Friday, 13th December 2024

ಬೂದಿಯಿಂದ ಮೇಲೆದ್ದು ಬೆಟ್ಟವೇರಿದ ನಾಯಕ

ಮೂರ್ತಿಪೂಜೆ

ಈ ಘಟನೆ ನಡೆದಿದ್ದು ಹೈದರಾಬಾದ್ ನಿಜಾಮನ ಕಾಲದಲ್ಲಿ. ಆ ಹೊತ್ತು ದೇಶಕ್ಕೆ ಸ್ವಾತಂತ್ರ್ಯ ದೊರೆತರೂ, ‘ಭಾರತದ ಒಕ್ಕೂಟದಲ್ಲಿ  ವಿಲೀನವಾಗಲು ನಾವು ಸಿದ್ಧವಿಲ್ಲ’ ಎಂದು ಹೈದರಾಬಾದ್ ನಿಜಾಮ ಮಿರ್ ಉಸ್ಮಾನ್ ಅಲಿಖಾನ್ ತಕರಾರು ತೆಗೆದಿದ್ದ.

ಆ ಕಾಲದಲ್ಲಿ ತೆಲಂಗಾಣದ , ಮರಾಠವಾಡದ 5, ಕರ್ನಾಟಕದ 3ಜಿಗಳು ಮತ್ತು ಬೀದರ್ ಜಿಯ ಕೆಲ ಪ್ರದೇಶಗಳು ಹೈದರಾಬಾದ್ ಸಂಸ್ಥಾನಕ್ಕೆ ಸೇರಿದ್ದವು. ಯಾವಾಗ ನಿಜಾಮ ತಕರಾರು ತೆಗೆದನೋ ಅಗ ಜನ ಸಿಡಿದೆದ್ದರು. ಸ್ವಾಮಿ ರಮಾನಂದ ತೀರ್ಥರ ನೇತೃತ್ವದಲ್ಲಿ ಕರ್ನಾಟಕದ ಜಿಲ್ಲೆಗಳ ಜನ ಹೋರಾಟಕ್ಕಿಳಿದರು. ಹೀಗೆ ತನ್ನ ವಿರುದ್ಧ ಬಂಡೆದ್ದವರನ್ನು ಹತ್ತಿಕ್ಕಲು ಮುಂದಾದ ನಿಜಾಮ ಇದಕ್ಕಾಗಿ ತನ್ನ ಬಳಿಯಿದ್ದ ರಜಾಕಾರರ ಪಡೆಯನ್ನು ಬಳಸಿದ.

ದಂಗೆಯೆದ್ದ ಜನರನ್ನು ಈ ಪಡೆಯು ಸಿಕ್ಕ ಸಿಕ್ಕಲ್ಲಿ ಹತ್ಯೆಮಾಡಿತು. ಕೊಲೆ, ಸುಲಿಗೆ, ಮಾನಭಂಗ ಅನುದಿನದ ಮಾತಾಯಿತು. ಇಂಥ ದಿನಗಳ ಬೀದರ್ ಜಿಲ್ಲೆ, ಹುಮ್ನಾಬಾದ್ ತಾಲೂಕಿನ ವರವಟ್ಟಿ ಎಂಬ ಗ್ರಾಮಕ್ಕೆ ಲಗ್ಗೆ ಹಾಕಿದ ರಜಾಕಾರರ ಪಡೆ ಕೈಗೆ ಸಿಕ್ಕವರನ್ನೆಲ್ಲ ಕೊಚ್ಚಿಹಾಕಿತು. ಈ ವೇಳೆ ಅದು ಗುಡಿಸಲೊಂದಕ್ಕೆ ಇಟ್ಟ ಬೆಂಕಿಯಿಂದ ಅಲ್ಲಿದ್ದ ತಾಯಿ- ಮಕ್ಕಳು ಸುಟ್ಟು ಬೂದಿಯಾದರು. ಈ ಘಟನೆ ನಡೆದಾಗ ಬೇರೆ ಊರಿಗೆ ಹೋಗಿದ್ದ ಮನೆಯ ಯಜಮಾನ ಮಾಪಣ್ಣ ವಾಪಸ್ ಬಂದು ನೋಡಿದರೆ ಅನಿದೆ? ಕೈಹಿಡಿದ ಪತ್ನಿ, ಮಕ್ಕಳ ಸಮೇತ ಸಜೀವ ದಹನವಾಗಿದ್ದಾರೆ.

ಅದನ್ನು ನೋಡಿದ್ದೇ ತಡ ಕುಸಿದು ಮಣ್ಣಲ್ಲಿ ಹೊರಳಾಡುವ ಮಾಪಣ್ಣ, ಹೃದಯವಿದ್ರಾವಕವಾಗಿ ರೋದಿಸುತ್ತಾರೆ. ಒಂದಿಡೀ ಕುಟುಂಬವೇ ನಾಶವಾದ ಮೇಲೆ ಮಾಡುವುದಿನ್ನೇನು ಎಂಬ ನೋವಲ್ಲಿರುವಾಗ ದೂರದ ಮರವೊಂದಕ್ಕೆ ಕಟ್ಟಿದ ಜೋಲಿ ಅವರಿಗೆ ಕಾಣುತ್ತದೆ. ನಿಟ್ಟಿಸಿ ನೋಡಿದಾಗ, ಅದರಿಂದ ಹೊರಚಾಚಿರುವ ಪುಟಾಣಿ ಕಾಲುಗಳು ಕಾಣುತ್ತವೆ. ನೋವಿನಲ್ಲೂ ಧಡಬಡಿಸಿ ಮೇಲೆದ್ದ ಮಾಪಣ್ಣ ಜೋಲಿಯ ಬಳಿ ಹೋಗಿ ಮೊಣಕೈಗಳಿಂದ ಅದನ್ನಗಲಿಸಿ ನೋಡಿದಾಗ ಅದರಲ್ಲಿ ಮಲಗಿರು ವುದು ತಮ್ಮ ಮಗನೆಂದು ಗೊತ್ತಾಗುತ್ತದೆ.

ಪತ್ನಿಯ ಜತೆ ಉಳಿದೆಲ್ಲ ಮಕ್ಕಳು ಸುಟ್ಟು ಬೂದಿಯಾಗಿದ್ದರೆ, ಜೋಲಿಯಲ್ಲಿ ಮಲಗಿಸಿದ ಕಾರಣಕ್ಕಾಗಿ ಈ ಪುಟ್ಟಮಗು ಉಳಿದಿತ್ತು. ತಕ್ಷಣವೇ ಅದನ್ನೆತ್ತಿಕೊಂಡು ಅಲ್ಲಿಂದ ಓಡುತ್ತಾರೆ ಮಾಪಣ್ಣ. ಇದಾದ ಕೆಲದಿನಗಳ ಸರ್ದಾರ್ ವಲ್ಲಭಬಾಯ್
ಪಟೇಲರು, ವಿಲೀನಕ್ಕೆ ತಕರಾರೆತ್ತಿದ್ದ ನಿಜಾಮನ ಮೇಲೆ ಮುಗಿ ಬಿದ್ದು, ಭಾರತೀಯ ಸೈನ್ಯವನ್ನು ನುಗ್ಗಿಸಿ ಹೈದರಾಬಾದ್
ಸಂಸ್ಥಾನವನ್ನು ಭಾರತ ಒಕ್ಕೂಟಕ್ಕೆ ಸೇರಿಸಿಕೊಳ್ಳುತ್ತಾರೆ. ಈ ಮಧ್ಯೆ, ಮಗುವನ್ನೆತ್ತಿಕೊಂಡು ವರವಟ್ಟಿ ಗ್ರಾಮ ತೊರೆದಿದ್ದ
ಮಾಪಣ್ಣ ಗುಲ್ಬರ್ಗಕ್ಕೆ ಬರುತ್ತಾರೆ. ಅಲ್ಲಿ ಎಂ.ಎಸ್.ಕೆ. ಮಿಲ್ ನಲ್ಲಿ ಕಾರ್ಮಿಕರಾಗಿ ದುಡಿದು ಮಗುವನ್ನು ಸಾಕುತ್ತಾರೆ.

ಮುಂದೆ ಆ ಮಗು, ಅದೇ ಎಂ.ಎಸ್.ಕೆ. ಮಿಲ್‌ನ ಕಾರ್ಮಿಕ ಮುಖಂಡನಾಗಿ, ಶಾಸಕನಾಗಿ, ಮಂತ್ರಿಯಾಗಿ, ಕೇಂದ್ರ ರೇಲ್ವೆ
ಸಚಿವನಾಗಿ, ಲೋಕಸಭೆ, ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕನಾಗುವ ಮಟ್ಟಕ್ಕೆ ಬೆಳೆಯುತ್ತದೆ. ಅಂದಹಾಗೆ, ಈ ಮಗುವಿನ ಹೆಸರು- ಎಂ. ಮಲ್ಲಿಕಾರ್ಜುನ ಖರ್ಗೆ.  ಇಂಥ ದಾರುಣ ಹಿನ್ನೆಲೆಯ ಖರ್ಗೆ ಜನಾಂಗ ದ್ವೇಷಿಯಾಗುವುದು ಸುಲಭವಾಗಿತ್ತು. ಆದರೆ ೫೦ ವರ್ಷಗಳ ಸುದೀರ್ಘ ಸಂಸದೀಯ ಬದುಕಿನಲ್ಲಿ ಅವರು ಘನತೆಯಿಂದಲೇ ನಡೆದಿದ್ದಾರೆ.

ಮತ್ತೀಗ ಕಾಂಗ್ರೆಸ್‌ನ ಅಧ್ಯಕ್ಷ ಗಾದಿಯ ಸನಿಹ ಬಂದು ನಿಂತಿದ್ದಾರೆ. ಇದು ಪ್ರಜಾತಂತ್ರದ ಅದ್ಭುತ ಎಂದರೆ ಅತಿಶಯೋಕ್ತಿ  ಯಲ್ಲ. ನಿಜಾರ್ಥದಲ್ಲಿ ಅವರು ಬೂದಿಯಿಂದ ಮೇಲೆದ್ದು ಬೆಟ್ಟವೇರಿದ ನಾಯಕ. 1972ರಲ್ಲಿ ಶಾಸನಸಭೆ ಪ್ರವೇಶಿಸಿದ ಖರ್ಗೆಯವರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗುವ ಆಸೆ ಇದ್ದುದು ಸಹಜ. 2004ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರಕಾರ ಇರುವವರೆಗೆ ಅಂಥ ಆಸೆಗೆ ಅಡ್ಡಿ ಇರಲಿಲ್ಲ.

ಆದರೆ ಈ ಸಮ್ಮಿಶ್ರ ಸರಕಾರದಿಂದ, ತನ್ಮೂಲಕ ಜೆಡಿಎಸ್ ಪಾಳಯದಿಂದ ಸಿದ್ದರಾಮಯ್ಯ ಹೊರಬಿದ್ದ ಮೇಲೆ ಖರ್ಗೆಯವರ ಆಸೆಗೆ ಧಕ್ಕೆಯಾಗುವಂಥ ಬೆಳವಣಿಗೆಗಳು ನಡೆಯತೊಡಗಿದವು. ಅರ್ಥಾತ್, ಜೆಡಿಎಸ್‌ನಿಂದ ಹೊರಬಿದ್ದ ಸಿದ್ದರಾಮಯ್ಯ ಕಾಂಗ್ರೆಸ್ ಪ್ರವೇಶಿಸಿದ ನಂತರ ಉಭಯ ನಾಯಕರ ಮಧ್ಯೆ ಮುಸುಕಿನ ಗುದ್ದಾಟ ಶುರುವಾಯಿತು. ಇದೇನೇ ಇದ್ದರೂ ೨೦೦೮ರಲ್ಲಿ ಖರ್ಗೆಯವರಿಗೆ ೨ ಬಾರಿ ಸಿಎಂ ಆಗುವ ಕನಸು ಬಿತ್ತು. ಮೊದಲ ಕನಸು ಬೀಳುವ ಕಾಲಕ್ಕೆ ಖರ್ಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆ ವೇಳೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಬಹುಮತ ಗಳಿಸಿದ್ದರೆ ಅವರು ಸಿಎಂ ಆಗುವುದು ನಿಶ್ಚಿತವಾಗಿತ್ತು. ಆದರೆ ಕೈ ಪಾಳಯದ ಒಳಗುದ್ದಾಟದಿಂದಾಗಿ ಪಕ್ಷ ಬಹುಮತ ಗಳಿಸದಂತಾಯಿತು.

ಆ ವೇಳೆ ಯಡಿಯೂರಪ್ಪ ನೇತೃತ್ವದ ಬಿಜೆಪಿ 110 ಸ್ಥಾನ ಗಳಿಸಿದರೆ, ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರ ಗಳಿಕೆ 114ರ ಗಡಿ ತಲುಪಿತ್ತು. ಈ ಸಂದರ್ಭದಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರು ಕಾಂಗ್ರೆಸ್ ಮುಂದೆ ‘ದಲಿತ ನಾಯಕ ಖರ್ಗೆ ನೇತೃತ್ವ ದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚಿಸೋಣ. ಇದಕ್ಕಾಗಿ ೬ ಪಕ್ಷೇತರರ ಬೆಂಬಲ ಪಡೆಯೋಣ’ ಎಂಬ ಪ್ರಸ್ತಾಪ ವಿಟ್ಟರು. ಈ ಹಂತದಲ್ಲಿ ಕಾಂಗ್ರೆಸ್ ತ್ವರಿತಹೆಜ್ಜೆ ಇಟ್ಟಿದ್ದರೆ, ಕರ್ನಾಟಕ ಮೊಟ್ಟಮೊದಲ ದಲಿತ ಮುಖ್ಯಮಂತ್ರಿಯನ್ನು ನೋಡುತ್ತಿತ್ತು.

ಆದರೆ ಇದು ಕೈಗೂಡುವ ಮೊದಲೇ ಪಕ್ಷೇತರರ ಬೆಂಬಲ ಗಿಟ್ಟಿಸಿಕೊಂಡ ಯಡಿಯೂರಪ್ಪ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುವಂತೆ ನೋಡಿಕೊಂಡರು. ಅಂದು ಪಕ್ಷೇತರರು ಯಡಿಯೂರಪ್ಪ ಅವರ ಜತೆ ಕೈಗೂಡಿಸಲು ನೆರವಿತ್ತು, ತನ್ಮೂಲಕ ಖರ್ಗೆ ಸಿಎಂ ಆಗದಂತೆ ನೋಡಿಕೊಂಡವರು ಸಿದ್ದರಾಮಯ್ಯ ಅಂತ ಜೆಡಿಎಸ್ ನಾಯಕರು ಈಗಲೂ ಆರೋಪಿಸುತ್ತಾರೆ.

ಅದೇನೇ ಇರಲಿ, ಖರ್ಗೆಯವರು ರಾಷ್ಟ್ರ ರಾಜಕಾರಣದತ್ತ ಮುಖಮಾಡಲು ಸಿದ್ದರಾಮಯ್ಯ ಅವರೇ ಕಾರಣ. ರಾಜ್ಯ ಕಾಂಗ್ರೆಸ್‌ನಲ್ಲಿ ಮೇಲುಗೈ ಸಾಧಿಸಲು ಬಡಿದಾಟ ನಡೆದಾಗ ಖರ್ಗೆಯವರಿಗೆ ಸಿದ್ದರಾಮಯ್ಯ ಘಾಸಿಮಾಡಿದರು. ರಾಜ್ಯಸಭಾ ಚುನಾವಣೆಯಲ್ಲಿ ತಮ್ಮಾಪ್ತ ಇಕ್ಬಾಲ್ ಅಹಮದ್ ಸರಡಗಿ ಅವರಿಗೆ ಪಕ್ಷದ ಟಿಕೆಟ್ ಕೊಡಿಸುವಲ್ಲಿ ಖರ್ಗೆ ಯಶಸ್ವಿಯಾದರೆ, ಅದೇ ಸರಡಗಿ ಸೋಲುವಂತೆ ನೋಡಿಕೊಂಡ ಸಿದ್ಧರಾಮಯ್ಯ, ಖರ್ಗೆಯವರಿಗೆ ಖೆಡ್ಡಾ ತೋಡಿದರು ಎಂಬ ಆರೋಪ ಶಾಶ್ವತವಾಗುಳಿದಿದೆ. ಇಂಥ ಘಟನೆಗಳು ಅಂತಿಮವಾಗಿ ಕೈ ಪಾಳಯದ ವರಿಷ್ಠರ ತಲೆನೋವಿಗೆ ಕಾರಣವಾಗಿದ್ದಲ್ಲದೆ ‘ಸಿದ್ದರಾಮಯ್ಯ ಇಲ್ಲಿಗೆ, ಖರ್ಗೆ ದಿಲ್ಲಿಗೆ’ ಎಂಬ ಸೂತ್ರ ಜಾರಿಮಾಡಲು ಪ್ರೇರೇಪಿಸಿತು.

ಈ ಬೆಳವಣಿಗೆಯಿಂದ ಖರ್ಗೆಯವರ ಅಂತರಂಗಕ್ಕೆ ನೋವಾದರೂ ಅದನ್ನವರು ತೋರ್ಪಡಿಸಲಿಲ್ಲ, ವರಿಷ್ಠರ ತೀರ್ಮಾನ ವನ್ನು ವಿರೋಧಿಸಲೂ ಇಲ್ಲ. ಆದರೆ ಈ ಬೆಳವಣಿಗೆ ನಡೆದು ೧೩ ವರ್ಷಗಳುರುಳಿದ ಮೇಲೆ ನೋಡಿದರೆ ಖರ್ಗೆ ಅತ್ಯಂತ ಎತ್ತರಕ್ಕೇರಿ ನಿಂತಿದ್ದಾರೆ. ನಿಜಲಿಂಗಪ್ಪ ಅವರ ನಂತರ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಂದು ಕೂರುವ ಭರವಸೆ ಹುಟ್ಟಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಈ ತಿಂಗಳ ೩ನೇ ವಾರ ನಡೆಯಲಿರುವ ಚುನಾವಣೆಯಲ್ಲಿ ಖರ್ಗೆಯವರಿಗೆ ಶಶಿ ತರೂರ್ ಪ್ರತಿಸ್ಪರ್ಧಿಯಾಗಿದ್ದರೂ, ಅದು ಸಾಂಕೇತಿಕ ಎನ್ನಲಾಗುತ್ತಿದೆ. ಆದರೆ ಕಾಂಗ್ರೆಸ್‌ನ ಚೌಕಾಬಾರಾ ಆಟದ ನಡುವೆ ಖರ್ಗೆಯವರೇನಾದರೂ ಸೋತರೆ ಅದು ಕಾಂಗ್ರೆಸ್ ಗೆ ಹಾನಿಮಾಡಿ, ಬಿಜೆಪಿಗೆ ಲಾಭ ತಂದುಕೊಡುವುದು ನಿಶ್ಚಿತ.
ಅಂದಹಾಗೆ, ದಲಿತ ಸಮುದಾಯದ ಆತ್ಮಾಭಿಮಾನದ ಸಂಕೇತವಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಚುನಾವಣೆ
ಯಲ್ಲಿ ಸ್ಪರ್ಧಿಸಿದಾಗ, ಅವರ ಸೋಲಿಗೆ ಕಾರಣವಾಗಿದ್ದರ ಆರೋಪ ಈಗಾಗಲೇ ಕಾಂಗ್ರೆಸ್ ಪಕ್ಷದ ತಲೆಯ ಮೇಲಿದೆ.

ನಾಳೆ ಖರ್ಗೆಯವರಿಗೆ ಅಧ್ಯಕ್ಷ ಪಟ್ಟ ಸಿಗದೆ ಹೋದರೂ ಕಾಂಗ್ರೆಸ್ ನೆತ್ತಿಯ ಮೇಲೆ ಮತ್ತೊಮ್ಮೆ ಅಂಥ ಕಳಂಕ ಕೂರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ಕರ್ನಾಟಕದ ನೆಲೆಯಲ್ಲಿ ಕಾಂಗ್ರೆಸ್‌ಗೆ ಮುಳುವಾಗಬಹುದು. ಏಕೆಂದರೆ ಇಲ್ಲಿ ದಲಿತ ವರ್ಗದ ಬಲಗೈ ಸಮುದಾಯ ಕಾಂಗ್ರೆಸ್‌ನ ಜತೆಗಿದ್ದರೆ, ಎಡಗೈ ಸಮುದಾಯ ಬಿಜೆಪಿಯ ಜತೆಗಿದೆ. ಖರ್ಗೆ ಬಲಗೈ ಸಮುದಾಯ ದವರು.

ನಾಳೆ ಕಾಂಗ್ರೆಸ್‌ನಿಂದ ಅವರಿಗೆ ಅವಮಾನವಾದಲ್ಲಿ ಬಲಗೈ ಸಮುದಾಯ ಮುನಿಸಿಕೊಳ್ಳುತ್ತದೆ. ಕಾಂಗ್ರೆಸ್‌ನಲ್ಲಿ ಈಗಾಗಲೇ ಖರ್ಗೆಯವರಿಗೆ ಸಿಎಂ ಹುದ್ದೆ ತಪ್ಪಿಸುವ ಕೆಲಸವಾಗಿದೆ; ಈಗ ಅಧ್ಯಕ್ಷ ಸ್ಥಾನದ ಕನಸು ಬಿತ್ತಿ ಕಾಲೆಳೆಯಲಾಯಿತು ಎಂದರೆ ಅದು ಕಾಂಗ್ರೆಸ್ ವಿರುದ್ಧ ತಿರುಗಿಬೀಳುವುದು ಖರೆ. ಆಗ ಬಿಜೆಪಿ ಸಹಜವಾಗಿಯೇ ಅದರ ಲಾಭ ಪಡೆದುಕೊಳ್ಳುತ್ತದೆ. ಆದರೆ ರಾಜ್ಯ ಕಾಂಗ್ರೆಸ್‌ನ ಕೆಲ ನಾಯಕರ ಪ್ರಕಾರ, ಖರ್ಗೆಯವರನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತರುವ ವಿಷಯದಲ್ಲಿ ಸೋನಿಯಾ ರಿಗೆ ಸ್ಪಷ್ಟತೆಯಿದೆ.

ಎಲ್ಲಕ್ಕಿಂತ ಮುಖ್ಯವಾಗಿ 2024ರ ಲೋಕಸಭಾ ಚುನಾವಣೆಗಿಂತ ೧ ವರ್ಷ ಮುಂಚೆ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಗೆದ್ದು ಅಧಿಕಾರ ಹಿಡಿಯಬೇಕು ಎಂಬುದು ಅವರ ನಿರೀಕ್ಷೆ. ಅರ್ಥಾತ್, ಕರ್ನಾಟಕದಲ್ಲಿ ಗೆದ್ದು ಅಧಿಕಾರ
ಹಿಡಿದರೆ, ದಿಲ್ಲಿ ಗದ್ದುಗೆಗಾಗಿ ನಡೆಯುವ ಹೋರಾಟಕ್ಕೆ ಕರ್ನಾಟಕದಿಂದ ಅಪಾರ ಶಸಾಸ ದಕ್ಕುತ್ತದೆ ಎಂಬುದು ಅವರ ಲೆಕ್ಕಾಚಾರ. 1999 ರಿಂದ 2004ರವರೆಗೆ ಕರ್ನಾಟಕದಲ್ಲಿ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವ ದಲ್ಲಿತ್ತಲ್ಲ? ಆ ಸಂದರ್ಭದಲ್ಲಿ ಕೃಷ್ಣ ಅವರು ಹರಿಸಿದ ನೆರವು 2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಯಶಸ್ಸಿಗೆ ಕಾರಣವಾಯಿತು ಎಂಬುದು ಸೋನಿಯಾರಿಗೆ ಗೊತ್ತು.

ಹೀಗಾಗಿ ಅವರಿಗೆ ಕರ್ನಾಟಕ ಎಂಬ ಪಾಳೇಪಟ್ಟು ಪಕ್ಷದ ವಶವಾಗಬೇಕಿದೆ. ಇದಕ್ಕಿರುವ ಏಕೈಕ ಅಡ್ಡಿಯೆಂದರೆ ಇಲ್ಲಿ ನಾಯಕತ್ವಕ್ಕಾಗಿ ನಡೆಯುತ್ತಿರುವ ಒಳಜಗಳ. ಇದರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತ್ರವಲ್ಲ, ಖರ್ಗೆಯವರ ಸ್ಟೇಕ್ ಕೂಡ ಇದೆ. ಅದನ್ನವರು ಸೋನಿಯಾರ ಮುಂದೆಯೂ ಹೇಳಿದ್ದರಂತೆ. ‘ಪಕ್ಷ ಗೆದ್ದು ಅಽಕಾರ ಹಿಡಿದರೆ ನನಗೂ ೩೦ ತಿಂಗಳ ಕಾಲಾವಕಾಶ ನೀಡಿ’ ಎಂದಿದ್ದರಂತೆ. ಈಗ ಖರ್ಗೆಯವರನ್ನೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದರೆ, ಅವರು ಸಿಎಂ ಹುದ್ದೆಯ ಮೇಲೆ ಕಣ್ಣಿಡುವುದು ಕಷ್ಟ.

ಕಾಂಗ್ರೆಸ್‌ನಲ್ಲಿ ಸಿಎಂ ಆದವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹಲವು ಉದಾಹರಣೆಗಳಿವೆ. ತಮಿಳುನಾಡಿನ ಕಾಮರಾಜ್ ನಾಡಾರ್, ಕರ್ನಾಟಕದ ನಿಜಲಿಂಗಪ್ಪ ಅವರೆಲ್ಲ ಮುಖ್ಯಮಂತ್ರಿಗಳಾಗಿದ್ದು ನಂತರ ಎಐಸಿಸಿ ಅಧ್ಯಕ್ಷರಾದವರು. ಆದರೆ ಅಧ್ಯಕ್ಷರಾದವರು ಒಂದು ರಾಜ್ಯದ ಸಿಎಂ ಆಗುವುದು ಕೈ ಪಾಳಯದಲ್ಲಿ ಕಷ್ಟ. ಅರ್ಥಾತ್, ಖರ್ಗೆಯವರನ್ನು ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತರುವ ಮೂಲಕ ಸೋನಿಯಾ ಅವರು ಸಿದ್ದರಾಮಯ್ಯ ಅವರ ದಾರಿಯನ್ನು ಸಾಫ್ಟ್ ಮಾಡಿದ್ದಾರೆ ಎಂಬುದು ಈ ನಾಯಕರ ಮಾತು.

ಅದೇನೇ ಇದ್ದರೂ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾದರೆ ಅದು ಕರ್ನಾಟಕಕ್ಕೆ ಹೆಮ್ಮೆಯ ವಿಷಯ ಎಂಬುದಂತೂ ನಿಜ.