ಅಭಿವ್ಯಕ್ತಿ
ಚಂದ್ರಶೇಖರ ಬೇರಿಕೆ
ಮಾರ್ಚ್ 4ರಿಂದ ಆರಂಭವಾದ ವಿಧಾನ ಮಂಡಲಗಳ ಅಧಿವೇಶನ ಮಾರ್ಚ್ 31 ರವರೆಗೆ ಒಟ್ಟು 19 ದಿನಗಳ ಕಾಲ
ನಡೆಯಬೇಕಿತ್ತು. ಈ ಅಧಿವೇಶನದ ಮೊದಲೆರಡು ದಿನ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಮೇಲಿನ ಚರ್ಚೆಗೆ ಮೀಸಲಿಡಲಾಗಿ ದ್ದರೆ ಉಳಿದ ದಿನಗಳು 2021-22ನೇ ಸಾಲಿನ ಆಯವ್ಯಯ ಮಂಡನೆ, ಚರ್ಚೆ, ಅನುಮೋದನೆ, ವಿಧೇಯಕಗಳ ಅಂಗೀಕಾರದ ಪ್ರಕ್ರಿಯೆಗಳು, ಕಾರ್ಯ ಕಲಾಪಗಳ ಪಟ್ಟಿಯಂತೆ ಇತರ ವಿಚಾರಗಳು ಅಧಿವೇಶನದ ಅಜೆಂಡಾವಾಗಿತ್ತು.
ಆದರೆ ಮಾರ್ಚ್ 31ರವರೆಗೆ ನಡೆಯಬೇಕಿದ್ದ ಅಧಿವೇಶನ ಮಾರ್ಚ್ 24ಕ್ಕೆ ಕೊನೆಗೊಂಡಿತ್ತು. ಒಟ್ಟು 13 ದಿನಗಳ ಅಧಿವೇಶನ ದಲ್ಲಿ 44 ಗಂಟೆ 30 ನಿಮಿಷಗಳ ಕಾಲ ಸದನ ನಡೆಯಿತು. ಇದರಲ್ಲಿ 9 ವಿಧೇಯಕ ಮಂಡನೆಯಾಗಿದ್ದು, ಲಿಖಿತ ರೂಪದ 1872 ಉತ್ತರಗಳ ಮಂಡನೆ, ಗದ್ದಲದ ನಡುವೆ ಬಜೆಟ್ ಮೇಲಿನ ಚರ್ಚೆ, ಉತ್ತರ, ಪ್ರಸಕ್ತ ಸಾಲಿನ ಧನ ವಿನಿಯೋಗ ಮಸೂದೆಗೆ ಧ್ವನಿ ಮತದ ಮೂಲಕ ಅಂಗೀಕಾರ ಪಡೆಯಲಾಯಿತು.
ಸದನದಲ್ಲಿ ‘ಸೀಡಿ’ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುವ ಸಮಯ ದಲ್ಲಿ ಕರೋನಾ ಮುಂಜಾಗ್ರತಾ ಕ್ರಮವಾಗಿ ವಿಧಾನಸಭಾ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಯಿತು. ಆಡಳಿತ
ಪಕ್ಷದವರಿಗೆ ನಿಯಮಾನುಸಾರ ಅಧಿವೇಶನವನ್ನು ನಡೆಸಿದ ಹೆಗ್ಗಳಿಕೆಯಾದರೆ ಅಧಿವೇಶನದಲ್ಲಿ ಆಡಳಿತ ಪಕ್ಷ ಮೇಲುಗೈ
ಸಾಧಿಸದಂತೆ ನೋಡಿಕೊಂಡಿದ್ದು ಪ್ರತಿಪಕ್ಷಗಳ ಪಾಲಿಗೆ ಸಮಾಧಾನಕರ. ಆಯವ್ಯಯದ ಅಧಿವೇಶನ ಅಯೋಮಯ!.
ಬಜೆಟ್ ಅಧಿವೇಶನದ ಕಾರ್ಯ ಕಲಾಪಗಳ ಪಟ್ಟಿಯ ಅಜೆಂಡಾಗಳಿಗಿಂತಲೂ ಕಲಾಪದಲ್ಲಿ ‘ಸೀಡಿ’ ಪ್ರಕರಣ, ಆರು ಸಚಿವರಿಂದ ಹೈಕೋರ್ಟ್ ತಡೆ ವಿಚಾರಗಳೇ ಚರ್ಚೆಯಲ್ಲಿ ಪ್ರಾಮುಖ್ಯತೆ ಪಡೆಯಿತು. ಈ ಅಧಿವೇಶನ ಅಂತ್ಯಗೊಂಡಾಗ ಇದು ಬಜೆಟ್ ಅಽವೇಶನವೋ ಅಥವಾ ‘ಸೀಡಿ’ ಪ್ರಕರಣದ ಮೇಲಿನ ಅಧಿವೇಶನವೋ ಎಂಬುದು ಜನತೆಗೆ ಅರ್ಥವಾಗಲೇ ಇಲ್ಲ. ವರ್ಷಕ್ಕೆ 60 ದಿನ ಕಲಾಪ ನಡೆಯಬೇಕು ಎಂಬ ನಿಯಮವಿದ್ದರೂ ಇತ್ತೀಚೆಗೆ 30 ರಿಂದ 40 ದಿನಗಳಿಗಷ್ಟೇ ಕಲಾಪ ನಡೆಯುತ್ತಿದ್ದು, ಕಾರ್ಯ ಕಲಾಪಗಳಿಗೆ ಅಡ್ಡಿಪಡಿಸುವುದರಿಂದ ಅಧಿವೇಶನದ ಉತ್ಪಾದಕತೆ ನಿರೀಕ್ಷಿತ ಮಟ್ಟದಲ್ಲಿ ಹೊರ ಬರುತ್ತಿಲ್ಲ.
ಸಚಿವರು, ಶಾಸಕರು ಅಧಿವೇಶನಕ್ಕೆ ವಿನಾ ಕಾರಣ ಗೈರು ಹಾಜರಿಯಾಗುತ್ತಿರುವುದನ್ನು ನೋಡಿದರೆ ಜನಪ್ರತಿನಿಧಿ ಗಳಿಗೆ ಉತ್ತರದಾಯಿತ್ವವೇ ಇಲ್ಲ ಎಂಬುದು ಸತ್ಯ. ಅಲ್ಲದೇ ಪ್ರತಿಪಕ್ಷದವರು ತಾವೂ ಚರ್ಚೆಯಲ್ಲಿ ಪಾಲ್ಗೊಳ್ಳದೇ ಉಳಿದವರಿಗೂ ಚರ್ಚೆಗೆ ಅವಕಾಶ ನೀಡದೇ ಇರುವುದು ಇಡೀ ರಾಜ್ಯದ ಜನತೆಗೆ ಬಗೆದ ದ್ರೋಹ. ಸದನವನ್ನು ಆಯ್ದ ವಿಚಾರಗಳು ಮತ್ತು ರಾಜಕೀಯ ಮೈಲೇಜ್ ನೀಡುವ ವಿಚಾರಗಳಿಗಷ್ಟೇ ಸೀಮಿತಗೊಳಿಸಿದ್ದು ಖಂಡನೀಯ.
ಕರೋನಾ ಮುಂಜಾಗ್ರತಾ ಕ್ರಮವಾಗಿ ವಿಧಾನಸಭಾ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ ಎಂಬುದು ನೆಪವಷ್ಟೇ. ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 17ಕ್ಕೆ ನಡೆಯ ಲಿರುವ ಉಪಚುನಾವಣೆಯನ್ನೇ ಪ್ರತಿಷ್ಠೆಯಾಗಿ ತೆಗೆದುಕೊಂಡು ಚುನಾವಣಾ ಪ್ರಚಾರಕ್ಕಾಗಿ ಮೂರೂ ಪಕ್ಷಗಳು ಮಾಡಿಕೊಂಡ ಒಳ ಒಪ್ಪಂದ ಮತ್ತು ಹೊಂದಾಣಿಕೆ ರಾಜಕೀಯ ಎಂದರೆ ತಪ್ಪಾಗಲಾರದು.
ರಾಜಕಾರಣದಲ್ಲಿ ವೈಚಾರಿಕತೆ ಮತ್ತು ಸಂವೇದನಾಶೀಲತೆಯ ಅವಶ್ಯಕತೆಯಿದೆ. ಆದರೆ ವೈಯಕ್ತಿಕ ಹಿತಾಸಕ್ತಿ ಸಾಧನೆ ತಮ್ಮ ಹಕ್ಕು ಮತ್ತು ಆದ್ಯತೆ ಎಂಬುದು ಜನಪ್ರತಿನಿಽಗಳ ಅಂತರಾಳವಾದರೆ ಇದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಪಾಯಕ್ಕೆ ತಂದೊಡ್ಡಬಹುದು. ಕರೋನಾ ಹರಡುವಿಕೆಯ ಕಾರಣಕ್ಕೆ ಅಧಿವೇಶನ ಮುಂದೂಡಲಾಗಿದೆ ಎಂದಾದರೆ ಈ ವಿಚಾರದ ಬಗ್ಗೆ ಸದನದಲ್ಲಿ ಗಂಭೀರವಾಗಿ ಚರ್ಚಿಸಬೇಕಿತ್ತಲ್ಲವೇ? ಕೇವಲ ಅಧಿವೇಶನದ ಮುಂದೂಡಿಕೆಗಷ್ಟೇ ಕರೋನಾದ ಗಂಭೀರತೆ ಕಂಡಿತ್ತೇ? ಸದನದ ಒಳಗಡೆ ಕಾರ್ಯ ಕಲಾಪದಲ್ಲಿ ಪಾಲ್ಗೊಂಡಾಗ ಮಾತ್ರ ಇವರಿಗೆ ಕರೋನಾ ಹರಡುವಿಕೆಯ ಭೀತಿ ಎದುರಾಯಿತೇ? ಕರೋನಾ ತಡೆಗೆ ಕೇವಲ ಮಾರ್ಗಸೂಚಿಗಳನ್ನು ಪ್ರಕಟಿಸಿ ಕೈತೊಳೆದುಕೊಂಡರೆ ಕರೋನಾ ನಿಯಂತ್ರಣಕ್ಕೆ ಬರುತ್ತದೆಯೇ? ಹೋಗಲಿ, ಈ ಕರೋನಾ ಮಾರ್ಗಸೂಚಿಯನ್ನು ಜನಪ್ರತಿನಿಧಿಗಳು ಕಟ್ಟುನಿಟ್ಟಾಗಿ ಪಾಲಿಸುತ್ತಾರೆಯೇ? ಇವರೇ ರೂಪಿಸಿದ ಕರೋನಾ ಮಾರ್ಗಸೂಚಿಗಳನ್ನು ಚುನಾವಣಾ ಪ್ರಚಾರ ಸಂದರ್ಭದಲ್ಲಿ ಇವರೇ ಬ್ರೇಕ್ ಮಾಡುತ್ತಿದ್ದರೂ ಇವರ ಮೇಲೆ ಕಾನೂನು ಕ್ರಮ ಯಾಕಿಲ್ಲ? ಸಾವಿರಾರು ಜನರನ್ನು ಒಟ್ಟು ಸೇರಿಸಿ ರಾಜಕೀಯ ಶಕ್ತಿ ಪ್ರದರ್ಶನದ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಕರೋನಾ ಭೀತಿ ಎದುರಾಗುವುದಿಲ್ಲವೇ?
ಈ ಮಾರ್ಗಸೂಚಿಗಳು ಕೇವಲ ಜನಸಾಮಾನ್ಯರ ಮೇಲೆ ಹೇರಿಕೆಗಷ್ಟೇ ಸೀಮಿತವೇ? ಕರೋನಾ ನಿಯಮಗಳ ಉಲ್ಲಂಘನೆಗೆ ಜನಸಾಮಾನ್ಯರಿಗೆ ದಂಡ ವಿಧಿಸುವುದು ಬಿಟ್ಟರೆ ಜನಪ್ರತಿನಿಧಿಗಳಿಂದ ದಂಡ ವಸೂಲಿ ಮಾಡಿದ್ದಾರೆಯೇ?. ವಿರೋಧ ಪಕ್ಷಗಳ ಪ್ರತಿಭಟನೆ ಮತ್ತು ವಿರೋಧ ಪಕ್ಷದ ಶಾಸಕನೋರ್ವ ಸದನದ ಒಳಗಡೆ ತನ್ನ ಶರ್ಟ್ ಬಿಚ್ಚಿ ಅಸಭ್ಯ ವರ್ತನೆಯ ಕಾರಣಕ್ಕೆ ಸ್ಪೀಕರ್ ಆ ಶಾಸಕನನ್ನು ಕಲಾಪದಿಂದ ಅಮಾನತುಗೊಳಿಸಿದ್ದರೊಂದಿಗೆ ಆರಂಭವಾದ ಅಧಿವೇಶನ ಅಂತಿಮವಾಗಿ ಮಾರ್ಚ್ 24 ರಂದು ಸಚಿವ ಡಾ.ಕೆ.ಸುಧಾಕರ್ ಅವರು ನೀಡಿದ ‘ರಾಜ್ಯದ 225 ಶಾಸಕರು ನೈತಿಕ ಪರೀಕ್ಷೆಗೆ ಒಳಪಡಲಿ’ಎಂಬ ವಿವಾದಾತ್ಮಕ ಹೇಳಿಕೆಯಿಂದುಂಟಾದ ಗದ್ದಲದೊಂದಿಗೆ ಮುಕ್ತಾಯಗೊಂಡಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತವೆಂದೇ ಹೇಳಬೇಕು.
ಪೂರ್ವ ನಿರ್ಧರಿತ ‘ಒಂದು ರಾಷ್ಟ್ರ, ಒಂದು ಚುನಾವಣೆ’ಮೇಲಿನ ಚರ್ಚೆ ಪ್ರಾಮುಖ್ಯತೆಯನ್ನೇ ಪಡೆಯದಿರುವುದು ವಿಪರ್ಯಾಸ. ಬೇಸಿಗೆಯಲ್ಲಿ ಎದುರಾಗುವ ಬರಗಾಲ, ರೈತರ ಸಮಸ್ಯೆ, ವಿದ್ಯುತ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಜಾನುವಾರು ಗಳಿಗೆ ಮೇವಿನ ಸಮಸ್ಯೆ, ಅಗತ್ಯ ವಸ್ತುಗಳ ಬೆಲೆಯೇರಿಕೆ, ಮೂಲಭೂತ ಸೌಕರ್ಯಗಳ ಸಮಸ್ಯೆ, ಕರೋನಾ ಸಾಂಕ್ರಾಮಿಕದ ಸಮಸ್ಯೆ, ಖಾಸಗಿ ಶಾಲೆಗಳ ಶುಲ್ಕ ವಸೂಲಿ ವಿಚಾರ, ಪ್ರವಾಹ ಸಂತ್ರಸ್ತರಿಗೆ ಪುನರ್ವಸತಿ ವಿಷಯಗಳು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ ಮುಂತಾದ ಪ್ರಥಮ ಪ್ರಾಶಸ್ತ್ಯ ವಿಚಾರಗಳನ್ನು ಬದಿಗಿಟ್ಟು ಕಿರಿಯ, ಹಿರಿಯ ಮತ್ತು ಅನುಭವಿ ಸದಸ್ಯರು ಎಂಬ ವ್ಯತ್ಯಾಸವಿಲ್ಲದೇ ಸದನದಲ್ಲಿ ‘ಸೀಡಿ’ಸುತ್ತಲೇ ಗಿರಕಿ ಹೊಡೆದು ಜನಹಿತದ ವಿಚಾರಗಳನ್ನು ಕಡೆಗಣಿಸಿದ್ದು ಅಕ್ಷಮ್ಯ.
‘ಸೀಡಿ’ ವಿಚಾರವನ್ನೇ ಅತಿಯಾಗಿ ಪ್ರಸ್ತಾಪಿಸಿದ್ದರಿಂದ ಜನಸಾಮಾನ್ಯರ ಸಂಕಷ್ಟಗಳು ಅರಣ್ಯರೋಧನವೇ ಸರಿ. ಪ್ರಜಾಪ್ರಭುತ್ವದ ದೇಗುಲ ಎಂಬ ಸದನದಲ್ಲಿ ಅಸಭ್ಯತೆ ಮತ್ತು ಅನಾಗರಿಕರಂತೆ ವರ್ತಿಸಿ ಪ್ರಜ್ಞಾವಂತಿಕೆಯನ್ನು ಮರೆತು ಸದನದ ಪಾವಿತ್ರ್ಯತೆ ಯನ್ನು, ಘನತೆಯನ್ನು ಕುಂದಿಸಿದ್ದು ಖಂಡನೀಯ. ಪ್ರಜಾಸತಾತ್ಮಕ ಮೌಲ್ಯಗಳನ್ನು ಗಾಳಿಗೆ ತೂರಿ ದೊಂಬರಾಟ ಮಾಡಲು ಸದನಕ್ಕೆ ಬರಬೇಕೇ?.
ಒಟ್ಟಾರೆ ಈ ಎ ವಿದ್ಯಮಾನಗಳಿಂದ ಕೆಲವೇ ಮಂದಿ ಸದಸ್ಯರ ಬಗ್ಗೆ ಇದ್ದ ಕನಿಷ್ಠ ಗೌರವವೂ ಮಣ್ಣುಪಾಲಾಯಿತು. ಹೀಗಾಗಿ ‘ಮೂರೂ ಬಿಟ್ಟವರು ಊರಿಗೆ ದೊಡ್ಡವರು’ಎಂಬ ನಾಣ್ಣುಡಿಯನ್ನು ಸ್ವಲ್ಪ ಮಾರ್ಪಡಿಸಿ ‘ಮೂರೂ ಬಿಟ್ಟವರು ನೇತಾರ ನಾಗುವರು’ಎನ್ನುವುದು ಹೆಚ್ಚು ಪ್ರಸ್ತುತವೆನಿಸುತ್ತದೆ. ರಾಜಕೀಯ ನಾಯಕರು ಜನಪ್ರತಿನಿಧಿಗಳಾಗಿ ಚುನಾಯಿತರಾದ ಬಳಿಕ ಮೂರೂ ಬಿಡುತ್ತಾರೋ ಅಥವಾ ಮೂರೂ ಬಿಟ್ಟವರನ್ನು ಜನಪ್ರತಿನಿಧಿಗಳಾಗಿ ಜನರು ಚುನಾಯಿಸುತ್ತಾರೋ ಎಂಬುದನ್ನು ಮತದಾರ ಪ್ರಭುಗಳು ಸ್ವಯಂ ವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯವಿದೆ.
ಇತ್ತೀಚೆಗಿನ ಅಧಿವೇಶನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದರೆ ಅಧಿವೇಶನ ಆರಂಭವಾಗುವ ಮುನ್ನ ಕಲಾಪಗಳನ್ನು
ಆಪೋಶನಗೊಳಿಸಲು ಅನುಕೂಲವಾಗುವಂಥ ರೀತಿಯ ಸನ್ನಿವೇಶ ಮತ್ತು ಘಟನೆಗಳನ್ನು ಸೃಷ್ಟಿಸುವುದು ಇತ್ತೀಚಿನ ದಿನಗಳಲ್ಲಿ ರೂಢಿಯಾಗಿದೆ ಎಂಬುದು ಮನದಟ್ಟಾಗುತ್ತದೆ. ಆಡಳಿತ ಪಕ್ಷದವರ ಯಾವುದೇ ಕಾನೂನು ಬಾಹಿರ ಕೃತ್ಯಗಳು, ಪ್ರಕರಣಗಳು ವಿರೋಧ ಪಕ್ಷಗಳ ನಾಯಕರ ಗಮನಕ್ಕೆ ಅಥವಾ ವಿರೋಧ ಪಕ್ಷದವರ ವಿಚಾರಗಳು ಆಡಳಿತ ಪಕ್ಷದ ನಾಯಕರ ಗಮನಕ್ಕೆ ಬಂದಿದ್ದರೂ ಅದನ್ನು ಬಯಲು ಮಾಡುವುದು ಇಂಥ ಅಧಿವೇಶನಕ್ಕೆ ಕ್ಷಣಗಣನೆ ಆರಂಭವಾದಾಗ.
ಇದೊಂದು ಕೆಟ್ಟ ಪರಂಪರೆಯ ಸೃಷ್ಟಿಯಾಗಿದ್ದು, ರಾಜಕೀಯ ಪಕ್ಷಗಳ ವ್ಯವಸ್ಥಿತ ಕಾರ್ಯತಂತ್ರವಾಗಿದೆ. ಅಧಿವೇಶನದಲ್ಲಿ ಪಾಲ್ಗೊಂಡು ಜನಹಿತದ ಕಾರ್ಯಕ್ರಮಗಳನ್ನು ಅಥವಾ ಜನಸಾಮಾನ್ಯರ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳು ವಂಥ ಪ್ರಯತ್ನಗಳೇ ಕಾಣುತ್ತಿಲ್ಲ. ಇದಕ್ಕೆ ಕಾರಣವೇನೆಂದರೆ ಜನಪ್ರತಿನಿಧಿಗಳಾಗಿ ಆಯ್ಕೆಯಾದವರಿಗೆ ಜನರ ಸಮಸ್ಯೆಗಳ ಬಗ್ಗೆ ಅರಿವಿರುವುದಿಲ್ಲ.
ಚುನಾವಣೆಯಲ್ಲಿ ಗೆದ್ದ ಬಳಿಕ ಜನರ ಬಳಿ ತೆರಳಿದರೆ ಅಥವಾ ಜನರೊಂದಿಗೆ ಬೆರೆತರೆ ಕ್ಷೇತ್ರದ ಸಮಸ್ಯೆಗಳು ಗಮನಕ್ಕೆ ಬರುತ್ತವೆ. ಆದರೆ ಅಪಾರ ಹಣ ವ್ಯಯಿಸಿ ಚುನಾವಣೆ ಗೆದ್ದು ಜನಪ್ರತಿನಿಧಿಗಳೆನಿಸಿಕೊಂಡವರು ರಾಜ್ಯದ ರಾಜಧಾನಿಯ ಅಥವಾ ತಾಲೂಕು, ಜಿಲ್ಲಾ ಕೇಂದ್ರದ ಕುಳಿತುಕೊಂಡು ರಾಜಕೀಯ ದಾಳ ಉರುಳಿಸುವುದರ ತಲ್ಲೀನರಾದರೆ ಜನರ ಕಷ್ಟಗಳು ಇವರ ಅರಿವಿಗೆ
ಬರುವುದಾದರೂ ಹೇಗೆ? ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಕುರ್ಚಿ ಮತ್ತು ಅಧಿಕಾರದ್ದೇ ಚಿಂತೆ.
ಮಾರ್ಚ್ 15ರಂದು ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರವರು ಚರ್ಚಿಸಿರುವುದು ಕುರ್ಚಿ ಮತ್ತು ಅಧಿಕಾರವನ್ನು ಕೇಂದ್ರೀಕರಿಸಿಯೇ. ಮುಂದಿನ ಸಲ ನಮ್ಮದೇ ಅಧಿಕಾರ ಎಂದು ಬಿ.ಎಸ್ ಯಡ್ಯೂರಪ್ಪ ಹೇಳಿದರೆ ನಿಮ್ಮ ಕುರ್ಚಿಗೆ ನಾವು ಬರುವ ಕಾಲ ದೂರವಿಲ್ಲ ಎನ್ನುತ್ತಾ ಈಗಲೇ ವಿಧಾನ ಸಭೆಯನ್ನು ವಿಸರ್ಜಿಸಿ ಎಂದು ಒತ್ತಾಯಿಸಿದ್ದರು ಸಿದ್ದರಾಮಯ್ಯ.
ಜನಪ್ರತಿನಿಧಿಗಳಿಗೆ ಸಾಮಾಜಿಕ ಜವಾಬ್ದಾರಿ, ಉತ್ತರದಾಯಿತ್ವ ಎಂಬುದರ ಪರಿಜ್ಞಾನವೇ ಇಲ್ಲದಂತಾಗುತ್ತಿದೆ. ಇನ್ನು
ಪಕ್ಷಾಂತರಗೊಂಡ ೧೭ ಶಾಸಕರಿಂದ ಶಿಸ್ತಿನ ಪಕ್ಷ ಎಂದು ಗುರುತಿಸಿಕೊಳ್ಳುವ ಬಿಜೆಪಿಗೆ ಆಗಿರುವ ಲಾಭಕ್ಕಿಂತ ನಷ್ಟವೇ ಹೆಚ್ಚು. ಅವರ‍್ಯಾರೂ ಬಿಜೆಪಿಯ ತತ್ತ್ವ, ಸಿದ್ಧಾಂತ ಮೆಚ್ಚಿ ಬಂದವರಂತೂ ಅಲ್ಲವೇ ಅಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಅಽಕಾರ ವಂಚಿತರಾದ ಹತಾಶೆಯಿಂದ ಬಿಜೆಪಿಗೆ ಪಕ್ಷಾಂತರ ಮಾಡಿ ಈಗ ಅಽಕಾರ ಅನುಭವಿಸುತ್ತಿದ್ದಾರಷ್ಟೇ.
ಇವರೆಲ್ಲರೂ ಮಂತ್ರಿಗಿರಿಯ ಭರವಸೆಯಿಂದಲೇ ಪಕ್ಷಾಂತರ ಮಾಡಿದ್ದು ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಒಂದು
ವೇಳೆ ಅವರು ಅಧಿಕಾರ ಲಾಲಸೆಯಿಂದ ಪಕ್ಷಾಂತರ ಮಾಡಿಲ್ಲವಾಗಿದ್ದರೆ ಪಕ್ಷಾಂತರ ಮಾಡಿದ ಮಿತ್ರಮಂಡಳಿಯ ಎಲ್ಲಾ 17
ಮಂದಿಗೂ ಮಂತ್ರಿಗಿರಿಯ ಬೇಡಿಕೆ ಯಾಕೆ?. ಪಕ್ಷದ ತತ್ತ್ವ ಸಿದ್ಧಾಂತಕ್ಕೆ ಬದ್ಧರಾಗಿ ಪಕ್ಷನಿಷ್ಠೆ ತೋರಿಸಬಹುದಿತ್ತಲ್ಲವೇ? ಒಂದು ದೇಶ ಒಂದು ಚುನಾವಣೆಗಿಂತಲೂ ಮುಖ್ಯವಾಗಿ ಪಕ್ಷಾಂತರವನ್ನು ಮೊದಲು ನಿಷೇಧಿಸುವಂತಾಗಬೇಕು. ಈ ಪಕ್ಷಾಂತರ ಪಿಡುಗಿನಿಂದ ಅದೆಷ್ಟೋ ಸರಕಾರಗಳು ಪತನಗೊಂಡು ಬಳಿಕ ಮರು ಚುನಾವಣೆಗಾಗಿ ಕೋಟಿಗಟ್ಟಲೆ ಸಾರ್ವಜನಿಕ ಹಣವನ್ನು ವ್ಯಯಿಸಬೇಕಾದ ಸಂದರ್ಭ ಉಂಟಾಗಿದ್ದು ಪ್ರಜಾಪ್ರಭುತ್ವದ ಅಣಕವೇ ಸರಿ.
ಸಚಿವ ಡಾ.ಕೆ.ಸುಧಾಕರ್ ಅವರು ನೀಡಿದ ಹೇಳಿಕೆಯಿಂದ ಸದಸ್ಯರುಗಳಿಗೆ ಅವರ ಚಾರಿತ್ರ್ಯಹರಣ ಮತ್ತು ಆತ್ಮಾಭಿಮಾನ
ವನ್ನು ಅವಮಾನಿಸಿದಂತೆ ಭಾಸವಾಯಿತು. ಆದರೆ ಇವರು ಪ್ರತಿನಿಧಿಸುವ ಜನರ ಸಮಸ್ಯೆಗಳನ್ನು ಸದನದಲ್ಲಿ ಮಂಡಿಸಿ
ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸದೆ ಜನತೆಗೆ ದ್ರೋಹ ಬಗೆದಂತಾಯಿತು ಎಂಬ ಪಶ್ಚಾತ್ತಾಪ ಇವರನ್ನು ಕಾಡಲೇ ಇಲ್ಲ,
ಇವರು ತಮ್ಮ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಲೇ ಇಲ್ಲ. ಜನರ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪ ಮಾಡುವುದು ಬಿಡಿ, ಕನಿಷ್ಠ ಪಕ್ಷ ಜನರ ಸಮಸ್ಯೆಗಳನ್ನು ಆಲಿಸುವ ವ್ಯವದಾನವೂ ಇಲ್ಲವ ಎಂಬುದೇ ಆಶ್ಚರ್ಯ.
ಹಾಗಾಗಿ ಪ್ರತಿಯೊಬ್ಬ ರಾಜಕಾರಣಿಯೂ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆಯಿದೆ. ಒಬ್ಬಳೇ ಪತ್ನಿ, ಒಂದೇ ಸಂಸಾರ, ಪರಿಶುದ್ಧ ವ್ಯಕ್ತಿ’ಎಂದು ಸ್ಪಷ್ಟನೆ ಕೊಟ್ಟುಕೊಂಡು ತಿರುಗಾಡುವ ಪರಿಸ್ಥಿತಿ ರಾಜಕಾರಣಿಗಳಿಗೆ ಬಂದಿರುವುದು ನೈತಿಕ ಅಧಃಪತನದ ಸಂಕೇತ. ಚುನಾವಣಾ ಪ್ರಚಾರದ ಸಂದರ್ಭದಲ್ಲಿನ ಆಶ್ವಾಸನೆಗಳನ್ನು ಜನರು ತಮಗರಿವಿಲ್ಲದಂತೆ ಮರೆತರೆ ಜನಪ್ರತಿನಿಧಿಗಳು ಜಾಣತನದಿಂದಲೇ ಮರೆತು ಬಿಡುತ್ತಾರೆ.
ಓಟಿಗಾಗಿ ನೋಟು ಪಡೆದಿದ್ದರಿಂದ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ನೈತಿಕತೆಯನ್ನೇ ಜನರು ಕಳೆದುಕೊಂಡಿರುವುದು ಪ್ರಜಾಪ್ರ ಭುತ್ವ ವ್ಯವಸ್ಥೆಯ ಮತ್ತೊಂದು ವಿಡಂಬನೆ. ಜನತೆ ಜನಪ್ರತಿನಿಧಿಗಳ ಗುಲಾಮರಂತೆ ವರ್ತಿಸುವ ಸಂಸ್ಕೃತಿ ಮತ್ತು ಮನೋಭಾವನೆಯನ್ನು ಬೆಳೆಸಿಕೊಂಡಿರುವುದು ಹಾಗೂ ಅತಿಯಾದ ಪಕ್ಷನಿಷ್ಠೆಯನ್ನು ವ್ಯಕ್ತಪಡಿಸುವ ಮನಸ್ಥಿತಿಯನ್ನು ರೂಢಿಸಿಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಪಕ್ಷನಿಷ್ಠೆಯನ್ನು ಬದಿಗಿಟ್ಟು ಅಥವಾ ಪಕ್ಷಗಳ ಮೇಲೆ ಅವಲಂಬಿತ ವಾಗುವುದನ್ನು ನಿಲ್ಲಿಸಿ ಜನ ಸಾಮಾನ್ಯರು ಸಮಾನ ಮನಸ್ಕರಾಗಿ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಂಡರೆ ಖಂಡಿತವಾಗಿಯೂ ಜನ ಸಾಮಾನ್ಯರ ಬಗೆಗಿನ ಜನ ಪ್ರತಿನಿಧಿಗಳ ತಾತ್ಸಾರ ಮನೋಭಾವನೆಯನ್ನು ಕೊನೆ ಗಾಣಿಸಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.
ಸರಕಾರ ಮತ್ತು ಜನರ ನಡುವೆ ಕೊಂಡಿಯಂತಿರುವ ಮಾಧ್ಯಮಗಳನ್ನು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭ ಎಂದೂ ಕರೆಯುತ್ತಾರೆ. ಆದರೆ ಮಾಧ್ಯಮಗಳ ಪೈಕಿ ದೃಶ್ಯ ಮಾಧ್ಯಮಗಳು ನಿರ್ಣಾಯಕ ವಿಷಯಗಳ ಮೇಲೆ ಕೇಂದ್ರೀಕರಿಸುವ ಬದಲು ವಿಷಯಾಂತರ ಮಾಡುವ ಮಾಧ್ಯಮವಾಗಿ ಗುರುತಿಸಿಕೊಳ್ಳುತ್ತಿದೆ. ನಿಜವಾಗಲೂ ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಆಧಾರಸ್ತಂಭವಾಗಿದ್ದರೆ ಅದು ಒಂದಾಗಿ ವರ್ತಿಸುವ, ಸಮಸ್ಯೆಯ ಆಧಾರದ ಮೇಲೆ ಕಾರ್ಯನಿರ್ವಹಿಸುವ ಮತ್ತು ಸಮಸ್ಯೆ ಯನ್ನು ಕೇಂದ್ರೀಕರಿಸುವತ್ತ ಗಮನ ಹರಿಸುವ ಅಗತ್ಯವಿದೆ.
ರಾಜ್ಯದಲ್ಲಿ ಪ್ರಸ್ತುತ ಸೀಡಿ ವಿಚಾರಕ್ಕಷ್ಟೇ ಮಹತ್ವ ಕೊಟ್ಟು ದಿನಗಟ್ಟಲೆ ಆ ವಿಚಾರಗಳ ಬಗ್ಗೆಯೇ ಸುದ್ದಿ ಪ್ರಸಾರ ಮಾಡಿದ್ದು ಬಿಟ್ಟರೆ ಸರಕಾರವನ್ನಾಗಲೀ ಅಥವಾ ವಿರೋಧ ಪಕ್ಷವನ್ನಾಗಲೀ ಗಟ್ಟಿಯಾಗಿ ಪ್ರಶ್ನಿಸುವ ಗೋಜಿಗೆ ಹೋಗದೇ ಇರುವುದು ಮತ್ತೊಂದು ದುರಂತ.