Saturday, 14th December 2024

ಶೀಲವುಳ್ಳದ್ದು ಮಾತ್ರ ಹಿಂದೂ !

ದಾಸ್ ಕ್ಯಾಪಿಟಲ್‌

dascapital1205@gmail.com

ಕಳೆದ ಏಳೆಂಟು ದಶಕಗಳ ಈಚೆಗೆ ನಮ್ಮ ದೇಶಕ್ಕೆ ಹೊರಗಿನಿಂದ ಆಮದಾದ ಅತೀ ಅಪಾಯಕಾರಿ ಸಂಗತಿಗಳಲ್ಲಿ ಎಡಪಂಥ ಎಂದು ಹೆಸರನ್ನಿಟ್ಟ ಕೊಂಡು, ತಾವೇ ಬುದ್ಧಿಜೀವಿಗಳು, ಉಳಿದವರು ಬುದ್ಧಿಹೀನರೆಂದು ಹುಯಿಲಿಟ್ಟುಕೊಂಡು ಬೇಕುಬೇಕಾದ ಬಗೆಯಲ್ಲಿ ವಿಚಾರಗಳನ್ನು ಹರಿಬಿಡುವ ಈ ವರ್ಗವು ಭಾರತೀಯ ನ್ಯಾಯಶಾಸ್ತ್ರದ (Indian Logi) ವಾದ, ಜಲ್ಪ, ವಿತಂಡ ಎಂಬ ಮೂರು ಧಾರೆಗಳಲ್ಲಿ ಜಲ್ಪ ಮತ್ತು ವಿತಂಡ ವನ್ನು ಮಾತ್ರ ಅಪ್ಪಿಕೊಂಡು ವಾಗ್ಯುದ್ಧ ಮಾಡುತ್ತಿರುವುದನ್ನು ನೋಡು ತ್ತಿದ್ದೇವೆ.

ಮುಖ್ಯವಾಗಿ ಇವರ ಆರೋಪಗಳು, ದೂಷಣೆಗಳು, ಟೀಕೆಗಳು, ನ್ಯೂನತೆಗಳನ್ನು ಎತ್ತಿ ತೋರಿಸುವುದು ಮುಖ್ಯವಾಗಿ ಭಾರತೀ ಯತೆಯನ್ನು, ರಾಷ್ಟ್ರೀಯತೆಯನ್ನು, ಹಿಂದೂ ಧರ್ಮ (ಹಿಂದೂ ಎಂಬುದು ರಾಷ್ಟ್ರವಾಚಕವೇ ಹೊರತು ಧರ್ಮ ವಾಚಕವಲ್ಲ) ವನ್ನು, ಬ್ರಾಹ್ಮಣ್ಯವನ್ನು, ರಾಮಾಯಣ-ಮಹಾಭಾರತ ಇತಿಹಾಸ ಕಾವ್ಯಗಳು-ಪುರಾಣಗಳು-ವೇದ-ವೇದಾಂತಗಳು, ಭಗವದ್ಗೀತೆ ಯನ್ನು ಕುರಿತೇ ಹೊರತು ಅನ್ಯ ವಿಷಯಗಳ ವಿಚಾರಗಳಲ್ಲಿ ಅಲ್ಲ.

ಇವರೇ ಮುಂತಾದ ಮಹನೀಯರ ಜೊತೆಯಲ್ಲಿ ರಾಜಕೀಯವು ಸೇರಿಕೊಂಡು ಯಾವು ದಾದರೊಂದು ವಿಚಾರವನ್ನು ಎತ್ತಿ ಕೊಂಡು ಅಪದ್ಧಗಳನ್ನು ಆಡುತ್ತಲೇ ಇರುತ್ತಾರೆ. ಮಜಾ ಏನೆಂದರೆ, ಇವರೆಲ್ಲರ ಹೆಸರುಗಳು ಹಿಂದೂ ದೇವರ ನಾಮಗಳನ್ನೇ ಹೊತ್ತಿವೆ. ಯಾವ ಹಿಂದೂ ದೇವರುಗಳ ಬಗ್ಗೆ ಇವರು ಕೇವಲವಾಗಿ ಮಾತಾಡುತ್ತಾರೋ ಆಗೆಲ್ಲಾ ಇವರ ಹೆಸರುಗಳು ಒಳಗೊಳಗೇ ಇವರನ್ನು ಅಣಕಿಸುತ್ತಿರುತ್ತವೆ. ಪರೋಕ್ಷವಾಗಿ ಇವರನ್ನೇ ಅಪಹಾಸ್ಯ ಮಾಡುತ್ತಿರುತ್ತದೆ. ಹಿಂದೊಮ್ಮೆ ದೂರದರ್ಶನದ ಪ್ಯಾನೆಲ್ ಚರ್ಚೆಯೊಂದರಲ್ಲಿ ಹಿಂದೂ ಧರ್ಮದ ಬಗ್ಗೆ ತಮ್ಮ ಗೊಂದಲವನ್ನು ಪ್ರಕಟಿಸುತ್ತಾ, ವಿವೇಕಾನಂದರ ನುಡಿಗಳನ್ನು ಉಲ್ಲೇಖಿಸುತ್ತಾ ಭಗವಾನರು ಮಾತಾಡುತ್ತಿದ್ದರು. ಈ ಹಿಂದೆಯೂ ಹಲವು ಸಲ ಅವರು ಹಿಂದೂ ಧರ್ಮದ ಬಗ್ಗೆ, ಶ್ರೀರಾಮ-ಕೃಷ್ಣರ ಬಗ್ಗೆ, ಮಾಂಸಸೇವನೆಯ ಬಗ್ಗೆ ಮಾತಾಡಿದ್ದೂ, ಅದಕ್ಕೆ ಹಲವರು ಅವರಿಗೆ ಸ್ಪಷ್ಟನೆಯನ್ನೂ ನೀಡಿದ ಸಂದರ್ಭಗಳಿವೆ.

ಸಹಜವಾದ ಮಾತಿನ ಹದವನ್ನೂ ಮೀರಿ ಅವರ ಅಭಿಪ್ರಾಯಗಳಲ್ಲಿ ಚರ್ಚೆ, ವಿಚರ್ಚೆ, ವಾದಗಳು ಟಿವಿ, ಪತ್ರಿಕೆಗಳಲ್ಲಿ ನಡೆದಿವೆ. ಆದರೂ ಭಗವಾನರಲ್ಲಿ ಹಿಂದೂ ಧರ್ಮದ ಬಗ್ಗೆಯೇ ಗೊಂದಲಗಳಿರುವಂತೆ ಕಾಣುತ್ತಿದೆ. ಅಥವಾ ಉಳಿದೆಲ್ಲ ಧರ್ಮಗಳ ಬಗ್ಗೆ ಆಳವಾದ ಅಧ್ಯಯನ ಮಾಡಿ ಹಿಂದೂ ಧರ್ಮದಲ್ಲೂ ಇರುವ ಶ್ರೇಷ್ಠ ಅಂಶಗಳನ್ನು ಕಾಣದೆ ವ್ಯತಿರಿಕ್ತವಾಗಿ ಅವರು ಮಾತಾಡು ತ್ತಿದ್ದಾರೇನೋ!

ಆದರೆ, ಒಂದಂತೂ ಸ್ಪಷ್ಟ: ಪದೇ ಪದೇ ಅವರ ವೈಚಾರಿಕತೆಯಲ್ಲಿ ಗೊಂದಲವಾಗುತ್ತಿರುವುದು ಹಿಂದೂ ಧರ್ಮದ ಬಗ್ಗೆಯೇ ಹೊರತು ಬೇರೆಯದರ ಬಗ್ಗೆಯಲ್ಲ. ಈ ಧರ್ಮದ ಬಗ್ಗೆಯೇ ಅವರಲ್ಲಿ ಪ್ರಶ್ನೆಗಳಿವೆ. ಮುಖ್ಯವಾಗಿ ಸವಾಲುಗಳೂ ಇವೆ. ಇದು ಸ್ವಭಾವತಃ ಇದ್ದ ಪ್ರಶ್ನೆಗಳಾದರೆ ಉತ್ತರ ಸಿಗಬಹುದು. ಅದನ್ನು ಬಿಟ್ಟು ಹಿಂದೂ ಧರ್ಮದ ಅಸ್ತಿತ್ವವನ್ನೇ ಅಲ್ಲಗಳೆಯುವ ಔದ್ಧಟ್ಯವಿದ್ದರೆ ಅದಕ್ಕೆ ಉತ್ತರವೂ ಇಲ್ಲ, ಮದ್ದೂ ಇಲ್ಲ.

ಸಿಂಧೂಪದದ ಅಪಭ್ರಂಶ ರೂಪವೇ ಹಿಂದೂ. ಸಿಂಧೂ ನದಿಯ ಈಚೆಗೆ ಇರುವ ಭೂಭಾಗ, ಮತ್ತು ಅಲ್ಲಿ ವಾಸಿಸುವ ಜನರು ಹಿಂದೂಗಳು. ಅದೇ ಹಿಂದೂಸ್ತಾನ ಮತ್ತು ಹಿಂದೂಗಳು. ಇದೇ ಹಿಂದೂ ದೇಶ ಎಂದಾದದ್ದು. ಆದ್ದರಿಂದ ಹಿಂದೂ ಎಂಬುದು ರಾಷ್ಟ್ರವಾಚಕ ಪದ. ಆದ್ದರಿಂದ ಇದು ನಾಲಗೆಯಲ್ಲಿ ಅಕ್ಷರಗಳು ಹೊರಡದೇ ಆದ ಎಡವಟ್ಟು. ಅಂತೂ ಇಲ್ಲಿರುವ ಹಿಂದೂ ಗಳೆಂದರೆ ಭಾರತೀಯರು ಎನ್ನಲು ಯಾವ ಅಭ್ಯಂತರವೂ ಆಗುವುದಿಲ್ಲ. ಇದು ಕೋಮಿನ ವಾಸನೆಯನ್ನು ನೀಡುವುದಿಲ್ಲ.

ಯಾವಾಗ ಹಿಂದೂ ಎಂಬುದು ಮತೀಯ ಕಲ್ಪನೆಯಾಗಿ ಪರಿವರ್ತನೆಯಾಯಿತೋ ಆಗಲೇ ಕೋಮುವಾದ ಹುಟ್ಟಿತು. ಹಿಂದೂ ಧರ್ಮ ಎಂದಾದದ್ದು ಆಮೇಲಿನ ದುರಂತ. ಗೌರಿ ಲಂಕೇಶರು ಹೇಳಿದ್ದು ಆಮೇಲಿನ ಹಿಂದೂ ಧರ್ಮದ ಬಗ್ಗೆಯೇ. ಅವರಿಗೆ ಇದನ್ನು ಅರ್ಥಮಾಡಿಕೊಳ್ಳಲು ಆಗದಿರುವುದಕ್ಕೆ ವಿಷಾದವಿದೆ. ಹಿಂದೂ ಕೋಮುವಾದಾಗಲೇ ವಿಶಾಲಾರ್ಥದ ಭಾರತೀಯ ಎಂಬ ಪದ ಸಂಕುಚಿತವಾಯಿತು. ಆದ್ದರಿಂದ ಅನೇಕ ಕೋಮುಗಳು ಎಂಬ ವಿನ್ಯಾಸಗಳು ಹುಟ್ಟಿಕೊಂಡವು. ಸಾಮರಸ್ಯಕ್ಕೆ ಧಕ್ಕೆ
ಉಂಟಾದದ್ದು ಇವುಗಳನ್ನು ಅನುಸರಿಸುವುದರಲ್ಲಿ ಮತ್ತು ಅನುಸರಿಸುವವರಿಂದ.

ಋಗ್ವೇದದ ಅಗ್ನಿಸೂಕ್ತದ ಒಂದು ಮಾತು: ಕೇ ತೇ ಅಗ್ನೇ,  ರಿಪವೇ ಬಂಧನಾಸಃ- ಇದನ್ನೇ ಅಲ್ಲವೆ ವಿವೇಕಾನಂದರು ಹೇಳಿದ್ದು: ಈ ದೇಶದಲ್ಲಿ ಒಂದು ಕಾಲದಲ್ಲಿದ್ದವರೆಲ್ಲ ಬ್ರಾಹ್ಮಣರೇ. ನಾನು ಸಜ್ಜನನಾಗಲು, ಉತ್ತಮ ಧ್ಯೇಯಗಳೊಂದಿಗೆ ಬದುಕಲು ನಿಮ್ಮ ಮತಕ್ಕೇ ಏಕೆ ಸೇರಬೇಕು? ಹೊರಗಿದ್ದೇ ಇದು ಅಸಾಧ್ಯವೇ ಎಂಬ ಗಾಂಧಿಯವರಮಾತಿಗೆ ಗೀತೆಯ ಉಕ್ತಿಗಳು ಪ್ರಭಾವ ಆಗಿರಬೇಕು!

ಹಿಂದೂ ಧರ್ಮ ಅಂದಾಕ್ಷಣ ಕೋಮು ಎಂಬ ಭಾವನೆ ಬರುವುದಾದರೆ ಈ ದೇಶದಲ್ಲಿರುವ ಎಲ್ಲರೂ ಹಿಂದೂಗಳೇ ಆಗುತ್ತಾ ರೆಯೇ? ಹಾಗೆ ಆಗುವುದಾದರೆ ಒಂದು ಜನಾಂಗವನ್ನೇ ಒಂದು ಧರ್ಮವೆಂದು ಪರಿಗಣಿಸಿದಂತಾಗುವುದಿಲ್ಲವೇ? ಹಾಗಾದಾಗ ’ನಿಜವಾಗಿ ಕತ್ತಲಲ್ಲಿ ಇರಿಯುವ ಕೆಲಸ ಮಾಡುತ್ತಿರುವವರು ಯಾರು? ಇದೆಲ್ಲಾ ಯಾರ ಅಜೆಂಡಾ ಹಾವಿನಂತೆ ಗೋಚರವಾ ಗುತ್ತದೆ? ಆಗ ಪರ ಧರ್ಮ ಸಹಿಷ್ಣುತೆಯ ಅಗತ್ಯವಾದರೂ ಹೇಗೆ ಬರುವುದಕ್ಕೆ ಸಾಧ್ಯ? ಆಗ ಇಡಿಯ ದೇಶವಾಸಿಗಳು ಒಂದೇ ಧರ್ಮಕ್ಕೆ ಸೇರಿದವರಾಗಿ ಮತಾಂತರವೂ ತಪ್ಪಾಗಿ ಕಾಣುತ್ತದೆ.

ಯಾಕೆಂದರೆ ಎಲ್ಲರೂ ಹಿಂದೂಗಳೆಂಬ ರಾಷ್ಟ್ರವಾಚಕವನ್ನು ಧರ್ಮವಾಚಕವಾಗಿ ಸ್ವೀಕರಿಸುವುದರಿಂದ! ಆದರೂ ಹಿಂದೂ ಎಂದಾಕ್ಷಣ ಧರ್ಮ ಎಂದು ಕರೆಯುವುದು ಮುಂದುವರಿದಿದೆ. ನಾಲ್ಕು ವೇದಗಳು, ನೂರೆಂಟು ಉಪನಿಷತ್ತುಗಳು, ಭಗವದ್ಗೀತೆ, ಹದಿನೆಂಟು ಪುರಾಣಗಳು, ರಾಮಾಯಣ, ಮಹಾಭಾರತ ಮಹಾಕಾವ್ಯಗಳು, ದರ್ಶನಗಳು, ಶಾಸ-ನೀತಿ- ಸಂಹಿತೆಗಳು, ಮನು ಸ್ಮೃತಿ, ಯೋಗಭಾಷ್ಯ, ಮೀಮಾಂಸೆ, ರಾಶಿಗಳು, ಋತುಗಳು ಮತ್ತು ಮಾಸ, ದಿಕ್ಕುಗಳು, ಸಂಸ್ಕಾರಗಳು, ಸಪ್ತ ಋಷಿಗಳು, ಸಪ್ತಪರ್ವತಗಳು, ಜ್ಯೋತಿರ್ಲಿಂಗಗಳು, ಚಾರ್‌ಧಾಮಗಳು, ಸಪ್ತಪುರಿಗಳು, ಚಾರಕುಂಭಗಳು, ಪವಿತ್ರ-ಸ್ಮರಣೀಯ ನದಿಗಳು, ಅಷ್ಟಲಕ್ಷ್ಮೀಯರು, ಯುಗಗಳು, ಪುರುಷಾರ್ಥಗಳು, ಪ್ರಕೃತಿಯ ಗುಣಗಳು, ನಕ್ಷತ್ರಗಳು, ದಶಾವತಾರ, ಉಪವೇದ, ಇತಿಹಾಸ, ಸ್ಮೃತಿ, ನಿಬಂಧ, ಆಗಮಗಳು, ಮೊದಲಾದುವು ಭಾರತೀಯ ಸಂಸ್ಕೃತಿ ಹಾಗೂ ತತ್ವಶಾಸ ವ್ಯಾಪ್ತಿಯನ್ನು ಒಳಗೊಂಡಿದೆ.

ಇವೆಲ್ಲ ಹಿಂದೂಧರ್ಮದ ಮರ್ಮವನ್ನು, ತತ್ವ-ಸತ್ವಗಳನ್ನು ತಿಳಿಸಿಕೊಡುತ್ತವೆ. ಇವೇ ನಮ್ಮ ಹಿಂದೂ ಧರ್ಮದ ಆಧಾರ
ಗ್ರಂಥಗಳು ಎಂದು ಒಪ್ಪಲೇಬೇಕಾಗುತ್ತದೆ. ಸನಾತನ ಧರ್ಮ ಇವುಗಳನ್ನು ಸಾರುತ್ತವೆ. ಸರ್ವಕಾಲೇ ಸನಾಪ್ರೋಕ್ತ ವಿದ್ಯಾಮಾನಾ ತನೀತಿತಾ- ಯಾವುದು ಎಲ್ಲವನ್ನೂ ಧಾರಣೆ ಮಾಡುತ್ತದೋ, ಎಲ್ಲಾ ಕಾಲಕ್ಕೂ ಮನುಷ್ಯರಿಗೆ ಹಿತವೋ ಅದನ್ನೇ ನಮ್ಮ ಪೂರ್ವಸೂರಿಗಳು ನಮಗೆ ಧರ್ಮ ಎಂಬ ವಿಶಾಲಾರ್ಥವನ್ನು ವ್ಯಾಖ್ಯಾನಿಸಿದ್ದುದು. ಇವುಗಳನ್ನೇ ಈ ದೇಶವಾಸಿಗಳೆಲ್ಲ ಒಪ್ಪುವು ದಾದರೆ ನಮ್ಮದು ಹಿಂದೂ ಧರ್ಮ ಎನ್ನಬಹುದು. ಕಂಡ ಕಂಡದ್ದೆಲ್ಲವೂ ಧರ್ಮವೆಂತಾಗುವುದಿಲ್ಲ.

ಯಾವುದು ನಿತ್ಯಸತ್ಯವೋ ಅದೇ ಧರ್ಮ. ಹರಿಯುವುದು ನದಿಯ ಧರ್ಮ, ಸುಡುವುದು ಬೆಂಕಿಯ ಧರ್ಮ- ಹೀಗೆ. ಧರ್ಮ ಇದ್ದಲ್ಲಿ ಜಗಳ ಇರುವುದಿಲ್ಲ. ಎಲ್ಲಿ ಧರ್ಮ ಇರುವುದಿಲ್ಲವೋ ಅಲ್ಲಿ ಜಗಳ, ಅಜ್ಞಾನ, ದಬ್ಬಾಳಿಕೆ, ಶೋಷಣೆ, ಕ್ರೌರ್ಯ, ಹಿಂಸೆ ಇಂಥ ಅನಿಷ್ಟಗಳು ಇರುತ್ತವೆ. ಮತ, ಪಂಥ, ದರ್ಶನ ಇವೆಲ್ಲ ವಿಭಿನ್ನ ಪರಿಕಲ್ಪನೆಗಳು. ಧರ್ಮ ವಿಶಾಲವಾದುದು. ಆದ್ದರಿಂದ ಹಿಂದೂ ಎಂಬುದು ಜೀವನಪದ್ಧತಿ, ಜೀವನ ಮಾರ್ಗ ಎಂದಾಗುವುದು.

ಸಹಸ್ರ ವರ್ಷಗಳ ರಾಜಕೀಯ, ಸಾಂಸ್ಕೃತಿಕ, ಅಧ್ಯಾತ್ಮಿಕ  ಭವ್ಯ ಪರಂಪರೆಯುಳ್ಳ ಈ ರಾಷ್ಟ್ರದ ಬೇರನ್ನು ನಮ್ಮ ಪೂರ್ವಜರು ಕಟ್ಟಿದ್ದು ಜಾತಿಯಿಂದಲ್ಲ. ರಾಷ್ಟ್ರೀಯತೆಯ ವಿಶಾಲವಾದ ಪ್ರeಯ ವಿನ್ಯಾಸಗಳು ಜಾತಿಯನ್ನು ಮೀರಿಯೇ ಅಸ್ತಿತ್ವಕ್ಕೆ ಬಂದವು ಗಳು. ಹಿಂದುತ್ವ ಎಂಬುದು ಮತೀಯ ಪರಿಕಲ್ಪನೆ ಅಂತ ಹೇಳುವುದೇ ತಪ್ಪು. ಹಿಂದೂ ರಾಷ್ಟ್ರವಾಚಕ ಆದಮೇಲೆ ಹಿಂದುತ್ವ ಎಂಬುದು ಮತೀಯ ಅಥವಾ ಕೋಮಿನ ಪರಿಕಲ್ಪನೆ ಆಗೋದು ಹೇಗೆ ಸಾಧ್ಯ? ಹಿಂದೂ ಧರ್ಮವಾಚಕವಾಗಿ ಬಳಸಿದ್ದ ಫಲವಾಗಿ ಈ ದೇಶದಲ್ಲಿ ಗೊಂದಲಗಳೂ ಅದ್ವಾನಗಳೆದ್ದಿವೆ. ಇದಕ್ಕಾಗಿ ನಾಗರಿಕ ಪ್ರಪಂಚದ ಸಭ್ಯತೆಯನ್ನೂ ಮೀರಿ ಸಂಸ್ಕೃತಿ ಹೀನರಾಗಿ ಮಾತಾಡಿದ್ದನ್ನೂ ನಾವು ನೋಡಿದ್ದೇವೆ, ಕೇಳಿದ್ದೇವೆ.

ಕ್ರೈಸ್ತ, ಇಸ್ಲಾಂ, ಜೈನ, ಪಾರಸೀ, ಗಾಣಪತ್ಯ, ಬೌದ್ಧ ಹೀಗೆ ಯಾವ ಮತ, ಧರ್ಮ, ಪಂಥಗಳು ಈ ಬಗೆಯ ಅರ್ಥವ್ಯಾಪ್ತಿಯುಳ್ಳ ಹಿಂದುತ್ವವನ್ನು ಹೊಂದಲು ಸಾಧ್ಯವಾಗುವ ದಿನಗಳನ್ನು ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯೋತ್ತರ ದಿನಗಳಲ್ಲಿ, ಎಲ್ಲ ಗೊಂದಲಗಳಿಂದ ಮುಕ್ತರಾಗುವಂತೆ ಮಾಡಿ ಸಮರ್ಥವಾದ ಅಡಿಪಾಯದೊಂದಿಗೆ ರಾಷ್ಟ್ರ ಕಟ್ಟುವುದಕ್ಕೆ ಮುಂದಾಗಿದ್ದರೆ
ಹಿಂದುತ್ವದ ಸಮಕಾಲೀನ ವಿನ್ಯಾಸಗಳು ಮತ್ತು ಇತರ ಮತೀಯ ವಿನ್ಯಾಸಗಳು ಪರಸ್ಪರ ಮುಖಾಮುಖಿಯಾಗಿ ಸಂಘರ್ಷವನ್ನು ಕಾಣುವಂತ ವಾತಾವರಣ ಉದ್ಭವಿಸುತ್ತಿರಲಿಲ್ಲ. ಆದರೆ ಹಾಗಾಗಗೊಡಲಿಲ್ಲ.

ಆದ್ದರಿಂದ ಹಿಂದೂ ಎಂದರೆ way of life ಅಂತ ಪರಿಗಣಿಸಲಿಲ್ಲ. ಅದನ್ನು ಧರ್ಮ ಎಂದು ಪರಿಗಣಿಸಿದ್ದರಿಂದ ಹಿಂದೂ,
ಹಿಂದುತ್ವವೆನ್ನುವುದು ಕೋಮುವಾದ ಆಗಿಬಿಡುತ್ತದೆ. ಇದು ವಿಚಿತ್ರವಾದ ಸಂಗತಿ! ಈ ಪರಿಯಲ್ಲಿ ವಾದಿಸುವವರು ಎಡಪಂಥೀ ಯರು. ಅವರಿಗೆ ಇವೆಲ್ಲಾ ಉತ್ತರಿಸಲಾಗದ ಸವಾಲು ಗಳಾಗಿಯೇ ಕಳೆದ ಏಳೆಂಟು ದಶಕಗಳಲ್ಲಿ ದೇಶವನ್ನಾಳಿದವರು ಪರಿಸ್ಥಿತಿ ಯನ್ನು ನಿಭಾಯಿಸಿದರು.

ಈಗ ಪರಿಸ್ಥಿತಿ ಬದಲಾಗಿದೆ. ಸತ್ಯವಾದುದು ಈಗ ಬಯಲಿಗೆ ಬಂದಿವೆ. ವಾಸ್ತವವನ್ನು ಮರೆಮಾಚಿ ಮಾತಾಡುವ ಭಾವುಕದ ಮಾತುಗಳು ಜನರನ್ನು ಗೆಲ್ಲಲಾರವು. ಪ್ರಾಮಾಣಿಕ ಬರೆಹದ ಇತಿಹಾಸ ಜನಸಾಮಾನ್ಯರಿಗೆ ಬೇಕಾಗಿವೆ. ಅವು ಸಿಗುತ್ತಲೂ ಇವೆ. ಮುಸುಕಿದ ಆವರಣ ಅನಾವರಣಗೊಂಡಿದೆ. ಮುಸುಕಿದ ಮುಸುಕು ಸರಿಯುತ್ತಿದೆ. ಯಾರೂ ಪ್ರಶ್ನಾತೀತರಲ್ಲ. ಯಾವುದೂ
ಪ್ರಶ್ನಾತೀತವಲ್ಲ!