ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
ಲಿರಿಲ್ ಒಂದು ಕಾಲಕ್ಕೆ ಅತ್ಯಂತ ಜನಪ್ರಿಯ ಸೋಪ್. ಅದು ಬಳಕೆದಾರರ ಮನಸ್ಸನ್ನು ಗೆಲ್ಲಲಿಕ್ಕೆ ಮುಖ್ಯ ಕಾರಣ ಅದರ ಜಾಹಿರಾತು. ‘ಲಾ ಲ ಲ ಲ ಲ ಲಾ ಲಾ ಲಾ ಲಾ’ ಎಂಬ ಆಲಾಪದ ಹಿಮ್ಮೇಳದಲ್ಲಿ ನವ ತರುಣಿ ಕರೆನ್ ಲೂನೆಲ್ ಮಾಡೆಲ್ ಆಗಿ ಜಲಪಾತದಲ್ಲಿ ಮೀಯುವ ದೃಶ್ಯ ಜಾಹಿರಾತು ಲೋಕದಲ್ಲಿ ಸಂಚಲನ ಮೂಡಿಸಿತು.
ಶ್ವೇತ-ಪೀತ-ಹರಿದ್ವರ್ಣಗಳ ಸಮ್ಮಿಲನವಾದ ಆ ಚಿತ್ರ ಪ್ರೇಕ್ಷಕರಲ್ಲಿ ಉತ್ಸಾಹ ಉತ್ಸಾಸಗಳನ್ನು ಚಿಮ್ಮಿಸಿತು. ಹಿಂದೂಸ್ತಾನ್ ಲೀವರ್ (ಈಗದು ಹಿಂದೂಸ್ತಾನ್ ಯೂನಿಲೀವರ್) ಆ ಸೋಪನ್ನು ಮೊದಲು ಗ್ರಾಹಕರ ನಾಡಿ ಹಿಡಿಯಲು ಪರೀಕ್ಷೆಗೆ ಒಡ್ಡಿದಾಗ ಆ ಸೋಪಿನ ಬಣ್ಣ ನೀಲಿಯಾಗಿತ್ತು. ಮಲಯಮಾರುತದ ಗಾಳಿಯ ಥೀಮಿಗೆ ನೀಲಿ ಹೊಂದಿಕೊಳ್ಳುತ್ತದೆಂಬ ಲೆಕ್ಕಾಚಾರ ತಲೆಕೆಳಕಾಗಿ ಲಿರಿಲ್ ತಿರಸ್ಕರಿಸಲ್ಪಟ್ಟಿತು. ಆಗ, ಚಿಂತನೆಯ ದಿಕ್ಕನ್ನೇ ಬದಲಾಯಿಸಿದ ಲೋವ್ ಲಿಂಟಾಸ್ ಏಜೆನ್ಸಿಯ ಕ್ರಿಯೇಟಿವ್ ಡೈರೆಕ್ಟರ್ ಆಗಿದ್ದ ಜಾಹಿರಾತು ಲೋಕದ ದಿಗ್ಗಜ ಅಲೆಕ್ ಪದಮ್ಸೀ ಮತ್ತು ಅವರಿಗೆ ಲಿರಿಲ್ ಪ್ರಚಾರದ ತಂತ್ರಗಾರಿಕೆಯಲ್ಲಿ ಹೆಗಲು ನೀಡಿದ ನೀನಾ ಮರ್ಚೆಂಟ್ ಸಮೀಕ್ಷೆ ನಡೆಸುತ್ತಾರೆ.
ಇಡೀ ದಿನ ಕಾಯಕದಲ್ಲಿ ತೊಡಗುವ ಭಾರತೀಯ ಗೃಹಿಣಿಗೆ ಯಾವಾಗ ಬಿಡುವು ಸಿಗುತ್ತದೆ, ತನ್ನದೆನ್ನುವ ಅರೆ ಘಳಿಗೆಯಾದರೂ ಆಕೆಗೆ ಉಂಟೇ ಎಂಬ ಪ್ರಶ್ನೆ ಗಳಿಗೆ ಉತ್ತರ ಬಯಸಿ ನಡೆಸಿದ ಆ ಸಮೀಕ್ಷೆಯಿಂದ ಹೊರಬಂದ ವಿಷಯವೆಂದರೆ ಆಕೆಗೆ ಸ್ನಾನಮಾಡುವಾಗ ಲಭಿಸುವ ಒಂದಷ್ಟು ಕ್ಷಣಗಳಷ್ಟೇ ಅವಳವು. ಬಹಳಷ್ಟು ಬಾತ್ ರೂಂ ಗಳೂ ಸಣ್ಣದಿದ್ದು ಆ ಒಂದು ಹತ್ತು ಕ್ಷಣಗಳಲ್ಲೂ ಆಕೆಗೆ ನಿಜವಾದ ಸ್ವಾತಂತ್ರ್ಯ ಸಿಗುವುದಿಲ್ಲ. ಅವಳ ಮನಸ್ಸು ಬಿಡುಗಡೆಗಾಗಿ ಹಾತೊ ರೆಯುತ್ತದೆ. ಅಂತಹ ಬಿಡುಗಡೆಯನ್ನು ಪ್ರತಿಬಿಂಬಿಸುವ ಉದ್ದೇಶದಿಂದ ಚಿತ್ರಿಸಲ್ಪಟ್ಟ ಜಾಹಿರಾತು ಲಿರಿಲ್ ಸೋಪಿನದು.
ಡೆಬೊನೇರ್ ಮಾಸಿಕಕ್ಕೆ ಹಿಂದೊಮ್ಮೆ ನೀಡಿದ ಸಂದರ್ಶನದಲ್ಲಿ ಪದಂಸೀ ಇದನ್ನು ವಿವರಿಸಿದ್ದರು. ಆ ಕಿರುಚಿತ್ರಕ್ಕಾಗಿ ಸುಮಾರು ನೂರು ತರುಣಿಯರ ಸ್ಕ್ರೀನಿಂಗ್ ನಡೆದು ಕೊನೆಗೆ ಆಯ್ಕೆ ಆದವಳು ಕರೆನ್. ಅಪರಿಮಿತ ಜೀವನೋತ್ಸಾಹದ ಸಂಕೇತವಾದ ಕರೆನ್. ಹಸಿರು ಬಣ್ಣತೊಟ್ಟ ಲಿರಿಲ್ ದೇಶದ ಬಹುಬೇಡಿಕೆಯ
ಸೋಪಾಗುತ್ತದೆ. ಕರೆನ್ ಲೂನೆಲ್ ಜಾಹಿರಾತು ಲೋಕದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸುತ್ತಾಳೆ. ಮಹಾರಾಷ್ಟ್ರದ ಖಂಡಾಲಾ ಹಾಗೂ ಕೊಡೈ ಕೆನಾಲ್ನಲ್ಲಿ ಈ ಜಾಹಿರಾತಿನ ಚಿತ್ರೀಕರಣ ನಡೆಯಿತು. ಕೊಡೈನ ಪಂಬರ್ ಜಲಪಾತವನ್ನು ಲಿರಿಲ್ ಪಲ್ಸ್ ಎಂದೇ ಕರೆಯಲಾಗುತ್ತದೆ.
ವೈನಾಡಿನ ಪ್ರವಾಸಿ ತಾಣವನ್ನು ಎಡಕಲು ಗುಡ್ಡದ ಮೇಲೆ ಚಿತ್ರದ ಹೆಸರಿನಿಂದಲೇ ಗುರುತಿಸುವಂತೆ. ಹನ್ನೊಂದು ವರ್ಷಗಳ (1974-85) ಕಾಲ ಕರೆನ್
ನಟಿಸಿದ ಈ ಜಾಹಿರಾತು ಚಾಲ್ತಿಯಲ್ಲಿತ್ತು. ಇದೊಂದು ದಾಖಲೆ ಕೂಡ. ಜಾಹಿರಾತು ಲೋಕದ ಮೂಲಕ ಬಾಲಿವುಡ್ ಪ್ರವೇಶಿಸುವುದು ಅತ್ಯಂತ ಪರಿಣಾಮಕಾರಿ ಮಾರ್ಗ ಎಂಬ ನಂಬಿಕೆ ದೇಶದ ಬೆಡಗಿಯರಲ್ಲಿ ಮನೆಮಾಡಿತು. ನಂತರದ ವರ್ಷಗಳಲ್ಲಿ ಲಿರಿಲ್ಗೆ ರೂಪದರ್ಶಿಯರಾಗಿ ಪ್ರೀತಿ ಜಿಂಟಾ, ತಾರಾ, ದೀಪಿಕಾ ಪಡುಕೋಣೆ ಮುಂತಾದವರು ಬಂದರು.
ಲಿರಿಲ್ ತನ್ನ ಜನಪ್ರಿಯತೆಯನ್ನು ಉಳಿಸಿಕೊಳ್ಳಲಾಗಲಿಲ್ಲ. ಅದಕ್ಕೆ ಬೇರೆ ಕಾರಣಗಳೂ ಉಂಟು. (ಉದಾ: ಗೋದ್ರೆಜ್ ಕಂಪನಿ ಅದೇ ನಿಂಬೆಹಣ್ಣಿನ ಸುವಾಸನೆ ಹೊತ್ತ ಸಿಂಥಾಲ್ ಸೋಪನ್ನು ಬಿಡುಗಡೆ ಮಾಡಿತು.) ಏತನ್ಮಧ್ಯೆ ಕರೆನ್ ಅಪಘಾತದಲ್ಲಿ ಮಡಿದಳೆಂಬ ಸುದ್ದಿ ಹರಡಿತು. ಇಸವಿ ೨೦೦೯ರ ಆಗ ಐದರಂದು ಎಕನಾಮಿಕ್ ಟೈಮ್ಸ ಅದು ಕೇವಲ ವದಂತಿಯೆಂದು ತನಿಖೆ ಮಾಡಿ ಬಹಿರಂಗಗೊಳಿಸುವುದರ ಜತೆಗೆ ಆಕೆಯ ತಾಣವನ್ನೂ ಪತ್ತೆ ಮಾಡಿ ಆಕೆಯ ಸಂದರ್ಶನ ವನ್ನೂ ಪ್ರಕಟಿಸಿಸಿತು. ಕರೆನ್ ನ್ಯೂಜಿಲೆಂಡ್ನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆಂಬ ಅಂಶ ಬಹಿರಂಗಗೊಳಿಸಿತು. ನಿಂಬೆಹಣ್ಣಿನಂಥ ಹುಡುಗಿಯ ಸಂಕ್ಷಿಪ್ತ ಚರಿತೆ ಇದು. ನಿಂಬೆಹಣ್ಣಿನ ಪರಿಮಳವನ್ನು ಅಂಟಿಸಿಕೊಂಡ ಸೋಪಿನ ಕಥನವೂ ಹೌದು.
ಇನ್ನು ಮನೆ ಮುಂದೆ ನಿಂಬೆಹಣ್ಣನ್ನು ಮಾರುವವರತ್ತ ಗಮನ ಹರಿಸೋಣ. ಮಳೆಗಾಲವಾದ್ದರಿಂದ, ನಿಂಬೆಹಣ್ಣು ಹತ್ತು ರುಪಾಯಿಗೆ ಐದು. ಬೆಳೆಗಾರನಿಗೆ ಎಷ್ಟು ಗಿಟ್ಟುತ್ತೋ ಬಿಡುತ್ತೋ ಬೇಡ, ತಳ್ಳುಗಾಡಿಯ, ತಲೆಮೇಲೆ ಹೊತ್ತೋ ಸೊಪ್ಪು, ಶುಂಠಿ, ನಿಂಬೆಹಣ್ಣು, ತರಕಾರಿಗಳನ್ನು ಹೊತ್ತವರಿಗೆ ನಿಂಬೆಹಣ್ಣಿನ ಮೇಲೆ ಹಾಕಿದ ಇನ್ನೂರು ರುಪಾಯಿ ಬಂಡವಾಳಕ್ಕೆ ಪ್ರತಿಫಲವಾಗಿ ಸಿಗುವ ಲಾಭ ನೂರು ರುಪಾಯಿ. ಅದೂ ಅರ್ಧ ದಿನ ವ್ಯಯಿಸಿದ ನಂತರ. ಕೆಲವೊಮ್ಮೆ (ಅದೂ ಮಳೆಬಂದ ದಿನಗಳಲ್ಲಿ) ಮಾಲು ಖಾಲಿಯಾಗಲು ದಿನವಿಡೀ ಕಳೆಯಬೇಕು.
ಚೌಕಾಸಿಯಿಂದ ಗಳಿಕೆಯಲ್ಲಿ ಒಂದು ಹತ್ತು ರುಪಾಯಿ ಕಡಿಮೆಯಾದರೂ ಆಶ್ಚರ್ಯವಿಲ್ಲ. ದಿನದ ಕೊನೆಗೆ ವ್ಯಾಪಾರವಾಗದೇ ಉಳಿದ ಹಣ್ಣು ಕೆಟ್ಟೀತೆಂದು ಕಮ್ಮಿಗೆ
ಮಾರಿದರೂ ಮಾರಿದರೇ. ಸಿಗುವ ಅಷ್ಟು ಕಾಸಿಗೆ ಕಾಲ್ನಡಿಗೆ ಹಾಗೂ ಗಾಡಿಯನ್ನು ತಳ್ಳುವ ಅಥವಾ ಶಿರದ ಮೇಲೆ ಭಾರ ಹೊರುವ ಬೆವರಿನ ಬಂಡವಾಳವೂ (sweat capital) ಬೇಕು. ನಿಂಬೆಹಣ್ಣನ್ನು ಮಾತ್ರ ಮಾರುವವರು ಬಹುತೇಕ ಬೈಸಿಕಲ್ನ, ದ್ವಿಚಕ್ರದ ಬರುತ್ತಾರೆ. ಅದಕ್ಕೆ ತಕ್ಕಂತೆ ಬೆಲೆಯೂ, ಆದಾಯದ ಪರಿಮಾಣವೂ ನಿರ್ಧರಿತವಾಗುತ್ತದೆ. ಮಾರುವ ಮಾಲು ಯಾವುದಾದರೂ ಇರಲಿ, ರಸ್ತೆಯಲ್ಲಿ ತರಕಾರಿ ಮಾರುವವರ ನಿತ್ಯದ ಆದಾಯ ಸರಾಸರಿ ೩೦೦ ರಿಂದ 600 ರು.ಗಳು. ಯಾವುದೇ ಜಾಹಿರಾತಿಲ್ಲ. ಕೂಗಿ ಹೇಳಿದ್ದೇ ಜಾಹಿರಾತು.
ತಲೆಯ ಮೇಲೆ ದೊಡ್ಡ ಗಾತ್ರದ ಅಲ್ಯೂಮಿನಿಯಂ ಡಬರಿ ಹೊತ್ತವರನ್ನು ನೋಡುವುದೇ ಹಿಂಸೆ. ಕಡಿಮೆ ಎಂದರೂ 20-30 ಕಿಲೋ ತರಕಾರಿಯನ್ನು ಹೊರು ತ್ತಾರೆ. ನಮಗೆ ಅತ್ಯಗತ್ಯವಿಲ್ಲದಿದ್ದರೂ ಬೇಡವೆಂದು ಹೇಳುವ ಮನಸ್ಸಾಗುವುದಿಲ್ಲ. ನಿರಾಕರಿಸುವುದು ಹೇಗೆ (The art of saying ‘no’) ಕಲೆ ಇಲ್ಲಿ ಬಳಕೆ ಯಾಗದು. ಅವರು ಹೊರುವ ತೂಕದಲ್ಲಿ ಒಂದು ಕಿಲೋ ಕಡಿಮೆಯಾದರೆ ಅಷ್ಟೆ ಸಮಾಧಾನ. ಗೇಟ್ ಬಳಿ ನಿಂತ ಅವರ ಕೂಗು ಕೇಳುತ್ತಿದ್ದಂತೆ ಓಡುತ್ತೇನೆ. ಇಡಲು ಜಾಗ ಇಲ್ಲವೇ ಇಲ್ಲ ಅನ್ನುವ ಸಂದರ್ಭದಲ್ಲಿ ಒಲ್ಲದ ಮನಸ್ಸಿನಿಂದ ಬೇಡವೆನ್ನುತ್ತೇವೆ.
ಅವರು ಒಂದು ಕ್ಷಣವೂ ಭಾರವನ್ನು ನಮ್ಮ ಕಾರಣದಿಂದ ಹೊರಬಾರದೆಂದು (ಅಥವಾ ನೆಲದ ಮೇಲಿಳಿಸಲು ಬಾಗ ಬಾರದೆಂದು) ಅವರ ಹೊರೆಯನ್ನು ಕಾರಿನ ಬಾನೆಟ್ ಮೇಲೆ ಇಡಲು ಹೇಳಿದ್ದೇವೆ. ಆದರೆ, ಸೂಚನೆಯನ್ನು ಅನುಸರಿಸುವುದು ನಿತ್ರಾಣಗೊಂಡ ಒಬ್ಬಾಕೆ ಅಷ್ಟೆ. ಮಿಕ್ಕವರಿಗೆ ಸಂಕೋಚ. ಕಾರು ಹಾಳಾದರೇ ಎಂಬ ಅಪ್ರಕಟಿತ ಆತಂಕ. ಹೊರುವ ಭಾರಕ್ಕೆ ಕೆಲವರದಂತೂ ಮೇಲ್ಗಣ್ಣಾಗಿರುತ್ತದೆ. ದನಿಪೆಟ್ಟಿಗೆಯ ಮುಚ್ಚಳ ಹೇಗಾದರೂ ತೆರೆದೀತು ಎನ್ನುವಷ್ಟು ಹೊರೆ. ಬಾಯಿಂದ ಅದಾವ ‘ಲಾ ಲ ಲ ಲ ಲ ಲಾ’ ಶಬ್ದ ಹೊರಟೀತು? ಡಬರಿ (ಈಗ ಮಂಕ್ರಿ ಕಾಣೆಯಾಗಿದೆ) ಯಲ್ಲಿನ ಮೂರ್ನಾಲ್ಕು ತರಕಾರಿಗಳನ್ನು ಇಪ್ಪತ್ತು ಹೆಜ್ಜೆ ಗೊಮ್ಮೆ ವಿವರವಾಗಿ ಕೂಗಬೇಕು.
ತಳ್ಳುಗಾಡಿಯವರು ಐವತ್ತು ಹೆಜ್ಜೆಗೊಮ್ಮೆ ಕೂಗಿದರೂ ನಡೆಯುತ್ತದೆ. ಗಾಡಿಯಲ್ಲಿನ ಮಾಲೆಲ್ಲವೂ ಕಾಣುವಂತೇ ಇರುವುದರಿಂದ ಗಿರಾಕಿಗಳಿಗೆ, ಅದೂ ಮಹಡಿ ಯಲ್ಲಿ ವಾಸಿಸುವರಿಗೆ, ದೂರದಿಂದಲೇ ಕಾಣುತ್ತದೆ. ಹಾಗಾಗಿ ಕೆಲವರು ತರಕಾರಿ ಎಂದಷ್ಟೇ ಕೂಗಿ ಕಂಠ ಶೋಷಣೆಯ ಬಾಬತ್ತನ್ನು ತುಸುವಾದರೂ ಕಡಿಮೆ ಮಾಡಿಕೊಳ್ಳುತ್ತಾರೆ. ಸಾಲಾಗಿ ಮೂರು ನಿವೇಶನಗಳಿರುವ ಸಂದರ್ಭದಲ್ಲಿ ಕೂಗುವುದರಿಂದ ಪ್ರಯೋಜನವಿಲ್ಲ ಎಂಬ ಅಲ್ಪ ಜಾಣ್ಮೆಯೂ ಇಲ್ಲದ ಇವರು ಮರುಕ ಹುಟ್ಟಿಸುತ್ತಾರೆ. ಕೋವಿಡ್ ಹೆಮ್ಮಾರಿಯ ಕಾಟ ಶುರುವಾದ ನಂತರದಲ್ಲಿ ನಿರುದ್ಯೋಗಿಗಳಾದ ಅನೇಕರು ತರಕಾರಿ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವರು ಆಟೋರಿಕ್ಷಾದಲ್ಲಿ ಬರುವುದೂ ಉಂಟು.
ಮಾರಾಟದ ತರಕಾರಿಗಳ ಹೆಸರುಗಳನ್ನು ಧ್ವನಿ ಮುದ್ರಿಸಿರುತ್ತಾರೆ. ಗಂಟಲು ಬಿರಿಯುವುದು ತಪ್ಪುತ್ತದೆ ನಿಜ, ಆದರೆ ನಿರಂತರವಾದ ಯಾಂತ್ರಿಕ ಕೂಗಿನ ಶಬ್ದದಲ್ಲಿ ಆಸಕ್ತ ಗಿರಾಕಿಗಳು ಗಮನ ಸೆಳೆಯಲು ಕೂಗಿದ್ದು ಅವರಿಗೆ ಕೇಳುವುದಿಲ್ಲ. ಅನುಭವದ ಕೊರತೆ. ಜತೆಗೆ ಆಟೋರಿಕ್ಷಾದ ಎಂಜಿನ್ ಶಬ್ದ. ಧ್ವನಿಮುದ್ರಣ ಮಾಡುವಾಗ ಬಿಟ್ಟು ಬಿಟ್ಟು ಹೇಳಿದರೆ ಗ್ರಾಹಕರಿಗೆ ಅನುಕೂಲ, ತಮಗೂ ಅನುಕೂಲ ಎಂಬ ಆಲೋಚನಾ ಸಾಮರ್ಥ್ಯವಿಲ್ಲದವರು. ಎರಡು ಕೂಗುಗಳ ನಡುವೆ ಅಂತರವಿರಬೇಕೆಂದು ತಿಳಿಯದವರು. ಗ್ರಾಹಕರೆಲ್ಲರಿಗೂ, ಯಾವ ಕ್ಷಣದಲ್ಲಿ ಕೂಗಿದರೆ ಅವರ ಕೂಗು ಮಾರಾಟಗಾರರನ್ನು ಮುಟ್ಟೀತೆಂಬ ಅರಿವಿರುವ ಖಾತರಿ ಇಲ್ಲ. ಎಲ್ಲರಿಗೂ, ಗಟ್ಟಿಯಾಗಿ ಕೂಗುವ ಸಾಮರ್ಥ್ಯವೂ ಇರುವುದಿಲ್ಲ.
ಇದರ ಅರಿವು ಈ ನವಜಾತ ಮಾರಾಟಗಾರರಿಗಿರುವುದಿಲ್ಲ. ನಿತ್ಯ ಬರುವವರಿಗಾದರೆ, ಇಂತಹ ಮನೆಯವರು ಸಂಭವನೀಯ ಗಿರಾಕಿ ಎಂಬ ತಿಳುವಳಿಕೆ ಇರುತ್ತದೆ ಮತ್ತು ಆ ಮನೆಯ ಮುಂದೆ ಗಾಡಿಯನ್ನು ನಿಧಾನವಾಗಿ ಚಲಿಸಬಹುದು. ಈ ಕುರಿತು ಜಾಗ್ರತಿ ಮೂಡಿಸಬೇಕೆಂದರೆ ನಮ್ಮ ಬಿಸಿನೆಸ್ ಸ್ಕೂಲ್ಗಳು ಆಸಕ್ತಿ ತೋರಬೇಕು. ಪ್ರಾಜೆಕ್ಟ್ ಆಗಿ ಈ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬಹುದು. ದೊಡ್ಡ ವಿಷಯವೇನಲ್ಲ. ರಸ್ತೆಗಳಲ್ಲಿ ತರಕಾರಿ (ವಗೈರೆ) ಮಾರು ವರೆಲ್ಲರ ಸಾಮರ್ಥ್ಯ ಮತ್ತು ಉತ್ಪಾದಕತೆ ಹೆಚ್ಚಿಸುವ ದೃಷ್ಟಿಯಿಂದ ಒಂದರೆ ದಿನದ ಕ್ಲಬ್ ಹೌಸ್ ನಡೆಸಲಿ. ತರಕಾರಿ ಮಾರಿ ಜೀವಿಸುವ ಅನೇಕ ಬಡವರ ಬಳಿ ಸ್ಮಾರ್ಟ್ ಫೋನ್ ಇರುವುದಿಲ್ಲ.
ಒಂದು ದಿನದ ಮಟ್ಟಿಗೆ ಅವರಿಗೆ ಅದನ್ನು ಒದಗಿಸಲು ಪ್ರಾಯೋಜಕರನ್ನು ಹುಡುಕಬಹುದು. ಎಕ್ಸ್ ಚೇಂಜ್ ಆಫರ್ನಲ್ಲಿ ಹಿಂಪಡೆದ ಹಳೆಯ ಫೋನ್ಗಳನ್ನು ಸೆಲ್ ಫೋನ್ ಕಂಪನಿಗಳು ಕಾರ್ಯಕ್ರಮಕ್ಕೆ ನೀಡಬಹುದು. ಇಂತಹ ಜಾಗೃತಿ ಮೂಡಿಸುವುದರ ಜತೆಗೆ ಬೆಳೆಗಾರರಿಗೂ ಅನುಕೂಲವಾಗುವಂತೆ ಕ್ಲಬ್ ಹೌಸ್ ರೂಮನ್ನು ದುಡಿಸಿಕೊಳ್ಳಬಬಹುದು. ರೈತರೂ, ಗ್ರಾಹಕರೂ ಸಂಘಟಿತರಾಗಿ ಒಂದು ವ್ಯವಸ್ಥೆಯನ್ನು ರೂಪಿಸಿದರೆ ನಿರ್ದಿಷ್ಠ ಬಡಾವಣೆಗೆ ನಿರ್ದಿಷ್ಠ ದಿನಕ್ಕೆ ಇಂತಹದೇ ಹಣ್ಣು ತರಕಾರಿಗಳ ಅವಶ್ಯಕತೆ ಇರುವುದರ ಪೂರ್ವಮಾಹಿತಿ ಲಭಿಸಿ ಅದಕ್ಕೆ ತಕ್ಕಂತೆ/ತಕ್ಕಷ್ಟು ಬೆಳೆಯಲು ಸಾಧ್ಯವಾಗುತ್ತದೆ. ಇದಕ್ಕೂ ಮೋದಿ ಬರುವುದು ಬೇಡ. ಮೋದಿ ಕಾಲಿಟ್ಟರೆ ಎಡವಟ್ಟೇ. ಮೋದಿಯಿಂದ ಬಂದ ಒಂದೇ ಕಾರಣಕ್ಕೆ ಅದನ್ನು ಬೀದಿಗೆ ಬಂದು ಪ್ರತಿಭಟಿಸುವ ಜನಪರರಿದ್ದಾರೆ.