ಉದ್ದಿಮೆಯಾಗಿ ಬೆಳೆಯಲಿ ಕೃಷಿ
ಕೃಷಿಯ ಉಪ ಉತ್ಪನ್ನಗಳನ್ನು ಬಳಸಿಕೊಂಡು ಸಣ್ಣ ಪ್ರಮಾಣದ ಉದ್ದಿಮೆ ನಡೆಸುವ ಕೌಶಲಗಳು ಮುಕ್ತವಾಗಿ ರೈತರನ್ನು ತಲುಪುವಂತಾಗಬೇಕು. ಕುರಿ, ಕೋಳಿ ಸಾಕಣೆ, ಹೈನು ಗಾರಿಕೆಯಂಥ ಉಪಕಸುಬುಗಳಲ್ಲಿ ರೈತರು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ, ಅವರ ಕೈಯಲ್ಲಿ ಸಣ್ಣ ಮಟ್ಟದ ಹಣವು ನಿರಂತರವಾಗಿ ಹರಿದಾಡುವಂತೆ ನೋಡಿಕೊಳ್ಳಬೇಕು.
-
ಪ್ರತಿಸ್ಪಂದನ
ಹೊಸೂರು ರತ್ನಾಕರ ಶೆಟ್ಟಿ
ಮೋಹನ್ ವಿಶ್ವ ಅವರ ‘ಡಾ.ಸ್ವಾಮಿನಾಥನ್ ಮತ್ತು ನರೇಂದ್ರ ಮೋದಿ’ ಶೀರ್ಷಿಕೆಯ ಅಂಕಣ ಬರಹ (ನ.೮) ಚೆನ್ನಾಗಿ ಮೂಡಿಬಂದಿದೆ. ಸ್ವಾಮಿನಾಥನ್ ಆಯೋಗದ ಹಲವು ಶಿಫಾರಸುಗಳನ್ನು ಮೋದಿಯವರು ಹಂತಹಂತವಾಗಿ ಅನುಷ್ಠಾನಗೊಳಿಸಿರುವು ದರಿಂದಾಗಿ, ಕಳೆ ಗುಂದಿದ ರೈತರ ಕಂಗಳಲ್ಲಿ ಭರವಸೆ ಮೂಡಿರುವುದಂತೂ ನಿಜ.
ವಿವಿಧ ಬೆಳೆ ಬೆಳೆಯಲು ತಗಲುವ ಖರ್ಚುವೆಚ್ಚಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ, ತದನಂತರವೇ ಬೆಂಬಲ ಬೆಲೆ ನಿರ್ಧರಿಸುವಿಕೆ, ಕೃಷಿ ಸಿಂಚಾಯಿ, ಪ್ರಧಾನಮಂತ್ರಿ ಕೃಷಿ ಸಮ್ಮಾನ್, ಕಿಸಾನ್ ರೈಲು ಯೋಜನೆ ಹೀಗೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ರೈತರ ಸಮಸ್ಯೆಗಳ ಹೊರೆಯನ್ನು ತುಸು ಕಡಿಮೆ ಮಾಡಲು ಮೋದಿಯವರ ಸರಕಾರವು ಪ್ರಾಮಾಣಿಕವಾಗಿ ಪ್ರಯತ್ನಿಸಿದೆ ಎಂಬುದು ನಿರ್ವಿವಾದ.
ಈ ಯೋಜನೆಗಳ ಫಲ ಎಲ್ಲರಿಗೂ ಸಮಾನವಾಗಿ ತಲುಪುವುದಾಗಲೀ, ತಲೆತಲಾಂತರದ ಸಮಸ್ಯೆಗಳನ್ನು ಬಗೆಹರಿಸುವುದಾಗಲೀ ತಕ್ಷಣಕ್ಕೆ ಆಗದ ಮಾತೇ ಸರಿ. ಆದಾಗ್ಯೂ, ಕೆಲ ವೊಂದು ಸುಧಾರಣೆಗಳು ರೈತರ ಸಂಘರ್ಷಮಯ ಬದುಕಿನಲ್ಲಿ ಉತ್ಸಾಹವನ್ನು ತಂದಿವೆ.
ಇದನ್ನೂ ಓದಿ: Vishweshwar Bhat Column: ವಿಮಾನದ ತೂಕ ಅಳೆಯುವುದು
ಉದಾಹರಣೆಗೆ, ಅನ್ಯ ಉದ್ದೇಶಕ್ಕೆ ಬಳಕೆಯಾಗುವ ಯೂರಿಯಾಗೆ ಬೇವು ಲೇಪಿಸಿ, ರಸ ಗೊಬ್ಬರ ಕೊರತೆಗೆ ಇತಿಶ್ರೀ ಹಾಡುವಿಕೆ; ಖಂಡಿತವಾಗಿಯೂ ಇದೊಂದು ಕ್ರಾಂತಿಕಾರಕ ಮತ್ತು ಅಭಿನಂದನಾರ್ಹ ಕ್ರಮ. ಮುಂಗಾರಿನ ಆಗಮನದಿಂದಾಗಿ ಬೀಜ ಬಿತ್ತನೆಯ ಸಂಭ್ರಮದಲ್ಲಿ, ಎಲ್ಲೆಲ್ಲಿಂದಲೋ ಹಣ ಹೊಂದಿಸಿಕೊಂಡು ಯೂರಿಯಾ ಖರೀದಿಗೆ ಹೋದವರಿಗೆ ಆಘಾತ ಕಾದಿರುತ್ತಿತ್ತು, ‘ದಾಸ್ತಾನು ಮುಗಿದಿದೆ’ ಎಂಬ ಫಲಕಗಳು ಅಂಗಡಿ ಯ ಮುಂದೆ ಕಣ್ಣಿಗೆ ರಾಚುತ್ತಿದ್ದವು.
ಹೀಗಾಗಿ ಸಕಾಲಕ್ಕೆ ಬಿತ್ತುವ ಭಾಗ್ಯದಿಂದ ರೈತರು ವಂಚಿತರಾಗಿದ್ದರು. ಈಗ ಯೂರಿಯಾ ಅಭಾವಕ್ಕೆ ತೆರೆ ಬಿದ್ದಿರುವುದು, ಕೃಷಿಕರ ಪಾಲಿಗೆ ಮಹತ್ವದ ಮೈಲಿಗಲ್ಲು ಎನ್ನಲಡ್ಡಿಯಿಲ್ಲ.
ದಶಕಗಳಿಂದಲೂ ನಮ್ಮ ಕೃಷಿ ವಲಯ ತೆವಳುತ್ತಲೇ ಮುಂದೆ ಸಾಗಿತೇ ಹೊರತು, ದೇಶದ ಇತರ ಆರ್ಥಿಕ ವಲಯಗಳ ಜತೆಗೆ ಸಮಾನ ಹೆಜ್ಜೆಯಿಡಲಿಲ್ಲ; ಹೆಜ್ಜೆ ಇಡುವುದಿರಲಿ, ಹಾಗೆ ಯೋಚಿಸುವುದು ಕೂಡ ತಪ್ಪು ಎಂಬುದು ನಮ್ಮ ರೈತರಿಗೆ ಮನದಟ್ಟಾಗಿತ್ತು. ಅವರು ತಮ್ಮ ಹೀನಾಯ ಸ್ಥಿತಿಗೆ ‘ನಮ್ಮದು ಪೂರ್ವಜನ್ಮದ ಕರ್ಮ’ ಎಂದು ತಂತಮ್ಮ ಮನಸ್ಸಿಗೆ ಸಾಂತ್ವನ ಹೇಳಿಕೊಂಡಂತಿದೆ. ಅದಕ್ಕೇ ಇರಬೇಕು, ‘ರೈತರು ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬೆಳೆದು, ಸಾಲದಲ್ಲೇ ಸಾಯುತ್ತಾರೆ’ ಎಂಬ ಮಾತು ಪ್ರಚಲಿತದಲ್ಲಿರುವುದು.
ಇನ್ನು ದೇಶದ ಬಹು ಸಂಖ್ಯಾತ ರೈತ ಸಮುದಾಯದ ಬೆಂಬಲವಿಲ್ಲದೆ ತಾವು ಅಧಿಕಾರದ ಗದ್ದುಗೆ ಏರಲಾಗದು ಎನ್ನುವ ಕಟುಸತ್ಯವನ್ನು ಅರಿತಿರುವ ಜನನಾಯಕರು, ನಾನಾ ರೀತಿಯ ಆಶ್ವಾಸನೆ ನೀಡಿ ಚುನಾವಣೆಯಲ್ಲಿ ಗೆಲುವು ಸಾಧಿಸುವುದು, ಮರುಗಳಿಗೆಯಲ್ಲೇ ರೈತರನ್ನು ಮರೆತುಬಿಡುವುದು ವಾಡಿಕೆಯಾಗಿತ್ತು.
ಹೀಗಾಗಿ, ಸಂಘಟನಾತ್ಮಕ ಶಕ್ತಿಯಿಲ್ಲದ ರೈತ ಸಮುದಾಯದ ಆಶೋತ್ತರಗಳು ಕಮರಿ ಹೋಗಿದ್ದವು. ಆದರೆ ಈ ತಾರತಮ್ಯದ ಬೆಳವಣಿಗೆಯು ದೇಶದ ಒಟ್ಟು ಅಭಿವೃದ್ಧಿಗೆ ಮಾರಕ ಎಂಬುದನ್ನು ಅರಿತ ಮೋದಿಯವರ ಸರಕಾರ ಒಂದಷ್ಟು ಆಶಾದಾಯಕ ಹೆಜ್ಜೆಗಳನ್ನು ಇರಿಸಿರುವುದು ಶ್ಲಾಘನೀಯ.
ಈಗ, ಇದಕ್ಕೆ ಪೂರಕವಾಗಿ ಇಡಬೇಕಾದ ತುರ್ತುಹೆಜ್ಜೆಗಳತ್ತ ಗಮನಹರಿಸೋಣ: ಬಹುಸ್ತರ ಗಳ ಆರ್ಥಿಕ ಸಂಸ್ಥೆಗಳು ರೈತರ ದುಡ್ಡುಕಾಸಿನ ಅವಶ್ಯಕತೆ ಪೂರೈಸಲು ಟೊಂಕ ಕಟ್ಟಿ ನಿಂತರೂ ನಿರೀಕ್ಷಿತ ಮಟ್ಟದ ಫಲ ದೊರಕುತ್ತಿಲ್ಲ. ಬಹುತೇಕ ಸಣ್ಣ ಮತ್ತು ಅತಿಸಣ್ಣ ರೈತರು ಸ್ಥಾನಿಕ ಮಧ್ಯವರ್ತಿಗಳ ಬಿಗಿಮುಷ್ಟಿಯಲ್ಲಿ ನಲುಗುತ್ತಿದ್ದಾರೆ. ಇದಕ್ಕೆ ಬಹುಮುಖ್ಯ ಕಾರಣವೇನೆಂದರೆ ತುರ್ತು ನಗದಿನ ಸಮಸ್ಯೆ. ಕೃಷಿ ಮಾರುಕಟ್ಟೆಯಲ್ಲಿ ಫಸಲು ಮಾರಿದರೆ ಕನಿಷ್ಠ ಒಂದು ವಾರವಾದರೂ ಹಣಕ್ಕೆ ಕಾಯಬೇಕು.
ಹಾಗೆ ಕಾಯುವಷ್ಟು ತಾಳ್ಮೆ ಬಹುತೇಕ ಸಣ್ಣ ರೈತರಿಗೆ ಇರುವುದಿಲ್ಲ. ಮಧ್ಯವರ್ತಿಗಳಂತೆ ‘ಕ್ಯಾಷ್ ಆನ್ ಡೆಲಿವರಿ’ ಮಾದರಿಯಲ್ಲಿ ಹಣ ಸಿಗುವಂತಾದರೆ, ರೈತರ ಗುರುತರ ಸಮಸ್ಯೆ ಗೊಂದು ಪರಿಹಾರ ದೊರಕಿದಂತಾಗುವುದು. ಗುಣಮಟ್ಟದ ಬೆಳೆ ಬೆಳೆಯುವುದಷ್ಟೇ ರೈತರ ಕಾಯಕವಾಗಬೇಕೇ ಹೊರತು ಉತ್ಪನ್ನಗಳ ಮಾರಾಟಕ್ಕೆ ಗ್ರಾಹಕರನ್ನು ಹುಡುಕುವುದಲ್ಲ.
ಮಾರುಕಟ್ಟೆಯ ನುರಿತ/ಬಲಾಢ್ಯ ಬಹುರಾಷ್ಟ್ರೀಯ ಕಂಪನಿಗಳ ಜತೆ ರೈತ ಸಮುದಾಯ ಗಳು ಒಡಂಬಡಿಕೆ ಮಾಡಿಕೊಳ್ಳುವಂತಾಗುವಲ್ಲಿ ಸರಕಾರವು ಮಧ್ಯಸ್ಥಿಕೆ ವಹಿಸಬೇಕು.
ಹಣ್ಣು-ತರಕಾರಿ, ಬೆಳೆಗಳ ಬಹುಪಾಲು ಸೂಕ್ತ ಮಾರುಕಟ್ಟೆ ಅಥವಾ ಶೇಖರಣಾ ವ್ಯವಸ್ಥೆ ಇಲ್ಲದೆ ಹಾಳಾಗುತ್ತಿದೆ. ಈ ವಿಷಯದಲ್ಲಿ ಸರಕಾರವು ಇಚ್ಛಾಶಕ್ತಿಯನ್ನು ಮೆರೆದಲ್ಲಿ ರೈತರ ಸಂಕಷ್ಟಗಳು ಕಮ್ಮಿಯಾದಾವು. ಸರಕಾರವು ಕೃಷಿ ಇಲಾಖೆ/ಸಂಶೋಧನಾ ಇಲಾಖೆಗಳ ಮೂಲಕ, ತಾಲೂಕು/ಹೋಬಳಿ ಮಟ್ಟದಲ್ಲಿ ಬೆಳೆಯಬಹುದಾದ ಪ್ರಮುಖ ಬೆಳೆಗಳನ್ನು ಗುರುತಿಸಿ ಪ್ರಾಯೋಜಿಸಿದಲ್ಲಿ ರೈತ ಸಮುದಾಯಕ್ಕೆ ಅಗಾಧ ಸಹಾಯವಾಗಲಿದೆ.
ಕೃಷಿಯ ಉಪ ಉತ್ಪನ್ನಗಳನ್ನು ಬಳಸಿಕೊಂಡು ಸಣ್ಣ ಪ್ರಮಾಣದ ಉದ್ದಿಮೆ ನಡೆಸುವ ಕೌಶಲಗಳು ಮುಕ್ತವಾಗಿ ರೈತರನ್ನು ತಲುಪುವಂತಾಗಬೇಕು. ಕುರಿ, ಕೋಳಿ ಸಾಕಣೆ, ಹೈನು ಗಾರಿಕೆಯಂಥ ಉಪಕಸುಬುಗಳಲ್ಲಿ ರೈತರು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ, ಅವರ ಕೈಯಲ್ಲಿ ಸಣ್ಣ ಮಟ್ಟದ ಹಣವು ನಿರಂತರವಾಗಿ ಹರಿದಾಡುವಂತೆ ನೋಡಿಕೊಳ್ಳಬೇಕು.
ಸಂಕಷ್ಟದ ಸಮಯದಲ್ಲಿ ದೃಢವಾಗಿ ನಿಂತು ಸಂಭಾಳಿಸಬಲ್ಲ ನಂಬಿಕಸ್ತರ ಅನಿವಾರ್ಯತೆ ರೈತರಿಗಿದೆ. ಪ್ರಾಕೃತಿಕ ವಿಕೋಪ, ಮಾರುಕಟ್ಟೆ ಏರುಪೇರು, ಕೌಟುಂಬಿಕ ಹಾಗೂ ಇನ್ನಿತರೆ ಸಮಸ್ಯೆಗಳ ನಿವಾರಣೆಗೆ ರೈತರ ಜತೆ ನಿಲ್ಲಬಹುದಾದ ಪ್ರತಿಷ್ಠಿತ ಎನ್ಜಿಒಗಳ/ಬಲಾಢ್ಯ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ವಿಭಾಗದ ( Corporate Social Responsibility- CSR) ನಿಯೋಜಿತ ಅಧಿಕಾರಿಗಳ ಮಾರ್ಗದರ್ಶನ ತೀರಾ ಅವಶ್ಯಕ.
ಕೃಷಿ ಆಧಾರಿತ ಭಾರತದ ಗ್ರಾಮೀಣ ಅರ್ಥವ್ಯವಸ್ಥೆಯು ಸಾಮಾನ್ಯ ತರ್ಕಕ್ಕೆ ನಿಲುಕದ ಒಗಟು. ಇಲ್ಲಿ ಕೇವಲ ಕಾನೂನು, ಯೋಜನೆಗಳು ಉದ್ದೇಶಿತ ಫಲ ನೀಡುವುದಿಲ್ಲ. ಯೋಜನೆಗಳ ಅನುಷ್ಠಾನದ ಹೊಣೆ ಹೊತ್ತ ಅಧಿಕಾರಿಗಳು ರೈತರ ಭಾವನೆಗಳನ್ನು ಅತಿ ಸೂಕ್ಷ್ಮವಾಗಿ ಅರಿತು, ಸಾಮಾನ್ಯರ ಜತೆ ಬೆರೆಯುವ ಅಸಾಮಾನ್ಯ ಮೌನವೀಯ ನಡೆ ಯನ್ನು ತೋರಿದಲ್ಲಿ ಮಾತ್ರ ಅಂದುಕೊಂಡ ಗುರಿಯನ್ನು ಮುಟ್ಟಬಹುದು.
ಹಾಗಾಗಿ ಇಂಥ ಸಂಕೀರ್ಣ ಸಮಸ್ಯೆಯನ್ನು ಬಗೆಹರಿಸಲು ನಿಷ್ಠಾವಂತ ಮಾನವ ಸಂಪನ್ಮೂಲಗಳ ದಂಡು ಹಳ್ಳಿಗಳತ್ತ ಮುಖಮಾಡಬೇಕಾಗಿದೆ.
(ಲೇಖಕರು ಹವ್ಯಾಸಿ ಬರಹಗಾರರು)