ದಾಸ್ ಕ್ಯಾಪಿಟಲ್
ಟಿ.ದೇವಿದಾಸ್
dascapital1205@gmail.com
ಅಧಿಕಾರ ರಾಜಕೀಯದ ಪರಮದಾಹದ ಕಿಲುಬು ಯಾವ ಪ್ರಮಾಣದಲ್ಲಿದೆ ಎಂಬುದು ಕರ್ನಾಟಕ ರಾಜಕೀಯವನ್ನು ಅವಲೋಕಿಸಿದರೆ ಪೂರ್ತಿ
ಯಾಗಿ ಅರಿವಾಗುತ್ತದೆ. ಪರಮ ಅಸಹ್ಯವನ್ನು ಹುಟ್ಟಿಸಿದೆ.
ಎಂಥಾ ಪರಿಸ್ಥಿತಿಯಲ್ಲೂ ಪ್ರಜಾತಂತ್ರದ ಪತನದಿಂದ ಕೊಳೆvದ್ದರಲ್ಲಿ ಬೆಳೆಯುವ ಅಣಬೆಯಾಗಬಾರದು ಎಂಬ ಎಚ್ಚರ ಪ್ರತಿಯೊಬ್ಬನಲ್ಲೂ ಇರಬೇಕು. ಜಾತಿ ಮತ್ತು ಧನ ಬಲದ ರಾಜಕೀಯದಲ್ಲಿ ಎಲ್ಲವೂ ವಿಕೃತವೇ. ಕರ್ನಾಟಕದ ಈ ನಾಚಿಕೆ ಬಿಟ್ಟ ರಾಜಕೀಯದಿಂದ ಹೇಸಬೇಕು, ಆದರೆ ಸುಮ್ಮನಿರ ಬಾರದು. ಯಾಕೆಂದರೆ, ಇವರನ್ನೆಲ್ಲ ಆರಿಸಿದವರು ನಾವೇ. ಏನಿದ್ದರೂ ಭ್ರಷ್ಟಾಚಾರ ನಮ್ಮದ್ದೇ ಸೃಷ್ಟಿ. ಕಮಿಷನ್ ದಂಧೆಯ ಮಾರಕ ಪ್ರತಿಫಲವಾಗಿ ಸಂತೋಷ್ ಎಂಬ ಗುತ್ತಿಗೆದಾರ ಉಡುಪಿಗೆ ಬಂದು ಸಾಯುವುದಕ್ಕೂ, ಅದೇ ದಿನ ಮುಖ್ಯಮಂತ್ರಿ ಗಳು ಉಡುಪಿಯ ಪ್ರವಾಸದಲ್ಲಿರುವುದಕ್ಕೂ ಅದೇನು ಕಾಕತಾಳೀಯವೋ ಶ್ರೀಕೃಷ್ಣನೇ ಬಲ್ಲ!
ಇದಕ್ಕೂ ಮೊದಲು ಸಂತೋಷ್ ಎಂಬ ಗುತ್ತಿಗೆದಾರ ಈ ಕಮಿಷನ್ ದಂಧೆಯ ಆರೋಪಕ್ಕಾಗಿ ಬಿಜೆಪಿ ಹೈ ಕಮಾಂಡ್ ಭೇಟಿಯಾಗಿ ವ್ಯಥೆ ಹೇಳಿ ಕೊಂಡದ್ದು, ದೆಹಲ್ಲಿಯಲ್ಲಿ ಪ್ರೆಸ್ಮೀಟ್ ಮಾಡಿದ್ದು, ಆ ಸಂದರ್ಭದಲ್ಲಿ ಕಾಂಗ್ರೆಸ್ಸೂ ಪ್ರೆಸ್ಮೀಟ್ ಮಾಡಿದ್ದು- ಇವೆಲ್ಲವೂ ಬಿಜೆಪಿ ಸರಕಾರದಲ್ಲಿ ಅಂದರೆ ಈಶ್ವರಪ್ಪರ (ಇನ್ನಿತರ ಇಲಾಖೆಯಲ್ಲೂ ಇದೆಯೆಂಬ ಗುಮಾನಿಯಿದೆಯಂತೆ) ಇಲಾಖೆಯಲ್ಲಿ ೪೦% ಕಮಿಷನ್ ದಂಧೆಯ ಅಬ್ಬರದ ಪ್ರಚಾರದ ಕೊನೆಯ ಪ್ರತಿಫಲವೆಂಬಂತೆ ಸಂತೋಷ್ ಆತ್ಮಹತ್ಯೆ ಮಾಡಿಕೊಂಡದ್ದು-ಎಂಬ ವದಂತಿಗಳು ಮಾಧ್ಯಮಗಳು ಮತ್ತೆ ಮತ್ತೆ ಪ್ರಸಾರ ಮಾಡುತ್ತ ಮಾಡುತ್ತ ಹೊಲಸು ರಾಜಕೀಯವನ್ನು ಇನ್ನಷ್ಟು ಹೇಸಿಗೆ ಪಡಿಸುತ್ತಲೂ, ಧಿಕ್ಕರಿಸುವಂತೆಯೂ ಜನರನ್ನು ತಯಾರು ಮಾಡುತ್ತಿದೆಯೇನೋ ಎಂದೆನಿಸುತ್ತಿದೆ.
ಆದರೆ ಮಾಧ್ಯಮಗಳದ್ದು ತಪ್ಪೇನಿದೆ? ಖಂಡಿತವಾಗಿ ಅವು ತಮ್ಮ ಕಾರ್ಯವನ್ನು ಮಾಡುತ್ತಿವೆ. ಯಾರು ಸತ್ತರೇನು, ಇದ್ದರೇನು ಅಧಿಕಾರ ಮುಖ್ಯ
ಎಂಬುದು ಸ್ವಾತಂತ್ರ್ಯೋತ್ತರ ರಾಜಕೀಯದ ಹಿಡನ್ ಸೂತ್ರವಾಗಿ ವರುಷಗಳೇ ಸಂದವು. ಸ್ವಾತಂತ್ರ್ಯೋತ್ತರ ಭಾರತದ ರಾಜಕಾರಣದಲ್ಲಿ ಘಟಿಸಿ ಹೋದ ಅನೇಕ ಸಾವುಗಳಿಗೆ ಇಂದಿಗೂ ಮುಕ್ತಿ ದೊರೆತಿಲ್ಲ! ಸಂತೋಷ್ ಆತ್ಮಹತ್ಯೆ ಕೂಡ ಒಂದು ಬಗೆಯಲ್ಲಿ ಸಾವಿಗೆ (ಕೊಲೆಗೆ ಎಂದರೆ ಸರಿಯಾದೀತು!) ಸಮನಾಗಿ ಕಾಣುತ್ತದೆಯೆಂಬ ಮಾತುಗಳು ಹುಟ್ಟಿಕೊಂಡಿವೆ.
ರಾಜಕೀಯದಲ್ಲಿ ಒಬ್ಬ ನೇತಾರನೋ ಮುಖಂಡನೋ ಸತ್ತಾಗ ಅನುಮಾನಗಳು ಹುಟ್ಟಿಕೊಳ್ಳುವುದು ಸಹಜವೇ ಆಗಿಹೋದ ವರ್ಷಗಳ ಕಾಲಘಟ್ಟದಲ್ಲಿ ನಾವಿದ್ದೇವೆ. ಅಂಥದ್ದರಲ್ಲಿ ಸಂತೋಷನಂಥ ಒಬ್ಬ ಗುತ್ತಿಗೆದಾರ ಸತ್ತಾಗ ಅದರಿಂದ ಆಗಬಹುದಾದ ದೊಡ್ಡ ಪಲ್ಲಟವೇನೆಂದರೆ ಅಧಿಕಾರದಲ್ಲಿರುವ ಒಬ್ಬ ಮಂತ್ರಿ ತನ್ನ ಸ್ಥಾನವನ್ನು ಕಳೆದುಕೊಳ್ಳುವುದಕ್ಕೆ ಬಳಸಿಕೊಳ್ಳುವ ಮಾರ್ಗವಾಗಿ ವಿರೋಧ ಪಕ್ಷಕ್ಕೆ ಆಹಾರವಾಗುತ್ತದೆ. ಇಷ್ಟು ಬಿಟ್ಟರೆ ರಾಜಕೀಯ ಲೆಕ್ಕಾಚಾರ ಹಾಕಿಕೊಂಡು ಸತ್ತವನ ಮನೆಗೆ ಹೋಗಿ ಸಂತ್ರಸ್ತ ಪರಿಹಾರ ಧನವನ್ನು ಅನುಕ್ರಮವಾಗಿ ಪಕ್ಷಗಳು ನೀಡುವುದು ಒಂದು ಫ್ಯಾಷನ್ ಆಗಿ ಬಿಟ್ಟಿದೆ. ಇಲ್ಲೂ ಸತ್ತವನ ಪೂರ್ವಾಪರ (ಜಾತಿ, ಮತ, ಸಮುದಾಯ, ಪಕ್ಷನಿಷ್ಠೆ)ವನ್ನು ತಿಳಿದುಕೊಂಡು ಪರಿಹಾರವನ್ನು ನೀಡುವಲ್ಲಿ ದೊಡ್ಡಮಟ್ಟದ ರಾಜಕೀಯವಿದೆ! ಇದು ಚುನಾವಣಾ ರಾಜಕೀಯದ ಪಟ್ಟು.
ಉದಾಹರಣೆಗೆ: ಶಿವಮೊಗ್ಗದ ಹರ್ಷನ ಕೊಲೆಯಾದಾಗ ಕಾಂಗ್ರೆಸ್ಸಿಗೆ ಏನೂ ಅನಿಸಲೇ ಇಲ್ಲ. ಬಿಜೆಪಿಯವರು ಪರಿಹಾರ ಕೊಟ್ಟರು. ಈಗ ಸಂತೋಷ್ ಸಾವು ಬಿಜೆಪಿಗೆ ಅಷ್ಟೇನು ತಟ್ಟಲಿಲ್ಲ. ಕಾಂಗ್ರೆಸ್ ಪರಿಹಾರ ಕೊಟ್ಟಿತು. ಅಂತೂ ಒಬ್ಬನ ಅಗಲಿಕೆ ಮನುಷ್ಯ ಸಹಜ ನೆಲೆಯಲ್ಲಿ ವಿಷಾದವೆಂಬ ಸ್ಥಾಯೀ ಭಾವವನ್ನು ತಲ್ಲಣಗೊಳಿಸುವುದಕ್ಕೂ ಅಥವಾ ಅಲುಗಾಡಿಸುವುದಕ್ಕೂ ರಾಜಕೀಯಕ್ಕೂ ಸಂಬಂಧವಿರಲು ಸಾಧ್ಯವೇ? ಹಾಗೊಮ್ಮೆ ಇರುವುದೇ ಆದರೆ ಅಂಥ ವಿಷಾದಕ್ಕೂ ಧಿಕ್ಕಾರವನ್ನು ಹೇಳಬೇಕು.
ಶವದ ಮೇಲೆ ಹೂಹಾರವನ್ನಿಟ್ಟು, ಕೈಮುಗಿದು ನಿಂತು ಮಾಧ್ಯಮಗಳ ಎದುರು ರಾಜಕಾರಣಿಯೊಬ್ಬ ಕಣ್ಣೀರು ಸುರಿಸುತ್ತ ಆಡುವ ಮಾತುಗಳು ಅನೇಕ ಸಂದರ್ಭಗಳಲ್ಲಿ ಅಂತರಂಗದ ಮಾತುಗಳಲ್ಲ ಎಂದೇ ಜನತೆ ಭಾವಿಸುತ್ತದೆ. ರಾಜಕಾರಣಿಗಳು ಅತ್ಯುತ್ತಮ ನಟರಲ್ಲ ಎಂದೆನಿಸಿಯೂ ಯಾವುದೇ ಸಂದರ್ಭ, ಸನ್ನಿವೇಶ, ಪ್ರಸಂಗವಿದ್ದರೂ ಪ್ರಭಾವಿ ಪಾತ್ರಧಾರಿಯೂ, ಅರ್ಥಧಾರಿಯೂ ಆಗಿರುತ್ತಾರೆ. ಯಾವುದೇ ವೇದಿಕೆಯಿರಲಿ ಯಾವ ತಯಾರಿಯೂ ಇಲ್ಲದೆ ಅಧಿಕಾರ ರಾಜಕೀಯದ ಮೂಸೆಯಲ್ಲಿ ತಿವಿಯ ಬೇಕಾದಲ್ಲಿ ತಿವಿಯುವ, ಮುಟ್ಟಬೇಕಾದಲ್ಲಿ ಮುಟ್ಟುವ ಅವರದ್ದು ಇಂಟಲೆಕ್ಚುವಲ್ ಆಗಿ ಓದು ಒಕ್ಕಾಲು, ಬುದ್ಧಿ ಮುಕ್ಕಾಲೇ ಆಗಿರುತ್ತದೆ! ಅದೆಂಥದ್ದೇ ಆದ ಹಗರಣದಲ್ಲಿ ಸಿಕ್ಕಿಬಿದ್ದರೂ ಸಮಾಜಕ್ಕೆ ಹೆದರಿ ಓಡಲಾರದ ಒಣಧಾರ್ಷ್ಟ್ಯ ಅವರಲ್ಲಿರು ತ್ತದೆ! ಕಾರಣ: ಜನ ಉಗಿಯುತ್ತಿದ್ದ ಹಾಗೆ ನಾಕು ದಿನ ಸೈಲೆಂಟಾದರೆ ಸಾಕು, ಮತ್ತೆ ಉಗಿದವರೇ ತನ್ನ ಮನೆಯ ಬಾಗಿಲಿಗೆ ಬಂದು ಪುಡಿಗಾಸಿಗೆ
ಹಲ್ಲುಗಿಂಜುತ್ತಾರೆಂಬ ಸತ್ಯ ಗೊತ್ತಿರುವಂಥದ್ದೇ? ಹಾಗಂತ ಇಂಥ ವಿಚಾರಗಳು ರಾಜಕಾರಣಿಗಳಿಗೆ ಮಾತ್ರ ಮೀಸಲಾದ ಸತ್ಯವೆಂದು ಭಾವಿಸಿದರೆ ಅದರಂಥ ಮೂರ್ಖತನ ಬೇರೆ ಇರಲಾರದು.
ಆದರೆ ಯಾವ ದೊಡ್ಡ ಸಾಧನೆಯನ್ನೂ ಮಾಡದೆ ಸರಕಾರದ ಹಣದಲ್ಲಿ ಉಚಿತ ಪಡಿತರ, ಒಂದಿಷ್ಟು ಸಮಾಜಮುಖಿ ಯೋಜನೆಗಳಿಗೆ ಹಣ ಮಂಜೂರು ಮಾಡುವ ಮಂತ್ರಿಮಹೋದಯರಿಗೆ ಇದರಲ್ಲಿ ತಮ್ಮ ಸಾಧನೆ ಏನೂ ಇರುವುದಿಲ್ಲವೆಂಬುದು ಗೊತ್ತಿರುವುದಿಲ್ಲವೆ? ಗೊತ್ತಿದ್ದೂ ತಾನೇ ಈ ಜನರ ಪಾಲಕ
ಎಂಬ ಸೋಗಿನ ಮುಖವಾಡ ಏಕೆ ಹಾಕಿಕೊಳ್ಳಬೇಕು? ಅದೆಂಥಾ ಪರಿಯ ಹಗರಣದಲ್ಲಿ ಸಿಕ್ಕಿಬಿದ್ದು ಬಿಸಿಯಿರುವಾಗಲೇ ಭೂಗತವಾಗಿ ಮತ್ತೆ ಹೊಸ ಮುಖವಾಡ ಹಾಕಿಕೊಂಡು ಮೆರಗುವ ರಾಜಕಾರಣಿಗಳಿಗೆ ಓಟು ಹಾಕಿ ಮತ್ತೆ ಗದ್ದುಗೆ ಮೇಲೆ ಕೂರಿಸುವವರಾರು? ಈಗ ಆದದ್ದು ಅಷ್ಟೇ.
ಸಾಯಬೇಕೆಂದುಕೊಂಡವ ಸತ್ತ. ಇದು ದುರ್ದೈವವೂ ದುರಂತವೂ ಅಹುದು. ಹೆಸರು ಹೇಳಿ ಸತ್ತನೆಂಬ ಕಾರಣವಾಗಿ ಈಶ್ವರಪ್ಪ ರಾಜೀನಾಮೆ ಕೊಡ ಬೇಕಾಯಿತು. ಹಿಂದೆ ಸಿದ್ದು ಸರಕಾರದಲ್ಲಿ ಡಿವೈಎಸ್ಪಿ ಗಣಪತಿ ಸಾಯುವ ಮೊದಲು ಜಾರ್ಜ್ ಹೆಸರು ಹೇಳಿದ್ದರಿಂದ ಜಾರ್ಜ್ ಪದತ್ಯಾಗ ಆಗಿತ್ತು.
ಇದೆಲ್ಲ ಮಾಮೂಲಿ. ಹುಡುಕುತ್ತಾ ಹೋದರೆ ಇಂಥ ಪ್ರಕರಣಗಳು ಸಾಕಷ್ಟು ವಿಧಾನಸೌಧದ ಕಡತಗಳಲ್ಲಿವೆಂಬುದು ಪಬ್ಲಿಕ್ ಸೀಕ್ರೆಟ್. ಹುಡುಗಿಯ ವಿಚಾರವಾಗಿ ಜಾರಕಿಹೊಳಿ ರಾಜೀನಾಮೆ ಕೊಟ್ಟರೆ (ಆಮೇಲೆ ಕ್ಲೀನ್ಚಿಟ್ ಸಿಕ್ಕಿದ್ದು ಬೇರೆ ಮಾತು), ಮೇಟಿ ಎಂಬಾತನದ್ದೂ ಇಂಥದ್ದೇ ಹಗರಣ ವಾಗಿತ್ತೆಂಬುದನ್ನು ಮರೆಯಬಾರದಲ್ಲ. ಮಂತ್ರಿ ಮಾಗಧರ ಕಾರಿಗೆ ಸಿಕ್ಕು ಸತ್ತವರಿಗೆಲ್ಲ ಸ್ವರ್ಗ ಪ್ರಾಪ್ತಿಯಾಗಿರಬಹುದು.
ಆದರೆ ಸತ್ತವರ ಪರಿವಾರದವರು ಮಾತ್ರ ನರಕವನ್ನೇ ಕಾಣಬೇಕು ಸಾಯುವವರೆಗೂ. ಅವರ ದುರಂತಕ್ಕೆ ಏನೆನ್ನಬೇಕು? ಈಗ ಆಗಿದ್ದೂ ಇದೇ. ಸ್ವಲ್ಪ ಸಮಯದವರೆಗೆ ಈ ಸುದ್ದಿ ಬಿಸಿ ಬಿಸಿಯಾಗಿರುತ್ತದೆ. ಆಮೇಲೆ ಇನ್ನೊಂದು ಸುದ್ದಿ ಬಿಸಿ ಬಿಸಿಯಾಗಲು ಮುಂಚೂಣಿಗೆ ಬರುತ್ತದೆ. ಅಂತೂ ಜನರಿಗೆ
ಒಂದಲ್ಲ ಒಂದು ಚಾನೆಲ್ಗಳಲ್ಲಿ ಬರುವ ಸೀರಿಯಲ್ಗಳಂತೆ ರಾಜಕೀಯದ ಸುದ್ದಿ ಪ್ರಸಾರವಾಗುತ್ತಲೇ ಇರುತ್ತದೆ; ಅದೂ ಸೀರಿಯಲ್ಲುಗಳನ್ನು ನಾಚಿಸುವಂತೆ. ಈ ಮಧ್ಯೆ, ದುರ್ದೈವದ ಸಂಗತಿಯೇನೆಂದರೆ ಜಾತಿ-ಉಪಜಾತಿ, ತಳಮಟ್ಟದ ಭಿನ್ನ ಸಮುದಾಯಗಳ ಖಾವಿಧಾರಿಗಳು ವಿಧಾನಸೌಧದ ಮೆಟ್ಟಿಲನ್ನು ಏರುವುದಿಲ್ಲ ಎಂಬುದನ್ನು ಬಿಟ್ಟರೆ ಉಳಿದಂತೆ ರಾಜಕಾರಣಿಗಳಂತೆ ಸಾರ್ವಜನಿಕವಾಗಿ ವ್ಯವಹರಿಸುತ್ತಾರೆ ಎಂಬುದು!
ಇದೆಲ್ಲ ಒಂದು ಕಡೆಯಾದರೆ, ಆರೋಪ ಬರುತ್ತಿದ್ದ ಹಾಗೆ ಈಶ್ವರಪ್ಪ ನೈತಿಕತೆಯ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದು ಮತ್ತೊಂದು ಕಡೆಯಾಗಿದೆ. ಅವರ ಈ ನಡೆ ಎರಡು ದೃಷ್ಟಿಯಲ್ಲಿ ಸಮಯೋಚಿತವಾದುದು. ಒಂದು: ವೈಯಕ್ತಿಕ ಇಮೇಜನ್ನು ಉಳಿಸಿಕೊಳ್ಳಲು. ಇನ್ನೊಂದು: ಪಕ್ಷದ ವರ್ಚಸ್ಸು
ಹಾಳಾಗದಂತೆ ಕಾಪಾಡಲು. ಯಾಕೆಂದರೆ ಈಶ್ವರಪ್ಪನವರು ಇತರ ಕೆಲವು ಮುಂಚೂಣಿ ರಾಜಕಾರಣಿಗಳಿಗೆ ಹೋಲಿಸಿದರೆ ಭ್ರಷ್ಟಾಚಾರದಲ್ಲಿ ಅಷ್ಟಾಗಿ ಹೆಸರು ಮಾಡಿಕೊಂಡವರಲ್ಲ. ಭ್ರಷ್ಟಾಚಾರದ ಮೂಲಕ ಜನಪ್ರಸಿದ್ಧರಾದವರೂ ಅಲ್ಲ. ಆರ್. ಎಸ್.ಎಸ್. ಹಿನ್ನೆಲೆಯಲ್ಲಿ ಬೆಳೆದು ಬಂದ ಈಶ್ವರಪ್ಪ ಪಕ್ಷ ಸಂಘಟನೆಯಲ್ಲಿ ಯಡಿಯೂರಪ್ಪರಿಗೆ ಸರಿಸಮವಾದ ತಾಕತ್ತನ್ನು ಹೊಂದಿಯೇ ಬಂದವರು ಎಂಬ ಮಾತು ಬಿಜೆಪಿ ವಲಯದಲ್ಲಿದೆ. ಹಣ ಲೆಕ್ಕ ಮಾಡುವ ಮಷಿನನ್ನು ನೀವು ಇಟ್ಟುಕೊಂಡಿದ್ದೀರೆಂದು ಆರೋಪಿಸಿದಾಗ ಸದನದ ಅದಕ್ಕೆ ಸಬೂಬು ಮತ್ತು ಸಮಜಾಯಿಷಿಯನ್ನು ಕೊಟ್ಟು ಆರೋಪಿಸಿ ದವರ ಬಾಯ್ಮುಚ್ಚಿಸಿದವರು ಅವರು.
ರಾಷ್ಟ್ರೀಯತೆ ಮತ್ತು ಹಿಂದುತ್ವ ಎರಡೂ ಒಂದೇ ಎಂದು ವಾದಿಸಿದ ಬಿಜೆಪಿಯ ಅಗ್ರಪಂಕ್ತಿ ನಾಯಕರಲ್ಲಿ ಈಶ್ವರಪ್ಪನವರು ಒಬ್ವರು. ಹಾಂ, ನಾನಿಲ್ಲಿ ಈಶ್ವರಪ್ಪರನ್ನು ಹೊಗಳುತ್ತಿಲ್ಲ. ವಕಾಲತ್ತೂ ಮಾಡುತ್ತಿಲ್ಲ. ಸಂತೋಷ ಪಾಟೀಲ ಆತ್ಮಹತ್ಯೆ ವಿಚಾರದಲ್ಲಿ ಅವರು ತಪ್ಪಿತಸ್ಥರೋ? ಅಲ್ಲವೋ?
ಯಾರಿಗೂ ಗೊತ್ತಿಲ್ಲ. ಗೊತ್ತಿದ್ದರೆ, ಅದು ಈಶ್ವರಪ್ಪರ ಮನೆ ದೇವರಾದ ಚೌಡೇಶ್ವರಿಗೆ ಮಾತ್ರ! ತಾನು ಬಲವಾಗಿ ನಂಬುವ ಮನೆದೇವರಲ್ಲಿ ತನ್ನ ತಪ್ಪಿದ್ದರೆ ತನಗೆ ಶಿಕ್ಷೆಯಾಗಲಿ ಎಂದು ಬೇಡಿಕೊಂಡಿದ್ದೇನೆಂದು ಸುವರ್ಣ ನ್ಯೂಸ್ ಸಂದರ್ಶನದಲ್ಲಿ ಅವರೇ ಹೇಳಿದ್ದಾರೆ.
ತಕ್ಕಮಟ್ಟಿಗೆ ನೇರಾನೇರ ಸ್ವಭಾವದ ಚಾರಿತ್ರ್ಯವನ್ನು ರಾಜಕೀಯವಾಗಿ ಹೊಂದಿರುವ ಈಶ್ವರಪ್ಪನವರು ಅಷ್ಟೇನೂ ಪ್ರಬಲವಲ್ಲದ ಸಮುದಾಯದ
ಪ್ರತಿನಿಧಿಯೆನಿಸಿ ಬಿಜೆಪಿಯಲ್ಲಿ ಜನಪ್ರಿಯತೆಯನ್ನು ಗಳಿಸಿದವರು. ರಾಜ್ಯ ಬಿಜೆಪಿಯೆಂಬ ಮನೆಯ ಎರಡು ಅಪ್ಪಂದಿರಲ್ಲಿ ಒಬ್ಬರು ಈಗಾಗಲೇ ಉದಾರ ಹಿಂದೂವಾಗಿ ನೇಪಥ್ಯದಲ್ಲಿzರೆ. ಈಗ ಆ ಸಾಲಿಗೆ ಇನ್ನೊಬ್ಬ ಅಪ್ಪನೂ ಸೇರದಂತಾಗಲಿ.