Tuesday, 10th December 2024

ಅನ್ ಲಾಕ್‌ ಉತ್ಸಾಹಕ್ಕಿಂತ, ಮೂರನೇ ಅಲೆ ಬಗ್ಗೆ ಇರಲಿ ಎಚ್ಚರ

ಅಶ್ವತ್ಥ್ ಕಟ್ಟೆ

ರಂಜಿತ್‌ ಎಚ್.ಅಶ್ವತ್ಥ

ranjith.hosakere@gmail.com

ಕರೋನಾ ಎರಡನೇ ಅಲೆಯಿಂದ ತತ್ತರಿಸಿ, ಕಳೆದ ಎರಡು ತಿಂಗಳಿನಿಂದ ಗೃಹ ಬಂಧನದಲ್ಲಿದ್ದ ಅನೇಕರಿಗೆ ಇದೀಗ ಬಿಡುಗಡೆಯ ಕಾಲ. ರಾಜ್ಯದಲ್ಲಿ ಸೋಂಕಿನ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕ್ಷೀಣಿಸುತ್ತಿರುವ ಹೊತ್ತಿನಲ್ಲಿ ಕರ್ನಾಟಕದಲ್ಲಿ ಸೋಮವಾರದಿಂದ ಅನ್‌ಲಾಕ್ ಮಾಡಲಾಗಿದೆ. ಈ ಹಂತದಲ್ಲಿ ಅನ್‌ಲಾಕ್ ಅನಿವಾರ್ಯ ಹಾಗೂ ಅಗತ್ಯ ಎನ್ನುವುದು ಎಷ್ಟು ಸತ್ಯವೋ, ಮತ್ತೊಮ್ಮೆ ಮೈಮರೆತರೆ ಇನ್ನಷ್ಟು ಕರಾಳ ಛಾಯೆ ಮೂಡುವುದನ್ನು ಮರೆಯುವಂತಿಲ್ಲ.

ಹೌದು, ಎರಡನೇ ಅಲೆಯಲ್ಲಿನ ಸೋಂಕಿನ ಸಂಖ್ಯೆ ಗಣನೀಯವಾಗಿ ಇಳಿಕೆ ಕಾಣುತ್ತಿದ್ದರೂ, ಕರೋನಾದ ಡೆಲ್ಟಾ ಪ್ಲಸ್ ಎನ್ನುವ ರೂಪಾಂತರಿ ವೈರಸ್ ಈಗಾಗಲೇ ದೇಶಕ್ಕೆ ಕಾಲಿಟ್ಟಿದೆ. ತಜ್ಞರ ಪ್ರಕಾರ ಈ ಹಿಂದಿನ ರೂಪಾಂತರಿಗಳಿಗಿಂತ ವೇಗವಾಗಿರುವ ಈ ವೈರಸ್ ಬಗ್ಗೆ ಎಚ್ಚರಿಕೆಯಿಂದ ಇರದಿದ್ದರೆ, ಅಪಾಯ ಕಟ್ಟಿಟ್ಟಬುತ್ತಿ ಎನ್ನುವ ಮಾತುಗಳು ಕೇಳಿಬಂದಿದೆ. ಆದ್ದರಿಂದ ಕರ್ನಾಟಕ ಮುಕ್ತ ಮುಕ್ತವಾಗಿದೆ ಎಂದು ಅಸಡ್ಡೆ ಮಾಡಿದರೆ ಕೆಲ ತಿಂಗಳ ಹಿಂದೆ ಎರಡನೇ ಅಲೆಗೆ ನರಳಿದಂತೆ ನರಳಬೇಕಾಗುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.

೨೦೨೦ರಲ್ಲಿ ಕಾಣಿಸಿಕೊಂಡ ಕರೋನಾ ಇಡೀ ವರ್ಷ ಸಾಲು ಸಾಲು ಸಂಕಷ್ಟವನ್ನು ತಂದಿಟ್ಟಿತ್ತು. ಕಂಡು ಕೇಳರಿಯದ ಸೋಂಕಿನಿಂದ ರಕ್ಷಿಸಿಕೊಳ್ಳುವುದು ಹೇಗೆ ಎನ್ನುವ ಪರಿವೆ ಇಲ್ಲದ್ದರಿಂದ ಮೊದಲ ಅಲೆಗೆ ಇಡೀ ವಿಶ್ವ ನಡುಗಿತ್ತು. ಕರ್ನಾಟಕ ಹಾಗೂ ಭಾರತದ ವಿಷಯದಲ್ಲಿ ಹೇಳುವುದಾದರೆ, ಎರಡನೇ ಅಲೆಯನ್ನು ‘ಊರಲ್ಲಿದ್ದ ಮಾರಿ ಮನೆಗೆ ಬಂದು ಹೋಗು’ ಎನ್ನುವಂತೆ ಜನರು ಮಾಡಿಕೊಂಡ ಎಡವಟ್ಟಿನಿಂದ ಭಾರೀ ಪ್ರಮಾಣದಲ್ಲಿ ಹಬ್ಬಿತ್ತು. ಕಳೆದ ಬಾರಿಯೂ ಮೊದಲ
ಅಲೆ ತಗ್ಗುತ್ತಿದ್ದಂತೆ ಹಂತಹಂತವಾಗಿ ಅನ್‌ಲಾಕ್ ಮಾಡಲಾಗಿತ್ತು (ಕಳೆದ ಬಾರಿ ಅನ್‌ಲಾಕ್ ಮಾಡಿದ್ದ ಮಾದರಿಯನ್ನೇ ಈ ಬಾರಿಯೂ ಅನುಸರಿಸಿದ್ದಾರೆ). ಆದರೆ ಜನರು ಅನ್‌ಲಾಕ್ ಆಗುತ್ತಿದ್ದಂತೆ ಬೇಕು ಬೇಡಗಳನ್ನು ಯೋಚಿಸದೇ, ಒಮ್ಮೆಗೆ ಹೊರಬಂದರು.

ಇದಕ್ಕೆ ಸಾಥ್ ನೀಡುವಂತೆ ರಾಜಕೀಯ ಪಕ್ಷಗಳು, ಉಪಚುನಾವಣೆ, ಪ್ರಚಾರ, ಸಾಧನಾ ಸಮಾವೇಶ ಸೇರಿದಂತೆ ವಿವಿಧ ರೀತಿಯಲ್ಲಿ ಸಮಾವೇಶಗಳನ್ನು ಆರಂಭಿಸುವ ಮೂಲಕ ಜನರನ್ನು ಕೂಡಿಹಾಕುವ ಕೆಲಸಕ್ಕೆ ಕೈಹಾಕಿದರು. ಆದ್ದರಿಂದ ಮೊದಲ ಅಲೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಕರ್ನಾಟಕ ಎರಡನೇ ಅಲೆ ನಿರ್ವಹಣೆಯಲ್ಲಿ ಸಂಪೂರ್ಣ ನೆಲಕಚ್ಚಿತ್ತು. ಇದು ಕೇವಲ ಕರ್ನಾಟಕದ ಪರಿಸ್ಥಿತಿಯಾಗಿ ಮಾತ್ರವೇ ಉಳಿಯದೇ ಭಾರತದ ಸ್ಥಿತಿಯೂ ಆಗಿತ್ತು. ಇದೀಗ ಎರಡನೇ ಅಲೆ ಮುಗಿದಿರುವ ಖುಷಿಯಲ್ಲಿ ಅನ್‌ಲಾಕ್ ಮಾಡಲಾಗಿದೆ. ಜನರು ಈ ಬಾರಿಯಾದರೂ, ಕಳೆದ ಬಾರಿಯಂತೆ ಮೈಮರೆಯದೇ ಎಚ್ಚರಿಕೆಯಿಂದ ಇರಬೇಕಿದೆ. ಇಲ್ಲದಿದ್ದರೆ ಮತ್ತೊಮ್ಮೆ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಇನ್ನು ಈ ಬಾರಿ ಕರೋನಾವನ್ನು ನಿಯಂತ್ರಿಸಲು ಸರಕಾರ ಹಾಗೂ ಜನರಿಗೆ ಲಸಿಕೆಯ ಅಸವಿದೆ. ಲಸಿಕೆ ಉತ್ಪಾದನೆ, ವಿತರಣೆ ವಿಷಯದಲ್ಲಿ ಹಲವು ಸವಾಲು ಗಳಿರುವುದು ಒಪ್ಪಲೇಬೇಕು. ಆದರೂ ರಾಜ್ಯ ಹಾಗೂ ಸರಕಾರ ಈ ಎಲ್ಲ ‘ಸವಾಲು’ಗಳನ್ನು ಮೀರಿ ಲಸಿಕೆ ವಿತರಣೆ ಕಾರ್ಯಕ್ಕೆ ಹೆಚ್ಚು ಒತ್ತು ನೀಡುವ ಕೆಲಸವನ್ನು ಸರಕಾರ ಮುಂದಾಗಬೇಕು. ಮೂರನೇ ಅಲೆಯ ಆತಂಕದಲ್ಲಿ ಈಗಾಗಲೇ ಪ್ರತಿಯೊಬ್ಬರಿಗೂ ಲಸಿಕೆ ನೀಡುವುದಾಗಿ ಸರಕಾರ ಹೇಳಿದೆ. ಕರ್ನಾಟಕ ಸರಕಾರ ಡಿಸೆಂಬರ್ ವೇಳೆಗೆ ಎಲ್ಲರಿಗೂ ಕರೋನಾ ಲಸಿಕೆ ಕೊಡಿಸುವುದಾಗಿ ಹೇಳಿದ್ದಾರೆ. ‘ಅಂಕಿ – ಅಂಶ’ದ ಲೆಕ್ಕಾಚಾರದಲ್ಲಿ ಸರಕಾರ ಈ ಮಾತುಗಳು ಸಾಧ್ಯವಾಗ ಬಹುದು. ಆದರೆ ಪ್ರಾಕ್ಟಿಕಲ್ ಆಗಿ ಯೋಚಿಸಿದಾಗ ಇದು ತುಸು ಕಷ್ಟ ಎನ್ನುವುದು ಈಗಾಗಲೇ ಸಾಬೀತಾಗಿದೆ.

ಹಾಗೇ ನೋಡಿದರೆ, ಭಾರತದಲ್ಲಿರುವ ಜನಸಂಖ್ಯೆಗೆ ಲಸಿಕೆ ನೀಡುವುದು ಸುಲಭದ ಕೆಲಸವಲ್ಲ ಎನ್ನುವುದು ಒಪ್ಪುವ ಮಾತು. 130 ಕೋಟಿ ಜನಸಂಖ್ಯೆಗೆ ಎರಡು ಡೋಸ್ ಎಂದರೆ 230 ಕೋಟಿ ಡೋಸ್‌ಗಳನ್ನು ಸರಬರಾಜು ಮಾಡಬೇಕು. ಇನ್ನು ಅನೇಕರು ಲಸಿಕೆಯ ಬಗ್ಗೆಯಿರುವ ಕೆಲ ಆತಂಕ, ಗೊಂದಲದಿಂದ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಜನರಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ಕರೋನಾದಿಂದ ರಕ್ಷಣೆ ಪಡೆಯಲು ಜನರು ಹಾಗೂ ಸರಕಾರಗಳು ಯಾವುದೇ ಕ್ರಮವಹಿಸಿದರೂ ಅದೆಲ್ಲ ತಾತ್ಕಾಲಿಕ. ಲಸಿಕೆಯೊಂದೇ ಶಾಶ್ವತ ಪರಿಹಾರ ಎನ್ನುವುದನ್ನು ಮರೆಯಬಾರದು. ಈಗಾಗಲೇ ಎರಡು ಅಲೆಯಲ್ಲಿ ಆಗಿರುವ ಅನಾಹುತವನ್ನು ಗಮನದಲ್ಲಿರಿಸಿಕೊಂಡು ಮೂರನೇ ಅಲೆಗೆ ಸಜ್ಜಾಗುತ್ತಿರುವ ಸರಕಾರಗಳು, ಬೆಡ್, ವೆಂಟಿಲೇಟರ್, ಆಕ್ಸಿಜನ್ ಸೌಲಭ್ಯದ ಜತೆಜತೆಗೆ ಲಸಿಕೆಗೆ ಹೆಚ್ಚಿನ ಮಹತ್ವ ನೀಡಬೇಕಿದೆ.

ಇನ್ನು ಕರ್ನಾಟಕದಲ್ಲಿ ಮೊದಲ ಎರಡು ಅಲೆಯಿಂದಾದ ಕರೋನಾ ಆಘಾತದಿಂದ ತಪ್ಪಿಸಿಕೊಳ್ಳಲು ಹಾಗೂ ಜನರನ್ನು ಸೋಂಕಿನಿಂದ ರಕ್ಷಿಸಲು ಸರಕಾರ ಎರಡು ಬಾರಿಯೂ ಲಾಕ್ ಡೌನ್ ಹೇರಿತ್ತು. ಈ ರೀತಿ ಲಾಕ್‌ಡೌನ್ ಹೇರುವುದರಿಂದ ಜನರನ್ನು ಕರೋನಾದಿಂದ ರಕ್ಷಿಸಿಕೊಳ್ಳಬಹುದೇ ಹೊರತು, ಇದರಿಂದ ಸರಕಾರಕ್ಕೆ ಹಾಗೂ ಜನರಿಗೆ ಆರ್ಥಿಕ ಹೊರೆಯನ್ನು ತಗ್ಗಿಸಲು ಸಾಧ್ಯವಿಲ್ಲ. ಆರ್ಥಿಕವಾಗಿ ಆಗುವ ನಷ್ಟದಿಂದ ಇಡೀ ಸಮುದಾಯಕ್ಕೆ ಭಾರೀ ಸಮಸ್ಯೆಯಾಗುತ್ತಿರುವುದು
ಈಗಾಗಲೇ ನಾವೆಲ್ಲ ನೋಡಿದ್ದೇನೆ. ವರದಿಯೊಂದರ ಪ್ರಕಾರ ಕಳೆದ ತಿಂಗಳು ಕರ್ನಾಟಕ ಸರಕಾರ ಹೇರಿದ್ದರಿಂದ ಕೈಗಾರಿಕೆಗಳಿಗೆ ಸುಮಾರು 75 ಸಾವಿರ ಕೋಟಿ ರು.ಗೂ ಹೆಚ್ಚು ನಷ್ಟವಾಗಿದೆ.

ಇನ್ನು ಬೆಂಗಳೂರು ಒಂದರಲ್ಲೇ 10 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳು ಮುಚ್ಚುವ ಹಂತಕ್ಕೆ ತಲುಪಿದೆ. ಇನ್ನು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಕೆಲಸ

ವಿಲ್ಲದೇ ಖಾಲಿ ಬಿದ್ದಿದ್ದರೆ ಇನ್ನುಳಿದ ಎಲ್ಲ ಕ್ಷೇತ್ರಗಳು ಒಂದಿಲ್ಲೊಂದು ಹೊಡೆತಕ್ಕೆ ಸಿಲುಕಿವೆ. ಇದೆಲ್ಲ ಸಂಘಟಿತ ವಲಯದ ಸಮಸ್ಯೆಯಾದರೆ, ಬೀದಿಬದಿ ವ್ಯಾಪಾರಿ ಗಳು, ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರ ಗೋಳನ್ನು ಕೇಳುವಂತಿಲ್ಲ. ಇದು ಒಂದು ಭಾಗವಾದರೆ, ಸಮಾಜದಲ್ಲಿ ಹಣ ಚಲಾವಣೆಯಾಗು ತ್ತಿದ್ದರೆ ಮಾತ್ರ ಸರಕಾರಕ್ಕೆ ಆದಾಯ. ಹಣ ಚಲಾವಣೆ ಕಡಿಮೆಯಾಗುತ್ತಾ ಹೋದಂತೆ, ಸರಕಾರದ ಬೊಕ್ಕಸವೂ ಖಾಲಿಯಾಗುತ್ತದೆ. ಲಾಕ್‌ಡೌನ್ ವೇಳೆ, ಕೇವಲ ಆದಾಯ ಖೋತ ಆಗುವುದು ಮಾತ್ರವಲ್ಲದೇ, ಪರಿಹಾರದ ನೆಪದಲ್ಲಿ ಕೋಟಿ ಕೋಟಿ ರು. ಮೀಸಲಿಡಬೇಕಾಗಿರುವುದು ಸರಕಾರಗಳ ಮತ್ತೊಂದು ಸವಾಲು. ಈ ಎಲ್ಲವನ್ನು ಗಮನಿಸಿದಾಗ, ಲಾಕ್‌ಡೌನ್ ಘೋಷಣೆ ಕೇವಲ ಸುದ್ದಿಗೋಷ್ಠಿ ನಡೆಸಿ ಘೋಷಿಸಿದಷ್ಟು ಸುಲಭವಲ್ಲ. ಸೋಂಕು ಹೆಚ್ಚಾದಾಗ ಲಾಕ್‌ ಡೌನ್, ಕಡಿಮೆಯಾದಾಗ ಅನ್‌ಲಾಕ್ ಮಾಡಿಕೊಂಡು ಕೂರುವುದಕ್ಕೆ ಯಾವುದೇ ಸರಕಾರದಿಂದಲೂ ಸಾಧ್ಯವಿಲ್ಲ.

ಆದ್ದರಿಂದ ಈಗಾಗಲೇ ಎರಡು ಅಲೆಗಳಿಂದ ರಾಜ್ಯದ ಪ್ರತಿಯೊಬ್ಬರು ಪಾಠ ಕಲಿತಿದ್ದು, ಈಗಲಾದರೂ ಎಚ್ಚರದಿಂದರಬೇಕಿದೆ. ಇನ್ನು ಮೊದಲ ಅಲೆಯಲ್ಲಿ ಹಿರಿಯ ನಾಗರಿಕರನ್ನು ಹೆಚ್ಚು ಕಾಡಿದ್ದ ಕರೋನಾ, ಎರಡನೇ ಅಲೆಯಲ್ಲಿ ಮಧ್ಯ  ಯಸ್ಕರನ್ನು ಕಾಡಿದೆ. ಇದೀಗ ಮೂರನೇ ಅಲೆ ಮಕ್ಕಳನ್ನು ಕಾಡಬಹುದು ಎನ್ನುವ ಆತಂಕವನ್ನು ಈಗಾಗಲೇ ತಜ್ಞರು ಹೊರಹಾಕಿದ್ದಾರೆ. ಇದಕ್ಕೆ ಕಾರಣ ಸರಳ, ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತಿರುವುದರಿಂದ, 18
ವರ್ಷ ದೊಳಗಿನ ಮಕ್ಕಳಿಗೆ ಸೋಂಕು ಬಾಧಿಸುವುದು ಹೆಚ್ಚು. ಆದರೆ ಈ ಆತಂಕದ ನಡುವೆಯೂ ಕೆಲವು ತಜ್ಞರು, ಮಕ್ಕಳಿಗೆ ಸೋಂಕು ಕಾಣಿಸುತ್ತದೆ ನಿಜ. ಆದರೆ ಶೇ.65ಕ್ಕೂ ಹೆಚ್ಚು ಮಕ್ಕಳಲ್ಲಿ ರೋಗ ಲಕ್ಷಣರಹಿತ ಸೋಂಕು ಕಾಣಿಸಿಕೊಳ್ಳಲಿದೆ.

ಇನ್ನು ಮರಣ ಪ್ರಮಾಣ ಶೇ.೫ಕ್ಕಿಂತ ಕಡಿಮೆಯೇ ಇರಲಿದೆ ಎನ್ನುವ ಮಾತನ್ನು ಹೇಳಿದ್ದಾರೆ. ಆದ್ದರಿಂದ ಹೆಚ್ಚು ಆತಂಕವನ್ನು ಪಡುವುದಕ್ಕಿಂತ, ಎಚ್ಚರಿಕೆಯಿಂದ ಇರುವುದು ಸಾಕು ಎಂದಿದ್ದಾರೆ. ಆದರೆ ‘ಪೆಟ್ಟಿಗೆ ಚಿಕ್ಕದಾದಷ್ಟು ಭಾರ ಜಾಸ್ತಿ’ ಎನ್ನುವ ಮಾತಿನಂತೆ, ಸೋಂಕಿನಿಂದ ಚಿಕ್ಕ ಪುಟ್ಟ ಮಕ್ಕಳು ಕೊನೆಯುಸಿರು ಎಳೆದರೆ ಅದನ್ನು ಅರಗಿಸಿಕೊಳ್ಳುವ ಶಕ್ತಿ ಅನೇಕರಿಗೆ ಇರುವುದಿಲ್ಲ. ಈ ಕಾರಣಕ್ಕಾಗಿಯೇ ಮೂರನೇ ಅಲೆಯ ಬಗ್ಗೆ ಹೆಚ್ಚು ಜಾಗೃತರಾಗಿರಿ ಎನ್ನುವ ಮಾತನ್ನು ತಜ್ಞರು ಪದೇ ಪದೆ ಹೇಳುತ್ತಿರುವುದು.

ಹಾಗೇ ನೋಡಿದರೆ ಭಾರತದಲ್ಲಿ ಎರಡನೇ ಅಲೆ ಇಳಿಯುವ ಮೊದಲೇ, ವಿಶ್ವದ ಹಲವು ರಾಷ್ಟ್ರಗಳಲ್ಲಿ ನಾಲ್ಕೈದು ಅಲೆಗಳನ್ನು ಕಳೆದು, ಹೊಸದಾಗಿ ಭಾರೀ
ಆತಂಕವನ್ನು ಮೂಡಿಸಿರುವ ಡೆಲ್ಟಾಪ್ಲಸ್ ವೈರಸ್ ಕಾರಣಕ್ಕೆ ಲಾಕ್‌ಡೌನ್ ಹೇರಲಾಗಿದೆ. ಇಸ್ರೇಲ್, ಆಸ್ಟ್ರೇಲಿಯಾ, ಯೂರೋಪಿನ ಕೆಲ ರಾಷ್ಟ್ರಗಳು ಸೇರಿದಂತೆ ಅನೇಕ ಭಾಗದಲ್ಲಿ ಲಾಕ್‌ಡೌನ್ ಮತ್ತೊಮ್ಮೆ ಹೇರಲಾಗಿದೆ. ಕರೋನಾ ಲಸಿಕೆಯಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ ಎನ್ನುವ ವಿಶ್ವಾಸದಲ್ಲಿದ್ದ ರಾಷ್ಟ್ರಗಳು ಇದೀಗ ಪುನಃ ಲಾಕ್‌ಡೌನ್ ಮೊರೆ ಹೋಗಿವೆ.

ಆದರೆ ಕಳೆದ ಎರಡು ವರ್ಷಗಳಿಂದ ಆರ್ಥಿಕವಾಗಿ ಜರ್ಜರಿತವಾಗಿರುವ ಭಾರತದಲ್ಲಿ ಇನ್ನೊಂದು ಲಾಕ್‌ಡೌನ್ ಹೇರುವುದು ಅಸಾಧ್ಯವೇ ಎನ್ನಲಾಗಿದೆ. ಅದರಲ್ಲಿಯೂ ಎರಡೂ ಅಲೆಗೂ ಬರೋಬ್ಬರಿ ತಿಂಗಳಿಗೂ ಹೆಚ್ಚು ಕಾಲ ಲಾಕ್ ಡೌನ್ ಮಾಡಲು ನಿರ್ಧರಿಸಿದ್ದ ಕರ್ನಾಟಕದಲ್ಲಿ, ಇನ್ನೊಮ್ಮೆ ಲಾಕ್‌ಡೌನ್ ಮಾಡಿದರೆ ಜನರ ಜೀವನ ಮತ್ತಷ್ಟು ಅಧೋಗತಿಗೆ ಹೋಗುವುದರಲ್ಲಿ ಅನುಮಾನವಿಲ್ಲ. ಆದ್ದರಿಂದ ಲಾಕ್‌ಡೌನ್ ಹೇರುವ ಸ್ಥಿತಿಯನ್ನು ಜನರು ತಂದುಕೊಳ್ಳ ಬಾರದು.

ಸರಕಾರಗಳು ತಗೆದುಕೊಳ್ಳುವ ಎಲ್ಲ ಮುನ್ನೆಚ್ಚರಿಕೆಯನ್ನು ಮೀರಿ ಜನರು ಅಸಡ್ಡೆ ತೋರಿದರೆ ಮತ್ತೊಂದು ಸಂಕಷ್ಟ ಎದುರಾಗುವುದು ಖಚಿತ ಎನ್ನುವುದು ತಿಳಿದ ವಿಚಾರ. ಆದರೆ ಈ ವಿಷಯದಲ್ಲಿ ಕೇವಲ ಜನರನ್ನು ಮಾತ್ರವಲ್ಲದೇ, ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕಾಗಿದೆ. ಕರೋನಾ ಎರಡನೇ ಲಾಕ್‌ಡೌನ್ ಪೂರ್ಣಗೊಂಡಿತ್ತು ಎನ್ನುವ ಕಾರಣಕ್ಕೆ, ಪ್ರತಿಪಕ್ಷದ ನಾಯಕರು ಸಾಲು ಸಾಲು ಪ್ರತಿಭಟನೆ ಮಾಡಿಕೊಂಡು, ಆಡಳಿತ ಪಕ್ಷದವರು ಸಾಧನಾ ಕಾರ್ಯಕ್ರಮಗಳನ್ನು ನಡೆಸಿ ಸಹಸ್ರ ಸಹಸ್ರ ಜನರನ್ನು ಸೇರಿಸಿದರೆ, ಕರೋನಾ ಮೂರನೇ ಅಲೆಗೆ ಅಧಿಕೃತ ಆಹ್ವಾನ ಎನ್ನುವುದನ್ನು ಮರೆಯಬಾರದು.

ಹಾಗೇ ನೋಡಿದರೆ ಕರ್ನಾಟಕದಲ್ಲಿ ಮೊದಲ ಅಲೆ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತಿದೆ ಎನ್ನುವ ವೇಳೆ ಎದುರಾದ ಉಪಚುನಾವಣೆ, ಅದಕ್ಕೆ ಕಾಂಗ್ರೆಸ್, ಬಿಜೆಪಿ
ಹಾಗೂ ಜೆಡಿಎಸ್ ನಾಯಕರು ನಡೆಸಿದ ಬೃಹತ್ ಸಮಾವೇಶಗಳಿಂದಲೇ ಸೋಂಕು ಪುನಃ ವ್ಯಾಪಿಸಿತು. ಈ ರೀತಿ ಸೋಂಕು ಹಬ್ಬಲು ಕಾರಣವಾದ ಉಪ ಚುನಾವಣೆ, ರ‍್ಯಾಲಿಗಳಲ್ಲಿ ಆದ ಎಡವಟ್ಟುಗಳ ಬಗ್ಗೆ ಕಾಂಗ್ರೆಸ್, ಬಿಜೆಪಿ ನಾಯಕರು ಒಬ್ಬರ ಮೇಲೊಬ್ಬರು ಈಗಾಗಲೇ ಆರೋಪ ಪ್ರತ್ಯಾರೋಪ ಮಾಡಿಕೊಂಡಿ ದ್ದಾರೆ. ಇದರಲ್ಲಿ ಎರಡು ಪಕ್ಷದ ತಪ್ಪುಯಿದೆ ಎನ್ನುವುದನ್ನು ಒಪ್ಪಲೇಬೇಕು.

ಉಪಚುನಾವಣಾ ಪ್ರಚಾರದೊಂದಿಗೆ ಕಾಂಗ್ರೆಸ್ ನಾಯಕರು ನಡೆಸಿದ ವಿವಿಧ ಪ್ರತಿಭಟನೆ, ರೈತರು ಕೇಂದ್ರ ಸರಕಾರದ ವಿರುದ್ಧ ನಡೆಸಿದ ರ‍್ಯಾಲಿ, ಪ್ರತಿಭಟನೆ  ಗಳೂ ಎರಡನೇ ಅಲೆಯಲ್ಲಾದ ಅನಾಹುತಕ್ಕೆ ಕಾರಣ. ಎಲ್ಲ ಮುಗಿದ ಬಳಿಕ ಪ್ರತಿಭಟನೆ ನಡೆಸಬಾರದಿತ್ತು, ಚುನಾವಣೆ ನಡೆಸಬಾರದಿತ್ತು ಎಂದು ಎಲ್ಲ ನಾಯಕರು ಮಾತನಾಡಿದರು. ಆದರೆ ಈ ಎಲ್ಲ ಕಾರ್ಯಕ್ರಮಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದಾಗ, ಅವರನ್ನು ತಡೆಯುವ ಪ್ರಯತ್ನವನ್ನು ಮಾತ್ರ ಯಾರೂ ಮಾಡಲಿಲ್ಲ. ಇನ್ನು ಸ್ವತಃ ಮುಖ್ಯಮಂತ್ರಿಗಳು ತಮಗೆ ಜ್ವರವಿರುವುದು ಗೊತ್ತಿದ್ದರೂ, ಪ್ರಚಾರದಲ್ಲಿ ಭಾಗವಹಿಸಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನರಿರುವ ಸಮಾವೇಶದಲ್ಲಿ ಮಾತನಾಡಿದರು.

ಮೊದಲ ಹಾಗೂ ಎರಡನೇ ಅಲೆಗಿಂತ ಮೂರನೇ ಅಲೆಯಲ್ಲಿ ಅದರಲ್ಲಿಯೂ ಈಗಾಗಲೇ ಕಾಣಿಸಿಕೊಂಡಿರುವ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ಹಬ್ಬುವ ತೀವ್ರತೆ ಭಾರಿ ಪ್ರಮಾಣದಲ್ಲಿ ಇರುವುದರಿಂದ ಈ ರೀತಿಯ ಎಡವಟ್ಟು ಮಾಡಿಕೊಂಡರೆ ಅದರಿಂದಾಗುವ ಹೊರೆಯನ್ನು ಮಾತ್ರ ಇಡೀ ರಾಜ್ಯ ಅನುಭವಿಸಬೇಕಾಗುತ್ತದೆ ಎನ್ನುವುದನ್ನು ಮರೆಯಬಾರದು.

ಮೊದಲೆರಡು ಅಲೆಯಲ್ಲಿ ಈಗಾಗಲೇ ನಲುಗಿರುವ ಕರ್ನಾಟಕ ಸಾಕಷ್ಟು ಸಾವು, ನೋವು, ಸಂಕಷ್ಟವನ್ನು ಅನುಭವಿಸಿದೆ. ಎಲ್ಲವನ್ನು ಸರಕಾರದ ತಪ್ಪೆಂದು ಹೇಳಿ,
ಕೂರುವುದೇ ಆದರೆ ಇನ್ನೆಷ್ಟು ಲಾಕ್‌ಡೌನ್ ಮಾಡಿದರೂ ಅದರಿಂದ ಉಪಯೋಗವಿರುವುದಿಲ್ಲ. ಆದ್ದರಿಂದ ಜನರು ಕರೋನಾ ಅನ್‌ಲಾಕ್ ಎನ್ನುವ ಖುಷಿಯನ್ನು ‘ಲಿಮಿಟೆಡ್ ಎಡಿಷನ್’ ರೀತಿ ಬಳಸಿಕೊಂಡು ಅಗತ್ಯವಿದ್ದರೆ ಮಾತ್ರ ಸರಕಾರ ನೀಡಿರುವ ಸ್ವಾತಂತ್ರ್ಯವನ್ನು ಬಳಸಿಕೊಳ್ಳಬೇಕಿದೆ. ಇನ್ನು ಜನಪ್ರತಿನಿಧಿಗಳು ಹಾಗೂ ಪಕ್ಷಗಳ ಮುಖಂಡರು, ಜನರಿಗೆ ಎಚ್ಚರದಿಂದ ಇರಿ ಎಂದು ಹೇಳುವ ಮೊದಲು, ಜನರನ್ನು ‘ಎಚ್ಚರ ತಪ್ಪದಂತೆ ನೋಡಿಕೊಳ್ಳುವ ಎಚ್ಚರಿಕೆ ನಿಮ್ಮ ಮೇಲಿದೆ’ ಎನ್ನುವುದನ್ನು ತಿಳಿಯಬೇಕಿದೆ.