Wednesday, 11th December 2024

ಕಾನೂನಿನ ಮಹತ್ವ ತಿಳಿಸುವ ದಿನ

ಸಾಂದರ್ಭಿಕ

ಡಾ.ಕೆ.ವಿ.ವಾಸು

ಪ್ರತಿವರ್ಷದ ನವಂಬರ್ 26ರಂದು ದೇಶಾದ್ಯಂತ ಸಂವಿಧಾನದ ದಿನವನ್ನು ಆಚರಿಸಲಾಗುತ್ತದೆ. ಇದನ್ನು ಕಾನೂನು ದಿನ ವೆಂದು ಕೂಡ ಕರೆಯಲಾಗುತ್ತದೆ.

ದೇಶದ ಕಾನೂನು ವಿದ್ಯಾರ್ಥಿಗಳು; ವಕೀಲರು, ನ್ಯಾಯಾಧೀಶರು ಹಾಗೂ ಕಾನೂನು ಕ್ಷೇತ್ರಕ್ಕೆ ಸಂಬಂಧಪಟ್ಟವರೆ ಕಾನೂನು ದಿನವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸುತ್ತಾರೆ. ದೇಶದ ಕಾನೂನು ಪ್ರತಿಯೊಬ್ಬರಿಗೂ ಅನ್ವಯವಾಗುವುದರಿಂದ ಕಾನೂನು ದಿನವನ್ನು ದೇಶದ ಪ್ರತಿಯೊಬ್ಬರೂ ಕೂಡ ಆಚರಿಸಬಹುದಾಗಿದೆ. 2015ನ ಇಸವಿಯ ನವಂಬರ್ 19 ರಂದು
ಕೇಂದ್ರ ಸರಕಾರ ಗೆಜೆಟ್ ಪ್ರಕಟಣೆ ಹೊರಡಿಸಿ; ಭಾರತದ ಸಂವಿಧಾನದ ಪಿತಾಮಹ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮ ದಿನಾಚರಣೆಯ ಕುರುವಾಗಿ ಪ್ರತಿವರ್ಷದ ನವಂಬರ್ 26 ಅನ್ನು ಸಂವಿಧಾನದ ದಿನವನ್ನು ಆಚರಿಸುವಂತೆ ಕರೆ ನೀಡಲಾ ಯಿತು.

ಭಾರತದ ಸಂವಿಧಾನ ರಚನಾ ಸಮಿತಿಯ ಗೌರವಾನ್ವಿತ ಸದಸ್ಯರ ನೆನಪಿಗಾಗಿಯೂ ಸಂವಿಧಾನ ದಿನವನ್ನು ಆಚರಿಸಲಾಗುತ್ತದೆ. ಭಾರತ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಕಾರ್ಯ ನಿರ್ವಹಿಸಿ ದ್ದರೆ, ಡಾ.ರಾಜೇಂದ್ರ ಪ್ರಸಾದ್ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು. ಡಾ.ಬಿ.ಆರ್.ಅಂಬೇಡ್ಕರ್, ಡಾ.ಎಸ್. ರಾಧಾ ಕೃಷ್ಣನ್, ಪಂಡಿತ್ ಜವಹರಲಾಲ್ ನೆಹರು, ಆಚಾರ್ಯ ಜೆ.ಬಿ. ಕೃಪಲಾನಿ, ಎನ್.ಜಿ. ರಂಗ, ಮೌಲಾನ ಅಬ್ದುಲ್ ಕಲಾಮ್ ಅಜಾದ್, ಎನ್.ಗೋಪಾಲ ಸ್ವಾಮಿ ಐಯ್ಯಂಗಾರ್, ಸರ್ದಾರ್ ವಲ್ಲಭಭಾಯಿ ಪಟೇಲ, ಸಿ.ರಾಜಗೋಪಾಲಚಾರಿ ಸೇರಿದಂತೆ 300ಕ್ಕೂ ಹೆಚ್ಚು ಮುತ್ಸದ್ದಿಗಳು ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿರುವುದನ್ನು ಇಲ್ಲಿ ಸ್ಮರಿಸ ಬಹುದು.

26.11.1949ರಂದು ಸಂವಿಧಾನ ರಚನಾ ಸಮಿತಿಯು ಸಭೆ ಸೇರಿ ಭಾರತದ ಸಂವಿಧಾನವನ್ನು ಅಂಗೀಕರಿಸಿತು. ಜನವರಿ 26; 1950 ರಂದು ಅಧಿಕೃತವಾಗಿ ಭಾರತ ಸಂವಿಧಾನ ಅಸ್ತಿತ್ವಕ್ಕೆ ಬಂದಿದೆ. ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದು ಎಂದು ಹೇಳಬಹು ದಾದ ಭಾರತೀಯ ಸಂವಿಧಾನ, ಮೂಲಭೂತ ಹಕ್ಕುಗಳು, ಮೂಲಭೂತ ಕರ್ತವ್ಯಗಳು, ರಾಜ್ಯ ನಿರ್ದೇಶಕ ತತ್ತ್ವಗಳು ಸೇರಿದಂತೆ ಹಲವಾರು ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ಸಂವಿಧಾನದ ಪ್ರಸ್ತಾವನೆಯನ್ನು ಸಂವಿಧಾನದ ಹೃದಯ ಭಾಗವೆಂದು ಕರೆಯಲಾಗುತ್ತದೆ. ಸಂವಿಧಾನ ರಚನೆಯ ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್; ಸಂವಿಧಾನ ರಚನೆಯ ಸಂದರ್ಭದಲ್ಲಿ; ಗ್ರೇಟ್ ಬ್ರಿಟನ್, ಅಮೆರಿಕ ಸಂಯುಕ್ತ ಸಂಸ್ಥಾನ, ಜಪಾನ್, ಇಟಲಿ, ಜರ್ಮನಿ, ಮುಂತಾದ ದೇಶಗಳ ಸಂವಿಧಾನಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ್ದರು. ವಿಶ್ವದ ಅತಿದೊಡ್ಡ ಲಿಖಿತ ಸಂವಿಧಾನ ಹೊಂದಿರುವ ದೇಶವೂ ನಮ್ಮದಾಗಿದೆ.

ಭಾರತ ಸಂವಿಧಾನದಲ್ಲಿ; 395 ವಿಧಿಗಳು ಹಾಗೂ 12 ಅನುಸೂಚಿಗಳಿದ್ದು; 22 ಭಾಗಗಳಾಗಿ ವಿಂಗಡಿಸಲಾಗಿದೆ. ಭಾರತದ ಸಂವಿಧಾನದ ಕೆಲವು ವಿಧಿಗಳನ್ನು ಸುಲಭವಾಗಿ ಮತ್ತೆ ಕೆಲವು ವಿಧಿಗಳನ್ನು ಕೆಲವು ಕಠಿಣ ಕ್ರಮಗಳನ್ನು ಅನುಸರಿಸಿ; ರಾಜ್ಯ ಶಾಸನ ಸಭೆಗಳ ಒಪ್ಪಿಗೆ ಪಡೆದು ತಿದ್ದುಪಡಿ ಮಾಡಬಹುದು. ಇದುವರೆಗೂ ಸಂವಿಧಾನಕ್ಕೆ 104 ತಿದ್ದುಪಡಿಗಳಾಗಿವೆ. 25.01.2020 ರಂದು ಕಡೆಯ ತಿದ್ದುಪಡಿ ಮಾಡಲಾಗಿದೆ.

ಇವಿಷ್ಟು ಭಾರತ ಸಂವಿಧಾನದ ಕೆಲವು ಪ್ರಮುಖ ಅಂಶಗಳಾಗಿವೆ. ಇನ್ನು ಕಾನೂನು ದಿನದ ಬಗ್ಗೆ ಸ್ವಲ್ಪ ವಿಚಾರ ಮಾಡೋಣ. ಯಾವುದೇ ದೇಶದ ಅಸ್ತಿತ್ವಕ್ಕೆ ಕಾನೂನು ತೀರಾ ಅವಶ್ಯಕವಾಗಿ ಬೇಕಾಗುತ್ತದೆ. ಕಾನೂನು ಆಯಾ ದೇಶಗಳ ಆಡಳಿತದ ರೂಪು ರೇಷೆಗಳನ್ನು ನಿರ್ಧರಿಸುತ್ತದೆ ಹಾಗೂ ನಿಯಂತ್ರಕನಾಗಿ ಕೂಡ ಕಾರ್ಯ ನಿರ್ವಹಿಸುತ್ತದೆ. ಕಾರ್ಯಾಂಗ; ನ್ಯಾಯಾಂಗ; ಮತ್ತು ಶಾಸಕಾಂಗಗಳು ಪ್ರಜಾಪ್ರಭುತ್ವದ ಮೂರು ಪ್ರಮುಖ ಅಂಗಗಳೆಂದು ಪರಿಗಣಿಸಲಾಗಿದೆ. ಇವುಗಳ ಪೈಕಿ ನ್ಯಾಯಾಂಗಕ್ಕೆ ಅತಿ ಹೆಚ್ಚಿನ ಮಹತ್ವವಿದೆ. ಕಾರ್ಯಾಂಗ ಹಳಿ ತಪ್ಪಿದಾಗಲೆ ನ್ಯಾಯಾಂಗ ತನ್ನ ಚಾಟಿ ಬೀಸುತ್ತದೆ. ಶಾಸಕಾಂಗ ಅಂಗೀಕರಿಸುವ ಕಾನೂನು ಸಂವಿಧಾನ ವಿರೋಧಿಯಾಗಿದ್ದರೆ; ಅವುಗಳನ್ನು ರದ್ದು ಗೊಳಿಸುವ ಅಧಿಕಾರವೂ ನ್ಯಾಯಾಂಗಕ್ಕಿದೆ.

ನಮ್ಮ ಸಂವಿಧಾನದಲ್ಲಿ ನ್ಯಾಯಾಂಗ; ಕಾರ್ಯಾಂಗ ಹಾಗೂ ಇತಿಮಿತಿಗಳನ್ನು ವಿಷದ ಪಡಿಸಿ ಲಕ್ಷ್ಮಣ ರೇಖೆ ಹಾಕಲಾಗಿದೆ. ಆದರೂ ಸಹ ಸಂದರ್ಭ ಒದಗಿ ಬಂದಾಗಲೆ ನ್ಯಾಯಾಂಗ ಮಧ್ಯ ಪ್ರವೇಶಿಸಿ; ದೇಶದ ಕಾನೂನನ್ನು ರಕ್ಷಿಸುತ್ತಿದೆ. ಹೀಗಾಗಿಯೇ ನ್ಯಾಯಾಂಗಕ್ಕೆ ಇನ್ನಿಲ್ಲದ ಮಹತ್ವ ದೊರೆತಿದೆ. ನ್ಯಾಯಾಂಗವನ್ನು ಸಂವಿಧಾನದ ಸಂರಕ್ಷಕ ಎಂದು ಕೂಡ ಕರೆಯಬಹುದು. ಈ ನಿಟ್ಟಿನಲ್ಲಿ ಕಾನೂನಿನ ಮಹತ್ವ ದಿನೇ ದಿನೇ ಹೆಚ್ಚುತ್ತಲಿದೆ.