Saturday, 14th December 2024

ದುರಿಸು ಇಲ್ಲವೇ ಸಹಿಸು – ಬದುಕಿನ ಸೂತ್ರ

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ಬೆಂಗಳೂರು, ಮೈಸೂರು, ಮದ್ರಾಸ್‌ಗಳೆಂದರೆ ಅವೆಲ್ಲ ಸ್ವರ್ಗದಷ್ಟೇ ದೂರವಿರುವವು ಎನಿಸುತ್ತಿತ್ತು. ಇನ್ನು ಹೈದರಾಬಾದ್, ಮುಂಬಯಿ, ಕೋಲ್ಕತಾ, ದೆಹಲಿಗಳಂತೂ ಅಂತರಿಕ್ಷದಲ್ಲಿಯೇ ಇವೆ, ಭೂಮಿಯಲ್ಲಿರುವ ನಾವು ನೋಡಲು ಸಾಧ್ಯವೇ ಇಲ್ಲ ಎನಿಸಿಬಿಟ್ಟಿತ್ತು.

ಜವಾಬ್ದಾರಿಗಳಿಲ್ಲದ ಹತ್ತರಿಂದ ಹದಿನೈದು ಹದಿನಾರರ ಪ್ರಾಯವದು ಅದೆಷ್ಟು ಸುಂದರ? ಬಾಲ್ಯ ಮುಗಿದಿರುತ್ತದೆ, ಯವ್ವನ ಆರಂಭ ವಾಗಿರುತ್ತದೆ. ಕನವರಿಕೆ, ಕನಸುಗಳು, ಏನೇನೋ ಆಗಬೇಕು, ಏನೇನೋ ಸಾಧಿಸಬೇಕೆಂಬ ಬಯಕೆಗಳು, ಭ್ರಮೆಗಳು. ಇದರ ಮಧ್ಯೆ ಗೆಳೆಯ, ಗೆಳತಿಯರು, ಸಮವಯಸ್ಕರು ನಮಗಿಂತ ಒಂದೋ, ಎರಡೋ ವರ್ಷ ಮಾತ್ರ ದೊಡ್ಡ ಗೆಳೆಯರು.

ನಾವು ಏನು ಮಾಡಿದರೂ ನಿಮಗೆ ತಿಳಿಯುವುದಿಲ್ಲ ಎಂದು ಅನ್ನುತ್ತ ‘ನಾನು ಹೇಳ್ತೀನಿ ಕೇಳ್ರಿ’ ಎಂದು ಮುಂದಾ ಳತ್ವ ವಹಿಸುವ ತಂಡವಿದು. ಪಾರ್ಕ್‌ಗೆ ಹೋಗು ವುದಿರಲಿ, ಗುಡ್ಡ ಏರುವುದಿರಲಿ, ಕೆನಾಲ್‌ಗೆ ಈಜಲು ಹೋಗು ವುದಿರಲಿ, ಸಿನಿಮಾಗೆ ಅದೂ ರಣಬಿಸಿಲಿನಲ್ಲಿ ಮ್ಯಾಟ್ನಿಗೆ ಹೋಗುವುದಿರಲಿ ಎಲ್ಲವೂ ಚರ್ಚೆ ನಿರ್ಧಾರ ಮಾಡುವುದು ಈ ಎರಡೇ ವರ್ಷದ ಹಿರಿಯರ ತಂಡದ ಕೆಲಸ. ಇಂಥವುಗಳಿಗೆಲ್ಲ ಸದಾ ಹೊರಗೆ ಅಲೆದರೆ ಪೋಲಿಗಳಾಗುತ್ತೇವೆಂದು ಹಿರಿಯರು ಗದರಿಸಿದಾಗ ಒಂದೆಡೆ ಕುಳಿತು ಗೊಟಗುಣಿ ಆಟ, ಅಡಗಿಕೊಂಡು ಹುಡುಕಿಸಿ ಕೊಳ್ಳುವ ಸಬ್ಜಾ ಎಂಬ ಆಟ, ಇವೆಲ್ಲಕ್ಕಿಂತ ಪ್ರಶಸ್ತವಾದುದು ಹಾಡಿನ ಬಂಡಿ ಆಟ, ಇದಕ್ಕೆ ಈಗ ಅಂತ್ಯಾಕ್ಷರಿ ಎನ್ನುತ್ತಿದ್ದಾರೆ. ಬರೀ ಕನ್ನಡ ಹಾಡುಗಳನ್ನೇ ಹಾಡುವವರ ಗುಂಪು ಒಂದಿತ್ತು. ಅದರಲ್ಲಿ ನನ್ನದು ದೊಡ್ಡ ಕಾಣಿಕೆ. ರಾಜಕುಮಾರ್‌ರ ಎಲ್ಲ ಹಳೇ ಹಾಡುಗಳು ನನ್ನ ಬಾಯಿ ತುದಿಯಲ್ಲಿದ್ದವು.

ಹೀಗಾಗಿ ಎರಡೂ ಗುಂಪುಗಳು ನನ್ನನ್ನು ತಮ್ಮ ಗುಂಪಿಗೆ ಸೇರಿಸಿಕೊಳ್ಳಲು ಪೈಪೋಟಿ ಮಾಡುತ್ತಿದ್ದವು. ಚೂರಿ ಚಿಕ್ಕಣ್ಣ, ರೌಡಿ ರಂಗಣ್ಣ, ಭಲೇ ಹುಚ್ಚ, ಕಸ್ತೂರಿ ನಿವಾಸ, ಕರುಳಿನ ಕರೆ, ಭಲೇ ಜೋಡಿ, ಕಾಸಿದ್ರೆ ಕೈಲಾಸ, ಹೃದಯ ಸಂಗಮ, ಸ್ವಯಂವರ ಚಿತ್ರಗಳ ಭರಾಟೆ ವರ್ಷಗಳವು. ಬೆಂಗಳೂರು ನೋಡಿದ್ದ ಕೆಲ ಶೆಟ್ಟರ ಹುಡುಗರು ಈ ಸಿನಿಮಾಗಳಲ್ಲಿ ತೋರಿಸುತ್ತಿದ್ದ ವಿಧಾನಸೌಧ, ಹೈಕೋರ್ಟ್, ಕಬ್ಬನ್ ಪಾರ್ಕ್, ಲಾಲ್‌ಬಾಗ್‌ಗಳನ್ನು ನೋಡಿ ‘ನಾನು ನಮ್ಮ ಅಯ್ಯನ ಜತೆ ಬೆಂಗಳೂರಿನಲ್ಲಿ ಇವನ್ನೆಲ್ಲ ನೋಡಿದ್ದೇನೆ, ಸುತ್ತಾಡಿದ್ದೇನೆ’ ಎಂದು ಹೇಳುತ್ತಿದ್ದರೆ, ಅವನನ್ನು ಅಸೂಯೆ, ಆಶ್ಚರ್ಯ, ಪುಣ್ಯವಂತ ಎಂಬ ದೃಷ್ಟಿಯಿಂದ ಎವೆಯಿಕ್ಕದೆ
ನೋಡುತ್ತಿದ್ದೆವು.

ತೆಲುಗಿನ ‘ಬಾಲಭಾರತಂ ’ ಸಿನಿಮಾ ನೋಡುವಾಗಲೂ ಆ ಶೆಟ್ಟರ ಹುಡುಗರು ಇವೆಲ್ಲ ಸಿನಿಮಾಗಳ ಸೆಟ್ಟಿಂಗ್‌ಗಳನ್ನು ಹಾಕಿದ ಸ್ಟುಡಿಯೋಗಳನ್ನೂ ನಾವು ಮದ್ರಾಸಿಗೆ ಹೋದಾಗ ನೋಡಿದ್ದೇವೆ ಎಂದಾಗಲಂತೂ, ನಮಗೆ ನಮ್ಮ ಹುಟ್ಟು, ನಮ್ಮ ಹಿರಿಯರ ಬಗ್ಗೆಯೇ ಬೇಸರ ಹುಟ್ಟಿ, ದೇವರನ್ನು ಶಪಿಸುತ್ತಿದ್ದೆವು. ಗಂಗಾ ವತಿ, ಕನಕಗಿರಿಯ ಯಾರಿಗಾದರೂ ಕಾಯಿಲೆಯಾದಾಗ ಬಳ್ಳಾರಿ ಬಿಟ್ಟರೆ ಬೇರೊಂದು ಊರು ಕಾಣದ ಬ್ರಾಹ್ಮಣ ಹುಡುಗರಾದ ನಮಗೆ ಜೀವನದ ಬಗ್ಗೆಯೇ ಜುಗುಪ್ಸೆ ಮೂಡುತ್ತಿತ್ತು. ಬೆಂಗಳೂರು, ಮೈಸೂರು, ಮದ್ರಾಸ್‌ಗಳೆಂದರೆ ಅವೆಲ್ಲ ಸ್ವರ್ಗದಷ್ಟೇ ದೂರವಿರುವವು ಎನಿಸುತ್ತಿತ್ತು.

ಇನ್ನು ಹೈದರಾಬಾದ್, ಮುಂಬಯಿ, ಕೋಲ್ಕತಾ, ದೆಹಲಿಗಳಂತೂ ಅಂತರಿಕ್ಷದಲ್ಲಿಯೇ ಇವೆ, ಭೂಮಿಯಲ್ಲಿರುವ ನಾವು ನೋಡಲು ಸಾಧ್ಯವೇ ಇಲ್ಲ ಎನಿಸಿ ಬಿಟ್ಟಿತ್ತು. ನಾನು ನೋಡಿದ ಊರುಗಳು ಎಂದು ಒಂದು ಚಿಕ್ಕ ನೋಟ್ ಬುಕ್ಕಿನಲ್ಲಿ ಬರೆದಿಡುತ್ತಲಿದ್ದೆ. ಅದರಲ್ಲಿ ಬರೀ ಕಂಪ್ಲಿ, ಕನಕಗಿರಿ, ತಾವರಗೇರಿ, ಕಲ್ಗುಡಿ, ಹೊಸಳ್ಳಿ ಎಂಬ ಸುತ್ತಮುತ್ತಲಿನ ಆರು, ಎಂಟು ಕಿಲೋಮಿಟರ್‌ಗಳಷ್ಟು ದೂರವಿರುವ ಊರುಗಳೇ ಇರುತ್ತಿದ್ದವು. ಗಂಗಾವತಿಯಿಂದ ಅರವತ್ತೈದು ಕಿಲೋಮೀಟರ್‌ ಗಳಷ್ಟು ದೂರ ಹೋದ ಮೊದಲ ಊರೆಂದರೆ ಅದು ಯಲಬುರ್ಗಾ.

ಮೂರು ವರ್ಷಗಳಷ್ಟು ದೀರ್ಘಕಾಲ ನಾನು ಗಂಗಾವತಿ ಯಿಂದ ದೂರ ಉಳಿದ, ದೂರ ಹೋದ ಊರು ಇಂದಿಗೂ ಅದೊಂದೇ. ದಸರಾ ರಜೆ, ಬೇಸಿಗೆ ರಜೆ ಬರುವುದನ್ನೇ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ನಾನು ಗಂಗಾವತಿಯ ತಾತನ ಮನೆಗೆ ಓಡಿ ಬರುತ್ತಿದ್ದೆ. ರಜೆ ಬರುವುದನ್ನೇ ಕಾಯುತ್ತಿದ್ದೆ. ಏಪ್ರಿಲ್ ಹತ್ತರಿಂದ ಬೇಸಿಗೆ ರಜೆ, ಅಕ್ಟೋಬರ್ ಎರಡರಿಂದ ದಸರಾ ರಜೆ, ಈ ಎರಡು ತಾರೀಖುಗಳು ನನಗೆ ಇಂದಿಗೂ ಅರವತ್ತರ ಈ ವಯಸ್ಸಿನಲ್ಲಿ ಅಂದಿನ ಉಮೇದು ಉತ್ಸಾಹ ಗಳನ್ನು ನೆನಪಿಗೆ ತರುತ್ತವೆ.

ರಜೆಯಲ್ಲಿ ತಾತನ ಮನೆ ಗಂಗಾವತಿಗೆ ಬಂದೆನೆಂದರೆ, ಶೆಟ್ಟರ ಹುಡುಗರ, ಲಿಂಗಾಯತ ಹುಡುಗರ, ಸಾಂಗತ್ಯ. ರಾಯರ ಓಣಿ, ಅಯ್ಯನವರ ಶಾಲೆ, ದುರ್ಗಮ್ಮನ ಹಳ್ಳ, ಜಂತಗಲ್ ಜಾತ್ರೆ, ತಾತನ ತೇರು, ರಾಯರ ಆರಾಧನೆಯ ಆ ಮೂರು ದಿನಗಳು ಓಹ್! ಏನು ಕೊಟ್ಟರೆ ಸಿಕ್ಕಿತು, ಆ ವಯಸ್ಸು, ಆ ಬಾಲ್ಯ, ಆಗ ಹೊಂದಿದ್ದ ಗೆಳೆಯರು, ಈಗ ಅವರೆಲ್ಲ ಎಲ್ಲೆಲ್ಲಿದ್ದಾರೋ, ಹೇಗಿದ್ದಾರೋ ಎಂಬುದೇ ನನಗೆ ಕುತೂಹಲ, ಇಂದಿಗೂ ಒಬ್ಬನೇ ಮಾಳಿಗೆ ಮೇಲೆ ಸಂಜೆಯ
ಮಬ್ಬುಗತ್ತಲಲ್ಲಿ ಕುಳಿತು ತಂಗಾಳಿಗೆ ಮೈ ಒಡ್ಡಿದಾಗ ಸುಳಿವ ಆ ಗಾಳಿ ಮೈಗೆ ಸೋಕಿದಾಗ ಆ ಹಿತಕ್ಕೆ ತನ್ನಿಂದ ತಾನೇ ಮುಚ್ಚಿಕೊಳ್ಳುವ ಕಣ್ಣುಗಳ ಹಿತ, ಮುಚ್ಚಿ ಕೊಂಡ ಕಣ್ಣುಗಳ ಹಿಂದಿನಲ್ಲಿ ಪರದೆ ಮೇಲೆ ಕಂಡಂತೆ ನಾನು ಕಾಣುವ ಆ ಗೆಳೆಯ, ಗೆಳತಿಯರಲ್ಲಿ ನನಗೆ ನೆನಪಾಗುವುದು ಲಿಂಗಾಯತರ ಹುಡುಗಿ ಕುಮ್ಮಿ.

ಕುಮ್ಮಿಯ ಪೂರ್ಣ ಹೆಸರು ಕುಮುದಾವತಿ. ಆದರೆ ಆಕೆಯನ್ನು ಯಾರೂ ಆ ಐದು ಅಕ್ಷರಗಳನ್ನು ಸೇರಿಸಿ ಕರೆಯುತ್ತಿದ್ದಿಲ್ಲ. ಕುಮ್ಮಿ ಎಂಬುದೇ ಅವಳ ಕಾವ್ಯನಾಮ ವಾಗಿ ಹೋಗಿತ್ತು. ಕುಮ್ಮಿ ತಾಯಿಯಿಲ್ಲದ ಕೆಲಸವಂತೆ ಹುಡುಗಿ. ಓಣಿಯ ಎಲ್ಲ ಜಾತಿಯ ಮನೆಗಳವರೂ ಕುಮ್ಮಿಯನ್ನು ಒಂದಲ್ಲ ಒಂದು ಕೆಲಸಕ್ಕೆ ಕರೆದೇ ಕರೆಯುತ್ತಿದ್ದರು. ಮೊಗ್ಗಿನ ಜಡೆ ಹೆಣೆಯುವುದರಲ್ಲಿ, ಒಬ್ಬಳೇ ಧೈರ್ಯವಾಗಿ ಬಜಾರಕ್ಕೆ ಹೋಗಿ ಕಿರಾಣಿ ಸಾಮಾನು, ಕಾಯಿಪಲ್ಲೆ, ಗಿರಣಿ, ಟೇಲರ್ ಬಳಿ, ಹಚ್ಚೆ ಹಾಕಿಸುವುದು, ಮೆಹೆಂದಿ ಹಾಕುವದು ಮಾಡುತ್ತಿದ್ದುದರಿಂದ ಆಕೆಯನ್ನು ಹೆಣ್ಣು ಮೊಗದ ಗಂಡೇ ಎಂದು ತೀರ್ಮಾನಿಸಿದ್ದರು ಓಣಿಯ ಜನ.

ಕುಮ್ಮಿ ದಿನದ ಇಪ್ಪತ್ನಾಲ್ಕು ಗಂಟೆ ಬೇರೆಯವರ ಮನೆಗಳಲ್ಲೇ ಕೆಲಸ ಮಾಡುತ್ತಿದ್ದುದರಿಂದ ಆಕೆಯ ಮಲತಾಯಿ ಈಕೆಯನ್ನು ಆಗಾಗ ಹೊಡೆಯುತ್ತಿದ್ದುದು
ಉಂಟು. ಆದರೆ ಮನೆ ಬಿಟ್ಟು ಹೊರಬಂದಳೆಂದರೆ ಮುಗಿಯಿತು ಎಲ್ಲವನ್ನೂ ಮರೆತು ಬೇರೆಯವರ ಮನೆಗಳಲ್ಲಿ ಬೆರೆತು ಬಿಡುತ್ತಿದ್ದಳು. ಆ ಕಾಲಕ್ಕೆ ಶರಪಂಜರ ಸಿನಿಮಾ ರಿಲೀಸ್ ಆದ ದಿನಗಳ ಕಾಲ, ಕಲ್ಪನಾ ಕುಮ್ಮಿಯ ಮೆಚ್ಚಿನ ನಟಿ. ಶರಪಂಜರ ಸಿನಿಮಾವನ್ನು ಕುಮ್ಮಿ ಕನಿಷ್ಠವೆಂದರೂ ಐವತ್ತು ಬಾರಿ ನೋಡಿದ್ದಳು. ಕಲ್ಪನಾಳಿಗೆ ಚಿತ್ರದಲ್ಲಿ ಹುಚ್ಚು ಹಿಡಿಯುವ ಸನ್ನಿವೇಶದಲ್ಲಿ ಇಡೀ ಥಿಯೇಟರ್ ಜನ ಬೆಚ್ಚಿ ಬೀಳುವಂತೆ ಹೋ ಎಂದು ಅತ್ತಿದ್ದಳು.

ಮೂರ್ಛೆಯೂ ಹೋಗಿದ್ದ ಈಕೆಯನ್ನು ಥಿಯೇಟರ್‌ನವರು ಸೈಕಲ್ ಮೇಲೆ ಕರೆತಂದು ಮನೆಗೆ ಬಿಟ್ಟಿದ್ದರು. ಸಿನಿಮಾ ಹೀರೋಗಳಾದ ಗಂಗಾಧರ, ರಾಜೇಶ್ ಈಕೆಯ ನೆಚ್ಚಿನ ನಟರು. ನಮ್ಮ ಊರಿನ ನಾಲ್ಕೈದು ಲಾರಿಗಳ ಮಾಲೀಕರೊಬ್ಬರ ಮಗನನ್ನು ಕುಮ್ಮಿ ಆತನಿಗೂ ತಿಳಿಯದಂತೆ ಗುಟ್ಟಾಗಿ ಪ್ರೀತಿಸುತ್ತಿದ್ದಳು.
ಆತನೊಂದಿಗೆ ಲಾರಿಯಲ್ಲಿ ಹುಬ್ಬಳ್ಳಿ, ದಾವಣಗೆರೆ, ಚಿತ್ರ ದುರ್ಗ ಬೆಳಗಾವಿಗಳಿಗೆಲ್ಲ ಹೋಗುವ ಕನಸು ಕಾಣುತ್ತಿದ್ದಳು. ಆದರೆ ಆತನಿಗೆ ಮಾತ್ರ ಕುಮ್ಮಿಯ ಬಗ್ಗೆ ಗೊತ್ತೇ ಇರಲಿಲ್ಲ.

ಈಕೆಯ ಹುಚ್ಚು ಕಂಡು, ಈಕೆ ಓಣಿಯ ಸಮವಯಸ್ಕ ಹುಡುಗಿಯರು ಆತನಿಗೆ ವಿಷಯ ತಿಳಿಸಿದರು. ಇಬ್ಬರನ್ನು ಮುಖಾಬಿಲೆ (ಪರಸ್ಪರ ಕುಳಿತು ಮುಖ ನೋಡಿ ಕೊಳ್ಳುವಿಕೆ) ಮಾಡಿಸಿದರು. ಆಗ ಕುಮ್ಮಿ ಆತನಿಗೆ ಅನೇಕ ರೀತಿಯ ಸಿನಿಮೀಯ ಪ್ರಶ್ನೆಗಳನ್ನು ಹಾಕಿ ಉತ್ತರ ಪಡೆಯಲು ಪ್ರಯತ್ನಿಸಿದ್ದು, ಇಂದಿಗೂ ನೆನೆದರೆ ನಗು ಬರುತ್ತದೆ. ಆತನ ಹೆಸರು ಬಸವಂತನಿದ್ದು, ಕುಮ್ಮಿ ಆತನೊಂದಿಗಿನ ಮೊದಲ ಭೇಟಿಯಲ್ಲಿಯೇ ಬಸು ಬಸು ಎಂದು ಪ್ರಶ್ನೆ ಕೇಳುತ್ತಿದ್ದಳು. ಕುಮ್ಮಿಯ ಒಂದು ಹುಟ್ಟು ಅಭ್ಯಾಸವೆಂದರೆ ಆಕೆ ಯಾರೊಂದಿಗಾದರೂ ಮಾತನಾಡುವಾಗ ಕಣ್ಣುಮುಚ್ಚಿ ಕೊಂಡು ಮಾತನಾಡುತ್ತಿದ್ದಳು, ಹೇಳುವುದು ಮುಗಿದ ಮೇಲೆ ಕಣ್ಣು ತೆರೆಯುತ್ತಿದ್ದಳು.

‘ಬಸು, ಮದುವೆಯಾದ ಮೇಲೆ ನೀನು ಸದಾ ನನ್ನ ಕಣ್ಮುಂದೆಯೇ ಇರಬೇಕು, ನಾನು ಸಿಟ್ಟಾದರೂ, ನೀನು ಸಿಟ್ಟಾಗಬಾರದು, ನಿನ್ನೊಡನೆ ಮಾತು ಬಿಟ್ಟರೂ ನೀನು ನನ್ನನ್ನು ಮಾತ್ರ ಮಾತನಾಡಿಸುತ್ತಲೇ ಇರಬೇಕು. ನಾನು ಮತ್ತೆ ಸಿಟ್ಟು ಕರಗಿ ನಿನ್ನ ಬಳಿ ಬರುವವರೆಗೂ ನೀನು ದಾಡಿ ಮಾಡಿಸಿಕೊಳ್ಳಬಾರದು. ಸ್ನಾನ, ಊಟ ಮಾಡಬಾರದು, ನಿದ್ದೆಗೆಟ್ಟು ನಿನ್ನ ಮುಖ ಬಾಡಿರಬೇಕು. ಕನಿಷ್ಠ ಎರಡು- ಮೂರು ದಿನ ಹಾಸಿಗೆ ಹಿಡಿಯಬೇಕು. ನಿಮ್ಮಪ್ಪ ಬೈದನೆಂದು ನೀನು ಅಂಗಡಿಗೆ ಹೋಗುವುದಾಗಲೀ, ಲಾರಿಗಳಿಗೆ ಲೋಡಿಂಗ್, ಅನ್‌ಲೋಡಿಂಗ್ ಕೆಲಸಗಳಾಗಲಿ ಮಾಡಬಾರದು. ಅಂಗಡಿಯ ಗುಮಾಸ್ತರ ಜತೆಯಾಗಲಿ, ನಿಮ್ಮ ತಂದೆ- ತಾಯಿಗಳ ಜತೆಯಾಗಲಿ ಒಂದೇ ಒಂದು ಮಾತೂ ಆಡ ಬಾರದು.

ಎಲ್ಲರೂ ಯಾಕೆ ಹೀಗಿದ್ದಿ ಎಂದು ಕೇಳಿದರೆ, ಕುಮ್ಮಿ ಯನ್ನು ಬಿಟ್ಟು ನನಗೆ ಪ್ರಪಂಚವಿಲ್ಲ ಎಂದೇ ಹೇಳಬೇಕು. ನಿಮ್ಮ ಎಲ್ಲ ಲಾರಿಗಳ ಹಿಂದೆ ‘ಐ ಲವ್ ಕುಮ್ಮಿ’ ಎಂದು ಬರೆಸಬೇಕು. ಆಸ್ತಿಯಲ್ಲಿ ಭಾಗ ಕೇಳಿ ಪಡೆಯಬೇಕು. ನಾವು ಬೆಂಗಳೂರು ಅಥವಾ ಬಾಂಬೆಗಳಲ್ಲಿ ಹೋಗಿ ದೊಡ್ಡ ಮನೆಯಲ್ಲಿರಬೇಕು, ದಿನಾ ಸಿನಿಮಾ ಶೂಟಿಂಗ್‌ಗಳನ್ನು ನೋಡಲು ಹೋಗಬೇಕು…’ ಇತ್ಯಾದಿ ಇತ್ಯಾದಿ ಹೇಳಿ ಮುಗಿಸಿ ಪದ್ಧತಿಯಂತೆ ಕಣ್ಣು ತೆರೆದಾಗ ಎದುರಿಗೆ ಬಸು ಆಗಲಿ, ಸಂಧಾನ ಏರ್ಪ
ಡಿಸಿದ್ದ ಗೆಳತಿಯರಾಗಲಿ ಯಾರೂ ಇರಲಿಲ್ಲ. ಎದ್ದು ಹೋಗಿ ಬಹಳ ಕಾಲವಾಗಿತ್ತು. ಬಸು ಈಗ ಬೇರೆ ಮದುವೆಯಾಗಿ ಮೂರು ಮಕ್ಕಳ ತಂದೆ. ಕುಮ್ಮಿ ಈಗ ಮುದುಕಿಯಾಗಿ ಹಿಟ್ಟಿನ ಗಿರಿಣಿಯೊಂದರಲ್ಲಿ ಕೆಲಸಕ್ಕಿದ್ದಾಳೆ ಎಂದು ಮೊನ್ನೆ ಪಂಡಿತರೊಬ್ಬರು ತಿಳಿಸಿದಾಗ ಇದೆಲ್ಲ ನೆನಪಾಯಿತು.

ಹೀಗೆ ನನ್ನ ಬಾಲ್ಯದಲ್ಲಿ, ನನ್ನ ಓಣಿಯಲ್ಲಿ ನನ್ನ ಜತೆಗಿದ್ದ ಪ್ರತಿ ಹೆಣ್ಣು ಗಂಡಿನದೂ ಹೀಗೆ ಒಂದೊಂದು ಇತಿಹಾಸವಿದೆ. ಅವರ ಕನಸುಗಳಿಗೆಲ್ಲ ಕಾಲವು ಬಣ್ಣ ಬಳಿದಿದೆ. ಕೆಲವರಿಗೆ ಕಪ್ಪು ಬಣ್ಣ, ಕೆಲವರಿಗೆ ಕೋಪದ ಕೆಂಪು, ಕೆಲವರಿಗೆ ವೈವಿಧ್ಯದ ಬಿಳಿ, ಹಲವರಿಗೆ ಕಾಮಾಲೆಯ ಹಳದಿ ಬಣ್ಣ ಬಳೆದು ಬದುಕನ್ನು ದುರ್ಬರ ಗೊಳಿಸಿದೆ. ಒಟ್ಟಿನಲ್ಲಿ ಬದುಕೆಂದರೆ ಅಂದುಕೊಂಡಿದ್ದೆಲ್ಲ ನಡೆಯುವುದಿಲ್ಲ, ನಡೆದರೂ ಅದರಲ್ಲಿ ನೆಮ್ಮದಿ ಇರುವುದಿಲ್ಲ. ಎದುರಿಸುವುದು ಇಲ್ಲವೇ ಸಹಿಸುವುದು, ಈ ಎರಡೇ ಬದುಕಿರುವ ದಾರಿಗಳು.