Saturday, 14th December 2024

ಕಲಿಕೆ ನಿರಂತರ ಎಂದಿದ್ದ ಪದ್ಮಶ್ರೀ

ದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್

ಭಳಿರೇ ಪರಾಕ್ರಮ ಕಂಠೀರವ!
ಬಲ್ಲಿರೇನಯ್ಯಾ?
ಇರುವಂಥಾ ಸ್ಥಳ…
ಯಕ್ಷಗಾನ ರಂಗಕ್ಕೆ ಯಾರೆಂದು ಕೇಳಿದ್ದೀರಿ?
ರಂಗಸ್ಥಳ ಕಿರೀಟಿ, ಯಕ್ಷಗಾನ ಕ್ಷೇತ್ರದಲ್ಲಿ ಮೊದಲ
ಪದ್ಮಶ್ರೀ ಪ್ರಶಸ್ತಿ ಪಡೆದ, ಚಿಟ್ಟಾಣಿ ರಾಮಚಂದ್ರ
ಹೆಗಡೆ ಎಂದು ಕೇಳಿದ್ದೇವೆ.
ಹಾಗೆಂದುಕೊಳ್ಳಬಹುದು…
ಯಕ್ಷಗಾನ ಕಲಾಭಿಮಾನಿಗಳು ಈ ಮಾತುಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುತ್ತಾರೆ, ಒಪ್ಪಿಕೊಳ್ಳುತ್ತಾರೆ. ಚಿಟ್ಟಾಣಿ ಎಂದರೆ ತನ್ನ ಜೀವನದ ಏಳು ದಶಕಗಳನ್ನು ರಂಗಸ್ಥಳದಲ್ಲಿ ತೇಯ್ದ ಗೋಶೀರ್ಷದ ಕೊರಡು. ಯಕ್ಷಗಾನ ಕ್ಷೇತ್ರದಲ್ಲಿ ಚಿಟ್ಟಾಣಿ ಘರಾಣೆ ಯನ್ನೇ ಸೃಷ್ಟಿಸಿದ ಅಭಿಜಾತ ಕಲಾವಿದ. ಹುಳುಕು-ಕೊಳಕು ತಿಳಿಯದ ಮುಗ್ಧ, ಸ್ನಿಗ್ಧ ಮನೋಭಾವ. ಅಬ್ಬಬಾ ಎಂದರೆ ಐದಡಿಯಷ್ಟಿರುವ ಕೃಶ ಜೀವಿ ವೇಷ ಕಟ್ಟಿಕೊಂಡು ರಂಗಸ್ಥಳಕ್ಕೆ ಬಂದರೆ, ‘ಅಮಮಾ ಇವನೆಂತ ಮಾಯಗಾರನೋ’ ಎಂದೆನಿ ಸುವ ವೈಖರಿ. ಯಕ್ಷಲೋಕದ ಛಲದಂಕ ಚಕ್ರೇಶ್ವರ, ತನ್ನ ಪ್ರವೇಶದಿಂದಲೇ ಸಭಿಕರನ್ನೆಲ್ಲ ತಟ್ಟನೆ ಜಾಗೃತಗೊಳಿಸುವ ಮಾಟಗಾರ, ನೃತ್ಯ, ಅಭಿನಯದಿಂದ ನೋಡುಗರನ್ನು ಬಂಧಿಸುವ ಮೋಡಿಗಾರ.

ಏಳು ವರ್ಷದ ಹಿಂದೆ ಈ ಮೇರು ಕಲಾವಿದನನ್ನು ಕಾಣುವ ಭಾಗ್ಯ ಬಹ್ರೈನ್ ಕನ್ನಡಿಗರಿಗೆ ಒದಗಿ ಬಂದಿತ್ತು. ಬಹ್ರೈನ್ ಕನ್ನಡಿಗರ ಯಕ್ಷಗಾನದ ಪ್ರೀತಿಯ ಸ್ಥರವೇ ಬೇರೆ. ಕಳೆದ ಮೂರು ದಶಕಗಳಿಂದ ಹಿಮ್ಮೇಳ, ಮುಮ್ಮೇಳ, ಸ್ವಂತ ವೇಷ ಭೂಷಣಗಳನ್ನೊಳ ಗೊಂಡು, ವಿದೇಶದಲ್ಲಿ ಸುಸಜ್ಜಿತ ಯಕ್ಷಗಾನ ತಂಡವನ್ನು ಹೋದಿದವರಲ್ಲಿ ಬಹ್ರೈನ್ ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. ಅಂತಹ ಕಲಾಸಕ್ತರಿಗೆ ಚಿಟ್ಟಾಣಿಯವರನ್ನು ತಮ್ಮ ನೆಲದಲ್ಲಿ ಕಾಣುತ್ತೇವೆಂಬ ಸಂಭ್ರಮ. ಎಲ್ಲವೂ ಎಣಿಸಿದಂತೆಯೇ ಆಗಿದ್ದರೆ ಚಿಟ್ಟಾಣಿ ಮೂರು ತಲೆಮಾರನ್ನು (ರಾಮಚಂದ್ರ ಹೆಗಡೆ, ಇಬ್ಬರು ಮಕ್ಕಳು ಸುಬ್ರಹ್ಮಣ್ಯ, ನರಸಿಂಹ ಮತ್ತು ಮೊಮ್ಮಗ ಕಾರ್ತಿಕ) ಒಂದೇ ರಂಗಸ್ಥಳದಲ್ಲಿ ಕಾಣಬೇಕಿತ್ತು. ಕೊನೆ ಘಳಿಗೆವರೆಗೂ ಪಾಸ್ಪೋರ್ಟ್ ಕೈಗೆ ಸಿಗದ ಕಾರಣ ಮೊಮ್ಮಗ ಕಾರ್ತಿಕ ಆ ಸಂದರ್ಭದಲ್ಲಿ ಬರಲಾಗಲಿಲ್ಲ, ಉಳಿದಂತೆ ಒಂಭತ್ತು ಜನರ ತಂಡ ಮುತ್ತಿನ ದ್ವೀಪದಲ್ಲಿ ಪ್ರದರ್ಶನ ನೀಡಲು ಬಂದಿಳಿದಿತ್ತು.

ವಯಸ್ಸು, ಆರೋಗ್ಯ ಮತ್ತು ವಿದೇಶದಲ್ಲಿ ಅವರಿಗಾದ ಅನುಭವದಿಂದ ವಿದೇಶ ಪ್ರಯಾಣವನ್ನೇ ಖೈದು ಮಾಡಿದ್ದ
ಚಿಟ್ಟಾಣಿಯವರನ್ನು ಕರೆಸುವುದು ಹರಸಾಹಸವಾಗಿತ್ತಾದರೂ, 78 ವರ್ಷದ ಯುವಕ ನಮ್ಮ ದೇಶದಲ್ಲಿ ರಂಗಸ್ಥಳ ಏರಲು ಸಿದ್ಧರಾದಾಗ ಯಾವುದೋ ಒಂದು ರೀತಿಯ ಪುಳಕೋತ್ಸವ, ಸಡಗರದ ಅಮಿತ ಸಂಭ್ರಮ. ಆ ದಿನಗಳಲ್ಲಿ ಅವರಷ್ಟು ವಯಸ್ಸಾದ ಕನ್ನಡಿಗರು ಯಾರೂ ಬಹ್ರನ್ನಲ್ಲಿ ಇರಲಿಲ್ಲ ಎಂದರೆ ತಪ್ಪಾಗಲಾರದು. ಯಾರೇ ಬಂದು ನಿಮ್ಮ ಜೊತೆ ಒಂದು ಭಾವಚಿತ್ರ ಬೇಕೆಂದು ಕೇಳಿದರೂ ಅವರ ಗಲ್ಲಹಿಡಿದು, ಮುಖದಲ್ಲಿ ಮಂದಹಾಸ ಬೀರಿ ನಿಲ್ಲುತ್ತಿದ್ದ ಪರಿ ವರ್ಣಿಸಲಸದಳ. ಒಟ್ಟೂ ಐದು ದಿನ ಬಹ್ರೈನ್ನಲ್ಲಿ ಚಿಟ್ಟಾಣಿಯವರೊಂದಿಗಿನ ಅನುಭವ ಅಭೂತಪೂರ್ವ.

ಚಿಟ್ಟಾಣಿಯವರಿಗೆ ಪ್ರಯಾಣದ ಆಯಾಸದಿಂದ ದಮ್ಮು ಸ್ವಲ್ಪ ಹೆಚ್ಚಾಗಿದ್ದರಿಂದ ಕಥಾಭಾಗ ಆರಂಭವಾಗುವುದಕ್ಕೆ ಮುಂಚೆಯೇ ಹೆಚ್ಚು ನಾಟ್ಯ ಬೇಡವೆಂದು ನಾವೆಲ್ಲ ತಾಕೀತು ಮಾಡಿದ್ದೆವು, ಅದಕ್ಕವರು ಒಪ್ಪಿಯೂ ಆಗಿತ್ತು. ಮೊದಲನೆಯ ದಿನ ಮಾಗಧ ವಧೆ ಪ್ರಸಂಗದಲ್ಲಿ ಚಿಟ್ಟಾಣಿಯವರ ಮಾಗಧ, ಮರು ದಿನ ಕೃಷ್ಣಾರ್ಜುನ ಕಾಳಗದಲ್ಲಿ ಚಿಟ್ಟಾಣಿಯವರ ಅರ್ಜುನ ಎಂದು ನಿರ್ಧರಿಸಲಾಗಿತ್ತು. ಎಷ್ಟೇ ನಿರ್ಬಂಧ ಹೇರಿದ್ದರೂ ಚಿಟ್ಟಾಣಿ ಚಿಟ್ಟಾಣಿಯೇ ಸೈ.

ಎರಡೂ ದಿನ ನೆರೆದ ಪ್ರೇಕ್ಷಕ ಭೃಂಗ ವೃಂದಕ್ಕೆ ಚಿಟ್ಟಾಣಿ ಎಂಬ ಪರಿಪಕ್ವ ಕುಸುಮ ಮಧು ಉಣಿಸಿತ್ತು. ಎರಡುವರೆ ದಶಕದ ನಂತರ ಬಹ್ರೈನ್ನಲ್ಲಿ ಪುನಃ ಬಡಗುತಿಟ್ಟಿನ ಯಕ್ಷಗಾನ ಕಂಡ ಪ್ರೇಕ್ಷಕರ ಪಾಲಿಗೆಂತೂ, ವಿಭಾಕರನ ಬೇಗೆಗೆ ಬಳಲಿದ ವಸುಧೆಗೆ ಮೇಘ ಮಾಲೆಯೊಂದು ಪರ್ಜನ್ಯದ ಸಿಂಚನ ಗೈದ ಅನುಭವ. ಎರಡೂ ಆಟ ಮುಗಿಸಿ ಮಾರನೆಯದಿನ ಎಲ್ಲರೂ ಬಹ್ರೈನ್ ಮ್ಯೂಸಿಯಂ ನೋಡಲೆಂದು ಹೋಗಿದ್ದೆವು.

ಉಳಿದವರೆಲ್ಲ ಹೋದರೂ, ಸ್ವಲ್ಪ ದಣಿದಿದ್ದ ಚಿಟ್ಟಾಣಿಯವರು ಒಳಗೆ ಹೋಗದೆ ನನ್ನೊಂದಿಗೆ ಕಾರಿನಲ್ಲಿಯೇ ಕುಳಿತುಕೊಳ್ಳುವು ದಾಗಿ ಹೇಳಿದರು. ನಾವಿಬ್ಬರೂ ಕಾರಿನಲ್ಲಿ ಕುಳಿತು ಕಳೆದ ಆ ಅರ್ಧ ಮುಕ್ಕಾಲು ಗಂಟೆಯಲ್ಲಿ  ಚಿಟ್ಟಾಣಿ ಯವರು ತಮ್ಮ ಅನುಭವದ ಗುಚ್ಚ ಬಿಚ್ಚಿಟ್ಟಿದ್ದರು. ‘ಮೊದಲ ದಿನ ಮಾಗಧ ವಧೆಯಲ್ಲಿ ಕೃಷ್ಣನೊಂದಿಗೆ ಹಠಕ್ಕೆ ಬಿದ್ದವರಂತೆ ನರ್ತಿಸಿದಿರಲ್ಲ, ಆ ಪಾತ್ರ ಮಾಡಿದವ ನಿಮ್ಮ ಮಗ, ಅವನಿಗೆನೋಪ್ರಾಯ, ನೀವು ಅವನಿಗೆ ಸೆಡ್ಡು ಹೊಡೆದಿರಿ, ಸುಸ್ತಾಗಿ ಒಳಗೆ ಬಂದಾಗ ನಮ್ಮ ಹೃದಯ ಗಂಟಲಿಗೆ ಬಂದಿತ್ತು, ಯಾರ ಮಾತನ್ನೂ ಕೇಳದೇ ಪುನಃ ರಂಗಸ್ಥಳಕ್ಕೆ ಹೋಗಿ ಮತ್ತೆ ಕುಣಿದಿರಿ, ಈ ವಯಸ್ಸಿನಲ್ಲಿ ಅಷ್ಟು ಕುಣಿಯಬೇಕಿತ್ತಾ?’ ಎಂದು ಮೊದಲ ಪ್ರಶ್ನೆ ಕೇಳಿದ್ದೆ.

‘ಕಥೆಯಲ್ಲಿ ಮಾಗಧ ಸೋಲಬಹುದು, ರಂಗಸ್ಥಳದಲ್ಲಿ ಮಾಗಧನ ಪಾತ್ರ ಸೋಲಬಾರದು. ಎಷ್ಟೇ ಸುಸ್ತಾದರೂ ಕಲಾವಿದ ರಂಗದಲ್ಲಿ ತೋರಿಸಿಕೊಳ್ಳಬಾರದು. ಈ ಚಿಟ್ಟಾಣಿ ಬದುಕಿದ್ದೇ ಹಾಗೆ. ರಂಗದಲ್ಲಿ ಅಪ್ಪನೂ ಇಲ್ಲ, ಮಗನೂ ಇಲ್ಲ, ಎದುರಿದ್ದವ ಮಗನಾಗಲೀ, ಮೊಮ್ಮಗನಾಗಲಿ, ರಂಗದಲ್ಲಿ ಕನಿಕರ ಸಲ್ಲದು, ಅವನೂ ಒಬ್ಬ ಪಾತ್ರಧಾರಿ, ನಾನೂ ಒಬ್ಬ ಪಾತ್ರಧಾರಿ ಅಷ್ಟೇ. ನಾನು ಗೆಲ್ಲುವ ಪಾತ್ರ ಮಾಡಿಯೂ ರಂಗದಲ್ಲಿ ಸೋತರೆ ಅದು ಸತ್ತಂತೆ, ಆ ಪಾತ್ರವನ್ನು ನಾನೇ ಕೊಂದಂತೆ’ ಎಂದಿದ್ದರು.
‘ಇಷ್ಟು ವರ್ಷದ ನಿಮ್ಮ ಸಾಧನೆ ಅಸಾಮಾನ್ಯವಾದುದು, ಯಕ್ಷಗಾನದ ಮಟ್ಟಿಗೆ ನೀವು ಪರಿಪೂರ್ಣ, ಇದನ್ನು ಮುಂದಿನ ಪೀಳಿಗೆಗೆ ನೀವು ಧಾರೆ ಎರೆಯುವ ಬಗ್ಗೆ ವಿಚಾರಿಸಿದ್ದೀರಾ?’ ಎಂದು ಕೇಳಿದ್ದಕ್ಕೆ ಹೇಳಿದ್ದರು, ‘ನಾನು ಪರಿಪೂರ್ಣ ಎಂಬುದನ್ನು ನಾನೇ ಒಪ್ಪುವುದಿಲ್ಲ. ನನಗೆ ಶಾಲಾ ವಿದ್ಯಾಭ್ಯಾಸ ಎಂದು ದೊರೆತಿದ್ದು ಮೂರನೆಯ ತರಗತಿಯವರೆಗೆ ಮಾತ್ರ. ಆದರೆ ಯಕ್ಷಗಾನ ಕ್ಷೇತ್ರಕ್ಕೆ ಬಂದು ಸಾಕಷ್ಟು ಕಲಿತಿದ್ದೇನೆ, ಆದರೂ ಕಲಿಕೆ ಪೂರ್ಣಗೊಂಡಿಲ್ಲ. ನನಗೆ ಇನ್ನೂ ಕಲಿಯಲು ಸಾಕಷ್ಟಿದೆ ಎಂದೇ ಅನಿಸುತ್ತದೆ.

ಇದನ್ನು ಸುಮ್ಮನೇ ಮಾತಿಗಾಗಿ ಹೇಳುತ್ತಿಲ್ಲ. ಯಾವುದೇ ಕಲಾವಿದನಾದರೂ ತಾನು ಪರಿಪೂರ್ಣ ಎಂದು ಎಣಿಸಿದರೆ ಅಲ್ಲಿಗೆ ಅವನ ಇತಿಶ್ರೀ ಎಂದೇ ಅರ್ಥ. ಎಲ್ಲರೂ ನನ್ನನ್ನು ರಸ ರಾಜ, ರಸ ಚಕ್ರವರ್ತಿ ಎಂದು ಕರೆಯುತ್ತಾರೆ, ಆದರೆ ನನಗೆ ಶಾಂತರಸವೇ ಒಗ್ಗಿ ಬರುತ್ತಿರಲಿಲ್ಲ. ಭರತ ಮುನಿ ನಾಟ್ಯ ಶಾಸ್ತ್ರದಲ್ಲಿ ಎಂಟು ರಸಗಳನ್ನು ಹೆಸರಿಸಿದ್ದ. ಶಾಂತರಸ ಆಮೇಲೆ ಸೇರ್ಪಡೆಗೊಂಡ ದ್ದು ಎಂದು ಹೇಳುತ್ತಾರೆ. ನನಗೂ ಅಭಿನಯದ ಎಂಟು ರಸಗಳು ಬರುತ್ತಿದ್ದವು. ಶಾಂತರಸ ವ್ಯಕ್ತಪಡಿಸಲು ಕಷ್ಟವಾಗುತ್ತಿತ್ತು. ಇದನ್ನು ಯಾರ ಬಳಿಯಾದರೂ ಹೇಳೋಣವೆಂದರೆ ನವರಸ ನಾಯಕ ಎಂದು ಆಗಲೇ ನನ್ನನ್ನು ಕರೆಯು ತ್ತಿದ್ದರು. ಅದನ್ನು ಉಳಿಸಿಕೊಳ್ಳಲು ಪ್ರತಿನಿತ್ಯ ಗಂಟೆಗಟ್ಟಲೆ ಕನ್ನಡಿಯ ಮುಂದೆ ಕುಳಿತು ಶಾಂತರಸ ಅಭ್ಯಾಸ ಮಾಡುತ್ತಿದ್ದೆ. ಉದ್ಭಟನ ಶಾಂತರಸ ಸ್ವಲ್ಪ ಏರುಪೇರಾದರೂ ಉದ್ಧಟತನವಾಗುವ ಸಾಧ್ಯತೆಯೇ ಹೆಚ್ಚು. ಕೊನೆಗೂ ಶಾಂತರಸದ ಮೇಲೆ ಹಿಡಿತ ಸಾಧಿಸುವ ಹೊತ್ತಿಗೆ ರಂಗದಲ್ಲಿ ಐದು ದಶಕಗಳೇ ಕಳೆದಿದ್ದವು. ಬೇರೆ ರಸಗಳಲ್ಲಿ ಕಣ್ಣಿನದು ಪ್ರಧಾನ ಪಾತ್ರ. ಶಾಂತರಸ ಹಾಗಲ್ಲ. ಎಷ್ಟೋ ಜನ ಶಾಂತರಸಕ್ಕೆ ಕಣ್ಣು ಮುಚ್ಚುತ್ತಾರೆ. ಅದು ನಿದ್ರೆಯಾಗಬಹುದು, ತಪಸ್ಸಾಗಬಹುದು, ಶಾಂತ ಆಗಲು ಹೇಗೆ ಸಾಧ್ಯ? ಹಾಗಂತ ಶಾಂತರಸ ಎಂಬುದು ಒಬ್ಬರನ್ನು ಅನುಕರಿಸಿ ಕಲಿಯಲೂ ಸಾಧ್ಯವಿಲ್ಲ. ಅವರವರ ಮುಖಕ್ಕೆ ಹೊಂದುವಂತೆ ಅವರೇ ಕಂಡು ಕೊಳ್ಳಬೇಕು. ನನ್ನ ಮುಖಕ್ಕೆೆ ಸ್ವಲ್ಪ ತೆರೆದಕಣ್ಣು, ಮೇಲಿನ ಹಲ್ಲು ಪಂಕ್ತಿ ಸ್ವಲ್ಪವೇ ಕಾಣುವಂತೆ ಬಿರಿದ ತುಟಿ ಒಗ್ಗುತ್ತದೆ ಎಂದು ನನಗೆ ತಿಳಿಯುವಾಗ ನನಗೆ ಅರವತ್ತು ವರ್ಷ ಕಳೆದಿತ್ತು ಎಂದರೆ ಯಾರೂ ನಂಬಲಿಕ್ಕಿಲ್ಲ.

ನಾನು ಇಂದಿಗೂ ರಂಗಸ್ಥಳದಲ್ಲಿ ಏನಾದರೂ ಒಂದು ಹೊಸತನ್ನು ಕೊಡಲು ಪ್ರಯತ್ನಿಸುತ್ತೇನೆ. ಹೊಸತು ಕೊಡಬೇಕೆಂದರೆ ಹೊಸತನ್ನು ಕಲಿಯಲೇಬೇಕು, ಈ ಕಲಿಯುವಿಕೆಯ ಪ್ರಕ್ರಿಯೆ ನಿರಂತರವಾದದ್ದು’ ಎಂದಿದ್ದರು. ಚಿಟ್ಟಾಣಿ ಮಾತು ಮುಂದು ವರಿಸಿದ್ದರು. ‘ನಿನ್ನೆ ನೀವು ಇಷ್ಟಪಟ್ಟ ಕೃಷ್ಣಾರ್ಜುನ ಆಖ್ಯಾನದಲ್ಲಿ ಅರ್ಜುನನ ಪಾತ್ರ ಮಾಡುವಾಗ ಪ್ರಮುಖವಾಗಿ ಬೇಕಾದದ್ದು
‘ಕರುಣಾ ಶೃಂಗಾರ’ ರಸ. ಎಷ್ಟೋ ದಿನಗಳ ನಂತರ ಮಡದಿ ಸುಭದ್ರೆಯನ್ನು ಭೇಟಿಯಾಗುವ ಇಂದ್ರನಂದನನ ಸಂತೋಷ, ಶೃಂಗಾರ ಒಂದುಕಡೆಯಾದರೆ, ಗಯನನ್ನು ಬಿಟ್ಟುಕೊಡುವಂತೆ ಕೃಷ್ಣನ ರಾಯಭಾರಿಯಾಗಿ ಬಂದರೂ ಬಿಟ್ಟುಕೊಡಲಾಗದ ಪರಿಸ್ಥಿತಿಯಲ್ಲಿ ಅವಳನ್ನು ಸಂತೈಸಿ, ಸಮಾಧಾನಪಡಿಸಿ ಕಳುಹಿಸಿಕೊಡುವ ಫಲ್ಗುಣನ ಮನಸ್ಥಿತಿ ಇನ್ನೊಂದೆಡೆ. ಮೂರು
ಲೋಕದ ಗಂಡ ಎಂದು ಕರೆಸಿಕೊಂಡ ವೀರ ಪಾರ್ಥನೇ ಬೇರೆ, ಸಂಧಾನಕ್ಕೆ ಬಂದ ಸುಭದ್ರೆಯ ಗಂಡ ಜಿಷ್ಣುವೇ ಬೇರೆ. ಸುಭದ್ರೆಯ ಎದುರಿನಲ್ಲಿ ಕರುಣಾ ಶೃಂಗಾರದ ಭಾವ ಅಭಿವ್ಯಕ್ತಗೊಳ್ಳದಿದ್ದರೆ ಧನಂಜಯನ ಪಾತ್ರದ ಚಿತ್ರಣಕ್ಕೇ ಧಕ್ಕೆ ಉಂಟಾಗುತ್ತದೆ, ಸನ್ನಿವೇಶ ನೀರಸವಾಗುತ್ತದೆ. ಕೊನೆಗೆ ಕೃಷ್ಣ ಯುದ್ಧಕ್ಕೆ ಎದುರಾದಾಗ ಹಾಸ್ಯ, ರೌದ್ರ, ವೀರರಸಗಳನ್ನೆಲ್ಲ ಬಳಸಬೇಕು, ಅದು ಬೇರೆ ವಿಷಯ. ಆದರೆ ಆ ಪಾತ್ರ ಗೆಲ್ಲುವಲ್ಲಿ ಕರುಣಾ ಶೃಂಗಾರ ಪ್ರಮುಖ ಪಾತ್ರವಹಿಸುತ್ತದೆ.’

ಚಿಟ್ಟಾಣಿಯವರ ಪ್ರಸಿದ್ಧ ಕೌರವನ ಪಾತ್ರದ ಬಗ್ಗೆ ಹೇಳುವಾಗ, ‘ದುರ್ಯೋಧನ ಚಕ್ರವರ್ತಿ. ಅಹಂಕಾರ ಅವನ ಹುಟ್ಟುಗುಣ. ಕುರುಕ್ಷೇತ್ರ ಯುದ್ಧದಲ್ಲಿ ತನ್ನವರನ್ನೆಲ್ಲ ಕಳೆದುಕೊಂಡು ಅನಾಥನಂತೆ ಒಬ್ಬನೇ ನಡೆದು ಬರುವುದೆಂದರೆ ಅವನ ಪರಿಸ್ಥಿತಿ
ಹೇಗಾಗಿರಬೇಡ? ಕೌರವನ ವೇಷ ಕಟ್ಟಿಕೊಂಡು ರಂಗಸ್ಥಳ ಪ್ರವೇಶಿಸುವುದಕ್ಕೆ ಮುಂಚೆ ಒಂದು ಘಳಿಗೆ ಕಣ್ಣುಮುಚ್ಚಿ ಮಲಗಿ ಎದ್ದು ಬಂದರೆ, ಆ ಸಂದರ್ಭದ ಮುಖಮುದ್ರೆಗೆ ಒಂದಿಷ್ಟು ನೆರವು ಸಿಗುತ್ತದೆ. ಇದನ್ನು ಅನ್ವೇಷಿಸಿದವರು, ನನಗೆ ಹೇಳಿಕೊಟ್ಟ ವರು ಕೆರೆಮನೆ ಶಿವರಾಮ ಹೆಗಡೆಯವರು. ನಾನು ಸಾಧ್ಯವಾದಷ್ಟು ಅದನ್ನೇ ಪಾಲಿಸುತ್ತಿದ್ದೇನೆ.’ ನಂತರ ಮುಖವರ್ಣಿಕೆ
ಯಲ್ಲಿ ಬಣ್ಣಗಳ ಬಳಕೆ, ರಂಗದಲ್ಲಿ ಕಲಾವಿದರ ಹೊಂದಾಣಿಕೆ ಇತ್ಯಾದಿಯಾಗಿ ನಮ್ಮ ಮಾತುಕತೆ ಮುಂದುವರಿದಿತ್ತು. ಈ ನಡುವೆ ಕೃಷ್ಣಾರ್ಜುನ ಪ್ರಸಂಗದಲ್ಲಿ ನಾನು ಮಾಡಿದ ದಾರುಕನ ಪಾತ್ರದ ಬಗ್ಗೆ ಮಾತನಾಡಿದ್ದರು. (ಬಾಲ್ಯದಲ್ಲಿ ಅವರೊಂದಿಗೆ
ನಾಲ್ಕೊ ಐದೊ ವೇಷ ಮಾಡಿದ್ದನ್ನು ನೆನಪಿಸಿಕೊಂಡು, ದಾರುಕನ ಪಾತ್ರ ನಾನು ಮಾಡುವುದೆಂದು ನಿರ್ಣಯಿಸಿದ್ದಷ್ಟೇ ಅಲ್ಲ, ನಾನು ರಂಗಕ್ಕೆ ಬಂದಾಗ ಮರೆಯಲ್ಲಿ ನಿಂತು ಸಂಪೂರ್ಣ ನೋಡಿದ್ದರು) ಅದರಲ್ಲಿ ಒಂದು ಸನ್ನಿವೇಶ ಅವರಿಗೆ ಬಹಳ ಇಷ್ಟ ವಾಯಿತೆಂದು ತಿಳಿಸಿದ್ದರು.

‘ಅದರಲ್ಲಿ ನನ್ನ ಕೊಡುಗೆ ಏನಿಲ್ಲ, ನಾನು ಶ್ರೀಧರ ಹೆಗಡೆ ಚಪ್ಪರಮನೆಯವರನ್ನು ಅನುಕರಿಸಿದ್ದು’ ಎಂದೆ. ‘ಅದು  ಅನುಕರಣೆ ಯೆಂದು ತಿಳಿಯಲಿಲ್ಲ, ಹೊಸತನವನ್ನು ಹುಡುಕಿದ ಚಪ್ಪರಮನೆಗೆ ಒಂದು ಶಹಾಭಾಸ್’ ಎಂದರು. ಯಾವುದೇ ಕಲಾವಿದನೇ ಆದರೂ ಒಳ್ಳೆಯ ಪ್ರದರ್ಶನ ನೀಡಿದರೆ ಹಮ್ಮಿಿಲ್ಲದೇ ಹೊಗಳುವ ಅವರ ಗುಣಕ್ಕೆ ಇದು ಪುರಾವೆ ಎನ್ನಲು ಈ ವಿಷಯ ಹೇಳ ಬೇಕಾಯಿತು.

ಪದ್ಮಶ್ರೀ ಪ್ರಶಸ್ತಿಯ ಬಗ್ಗೆ ಕೇಳಿದಾಗ ಹೇಳಿದ್ದರು, ‘ನನಗೆ ದೆಹಲಿಗೆ ಹೇಗೆ ಹೋಗಬೇಕು, ದೆಹಲಿಯಲ್ಲಿ ಎಲ್ಲಿ ಹೋಗುವುದು, ಎಲ್ಲಿ ಉಳಿಯುವುದು ಏನೂ ಗೊತ್ತಿಲ್ಲ. ತಲೆಯಲ್ಲಿ ಜುಟ್ಟು ಕಟ್ಟಿ, ಮುಂಡು ಉಟ್ಟು, ದೊಡ್ಡ ಕನ್ನಡಕ ತೊಟ್ಟ, ಸೊಣಕಲು ದೇಹದ ಈ ಬಡಪಾಯಿಯನ್ನು ಅಲ್ಲಿ ಯಾರು ಮಾತನಾಡಿಸುತ್ತಾರೆ ಎಂಬ ಅಳುಕು. ಭಾಷೆ ಬೇರೆ ಬರುವುದಿಲ್ಲವಾದ್ದರಿಂದ ಜೊತೆಗೆ ಒಬ್ಬರನ್ನು ಕರೆದುಕೊಂಡು ಹೋಗಿದ್ದೆ. ಹೋಗುವಾಗ ವಿಮಾನ ನಿಲ್ದಾಣದಲ್ಲಿ ನನ್ನ ಚೀಲದಲ್ಲಿದ್ದ ಬೆಂಕಿಪೆಟ್ಟಿಗೆಯನ್ನು ತೆಗೆದು ಎಸೆದಿದ್ದರು. ಆದರೆ ಪ್ರಶಸ್ತಿ ಪಡೆದು ಹಿಂತಿರುಗಿ ಬರುವಾಗ ನನ್ನ ಬಗಲಲ್ಲಿರುವ ಚೀಲದಲ್ಲಿ ಪದ್ಮಶ್ರೀ ಪದಕ ಇರುವುದನ್ನು ಕಂಡ ವಿಮಾನ ನಿಲ್ದಾಣದ ಅಧಿಕಾರಿ ನಮಸ್ಕರಿಸಿ ಕಳುಹಿಸಿದ್ದರು. ಅದೇ ಚೀಲದಲ್ಲಿದ್ದ ಬೆಂಕಿಪೆಟ್ಟಿಗೆ ಅವರಿಗೆ ಕಾಣಲಿಲ್ಲವೋ, ಕಂಡರೂ ಬಿಟ್ಟರೋ ಗೊತ್ತಿಲ್ಲ.

ನನಗೆ ಆಗ ಪದ್ಮಶ್ರೀ ಪ್ರಶಸ್ತಿಯ ಮಹತ್ವ ದೊಡ್ಡದು ಎಂದು ತಿಳಿಯಿತು’ ಎಂದು ಕಣ್ಣರಳಿಸಿ, ಹುಬ್ಬೇರಿಸಿ ತಮಾಷೆಯಾಗಿ ನುಡಿದಿದ್ದರು. ‘ಆಮೇಲೆ ಜೊತೆಗಿದ್ದವರು ನೆನಪಿಸಿದ್ದರಿಂದ ಬೆಂಕಿ ಪೆಟ್ಟಿಗೆಯನ್ನು ಅಲ್ಲಿಯೇ ಎಸೆದು ಬಂದೆ’ ಎಂದಿದ್ದರು. ‘ಆದರೆ ನಂತರದ ದಿನಗಳಲ್ಲಿ ಬೇಸರವಾಗುತ್ತಿತ್ತು. ನನ್ನ ಘನತೆ ಹೆಚ್ಚಿದೆ ಎಂದು ನನಗೆ ಸನ್ಮಾನ ಮಾಡಿ ಕಳಿಸುತ್ತಿದ್ದರು. ನನ್ನ ಸನ್ಮಾನ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕೆಲವೊಮ್ಮೆ ನನಗೆ ವೇಷವೇ ಇರುತ್ತಿರಲಿಲ್ಲ. ನನಗೆ ಯಾವ ಪಾತ್ರ ಎಂದು ಕೇಳಿದರೂ ನೀವು ಬಂದು ಸನ್ಮಾನ ಸ್ವೀಕರಿಸಿದರೆ ಸಾಕು, ಅದೇ ನಮ್ಮ ಭಾಗ್ಯ ಎನ್ನುತ್ತಿದ್ದ ಆಯೋಜಕರು ನನಗೆ ಸನ್ಮಾನಕ್ಕಿಂತ ಪಾತ್ರ ಮಾಡುವು ದರಲ್ಲಿಯೇ ಹೆಚ್ಚಿನ ಆಸಕ್ತಿ ಎಂಬುದನ್ನುಅರಿಯದಾದರು. ನನ್ನ ಮನೆಗೆ ದೂರವಾಣಿ ಕರೆಮಾಡಿ ನನ್ನ ಮಗನನ್ನು, ಮೊಮ್ಮಗನನ್ನು ಆಟಕ್ಕೆ ಕರೆಯುತ್ತಿದ್ದರು, ನನ್ನನ್ನು ಕರೆಯದಿದ್ದಾಗ ಬಹಳ ಬೇಸರವಾಗುತ್ತಿತ್ತು. ನನಗೆ ವಯಸ್ಸಾಯಿತೇ? ಇನ್ನು
ಮುಂದೆ ನನ್ನನ್ನು ಯಾರೂ ಕರೆಯದಿದ್ದರೆ ಏನು ಗತಿ ಎಂದೆಲ್ಲ ವಿಚಾರಗಳು ಬರುತ್ತಿದ್ದವು.

ಪದ್ಮಶ್ರೀ, ರಾಜ್ಯ ಪ್ರಶಸ್ತಿಗಳನ್ನೆಲ್ಲ ಪಡೆದ ಕಲಾವಿದನನ್ನು ಸನ್ಮಾನಿಸುವ ಕಾರ್ಯಕ್ರಮ ಕೆಲವು ದಿನ ನಡೆಯುತ್ತದೆ, ಆಮೇಲೆ
ನಿಂತು ಹೋಗುತ್ತದೆ. ಆದರ ಜೊತೆಗೆ ವೇಷ ಮಾಡುವುದೂ ನಿಂತು ಹೋದರೆ ಮುಂದೇನು ಗತಿ? ಮುಂದಿನ ನನ್ನ ಜೀವನ ಪೂರ್ತಿ ಮನೆಯಲ್ಲಿಯೇ ಕುಂತು ಕಳೆಯುವುದಾ? ಎಂಬ ವಿಚಾರಗಳು ಮನಸ್ಸಿನಲ್ಲಿ ಮೂಡುತ್ತಿದ್ದವು.’ ಒಬ್ಬ ಮುಗ್ಧ ಕಲಾವಿದನ
ಮನದಾಳದ ತುಡಿತದ ಮಾತುಗಳು ಹೊರ ಬರುವಾಗ ಕಣ್ಣು ತೇವವಾಗಿತ್ತು. ಇನ್ನಷ್ಟು ಆತ್ಮೀಯ ನುಡಿಗಳು  ಹೊರಬರು ತ್ತಿದ್ದವೋ ಏನೋ, ಅಷ್ಟರಲ್ಲಿ ಮ್ಯೂಸಿಮ್ ನೋಡಲು ಹೋದವರು ತಿರುಗಿ ಬಂದಿದ್ದರು, ಮುಂದಿನ ಸ್ಥಳ ವೀಕ್ಷಣೆಗೆ ನಾವು ಹೊರಡಬೇಕಿತ್ತು.

ಯಕ್ಷ ಲೋಕದ ಧ್ರುವ ತಾರೆ ಚಿಟ್ಟಾಣಿಯವರನ್ನು ಕುರಿತು ‘ನಿಮ್ಮ ಚಿಟ್ಟಾಣಿ’ ಮತ್ತು ‘ರಸ ರಾಜ’ ಎಂಬ ಎರಡು ಹೊತ್ತಿಗೆಗಳು ಅನಾವರಣಗೊಂಡಿವೆ. ಅವರನ್ನೇ ವಿಷಯವಾಗಿಟ್ಟುಕೊಂಡು ಇಬ್ಬರು ಸಂಶೋಧನೆ ನಡೆಸಿ ಡಾಕ್ಟರೇಟ್ ಪಡೆದುಕೊಂಡಿದ್ದಾರೆ.
ಪುಸ್ತಕದಲ್ಲಿ ಚಿಟ್ಟಾಣಿಯವರ ಬಗ್ಗೆ ಹೆಚ್ಚಿನ ವಿಷಯಗಳು ಲಭ್ಯವಿದೆ. ‘ಆದರೂ ನನಗೆ ತಿಳಿದ ನಿಮ್ಮ ಕೆಲವು ವಿಷಯಗಳು ಪುಸ್ತಕದಲ್ಲಿ ಇಲ್ಲವಲ್ಲ’ ಎಂದು ಸುಮ್ಮನೆ ತಮಾಷೆಗೆ ಕೇಳಿದ್ದೆ. ‘ಹೌದು, ಕೆಲವೆಲ್ಲ ಮರೆತೇ ಹೋಗಿತ್ತು, ಈಗ ನೆನಪಾಗುತ್ತಿದೆ. ಅಕ್ಟೋಬರ್ ತಿಂಗಳು ಉಡುಪಿಯಲ್ಲಿ ಗಂಗಾಧರ ರಾವ್ ಸಪ್ತಾಹ ಮಾಡುತ್ತಾರೆ, ಆಗ ನೀನು ಅಲ್ಲಿಗೆ ಬಂದರೆ ಎಂಟು ದಿನ ಒಟ್ಟಿ ಗಿದ್ದು ಅದನ್ನು ದಾಖಲಿಸಬಹುದು’ ಅಷ್ಟೇ ಗಂಭೀರವಾಗಿ ಹೇಳಿದ್ದರು.

ಸಮುದ್ರದಿಂದ ಎಷ್ಟು ನೀರು ಮೊಗೆದರೂ ಸಮುದ್ರ ಬರಿದಾಗುತ್ತದೆಯೇ? ಅದರಂತೆ ನಾನು ಉಡುಪಿಗೆ ಆ ಸಂದರ್ಭದಲ್ಲಿ
ಹೋದರೂ, ಅನಾರೋಗ್ಯದಿಂದ ಸುಸ್ತಾದ ಚಿಟ್ಟಾಣಿಯವರ ತ್ರಾಣ ಕುಸಿದಿತ್ತು. ವೈದ್ಯರು ಹೆಚ್ಚು ಮಾತಾಡಿ ಆಯಾಸ ಪಡಬೇಡಿ ಎಂದಿದ್ದರಿಂದ ಆ ಕಾರ್ಯ ಸಾಧ್ಯವಾಗಲಿಲ್ಲ.

ಕಷ್ಟದಿಂದ ಒಲಿಯುವ ಕಲಾಮಾತೆ ಕೆಲವರನ್ನು ಆಶೀರ್ವದಿಸಿದರೆ, ಕೆಲವರನ್ನು ಕೈ ಹಿಡಿದು ನಡೆಸುತ್ತಾಳಂತೆ. ಯಕ್ಷ ಕಲಾ ಮಾತೆ ಚಿಟ್ಟಾಣಿಯವರನ್ನು ಮಡಿಲಲ್ಲಿ ಎತ್ತು ನಡೆದಿದ್ದಳು ಎಂದರೆ ತಪ್ಪಾಗಲಾರದು. ಯಕ್ಷಗಾನ ಲೋಕದ ದಂತಕಥೆಯ ನೆನಪಿನಲ್ಲಿ ಒಂದು ಸಂಗ್ರಹಾಲಯವೋ, ಸಭಾಂಗಣವೋ ನಿರ್ಮಾಣಗೊಳ್ಳುವುದು ಅವಶ್ಯಕವಾಗಿದೆ. ‘ನೀಲ ಗಗನದಲಿ
ಮೇಘಗಳ ಕಂಡಾಗಲೆ ನಲಿಯುತ ನವಿಲು ಕುಣಿಯುತಿದೆ ನೋಡ’ ಎಂದು ತೋರಿಸಿದ ಚಿಟ್ಟಾಣಿ ಇಂದಿಗೂ ನಮ್ಮಿಂದ ದೂರ ವಾಗಿಲ್ಲ. ನಮ್ಮ ನಡುವೆಯೇ ಇದ್ದು ಯುವ ಪೀಳಿಗೆಯ ಕಲಾ ವೈಭವವನ್ನು ಕಾಣಲು ತಮ್ಮ ನೇತ್ರದ್ವಯವನ್ನು ದಾನ ಮಾಡಿ
ಹೋಗಿದ್ದಾರೆ.

ಮೊನ್ನೆ ಅಕ್ಟೋಬರ್ ಮೂರರಂದು ಚಿಟ್ಟಾಣಿಯವರು ನಮ್ಮನ್ನಗಲಿ ಮೂರು ವರ್ಷ ಕಳೆಯಿತು. ಮತ್ತೊಮ್ಮೆ ಆ ಅಸಾಮಾನ್ಯ ಪ್ರತಿಭೆಯ ಅಸಂಖ್ಯಾತ ನೆನಪುಗಳು ಸ್ಮತಿಪಟಲದಲ್ಲಿ ಹಾದು ಹೋದವು. ಆ ದಿವ್ಯ ಚೇತನಕ್ಕೊಂದು ಚಿಕ್ಕ ನುಡಿನಮನ.