೂ ಅಲ್ಲದ ಹಾಗೆ (ಸ್ಟೇಟ್‌ಲೆಸ್ ಪೀಪಲ್ಸ್) ಮಾಡಿ ದರು. ನಂತರ ೧೯೪೯ರಲ್ಲಿ ಈ ಸಿಟಿಜನ್‌ಶಿಪ್ ಆಕ್ಟ್ ಅನ್ನು ಬದಲಾಯಿಸಿ ಆಕ್ಟ್ ನಂಬರ್ ೩, ೧೯೪೯ ಎಂಬ ಕಾಯ್ದೆಯ ಪ್ರಕಾರ ೧೭ ವರ್ಷಗಳ ಕಾಲ ಶ್ರೀಲಂಕಾದಲ್ಲಿ ವಾಸಿಸಿದವರು ಅಥವಾ ಒಂದು ಹಂತದ ಆದಾಯ ಇರುವವರಿಗೆ ಮಾತ್ರ ಪೌರತ್ವ ನೀಡಲಾಗುತ್ತದೆ ಎಂದು ಶ್ರೀಲಂಕಾ ಸರಕಾರ
ಘೋಷಿಸಿತು. ಆಗಲೂ ಹಲವಾರು ಜನ ತಮ್ಮ ದಾಖಲೆಗಳನ್ನು ತೋರಿಸಲು ಸಾಧ್ಯವಾಗಲಿಲ್ಲ. ಆದರೂ ಈ ಬಾರಿ ಶ್ರೀಲಂಕಾದ ಒಂದು ಲಕ್ಷ ತಮಿಳಿಗರಿಗೆ ಶ್ರೀಲಂಕಾ ಪೌರತ್ವ ದೊರೆಯಿತು. ಆ ನಂತರ ೧೯೫೪ರಲ್ಲಿ ಅಂದಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ಶ್ರೀಲಂಕಾದ ಅಂದಿನ ಪ್ರಧಾನಿ ಜಾನ್ ಗುಟರಿ ವಾಲಾ ಇವರ ನಡುವೆ ಒಂದು ಒಪ್ಪಂದ ಏರ್ಪಟ್ಟಿತು.
ಆ ಒಪ್ಪಂದದ ಪ್ರಕಾರ ಅಂದಾಜು ಎರಡು ಲಕ್ಷ ಭಾರತೀಯ ತಮಿಳಿಗರಿಗೆ ಶ್ರೀಲಂಕಾ ಪೌರತ್ವ ನೀಡಲಾಯಿತು. ೧೯೬೪ರಲ್ಲಿ ಅಂದಿನ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಅವರು ಶ್ರೀಲಂಕಾದ ಅಂದಿನ ಪ್ರಧಾನಿ ಸಿರಿಮಾವೋ ಬಂಡಾರನಾಯಕೆ ಅವರೊಂದಿಗೆ ಒಂದು ಒಪ್ಪಂದ ಮಾಡಿಕೊಂಡರು. ಅದರ
ಪ್ರಕಾರ ಶ್ರೀಲಂಕಾ ಮೂಲಕ್ಕೆ ಸೇರಿದ ೫,೨೫,೦೦೦ ತಮಿಳಿಗರಿಗೆ ಭಾರತವು ಪೌರತ್ವ ನೀಡಿತು. ಪ್ರಸ್ತುತ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದ ಹಿಂದೂಗಳ ಕುರಿತು ಭಾರತ ಸರಕಾರ ಯಾವ ರೀತಿ ಯೋಚಿಸುತ್ತಿದೆಯೋ ಅದೇ ರೀತಿ ೧೯೬೪ರಲ್ಲಿಯೇ ಶ್ರೀಲಂಕಾದ ತಮಿಳಿಗರಿಗೆ ಭಾರತದ ಪೌರತ್ವ ನೀಡಲಾಗಿತ್ತು. ಅದೇ ಸಂದರ್ಭದಲ್ಲಿ ಶ್ರೀಲಂಕಾ ಮೂರು ಲಕ್ಷ ವಲಸಿಗ ತಮಿಳಿಗರಿಗೆ ತನ್ನ ದೇಶದ ಪೌರತ್ವ ನೀಡಿತು.
೧೯೭೪ರ ಜೂನ್ ೨೪ರಂದು ಅಂದಿನ ಭಾರತದ ಪ್ರಧಾನಿ ಇಂದಿರಾ ಗಾಂಧಿ ಮತ್ತು ಶ್ರೀಲಂಕಾದ ಅಂದಿನ ಪ್ರಧಾನಿ ಸಿರಿಮಾವೋ ಬಂಡಾರನಾಯಕೆ ಮತ್ತೆ ಒಪ್ಪಂದ ಮಾಡಿಕೊಂಡು ಭಾರತೀಯ ಮೂಲಕ್ಕೆ ಸೇರಿದಂಥ ಉಳಿದ ೧,೫೦,೦೦೦ ತಮಿಳಿಗರ (ಸ್ಟೇಟ್‌ಲೆಸ್ ಪೀಪಲ್) ಕುರಿತು ಒಪ್ಪಂದ ಮಾಡಿಕೊಂಡು, ಆ ಪ್ರಕಾರ ೭೫೦೦೦ ತಮಿಳಿಗರಿಗೆ ಭಾರತವು ಪೌರತ್ವ ನೀಡಬೇಕು, ಉಳಿದ ೭೫,೦೦೦ ತಮಿಳಿಗರಿಗೆ ಶ್ರೀಲಂಕಾ ಪೌರತ್ವ ನೀಡಬೇಕೆಂದು
ನಿರ್ಧರಿಸಿದರು. ಆ ಪ್ರಕಾರ ೭೫,೦೦೦ ಜನರು ಈಗ ಭಾರತದ ಪೌರರಾಗಿದ್ದಾರೆ. ನಂತರ ೨೦೦೩ರಲ್ಲಿ ಎಲ್‌ಟಿಟಿಇ ಭಯೋತ್ಪಾದಕ ದಾಳಿಗಳಾಗುತ್ತಿದ್ದ ಸಂದರ್ಭದಲ್ಲಿಯೂ ಶ್ರೀಲಂಕಾ ೧,೬೮,೦೦೦ ತಮಿಳಿಗರಿಗೆ ತನ್ನ ದೇಶದ ಪೌರತ್ವ ನೀಡಿತು.
ಈಗಲೂ ಭಾರತದಲ್ಲಿ ಅಂದಾಜು ಒಂದು ಲಕ್ಷ ಜನ ತಮಿಳಿಗರು ನಿರಾಶ್ರಿತರಾಗಿಯೇ ವಾಸಿಸುತ್ತಿದ್ದಾರೆ. ಇವರಲ್ಲಿ ೨೦೦ ರಿಂದ ೨೬೦ ಜನರು ಮಾತ್ರ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ಭಾರತ ಪೌರತ್ವ ಕಾಯ್ದೆಯ ಆರನೇ ಕಲಂ ಮತ್ತು ಮೂರನೇ ಕಲಂನಲ್ಲಿನ ನಿಬಂಧನೆಗಳ ಮೇರೆಗೆ ಪೌರತ್ವ ಲಭಿಸುತ್ತದೆ. ಅಂದರೆ ಇವರು ೧೧ ವರ್ಷ ಇಲ್ಲೇ ಜೀವಿಸಿರಬೇಕು, ಇವರ ಮೇಲೆ ಯಾವುದೇ ರೀತಿಯ ಪ್ರಕರಣಗಳು ಇರಬಾರದು ಹಾಗೂ
ಇವರಿಗೆ ಪೌರತ್ವ ನೀಡಲು ಶ್ರೀಲಂಕಾದ ಯಾವುದೇ ವಿರೋಧ ಇರಕೂಡದು. ಇಂಥ ನಿಬಂಧನೆಗಳನ್ನು ಪೂರ್ಣಗೊಳಿಸಿದ ನಂತರ ಇವರಿಗೆ ಪೌರತ್ವ ಲಭಿಸುತ್ತದೆ. ಇನ್ನುಳಿದ ೧ ಲಕ್ಷ ತಮಿಳು ನಿರಾಶ್ರಿತರು ಶ್ರೀಲಂಕಾಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಶ್ರೀಲಂಕಾದ ವಲಸಿಗರ ವಿವಾದವನ್ನು ಸಿಎಎಗೆ ಹೋಲಿಸುವುದು ಸರಿಯಲ್ಲ.
ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳ ಆರು ಧರ್ಮದವರು (ಸಿಎಎ ಅಡಿ ಬರುವ ಧರ್ಮಗಳು) ಆ ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತ ರಾಗಿ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಆದರೆ ಶ್ರೀಲಂಕಾದ ತಮಿಳಿಗರು ಶ್ರೀಲಂಕಾವನ್ನು ವಿಭಜಿಸಿ ನಾವು ಪ್ರತ್ಯೇಕ ರಾಷ್ಟ್ರ ಮಾಡಿಕೊಳ್ಳುತ್ತೇವೆಂದು
ಆಯುಧಗಳನ್ನು ಹಿಡಿದು ಶ್ರೀಲಂಕಾ ಸರಕಾರದ ವಿರುದ್ಧ ದಶಕಗಳ ಕಾಲ ಹೋರಾಡಿದರು. ೪೦ ವರ್ಷಗಳ ಕಾಲ ಶ್ರೀಲಂಕಾದ ತಮಿಳರು ಅಲ್ಲಿನ
ಸರಕಾರದ ವಿರುದ್ಧ ಹೋರಾಡಿದರು. ಧರ್ಮದ ಆಧಾರದಲ್ಲಿ ತಮಿಳರ ಮೇಲೆ ದೌರ್ಜನ್ಯ ನಡೆಯಲಿಲ್ಲ.
ಶ್ರೀಲಂಕಾದಿಂದ ಬಂದ ತಮಿಳಿಗರಲ್ಲಿ ಹಿಂದೂಗಳು, ಕ್ರೈಸ್ತರು, ಮುಸ್ಲಿಮರೂ ಇದ್ದಾರೆ. ಆದ್ದರಿಂದ ತಮಿಳರ ಮೇಲಿನದು ಧಾರ್ಮಿಕ ದೌರ್ಜನ್ಯವಲ್ಲ. ಶ್ರೀಲಂಕಾದಿಂದ ಪ್ರತ್ಯೇಕವಾಗುತ್ತೇವೆಂದು ಹೋರಾಟ ನಡೆಸಿದ ಕಾರಣದಿಂದ ಅಲ್ಲಿನ ಸರಕಾರ ಈ ಪ್ರತ್ಯೇಕತೆಯ ವಿರುದ್ಧದ ಹೋರಾಟವನ್ನು ದಮನ ಮಾಡಲು ಹಿಂಸಾಮಾರ್ಗವನ್ನು ಆರಂಭಿಸಿತು. ಆದ್ದರಿಂದ ಅಲ್ಲಿನ ತಮಿಳರು ಭಾರತಕ್ಕೆ ವಲಸೆ ಬಂದಿದ್ದರು. ಅಲ್ಲಿನ ಪರಿಸ್ಥಿತಿ ಸರಿಯಾದ್ದರಿಂದ ಭಾರತಕ್ಕೆ ವಲಸೆ ಬಂದಿದ್ದ ಶ್ರೀಲಂಕಾ ತಮಿಳರು ಪುನಃ ತಮ್ಮ ದೇಶಕ್ಕೆ ಹಿಂದಿರುಗುತ್ತಿದ್ದಾರೆ. ಆದ್ದರಿಂದ ೨೦೧೯ರ ಪೌರತ್ವ ತಿದ್ದುಪಡಿ ಕಾಯ್ದೆಯೊಳಗೆ ಶ್ರೀಲಂಕಾದ ತಮಿಳರನ್ನು ಸೇರಿಸಿಕೊಂಡಿಲ್ಲ.
ಶ್ರೀಲಂಕಾದ ತಮಿಳರ ವಿವಾದ ಪೂರ್ಣ ಇತ್ಯರ್ಥವಾಗಿದ್ದು, ಪ್ರಸ್ತುತ ‘ಸ್ಟೇಟ್‌ಲೆಸ್ ಪೀಪಲ್’ ಯಾರೂ ಇಲ್ಲ. ಈ ವಾಸ್ತವವನ್ನು ಗಮನಕ್ಕೆ ತೆಗೆದು ಕೊಂಡಾಗ ಮಾತ್ರ ಪೌರತ್ವ ತಿದ್ದುಪಡಿ ಕಾಯ್ದೆಯ ಅವಶ್ಯಕತೆ ಏನೆಂದು ಅರಿವಾಗುತ್ತದೆ.
(ಲೇಖಕರು ಹವ್ಯಾಸಿ ಬರಹಗಾರರು)