Friday, 13th December 2024

ನ್ಯಾಯಾಂಗದ ತಳಹದಿಯನ್ನೇ ಅಣಕಿಸಿದ ಆದೇಶ

ವಿಶ್ಲೇಷಣೆ

ಪ್ರತಾಪ್‌ ಭಾನು ಮೆಹ್ತಾ, ರಾಜಕೀಯ ಚಿಂತಕ

ಸುಪ್ರೀಂಕೋರ್ಟ್ ಇತ್ತೀಚೆಗೆ ಫ್ಯಾಂಟಸಿ ಸಿನಿಮಾಗಳಲ್ಲಿ ತೋರಿಸುವ ಕೀಲು ಕಳಚಿದ ಚಿತ್ರ ವಿಚಿತ್ರ ಆಕಾರದ ಪ್ರಾಣಿಗಳಂತೆ ಕಾಣಿಸಿಕೊಳ್ಳತೊಡಗಿದೆ. ಇಲ್ಲಿ ಯಾವುದೂ ಮೇಲ್ನೋಟಕ್ಕೆ ಹೇಗೆ ಕಾಣಿಸುತ್ತದೆಯೋ ಹಾಗಿಲ್ಲ. ಇದರ ರೂಪಗಳು ನಿಗೂಢವಾಗಿ
ಬದಲಾಗುತ್ತಿವೆ. ಇಲ್ಲಿನ ದಯಾಪೂರ್ಣ ಮುಖದೊಳಗೆ ವಿಷದ ಹಾವಿನ ಹಲ್ಲುಗಳಿವೆ. ಅಗತ್ಯಕ್ಕೆ ತಕ್ಕಂತೆ ಅದರ ಆಕಾರಗಳೂ ಬದಲಾಗುತ್ತಿವೆ.

ಹೀಗಾಗಿ ಇದು ‘ಕಾಯಿದೆ ಕಾನೂನುಗಳ ಸಂವಿಧಾನ ಬದ್ಧತೆಯನ್ನು ನಿರ್ಧರಿಸದ ಸಂವಿಧಾನಾತ್ಮಕ ನ್ಯಾಯಾಲಯ’ ಎಂದು ಹೇಳಲಡ್ಡಿಯಿಲ್ಲ. ಈ ನ್ಯಾಯಾಲಯವೀಗ ಯಾವುದೇ ಕಾನೂನಿನ ಬಲವಿಲ್ಲದೆಯೂ ರಾಜಕೀಯ ಹಾಗೂ ಆಡಳಿತಾತ್ಮಕ ಕಾರ್ಯಗಳ ನಿರ್ವಹಣೆಗೆ ಇಳಿಯತೊಡಗಿದೆ. ಪ್ರಜಾಪ್ರಭುತ್ವದ ರಕ್ಷಕ ತಾನು ಎಂದು ಹೇಳಿಕೊಳ್ಳುತ್ತಲೇ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ.

ಆಗಾಗ ಇದು ಬಿಕ್ಕಟ್ಟು ಗಳನ್ನು ನಿವಾರಿಸುವ ಜವಾಬ್ದಾರಿ ತೆಗೆದುಕೊಂಡು, ಕೊನೆಗೆ ತಜ್ಞರ ಸಮಿತಿಯ ಹಿಂದೆ ಅಡಗಿ
ಬಿಡುತ್ತದೆ. ವಿಸ್ತಾರವಾದ ತಳಹದಿಯ ಕೆಲ ಬಿಕ್ಕಟ್ಟುಗಳನ್ನು ಇದು ತಾಂತ್ರಿಕ ಸಮಸ್ಯೆಯಂತೆ ನೋಡುತ್ತದೆ. ನಿಜವಾದ
ಪ್ರಜಾಸತಾತ್ಮಕ ಹೋರಾಟ ಗಳನ್ನು ಹತ್ತಿಕ್ಕಲು ಇದು ಕಪಟ ತಂತ್ರಗಳಿಗೆ ಶರಣಾಗುತ್ತದೆ. ತನ್ಮೂಲಕ ಹೋರಾಟಗಳ
ಕಾನೂನು ಬದ್ಧತೆಯನ್ನು ಹಾಗೂ ಪ್ರಾಮಾಣಿಕತೆಯನ್ನು ಕಡೆಗಣಿಸುತ್ತದೆ.

ಈ ನ್ಯಾಯಾಲಯ ಅನೇಕ ವಿಷಯಗಳಲ್ಲಿ ಸರಕಾರ ಏನೂ ಮಾಡುತ್ತಿಲ್ಲ ಎಂದು ತರಾಟೆ ತೆಗೆದುಕೊಳ್ಳುತ್ತದೆ. ಆದರೆ, ತಾನೇ
ಕಾಯಿದೆ ಕಾನೂನುಗಳ ಸಂವಿಧಾನಬದ್ಧತೆ ಯನ್ನು ನಿಷ್ಕರ್ಷಿಸಿ ಕಾಲಮಿತಿಯೊಳಗೆ ತೀರ್ಪು ನೀಡುವಲ್ಲಿ ಸೋಲುತ್ತದೆ.
ಮೇಲ್ನೋಟಕ್ಕೆ ಇದು ನಿರ್ಲಿಪ್ತ ಭಾಷೆಯಲ್ಲಿ ಮಾತನಾಡುತ್ತದೆ, ತಾನು ಹೋರಾಟ – ಹೊಡೆದಾಟ ಗಳಿಗಿಂತ ಮೇಲಿದ್ದೇನೆಂದು
ತೋರಿಸಿಕೊಳ್ಳುತ್ತದೆ. ಆದರೆ, ರಾಜಕೀಯದಲ್ಲಿ ನಡೆಯುವ ಸಾಮಾನ್ಯ ಕೊಡುಕೊಳ್ಳುವಿಕೆ ರೂಪದ ಪ್ರಜಾಸತ್ತಾತ್ಮಕ
ಚಟುವಟಿಕೆಗಳನ್ನು ದಾರಿ ತಪ್ಪಿಸುತ್ತದೆ.

ಕೇಂದ್ರ ಸರಕಾರದ ಕೃಷಿ ಕಾಯಿದೆಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದಂತೂ ಅತ್ಯಂತ ಕೆಟ್ಟ ಸಾಂವಿಧಾನಿಕ ಮೇಲ್ಪಂಕ್ತಿ ಯಲ್ಲದೆ ಮತ್ತೇನೂ ಅಲ್ಲ. ಇಲ್ಲಿ ನ್ಯಾಯ ನಿರ್ಣಯ ಕಾಣಿಸುತ್ತಿಲ್ಲ. ಇದರ ಹಿಂದೆ ಸಿನಿಕತೆಯ ವಾಸನೆ ಢಾಳಾಗಿ ಮೂಗಿಗೆ ಬಡಿಯುತ್ತಿದೆ. ಕೃಷಿ ಕಾಯಿದೆಗಳಿಗೆ ಸಂಬಂಧಿಸಿದ ಸಮಸ್ಯೆಗಳು ಬಹಳ ಸಂಕೀರ್ಣವಾಗಿವೆ. ನೀವು ಈ ವಿಷಯದಲ್ಲಿ ಯಾರ ಬದಿಗೆ
ಇದ್ದರೂ ಸರಿ, ಆದರೆ ಕಾಯಿದೆಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತನ್ನ ಜವಾಬ್ದಾರಿಯನ್ನು ನಿರ್ಧರಿಸಿಕೊಳ್ಳುತ್ತಿರುವ ಪರಿಯನ್ನು ನೋಡಿ ಆತಂಕಗೊಳ್ಳಲೇಬೇಕು.

ಕೃಷಿ ಕಾಯಿದೆಗಳ ಜಾರಿಯನ್ನು ಅಮಾನತಿನಲ್ಲಿರಿಸಿ, ರೈತರ ಸಮಸ್ಯೆಗಳನ್ನು ಆಲಿಸಲು ಸಮಿತಿಯೊಂದನ್ನು ಸುಪ್ರೀಂ ಕೋರ್ಟ್ ರಚಿಸಿದೆ. ಆದರೆ, ಕಾಯಿದೆಗಳನ್ನು ನ್ಯಾಯಪೀಠ ಯಾವ ಕಾನೂನಿನ ಆಧಾರದ ಮೇಲೆ ಅಮಾನತಿನಲ್ಲಿರಿಸಿದೆ ಎಂಬುದು ಮಾತ್ರ ಸ್ಪಷ್ಟವಿಲ್ಲ. ಮೊದಲನೆಯದಾಗಿ ಸುಪ್ರೀಂ ಕೋರ್ಟ್‌ನ ಈ ನಿರ್ಧಾರ ಅಧಿಕಾರ ಹಂಚಿಕೆಯ ಉಲ್ಲಂಘನೆ. ಹಾಗೆಯೇ, ದೊಡ್ಡ ದೊಡ್ಡ ಸಮಸ್ಯೆಗಳನ್ನು ತಾಂತ್ರಿಕ ಅಥವಾ ಕಾನೂನಿನ ಮಾರ್ಗದಲ್ಲಿ ಬಗೆಹರಿಸಬಹುದು ಎಂಬ ಹುಸಿ ಭ್ರಮೆಯನ್ನೂ ಇದು ಹುಟ್ಟಿಸುತ್ತಿದೆ. ರಾಜಕೀಯ ಸಂಘರ್ಷವೊಂದರಲ್ಲಿ ಮಧ್ಯಸ್ಥಿಕೆ ವಹಿಸುವುದು ಕೋರ್ಟ್‌ನ ಕೆಲಸವಲ್ಲ.

ಯಾವುದು ಅಸಾಂವಿಧಾನಿಕವೋ ಅಥವಾ ಯಾವುದು ಅಕ್ರಮವೋ ಅದನ್ನು ನಿರ್ಧರಿಸುವುದು ಕೋರ್ಟ್‌ನ ಕೆಲಸ.
ಕಾನೂನುಗಳನ್ನು ಅಮಾನತಿನಲ್ಲಿಡು ವುದೇ ಆದರೆ ಮೇಲ್ನೋಟಕ್ಕೆ ಕೆಲವಾದರೂ ಲೋಪ ಗಳಾಗಿರುವುದು ಕಾಣಿಸುತ್ತಿರಬೇಕು. ಆದರೆ, ಆ ವಿಷಯದ ಮೇಲೆ ವಿಚಾರಣೆ ನಡೆಸಿ, ನಂತರ ತಡೆ ನೀಡುವುದರ ಬದಲು ಸುಪ್ರೀಂಕೋರ್ಟ್ ರೈತರ ದುಮ್ಮಾನಗಳನ್ನು ಆಲಿಸಲು ಫಟಾಫಟ್ ತಜ್ಞರ ಸಮಿತಿಯೊಂದನ್ನು ರಚಿಸುವ ನಿರ್ಧಾರ ಕೈಗೊಂಡು ರಾಜಕೀಯದ ಗಡಿಯೊಳಗೆ ನುಸುಳಿ ಬಿಟ್ಟಿದೆ.

ಇದಕ್ಕೂ ಮುನ್ನ ಈ ಕಾಯಿದೆಗಳಿಂದ ಒಕ್ಕೂಟ ವ್ಯವಸ್ಥೆಗೆ ಉಂಟಾಗಬಹುದಾಗಿದ್ದ ಧಕ್ಕೆ ಅಥವಾ ದೂರು ಆಲಿಸಲು ಇರುವ
ವ್ಯವಸ್ಥೆಯನ್ನು ರದ್ದುಪಡಿಸಿದ್ದರಿಂದ ಆಗಬಹುದಾದ ಸಮಸ್ಯೆಗಳ ಬಗ್ಗೆ ವಿಚಾರಣೆ ನಡೆಸಿ, ನಂತರ ತಡೆ ನೀಡಿದ್ದರೆ ಅದಕ್ಕಾದರೂ ಒಂದು ಅರ್ಥವಿರುತ್ತಿತ್ತು. ಆದರೆ ಸುಪ್ರೀಂ ಕೋರ್ಟ್ ಅಂತಹ ಯಾವುದೇ ದಾರಿಗಳತ್ತ ಕಣ್ಣು ಕೂಡ
ಹಾಯಿಸಲಿಲ್ಲ. ಕೃಷಿ ಕ್ಷೇತ್ರದ ಆಗುಹೋಗುಗಳನ್ನು ನಿರ್ಧರಿಸುವ ಚೌಕಟ್ಟಿಗೆ ದೊಡ್ಡ ಪ್ರಮಾಣದಲ್ಲಿ ಸುಧಾರಣೆ ತರುವ ಅಗತ್ಯವಿದೆ.

ರೈತರ ಆದಾಯ ಹೆಚ್ಚಿಸುವುದು, ಅವರ ಬದುಕನ್ನು ಸುಧಾರಿಸುವುದು, ಬೆಳೆ ವೈವಿಧ್ಯಗಳನ್ನು ಹೆಚ್ಚಿಸು ವುದು, ಕೃಷಿಯನ್ನು
ಹೆಚ್ಚು ಸುಸ್ಥಿರವಾಗಿಸುವುದು, ಸಬ್ಸಿಡಿ ಗಳಿಂದ ಉತ್ಪಾದಕತೆ ಕಡಿಮೆಯಾಗದಂತೆ ನೋಡಿಕೊಳ್ಳು ವುದು, ಆಹಾರ ದುಬ್ಬರ
ವನ್ನು ನಿಯಂತ್ರಣ ದಲ್ಲಿಡುವುದು ಹಾಗೂ ಎಲ್ಲರಿಗೂ ಪೌಷ್ಟಿಕಾಂಶಗಳು ಲಭಿಸುವಂತೆ ನೋಡಿಕೊಳ್ಳುವುದು, ಇವೇ ಮೊದಲಾದ ಉಪಕ್ರಮಗಳು ಕೃಷಿ ಸುಧಾರಣೆಯ ಉದ್ದೇಶವಾಗಿರಬೇಕು. ಈ ಉದ್ದೇಶ ಗಳನ್ನೆಲ್ಲ ಈಡೇರಿಸುವುದು ಸುಲಭವಲ್ಲ. ಅದರಲ್ಲೂ ಪಂಜಾಬ್‌ನಂಥ ರಾಜ್ಯಗಳಲ್ಲಿ ಇದು ಬಹಳ ಕಷ್ಟ.

ಕೃಷಿಯಲ್ಲಿ ಹೊಸ ವ್ಯವಸ್ಥೆಯೊಂದನ್ನು ಹುಟ್ಟುಹಾಕುವುದಕ್ಕೆ ಅಸಾಧಾರಣ ವಿಶ್ವಾಸ ಹಾಗೂ ನಂಬಿಕೆ ಬೇಕಾಗುತ್ತದೆ. ಕೃಷಿ ಕ್ಷೇತ್ರದಲ್ಲಿ ಸುಧಾರಣೆಗಳ ಅಗತ್ಯವಿದೆ ಎಂದು ಸರಕಾರ ಯೋಚಿಸಿದ್ದು ಸರಿಯಾಗಿಯೇ ಇತ್ತು. ಆದರೆ, ಅದು ‘ವ್ಯಾಪಾರಿಗಳನ್ನು ರೈತರೇ ಆಯ್ಕೆ ಮಾಡಿಕೊಳ್ಳುವುದು’ ಮುಂತಾದ ಖೊಟ್ಟಿ ಭರವಸೆಗಳ ಮೂಲಕ ಆರಂಭದಲ್ಲೇ ತಪ್ಪು ಸುಧಾರಣಾ ಕ್ರಮಗಳನ್ನು ಕೈಗೊಂಡುಬಿಟ್ಟಿತು.

ಇದರಿಂದ ರೈತರು ಸದ್ಯ ಎದುರಿಸುತ್ತಿರುವ ಯಾವುದೇ ಸಮಸ್ಯೆಯೂ ಬಗೆಹರಿಯಲಿಲ್ಲ, ಬದಲಿಗೆ ಅವರ ಸುತ್ತ ಮತ್ತಷ್ಟು ಅನಿಶ್ಚಯತೆಗಳು ಸೃಷ್ಟಿಯಾದವು. ಇನ್ನೊಂದೆಡೆ, ಕೃಷಿ ಕಾಯಿದೆಗಳ ಬಗ್ಗೆ ರೈತರು ವ್ಯಕ್ತಪಡಿಸಿದ ಪ್ರಾಮಾಣಿಕ ಕಳಕಳಿಗಳಿಗೆ ಉತ್ತರ ನೀಡದಿರುವುದರ ಮೂಲಕ ಸರಕಾರ ಅವರ ವಿಶ್ವಾಸಾರ್ಹತೆ ಯನ್ನೇ ಅನುಮಾನಾಸ್ಪದವಾಗಿ ನೋಡುತ್ತಿದೆ. ರೈತರಿಗೆ ಪ್ರತಿಭಟನೆ ನಡೆಸುವ ಎಲ್ಲ ಹಕ್ಕೂ ಇದೆ.

ಅವರು ಮಾಡುತ್ತಿರುವುದು ಕಾನೂನಿಗೆ ವಿರುದ್ಧವಾದುದಲ್ಲ. ತಮ್ಮನ್ನು ದೇಶದ್ರೋಹಿಗಳು ಎಂಬಂತೆ ಬಿಂಬಿಸಲು ಸರಕಾರ
ಸಾಕಷ್ಟು ಪ್ರಯತ್ನಿಸುತ್ತಿದ್ದರೂ ರೈತರು ಸಾವಧಾನದಿಂದಲೇ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಸರಕಾರ ಮತ್ತು ರೈತರ ಮಧ್ಯೆ ಸಂಪರ್ಕದ ಕೊರತೆಯ ರೂಪದಲ್ಲಿ ಬಿಕ್ಕಟ್ಟೊಂದು ತಲೆದೋರಿತ್ತು. ತಾತ್ವಿಕವಾಗಿ ನೋಡುವುದಾದರೆ, ಯಾವುದೇ ಬಿಕ್ಕಟ್ಟು ಉದ್ಭವಿಸಿದಾಗ ಅದನ್ನು ಪರಿಹರಿಸಲು ಕೈಗೊಳ್ಳುವ ಯಾವುದೇ ರೀತಿಯ ಮಧ್ಯಸ್ಥಿಕೆಯೂ ಸ್ವಾಗತಾರ್ಹವೇ ಆಗುತ್ತದೆ. ಆದರೆ, ಈ ಮಧ್ಯಸ್ಥಿಕೆಯು ಸರಕಾರ ಮತ್ತು ಜನರ ನಡುವಿನ ರಾಜಕೀಯ ಪ್ರಕ್ರಿಯೆಯಾಗಿರ ಬೇಕಾಗುತ್ತದೆ.

ಇದರಲ್ಲಿ ಅಸಾಂವಿಧಾನಿಕವಾದದ್ದು ಏನೂ ಇಲ್ಲ ಎಂದಾದರೆ ಸಂಸತ್ತು ತಾನೇನು ತಪ್ಪು ಮಾಡಿದ್ದೇನೋ ಅದನ್ನು ಸರಿಪಡಿಸ ಬೇಕಾಗುತ್ತದೆ. ಸುಪ್ರೀಂಕೋರ್ಟ್ ತಪ್ಪು ಮಾಡಿದ್ದೇ ಇಲ್ಲಿ. ಇದು ಅಪಾಯಕಾರಿ ತಪ್ಪು. ಸಂಸತ್ತು ಸಂವಿಧಾನಬದ್ಧವಾಗಿ ಅಂಗೀ ಕರಿಸಿದ ಕಾಯಿದೆಗಳಲ್ಲಿ ಸಮಸ್ಯೆ ಏನಿದೆ ಎಂಬುದರ ಬಗ್ಗೆ ಸರಿಯಾದ ವಿಚಾರಣೆಯನ್ನು ಕೂಡ ನಡೆಸದೆ ಕಾಯಿದೆಗಳ ಜಾರಿಗೆ ತಡೆ ನೀಡುವ ಮೂಲಕ ಅದು ಹೊಸ ಮೇಲ್ಪಂಕ್ತಿಯೊಂದನ್ನು ಹಾಕಿಕೊಟ್ಟಿದೆ. ಹೀಗಾಗಿ ಮುಂದೆ ನಡೆಯಬಹುದಾಗಿದ್ದ ಎಲ್ಲಾ ನ್ಯಾಯಾಂಗ ಚಟುವಟಿಕೆಗಳ ಮೇಲೂ ಅದು ಕೆಸರು ಎರಚಿದೆ. ಬೇರೆ ಬೇರೆ ವಕೀಲರ ವಾದ ಏನಿತ್ತು, ಕೃಷಿ ಕಾಯಿದೆಗಳ ವಿಷಯದಲ್ಲಿ ಆಲಿಸಬೇಕಾಗಿದ್ದ ವಾದವೇನು ಹಾಗೂ ಕೋರ್ಟ್‌ನಿಂದ ಅವುಗಳಿಗೆ ಏನು ಸಮಾಧಾನ ನೀಡಬಹುದು ಎಂಬೆಲ್ಲಾ ಸಾಧ್ಯತೆಗಳನ್ನೂ ಈ ಅವಸರದ ತಡೆಯಾಜ್ಞೆ ಮೂಲಕ ಅದು ಅಳಿಸಿಹಾಕಿದೆ.

ಕೊನೆಯ ಪಕ್ಷ ಆದೇಶ ನೀಡುವುದಕ್ಕಿಂತ ಮೊದಲು ರೈತರ ಸಂಘಟನೆಗಳನ್ನು ಪ್ರತಿನಿಧಿಸುವ ವಕೀಲರ ವಾದವನ್ನು ಕೂಡ ಅದು ಆಲಿಸಿಲ್ಲ. ಸರಕಾರದ ತಪ್ಪುಗಳನ್ನು ಸರಿಪಡಿಸ ಬೇಕಾದ ಜವಾಬ್ದಾರಿ ತನ್ನ ಮೇಲಿದೆ ಎಂದು ಹೇಳಿಕೊಳ್ಳುವ ನ್ಯಾಯಾಲಯವೇ ಹೀಗೆ ಮಾಡುವುದು ದೊಡ್ಡ ಚೋದ್ಯವೇ ಸರಿ. ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಯಲ್ಲ. ಇದು ಸ್ಟೆರಾಯ್ಡ್ ‌ಗಳನ್ನು ಸೇವಿಸಿ ನಡೆಸುವಂಥ ಹುಚ್ಚಾಟ. ಬಹುಶಃ ಕೋರ್ಟ್‌ನ ಉದ್ದೇಶ ಇದಲ್ಲದೆ ಇರಬಹುದು.

ಆದರೂ ಅದು ಸಾಮಾಜಿಕ ಚಳವಳಿಯೊಂದರ ಓಘವನ್ನು ಕೆಡಿಸುವ ಕೆಲಸ ಮಾಡಿರುವುದು ನಿಜ. ಸರಕಾರ ಸರಿಯೋ ಅಥವಾ ರೈತರು ಸರಿಯೋ ಎಂಬುದರ ಬಗ್ಗೆ ನೀವು ನಿಮ್ಮದೇ ಅಭಿಪ್ರಾಯ ಹೊಂದಿರಬಹುದು. ಆದರೆ, ಎಲ್ಲಿಯವರೆಗೆ ಇದರಲ್ಲಿ ಅಸಾಂವಿಧಾನಿಕತೆ ಇಲ್ಲವೋ ಅಲ್ಲಿಯವರೆಗೆ ಯಾರು ಸರಿ ಎಂಬುದನ್ನು ನಿರ್ಧರಿಸಬೇಕಿರುವುದು ಜನರು ಮತ್ತು ರಾಜಕೀಯ ವ್ಯವಸ್ಥೆ. ರಾಜಕೀಯ ಚಳವಳಿಗಳಿಗೆ ಒಗ್ಗಟ್ಟು ಬೇಕು. ಸರಿಯಾದ ಸಮಯ ನೋಡಿಕೊಂಡು ಅದನ್ನು ಆರಂಭಿಸಬೇಕು.

ಅಂತಹ ಚಳವಳಿಗಳನ್ನು ಸಂಘಟಿಸುವುದು ಸುಲಭವಲ್ಲ. ರೈತರ ಪ್ರತಿಭಟನೆಯ ಕಾವು ದಿನೇ ದಿನೇ ಹೆಚ್ಚುತ್ತಿರುವುದರಿಂದ ಇಕ್ಕಟ್ಟಿಗೆ ಸಿಲುಕಿದ್ದ ಸರಕಾರವನ್ನು ಪಾರು ಮಾಡುವುದಕ್ಕೆಂದೇ ಸರಿಯಾದ ಸಮಯಕ್ಕೆ ಸುಪ್ರೀಂಕೋಟ್ ನ ಆದೇಶ ಹೊರಬಿ ದ್ದಿದೆ ಎಂಬಂತೆ ಮೇಲ್ನೋಟಕ್ಕೆ ಕಾಣಿಸುತ್ತಿರುವುದರಲ್ಲಿ ಎರಡು ಮಾತೇ ಇಲ್ಲ. ಸಮಿತಿ ರಚಿಸುವುದರ ಮೂಲಕ ನ್ಯಾಯಾ ಲಯವು ಪ್ರತಿಭಟನೆ ನಿಲ್ಲಿಸಿ ಸಮಿತಿಯ ಮುಂದೆ ಅಹವಾಲು ಸಲ್ಲಿಸುವ ಅನಿವಾರ್ಯತೆ ಯನ್ನು ರೈತರಿಗೆ ಸೃಷ್ಟಿಸಿದೆ. ರೈತರು ಹಾಗೆ ಮಾಡದಿದ್ದರೆ ಅವರದೇ ತಪ್ಪು ಎಂಬಂತೆ ಬಿಂಬಿತವಾಗುತ್ತದೆ.

ಇದಕ್ಕೆ ಸಂಬಂಧಿಸಿದಂತೆ ಇನ್ನೊಂದು ಅರ್ಜಿಯೂ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಕೆ ಯಾಗಿತ್ತು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ
ಯಾವ ರೀತಿಯ ಪ್ರತಿಭಟನೆಗಳು ನಡೆಯಲು ಬಿಡಬಹುದು ಎಂಬ ಬಗ್ಗೆ ಅದರಲ್ಲಿ ಪ್ರಶ್ನಿಸಲಾಗಿತ್ತು. ಅದರ ವಿಚಾರಣೆಯ
ವೇಳೆ ಕೇಂದ್ರ ಸರಕಾರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಅವರು ರೈತರ ಪ್ರತಿಭಟನೆಯು ಖಾಲಿಸ್ತಾನ್ ಚಳವಳಿಯ ಒಂದು ಅಂಗವಾಗಿರಬಹುದು ಅಥವಾ ಇದರಿಂದ ಖಾಲಿಸ್ತಾನ್ ಚಳವಳಿಗೆ ಪ್ರೋತ್ಸಾಹ ಸಿಗಬಹುದು ಅಂದರು.

ಅದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ತನಗೆ ತಾನೇ ರಾಷ್ಟ್ರೀಯ ಭದ್ರತೆಯ ಮಧ್ಯಸ್ಥಿಕೆದಾರನ ಸ್ಥಾನವನ್ನೂ
ಕೊಟ್ಟುಕೊಂಡಿತು. ಇದು ಪ್ರತಿಭಟನೆಯನ್ನು ಅಡ್ಡದಾರಿಯಲ್ಲಿ ಕಾನೂನಿಗೆ ವಿರುದ್ಧ ವಾಗಿಸುವ ಪ್ರಕ್ರಿಯೆ. ಪ್ರತಿಭಟನೆ
ನಡೆಸುತ್ತಿರುವುದೇ ಅಕ್ರಮ ಎಂದು ಮುಂದೊಂದು ದಿನ ಹೇಳುವುದಕ್ಕೆ ವೇದಿಕೆ ಸಿದ್ಧಮಾಡಿಕೊಳ್ಳುತ್ತಿರುವಂತೆ ಕಾಣಿಸುತ್ತಿದೆ.
ಇನ್ನು, ಮಧ್ಯಸ್ಥಿಕೆಯ ಪಾತ್ರವನ್ನೇ ಮರು ವ್ಯಾಖ್ಯಾನಿಸುವ ಮೂಲಕ ಮತ್ತೊಂದು ಕಪಟ ಹೆಜ್ಜೆಯನ್ನು ಕೂಡ ಸುಪ್ರೀಂ
ಕೋರ್ಟ್ ಇರಿಸಿದಂತೆ ಕಾಣಿಸುತ್ತಿದೆ. ಸುಪ್ರೀಂ ಕೋರ್ಟ್ ನೇಮಿಸಿರುವ ತಜ್ಞರ ಸಮಿತಿಯ ಕೆಲಸ ಸರಕಾರ ಮತ್ತು ರೈತರ
ಮಧ್ಯೆ ಮಧ್ಯಸ್ಥಿಕೆ ನಡೆಸುವುದೇ ಆಗಿದ್ದರೆ ಕೋರ್ಟ್ ಇಲ್ಲಿ ಮಧ್ಯಸ್ಥಿಕೆಯ ಮೊದಲ ನಿಯಮವನ್ನೇ ಉಲ್ಲಂಘಿಸಿದೆ.

ಅದೇನು? ಯಾವುದೇ ವಿಷಯದಲ್ಲಿ ನೇಮಕಗೊಳ್ಳುವ ಮಧ್ಯಸ್ಥಿಕೆದಾರರು ಆ ವಿಷಯದಲ್ಲಿ ಭಿನ್ನಮತ ಹೊಂದಿರುವ ಎಲ್ಲಾ ಪಕ್ಷಗಾರರಿಗೂ ಸ್ವೀಕಾರಾರ್ಹ ವಾಗಿರಬೇಕು. ಎಲ್ಲಾ ಪಕ್ಷಗಾರರ ಅಭಿಪ್ರಾಯ ಕೇಳಿಯೇ ಮಧ್ಯಸ್ಥಿಕೆದಾರರನ್ನು ನೇಮಿಸಬೇಕು. ಅದರ ಬದಲಿಗೆ ಇಲ್ಲಿ ನೇಮಕ ಮಾಡಿರುವ ಸಮಿತಿಯ ಕೆಲಸ ವಾಸ್ತವಾಂಶಗಳನ್ನು ಸಂಗ್ರಹಿಸುವುದು ಮಾತ್ರ ಆಗಿದ್ದರೆ ಅದನ್ನು ನ್ಯಾಯಾಲಯವೇ ಮುಕ್ತ ವಿಚಾರಣೆಯಲ್ಲಿ ಎಲ್ಲರ ಅಹವಾಲು ಆಲಿಸುವ ಮೂಲಕ ಮಾಡಬಹುದಿತ್ತಲ್ಲ? ರೈತರಿಗೆ ನ್ಯಾಯಾಲಯ ತಂದೆಯಂತೆ ವರ್ತಿಸುವ ಅಗತ್ಯವಿಲ್ಲ. ಆದರೆ, ನ್ಯಾಯಾಲಯ ರೈತರನ್ನು ಮಕ್ಕಳಂತೆ ಪರಿಗಣಿಸಿ, ಅವರನ್ನು ಅವರಿಂದಲೇ ರಕ್ಷಿಸುವ ಕೆಲಸ ಮಾಡುತ್ತಿದೆ.

ಇದು ರೈತರಿಗೆ ಬೇಕಿಲ್ಲ. ಅದರ ಬದಲು ಅವರಿಗೆ ಬೇಕಿರುವುದು ಕಾಯಿದೆಯಲ್ಲಿ ಸ್ಪಷ್ಟತೆ. ಎಲ್ಲೆಲ್ಲಿ ಅವರಿಗೆ ಆತಂಕವಿದೆಯೋ ಅಲ್ಲೆಲ್ಲ ಅವರ ಆತಂಕವನ್ನು ನಿವಾರಿಸುವ ಕೆಲಸವಾಗಬೇಕಿದೆ. ರಾಜಕೀಯ ವ್ಯವಸ್ಥೆ ಹಾಗೂ ನಾಗರಿಕ ಸಮಾಜ ರೈತರ ಬೇಡಿಕೆಗಳನ್ನು ಆಲಿಸಬೇಕಿದೆ. ಇದನ್ನೊಂದು ಹಕ್ಕಿನಂತೆ ರೈತರು ಕೇಳುತ್ತಿದ್ದಾರೆ. ಆದರೆ, ತುಂಬಾ ಜಾಣನಂತೆ ವರ್ತಿಸಲು ಹೋಗಿ ಕೋರ್ಟ್ ಸೋಟಕ ಸಂದರ್ಭವೊಂದನ್ನು ಸೃಷ್ಟಿಸಿದೆ.

ಸರಿಯಾದ ಕಾನೂನಾತ್ಮಕ ತಳಹದಿಯೇ ಇಲ್ಲದೆ ಕಾಯಿದೆಯೊಂದರ ಜಾರಿಯನ್ನು ತಾನು ತಡೆಯಬಹುದು ಎಂಬ ಕೆಟ್ಟ ಮೇಲ್ಪಂಕ್ತಿಯನ್ನು ಅದು ಹಾಕಿಕೊಟ್ಟಿದೆ. ತನ್ನ ಉದ್ದೇಶದ ಬಗ್ಗೆಯೇ ರೈತರಲ್ಲಿ ಅಪನಂಬಿಕೆ ಹುಟ್ಟುವಂತೆ ಮಾಡಿದೆ. ಸುಪ್ರೀಂ ಕೋರ್ಟ್‌ನ ಆದೇಶ ಮೇಲ್ನೋಟಕ್ಕೆ ಸರಕಾರಕ್ಕೆ ಭಾರಿ ಹಿನ್ನಡೆ ಉಂಟುಮಾಡಿದೆ ಎಂಬಂತೆ ಕಾಣಬಹುದು. ಆದರೆ ಇದು ‘ಜೈಲಿನಿಂದ ಹೊರನಡಿ’ ಎಂದು ಅಬ್ಬರಿಸಿದಂತೆ. ಬೈಸಿಕೊಂಡು ಹೊರಹೋದರೂ ಲಾಭ ಕೈದಿಗೇ ಅಲ್ಲವೇ?  ಚಳವಳಿಯೊಂದ ರಿಂದ ಉಂಟಾಗಬಹುದಾಗಿದ್ದ ರಾಜಕೀಯ ಹಿನ್ನಡೆಯಿಂದ ಸರಕಾರವನ್ನು ಅದು ಪಾರುಮಾಡಿದೆ.

ಕೋರ್ಟ್ ಯಾವಾಗಲೂ ಶ್ವಾಸದ ಗಣಿ ಯಾಗಿರಬೇಕು. ಆದರೆ, ಈ ಆದೇಶದ ಮೂಲಕ ಆ ಸ್ಥಾನವನ್ನೇ ಕಳೆದುಕೊಂಡಿದೆ.