Wednesday, 9th October 2024

ಆಟದ ಹಿಂದಿನ ಪರದಾಟ ಕಲಿಸುವ ಪಾಠ 

ನಾಡಿಮಿಡಿತ
ವಸಂತ ನಾಡಿಗೇರ

ಮಳೆ ನಿಂತರೂ ಮಳೆ ಹನಿ ನಿಲ್ಲುವುದಿಲ್ಲ ಎಂಬ ಮಾತಿದೆ. ಒಲಿಂಪಿಕ್‌ಗೂ ಈ ಮಾತು ಅನ್ವಯಿಸುತ್ತದೆ. ಕಳೆದ ವಾರವೂ ಒಲಿಂಪಿಕ್ಸ್ ಕುರಿತಾಗಿ ಬರೆದಿದ್ದೆ. ಈ ಬಾರಿ ಒಲಿಂಪಿಕ್‌ನಲ್ಲಿ ಭಾರತವನ್ನು ಪ್ರತಿನಿಽಸಿ ಪದಕ ಗೆದ್ದ, ಇಲ್ಲವೆ ಸ್ವಲ್ಪದರಲ್ಲೇ ಪದಕ ತಪ್ಪಿಸಿಕೊಂಡ ಕ್ರೀಡಾಪಟುಗಳ ಕುರಿತಾದ ವಿವರಗಳ ಮೇಲೆ ಬೆಳಕು
ಚೆಲ್ಲುವ ಯತ್ನವಿದೆ.

ಇದರಲ್ಲಿ ಬಡತನದ ಬೇಗೆ, ಪರಿಶ್ರಮ-ಪ್ರಯತ್ನ, ಪರದಾಟ, ಸಂಕಷ್ಟ-ಬವಣೆ, ಮಾನವೀಯತೆ, ತಾರತಮ್ಯ, ಸಣ್ಣತನ-ದೊಡ್ಡತನ ಇವೆಲ್ಲ ಕಣ್ಣಮುಂದೆ ಬರುತ್ತದೆ. ಅವುಗಳತ್ತ ಒಂದು ನೋಟ ಹರಿಸೋಣ. ಈ ಸಲದ ಒಲಿಂಪಿಕ್ಸ್‌ನ ಬೆಳ್ಳಿಯ ಬೆಡಗಿ ಮೀರಾಬಾಯಿ ಚಾನು. ಅವರು ವೇಟ್‌ಲಿಫ್ಟಿಂಗ್ ನಲ್ಲಿ ಬೆಳ್ಳಿಪದಕ ತಂದು ಕೊಟ್ಟಾಗ ಇಡೀ ದೇಶವೇ ಹೆಮ್ಮೆ, ಅಭಿಮಾನ ಪಟ್ಟಿತು. ಸಂಭ್ರಮಿಸಿತು. ಚಾನು ಕೂಡ ತಮ್ಮ ತರಬೇತಿ ಮತ್ತಿತರ ವಿಚಾರದಲ್ಲಿ ಸರಕಾರದ ನೆರವು ಸಿಕ್ಕಿದೆ ಎಂದು ಹೇಳಿದ್ದಾರೆ. ಇದು ಈಗಿನ ವಿಷಯವಾಯಿತು.

ಆದರೆ ಇನ್ನೂ ಪ್ರವರ್ಧಮಾನಕ್ಕೆ ಬಂದಿಲ್ಲದಿರುವಾಗ ಅಭ್ಯಾಸ ಮಾಡಲು, ತರಬೇತಿ ಪಡೆಯಲು ಪಡುತ್ತಿದ್ದ ಕಷ್ಟದ ಬಗ್ಗೆ ಗಮನಹರಿಸಲೇಬೇಕು. ಮೀರಾ ಬಾಯಿಯ ಚಾನು, ತರಬೇತಿಗಾಗಿ ಮಣಿಪುರ ರಾಜಧಾನಿ ಇಂಫಾಲ್‌ನಲ್ಲಿರುವ ಕ್ರೀಡಾ ಸಂಕೀರ್ಣಕ್ಕೆ ತೆರಳಬೇಕಿತ್ತು. ಇದು ಆಕೆಯ ಗ್ರಾಮದಿಂದ ಸುಮಾರು 25 ಕಿಮೀ. ದೂರದಲ್ಲಿದೆ. ಇದಕ್ಕಾಗಿ ಅವರು ಆಶ್ರಯಿಸುತ್ತಿದ್ದು ಮರಳು ಸಾಗಿಸುವ ಲಾರಿಗಳನ್ನು. ಅಣ್ಣ ಪ್ರತಿದಿನ ಬೆಳಗ್ಗೆ ಅವರನ್ನು ಮಾರುಕಟ್ಟೆ ಬಳಿ ಕರೆತರುತ್ತಿದ್ದರು. ಅಲ್ಲಿ ಯಾವುದಾದರೂ ಲಾರಿಯನ್ನು ಹತ್ತಿ ಮೀರಾಬಾಯಿ ಇಂಫಾಲ್‌ಗೆ ಹೋಗುತ್ತಿದ್ದರು.

ಮನೆಯಲ್ಲಿ 10-20ರು. ಕೈಗಿಡುತ್ತಿದ್ದರಷ್ಟೆ. ಇದಾವುದರ ಬಗೆಗೂ ತಕರಾರಿರಲಿಲ್ಲ. ವಯಸ್ಸಿಗೆ ಬಂದ ಹೆಣ್ಣು ಮಗಳೊಬ್ಬಳು ಹೀಗೆ ಒಂಟಿಯಾಗಿ ಲಾರಿಯಲ್ಲಿ ಹೋಗುವುದೆಂದರೆ ಏನು ? ಆದರೆ ಅನ್ಯ ಮಾರ್ಗವಿರಲಿಲ್ಲ. ಹಾಗೆಂದು ಲಾರಿ ಚಾಲಕರೂ ಒಳ್ಳೆಯವರಾಗಿದ್ದರು. ಯಾವ ತಂಟೆ ತಕರಾರಿಲ್ಲದೆ ಲಿಫ್ಟ್ ಕೊಡುತ್ತಿದ್ದರು. ಅದೂ ಉಚಿತವಾಗಿ. ಅದೆಲ್ಲ ಇತಿಹಾಸ ಈಗೇಕೆ ಎಂದು ಕೇಳಬಹುದು. ಅಲ್ಲೇ ಇರೋದು ವಿಷಯ. ಮೀರಾ ಬಾಯಿ ಪದಕ ಗೆದ್ದ ಕೂಡಲೇ ಎಲ್ಲರೂ ಕೊಂಡಾಡುವವರೇ. ಆದರೆ ಆಕೆಗೆ ಬೇರೆಯದೇ ವಿಷಯ ತಲೆಕೊರೆಯುತ್ತಿತ್ತು.

ತರಬೇತಿ ಸಮಯದಲ್ಲಿ ತನ್ನನ್ನು ಲಾರಿಗಳಲ್ಲಿ ಕರೆದೊಯ್ದ ಆ ಚಾಲಕರನ್ನು ಹುಡುಕತೊಡಗಿದರು. ಕೊನೆಗೂ ಪತ್ತೆಹಚ್ಚಿ ಅವರನ್ನೆಲ್ಲ ಮನೆಗೆ ಕರೆಸಿದರು. ಅವರಿಗೆ ಊಟೋಪಚಾರ ಮಾಡಿ, ಉಡುಗೊರೆ ಕೊಟ್ಟು ಯಥೋಚಿತವಾಗಿ ಉಪಚರಿಸಿದರು. ಇದು ಕಷ್ಟ ಕಾಲದಲ್ಲಿ ಹಾಗೂ ಅಗತ್ಯವಾಗಿದ್ದ ಸಮಯದಲ್ಲಿ ಸಹಾಯ ಮಾಡಿದವರಿಗೆ ಸಲ್ಲಿಸಿದ ಧನ್ಯವಾದವಾಗಿತ್ತು.

ಹತ್ತಿದ ಏಣಿ ಒದೆಯುವ; ಉಪಕಾರ ಸ್ಮರಣೆ ಎಂಬ ಪದವನ್ನು ಶಬ್ದಕೋಶದಲ್ಲಿ ಹುಡುಕಬೇಕಾಗಿರುವ ಈ ದಿನಗಳಲ್ಲಿ, ಸ್ವಲ್ಪವೇ ಯಶಸ್ಸು ದೊರೆತರೂ ತಲೆ ತಿರುಗುವ ಇಂದಿನ ದಿನಮಾನಗಳಲ್ಲಿ ಮೀರಾಬಾಯಿಯ ಈ ಹೃದಯ ವೈಶಾಲ್ಯಕ್ಕೆ ಎಲ್ಲರೂ ಮಾರುಹೋದರು. ಈ ವಿಡಿಯೊಗೆ ಲಕ್ಷಾಂತರ ಲೈಕ್‌ಗಳು ದೊರೆತವು. ಎಲ್ಲರೂ ಅವರ ದೊಡ್ಡಗುಣವನ್ನು ಹಾಡಿ ಹೊಗಳುವವರೇ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಏಕೈಕ ಚಿನ್ನದ ಪದಕ ದೊರಕಿಸಿಕೊಟ್ಟ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರಿಗೆ ಈಗ ಎಲ್ಲರೂ ಬಹುಪರಾಕ್ ಹೇಳುವವರೇ. ಏಕೆಂದರೆ ಭಾರತಕ್ಕೆ ಟ್ರ್ಯಾಕ್ ಆಂಡ್ ಫೀಲ್ಡ್‌ನಲ್ಲಿ ಇದೇ ಮೊದಲ ಚಿನ್ನ ಅವರಿಂದಾಗಿ ದೊರಕಿದೆ. ಇದಕ್ಕೆ ಮೊದಲು ಅಭಿನವ್ ಬಿಂದ್ರಾ ಅವರು ಶೂಟಿಂಗ್‌ನಲ್ಲಿ ವೈಯಕ್ತಿಕ ಚಿನ್ನದ ಪದಕ ಗಳಿಸಿದ್ದರು. ಹಿಗಾಗಿ ಚೋಪ್ರಾ ಸಾಧನೆ ಅಪರೂಪದ್ದೇ. ಅದೇ ಕಾರಣಕ್ಕಾಗಿ ತಾವು ಈ ಪದಕವನ್ನು ಹಾರುವ ಸಿಖ್ ಮಿಲ್ಖಾ ಸಿಂಗ್‌ಗೆ ಅರ್ಪಿಸುವುದಾಗಿ ಹೇಳಿದ್ದಾರೆ. ಭಾರತ ಅಥ್ಲೀಟ್ ಪದಕ ಪಡೆಯುವುದನ್ನು ತಾವು ನೋಡಬೇಕೆಂದು ಮಿಲ್ಖಾ ಹಂಬಲಿಸಿದ್ದರು. ಚೋಪ್ರಾಗೆ ಈಗೇನೊ ಪ್ರಶಂಸೆ ಮತ್ತು ಬಹುಮಾನಗಳ ಸುರಿಮಳೆ ಆಗಿದೆ.

ಆದರೆ ಅವರ ಯಶಸ್ಸಿನ ಹಾದಿಯೂ ಸುಗಮವಾಗಿರಲಿಲ್ಲ. ಟೋಕಿಯೊ ಒಲಿಂಪಿಕ್ಸ್ ಹೊತ್ತಿಗೆ ಚೋಪ್ರಾಗೆ ಸಾಕಷ್ಟು ಉತ್ತಮ ತರಬೇತಿ ದೊರಕಿರುವುದೇನೊ ನಿಜ. ಆದರೆ ಈ ಹಂತಕ್ಕೆ ಅವರು ನಡೆದು ಬಂದ ಹಾದಿಯನ್ನು ನಾವು ನೊಡಬೇಕು. ನೀರಜ್ ಚೋಪ್ರಾ ಹರಿಯಾಣದ ಪಾಣಿಪಟ್ ನವರು. ಮೂಲತಃ ಶ್ರೀಮಂತರೇನಲ್ಲ. ರೈತ ಕುಟುಂಬ. ಚಿಕ್ಕಂದಿನಲ್ಲಿ ತುಂಬ ದಡೂತಿ ಆಗಿದ್ದರಿಂದ ಎಲ್ಲರೂ ಛೇಡಿಸುತ್ತಿದ್ದರು. ಇದರಿಂದ ಬಾಲಕ ಚೋಪ್ರಾ ಮುಜುಗರ ಪಡುತ್ತಿದ್ದ. ತೂಕ ಇಳಿಸಲು ಜಿಮ್‌ಗೆ ಕಳಿಸುತ್ತಿದ್ದರು. ಹೀಗಿರುವಾಗ ಒಮ್ಮೆ ಜಾವೆಲಿನ್ ಎಸೆತದ ಆಕರ್ಷಣೆಗೆ ಒಳಗಾದರು. ನಿಂತ ಕಾಲಲ್ಲೇ 40 ಮೀಟರ್ ದೂರ ಎಸೆದು ದನ್ನು ನೋಡಿ ಅಲ್ಲಿನ ಕೋಚ್ ಪ್ರಭಾವಿತರಾಗಿ ತರಬೇತಿಗೆ ಸೇರಿಸಿದರು.

ಅದಾದ ಬಳಿಕ ಒಂದೊಂದೇ ಮೆಟ್ಟಿಲು ಏರುತ್ತ ಇಲ್ಲಿಗೆ ಬಂದು ನಿಂತಿದ್ದಾರೆ. ಡುಮ್ಮನೆಂಬ ಮೂದಲಿಕೆಯಿಂದ ಹೊರಬರಲು ಜಾವೆಲಿನ್ ಎಸೆಯಲು ಆರಂಭಿಸಿದ
ಹುಡುಗ ಇಂದು ಅದೇ ಆಟದಲ್ಲಿ ದೇಶಕ್ಕೆ ಚಿನ್ನ ತಂದಿರುವುದು ಅದ್ಭುತವಲ್ಲವೆ ? ಇನ್ನು ಕುಸ್ತಿಯಲ್ಲಿ ಕಂಚು ಗೆದ್ದ ಬಜರಂಗ್ ಪೂನಿಯಾ ಅವರದ್ದು ಮತ್ತೊಂದು ಬಗೆಯ ಕಥೆ. ಹರಿಯಾಣದ ಝಜ್ಜರ್ ಜಿಲ್ಲೆಯ ಗ್ರಾಮವೊಂದರಲ್ಲಿ ಜನನ. ಕ್ರಿಕೆಟ್, ಹಾಕಿ, ಫುಟ್ಬಾಲ್ ಮೊದಲಾದ ಸುಧಾರಿತ ಅಥವಾ ಪರಿಚಿತ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಸಾಧ್ಯವಿರಲಿಲ್ಲ.

ಅವರ ಕುಟುಂಬ ಆರ್ಥಿಕವಾಗಿ ಅಷ್ಟು ಶಕ್ತವಾಗಿರಲಿಲ್ಲ. ಅವರಪ್ಪ ಹೇಗೂ ಕುಸ್ತಿ ಪಟು ಆಗಿದ್ದರು. ಮಗನೂ ಹಳ್ಳಿಯಲ್ಲಿ ಸಾಂಪ್ರದಾಯಿಕ ಕುಸ್ತಿ ಕಲಿಯಲು ಆರಂಭಿಸಿ ದರು. ಹೀಗಾಗಿ ಓದುವುದು ಸಾಧ್ಯವಾಗಲಿಲ್ಲ. ಬಳಿಕ ಸೋನೆಪತ್‌ಗೆ ತೆರಳಿ ಸಾಯ್‌ನಲ್ಲಿ ತರಬೇತಿಗೆ ಸೇರಿದರು. ಮುಂದಿನದು ಇತಿಹಾಸ. ಒಂದೊಂದೇ ಮೆಟ್ಟಿಲು ಏರಿ ಇಷ್ಟರ ಮಟ್ಟಿನ ಯಶಸ್ಸು ಕಂಡಿದ್ದಾರೆ. ಇವರೆಲ್ಲರಿಗಿಂತ ವಿಭಿನ್ನವಾದ ಕಥೆ ಬಿಲ್ಲುಗಾರ ಪ್ರವೀಣ್ ಜಾಧವ್ ಅವರದು. ಅತನು ದಾಸ್ ಮತ್ತು ದೀಪಿಕಾ ಕುಮಾರಿ ಅವರಿಗಿಂತ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಗಮನ ಸೆಳೆದ ಅವರು ಎರಡನೇ ಸುತ್ತಿನಲ್ಲಿ ಹೋರಾಡಿ ಮಣಿದರು. ಆದರೆ ಒಲಿಂಪಿಕ್’ವರೆಗಿನ ಅವರ ಪಯಣವೇ ಅದ್ಭುತ. ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಜನನ. ತಂದೆ ತಾಯಿ ಕೂಲಿಕಾರರು. ನಾಲೆಯೊಂದರ ಬದಿಯಲ್ಲಿ
ಸಣ್ಣ ಗುಡಿಸಲಿನಲ್ಲಿ ವಾಸ. ಪ್ರವೀಣ್ ಕೂಡ ಒಮ್ಮೊಮ್ಮೆ ಕೂಲಿಗೆ ಹೋಗಿದ್ದುಂಟು. ಚಿಕ್ಕವನಿದ್ದಾಗ ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದ. ಆದರೆ ಅಪೌಷ್ಟಿಕತೆ ಯಿಂದಾಗಿ ಓಡಲು ಸಾಧ್ಯವಾಗುತ್ತಿರಲಿಲ್ಲ.

ಅವನ ಶಿಕ್ಷಕರೇ ಖರ್ಚು ವಹಿಸಿಕೊಳ್ಳುತ್ತಿದ್ದರು. ಕೊನೆಗೆ ಬಿಲ್ಲುಗಾರಿಕೆಯತ್ತ ಗಮನ ಹರಿಸಿದ. ಆದರೆ ಅಲ್ಲೂ ಬಿಲ್ಲು ಹಿಡಿಯಲು ಶಕ್ತಿ ಸಾಲುತ್ತಿರಲಿಲ್ಲ. ಅಸಮರ್ಥ ಎಂದು ಹೊರಗೆ ಕಳಿಸಲು ನಿರ್ಧರಿಸಲಾಯಿತು. ಶಿಕ್ಷಕರ ಕೋರಿಕೆಯ ಮೇಲೆ ಸಿಕ್ಕ ಕಡೆಯ ಅವಕಾಶದಲ್ಲಿ ಯಶಸ್ಸು ಸಿಕ್ಕಿತು. ಅದಾದ ಬಳಿಕ ಬಿಲ್ಲುಗಾರಿಕೆಯ ಪಯಣ ಮುಂದುವರಿಯಿತು.

ಎಲ್ಲಕ್ಕಿಂತ ಗಮನಾರ್ಹ ಸಂಗತಿ ಎಂದರೆ ಈ ಒಲಿಂಪಿಕ್ಸ್‌ನಲ್ಲಿ ಮಹಿಳಾ ಹಾಕಿ ತಂಡದ ಪ್ರದರ್ಶನ. ಪುರುಷರ ಹಾಕಿ ತಂಡಕ್ಕೆ ವೈಭವದ ಇತಿಹಾಸವಿದೆ. ಈ ಹಿಂದೆ ಅದು ಎಂಟು ಚಿನ್ನ ಸೇರಿದಂತೆ 11 ಪದಕಗಳನ್ನು ಗಳಿಸಿದೆ. ಈಚಿನ ವರ್ಷಗಳಲ್ಲಿ ಸಾಧನೆ ಇಳಿಮುಖವಾಗಿತ್ತಾದರೂ ಈ ಬಾರಿ ಮತ್ತೆ ಸುಧಾರಿತ
ಪ್ರದರ್ಶನದೊಂದಿಗೆ ಕಂಚಿನ ಪದಕ ಪಡೆದಿದೆ. ಆದರೆ ಮಹಿಳಾ ತಂಡಕ್ಕೆ ಇದು ಕೇವಲ ಮೂರನೇ ಒಲಿಂಪಿಕ್ಸ್ ಕೂಟ. ಆದರೂ ಅದ್ಭುತ ಪ್ರದರ್ಶನ ತೋರಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸ್ವಲ್ಪದರಲ್ಲೇ ಕಂಚು ಕೈತಪ್ಪಿದಾಗ ಆಟಗಾರರು ಬಿಕ್ಕಳಿಸಿದ್ದು ಹೌದು. ಆದರೆ ಅವರ ಸಾಧನೆಗೆ ಇಡೀ ದೇಶವೇ ಭೇಷ್ ಎಂದಿದೆ.

ಹಾಗೆ ನೋಡಿದರೆ, ಭಾರತ ಮಹಿಳಾ ಹಾಕಿ ತಂಡದಿಂದ ಇಂಥದೊಂದು ಸಾಧನೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಏಕೆಂದರೆ ಈಗಾಗಲೇ ತಿಳಿಸಿರುವಂತೆ ಅದು ಆಡಿರುವುದೇ ಮೂರು ಒಲಿಂಪಿಕ್ಸ್‌ನಲ್ಲಿ. ಮಿಗಿಲಾಗಿ ಈ ತಂಡದ ತಂಡದ ಸದಸ್ಯರ ಬದುಕಿನ ಹಿನ್ನೆಲೆಯನ್ನು ನೋಡಿದರೆ ಶಹಬ್ಬಾಸ್ ಎನ್ನಲೇಬೇಕಾಗುತ್ತದೆ. ಈ
ಆಟಗಾರ್ತಿಯರ ಬಗ್ಗೆ ಗಮನ ಹರಿಸೋಣ. ಏಕೆಂದರೆ ೧೬ ಆಟಗಾರ್ತಿಯರದೂ ಒಂದೊಂದು ಕಥೆ. ಅದೂ ಕಡುಕಷ್ಟದ ಕಥೆ. ನಾಯಕಿ ರಾಣಿ ರಾಮಪಾಲ್ ಅವರದು ಬಡಕುಟುಂಬ. ತಂದೆ ಗಾಡಿಯನ್ನು ಬಾಡಿಗೆಗೆ ಓಡಿಸಿ ಜೀವನ ಸಾಗಿಸುತ್ತಿದ್ದರು. ಆದರೆ ರಾಣಿಯಲ್ಲಿ ಚಿಕ್ಕಂದಿನಿಂದಲೇ ಹಾಕಿ ಆಟಗಾರ್ತಿಯಾಗ ಬೇಕೆಂಬ ಛಲ.

’ಹಾಕಿ ಆಡಿ ಏನು ಸಾಽಸುವೆ ? ಚಡ್ಡಿ ಹಾಕಿಕೊಂಡು ಕ್ರೀಡಾಂಗಣದಲ್ಲಿ ಓಡಾಡಿ ಬಂದು ನಮ್ಮ ಮನೆತನದ ಮರ್ಯಾದೆ ಕಳೆಯುವೆಯಾ ?’ ಎಂಬ ಮೂದಲಿಕೆ. ಆದರೂ ಛಲ ಬಿಡದೆ ಕದ್ದು ಮುಚ್ಚಿ ಹಾಕಿ ಆಡಿ ಮುಂದೆ ಬಂದಳು. ಆಗ ಆಕೆಯ ಮನಸ್ಸಿನಲ್ಲಿದ್ದುದು- ಅಪ್ಪ, ಅಮ್ಮನಿಗೆ ಒಂದು ಒಳ್ಳೆಯ ಮನೆ ಕಟ್ಟಿಸಿಕೊಡ ಬೇಕೆಂಬುದು. ಏಕೆಂದರೆ ಅವರ ಮನೆ ಮಳೆ ಬಂದರೆ ಸುರುತ್ತಿತ್ತು. ಮುಂದೆ ಸತತ ಪರಿಶ್ರಮದ ಫಲವಾಗಿ ಆಕೆ ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಡಾಪಟು ವಾದರು. ಹಣ- ಹೆಸರು ಎರಡನ್ನೂ ಗಳಿಸಿದರು.

ಇನ್ನು ವಂದನಾ ಕಟಾರಿಯಾ ಈ ಕೂಟದಲ್ಲಿ ಹ್ಯಾಟ್ರಿಕ್ ಸಾಽಸಿದರು. ಆದರೆ ಉತ್ತರಾಖಂಡದ ಆಕೆಯ ಊರಿನಲ್ಲಿ ಹೆಣ್ಣು ಮಕ್ಕಳು ಹಾಕಿ ಆಡುವುದೆಂದರೆ ಅತ್ಯಂತ ಕೆಟ್ಟ ಕೆಲಸ ಎಂದೇ ಭಾವಿಸುತ್ತಿದ್ದರು. ಕೆಳವರ್ಗಕ್ಕೆ ಸೇರಿದವಳೆಂಬ ಕಾರಣಕ್ಕೆ ಸಿಟ್ಟು ಬೇರೆ. ಭಾರತ ತಂಡದಲ್ಲಿ ಕೆಳವರ್ಗಕ್ಕೆ ಸೇರಿದ ಹಲವು ಆಟಗಾರ್ತಿಯರಿದ್ದಾರೆ ಎಂಬ ಬಗ್ಗೆ ಒಂದಷ್ಟು ಮಂದಿಗೆ ಅದೆಂಥದೋ ಅಸಮಾಧಾನ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ಸೋತಾಗ ಆಕೆಯ ಮನೆಯ ಬಳಿ ಕೆಲವರು ಪಟಾಕಿ ಸಿಡಿಸಿದರು ವಿಕೃತ ಸಮತೋಷ ಅನುಭವಿಸಿದ್ದೂ ಹೌದು.

ನೇಹಾ ಗೋಯಲ್‌ರ ತಂದೆ ಕುಡುಕ. ತಾಯಿ ಸೈಕಲ್ ಕಾರ್ಖಾನೆಯಲ್ಲಿ ಕಾರ್ಮಿಕಳಾಗಿ ದುಡಿಯುತ್ತಿದ್ದಳು. ಬಡತನ. ನೇಹಾ ಮಾತ್ರ ಮೈದಾನದಲ್ಲಿ ಹಾಕಿ ಆಡುವವರನ್ನು ಕಣ್ಣರಳಸಿ ನೊಡುತ್ತ ನಿಲ್ಲುತ್ತಿದ್ದಳು. ಒಂದು ದಿನ ಅಲ್ಲಿನ ಕೋಚ್ ಕಣ್ಣಿಗೆ ಬಿದ್ದ ಬಳಿಕ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಇಂದು ಈ ಎತ್ತರಕ್ಕೆ ಏರಿದ್ದಾಳೆ. ನಿಷಾ ವಾರ್ಸಿಯದ್ದು ಇನ್ನೊಂದು ಕಥೆ. ಅನಾರೋಗ್ಯ ಪೀಡಿತ ತಂದೆ. ಮನೆಯನ್ನು ನಡೆಸಲು ತಾಯಿ ದುಡಿಯಲು ಹೋಗುತ್ತಿದ್ದಳು. ನಿಶಾಗೆ
ಮಾತ್ರ ಹಾಕಿ ಆಡುವ ಆಸೆ. ಅಂತೂ ಇಂತೂ ಆ ಆಸೆ ಕೈಗೂಡಿತು.

ನಿಕ್ಕಿ ಪ್ರಧಾನ್ ಝಾರ್ಖಂಡ್ ರಾಜ್ಯದವರು. ಭತ್ತದ ಗದ್ದೆಯಲ್ಲಿ ದುಡಿಯುತ್ತಿದ್ದರು. ಅವರಿವರಿಂದ ಬೇಡಿ ಪಡೆದ ಮುರಿದ ಹಾಕಿ ಸ್ಟಿಕ್‌ನಿಂದ, ಮರಳು ಮಣ್ಣಿನ ಮೈದಾನದಲ್ಲೇ ಹಾಕಿ ಆಟ ಆಡುತ್ತಿದ್ದರು. ಆದರೆ ಛಲ ಗೆದ್ದಿತು. ಹೀಗೆ ಬಹುತೇಕ ಆಟಗಾರ್ತಿಯರದು ಪರಿಶ್ರಮದ ಬದುಕು. ಸಾಕಷ್ಟು ಮಂದಿ ಬಡತನದಲ್ಲಿ ಬೆಳೆದವರು. ಸಾಮಾಜಿಕ ಕಟ್ಟುಪಾಡುಗಳನ್ನು, ದೂಷಣೆಯನ್ನು ಎದುರಿಸಿದವರು. ಯಾವುದೇ ಸೌಲಭ್ಯ ಇಲ್ಲದೆ ಛಲ ಮತ್ತು ಪರಿಶ್ರಮದಿಂದ ಮುಂದೆ ಬಂದವರು.
ಬಹುತೇಕರಿಗೆ ಕೋಚ್‌ಗಳ ಒತ್ತಾಸೆಯೊಂದಿತ್ತು ಅಷ್ಟೆ.

ಇಲ್ಲಿ ಮತ್ತೊಂದು ವಿಚಾರ. ಯಶಸ್ಸಿಗೆ ಹಲವಾರು ಅಪ್ಪಂದಿರು. ಸೋಲಿಗೆ ಯಾರೂ ಇಲ್ಲ ಎಂಬ ಮಾತೊಂದಿದೆ. ಕ್ರೀಡೆಗೆ ಇದು ಬಹಳ ಸೂಕ್ತವಾಗಿ ಅನ್ವಯಿಸು ತ್ತದೆ. ಗೆದ್ದಾಗ ಹಾಡಿ ಹೊಗಳುವುದು, ಬಿದ್ದಾಗ ನಿರ್ಲಕ್ಷಿಸುವುದು ಸಾಮಾನ್ಯ ಸಂಗತಿ. ನೀರಜ್ ಚೋಪ್ರಾ ಅವರು ಜಾವೆಲಿನ್‌ನಲ್ಲಿ ಸ್ವರ್ಣ ಪದಕ
ಗೆದ್ದಿದ್ದೇ ತಡ ಅವರ ಬದುಕು ಬಂಗಾರವಾಯಿತು. ಇಲ್ಲಿಯವರೆಗೆ ೧೨ ಕೋಟಿ ರು. ಬಹುಮಾನ ಮೊತ್ತವನ್ನು ಅವರಿಗೆ ಪ್ರಕಟಿಸಲಾಗಿದೆ. ತಪ್ಪೇನಿಲ್ಲ. ಇದು ಪ್ರೋತ್ಸಾಹದ ಒಂದು ಪರಿ. ಅಭಿನಂದಿಸುವ ಒಂದು ರೀತಿ. ಆದರೆ ಮ್ಯಾನ್‌ಕೈಂಡ್ ಫಾರ್ಮಾ ಎಂಬ ಕಂಪನಿಯೊಂದು ಇದಕ್ಕಿಂತ ಭಿನ್ನ ಹಾದಿ ತುಳಿದಿದೆ.

ಅದು ಗೆದ್ದೆತ್ತಿನ ಬಾಲ ಹಿಡಿಯದೆ ಬೇರೆ ಮಾರ್ಗ ಅನುಸರಿಸಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ವಲ್ಪದರಲ್ಲೇ ಪದಕ ತಪ್ಪಿಸಿಕೊಂಡ 20 ಆಟಗಾರರಿಗೆ ತಲಾ 11 ಲಕ್ಷ ರು.ಗಳನ್ನು ನೀಡಲು ಅದು ನಿರ್ಧರಿಸಿದೆ. ಇದಲ್ಲವೆ ಕ್ರೀಡಾಸ್ಫೂರ್ತಿ, ಕ್ರಿಡಾಪಟುಗಳನ್ನು ಪ್ರೋತ್ಸಾಹಿಸುವ ರೀತಿ ? ನಿಜಕ್ಕೂ ಖುಷಿಯ ಸಂಗತಿ.
ಪ್ರೋತ್ಸಾಹ ಎಂದ ಕೂಡಲೇ ಮತ್ತೊಂದು ವಿಷಯ ನೆನಪಾಯಿತು. ಈ ಒಲಿಂಪಿಕ್ಸ್‌ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳೆರಡೂ ಅತ್ಯುತ್ತಮ
ಪ್ರದರ್ಶನ ತೋರಿವೆ. ಇದರಲ್ಲಿ ಸರಕಾರ, ಕ್ರೀಡಾಸಂಸ್ಥೆಗಳ ಪಾತ್ರ ಎಷ್ಟಿದೆಯೋ ಗೊತ್ತಿಲ್ಲ. ಆದರೆ ಒಡಿಶಾ ಸರಕಾರದ ಕೊಡುಗೆ ಅಪಾರ ಎಂದು ಹೇಳಲೇ ಬೇಕು.

ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸ್ವತಃ ಹಾಕಿ ಆಟಗಾರರು ಮತ್ತು ಹಾಕಿ ಪ್ರೇಮಿ. 2013 ರಲ್ಲೇ ಹಾಕಿ ಲೀಗ್‌ಗೆ ಪ್ರೋತ್ಸಾಹ ಕೊಟ್ಟರು. ಒಡಿಶಾದಲ್ಲಿ ಪ್ರಮುಖ ಹಾಕಿ ಟೂರ್ನಿಗಳನ್ನು ನಡೆಸಿ ಆಟಗಾರರಿಗೆ ಅವಕಾಶ ನೀಡಿದ್ದಾರೆ. ಭಾರತೀಯ ಹಾಕಿ ತಂಡವನ್ನು ಕೇಳುವವರೇ ಇಲ್ಲದಿರುವಾಗ ಪಟ್ನಾಯಕ್ ಅವರು 200 ಕೋಟಿ ರು. ನೀಡಿ ತಂಡದ ಪ್ರಾಯೊಜಕತ್ವ ವಹಿಸಿದ್ದಾರೆ. ಪುರುಷ, ಮಹಿಳಾ ಎರಡು ತಂಡಗಳಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಈಗ ನಾವು ಅದರ ಫಲ ವನ್ನು ನೋಡುವಂತಾಗಿದೆ. ಭಾರತ ತಂಡ ಉತ್ತಮ ಪ್ರದರ್ಶನ ತೋರಿ ವಾಪಸಾದ ಬಳಿಕ ಆವರು ಆಟಗಾರರನ್ನು ಸತ್ಕರಿಸಿದ್ದಾರೆ. ಹಾಕಿ ಆಟಗಾರರೂ ಕೂಡ ಅವರ ಉಪಕಾರವನ್ನು ಸ್ಮರಿಸಿದ್ದಾರೆ.

ಇನ್ನು ಭಾರತ ತಂಡ ಟೊಕಿಯೋದಿಂದ ವಾಪಸಾದ ಬಳಿಕ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಏರ್ಪಾಡಾಗಿತ್ತು. ಎಲ್ಲ ಕಡೆ ಪ್ರಶಂಸೆ ಕೇಳಿಬರುತ್ತಿರುವಾಗ, ಗಾಲ್ ಆಟಗಾರ್ತಿ, ಕನ್ನಡತಿ ಅದಿತಿ ಅಶೋಕ್ ಮಾತ್ರ ಎಲ್ಲರೆದುರೇ ಅಸಮಾಧಾನ ತೋಡಿಕೊಂಡಿದ್ದರು. ತನ್ನ ವಸತಿ ಬಹಳ ದೂರದಲ್ಲಿತ್ತು. ಹೀಗಾಗಿ ಅಭ್ಯಾಸಕ್ಕಾಗಿ ಶ್ರಮಪಡಬೆಕಾಯಿತು; ಅಽಕಾರಿಗಳು ಹೀಗೇಕೆ ಮಾಡಿದರು ಎಂದು ನೇರವಾಗಿ ಕೇಳಿದರು.

ಇದೆಲ್ಲದರ ಮಧ್ಯೆ, ಭರವಸೆಯ ಕುಸ್ತಿ ಪಟುವಾಗಿದ್ದ ವಿನೇಶ್ ಫೋಗಟ್ ಈ ಬಾರಿ ಕ್ವಾರ್ಟರ್ ಫೈನಲ್‌ನಲ್ಲೇ ಸೋತು ಹೊರಬಿದ್ದರು. ಆದರೆ ಇದಕ್ಕಿಂತ ಸುದ್ದಿ ಯಾಗಿದ್ದು ಆಕೆಯ ವರ್ತನೆ. ಸಹ ಕುಸ್ತಿಪಟುಗಳೊಂದಿಗೆ ಜಗಳಕ್ಕೆ ಇಳಿದಿದ್ದರು; ಜತೆಗೆ ಪ್ರಾಯೋಜಕರು ನೀಡಿದ ಬಟ್ಟೆ ಬಿಟ್ಟು ಇತರ ಉಡುಪು ಧರಿಸಿ ಕಣಕ್ಕಿಳಿ ದಿದ್ದರು ಇತ್ಯಾದಿ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇದೀಗ ಅವರಿಗೆ ನೋಟಿಸ್ ನೀಡಲಾಗಿದೆ. ಈ ನಡುವೆ ವಿನೇಶ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಈ ಕಾರಣಕ್ಕಾಗಿ ಇಂಥ ವರ್ತನೆ ತೋರುತ್ತಿರುವರೇ ಎಂಬ ಸಂಶಯವೂ ವ್ಯಕ್ತವಾಗಿದೆ. ಹೀಗೆ ಇವರದೊಂದು ನಿರಾಶೆ ಮತ್ತು ನೋವಿನ ಕಥೆ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ಆಟಗಾರರ ವಿವರಗಳನ್ನು ನೋಡಿದರೆ ಇಂಥ ನಾನಾ ಕಥೆಗಳು ತೆರೆದುಕೊಳ್ಳುತ್ತವೆ. ಇಷ್ಟಕ್ಕೂ ಕ್ರೀಡೆಯೂ ಜೀವನದ ಅವಿಭಾಜ್ಯ ಅಂಗವಲ್ಲವೆ ?

ನಾಡಿಶಾಸ್ತ್ರ

ಬರಿ ಸೋಲು ಗೆಲುವ ಪರಿಗಣಿಸದಿರಿ
ಆಟಗಾರರ ನೋವು ನಲಿವೂ ನೋಡಿರಿ
ಕಷ್ಟ ನಷ್ಟ, ಪರದಾಟದ ಕತೆ ಕೇಳಿರಿ
ಆಗ ಗೊತ್ತಾದೀತು ಪರಿಶ್ರಮದ ಪರಿ