Friday, 13th December 2024

ಮೇಲ್ಮನೆಗೆ ಇರಲಿ ಹಿರಿತನದ ಛಾಯೆ

ಅಶ್ವತ್ಥಕಟ್ಟೆ

ರಂಜಿತ್ ಎಚ್.ಅಶ್ವತ್ಥ

ranjith.hoskere@gmail.com

ಮೂರು ರಾಜಕೀಯ ಪಕ್ಷಗಳು, ತಮ್ಮ ಬಲಾಬಲವನ್ನು ಹೆಚ್ಚಿಸಿಕೊಳ್ಳಲು ನಡೆಸುವ ಕಸರತ್ತನ್ನು ತಡೆಯಲು ಸಾಧ್ಯವಿಲ್ಲ. ಆದರೆ ತಾಕತ್ತು ಪ್ರದರ್ಶನದ ನೆಪದಲ್ಲಿ, ಪರಿಷತ್‌ಗೆ ಆಯ್ಕೆಯಾಗಲು ಅಭ್ಯರ್ಥಿಗೆ ಇರುವ ಕನಿಷ್ಠ ಮಾನದಂಡಗಳನ್ನಾದರೂ ಪೂರೈಸಲಿ.

ರಾಜ್ಯದಲ್ಲಿ ಉಪಚುನಾವಣೆಯ ಬೆನ್ನಲ್ಲೇ, ಮತ್ತೊಂದು ಚುನಾವಣೆ ಎದುರಾಗಿದೆ. ವಿಧಾನಪರಿಷತ್‌ಗೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ಚುನಾವಣೆಗೆ ವೇದಿಕೆ ಸಜ್ಜಾಗಿದೆ. ಮೂರು ರಾಜಕೀಯ ಪಕ್ಷಗಳು ತಮ್ಮ ತಮ್ಮ ರಾಜಕೀಯ ಮೇಲಾಟವನ್ನು ತೋರಿಸಲು, ವಿಧಾನಪರಿಷತ್‌ನಲ್ಲಿ ತಮ್ಮ ಪಕ್ಷಕ್ಕೆ ಬಹುಮತ ಪಡೆಯಲು ಅಥವಾ ಸಂಖ್ಯೆ ಹೆಚ್ಚಿಸಿಕೊಳ್ಳಲು ಈ ಚುನಾವಣೆ ಅತ್ಯಗತ್ಯವಾಗಿದೆ.

ಆದರೆ ‘ಚಿಂತಕರ ಚಾವಡಿ’ ಎನ್ನುವ ಪರಿಷತ್ ಚುನಾವಣೆಗಳು, ವಿಧಾನಸಭಾ ಚುನಾವಣೆಗಳಿಗಿಂತ ಭಿನ್ನವಾಗಿಲ್ಲ ಎನ್ನುವುದು ಅನೇಕರ ಚಿಂತೆಗೆ ಗ್ರಾಸ ವಾಗಿರುವುದಂತೂ ಸತ್ಯ. ಹೌದು, ಸದ್ಯ 25 ಸ್ಥಾನಗಳಿಗೆ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆ ಮಾತ್ರವಲ್ಲ, ಇತ್ತೀಚಿಗೆ ಮೇಲ್ಮನೆಗೆ ಆಯ್ಕೆಯಾಗುವ ಬಹುತೇಕ ಸದಸ್ಯರ ಮಾನದಂಡ ‘ರಾಜಕೀಯ ಹಿತಾಸಕ್ತಿ’ಯಾಗಿರುತ್ತದೆ. ಆದರೆ ಮೇಲ್ಮನೆ ಆರಂಭಿಸಿದ್ದು, ಈ ರೀತಿ ರಾಜಕೀಯ ಕಾರಣಕ್ಕಾಗಿ ಅಲ್ಲವೇ ಅಲ್ಲ. ಬದಲಿಗೆ ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದ ಕಾಯಿದೆ, ಕಾನೂನು, ನಿರ್ಧಾರಗಳನ್ನು ತಗೆದುಕೊಂಡಾಗ, ಕೆಳಮನೆ (ವಿಧಾನಸಭೆ)ಯಲ್ಲಿ ಪಕ್ಷಾಧಾರಿತ ಅಥವಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆದು ಹೋಗುತ್ತದೆ. ಆದರೆ ಸಮಗ್ರ ರಾಜ್ಯದ ದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು, ಒಳಿತು- ಕೆಡಕು, ಸಾಧಕ-ಬಾಧಕದ ಬಗ್ಗೆ ಚರ್ಚಿಸಲು ಅಲ್ಲಿ ಸಾಧ್ಯವಾಗುವುದಿಲ್ಲ.

ಆದ್ದರಿಂದ ಈ ಎಲ್ಲ ಕೋನವನ್ನು ಚರ್ಚಿಸಲು, ವಿಷಯ ತಜ್ಞರನ್ನು ಆಯ್ಕೆ ಮಾಡಲು ಹಾಗೂ ಒಂದೊಂದು ಕ್ಷೇತ್ರದಿಂದ ಒಂದಿಷ್ಟು ಜನರನ್ನು ಶಾಸಕಾಂಗ ದಲ್ಲಿ ಸೇರಿಸ ಬೇಕು ಎನ್ನುವ ಕಾರಣಕ್ಕೆ ಮೇಲ್ಮನೆಯನ್ನು ಆರಂಭಿ ಸಿದ್ದು. ಮೈಸೂರು ಅರಸರ ದೂರದೃಷ್ಟಿಯಿಂದ ಆರಂಭಗೊಂಡ ಈ ಪರಿಷತ್, ಇದೀಗ ವಿಷಯಾ ಧಾರಿತ ಚರ್ಚೆ ಗಿಂತ, ರಾಜಕೀಯ ಚರ್ಚೆ ಅಥವಾ ರಾಜಕೀಯ ಪಕ್ಷಗಳ ಜಟಾಪಟಿಯ ತಾಣವಾಗಿದೆ. ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ 25 ಕ್ಷೇತ್ರಗಳ ಚುನಾವಣೆಗಳು, ವಿಧಾನಸಭಾ ಚುನಾವಣೆಗಿಂತ ಭಿನ್ನವಾಗಿರುವುದಿಲ್ಲ ಎನ್ನುವುದು ಅನೇಕ ರಾಜಕೀಯ ಪಂಡಿತರ ಮಾತಾಗಿದೆ.

ಇದಿಷ್ಟೇ ಅಲ್ಲದೇ, ಈ ಪರಿಷತ್ ಚುನಾವಣೆ ಮುಂದಿನ ವಿಧಾನಸಭೆಯ ಚುನಾವಣೆಯ ದಿಕ್ಸೂಚಿ ಎನ್ನುವ ಮಾತುಗಳನ್ನು ಹೇಳುತ್ತಿರುವುದರಿಂದ, ಸಹಜ ವಾಗಿಯೇ ಈ ಚುನಾವಣೆ ಮೇಲ್ಮನೆ ಚುನಾವಣೆಯಾಗಿ ಉಳಿಯದೇ, ‘ರಾಜಕೀಯ ಪಕ್ಷಗಳ’ ಮೇಲಾಟಕ್ಕೆ ಸೀಮಿತವಾಗುತ್ತಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಇದು ಕೇವಲ ಈ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ಚುನಾವಣೆಗೆ ಸೀಮಿತವಾಗಿಲ್ಲ. ಶಿಕ್ಷಕರ ಕ್ಷೇತ್ರದಿಂದ, ಪದವೀಧರ ಕ್ಷೇತ್ರದಿಂದ ಆಯ್ಕೆ ಯಾಗುವ ಚುನಾವಣೆ ಯಾವ ವಿಧಾನಸಭಾ ಚುನಾವಣೆಗೂ ಕಡಿಮೆಯಿಲ್ಲ.

ಶಿಕ್ಷಕರ ಪ್ರತಿನಿಽಯಾಗಿ ಆಯ್ಕೆಯಾಗಲು ಬಯಸುವವರು ಸಕಲ ‘ಖರ್ಚ’ನ್ನು ಮಾಡುತ್ತಿದ್ದಾರೆ ಎನ್ನುವ ಆರೋಪ ಇದೀಗ ರಾಜಕೀಯ ವಲಯದಲ್ಲಿ ಓಪನ್ ಸಿಕ್ರೇಟ್ ಆಗಿ ಉಳಿದಿದೆ. ಇನ್ನು ವಿವಿಧ ಕ್ಷೇತ್ರಗಳಿಂದ ನಾಮನಿರ್ದೇಶನಗೊಳ್ಳುವ ಪ್ರಕ್ರಿಯೆಯೂ ಸಂಪೂರ್ಣ ರಾಜಕೀಯವಾಗಿ ಹೋಗಿದೆ. ಕೆಲ ದಿನಗಳ ಹಿಂದೆ ಬಿಜೆಪಿ ನಾಯಕರೊಬ್ಬರೊಂದಿಗೆ ಮಾತನಾಡುತ್ತಿದ್ದಾಗ, ‘ತುರ್ತಾಗಿ ಎರಡು ಪುಸ್ತಕ ನನ್ನ ಹೆಸರಲ್ಲಿ ಬರಬೇಕು ನೋಡಿ’ ಎಂದು ಹೇಳಿದರು. ಅದಕ್ಕೆ ಕಾರಣವನ್ನು ಕೇಳಿದಾಗ, ‘ಮುಂದಿನ ಬಾರಿ ಸಾಹಿತ್ಯ ಕ್ಷೇತ್ರದಲ್ಲಿ ಎಂಎಲ್‌ಸಿ ಸೀಟು ಕೇಳಬಹುದಲ್ಲವೇ’ ಎನ್ನುವ ಉತ್ತರವನ್ನು ನೀಡಿದರು.

ಹಾಗಾದರೆ ಸಾಹಿತ್ಯ ಕ್ಷೇತ್ರದಿಂದ ಆಯ್ಕೆಯಾಗುವ ಅಥವಾ ನಾಮನಿರ್ದೇಶನಗೊಳ್ಳುವ ಪರಿಷತ್ ಸದಸ್ಯ, ಸಾಹಿತ್ಯ ರಚಿಸಿದ್ದು ಎಂಎಲ್‌ಸಿ ಸ್ಥಾನ ಪಡೆಯುವು ದಕ್ಕೆ ಎನ್ನಬಹುದೇ? ಎನ್ನುವ ಪ್ರಶ್ನೆಗಳು ಉದ್ಭವಿಸುತ್ತವೆ. ಇದಕ್ಕೆ ತಾಜಾ ಉದಾಹರಣೆ ನೀಡುವುದಾದರೆ, ಮೈತ್ರಿ ಸರಕಾರ ಪತನವಾಗಲು ಪ್ರಮುಖ ಪಾತ್ರ
ವಹಿಸಿದ್ದ ಎಚ್.ವಿಶ್ವನಾಥ್ ಉಪಚುನಾವಣೆಯಲ್ಲಿ ಸೋತಾಗ ಅವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಬಿಜೆಪಿ ನಾಯಕರು ಅವರನ್ನು ಸಾಹಿತ್ಯ ಕೋಟದಲ್ಲಿ ಅಲ್ಲವೇ ಪರಿಷತ್ ಸದಸ್ಯರನ್ನಾಗಿ ಮಾಡಿದ್ದು. ಅವರು ಬರೆದಿರುವ ಒಂದೆರೆಡು ಕೃತಿಗಳನ್ನು ತೋರಿಸಿ ಸಾಹಿತ್ಯ ಕೋಟದಲ್ಲಿ ಸ್ಥಾನ ನೀಡುವುದಾದರೆ, ಅದರಿಂದ ಸಾಹಿತ್ಯ ಕ್ಷೇತ್ರಕ್ಕೆ ನಿಜಕ್ಕೂ ಸಹಾಯವಾಗುವುದೇ? ಎನ್ನುವ ಪ್ರಶ್ನೆಗಳಿಗೆ ರಾಜಕೀಯ ಪಕ್ಷಗಳ ಬಳಿ ಉತ್ತರವಿಲ್ಲ.

ಮೊದಲೇ ಹೇಳಿದಂತೆ ಪರಿಷತ್ ಅನ್ನು ಸ್ಥಾಪಿಸಿರುವುದೇ ರಾಜ್ಯದ ಸಮಸ್ಯೆಗಳ ಬಗ್ಗೆ ವಿಷಯಾಧಾರಿತವಾಗಿ ಚರ್ಚಿಸಲು ಪಕ್ಷಾತೀತ ವೇದಿಕೆಯನ್ನು ಶಾಸಕಾಂಗ ದಲ್ಲಿ ಸೃಷ್ಟಿಸಬೇಕು ಎನ್ನುವ ಕಾರಣಕ್ಕೆ. ಇಲ್ಲಿ ಪಕ್ಷಾಧಾರಿತ ಚರ್ಚೆಗಿಂತ ಹೆಚ್ಚು ವಿಷಯಾಧಾರಿತ ಚರ್ಚೆಗಳು ನಡೆಯಬೇಕು. ಪರಿಷತ್ ಇತಿಹಾಸದಲ್ಲಿ, ಆಡಳಿತ ಪಕ್ಷದ ಸದಸ್ಯರೇ ಸರಕಾರ ನಿಲುವನ್ನು ಖಂಡಿಸಿರುವ, ವಿರೋಽಸಿರುವ ಘಟನೆಗಳು ನಮ್ಮ ಮುಂದಿವೆ. ಆದರೆ ಈಗ ಬದಲಾದ ಸನ್ನಿವೇಶನದಲ್ಲಿ ಪರಿಷತ್ ಎನ್ನುವುದು, ‘ಪುನರ್‌ವಸತಿ’ ಕೇಂದ್ರವಾಗಿ ಬದಲಾಗುತ್ತಿದೆಯೇ ಎನ್ನುವ ಪ್ರಶ್ನೆಗಳು ಶುರುವಾಗಿದೆ.

ಮೇಲ್ಮನೆಯ ಸದಸ್ಯರು ಮೇಲ್ಪಂಕ್ತಿಯಲ್ಲಿ ಇರಬೇಕು. ಆದರೆ ಇತ್ತೀಚಿಗೆ ಅಲ್ಲಿ ನಡೆಯುತ್ತಿರುವ ಚರ್ಚೆಗಳು ರಾಜಕೀಯಕ್ಕೆ ಸೀಮಿತವಾಗುತ್ತಿವೆ. ಪ್ರತಿಪಕ್ಷ ಎನ್ನುವ ಕಾರಣಕ್ಕೆ, ಸರಕಾರದ ಕಾಯಿದೆಯನ್ನು ವಿರೋಽಸುವ ಅಥವಾ ಆಡಳಿತ ಪಕ್ಷ ಎನ್ನುವ ಕಾರಣಕ್ಕೆ ಅದನ್ನು ಒಪ್ಪುವ ಸ್ಥಿತಿಗೆ ಪರಿಷತ್ ಸದಸ್ಯರು ಹೋಗಿದ್ದಾರೆ. ಇನ್ನು ಚುನಾವಣೆಯಲ್ಲಿ ಸೋತ ಅಭ್ಯರ್ಥಿಗೆ ‘ರಾಜಕೀಯ ಹುಟ್ಟಿಗೆ’ ಸಹಾಯವಾಗುವ ರೀತಿಯಲ್ಲಿ ಅಥವಾ ರಾಜಕೀಯದ ನಿವೃತ್ತ ಜೀವನಕ್ಕೆ ಮೊದಲು,
ಪರಿಷತ್‌ ನಲ್ಲಿ ಒಮ್ಮೆ ಸದಸ್ಯರಾಗಿ ಬಳಿಕ ನಿವೃತ್ತಿ ಹೊಂದುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ಪಕ್ಷಗಳು ಮೇಲ್ಮನೆಯನ್ನು ತಮ್ಮ ರಾಜಕೀಯ ಪ್ರತಿಷ್ಠೆಗೆ ಇರುವ ಮತ್ತೊಂದು ವೇದಿಕೆ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ಒಳ್ಳೆಯದಲ್ಲ. ಇದು ಕೇವಲ ವಿಧಾನಪರಿಷತ್ ಸಮಸ್ಯೆಯಲ್ಲ. ರಾಜ್ಯಸಭೆಯೂ ಇದೇ ರೀತಿಯಲ್ಲಿ ಆಗುತ್ತಿದೆ. ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಸಿನಿಮಾದ ಹೆಸರಲ್ಲಿ ನಾಮ ನಿರ್ದೇಶನಗೊಳ್ಳುವ ಸದಸ್ಯರು, ಆ ಕ್ಷೇತ್ರಕ್ಕಿಂತ ಹೆಚ್ಚಾಗಿ ರಾಜಕೀಯದಲ್ಲಿಯೇ ಹೆಸರು ಮಾಡಿರುತ್ತಾರೆ. ಇನ್ನು ಕೆಲವೊಮ್ಮೆ ಆ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರನ್ನು ಕಳುಹಿಸಿದರೆ,
ಅವರು ಎಂದಿಗೂ ಸದನದ ಕಡೆಯೇ ತಲೆ ಹಾಕದೇ, ಆರು ವರ್ಷ ಪೂರೈಸಿ ‘ಮಾಜಿ ಸದಸ್ಯ’ ಎಂದು ಕರೆಸಿಕೊಳ್ಳುವುದಕ್ಕೆ ಸೀಮಿತವಾಗುತ್ತಾರೆ (ಉದಾ: ಕ್ರೀಡಾ ಕ್ಷೇತ್ರದಿಂದ ರಾಜ್ಯಸಭೆಗೆ ಆಯ್ಕೆಯಾದ ಸಚಿನ್ ತೆಂಡೂಲ್ಕರ್ ಆರು ವರ್ಷದಲ್ಲಿ ಒಂದೆರೆಡು ಭಾರಿ ಮಾತ್ರ ರಾಜ್ಯಸಭೆಗೆ ಹೋಗಿದ್ದು.) ಇನ್ನು ಮೇಲ್ಮನೆ ಆಯ್ಕೆ ವೇಳೆ ‘ಸಾಮಾಜ ಸೇವೆ’ ಎನ್ನುವ ಕೋಟ ಒಂದಿದೆ. ಈ ಸಮಾಜ ಸೇವೆ ಎಂದರೇನು? ಅದಕ್ಕಿರುವ ಆಳ-ಅಗಲವೇನು ಎನ್ನುವುದು ಇಲ್ಲಿಯವರೆಗೆ ಯಾರಿಗೂ ತಿಳಿದಿಲ್ಲ.

ಹಾಗೇ ನೋಡಿದರೆ ಕರ್ನಾಟಕ ವಿಧಾನಪರಿಷತ್‌ನಲ್ಲಿ ಈ ಹಿಂದೆ ಹಲವು ಸಾಧಕರು ಸದಸ್ಯರಾಗಿ ಇರುವುದು ನೋಡಿದ್ದೇವೆ. ಸಾಹಿತ್ಯ ಕ್ಷೇತ್ರದಿಂದ ಸಿದ್ದಲಿಂಗಯ್ಯ, ದೊಡ್ಡರಂಗೇಗೌಡ ಸೇರಿದಂತೆ ಹಲವು ಹಿರಿಯ ಸಾಹಿತಿಗಳನ್ನು ಕಂಡಿರುವ ಪರಿಷತ್, ಈಗ ಅದೇ ಕ್ಷೇತ್ರದಲ್ಲಿ ಫುಲ್ ಟೈಮ್ ರಾಜಕಾರಣಿ ಯನ್ನು ಕಾಣುವ ಸ್ಥಿತಿಯನ್ನು ತಲುಪಿದೆ. ಕೇವಲ ಅವರಷ್ಟೇ ಅಲ್ಲದೇ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಹಲವು ಸಾಧಕರು ಪರಿಷತ್‌ಗೆ ಆಯ್ಕೆಯಾಗಿದ್ದು ನೋಡಿದ್ದೇವೆ.
ಶಿಕ್ಷಣ ಕ್ಷೇತ್ರದಿಂದ ಎಂ.ಆರ್. ದೊರೆಸ್ವಾಮಿ, ಪತ್ರಿಕೋದ್ಯಮದ ದೊಡ್ಡ ಹೆಸರಾದ ಶ್ಯಾಮರಾವ್, ಪಿ. ರಾಮಯ್ಯ ಸೇರಿದಂತೆ ಅನೇಕರು ಪರಿಷತ್‌ಗೆ ಬಂದು ಹೋಗಿದ್ದಾರೆ.

ಮೈಸೂರು ಅರಸರು ಆರಂಭಿಸಿದ ವಿಧಾನಪರಿಷತ್‌ಗೆ ತನ್ನದೇಯಾದ ಘನತೆಯಿದೆ. ರಾಜಕೀಯ ಪಕ್ಷಗಳು ಇದನ್ನು ಅರ್ಥ ಮಾಡಿಕೊಳ್ಳುವ ಅನಿವಾರ್ಯತೆ ಯಿದೆ. ಮೂರು ರಾಜಕೀಯ ಪಕ್ಷಗಳು, ತಮ್ಮ ಬಲಾಬಲವನ್ನು ಹೆಚ್ಚಿಸಿಕೊಳ್ಳಲು ನಡೆಸುವ ಕಸರತ್ತನ್ನು ತಡೆಯಲು ಸಾಧ್ಯವಿಲ್ಲ. ಆದರೆ ತಾಕತ್ತು ಪ್ರದರ್ಶನದ ನೆಪದಲ್ಲಿ, ಪರಿಷತ್‌ಗೆ ಆಯ್ಕೆಯಾಗಲು ಅಭ್ಯರ್ಥಿಗೆ ಇರುವ ಕನಿಷ್ಠ ಮಾನದಂಡಗಳನ್ನು ಆದರೂ ಪೂರೈಸಲಿ. ಭಾರತದಲ್ಲಿಯೇ ವಿಶಿಷ್ಟ ಇತಿಹಾಸವಿರುವ ವಿಧಾನ ಪರಿಷತ್ ಅನ್ನು ದೇಶಕ್ಕೆ ಪರಿಚಯಿಸಿದ ಮೈಸೂರು ಒಡೆಯರಯ ಪರಿಕಲ್ಪನೆಗೂ ಇಂದು ನಡೆಯುತ್ತಿರುವ ವಿಧಾನಪರಿಷತ್‌ಗೂ ಅಜಗಜಾಂತಾರವಿದೆ ಎನ್ನುವು ದನ್ನು ಸ್ಪಷ್ಟ.

ಸಾರ್ವಜನಿಕ ವಲಯದಲ್ಲಿ ಈಗಾಗಲೇ ‘ಮೇಲ್ಮನೆಯ ಅಗತ್ಯವೇನು? ಅದರಿಂದ ಆಗುವ ಉಪಯೋಗವೇನು?’ ಎನ್ನುವ ಪ್ರಶ್ನೆಗಳು ಜೋರಾಗಿ ಕೇಳಿಬರುತ್ತಿದೆ. ಈ ಹಂತದಲ್ಲಿ ಆದರೂ, ವಿಧಾನಪರಿಷತ್ ಅನ್ನು ಹಿರಿಯರ, ಬುದ್ಧಿವಂತರ ಮನೆಯಾಗಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಶ್ರಮಿಸಬೇಕಿದೆ. ಇಲ್ಲವೇ ರಾಜಕೀಯಕ್ಕಾಗಿಯೇ ಈ ಮನೆಯನ್ನು ಬಳಸಿಕೊಂಡರೆ, ‘ಪರಿಷತ್ ಎನ್ನುವುದು ಮೇಲ್ಮನೆಯಾಗಿ ಉಳಿಯದೇ, ರಾಜಕೀಯ ಪುನರ್‌ವಸತಿ ಕೇಂದ್ರ’ ವಾಗುವುದರಲ್ಲಿ ಅನುಮಾನವೇ ಇಲ್ಲ.