Saturday, 14th December 2024

ಆರೋಗ್ಯಕ್ಕಾಗಿ ಮದ್ಯಪಾನ ವರ್ಜಿಸಿ, ಈಲಿ ರಕ್ಷಿಸಿ

ಸ್ವಾಸ್ಥ್ಯ ಸಂಪದ

ಡಾ.ಎಸ್.ಪಿ.ಯೋಗಣ್ಣ

yoganna55@gmail.com

ಮನುಷ್ಯನ ದೇಹ ಅಸಂಖ್ಯಾತ ಜೀವಕೋಶಗಳಿಂದಾಗಿದ್ದು, ಇವುಗಳ ಸಂಘಟಿತ ರಚನೆಯಿಂದ ಮೆದುಳು, ಈಲಿ(ಲಿವರ್), ಹೃದಯ, ಶ್ವಾಸಕೋಶ,
ಮೂತ್ರಜನಕಾಂಗ, ಸ್ನಾಯುಯುಕ್ತ ಅಸ್ಥಿಪಂಜರ ಇತ್ಯಾದಿ ರಚನೆಗಳಾಗಿವೆ.

ಇವೆಲ್ಲವೂ ರಾಸಾಯನಿಕ ವಸ್ತುಗಳಿಂದಲೇ ಮಾಡಲ್ಪಟ್ಟವುಗಳಾಗಿದ್ದು, ದೇಹದಲ್ಲಿ ಜರುಗುವ ಎಲ್ಲ ದೈಹಿಕ, ಮಾನಸಿಕ ಕ್ರಿಯೆಗಳೆಲ್ಲವುಗಳ ಹಿಂದೆ
ನಿರ್ದಿಷ್ಟ ರಾಸಾಯನಿಕ ಕ್ರಿಯೆಗಳಿರುತ್ತವೆ. ಮನುಷ್ಯನ ದೇಹ ಜೈವಿಕ ರಾಸಾಯನಿಕ ಕ್ರಿಯೆಗಳ ಉಗ್ರಾಣ. ಈಲಿ ದೇಹದ ಪ್ರಮುಖ ಜೈವಿಕ ಕಾರ್ಖಾನೆ ಯಂತಿದ್ದು, ದೇಹಕ್ಕೆ ಅಗತ್ಯವಿರುವ ಆಹಾರದಿಂದ ಲಭಿಸದ ಪೌಷ್ಟಿಕಾಂಶಗಳನ್ನು ಉತ್ಪತ್ತಿ ಮಾಡುವುದಲ್ಲದೇ ದೇಹದೊಳಗೆ ಉತ್ಪತ್ತಿಯಾಗುವ ವಿಷಮ ವಸ್ತುಗಳನ್ನು ನಿಷ್ಕ್ರಿಯಗೊಳಿಸಿ ಹೊರದೂಡುವ ಪ್ರಮುಖ ಕಾರ್ಯ ವನ್ನು ನಿರ್ವಹಿಸುತ್ತದೆ. ಆಹಾರದ ಜೀರ್ಣಕ್ರಿಯೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.

ಹಾಗಾಗಿ ಈಲಿ ದೇಹದ ಅತ್ಯಂತ ಪ್ರಮುಖ ಜೀವಾಂಗವಾಗಿದ್ದು, ಅದನ್ನುಆರೋಗ್ಯ ಕರವಾಗಿಟ್ಟುಕೊಳ್ಳುವುದು ಅತ್ಯವಶ್ಯಕ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಏಪ್ರಿಲ್ ೧೯ರಂದು ಎಲ್ಲೆಡೆ ‘ವಿಶ್ವ ಈಲಿ ದಿನ’ವನ್ನಾಗಿ ಆಚರಿಸು ತ್ತಿದ್ದು, ಅಂದಿನಿಂದ ವರ್ಷಪೂರ್ತಿ ಈಲಿಯ ರಚನೆ, ಅದರ ಕಾರ್ಯಗಳು, ಕಾಯಿಲೆಗಳು, ಅದನ್ನು ಆರೋಗ್ಯ ವಾಗಿಟ್ಟುಕೊಳ್ಳುವ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈಲಿಯ ಬಗ್ಗೆ ತಿಳಿವಳಿಕೆ ನೀಡುವ ಲೇಖನವಿದು.

ರಚನೆ ಮತ್ತು ಕಾರ್ಯಗಳು: ಈಲಿ ಅಥವಾ ಯಕೃತ್(ಲಿವರ್)ದೇಹದ ಉದರಗುಡಿಯ ಬಲ ಭಾಗದಲ್ಲಿರುವ ಪ್ರಮುಖ ಮೃದುವಾದ, ದೊಡ್ಡದಾದ ಜೀವಾಂಗ. ಇದು ಬಲ ಮತ್ತು ಎಡ ಎಂಬ ಎರಡು ಪ್ರಧಾನ ಹಾಲೆ (ಲೋಬ್)ಗಳನ್ನು ಒಳಗೊಂಡಿದ್ದು, ಪ್ರತಿಯೊಂದು ಹಾಲೆಯೂ ಹಲವಾರು ಕಿರುಹಾಲೆಗಳಾಗಿ(ಲಾಬ್ಯೂಲ್ಸ್) ಮತ್ತೊ ಮ್ಮೆ ಪುನರ್ ವಿಂಗಡಣೆಯಾಗಿವೆ. ಪ್ರತಿಯೊಂದು ಕಿರು ಹಾಲೆಯೂ ರಚನಾತ್ಮಕ ಮತ್ತು ಕಾರ್ಯಾತ್ಮಕ ವಾಗಿ ಪ್ರತ್ಯೇಕ ಘಟಕವಾಗಿದ್ದು, ರೋಗಗ್ರಸ್ತವಾದ ಸಂದರ್ಭಗಳಲ್ಲಿ ಇನ್ನಿತರ ಭಾಗಕ್ಕೆ ಹಾನಿಯಾಗದಂತೆ ಇವುಗಳನ್ನು ಸುಲಭವಾಗಿ ಪ್ರತ್ಯೇಕಿಸಿ ಹೊರತೆಗೆಯ ಬಹುದಾಗಿದೆ.

ಈಲಿ ವಿಶಿಷ್ಟ ಜೀವಕೋಶಗಳಿಂದ ರಚಿತವಾಗಿದ್ದು, ಇವುಗಳಿಂದ ಸುರಿಕೆಯಾಗುವ ಈಲಿರಸ(ಬೈಲ್ ಜ್ಯೂಸ್)ದ ರವಾನೆಗಾಗಿ ಈಲಿಯೊಳಗೆ ಪ್ರತ್ಯೇಕ
ಈಲಿರಸನಾಳ ವ್ಯವಸ್ಥೆ ಇದೆ. ಈ ರವಾನೆ ವ್ಯವಸ್ಥೆ ಯಿಂದ ಈಲಿರಸ ತಳಭಾಗದಲ್ಲಿರುವ ಗಾಲ್ ಬ್ಲಾಡರ್(ಈಲಿರಸಕೋಶ)ನಲ್ಲಿ ಶೇಖರಣೆಯಾಗಿ
ಅಗತ್ಯವಿದ್ದಾಗ ಪ್ರಧಾನ ಈಲಿರಸನಾಳದ ಮೂಲಕ ಸಣ್ಣಕರುಳಿಗೆ ರವಾನೆಯಾಗುತ್ತದೆ.

ಈಲಿಯ ಜೀವಕೋಶಗಳಲ್ಲಿ ಆಹಾರದಲ್ಲಿನ ಜಿಡ್ಡಿ ನಂಶಗಳನ್ನು ಜೀರ್ಣಿಸುವ ಈಲಿರಸ ಉತ್ಪತ್ತಿಯಾಗುತ್ತದೆ. ಕೆಂಪುರಕ್ತಕಣದ ಹೀಮ್ ನಾಶದಿಂದ
ಉಂಟಾದ ವಿಷಮವಸ್ತು ಬಿಲಿರ‍್ಯೂಬಿನ್ ಸಹ ಈಲಿಯಿಂದಲೇ ಹೊರದೂಡಲ್ಪಡುತ್ತದೆ. ಸಣ್ಣಕರುಳಿನಲ್ಲಿ ಜೀರ್ಣವಾದ ಪೌಷ್ಟಿಕಾಂಶಗಳನ್ನುಳ್ಳ ಅಶುದ್ಧ ರಕ್ತ ಈಲಿಯ ಮೂಲಕ ಹಾದು ಹೋಗುತ್ತದೆ. ಅಧಿಕವಾದ ಗ್ಲುಕೋಸ್ ಈಲಿಯಲ್ಲಿ ಗ್ಲೈಕೋಜಿನ್ ರೂಪದಲ್ಲಿ ಶೇಖರಣೆಯಾಗುತ್ತದೆ.

ರಕ್ತಗ್ಲುಕೋಸ್
ಕಡಿಮೆಯಾದಾಗ ಇಲ್ಲಿಂದ ಗ್ಲುಕೋಸ್ ರಕ್ತಕ್ಕೆ ಬಿಡುಗಡೆಯಾಗಿ ರಕ್ತ ಗ್ಲುಕೋಸ್ ಪ್ರಮಾಣ ನಿಯಂತ್ರಿತವಾಗುತ್ತದೆ. ದೇಹಕ್ಕೆ ಅಗತ್ಯರುವ ಅಮೈನಾಮ್ಲ ಗಳು, ಆಲ್ಬುಮಿನ್, ಆಂಟಿಬಾಡೀಸ್‌ಗಳಾದ ಗ್ಲಾಬ್ಯುಲಿನ್ ಇತ್ಯಾದಿ ಪ್ರೊಟೀನ್‌ಗಳು ಮತ್ತು ಹಾರ್ಮೋನ್‌ಗಳ ತಯಾರಿಕೆಗೆ ಅವಶ್ಯಕವಿರುವ ಪೂರ್ವಭಾವಿ ರಾಸಾಯನಿಕ ವಸ್ತುಗಳು ಇಲ್ಲಿ ತಯಾರಾಗುತ್ತವೆ. ದೇಹದಲ್ಲಿ ಉತ್ಪತ್ತಿಯಾಗುವ ವಿಷವಸ್ತು ಅಮೋನಿಯಾ, ಯೂರಿಯಾ ಆಗಿ ಇಲ್ಲಿ ಪರಿವರ್ತನೆ ಹೊಂದಿ ಮೂತ್ರಜನಕಾಂಗದ ಮೂಲಕ ಹೊರದೂಡಲ್ಪಡುತ್ತದೆ.

ರಕ್ತೋತ್ಪತ್ತಿ ಕ್ರಿಯೆ ಮತ್ತು ನಿರೋಧಕ ಶಕ್ತಿ ಸಾಮರ್ಥ್ಯದಲ್ಲಿಯೂ ಈಲಿ ಪ್ರಧಾನಪಾತ್ರ ವಹಿಸುತ್ತದೆ. ಆಹಾರದಲ್ಲಿ ಸೇವಿಸಿದ ಕೊಲೆಸ್ಟ್ರಾಲ್ ಜೊತೆಗೆ
ಈಲಿಯಲ್ಲಿಯೂ ಆಂತರಿಕ ಕೊಲೆಸ್ಟ್ರಾಲ್ ಉತ್ಪತ್ತಿಯಾಗುತ್ತದೆ. ಇದು ಹಾರ್ಮೋನ್‌ಗಳ ಉತ್ಪತ್ತಿಗೆ ಅತ್ಯವಶ್ಯಕ. ಅವಶ್ಯಕತೆಗಿಂತ ಹೆಚ್ಚಾಗಿ ಸೇವಿಸಿದ
ಶಕ್ತಿದಾಯಕ ಆಹಾರ ಪದಾರ್ಥಗಳು ಈಲಿಯಲ್ಲಿ ಜಿಡ್ಡಾಗಿ ಮತ್ತು ಗ್ಲೈಕೋಜಿನ್‌ಗಳಾಗಿ ಪರಿವರ್ತನೆಗೊಂಡು ದೇಹದಲ್ಲಿ ಶೇಖರಣೆಯಾಗುತ್ತವೆ.

ದೇಹದೊಳಗೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಮತ್ತು ರಕ್ತ ಹೆಪ್ಪುಗಟ್ಟಿಸುವ ಅಂಶಗಳೂ ಸಹ ಈಲಿಯಲ್ಲಿ ಉತ್ಪತ್ತಿಯಾಗುತ್ತವೆ. ಈಲಿ ದೇಹದ
ಪ್ರತಿಯೊಂದು ಅಂಗಾಂಗಗಳ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ಈಲಿಯ ಕಾರ್ಯವ್ಯವಸ್ಥೆಯಲ್ಲಾಗುವ ಅವ್ಯವಸ್ಥೆ ಗಳು ದೇಹದ ಎಲ್ಲ ಅಂಗಾಂಗಗಳ ಮೇಲೂ ಮಾರಣಾಂತಿಕ ಪರಿಣಾಮಗಳನ್ನುಂಟು ಮಾಡುತ್ತವೆ.

ಈಲಿಯ ಕಾಯಿಲೆಗಳು: ಧೂಮಪಾನದಿಂದುಂಟಾದ ಈಲಿಯ ಕಾಯಿಲೆ, ಈಲಿಯಲ್ಲಿ ಜಿಡ್ಡು ಶೇಖರಣೆ, ಈಲಿಯುರಿಯೂತ (ಹೆಪಟೈಟಿಸ್)/ಸಿರ‍್ಹೋಸಿಸ್, ಈಲಿಯ ಕ್ಯಾನ್ಸರ್, ಈಲಿಯ ವಿಫಲತೆ ಇತ್ಯಾದಿಗಳು ಈಲಿಗೆ ತಗುಲಬಹುದಾದ ಪ್ರಮುಖ ಕಾಲೆಗಳು. ಇವುಗಳಲ್ಲಿ ಮದ್ಯಪಾನ ದಿಂದುಂಟಾಗುವ ಈಲಿಯುರಿಯೂತ (ಆಲ್ಕೋಹಾಲಿಕ್ ಹೆಪಟೈಟಿಸ್) ಬಹುಮುಖ್ಯವಾದುದು. ದೀರ್ಘಕಾಲ ಮದ್ಯಪಾನ ಮಾಡುವವರಲ್ಲಿ ಈಲಿಯ ಜೀವಕೋಶಗಳು ಕ್ರಮೇಣ ನಾಶ ಹೊಂದಿ ನಾರುಗಟ್ಟಿ ಸಂಕುಚಿತವಾಗಿ ಸಿರ‍್ಹೋಸಿಸ್ ಉಂಟಾಗುತ್ತದೆ. ಈ ಹಂತ ತಲುಪಿದಾಗ ಹಿಂತಿರುಗಿಸಲಾಗದ ಈಲಿಯ ಕಾರ್ಯವಿಫಲತೆಯಾಗಿ ಸಾವನ್ನಪ್ಪುವ ಹಂತ ತಲುಪುತ್ತಾರೆ.

ಕೆಲವು ಕಾಯಿಲೆಗಳು ಜನ್ಯವಾಗಿ ಕಿಣ್ವಗಳ ಕೊರತೆಯಿಂದ ಬರುತ್ತವೆ. ರಸ್ತೆ ಅಪಘಾತದಲ್ಲಿ ಉದರಭಾಗಕ್ಕೆ ಬೀಳುವ ಪೆಟ್ಟಿನಿಂದ ಈಲಿ ಜಖಂ ಆಗಿ ಅತೀವ ರಕ್ತಸ್ರಾವವಾಗಿ ಸಾವನ್ನಪ್ಪಬಹುದು.

ವೈರಲ್ ಹೆಪಟೈಟಿಸ್: ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಈಲಿಯ ಕಾಯಿಲೆ ಇದಾಗಿದ್ದು, ವೈರಾಣು ಸೋಂಕಿನಿಂದ ಉಂಟಾಗುತ್ತದೆ. ಇದರಲ್ಲಿ ಎ,ಬಿ,ಸಿ
,ಡಿ,ಇ, ಎಂಬ ೫ಬಗೆಯ ಪ್ರಮುಖ ಈಲಿ ವೈರಸ್ ಗಳಿದ್ದು, ಇವೆಲ್ಲವೂ ಈಲಿಯೂತುರಿಯನ್ನುಂಟು ಮಾಡಬಹುದು. ಇವುಗಳಲ್ಲಿ ಈಲಿಯುರಿಯೂತ
-ಬಿ(ಬಿ-ಹೆಪಟೈಟಿಸ್) ಮತ್ತು ಸಿ ವೈರಸ್ಸಿನ ಈಲಿಯುರಿಯೂತ (ಸಿ-ಹೆಪಟೈಟಿಸ್)ಕಾಯಿಲೆಗಳು ಮಾರಣಾಂತಿಕವಾಗುವ ಸಾಧ್ಯತೆಯಿರುತ್ತದೆ.

ಬಿ- ಈಲಿಯುರಿಯೂತ ಕೆಲವರಲ್ಲಿ ವಾಸಿಯಾಗದೆ ಜೀವನಡೀ ಇದ್ದು, ಜೀವಾವಽಯನ್ನು ಕುಂಠಿತಗೊಳಿಸಬಹುದಲ್ಲದೆ, ಈಲಿಯ ಕ್ಯಾನ್ಸರ್ ಉತ್ಪತ್ತಿ ಯನ್ನು ಪ್ರಚೋದಿಸುವ ಸಾಧ್ಯತೆಯೂ ಸಹ ಇರುತ್ತದೆ.

ಬಿ-ಈಲಿಯಿರಿಯೂತ ವೈರಾಣು ರಕ್ತನೀಡಿಕೆ, ಸಂಭೋಗದಿಂದ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಆಲಿಂಗನ, ಮುತ್ತು ನೀಡಮಿಕೆ, ಆಹಾರ, ನೀರಿನಿಂದ
ಇದು ಹರಡುವುದಿಲ್ಲ. ಇನ್ನಿತರ ಈಲಿಯ ವೈರಾಣುಗಳು ಆಹಾರ, ನೀರುಗಳಿಂದ ಹರಡುತ್ತವೆ ಮತ್ತು ಸೂಕ್ತ ಚಿಕಿತೆಯಿಂದ ಪೂರ್ಣವಾಗಿ ಗುಣವಾಗು ತ್ತವೆ. ಬಿ-ಈಲಿಯುರಿಯೂತ ಇರುವವರನ್ನು ಮದುವೆಯಾಗುವವರು ಬಿ-ಈಲಿಯುರಿಯೂತ ಲಸಿಕೆಯನ್ನು ಪಡೆಯುವುದರಿಂದ ಅವರಿಗೆ ಹರಡದಂತೆ ರಕ್ಷಣೆಪಡೆಯಬಹುದು.

ಲಿವರ್ ಕ್ಯಾನ್ಸರ್: ಬಿ-ಈಲಿಯುರಿಯೂತ, ಮದ್ಯಪಾನಿಗಳು, ಹೆಪಟೋಮ ಇರುವವರಲ್ಲಿ ಈಲಿ ಕ್ಯಾನ್ಸರ್ ಅಧಿಕವಾಗಿ ಕಂಡುಬರುತ್ತದೆ. ಈಲಿ ದೊಡ್ಡ ದಾಗುತ್ತದೆ. ಈಲಿಗೆ ಇನ್ನಿತರ ಭಾಗಗಳ ಕ್ಯಾನ್ಸರ್ ಸಹ ಹರಡಬಹುದು. ವಾಸಿಯಾಗದ ಜ್ವರ, ಈಲಿ ಹಿಗ್ಗುವಿಕೆ, ಹೊಟ್ಟೆನೋವು, ತೂಕನಷ್ಟ, ಅಂತಿಮ ವಾಗಿ ಜಾಂಡೀಸ್ ಇದರ ಪ್ರಮುಖ ರೋಗಲಕ್ಷಣಗಳು.

ಅಲ್ಲದೇ ಗಾಲ್‌ಬ್ಲಾಡರ್ ಡಿಸೀಸಸ್ ಬರಬಹುದು. ಈಲಿರಸಕೋಶ ಕೆಂಪೂತುರಿಗೀಡಾಗಿ ಊದಿಕೊಂಡು ಹೊಟ್ಟೆನೋವು, ವಾಂತಿ, ಜ್ವರಗಳುಂಟಾಗ ಬಹುದು. ಇದು ದಿಢೀರನೆ ಅಲ್ಪಾವಧಿಯಲ್ಲಿ ಅಥವಾ ದೀರ್ಘಾವಧಿಯಲ್ಲಿ ಕಂಡುಬರಬಹುದು. ಪದೇ ಪದೇ ಉಂಟಾಗುತ್ತಿದ್ದಲ್ಲಿ ಈಲಿರಸಚೀಲ
(ಗಾಲ್‌ಬ್ಲಾಡರ್)ವನ್ನು ಶಸ್ತ್ರಕ್ರಿಯೆಯಿಂದ ತೆಗೆದುಹಾಕಿದಲ್ಲಿ ಶಾಶ್ವತವಾಗಿ ವಾಸಿಯಾಗುತ್ತದೆ.

ಗಾಲ್ ಸ್ಟೋನ್ಸ್: ಈಲಿರಸ ಗಟ್ಟಿಯಾಗಿ ಈಲಿ ರಸಕೋಶದಲ್ಲಿ ಕಲ್ಲುಗಳುಂಟಾಗುತ್ತವೆ. ಇವು ಈಲಿ ರಸನಾಳಗಳಿಗೆ ರವಾನೆಯಾಗಿ ಅಡಚಣೆ ಯನ್ನುಂಟು ಮಾಡಿ ಈಲಿರಸ ರವಾನೆಗೆ ತೊಂದರೆಯನ್ನುಂಟು ಮಾಡಬಹುದು. ಅಡಚಣೆಯ ಜಾಂಡೀಸ್ ಉಂಟಾಗುತ್ತದೆ. ಕಲ್ಲುಗಳನ್ನು ಕರಗಿಸುವಿಕೆ ಅಥವಾ ಶಸ್ತ್ರಕ್ರಿಯೆಯಿಂದ ಚಿಕಿತ್ಸೆ ಅವಶ್ಯ. ಮೇಲುಭಾಗದಲ್ಲಿ ಹೊಟ್ಟೆನೋವು, ಜಾಂಡೀಸ್ ಇದರ ಪ್ರಮುಖ ತೊಂದರೆಗಳು.

ಲಿವರ್ ಸಿರ‍್ಹೋಸಿಸ್: ದೀರ್ಘಕಾಲೀಕ ಕೆಂಪೂತುರಿಗೀಡಾದ ಈಲಿ ಜೀವಕೋಶಗಳು ಸಾವನ್ನಪ್ಪಿ ಸಾಗೀಡಾದ ಸ್ಥಳಗಳು ನಾರಿನಾಂಶದಿಂದ ತುಂಬಿಕೆ ಯಾಗಿ ಉಳಿದ ಈಲಿ ಜೀವಕೋಶಗಳು ಗೆಡ್ಡೆಯೋಪಾದಿಯಲ್ಲಿ ಪುನರುತ್ಪತ್ತಿಯಾಗಿ, ಈಲಿಯ ಕಿರುಹಾಲೆಯ ಸ್ವರೂಪ ಪೂರ್ಣವಾಗಿ ಶಾಶ್ವತವಾಗಿ ಬದಲಾಗಿ ಈಲಿಯ ಕಾರ್ಯಗಳಿಗೆ ಶಾಶ್ವತವಾಗಿ ಧಕ್ಕೆಯನ್ನುಂಟುಮಾಡುವ ಮಾರಣಾಂತಿಕವಾಗಬಲ್ಲ ಕಾಯಿಲೆಯಿದು. ಈಲಿಯ ಪ್ರತಿಯೊಂದು ಕಾಯಿಲೆಯೂ ಈ ಹಂತ ತಲುಪಬಹುದಾದ ಸಾಧ್ಯತೆ ಇದ್ದರೂ ಮದ್ಯಪಾನದಿಂದುಂಟಾಗುವ ಈಲಿಯ ಕಾಯಿಲೆ ಇದಕ್ಕೆ ಪ್ರಮುಖ ಕಾರಣ. ಮಕ್ಕಳಲ್ಲಿ ಕಂಡುಬರುವ ಪ್ರೋಟಿನ್ ಕೊರತೆಯಲ್ಲೂ ಇದುಂಟಾಗಬಹುದು.

ಕೆಲವರಲ್ಲಿ ನಿರ್ದಿಷ್ಟ ಕಾರಣವನ್ನು ಗೊತ್ತುಪಡಿಸಲು ಸಾಧ್ಯವಿಲ್ಲ. ಇದನ್ನು ಅವಿತುಕೊಂಡಿರುವ ಈಲಿಯ ಸಿರ‍್ಹೋಸಿಸ್ (ಕ್ರಿಪ್ಪೊಜೆನಿಕ್ ಸಿರ‍್ಹೋಸಿಸ್) ಎನ್ನಲಾಗುತ್ತದೆ. ಈಲಿಯ ಫಲತೆ ತೊಂದರೆಗಳು, ಉದರಗುಡಿಯಲ್ಲಿ ದ್ರವಶೇಖರಣೆಯಾಗಿ ಉದರ ಊದಿಕೊಳ್ಳುವಿಕೆ, ಜಾಂಡೀಸ್, ರಕ್ತವಾಂತಿ ಗಳುಂಟಾಗುತ್ತವೆ. ಇವರು ಇನ್ನಿತರ ಸೋಂಕುರೋಗಗಳಿಗೆ ಬಹುಬೇಗ ಗುರಿಯಾಗುತ್ತಾರೆ. ಬಹುಪಾಲು ಎಲ್ಲ ಈಲಿಯ ಕಾಯಿಲೆಗಳಲ್ಲಿ ಒಂದೇ ಬಗೆಯ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಹಸಿವು ಕಡಿಮೆಯಾಗುವುದು ಜ್ವರ, ಸುಸ್ತು, ಸಂಕಟ, ಕಣ್ಣು ಮತ್ತು ಚರ್ಮ ಹಳದಿಯಾಗುವುದು(ಜಾಂಡೀಸ್), ಚರ್ಮದಲ್ಲಿ ರಕ್ತಸ್ರಾವ, ರಕ್ತವಾಂತಿ, ಬಾಯಿಯಲ್ಲಿ ರಕ್ತಸ್ರಾವ, ಪ್ರಜ್ಞಾ ಅವ್ಯವಸ್ಥೆಗಳು, ಉದರಗುಡಿಯಲ್ಲಿ ದ್ರವಶೇಖರಣೆಯಾಗಿ ಊದಿಕೊಳ್ಳುವುದು, ಮೂತ್ರತೊಂದರೆಗಳು, ರಕ್ತಹೀನತೆ, ತೂಕನಷ್ಟ ಇತ್ಯಾದಿ ತೊಂದರೆಗಳುಂಟಾಗುತ್ತವೆ. ಕಾಮಾಲೆ(ಜಾಂಡೀಸ್) ಈಲಿಯ ಫಲತೆಯಲ್ಲಿ ಕಂಡುಬರುವ ಪ್ರಮುಖ ತೊಂದರೆ. ಪತ್ತೆ, ಚಿಕಿತ್ಸೆ ಹೇಗೆ? ರಕ್ತದಲ್ಲಿ ಈಲಿಯ ಕಾರ್ಯದಕ್ಷತೆ ಸೂಚಕಗಳ ಅಳತೆ, ಉದರದ ಅಲ್ಟ್ರಾಸೌಂಡ್, ಸಿಟಿ, ಎಂಆರ್‌ಐ ಮತ್ತು ಈಲಿಯ ಬಯಾಪ್ಸಿ, ಇ,ಆರ್,ಸಿ,ಪಿ, ಈಲಿ ರಸನಾಳ ಚಿತ್ರೀಕರಣ ಇತ್ಯಾದಿ ಪರೀಕ್ಷೆಗಳಿಂದ ನಿರ್ದಿಷ್ಟ ಕಾಲೆಯನ್ನು ದೃಢೀಕರಿಸಿಕೊಳ್ಳಲಾಗುತ್ತದೆ.

ವೈರಸ್ಸಿನ ಈಲಿಯೂತುರಿಗಳು ಆಹಾರ, ನೀರಿನಿಂದ ಒಬ್ಬರಿಂದೊಬ್ಬರಿಗೆ ಹರಡುತ್ತವೆ. ಬಿ-ಈಲಿ ಯೂತುರಿ ರಕ್ತನೀಡುವಿಕೆ, ರೇಜರ್ ಬಳಕೆ, ಸಂಭೋಗ ಗಳಿಂದ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಈಲಿಯ ಕಾಯಿಲೆಗಳಿಗೆ ವಿಶ್ರಾಂತಿ, ಧೂಮಪಾನ ಮತ್ತು ಮದ್ಯಪಾನ ಸರ್ಜನೆ, ಮಿತವಾದ ಜಿಡ್ಡುರಹಿತದ ಸಮತೋಲನ ಆಹಾರ ಅತ್ಯವಶ್ಯಕ. ಕಾರಣಕ್ಕನುಗುಣವಾಗಿ ಚಿಕಿತ್ಸೆ ಅವಶ್ಯಕ. ಈಲಿ ವಿಫಲತೆಯುಂಟಾಗಿ ರೋಗವನ್ನು ವಾಸಿ ಮಾಡಲಾಗದಿದ್ದಲ್ಲಿ ಬೇರೊಬ್ಬರ ಈಲಿಯನ್ನು ತೆಗೆದು ರೋಗಿಗೆ ನಾಟಿ ಮಾಡುವ ಚಿಕಿತ್ಸೆ ಪ್ರಯೋಜನಕಾರಿ.

ಯಶಸ್ವಿ ಈಲಿನಾಟಿ ಪಡೆದವರು ದೀರ್ಘಕಾಲ ಬದುಕಬಹುದಾಗಿದೆ. ಸಾಮಾನ್ಯವಾಗಿ ಸಿರ‍್ಹೋಸಿಸ್ ಮತ್ತು ಈಲಿ ಕ್ಯಾನ್ಸರ್ ರೋಗಿಗಳಿಗೆ ಈಲಿ ನಾಟಿ
ಮಾಡಲಾಗುತ್ತದೆ. ಈಲಿಯ ರಕ್ಷಣೆ ಹೇಗೆ? ಮದ್ಯಪಾನ ಮತ್ತು ಧೂಮಪಾನಗಳ ವರ್ಜನೆ, ಸಮತೋಲನ ಆಹಾರ ಸೇವನೆ, ದೈನಂದಿನ ವ್ಯಾಯಾಮ, ಅನವಶ್ಯಕವಾಗಿ ರಾಸಾಯನಿಕ ವಸ್ತುಗಳನ್ನು ದೇಹಕ್ಕೆ ತೆಗೆದುಕೊಳ್ಳದಿರುವಿಕೆ… ಇವುಗಳಿಂದ ಈಲಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಮಕ್ಕಳಿಗೆ ಪ್ರಾರಂಭದಲ್ಲಿಯೇ ಹೆಪಟೈಟಿಸ್-ಬಿ ಲಸಿಕೆಯನ್ನು ೩ ಹಂತಗಳಲ್ಲಿ ನೀಡುವುದರಿಂದ ಬಿ-ಈಲಿಯೂತುರಿಯನ್ನು ತಡೆಗಟ್ಟಬಹುದು. ವಯಸ್ಕರೂ ಈ ಲಸಿಕೆಯನ್ನು ತೆಗೆದುಕೊಳ್ಳಬೇಕು.

ತಡೆಗಟ್ಟುವುದು ಹೇಗೆ? 
ಈಲಿ ಕಾಯಿಲೆಗಳನ್ನು ತಡೆಗಟ್ಟಲು ಕೆಲವು ನಿಯಮಗಳ ಪಾಲನೆ ಸಹಕಾರಿ.
ಮದ್ಯಪಾನ, ಧೂಮಪಾನಗಳ ವರ್ಜನೆ ಮಲ-ಮೂತ್ರಗಳೊಡನೆ ಆಹಾರ ಪದಾರ್ಥಗಳು, ನೀರು ಮಿಶ್ರಣವಾಗದಂತೆ ಎಚ್ಚರಿಕೆ ವಹಿಸಬೇಕು. ಬರಿಗೈನಲ್ಲಿ ಆಹಾರ ಪದಾರ್ಥಗಳನ್ನು ಮುಟ್ಟಬಾರದು, ಕೈ ಕವಚಗಳನ್ನು ಧರಿಸಿ ಆಹಾರ ಪದಾರ್ಥಗಳನ್ನು ಮುಟ್ಟಬೇಕು. ಬೇಯಿಸಿದ ಆಹಾರವನ್ನು ಸೇವಿಸಬೇಕು.
ಮಲ ಮತ್ತು ಮೂತ್ರ ವಿಸರ್ಜನೆ ಮಾಡಿದ ನಂತರ ಕೈಗಳನ್ನು ಚೆನ್ನಾಗಿ ಸೋಪಿನಿಂದ ತೊಳೆದುಕೊಳ್ಳಬೇಕು.

ಬೆರಳುಗಳಲ್ಲಿ ಉಗುರು ಹೆಚ್ಚಾಗಿ ಬೆಳೆಯದಿರುವಂತೆ ನೋಡಿಕೊಳ್ಳಬೇಕು. ಅಪರಿಚಿತರೊಂದಿಗೆ ಸಂಭೋಗ ಮಾಡಕೂಡದು ಅಥವಾ ನಿರೋಧ್ ಬಳಸ ಬೇಕು. ರಕ್ತ ತೆಗೆದುಕೊಳ್ಳುವಾಗ ಈಲಿಯೂತುರಿ ಬಿ ವೈರಾಣು ಇರುವಿಕೆಗಾಗಿ ಪರೀಕ್ಷಿಸಬೇಕು. ಡಿಸ್‌ಪೋಸಬಲ್ ಸಿರಂಜ್‌ನಿಂದ ಚುಚ್ಚುಮದ್ದನ್ನು
ತೆಗೆದುಕೊಳ್ಳಬೇಕು. ಹೆಪಟೈಟಿಸ್-ಬಿ ಲಸಿಕೆಯನ್ನು ತೆಗೆದುಕೊಳ್ಳಬೇಕು.

ಈಲಿ ದೇಹದ ಜೀವಾಂಗವಾಗಿರುವುದರಿಂದ ಇದರ ವಿಫಲತೆ ದೇಹದ ಇನ್ನಿತರ ಎಲ್ಲ ಅಂಗಾಂಗಗಳ ಮೇಲೂ ಪರಿಣಾಮ ಬೀರುವುದರಿಂದ ಇದರ
ಆರೋಗ್ಯ ರಕ್ಷಣೆ ಬಗ್ಗೆ ಪ್ರತಿಯೊಬ್ಬರೂ ಗಮನ ಹರಿಸಬೇಕು. ಶೇ ೮೦ರಷ್ಟು ಈಲಿ ಕಾಯಿಲೆಗಳಿಗೆ ಮದ್ಯಪಾನವೇ ಕಾರಣವಾಗಿದ್ದು ಹಾಗೂ ಮದ್ಯಪಾನ ಈಲಿಯ ಇನ್ನಿತರ ಕಾಯಿಲೆಗಳನ್ನು ಸಹ ಉಲ್ಬಣಗೊಳಿಸುವುದರಿಂದ ಮದ್ಯಪಾನವನ್ನು ವರ್ಜಿಸುವುದರಿಂದಲೇ ಈಲಿ ಆರೋಗ್ಯವನ್ನು ಬಹುಪಾಲು ರಕ್ಷಿಸಿಕೊಳ್ಳಬಹುದು.