Friday, 13th December 2024

ಸೋರಿದ್ದು ಪ್ರಶ್ನೆಪತ್ರಿಕೆಯಲ್ಲ, ವ್ಯವಸ್ಥೆಯ ಚಾವಣಿ

ರಾವ್ ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ನಾನು ಮನಸ್ಸು ಬಂದ ಗಿರಾಕಿ. ಓದಿನ ವಿಷಯದಲ್ಲಿ ಇನ್ನೂ ಹಾಗೇ. ಆದರೆ ಓದಬೇಕೆಂಬ ಮನಸ್ಸು ಬಂದದ್ದು ಅಪರೂಪ. ಹಾಗೆಂದೇ, ಪದವಿಪೂರ್ವ ದಿನಗಳಲ್ಲಿ ಪರೀಕ್ಷೆಗೆ ಒಂದು ದಿನ ಮುಂಚೆ ಸೋರಿದ ಪ್ರಶ್ನೆಪತ್ರಿಕೆ ನನಗೂ ಸಿಕ್ಕಿದಾಗ ಹಿರಿಹಿರಿ ಹಿಗ್ಗಲಿಲ್ಲ.

ಬದಲಾಗಿ, SSLC ಯಲ್ಲಿ rank ಪಡೆದಿದ್ದ ಸಹಪಾಠಿ ಮನೋಹರನ ಬಗ್ಗೆ ತಲೆಕೆಡಿಸಿ ಕೊಂಡೆ. ನಾವು ವಾಸವಿದ್ದದ್ದು ಕಾಲೇಜಿಗೆ ಸಮೀಪದ. ಅವನಿದ್ದುದು ಒಂದೈದಾರು ಕಿಮೀ ದೂರ. ಸ್ವಂತ ಪರಿಶ್ರಮದಿಂದಲೇ ಮತ್ತೆ rank ಪಡೆಯಬಹುದಾದ ಅವನಿಗೆ ಪ್ರಶ್ನೆಗಳು ಬಯಲಾದ್ದರಿಂದ ದ್ವಿತೀಯ PUC ಯಲ್ಲಿ rank ತಪ್ಪಿದರೇ ಎಂಬ ಚಿಂತೆ ನನ್ನದು. ಸರಿ, ಬೈಸಿಕಲ್ ಹಾಕಿಕೊಂಡು ಅವನ ಮನೆಗೆ ಹೋಗಿ ಪ್ರಶ್ನೆಗಳನ್ನು ಮುಟ್ಟಿಸಿದ್ದೆ.

PSI ಪರೀಕ್ಷಾ ಹಗರಣದ ಹಿನ್ನೆಲೆಯಲ್ಲಿ ಇದು ನೆನಪಾಯಿತು. ಬಯಲಾದ ಪ್ರಶ್ನೆ ಪತ್ರಿಕೆ ಯಿಂದ ನಾನು ಪ್ರಯೋಜನ ಪಡೆಯಲು ಆಸಕ್ತಿ ವ್ಯಕ್ತಪಡಿಸಲಿಲ್ಲ ಎಂಬ ಅಂಶ ಸಮಾಧಾನ ತಂದುಕೊಟ್ಟರೂ, ಸೋರಿಕೆಯನ್ನು ಪ್ರಾಂಶುಪಾಲರ ಗಮನಕ್ಕೆ ತರಲು ಮುಂದಾಗದೆ, ಪ್ರಶ್ನೆಗಳನ್ನು ಗೆಳೆಯನೊಂದಿಗೆ ಹಂಚಿಕೊಳ್ಳಲು ಹೋದದ್ದು ನೆನೆದು ನನ್ನ ಕೃತ್ಯದ ಬಗ್ಗೆ ನನಗೇ ಹೇಸಿಗೆ ಮೂಡಿತು. ಹೇಸಿಗೆಯ ಪ್ರಮಾಣ ಹೆಚ್ಚಾಗಲು ಕಾರಣ ದೂರು ನೀಡಬೇಕೆಂಬುದು ನನಗೆ ಇಷ್ಟೂ ವರ್ಷ ಹೊಳೆಯದಿದ್ದುದು. ಅದೆಂತಹ ಅಸೂಕ್ಷ್ಮ ವ್ಯವಸ್ಥೆಯಲ್ಲಿ ನಾವಿದ್ದೇವೆ!

ಅಂದಿನ ಹಗರಣ ಬೆಳಕಿಗೆ ಬಂದು ಪುನರ್‌ಪರೀಕ್ಷೆ ನಡೆದದ್ದರಿಂದ ತಪ್ಪು ಮಾಡಿದ್ದಕ್ಕೆ ಹೆಚ್ಚು ಕಸಿವಿಸಿ ಆಗಲಿಲ್ಲ. ಭೂಗತ ಸ್ಯುಯೇಜ್ ಪೈಪ್ ಒಡೆದಾಗ ಹತ್ತಿರದ, ಹಳತಾಗಿ ತುಕ್ಕು ಹಿಡಿದ ನೀರಿನ ಪೈಪೊಳಗೆ ಮಲಿನಗೊಂಡ ನೀರು ಸೇರಿ ರೋಗರುಜಿನಗಳಿಗೆ ಕಾರಣವಾಗುವ ಪ್ರಸಂಗ ಆಗಾಗ್ಗೆ ವರದಿಯಾಗುತ್ತಿರುತ್ತೆ. (ವರದಿಯಾಗದ ಪ್ರಕರಣಗಳಿದ್ದರೆ ಆಶ್ಚರ್ಯಪಡಬೇಕಿಲ್ಲ!) ಅದಕ್ಕೆ ನಮ್ಮ ವ್ಯವಸ್ಥೆಯೂ ಹೊಂದಿ
ಕೊಂಡುಬಿಟ್ಟಿದೆ. ಕೊಳಚೆ ನೀರು ಮತ್ತು ಕುಡಿಯುವ ನೀರಿನ ಪೈಪ್‌ಗಳು ಅಕ್ಕಪಕ್ಕದನಿರುವುದಿಲ್ಲ. ಆದರೂ, ಕುಡಿಯುವ ನೀರನ್ನು ಕೆಡಿಸಲು ಅವುಗಳ ಸಾಮೀಪ್ಯ ಸಾಕು.

ಸಬ್-ಇನ್ಸ್‌ಪೆಕ್ಟರ್ ಪರೀಕ್ಷೆಯಲ್ಲಿ ಮೈಮುರಿದು ಓದಿದ ಅಭ್ಯರ್ಥಿಗಳು – ಅಂಥವರು ಇದ್ದದ್ದೇ ಆದಲ್ಲಿ – ಖದೀಮ ಅಭ್ಯರ್ಥಿಗಳು ಸೃಷ್ಟಿಸಿದ ಅವಾಂತರಕ್ಕೆ ಬೆಲೆ ತೆರಬೇಕಾಗಿದೆ, ವಿಧಿಯಿಲ್ಲ. ‘ಮಾಡಿದ್ದುಣ್ಣೋ ಮಾರಾಯ’ ಎಂಬ ಮಾತು ನಿಜ. ಆದರೆ ಪಾಪ ಮಾಡದವರೂ ಅದರ ವಿಷಪೂರಿತ ಫಲವನ್ನು ಉಣ್ಣಬೇಕಾದ ಪ್ರಸಕ್ತ ವಿಪರ್ಯಾಸವನ್ನು ಗೀತೆಯ ಸಾಮೂಹಿಕ ಕರ್ಮವೆಂಬ ಪರಿಕಲ್ಪನೆ ವಿವರಿಸುತ್ತದೆ. ಮಾಡಬೇಕಾದ ಕೆಲಸವನ್ನು ಅಚ್ಚುಕಟ್ಟಾಗಿ ಪೂರೈಸಲು ಮೊದಲನೆಯದಾಗಿ, ಅದನ್ನು ಸಾಽಸುವವನ ಉದ್ದೇಶ ಪ್ರಾಮಾಣಿಕವಾಗಿರ ಬೇಕು.

ನೇಮಕ ಮಾಡುವ ಸರಕಾರದ ಉದ್ದೇಶದ ಪ್ರಾಮಾಣಿಕತೆಯಿಲ್ಲ. ನೇಮಕ ಮಾಡುವುದೇ ಜೇಬು ತುಂಬಿಸಿಕೊಳ್ಳುವುದಕ್ಕಾಗಿ. ಕಳ್ಳ ಕಾಕರೇ ಆಳುವಾಗ ಕಳ್ಳರನ್ನಲ್ಲದೆ ಪ್ರಾಮಾಣಿಕ ಅಭ್ಯರ್ಥಿಗಳನ್ನು ನೇಮಿಸುತ್ತಾರೆಯೇ? ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂದು ಭ್ರಷ್ಟಾಚಾರಕ್ಕೆ ನೀರೆರೆದ ಸಿದ್ಧರಾಮಯ್ಯನವರೇ ನೊಂದು(!) ನುಡಿದಿದ್ದಾರೆ ಎಂದರೆ ಭ್ರಷ್ಟಾಚಾರದ ವ್ಯಾಪ್ತಿ ತಿಳಿಯುತ್ತದೆ.

ಸಾಮಾನ್ಯವಾಗಿ ಯಾವುದೇ ಕೆಲಸಕ್ಕೆ ಜನ ಪರಿಚಿತರನ್ನು ಬಯಸುತ್ತಾರೆ. ಕೆಲಸ ಸುಗಮವಾಗುವುದೆಂಬ ನಂಬಿಕೆ. ಅನೇಕ ಸಂದರ್ಭ ಗಳಲ್ಲಿ ಅದು ನಿಜವೂ ಹೌದು. ಗುರುತಿನವರು ಸಿಗುವುದು ಸ್ವಜಾತಿಯ ಹೆಚ್ಚು! ಒಂದೇ ಬಳ್ಳಿಯ ಹೂಗಳಲ್ಲಿ ಅಡ್ಡವಾಸನೆಯೆಂತು? ಸ್ವಜನ ಪಕ್ಷಪಾತಕ್ಕೆ ಕಾರಣ ಗುರಿಯ ಏಕತೆ. ದೋಚುವುದಕ್ಕಿಂತ ಸರಾಗವಾದ ಸಂಪಾದನೆಯ ಮಾರ್ಗಗಳಿಲ್ಲ. ದೋಚುವು ದನ್ನು ಕಾನೂನು ನಿಷೇಧಿಸುತ್ತದೆ. ದೋಚುವುದನ್ನು ತಡೆಯುವವರನ್ನೇ ದೋಚುವುದಕ್ಕೆ ನೇಮಿಸಿಬಿಟ್ಟರೆ ದೋಚುವುದು ಮತ್ತಷ್ಟು ಸಲೀಸು.

ದೋಚುವುದನ್ನು ತಡೆಯಬೇಕಾದವರೇ ದೋಚುವುದಕ್ಕಿಳಿಯುವುದು ಇಂದಿನ ವ್ಯವಸ್ಥೆಯ ನಿಯಮ, ಪೂರ್ವಷರತ್ತು. ಹಾಗಾಗಿಯೇ, ಕರ್ನಾಟಕ ಲೋಕ ಸೇವಾ ಆಯೋಗದ ಪ್ರವೇಶ ಪರೀಕ್ಷೆಯೇ ಇರಲಿ ಸಬ್-ಇನ್ಸ್‌ಪೆಕ್ಟರ್ ಹುದ್ದೆಗಾಗಿ ನಡೆಯುವ ಪರೀಕ್ಷೆಯೇ ಇರಲಿ ಅಂತಃಸ್ಸಂಬಂಧಗಳನ್ನು ಪೊರೆಯುವ ಮಾರ್ಗಗಳಾಗಿವೆ. ಗುರಿಯೂ ಅನೈತಿಕ, ಮಾರ್ಗವೂ ಅನೈತಿಕ. ಅಂತಃಸ್ಸಂಬಂಧದಿಂದ ಹುಟ್ಟಿದ ಮಕ್ಕಳು ದುರ್ಬಲವಾಗಿರುತ್ತವೆ. ಕ್ರಮೇಣ ಆ ಸಂತತಿಯೂ ನಶಿಸುತ್ತದೆ. ನಮ್ಮ ಸಮಾಜ ವಿನಾಶದ ಹಾದಿ ಹಿಡಿದಿರುವುದು
ಈ ಕಾರಣಕ್ಕೆ.

ನೇಮಕ ಮಾಡುವವರಲ್ಲೂ, ನೇಮಕಗೊಳ್ಳುವವರಲ್ಲೂ ಸಾರ್ವಜನಿಕ ಸೇವೆಯೆಂಬ ಪರಿಕಲ್ಪನೆ ಮಾಯವಾಗಿ ಒಂದೆರಡು ತಲೆಮಾರೇ ಕಳೆದಿವೆ. ಒಂದು ಬಾರಿ ಬಂಡವಾಳ ಹೂಡಿ ಜೀವನಪರ್ಯಂತ ಲಾಭವನ್ನು ಕೊಳ್ಳೆಯ ಮೂಲಕ ಪಡೆಯುತ್ತಲೇ ಹೋಗುವ ದಂಧೆ ಸಾರ್ವತ್ರಿಕವಾಗಿದೆ. ನೇಮಕಕ್ಕೆ ನಡೆಸುವ ಪರೀಕ್ಷೆಯೇ ಕಾಟಾಚಾರ. ಪರೀಕ್ಷೆಯೆಂಬ ಪ್ರಹಸನದಲ್ಲಿ ಅಕ್ರಮವೆಸಗಿದ್ದು ಸುದ್ದಿಯಾಗಿದ್ದೇ
ಪರಮಾಶ್ಚರ್ಯ. ಈ ಮೊದಲು ನಡೆದ ಪರೀಕ್ಷೆಗಳೆಲ್ಲ ನೆಟ್ಟಗೆ ನಡೆದಿದ್ದವು ಎಂಬುದೇ ನಂಬಲಸಾಧ್ಯ. ಇಂತಹ ಹಗರಣಗಳು ಹೊರ ಬರುವುದೇ ಬಂಡವಾಳ(!) ಹೂಡಿದವರ ನಡುವೆ ಹಂಚಿಕೆ ಕುರಿತಂತೆ ನಡೆಯುವ ಭಿನ್ನಾಭಿಪ್ರಾಯದಿಂದ.

ಸಮಾನ ಮನಸ್ಕರ ನಡುವಿನ ತಗಾದೆ ಇದಾಗಿರುತ್ತದೆ, ಆ ಕಾರಣಕ್ಕೇ ವ್ಯಾಜ್ಯದ ಸ್ವರೂಪ ಪಡೆಯುವುದಿಲ್ಲ. ಎಂದಿಗಿಂತ ಹೆಚ್ಚು ಸದ್ದಾಯಿತೆಂದರೆ, ಚುನಾವಣೆ ಹತ್ತಿರವಿದೆ ಎಂದರ್ಥ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವುದೇ ಸರಿಯಿಲ್ಲ. ಬೇಲಿ ಇದ್ದರಲ್ಲವೇ? ಇದ್ದರೂ ಅದು ತೋರ್ಪಡಿಕೆಯ ಬೇಲಿ. ಆ ಬೇಲಿ ಇರುವುದೇ ಮೇಯುವುದನ್ನು ಮತ್ತಷ್ಟು ಸುಗಮಗೊಳಿಸುವುದಕ್ಕೆ. ಕಳ್ಳನನ್ನು ಹಿಡಿಯಲು ಕಳ್ಳನನ್ನು ಬಿಟ್ಟಂತೆ ಎಂಬ ಮಾತಿದೆ. ಅದೂ ಸದ್ಯದ ಪರಿಸ್ಥಿತಿಯನ್ನು ವರ್ಣಿಸಲು ಅಶಕ್ತ. ಏಕೆಂದರೆ, ಆ ಮಾತಿನಲ್ಲಿ ಕಳ್ಳನನ್ನು ಹಿಡಿಯ ಬೇಕೆಂಬ ಇಂಗಿತವಿದೆ.

ಇಲ್ಲಿ, ಕಳ್ಳರ ಹಿಂದೆ ಓಡುತ್ತಿರುವ ಕಳ್ಳರಿಗೆ ಅವರನ್ನು ಹಿಡಿಯುವ ಇರಾದೆಯೇ ಇಲ್ಲ. ಅವರು ನಮ್ಮೋರೇ ಎಂಬ ಪ್ರಜ್ಞೆ ಕಳ್ಳರ ಹಿಂದೆ
ಬಿದ್ದವರನ್ನು ಕಾಡುವಾಗ ಓಡುವ ಕಾಲುಗಳು ತೊಡರುತ್ತವೆ. ಒಂದೆರಡು ಪ್ರಕರಣಗಳನ್ನು ಪರಿಶೀಲಿಸೋಣ. ಎರಡು ವರ್ಷಗಳ ಹಿಂದೆ, ಮಾಜಿ ಪ್ರಧಾನಮಂತ್ರಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯ ವಿವಾಹ ನೆರವೇರಿತು. ಅದು ನಡೆದದ್ದು ಕೋವಿಡ್ ವಿಕೋಪ ತಾರಕದಲ್ಲಿದ್ದಾಗ, ಸಾಮಾನ್ಯ ನಾಗರಿಕರಿಗೆ ಕೋವಿಡ್ ನಿಯಮ ಕಡ್ಡಾಯವಿದ್ದು ಉಲ್ಲಂಘಿಸಿದವರನ್ನು ಪೊಲೀಸರು ದನ ಬಡಿ ದಂತೆ ಬಡಿಯುತ್ತಿದ್ದ ದಿನಗಳಲ್ಲಿ. ಸಮಾಜಕ್ಕೆ ಮಾದರಿಯಾಗಬೇಕಿದ್ದ ಕುಟುಂಬವೇ ಬಿಡುಬೀಸಾಗಿ ನಿಯಮಗಳನ್ನು ನಿರ್ಲಜ್ಜೆಯಿಂದ ಉಲ್ಲಂಸಿದಕ್ಕಾಗಿ ಅವರ ಮೇಲೆ ಕ್ರಮ ಜರುಗಿಸುವುದಿರಲಿ, ಅಂದಿನ ಮುಖ್ಯಮಂತ್ರಿಯೇ ಆ ಕುಟುಂಬದ ಪರವಾಗಿ ನಿಂತು ಮಾತನಾಡು ತ್ತಾರೆ.

ಅಷ್ಟೇ ಅಲ್ಲದೆ ಆ ವಿವಾಹ ಮಹೋತ್ಸವಕ್ಕೆ ತೆರಳಿ ವಧೂವರರನ್ನು ಆಶೀರ್ವದಿಸುತ್ತಾರೆ. ಧರಿಸಿದ ಸಮವಸದ ಗೌರವವನ್ನು ಹರಾಜು
ಹಾಕಿ ಆಡಳಿತ ಪಕ್ಷದ ಸೇವೆಗೆ ಟೊಂಕ ಕಟ್ಟಿ ನಿಂತ ಅದಾವ ಡಿಜಿಪಿ ಎಂಬ ಎಂಟೆದೆಯ ಬಂಟ ಕ್ರಮ ಜರುಗಿಸಲು ಮುಂದಾದಾನು? ಕೂಟ ಕೂಡಬಾರದೆಂದು ಹೇಳುವ ಸರಕಾರದ ಉದ್ದೇಶವಾದರೂ ಏನು? ದೊಡ್ಡ ಮನುಷ್ಯರು ಜತೆಗೂಡಿದರೆ ವೈರಸ್ ಹರಡುವುದಿಲ್ಲವೇ? ಉದ್ದೇಶಪೂರ್ವಕವಾಗಿ ರೋಗವನ್ನು ಹರಡಿದ ತಬ್ಲೀಗಳಿಗೂ, ಈ ಹಾಸನದ ಕುಟುಂಬಕ್ಕೂ ವ್ಯತ್ಯಾಸವಾದರೂ ಏನು? ಈ ಉಲ್ಲಂಘನೆ ನಡೆದಿದ್ದು ಏಪ್ರಿಲ್ ೨೦೨೦ರಲ್ಲಿ. ಇದಾದ ಒಂದು ವರ್ಷಕ್ಕೆ ಸರಿಯಾಗಿ ನಾರ್ವೆ ದೇಶದ ಪ್ರಧಾನಿ ಎನಾರ್ ಸೋಲ್ಬರ್ಗ್‌ಗೆ ಸುಮಾರು ೨೦೦೦೦ ಕ್ರೌನ್‌ಗಳಷ್ಟು ದಂಡ ವಿಧಿಸಲಾಯಿತು.

ತನ್ನ ಷಷ್ಟ್ಯಬ್ದಿಯ ಸಂಭ್ರಮಕ್ಕಾಗಿ ತನ್ನ ಕುಟುಂಬದ 13 ಜನರನ್ನು ರೆಸಾರ್ಟ್ ಒಂದರಲ್ಲಿ ಕಲೆ ಹಾಕಿ ಹುಟ್ಟುಹಬ್ಬವನ್ನು ಆಚರಿಸುವುದರ ಮೂಲಕ ಕೋವಿಡ್ ನಿಯಮವನ್ನು ಉಲ್ಲಂಸಿದ್ದಕ್ಕಾಗಿ ಆಕೆ ತೆರಬೇಕಾದ ದಂಡವದಾಗಿತ್ತು. ದಂಡ ವಿಧಿಸಿದ ಪೊಲೀಸ್ ಅಧಿಕಾರಿ ಅದನ್ನು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ಕಡುಭ್ರಷ್ಟವಾದ ನಮ್ಮ ವ್ಯವಸ್ಥೆಯಲ್ಲಿ ಅದು ಸಾಧ್ಯವಿಲ್ಲ. ಕುಮಾರಸ್ವಾಮಿ ಎಂಬ ಆಡಳಿತಾರೂಢ ಬಿಜೆಪಿ ಶಾಸಕ (ಮೂಡಿಗೆರೆ) ತನ್ನ ವಿರೋಧದ ನಡುವೆಯೂ ಅಧಿಕಾರ ವಹಿಸಿಕೊಂಡ ಪೊಲೀಸ್ ಇನ್ಸ್‌ಪೆಕ್ಟರ್‌ನನ್ನು ಏಕವಚನದ
ಹೀಯಾಳಿಸಿ ಠಾಣೆಯಿಂದ ಜಾಗ ಖಾಲಿಮಾಡು ಎಂದು ಬೆದರಿಸಿದ ನಂತರವೂ ತಪ್ಪೆಸಗಿದ ಶಾಸಕನ ಮೇಲೆ ಯಾವುದೇ ಕ್ರಮ ಜರು ಗಿಸಿಲ್ಲ.

ಸರಕಾರಿ ಅಽಕಾರಿಯನ್ನು ಕೆಲಸಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಕುಮಾರಸ್ವಾಮಿ ಬಂಧನಕ್ಕೊಳಗಾಗಬೇಕಿತ್ತು. ಗೃಹ ಸಚಿವರು ಕರೆಸಿ ಮಾತನಾಡುತ್ತಾರಂತೆ. ಉಗಿಸಿಕೊಂಡ ಇನ್ಸ್‌ಪೆಕ್ಟರ್‌ಗೂ ನರವಿಲ್ಲ – ಅನೈತಿಕ ರಾಜಕಾರಣಿಯ ಮರ್ಜಿಗೊಳಗಾದರೆ ಧೈರ್ಯ ಎಲ್ಲಿಂದ ಬರುತ್ತೆ? ಮೇಲೆ ಕೂತ ಡಿಜಿಪಿ ಮಹಾಶಯರಿಗೆ ತನ್ನ ಚೇಂಬರ್‌ನ ಏರ್‌ಕಂಡೀಷನರ್ ಸದ್ದಿನಲ್ಲಿ ಶಾಸಕ ತನ್ನ ಅಧೀನ ಅಧಿಕಾರಿಗೆ
ಬೈದದ್ದು ಕೇಳಿರುವುದಿಲ್ಲ. Shameless fellas!

ದುರುಳರ ಅಭೇದ್ಯ ಕೋಟೆಯಿದೆಂದು ಪರಿಗಣಿಸಿ ದುಷ್ಟರಿಂದ ದೂರವಿರುವುದೇ ಲೇಸೆಂದು ಜನಸಾಮಾನ್ಯರು ಕೈಚೆಲ್ಲಿ ಕೂಡುವುದು ಸಮಸ್ಯೆಗೆ ಪರಿಹಾರವಲ್ಲ. ಖಾದಿ ಖಾಕಿಯ ಮೇಲೆ ನಡೆಸುವ ಈ ದರ್ಬಾರಿನಿಂದ ಸಂಭವಿಸುವ ಹಾನಿ ಅಪಾರ. ಸಂಖ್ಯಾಬಲದಿಂದ ಪ್ರಬಲವೆಂದು ಗುರುತಿಸಲ್ಪಡುವ ಜಾತಿಗಳ (ಸಾಮಾನ್ಯ) ಜನರಿಗೂ ಅರಾಜಕತೆಯ ಬಿಸಿ ತಟ್ಟುತ್ತಲಿದೆ.

ಆಯಾ ಜಾತಿಗಳ ಪ್ರತಿನಿಧಿಗಳು ಆಯಾ ಜಾತಿಗಳ ಜನರಿಗೆ ಮಾತ್ರ ಒಳಿತನ್ನು ಮಾಡುವ ಮಾದರಿಗೆ ಪ್ರಜಾಸತ್ತೆ ಎಂದು ಕರೆಯ ಲಾಗುವುದಿಲ್ಲ. ಮುಖ್ಯವಾಗಿ, ಇಲ್ಲಿ ಯಾರಿಗೂ ಒಳಿತಾಗುತ್ತಿಲ್ಲ. (ಜಾತಿಯೊಂದೇ ಕಾರಣದಿಂದ ಚುನಾಯಿಸಿದ) ಜನಪ್ರತಿನಿಧಿಯಿಂದ (ಜಾತಿ ಯೊಂದೇ ಆಧಾರದ ಮೇಲೆ) ಗುತ್ತಿಗೆ ಗಿಟ್ಟಿಸಿಕೊಳ್ಳುವುದೋ, ನಿವೇಶನ/ಉನ್ನತ ಹುದ್ದೆ/ಪ್ರಶಸ್ತಿ/ನೌಕರಿ  ಪಡೆದುಕೊಳ್ಳುವುದೋ ಒಳಿತಲ್ಲ. ಅದು ಅನೈತಿಕ ಲಾಭ.

ಹಾಗೆ ದಯಪಾಲಿಸುವ ಲಾಭವೂ ಅನಿರ್ದಿಷ್ಟವಾಗಿರಲು ಸಾಧ್ಯವಿಲ್ಲ. ಪ್ರಬಲ ಜಾತಿಗಳ ಎಲ್ಲ ಜನರಿಗೂ ಆ ಲಾಭ ದೊರಕುವುದಿಲ್ಲ
(ದೇವರು ದೊಡ್ಡವನು!) ಆ ಕಾರಣಕ್ಕಾದರೂ, ಮತದಾರರೆಲ್ಲರೂ ಜಾತ್ಯತೀತವಾಗಿ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆಮಾಡುವ ಹೊಣೆಯನ್ನು ಅರಿಯಬೇಕಾಗುತ್ತದೆ. ಇದು ಸಮಷ್ಟಿಯ ಒಳಿತಿಗಾಗಿ ಅವಶ್ಯ. ನಾನು ಮತ್ತೆ ಮತ್ತೆ ರಾಜ್ಯದ ಮೂರು ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜನತಾ ದಳದ ನಾಯಕರನ್ನು ಹೆಸರಿಸುವುದು ನನ್ನ ನಿಷ್ಪಕ್ಷಪಾತ ನಿಲುವನ್ನು ಪ್ರಚುರಪಡಿಸಲಿಕ್ಕಲ್ಲ; ಸ್ಥಳೀಯ ವಾಗಿ ಈ ಮೂರೂ ಪಕ್ಷಗಳ ನಡುವೆ ಅಂತಹ ಗಣನೀಯ ವ್ಯತ್ಯಾಸವಿಲ್ಲ ಎಂಬುದನ್ನು ಒತ್ತಿ ಹೇಳಲಿಕ್ಕಷ್ಟೆ.

ಆಪರೇಷನ್ ಕಮಲದ ಹೆಸರಿನಲ್ಲಿ ಮುಳ್ಳು- ಕಳ್ಳಿಗಳನ್ನೆಲ್ಲ ಎಳೆದುಕೊಳ್ಳುವ ಪಕ್ಷ ಅದಾವ ಸೀಮೆ ಪರಿಶುದ್ಧ ಆಡಳಿತ ನೀಡಬಲ್ಲುದು? PSI ಪರೀಕ್ಷೆ ಅಕ್ರಮದಲ್ಲಿ ಯಾರು ಭಾಗಿಗಳು ಎಂಬುದು ಔಪಚಾರಿಕ ಪ್ರಶ್ನೆಯಷ್ಟೆ. ಅದು ಯಾರೇ ಆಗಿರಬಹುದು, ಎಲ್ಲ ಪಕ್ಷಗಳ ಪ್ರತಿನಿಧಿ ಗಳೂ ಇದ್ದಿರಬಹುದು. ಒಂದು ವೇಳೆ, ಒಂದು ಪಕ್ಷದವರ ಹೆಸರು ಕೇಳಿಬರಲಿಲ್ಲವೆಂದ ಮಾತ್ರಕ್ಕೆ ಆ ಪಕ್ಷ ಅಗ್ನಿಪರೀಕ್ಷೆಯಲ್ಲಿ ಗೆದ್ದಂ ತೇನಲ್ಲ. ವ್ಯವಸ್ಥೆಯನ್ನು ಎಲ್ಲರೂ ಶಕ್ತಿಮೀರಿ ಹದಗೆಡಿಸಿದ್ದಾರೆ.

ಈಗಾಗಲೇ ಕೆಟ್ಟು ಕೆರವಾಗಿರುವ ಪೊಲೀಸ್ ಇಲಾಖೆಗೆ ಮತ್ತಷ್ಟು ಕಳಂಕ ಮೆತ್ತಿಕೊಳ್ಳಲು ಅದರ ಮುಖದಲ್ಲಿ ಜಾಗವಾದರೂ ಎಲ್ಲಿ? ಅಪರಾಧ ತಡೆಗಟ್ಟುವುದರ ಜತೆಗೆ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಹೊತ್ತ ಪೊಲೀಸ್ ಇಲಾಖೆಯನ್ನು ಭ್ರಷ್ಟಾಚಾರದ ಮೂಲಕ ದುರ್ಬಲಗೊಳಿಸುತ್ತಿರುವುದಕ್ಕೆ ತೆರಬೇಕಾದ ಬೆಲೆ ಊಹೆಗೆ ನಿಲುಕದ್ದು. ರಾಜ್ಯದಲ್ಲಿನ ಇಂದಿನ ಬೆಳವಣಿಗೆಗಳು ಆ ಕುರಿತು ಕಿರುನೋಟ ಬೀರಿದೆ.