Saturday, 14th December 2024

ರಾಜ್ಯದ ಯುವಕರ ಪಾಲಿಗೆ ಆಶಾಕಿರಣವಾಗಲಿ ಕೆಪಿಎಸ್‌ಸಿ

ಅವಲೋಕನ

ಚಂದ್ರಶೇಖರ ಬೇರಿಕೆ

ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಎಂಬುದು ರಾಜ್ಯದಲ್ಲಿ ಸ್ಪರ್ಧಾತ್ಮಕ ಮತ್ತು ಇಲಾಖಾ ಪರೀಕ್ಷೆಗಳ ಮೂಲಕ ವಿವಿಧ ನಾಗರಿಕ ಸೇವೆಗಳಿಗೆ ನೇಮಕಾತಿ ಮಾಡಲು ಸಂವಿಧಾನದ ನಿಬಂಧನೆಗಳ ಅಡಿಯಲ್ಲಿ ಸ್ಥಾಪಿತವಾದ ಸರಕಾರಿ ಸಂಸ್ಥೆ. ರಾಜ್ಯದಲ್ಲಿ ಸರಕಾರಿ ಉದ್ಯೋಗದ ಕನಸು ಕಂಡವರಿಗೆ ಈ ಸಂಸ್ಥೆಯ ಮೇಲೆ ಅತೀವ ಗೌರವ, ಭರವಸೆ.

ಹೊಸ ನೇಮಕಾತಿಯ ಅಧಿಸೂಚನೆಯ ಹುಡುಕಾಟ ಮತ್ತು ಆ ಬಳಿಕದ ಪ್ರಕ್ರಿಯೆಗಳಿಗೆ ಈ ಸಂಸ್ಥೆಯ ವೆಬ್ಸೈಟ್‌ಗೆ ದಿನನಿತ್ಯ ಸಾವಿರಾರು ಜನ ಭೇಟಿ ನೀಡುತ್ತಲೇ ಇರುತ್ತಾರೆ. ಸಂವಿಧಾನದ ಆಶಯಕ್ಕೆ ತಕ್ಕಂತೆ ಕೆಲಸ ಮಾಡುವುದೇ ಈ ಸಂಸ್ಥೆಯ ಪರಮ ಧ್ಯೇಯ. ಸ್ವಜನ ಪಕ್ಷಪಾತ, ಅಕ್ರಮ, ಭ್ರಷ್ಟಾಚಾರ ರಹಿತವಾಗಿ ಪಾರದರ್ಶಕತೆಯಿಂದ ಜವಾಬ್ದಾರಿ ನಿರ್ವಹಿಸಿ ಜನರ ವಿಶ್ವಾಸ ಗಳಿಸಬೇಕಾದ ಈ ಸಂಸ್ಥೆ ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿರುವುದು ದುರಂತ.

ನೇಮಕಾತಿ ನಿಯಮಗಳ ಮೂಲಕ ಉದ್ಯೋಗವನ್ನು ನೀಡಬೇಕಾದ ಈ ಸಂಸ್ಥೆ ಅಕ್ರಮಗಳಿಂದಲೇ ಗುರುತಿಸಿಕೊಂಡಿದೆ. 362  ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗಾಗಿ 2011ನೇ ಸಾಲಿನ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕೆಪಿಎಸ್‌ಸಿಯ ಅಂದಿನ ಅಧ್ಯಕ್ಷರು ಮತ್ತು 9 ಜನ ಸದಸ್ಯರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ
ನೀಡದಿರಲು ಸರಕಾರ ನಿರ್ಧರಿಸಿರುವುದೇ ಈಗ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಸಾವಿರಾರು ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕಾದ ಈ ಸರಕಾರ ಪರೀಕ್ಷಾರ್ಥಿಗಳ ಹಿತದೃಷ್ಟಿಯನ್ನು ಕಡೆಗಣಿಸಿ ಅಕ್ರಮದಲ್ಲಿ
ಭಾಗಿಯಾದವರ ರಕ್ಷಣೆಗೆ ಮುಂದಾಗಿರುವುದು ಭ್ರಷ್ಟರನ್ನು ಉತ್ತೇಜಿಸಿದಂತಾಗಿದೆ. ಕೆಪಿಎಸ್‌ಸಿಯೂ ನವೆಂಬರ್ 3,2011 ರಂದು 162 ಗ್ರೂಪ್ ‘ಎ’ ಮತ್ತು 200 ಗ್ರೂಪ್ ‘ಬಿ’ ಗೆಜೆಟೆಡ್ ಪ್ರೊಬೇಷನರಿ ಹುzಗಳಿಗಾಗಿ ಅರ್ಜಿ ಆಹ್ವಾನಿಸಿತ್ತು.

ವೇಳಾಪಟ್ಟಿಯನುಸಾರ ಪರೀಕ್ಷಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮಾರ್ಚ್ 16,2013ರಂದು ಫಲಿತಾಂಶ ಪ್ರಕಟಿಸಿತ್ತು. ಅಲ್ಲದೇ ಮಾರ್ಚ್ 5,2014ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಮತ್ತು ಮಾರ್ಚ್ 21,2014ರಂದು ಅಂತಿಮ ಆಯ್ಕೆ ಪಟ್ಟಿಯನ್ನು ಕೆಪಿಎಸ್‌ಸಿ ಪ್ರಕಟಿಸಿತ್ತು. ಫಲಿತಾಂಶ ಪ್ರಕಟಗೊಂಡು ಆಯ್ಕೆ ಪಟ್ಟಿ ಪ್ರಕಟಗೊಳ್ಳುವ ಮೊದಲೇ ಅಭ್ಯರ್ಥಿ ಯೊಬ್ಬರಾದ ಡಾ.ಎಚ್.ಪಿ.ಎಸ್.ಮೈತ್ರಿ ಎಂಬವರು ಈ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದ್ದು, ಕೆಪಿಎಸ್‌ಸಿ ಸದಸ್ಯೆ ಮಂಗಳಾ ಶ್ರೀಧರ್ ನನ್ನ ಬಳಿ ಸಹಾಯಕ ಆಯುಕ್ತರ ಹುದ್ದೆಗಾಗಿ 75 ಲಕ್ಷ ರುಪಾಯಿ ಲಂಚ ಕೇಳಿದ್ದರು.

ಲಂಚ ಕೊಡಲು ನಿರಾಕರಿಸಿದಕ್ಕೆ ಸಂದರ್ಶನದಲ್ಲಿ ನನಗೆ ಕಡಿಮೆ ಅಂಕ ನೀಡಿದ್ದಾರೆ’ ಎಂದು ಆರೋಪಿಸಿ 2013 ಮೇ 24 ಮತ್ತು 28ರಂದು ರಾಜ್ಯ ಅಡ್ವೋಕೇಟ್ ಜನರಲ್ ಅವರಿಗೆ ಪತ್ರ ಬರೆದಿದ್ದರು. ಜೂನ್ 4, 2013ರಂದು ಅಡ್ವೋಕೇಟ್ ಜನರಲ್ ನೀಡಿದ ಅಭಿಪ್ರಾಯದ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) ವಿಧಾನ ಸೌಧದ ಪೊಲೀಸ್ ಠಾಣೆಗೆ ಜೂನ್ 22, 2013ರಂದು ನೀಡಿದ ದೂರಿನ ಅನುಸಾರ ಆಗಿನ ರಾಜ್ಯ ಸರಕಾರ ಸಮಗ್ರ ತನಿಖೆಗಾಗಿ ಜೂನ್ 27, 2014ರಂದು ಪ್ರಕರಣವನ್ನು ಸಿಐಡಿಗೆ ವಹಿಸಿತ್ತು.

ನೇಮಕಾತಿಯಲ್ಲಿ ಅಕ್ರಮ ಪತ್ತೆ ಹಚ್ಚಿ ಸಿಐಡಿ ನೀಡಿದ್ದ ಮಧ್ಯಂತರ ವರದಿಯನ್ನು ಪರಿಗಣಿಸಿ ಆಗ 14, 2014ರಂದು ನೇಮಕಾತಿ ಅಧಿಸೂಚನೆಯನ್ನು ಸರಕಾರ ಹಿಂದಕ್ಕೆ ಪಡೆದಿತ್ತು. ಇದನ್ನು ಪ್ರಶ್ನಿಸಿ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿದರು. ಸರಕಾರದ ಆದೇಶವನ್ನು ವಜಾಗೊಳಿಸಿದ ಕೆಎಟಿ, ಅರ್ಹರಿಗೆ ನೇಮಕ
ಪತ್ರ ನೀಡುವಂತೆ ಅಕ್ಟೋಬರ್ 19, 2016ರಂದು ಆದೇಶಿಸಿತ್ತು. ಅದರಂತೆ ಸುಮಾರು 78 ಅಭ್ಯರ್ಥಿಗಳಿಗೆ ಸರಕಾರ
ನೇಮಕಾತಿ ಆದೇಶ ನೀಡಿತ್ತು. ಆದರೆ ಕೆಎಟಿ ತೀರ್ಪು ಪ್ರಶ್ನಿಸಿ ಹುದ್ದೆ ವಂಚಿತ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ 2011ರ ಸಾಲಿನ ಗ್ರೂಪ್ ‘ಎ’ ಮತ್ತು ‘ಬಿ’ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗೆ ಕರ್ನಾಟಕ ಲೋಕ ಸೇವಾ ಆಯೋಗದ ಆಯ್ಕೆಯಲ್ಲಿ ಭಾರಿ ಅಕ್ರಮ ನಡೆದಿರುವುದು ವೇದ್ಯವಾಗಿದೆ’ ಎಂದು ಅಭಿಪ್ರಾಯಪಟ್ಟು ಸರಕಾರಕ್ಕೆ ಕೆಎಟಿ ನೀಡಿದ ಆದೇಶವನ್ನು ಮಾರ್ಚ್ 9,2018ರಂದು ರದ್ದುಪಡಿಸಿತ್ತು.

ಆದರೆ ಕೆಎಟಿ ಆದೇಶದನ್ವಯ ನೇಮಕಾತಿ ಪತ್ರ ಪಡೆದ ಅಭ್ಯರ್ಥಿಗಳು ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ
ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 6,2018ರಂದು ಸುಪ್ರೀಂ ಕೋರ್ಟ್‌ನಿಂದಲೂ ಹೈಕೋರ್ಟ್ ಆದೇಶ ಊರ್ಜಿತಗೊಂಡು ನೇಮಕಾತಿ ಅಕ್ರಮದ ಬಗ್ಗೆ ಪುನಃ ಪರಿಶೀಲಿಸಲು ಹೈಕೋರ್ಟ್‌ಗೆ ಸೂಚಿಸಿತ್ತು. ಇದರಂತೆ ರೇಣುಕಾಂಬಿಕೆ ಆರ್. ವಿರುದ್ಧ ಕರ್ನಾಟಕ ರಾಜ್ಯ‘ಪ್ರಕರಣವನ್ನು ಕೈಗೆತ್ತಿಕೊಂಡ ಹೈಕೋರ್ಟ್ 2011ನೇ ಸಾಲಿನ ನೇಮಕಾತಿಯ ಲಿಖಿತ ಪರೀಕ್ಷೆಯಲ್ಲೂ ಅಕ್ರಮ ಸಾಬೀತಾಗಿದೆ ಎಂದು ಜುಲೈ 13,2018ರಂದು ಪುನರುಚ್ಚರಿಸಿ ಎಲ್ಲಾ 362 ಹುದ್ದೆಗಳ ನೇಮಕಾತಿಯನ್ನು ರದ್ದು ಪಡಿಸಿತ್ತು. ಆ ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಸರಕಾರ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯೂ ವಜಾಗೊಂಡಿತ್ತು.

ಹಲವು ವರ್ಷಗಳ ಕಾನೂನು ಹೋರಾಟಗಳು, ತನಿಖೆಗಳು, ನ್ಯಾಯಾಲಯಗಳ ಆದೇಶಗಳಲ್ಲಿ ಸ್ಪಷ್ಟವಾಗಿ ಕಂಡು ಬಂದಿದ್ದೇ ನೆಂದರೆ ‘2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿಯಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದ್ದು, ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿಲ್ಲ. ಹುದ್ದೆಗಾಗಿ ಲಂಚದ ಹಣ ವರ್ಗಾವಣೆ ಆಗಿದ್ದು, ಸ್ವಜನ ಪಕ್ಷಪಾತ, ಭ್ರಷ್ಟಾಚಾರ,
ಅಕ್ರಮ ನಡೆದಿರುವ ಬಗ್ಗೆ ಪುರಾವೆಗಳಿವೆ. ಪ್ರಭಾವಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ’ ಎಂದು ನ್ಯಾಯಾಲಯ ಸಾರಿ ಹೇಳಿದ್ದರೂ ಅಂದಿನ ಅಧ್ಯಕ್ಷರು ಮತ್ತು 9 ಸದಸ್ಯರ ವಿರುದ್ಧದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದಿರಲು ಮೇ 27, 2021ರಂದು ತೀರ್ಮಾನಿಸಿದ ರಾಜ್ಯ ಸಚಿವ ಸಂಪುಟ ಸಭೆಯ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸ್ಪರ್ಧಾತ್ಮಕ ಪರೀಕ್ಷೆಯಡಿ ಪ್ರತಿಭಾವಂತ ಅಭ್ಯರ್ಥಿಗಳನ್ನು ಅರ್ಹತೆಯ ಆಧಾರದಲ್ಲಿ ಹುದ್ದೆಗಳಿಗೆ ಪರಿಗ ಸುವ ಬದಲು ಕೆಪಿಎಸ್‌ಸಿ ನಿಯಮಗಳನ್ನು ಉಲ್ಲಂಘಿಸಿ ಆರ್ಥಿಕ ಬಲವುಳ್ಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಿ ಕೆಪಿಎಸ್‌ಸಿಯನ್ನು ಕುಲಗೆಡಿಸಿ ದವರನ್ನು ಜೈಲಿಗಟ್ಟುವ ಬದಲು ಸರಕಾರವೇ ಅವರಿಗೆ ಶ್ರೀರಕ್ಷೆಯಾಗಿ ನಿಂತಿರುವುದು ವಿಪರ್ಯಾಸ. ಲಕ್ಷಾಂತರ ಲಂಚ ನೀಡಿ
ಹುzಗಿಟ್ಟಿಸಿಕೊಂಡ ಅಭ್ಯರ್ಥಿಗಳು ಮುಂದೆ ಭ್ರಷ್ಟಾಚಾರದಲ್ಲಿ ಭಾಗಿಯಾಗದಿರುತ್ತಾರೆಯೇ?. ಅಕ್ರಮದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡದಿರಲು ನಿರ್ಧರಿಸಿದ ಸರಕಾರದ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರ ಪ್ರತಿಕ್ರಿಯೆ ಹೀಗಿದೆ.

ಯಾರನ್ನೋ ರಕ್ಷಿಸಲು ಸಂಪುಟ ಸಭೆ ಈ ತೀರ್ಮಾನ ತೆಗೆದುಕೊಂಡಂತೆ ಕಾಣುತ್ತಿದೆ. ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಸರಕಾರ ಮಂಜೂರಾತಿ ನೀಡಬೇಕಿತ್ತು’. ಕೆಪಿಎಸ್‌ಸಿ ಸಮಿತಿಯಲ್ಲಿ ಕಾರ್ಯದರ್ಶಿ ಮತ್ತು ಪರೀಕ್ಷಾ ನಿಯಂತ್ರಕರು ಭಾರತೀಯ ಆಡಳಿತ ಸೇವೆಯಲ್ಲಿರುವ ಅಧಿಕಾರಿಗಳಾಗಿದ್ದರೆ ಅಧ್ಯಕ್ಷರು ಮತ್ತು ಸದಸ್ಯರುಗಳ ಹೆಸರನ್ನು ರಾಜ್ಯ ಸಚಿವ ಸಂಪುಟದ ಶಿಫಾರಸ್ಸಿನ ಅನ್ವಯ ರಾಜ್ಯಪಾಲರು ನೇಮಕ ಮಾಡುತ್ತಾರೆ. ಆದರೆ ಹೀಗೇ ನೇಮಿಸಿದವರನ್ನು ಹುದ್ದೆಯಿಂದ ತೆಗೆದುಹಾಕುವ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ಯಾವುದೇ ಅಧ್ಯಕ್ಷ ಅಥವಾ ಸದಸ್ಯರ ವಿರುದ್ಧ ದುರ್ನಡತೆ ಆರೋಪಗಳು ಕೇಳಿ ಬಂದಾಗ ಅವರನ್ನು ಕಿತ್ತುಹಾಕುವ ಅಧಿಕಾರ ರಾಷ್ಟ್ರಪತಿಯವರಿಗೆ ಮಾತ್ರ ಇರುತ್ತದೆ.

ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಗಳು ಸ್ವತಂತ್ರವಾಗಿ, ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿ ಕೊಡುವ ಉದ್ದೇಶದಿಂದ ಸಂವಿಧಾನದಲ್ಲಿ ಇಂತಹ ನಿಯಮ ರೂಪಿಸಲಾಗಿದೆ ಎಂಬುದು ವಾದ. ಆದರೆ ಈ ನಿಯಮಾವಳಿ ಗಳಿಂದಲೇ ಅಧಿಕಾರದ ದುರುಪಯೋಗವಾಗುತ್ತಿದೆ ಎಂಬುದು ಸುಳ್ಳಲ್ಲ. ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರಿಗೆ ಸಂಬಂಧ ಪಟ್ಟಂತೆ ರಾಷ್ಟ್ರಪತಿಯವರು ಸಕ್ಷಮ ಪ್ರಾಧಿಕಾರಿಯಾಗಿದ್ದು, ಪ್ರಾಸಿಕ್ಯೂಷಸ್‌ಗೆ ಅನುಮತಿ ನೀಡುವ ಬಗ್ಗೆ ರಾಷ್ಟ್ರ ಪತಿಯವರೇ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಹೊಂದಿದ್ದಾರೆ.

ಅದಕ್ಕೂ ಮೊದಲು ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಆ ನಿರ್ಣಯವನ್ನು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಮುಖಾಂತರ ರಾಷ್ಟ್ರಪತಿಯವರಿಗೆ ಕಳುಹಿಸಬೇಕಾಗುತ್ತದೆ. ಆದರೆ ಪ್ರಾಸಿಕ್ಯೂಷಸ್‌ಗೆ ಅನುಮತಿ ನೀಡುವ ಪ್ರಕ್ರಿಯೆಯ ಮೊದಲ ಹಂತದ ಅದನ್ನು ಕೈಬಿಡಲು ನಿರ್ಧರಿಸಿದ್ದರಿಂದ ಅಕ್ರಮದಲ್ಲಿ ಭಾಗಿಯಾದವರು ನಿರಾಳರಾಗಿದ್ದಾರೆ. ಅಂದರೆ ಭ್ರಷ್ಟರ ರಕ್ಷಣೆಯೇ ಈ ತೀರ್ಮಾನದ ಉದ್ದೇಶ ಎಂಬುದು ಸ್ಪಷ್ಟ.

ವಿಪರ್ಯಾಸವೆಂದರೆ ಪ್ರಾಸಿಕ್ಯೂಷಸ್‌ಗೆ ಅನುಮತಿ ನೀಡದಿರುವ ವಿಚಾರದಲ್ಲಿ ರಾಜ್ಯದ ಮೂರೂ ಪಕ್ಷಗಳು ಸಮಾನ ಒಲವು ಹೊಂದಿರುವುದು. ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಸದಸ್ಯರುಗಳ ನೇಮಕಾತಿಗೆ ಯಾವುದೇ ಅರ್ಹತೆ ನಿಗದಿಪಡಿಸಿಲ್ಲವಾದರೂ ಪ್ರಾಮಾಣಿಕತೆ, ದಕ್ಷತೆ, ವ್ಯಕ್ತಿಯ ಹಿನ್ನೆಲೆಯನ್ನು ತಿಳಿದುಕೊಂಡು ಸನ್ನಡತೆಯುಳ್ಳವರನ್ನು ಪರಿಗಣಿಸಬೇಕು ಎಂಬುದನ್ನು ಗಮನಿಸಬೇಕಾಗಿದೆ.

2011ನೇ ಸಾಲಿನ ನೇಮಕಾತಿ ಸಂದರ್ಭದಲ್ಲಿ ಗೋನಾಳ್ ಭೀಮಪ್ಪ ಆಯೋಗದ ಅಧ್ಯಕ್ಷರಾಗಿದ್ದರೆ ಎನ್.ರಾಮಕೃಷ್ಣ, ಬಿ.ಎಸ್. ಕೃಷ್ಣ ಪ್ರಸಾದ್, ಎಂ.ಮಹದೇವ್, ಡಾ.ಎಚ್.ಡಿ. ಪಾಟೀಲ, ಎಸ್.ಆರ್. ರಂಗಮೂರ್ತಿ, ಎಸ್. ದಯಾಶಂಕರ್, ಬಿ.ಪಿ.
ಕನ್ನೀರಾಮ, ಡಾ.ಎಚ್.ವಿ. ಪಾಶ್ವಾನಾಥ್ ಹಾಗೂ ಡಾ. ಮಂಗಳಾ ಶ್ರೀಧರ್ ಅವರು ಆಯೋಗದ ಸದಸ್ಯರಾಗಿದ್ದರು. ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯಲ್ಲಿ ನಡೆಯುವ ರಾಜಕಾರಣ, ಜಾತಿ, ವರ್ಗ, ಹಣದ ಆಮಿಷಗಳು ಈ ಭ್ರಷ್ಟಾಚಾರಕ್ಕೆ
ಪ್ರಮುಖ ಕಾರಣಗಳು. ಕೆಪಿಎಸ್‌ಸಿಯಲ್ಲಿ ಪಾರದರ್ಶಕತೆ ಎಂಬ ನಿಯಮಗಳಿಗೆ ಬೆಲೆಯೇ ಇಲ್ಲ.

2011 ಮಾತ್ರವಲ್ಲದೇ 1998, 1999, 2004 ಮತ್ತು 2015ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿಯಲ್ಲೂ
ವ್ಯಾಪಕ ಅಕ್ರಮ ನಡೆದಿತ್ತು. ನಿರಂತರ ಅಕ್ರಮ ಮತ್ತು ಅವ್ಯವಹಾರಗಳಿಗೆ ಹೆಸರಾಗಿರುವ ಕೆಪಿಎಸ್‌ಸಿಯನ್ನು ರದ್ದುಪಡಿಸುವುದೇ ಸೂಕ್ತ ಎಂದು ಹೈಕೋರ್ಟ್ ಮತ್ತು  ಸಿಐಡಿ ಅಭಿಪ್ರಾಯಪಟ್ಟಿದ್ದೂ ಇದೆ. ಕೆಪಿಎಸ್‌ಸಿ ಅಕ್ರಮಗಳನ್ನು ತಡೆಗಟ್ಟಲು ಕೇಂದ್ರ ಲೋಕ ಸೇವಾ ಆಯೋಗದ ನಿವೃತ್ತ ಅಧ್ಯಕ್ಷರಾಗಿದ್ದ ಪಿ.ಸಿ. ಹೂಟಾ ನೇತೃತ್ವದಲ್ಲಿ ಒಂದು ಸಮಿತಿಯನ್ನು ಜುಲೈ 26,
2013ರಂದು ರಚಿಸಲಾಗಿದ್ದು, ಆ ಸಮಿತಿಯು ಕೆಪಿಎಸ್‌ಸಿ ಸುಧಾರಣೆಗಾಗಿ ಕೆಲವು ಮಹತ್ತರ ಶಿಫಾರಸುಗಳನ್ನು ಮಾಡಿತ್ತು.

ಆದರೆ ಆ ಶಿಫಾರಸನ್ನು ಪೂರ್ಣ ಪ್ರಮಾಣದಲ್ಲಿ ಸರಕಾರ ಜಾರಿಗೊಳಿಸಿಲ್ಲ. ಕೆಪಿಎಸ್‌ಸಿ ನಡೆಸುವ ಬಹುತೇಕ ಎಲ್ಲಾ
ನೇಮಕಾತಿಗಳೂ ಗೊಂದಲಗಳಲ್ಲಿಯೇ ನಡೆಯುತ್ತಿದೆ. ಮಾಡಬೇಕಾದ ಕೆಲಸವನ್ನೆ ಬಿಟ್ಟು ಮಾಡಬಾರದ್ದನ್ನೆ ಮಾಡುವ ಸಂಸ್ಥೆಗೆ ಕೆಪಿಎಸ್‌ಸಿ ಎನ್ನಬಹುದು. ಪರೀಕ್ಷೆಗಳ ಹಿಂದಿನ ದಿನ ಪ್ರಶ್ನೆ ಪತ್ರಿಕೆಗಳ ಸೋರಿಕೆಯಾಗಿ ಅಭ್ಯರ್ಥಿಗಳ ಕೈಸೇರುತ್ತದೆ ಎಂದರೆ ಇಲ್ಲಿ
ಭ್ರಷ್ಟರ ದೊಡ್ಡ ಕೂಟವೇ ಇದೆ ಎನ್ನುವುದು ಸತ್ಯ.

ಗೆಜೆಟೆಡ್ ಪ್ರೊಬೇಷನರಿ ಉನ್ನತ ಹುದ್ದೆಯ ಕೃಪಕಟಾಕ್ಷಕ್ಕೆ ಕೋಟಿಗಳ ಲೆಕ್ಕದಲ್ಲಿ ಡೀಲ್ ನಡೆಯುತ್ತದೆ. ಈ ಆಯೋಗ ಕೇವಲ ಲಂಚಾವತಾರಕ್ಕೆ ಹೆಸರುವಾಸಿಯಲ್ಲ. ಹೊಸ ನೆಂಟಸ್ತಿಕೆಯ ವಧು-ವರರ ವೇದಿಕೆಯೂ ಹೌದು. ಕೆಪಿಎಸ್‌ಸಿ ಅಕ್ರಮದ ತನಿಖೆ ಯಲ್ಲಿ ತಿಳಿದು ಬಂದ ಕುತೂಹಲಕಾರಿ ಅಂಶವೆನೆಂದರೆ ಅಧಿಕಾರಿಗಳು, ಪ್ರಭಾವಿಗಳು, ಏಜೆಂಟರು ಸೂಚಿಸುವ ವಧುವನ್ನು
ಮದುವೆಯಾಗಲು ಒಪ್ಪಿಗೆ ಸೂಚಿಸಿದರೆ ಪುರುಷ ಅಭ್ಯರ್ಥಿಗಳಿಗೆ ಉದ್ಯೋಗ ಪಕ್ಕಾ. ಸಂದರ್ಶನದಲ್ಲಿ ಹೆಚ್ಚಿನ ಅಂಕಗಳು ಲಭಿಸಿ ಆಯ್ಕೆ ಪಟ್ಟಿಯಲ್ಲಿ ಹೆಸರು ಸೇರಿಕೊಳ್ಳುತ್ತದೆ ಎಂಬುದು ಜಗಜ್ಜಾಹೀರಾಗಿದೆ.

ಇದು ಉದ್ಯೋಗಕ್ಕಾಗಿ ಲಂಚದ ಪ್ರಕರಣದಂತೆ ಮದುವೆಗಾಗಿ ಉದ್ಯೋಗದ ಯೋಜನೆಯಾಗಿದೆ. ಇದನ್ನು ಕೆಪಿಎಸ್ಸಿಯ
ಮಾಂಗಲ್ಯ ಭಾಗ್ಯ’ ಯೋಜನೆ ಎನ್ನಬಹುದು. ಗೆಜೆಟೆಡ್ ಪ್ರೊಬೇಷನರಿ ಉದ್ಯೋಗದ ಕನಸು ಹೊತ್ತ ಅಭ್ಯರ್ಥಿಗಳಲ್ಲಿ ಹಲವು ವರ್ಷಗಳ ಕಠಿಣ ಪರಿಶ್ರಮವಿರುತ್ತದೆ. ದಿನದ 18 ಗಂಟೆಗಳನ್ನು ಅಧ್ಯಯನದಲ್ಲಿ ತೊಡಗಿಸಿಕೊಂಡು ಪರೀಕ್ಷಾ ಸಿದ್ದತೆ
ಮಾಡುತ್ತಾರೆ. ಕಡುಬಡತನದ ಹಿನ್ನೆಲೆಯ ಅಭ್ಯರ್ಥಿಗಳು ಪಡೆಯುವ ಒಂದೊಂದು ಅಂಕದ ಹಿಂದೆ ಅಪಾರ ಪರಿಶ್ರಮವಿದೆ.

ಕೆಲವು ಅಭ್ಯರ್ಥಿಗಳು ಒಂದರ ನಂತರ ಇನ್ನೊಂದು ಪರೀಕ್ಷೆಗೆ ಅಣಿಯಾಗುತ್ತಲೇ ಇರುತ್ತಾರೆ. ಕೆಲವು ಪೋಷಕರು ತಮ್ಮ ದಿನಗೂಲಿ ಸಂಪಾದನೆಯ ಒಂದು ಪಾಲನ್ನು ತನ್ನ ಮಗ/ಮಗಳ ಅಧ್ಯಯನಕ್ಕೆ ಮೀಸಲಿಟ್ಟು ಓದಿಸುವ ನಿದರ್ಶನಗಳೂ
ಇವೆ. ಇಂತಹ ಪರಿಸ್ಥಿತಿಯನ್ನು ಎದುರಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ನ್ಯಾಯವೆಲ್ಲಿ? ವಯಸ್ಸಿನ ಮಿತಿ ಮೀರುವ ಹಂತದಲ್ಲಿದ್ದ 2011ನೇ ಸಾಲಿನ ಹಲವು ಪರೀಕ್ಷಾರ್ಥಿಗಳು ಶಕ್ತಿ ಮೀರಿ ಪ್ರಯತ್ನಿಸಿ ಉದ್ಯೋಗ ಪಡೆದೇ ತೀರುತ್ತೇವೆ ಎಂದು ಹಗಲು-ರಾತ್ರಿ ಅಧ್ಯಯನ ಮಾಡಿ ಈ ರೀತಿಯ ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳ ಮಾನಸಿಕ ವೇದನೆಯನ್ನು ಅರಿಯದಾಯಿತೇ ಈ ಸರಕಾರ?.

ಇವುಗಳನ್ನೆ ಕಡೆಗಣಿಸಿ ಕೆಪಿಎಸ್‌ಸಿಯ ಪರಮ ಭ್ರಷ್ಟರನ್ನು ರಕ್ಷಿಸಲು ಮುಂದಾಗಿರುವುದು ಸರಿಯಲ್ಲ. ಇಷ್ಟೆ ಭ್ರಷ್ಟಾಚಾರ, ಅವ್ಯವಸ್ಥೆ, ಗೊಂದಲಗಳಿಂದ ಕುಖ್ಯಾತಿಗೆ ಒಳಗಾದ ಕರ್ನಾಟಕ ಲೋಕ ಸೇವಾ ಆಯೋಗದ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಕೆಂಪು ಬಣ್ಣದ ಚಲಿಸುವ ಅಕ್ಷರಗಳಲ್ಲಿ ಕಂಡು ಬರುವ ಎಚ್ಚರಿಕೆ…! ಆಯೋಗದ ವಿವಿಧ ನೇಮಕಾತಿಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಎಚ್ಚರಿಸುವುದೇನೆಂದರೆ, ಅವರುಗಳು ಯಾವುದೇ ಮಧ್ಯವರ್ತಿಗಳು, ಏಜೆಂಟ್‌ಗಳು, ಆಯೋಗದ ಅಧಿಕಾರಿ/ಸಿಬ್ಬಂದಿಗಳು ಅಥವಾ ಅನ್ಯವ್ಯಕ್ತಿಗಳ ಮುಖಾಂತರ ವಾಮಮಾರ್ಗದಲ್ಲಿ ಹಣಕಾಸು ನೀಡುವ ಮೂಲಕ ಆಯ್ಕೆ ಹೊಂದಲು ಪ್ರಯತ್ನಿಸಿದಲ್ಲಿ ಅಂತಹ ಅಭ್ಯರ್ಥಿಗಳು, ಆಯೋಗದ ಅಧಿಕಾರಿ/ಸಿಬ್ಬಂದಿಗಳು ಹಾಗೂ ಅನ್ಯವ್ಯಕ್ತಿಗಳ ವಿರುದ್ಧ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂಬ ಸಂದೇಶವನ್ನು ಹಾಕಿರುವುದು ಏತಕ್ಕಾಗಿ ಎಂಬುದೇ ಅರ್ಥವಾಗದ ವಿಚಾರ.

ಸರಕಾರ ಈಗ ತೆಗೆದುಕೊಂಡ ನಿಲುವು ಆ ಎಚ್ಚರಿಕೆಯ ವಿಡಂಬನೆಯಲ್ಲವೇ?