Friday, 13th December 2024

ಮಾಧ್ಯಮಗಳು ಭೀತಿ ಹುಟ್ಟಿಸದಿರಲಿ

ಅಭಿಮತ

ಆದರ್ಶ್‌ ಶೆಟ್ಟಿ, ಉಪ್ಪಿನಂಗಡಿ

ಕರೋನಾ ವೈರಸ್ ಮತ್ತೆ ಜಗತ್ತಿನಲ್ಲಿ ಸದ್ದು ಮಾಡುತ್ತಿದೆ. ದೇಶದ ಕೆಲ ರಾಜ್ಯಗಳಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಲ್ಪಟ್ಟರೆ, ಮತ್ತೆ ಕೆಲ ರಾಜ್ಯಗಳಲ್ಲಿ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂನಂಥ ಮಾರ್ಗಸೂಚಿಗಳು ಜಾರಿಯಲ್ಲಿದೆ.

ಕರೋನಾ ಒಂದರ್ಥದಲ್ಲಿ ಮನುಷ್ಯನ ಜೀವನ ಶೈಲಿಯನ್ನು ಬದಲಿಸಿದರೆ, ಮತ್ತೊಂದೆಡೆ ಹತ್ತಾರು ಪಾಠಗಳನ್ನು ಸಾಮಾಜಿಕ ಬದುಕಿನಲ್ಲಿ ಕಲಿಸಿಕೊಟ್ಟಿದೆ. ಹಣ, ಅಂತಸ್ತು, ಮತ್ಸರ, ದುರಹಂಕಾರ, ಅಮಾನವೀಯತೆ, ದುಷ್ಕೃತ್ಯಗಳು ತಾಂಡವವಾಡು ತ್ತಿರುವ ಈ ಸಮಾಜದಲ್ಲಿ ಪರಿವರ್ತನೆಗೆ ಸಾಕಷ್ಟು ಮುನ್ನುಡಿ ಬರೆದಿದೆ. ಆದರೆ ಮನುಷ್ಯ ಬದಲಾಗಬೇಕಿದೆ. ಪ್ರಕೃತಿ ಕಲಿಸುವ ಪಾಠಕ್ಕೆ ತಲೆಬಾಗಬೇಕಿದೆ.

ಪ್ರಕೃತಿಗೆ ಮನುಷ್ಯ ಯಾವತ್ತೂ ಅನಿವಾರ್ಯನಲ್ಲ. ಆದರೆ ಮನುಷ್ಯನಿಗೆ ಪ್ರಕೃತಿ ಅನಿವಾರ್ಯ. ಇದನ್ನು ಪೂಜಿಸಿ, ಪೋಷಿಸಿ, ಸಂರಕ್ಷಿಸುವ ಕೆಲಸ ಮಾನವನಿಂದಾಗುತ್ತಿದೆಯೇ ಅಂದರೆ ಅದು ಶೂನ್ಯ. ಸ್ವಾರ್ಥದ ಪರಾಕಾಷ್ಠೆಗೆ ಪ್ರಕೃತಿಯ ಮೇಲೆ ಮಾನವನ ಸವಾರಿ ನಿತ್ಯ ನಿರಂತರವಾಗಿದೆ.ಈ ಬಾರಿಯ ರೂಪಾಂತರಿ ಕರೋನಾ ವೈರಸ್‌ನ ಅಟ್ಟಹಾಸಕ್ಕೆ ಹಲವಾರು ಜೀವಗಳು ಬಲಿಯಾ ಗಿವೆ. ಹಲವಾರು ರೋಗಿಗಳು ಆಸ್ಪತ್ರೆಗಳಲ್ಲಿ ನರಳಾಡುತ್ತಿzರೆ. ಕೆಲ ಆಸ್ಪತ್ರೆಗಳಲ್ಲಿ ಸಂಕಷ್ಟದ ಸಂದರ್ಭದಲ್ಲೂ ಬೇಜವಾಬ್ದಾರಿ
ಪ್ರದರ್ಶಿಸುವ, ದುಪ್ಪಟ್ಟು ಹಣ ಪಡೆಯುವ, ಆಕ್ಸಿಜನ್ ಕೊರತೆಯಿಂದ ರೋಗಿಗಳ ನರಳಾಟ, ಅವ್ಯವಸ್ಥೆಗಳು ಕಂಡು ಬರುತ್ತಿದೆ.

ರಾಜಕೀಯ ಪಕ್ಷಗಳು ಗಡದ್ದಾಗಿ ಸಭೆ, ಸಮಾರಂಭ, ಸಮಾವೇಶಗಳನ್ನು ಹಮ್ಮಿಕೊಂಡು ಕರೋನಾವನ್ನು ಊರೀಡಿ ಹಂಚಿವೆ. ಜನಸಾಮಾನ್ಯರು ಸಾಮಾಜಿಕ ಕರ್ತವ್ಯ ಮರೆತು, ಸ್ವಯಂ ಜಾಗೃತಿಯಿಲ್ಲದೆ ಬೇಕಾಬಿಟ್ಟಿ ಸಾಮಾಜಿಕ ಅಂತರ ಕಾಪಾಡದೆ, ಮಾಸ್ಕ್ ಧರಿಸದೆ ತಿರುಗಾಡಿದ್ದೇ ಮತ್ತೆ ಕರೋನಾ ಎ ಮೀರಲು ಪ್ರಮುಖ ಕಾರಣವಾಗಿದೆ.

ಲಾಕ್ ಡೌನ್‌ನಂಥ ಸರಕಾರದ ನಿರ್ಧಾರಗಳಿಂದ ಉಳ್ಳವರು ಹೇಗೋ ಬದುಕು ಸಾಗಿಸುವರು. ಆದರೆ ದಿನಾ ದುಡಿದು ತಿನ್ನುವ ವರ್ಗ, ಕೂಲಿ ಕಾರ್ಮಿಕರು, ಹೋಟೆಲ್ ಉದ್ಯಮ, ಶಾಮಿಯಾನ, ಕಟ್ಟಡ ಕಾರ್ಮಿಕ, ಕಲಾವಿದರು, ಫೋಟೋಗ್ರಾಫರ್, ವಿವಿಧ ಕ್ಷೇತ್ರದ ಕಲಾವಿದರು ವಾಹನ ಚಾಲಕರು ಹೀಗೆ ತಮ್ಮ ಕೆಲಸವನ್ನು ಬದುಕಿಗೆ ಅಳವಡಿಸಿಕೊಂಡವರ ಪಾಡನ್ನು ಕೇಳುವವ ರಾರು? ಮುಂಬೈ ಜನರ ಬದುಕು ಸೇರಿದಂತೆ ಸಮಾಜದ ವಿವಿಧ ವರ್ಗಗಳಲ್ಲಿ ಕೆಲಸ ನಿರ್ವಹಿಸುವ ಸಣ್ಣ ವೃತ್ತಿದಾರರ ಬದುಕು ಲಾಕ್ ಡೌನ್ ಗಳಿಂದ ಶೋಚನೀಯವಾಗಿದೆ.

ಸರಕಾರಗಳು ಆರಂಭಿಕ ಹಂತದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಲಾಕ್ ಡೌನ್ ಒಂದೇ ಕರೋನಾಗೆ ಶಾಶ್ವತ
ಪರಿಹಾರವಾಗುತ್ತಿರಲಿಲ್ಲ. ಇನ್ನು ನಾವು ದಿನನಿತ್ಯ ನೋಡುವ ವಾರ್ತಾವಾಹಿನಿಗಳಂತೂ ಜಿದ್ದಿಗೆ ಬಿದ್ದವರಂತೆ ಲಾಕ್ ಡೌನ್ ಹೇರುವಂತೆ ಸರಕಾರಕ್ಕೆ ಒತ್ತಡ ತರುತ್ತಿದೆ. ಇಲ್ಲಿ ಉದ್ದೇಶಗಳು ಒಂದೇ ಲಾಕ್ ಡೌನ್ ಹೇರಿದರೆ ವಾರ್ತಾವಾಹಿನಿಗಳಿಗೆ ಟಿಆರ್‌ಪಿ ಹೆಚ್ಚು ದೊರಕುತ್ತದೆ. ಜನಸಾಮಾನ್ಯರು ಹೊರಬರಲಾರದೆ ಮಾಧ್ಯಮಗಳ ದಿನಗಳೆಯುತ್ತಾರೆ.

ಮತ್ತೊಂದೆಡೆ ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ಸುಳ್ಳು ಸುದ್ದಿಗಳನ್ನು ಬಿತ್ತರಿಸುವ, ಸ್ವಲ್ಪ ಸಮಯದ ಬಳಿಕ ವರದಿಯನ್ನೇ ತಿರುಚುವ, ಜನಸಾಮಾನ್ಯರಲ್ಲಿ ಕರೋನಾ ಜಾಗೃತಿ ಮೂಡಿಸುವ ಬದಲು ಭೀತಿ ಹುಟ್ಟಿಸುವ ಕಾರ್ಯಗಳು ನಡೆಯುತ್ತಿವೆ. ದಿನವೊಂದಕ್ಕೆ ಎಷ್ಟು ಕರೋನಾ ಸೋಂಕಿತರು ಪತ್ತೆಯಾಗುತ್ತಾರೋ ಅಷ್ಟೇ ಪ್ರಮಾಣದಲ್ಲಿ ಸೋಂಕಿತರು ಗುಣಮುಖರಾಗಿ
ಹೊರಬರುತ್ತಿರುವುದು ಕೂಡ ವಾಸ್ತವ. ಆದರೆ ಮಾಧ್ಯಮಗಳು ಇವುಗಳನ್ನು ಭಿತ್ತರಿಸುತ್ತಿಲ್ಲ.

ಧನಾತ್ಮಕ ಅಂಶದ ಬದಲು ಋಣಾತ್ಮಕ ವಿಚಾರಗಳನ್ನೇ ಮಾಧ್ಯಮಗಳು ಪ್ರಸ್ತುತ ಹೈಲೈಟ್ಸ್ ಮಾಡುತ್ತಿವೆ. ಕರೋನಾದ ಒಂದು
ಬಾರಿಯ ಹೊಡೆತದಿಂದ ತತ್ತರಿಸಿರುವ ನಾವುಗಳು ಮತ್ತು ನಮ್ಮ ಅರ್ಥವ್ಯವಸ್ಥೆ, ಮತ್ತೆ ಚೇತರಿಸುವ ಹೊತ್ತಿಗಾಗಲೇ ಎರಡನೇ ಹಂತದ ವೈರಸ್ ಮತ್ತೆ ಅಪ್ಪಳಿಸಿರುವುದು ದೇಶದ ಪ್ರಗತಿ ಕುಂಠಿತಗೊಳಿಸುತ್ತಿರುವುದು ಸುಳ್ಳಲ್ಲ. ಇಂತಹ ಸಂಕಷ್ಟದ ಹೊತ್ತಿನಲ್ಲೂ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ಕೆಸರೆರೆಚಾಟ ಬಿಟ್ಟು ಜನಸಾಮಾನ್ಯರ ಸುರಕ್ಷತೆಯೆಡೆ ಹೆಚ್ಚು ಗಮನ ಹರಿಸುವುದು ಸೂಕ್ತ.

ಜತೆಗೆ ಜನಪ್ರತಿನಿಧಿಗಳಿಗೆ ಸರಕಾರದಿಂದ ದೊರಕುವ ಸೌಲಭ್ಯಗಳಲ್ಲಿ ಶೇ.50ರಷ್ಟು ಕಡಿತಗೊಳಿಸಿ ಕರೋನಾ ಅಸಹಾಯಕ ವರ್ಗಗಳಿಗೆ ಹಂಚುವ ಕೆಲಸವನ್ನು ಸರಕಾರ ಮಾಡಬೇಕಿದೆ.ಆಗ ಮಾತ್ರ ಸರಕಾರಗಳು ಜನಸ್ನೇಹಿಯಾಗಲು ಸಾಧ್ಯ.