Saturday, 14th December 2024

ಜೀವನ ಮತ್ತು ವೃತ್ತಿಜೀವನದಲ್ಲಿ ಕಾಡುವ ವೈಎನ್ಕೆ Wonderment !

ಇದೇ ಅಂತರಂಗ ಸುದ್ದಿ

vbhat@me.com

ವೈಎನ್ಕೆ ನಮ್ಮನ್ನು ಆಗಲಿ ಇಂದಿಗೆ ಇಪ್ಪತ್ಮೂರು ವರ್ಷಗಳಾದವು. 1999, 16 ಅಕ್ಟೊಬರ್. ಬೆಳಗಿನ ಜಾವ ಒಂದು ಗಂಟೆಗೆ ಅಮೆರಿಕದಿಂದ ಆಗಮಿಸಿದ್ದ ವೈಎನ್ಕೆ ಅವರನ್ನು ಸ್ವಾಗತಿಸಲು, ಎಚ್.ಎ.ಎಲ. ವಿಮಾನ ನಿಲ್ದಾಣಕ್ಕೆ ನಾನು ಮತ್ತು ಶ್ರೀಪತಿ (ವೈಎನ್ಕೆ ಸಾಕುಮಗ) ಹೋಗಿದ್ದೆವು. ಆ ದಿನಗಳಲ್ಲಿ ಮಧ್ಯರಾತ್ರಿ ಒಂದು ವಿಮಾನ ಬರುತ್ತಿತ್ತು. ವೈಎನ್ಕೆ ಆಗಮಿಸಿದ್ದ ವಿಮಾನ ಬಂದಿಳಿಯಿತು.

ಪ್ರಯಾಣಿಕರೆಲ್ಲ ಹೊರಗೆ ಬರಲಾರಂಭಿಸಿದರು. ನಾನು ಮತ್ತು ಶ್ರೀಪತಿ ಕತ್ತನ್ನು ಉದ್ದ ಮಾಡಿ ಆ ಪ್ರಯಾಣಿಕರ ನಡುವೆ ವೈಎನ್ಕೆ ಅವರನ್ನು ಹುಡುಕುತ್ತಿದ್ದೆವು. ಈಗ ಬರಬಹುದು, ಇನ್ನೇನು ಬರಬಹುದು ಎಂದು ನಾವು ಅವರ ದಾರಿ ನೋಡಿದ್ದೇ ನೋಡಿದ್ದು. ಬಹುತೇಕ ಪ್ರಯಾಣಿಕರೆಲ್ಲ ಹೋದರು ವೈಎನ್ಕೆ ಸುಳಿವಿಲ್ಲ. ನಾವಿಬ್ಬರೂ ಮುಖಮುಖ ನೋಡಿ ಕೊಂಡೆವು.

ಈ ಮಧ್ಯೆ, ಮೈಕಿನಂದು ಪ್ರಕಟಣೆ – ‘ಅಟೆನ್ಷನ್ ಪ್ಲೀಸ್.. ಲಂಡನ್‌ನಿಂದ ಮುಂಬೈ ಮಾರ್ಗವಾಗಿ ಬೆಂಗಳೂರಿಗೆ ಆಗಮಿಸುವ ವಿಮಾನದಲ್ಲಿದ್ದ ವೈ.ಏನ್.ಕೃಷ್ಣಮೂರ್ತಿ ಎಂಬ ಪ್ರಯಾಣಿಕರನ್ನು ಸ್ವಾಗತಿಸಲು ಯಾರಾದರೋ ಬಂದಿದ್ದರೆ, ಅವರು ವಿಚಾರಣೆ ಕೌಂಟರ್‌ನಲ್ಲಿರುವ ಏರ್ ಇಂಡಿಯಾ ಡ್ಯೂಟಿ ಮ್ಯಾನೇಜರ್ ಅವರನ್ನು ಭೇಟಿ ಮಾಡಬೇಕು.’ ನಾವಿಬ್ಬರೂ ಏದುಸಿರು ಬಿಡುತ್ತ, ಧಾವಂತದಿಂದ ಅಲ್ಲಿಗೆ ಹೋದೆವು. ಅಲ್ಲಿದ್ದ ಡ್ಯೂಟಿ ಮ್ಯಾನೇಜರ್ ನಮ್ಮನ್ನು ನೋಡುತ್ತಿದ್ದಂತೆ ಒಂದು ನಿಮಿಷ ಸಾವರಿಸಿಕೊಂಡು, ‘ಸಾರಿ’ ಎಂದು ಕತ್ತು ಕೆಳ ಹಾಕಿದ. ನಾವು ಅವನನ್ನೇ ನೋಡುತ್ತಿದ್ದೆವು.

‘ಲಂಡನ್‌ನಿಂದ ಮುಂಬೈಗೆ ಬರುವಾಗ, ವೈಎನ್ಕೆ ಅವರು ಆಕಾಶದ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು
ತಿಳಿಸಲು ವಿಷಾದಿಸುತ್ತೇನೆ. ಈಗ ಅವರ ಪಾರ್ಥಿವ ಶರೀರ ಮುಂಬೈ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ
ನಿಲ್ದಾಣದಲ್ಲಿದೆ. ಅವರ ಪಾರ್ಥಿವ ಶರೀರವನ್ನು ಇಲ್ಲಿಗೆ ತರಲು ಕೆಲವು ಶಿಷ್ಟಾಚಾರಗಳು ಇರುವುದರಿಂದ, ನೀವೇ ಅಲ್ಲಿಗೆ
ಹೋಗಬೇಕು. ನಾವು ಅದಕ್ಕೆ ನಿಮಗೆ ನೆರವಾಗುತ್ತೇವೆ’ ಎಂದ.

ವೈಎನ್ಕೆ ಅವರನ್ನು ಎದುರುಗೊಳ್ಳಲು ಹೋದ ನಮಗೆ ಈ ರೀತಿ ಸಾವಿನ ಸುದ್ದಿಯನ್ನು ಸ್ವಾಗತಿಸಬೇಕಾಗುತ್ತದೆ ಎಂದು
ಕನಸು-ಮನಸಿನಲ್ಲಿಯೂ ಎಣಿಸಿರಲಿಲ್ಲ. ನಂತರ ನಾನು-ಶ್ರೀಪತಿ ಮುಂಬೈಗೆ ಹೋಗಿದ್ದು, ಅಲ್ಲಿ ಅನಾಥವಾಗಿ ಬಿದ್ದಿದ್ದ ವೈಎನ್ಕೆ ಪಾರ್ಥಿವ ಶರೀರವನ್ನು ಕೂಪರ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಪೋಸ್ಟ್ ಮಾರ್ಟಮ್ ಮಾಡಿಸಿದ್ದು, ನಂತರ ಮುಂಬೈ ಪೊಲೀಸ್ ಕಮಿಷನರ್ ಆಫೀಸಿಗೆ ತೆರಳಿ, ಹೊರ ರಾಜ್ಯಕ್ಕೆ ಶವವನ್ನು ಸಾಗಿಸಲು ಅನುಮತಿಗಾಗಿ ಪರದಾಡಿದ್ದು, ಬಳಿಕ ವಿಮಾನದಲ್ಲಿ ತಂದಿದ್ದು, ಒಂದು ಪ್ರಹಸನವೇ.

ವೈಎನ್ಕೆ ಅವರಿಗೆ ವಿದೇಶ ಪ್ರವಾಸದ ಹುಮ್ಮಸ್ಸಿತ್ತು. ಬಹಳ ವರ್ಷಗಳಿಂದ ಅವರು ಅಮೆರಿಕ, ಲಂಡನ್‌ಗೆ ಹೋಗಬೇಕೆಂದು ಕನವರಿಸುತ್ತಿದ್ದರು. ಅಮೆರಿಕದಿಂದ ಲಂಡನ್‌ಗೆ ಬಂದು ಅಲ್ಲಿ ಎರಡು ದಿನ ಉಳಿದಿದ್ದರು. ಅಲ್ಲಿ ನನ್ನ ಸ್ನೇಹಿತ ನಿರಂಜನ ಅವರ
ದೇಖ-ರೇಖ ನೋಡಿಕೊಂಡಿದ್ದ. ಅವರನ್ನು ಲಂಡನ್‌ನಲ್ಲಿ ಸುತ್ತಾಡಿಸಿ, ಅವನೇ ಸುರಕ್ಷಿತವಾಗಿ ವಿಮಾನ ಹತ್ತಿಸಿದ್ದ. ವೈಎನ್ಕೆ
ಅವರೊಂದಿಗೆ ಕೊನೆಯ ಸಂಭಾಷಣೆ ಮಾಡಿದವ ಆತನೇ.

ಲಂಡನ್‌ನಿಂದ ಮುಂಬೈಗೆ ಬರುವ ಮಾರ್ಗ ಮಧ್ಯದಲ್ಲಿ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅವರ ಕೊನೆ ಕ್ಷಣಗಳ ವಿವರ ಗಳ ಬಗ್ಗೆ ನಮಗೆ ಏರ್‌ಲೈನ್ಸ್ ಸಂಸ್ಥೆ ಸಿಬ್ಬಂದಿ ಹೆಚ್ಚಿಗೆ ಮಾಹಿತಿ ಕೊಡಲಿಲ್ಲ. ವಿಮಾನ ಲಂಡನ್‌ನಿಂದ ಟೇಕಾ- ಆಗುತ್ತಿದ್ದಂತೆ, ವೈಎನ್ಕೆ ಊಟ ಮಾಡಿದ ವಿವರವನ್ನಷ್ಟೇ ಹೇಳಿದರು. ಅಲ್ಲಿಯೇ ಅವರಿಗೆ ಹೃದಯಾಘಾತವಾಗಿತ್ತು. ವಿಮಾನ ಬೆಂಗಳೂರಿಗೆ
ಬಂದಿಳಿದಿರುತ್ತಿದ್ದರೆ, ನಿಶ್ಚಯವಾಗಿ ಅವರ ಗುರುತು- ಪರಿಚಯದವರು ಇರುತ್ತಿದ್ದರು.

ಆದರೆ ಮುಂಬೈ ವಿಮಾನದಲ್ಲಿದ್ದ ಪ್ರಯಾಣಿಕರ ಪೈಕಿ ಅವರನ್ನು ಬಲ್ಲವರು ಯಾರೂ ಇರಲಿಲ್ಲ. ಹೀಗಾಗಿ ಅವರು ಎಂಥ ಅವಸ್ಥೆಪಟ್ಟರು ಎಂಬುದು ಇಂದಿಗೂ ನಿಗೂಢವೇ. ನಾವು ಮುಂಬೈ ತಲುಪುವ ಹೊತ್ತಿಗೆ ಏರ್‌ಲೈನ್ಸ ಸಂಸ್ಥೆ ಸಿಬ್ಬಂದಿ ಡ್ಯೂಟಿ ಮುಗಿಸಿ ಹೊರಟಿದ್ದರಿಂದ ಅವರಿಂದಲೂ ಹೆಚ್ಚಿನ ಮಾಹಿತಿ ಸಿಗಲಿಲ್ಲ. ಈ ಇಪ್ಪತ್ಮೂರು ವರ್ಷಗಳಲ್ಲಿ ವೈಎನ್ಕೆ ನೆನೆಯದ ದಿನ
ಇರಲಿಕ್ಕಿಲ್ಲ. ಅದರಲ್ಲೂ ನಾವು ಅವರೊಂದಿಗೆ ಕೆಲಸ ಮಾಡಿದವರು ಸಿಕ್ಕರೆ ಅವರ ನೆನಪಿನ ಕುಂಭಮೇಳ.

ಮೊನ್ನೆ ನಾನು, ಜೋಗಿ, ವೆಂಕಟೇಶ ಹೆಗಡೆ ಮತ್ತು ರವಿ ಹೆಗಡೆ, ಮೂರು ದಿನ ಬೆಹರಿನ್‌ನಲ್ಲಿ ಸೇರಿzಗ, ವೈಎನ್ಕೆ ಅಯಾಚಿತವಾಗಿ ನಮ್ಮ ಮಾತಿನ ಮಧ್ಯೆ ಆಗಾಗ ಇಣುಕುತ್ತಿದ್ದರು. ಇನ್ನು ನಾನಾ ಬರಹದಲ್ಲಿ ಅವರು ಆಗಾಗ ಬಂದು ಹೋಗುತ್ತಿರುತ್ತಾರೆ. ನಾನು ಅವರ ಬಗ್ಗೆ ಮೂರು ಪುಸ್ತಕಗಳನ್ನು ಬರೆದಿದ್ದರೂ, ಈಗ ನೋಡಿದರೆ, ಅವೆಲ್ಲವೂ ಅಪೂರ್ಣ ಎಂದೆನಿಸುತ್ತದೆ. ಅವರು ಜೀವಂತವಾಗಿದ್ದಾಗ ನಾವು ಅವರಿಂದ ಪಡೆದಿದ್ದು ಅಲ್ಪ ಎಂದು ಈಗ ಅನಿಸುತ್ತಿದೆ.

ಸಾಗರದಿಂದ ಮೊಗೆದುಕೊಳ್ಳುವ ವಿಪುಲ ಅವಕಾಶಗಳಿದ್ದರೂ, ಆಗಿದ್ದ ನಮ್ಮ ಮಿತಿಯೇ ಈಗ ಕೊರತೆಯಾಗಿ ಕಾಣುವು ದುಂಟು. ವೈಎನ್ಕೆ ಪ್ರಯೋಗಶೀಲ ಮನಸ್ಸಿನವರಾಗಿದ್ದರು. ಆದರೆ ಅದನ್ನು ಜಾರಿಗೊಳಿಸುವ ಸಮಯ ಬಂದಾಗ ಬಹಳ ಯೋಚಿಸುತ್ತಿದ್ದರು. ಇರುವುದೊಂದೇ ನಿಯಮ, ಅದು ಎಲ್ಲ ನಿಯಮವನ್ನು ಮುರಿಯುವುದು ಎಂದು ಹೇಳುತ್ತಿದ್ದರು.
ಆದರೆ ಮುರಿಯುವ ಸಮಯ ಬಂದಾಗ ಮುದುರಿಕೊಂಡುಬಿಡುತ್ತಿದರು.

ಆದರೆ ಮುರಿಯಲು ಬೇಕಾಗುವ ಪ್ರೇರಣೆಗಾಗಿ ಅವರತ್ತ ನೋಡಿದರೆ, ಯಾವತ್ತೂ ನಿರಾಸೆ ಆಗುತ್ತಿರಲಿಲ್ಲ. ಮಹಾನ್ ವ್ಯಕ್ತಿಗಳೆನಿಸಿಕೊಂಡವರು ಸ್ವತಃ ಎಲ್ಲವನ್ನೂ ತಾವೇ ಮಾಡದಿದ್ದರೂ, ಬೇರೆಯವರಿಗೆ ಪ್ರೇರಣೆಯಾಗಿದ್ದನ್ನು ಮರೆಯು ವಂತಿಲ್ಲ. ವೈಎನ್ಕೆ ಈ ಕೆಲಸವನ್ನು ನಿರಂತರವಾಗಿ, ನಿಯತ್ತಾಗಿ ಮಾಡಿದರು. ಹೀಗಾಗಿ ಪತ್ರಿಕೋದ್ಯಮ, ಸಿನಿಮಾ, ನಾಟಕ,
ಚಿತ್ರಕಲೆ, ಸಾಹಿತ್ಯ ಮುಂತಾದ ಪ್ರಕಾರಗಳಲ್ಲಿ ನಡೆದ ಹಲವಾರು ಪ್ರಯೋಗ, ಸ್ಥಿತ್ಯಂತರಗಳಿಗೆ ವೈಎನ್ಕೆ ಊರುಗೋಲಾ ಗಿದ್ದರು.

ಆ ದಿನಗಳಲ್ಲಿ ಮೂಡಿ ಬಂದ ಹೊಸ ಅಲೆ ಸಿನಿಮಾ, ನವ್ಯ ಸಾಹಿತ್ಯ, ನವ್ಯ ಕವನ, ರಂಗಭೂಮಿ ಪ್ರಯೋಗಗಳ ಹಿಂದೆ, ವೈಎನ್ಕೆ ಟಚ್ ಇತ್ತು. ಅವರು ಎಲ್ಲವನ್ನೂ ತಾವೇ ಮಾಡುತ್ತಿರಲಿಲ್ಲ, ಮಾಡಿಸುತ್ತಿದ್ದರು. ಅದಕ್ಕೆ ಬೇಕಾದ ಬೌದ್ಧಿಕ ಪರಿಸರ (ecosystem) ವನ್ನು ನಿರ್ಮಿಸಿಕೊಡುತ್ತಿದ್ದರು. ಪ್ರತಿರೋಧ ಕಂಡು ಬಂದರೆ ವಕಾಲತ್ತು ಪಡೆ ಸಿದ್ಧ ಮಾಡಿಕೊಡುತ್ತಿದ್ದರು. ಕೆಲವೊಮ್ಮೆ ತಾವೇ ಆ ಪಡೆಯ ಒಳಮನೆಯ ವಕ್ತಾರರಾಗಿಬಿಡುತ್ತಿದ್ದರು.

ಅದನ್ನು ಬೇರೆಯವರು ಗ್ರಹಿಸಿಕೊಂಡು ಮುನ್ನೆಲೆಗೆ ತಲುಪಿಸಬೇಕಿತ್ತು. ಆ ದಿನಗಳಲ್ಲಿ ಕನ್ನಡ ಸಾಂಸ್ಕೃತಿಕ ರಂಗಕ್ಕೆ ಆಯಾಯ ಕಾಲಕ್ಕೆ ಅವಶ್ಯವಾಗಿ ಬೇಕಿದ್ದ mentoring ಕೆಲಸವನ್ನು ವೈಎನ್ಕೆ ಚೆನ್ನಾಗಿ ನಿಭಾಯಿಸಿದರು. ಹೀಗಾಗಿ ಈಗಲೂ ಅಂದು ವೈಎನ್ಕೆ ಇಟ್ಟ ಹೆಜ್ಜೆ ಗುರುತುಗಳನ್ನು ದಾಟಿಯೇ ಮುನ್ನಡೆಯಬೇಕಾಗಿದೆ. ವೈಎನ್ಕೆ ಜಮಾನದ ಪತ್ರಿಕೋದ್ಯಮಕ್ಕೂ, ಈಗಿನದಕ್ಕೂ ಸಾಕಷ್ಟು ಬದಲಾವಣೆಗಳಾಗಿವೆ.

ಆದರೆ ವೈಎನ್ಕೆ ಪ್ರಣೀತ ಪತ್ರಿಕೋದ್ಯಮದ ನಂಬಿಕೆಗಳು ಮಾತ್ರ ಈಗಲೂ ಭದ್ರವಾಗಿ ಉಳಿದಿದೆ. ವೈಎನ್ಕೆ ಪ್ರತಿಪಾದಿಸು ತ್ತಿದ್ದ Wonderment ಕೇವಲ ಪತ್ರಿಕೋದ್ಯಮಕ್ಕಷ್ಟೇ ಅಲ್ಲ, ಜೀವನದ ಪ್ರತಿ ಹಂತದಲ್ಲೂ ಲವಲವಿಕೆಯಿಂದ, ಜೀವಂತಿಕೆ ಯಿಂದ ಇರುವ ಸೋಜಿಗವಾಗಿ ಕಾಣುತ್ತಲೇ ಇರುತ್ತದೆ. ಕೆಲವರನ್ನು ಅವರ ನಿಧನದ ನಂತರವೂ ಕಾಣುತ್ತೇವೆ ಮತ್ತು ಅವರು ಕಾಡು ತ್ತಾರೆ ಎಂಬ ಮಾತು ವೈಎನ್ಕೆ ವಿಷಯದಲ್ಲಿ ನೂರಕ್ಕೆ ನೂರು ಸತ್ಯ.

ಪಾಟೀಲರ ಸ್ತುತ್ಯರ್ಹ ಕಾರ್ಯ
ನಮ್ಮ ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟೀಲರು ತಮ್ಮದೇ ನೆಲೆಯಲ್ಲಿ ಸದ್ದು-ಗದ್ದಲವಿಲ್ಲದೇ ಕೆಲಸ ಮಾಡುವು ದರಲ್ಲಿ ನಿಸ್ಸೀಮರು.

ರಸ್ತೆ ಅಗಲ ಮಾಡುವಾಗ ಕೊಡಲಿಗೆ ಧರೆಗುರುಳುವ ಸಾವಿರಾರು ಮರಗಳನ್ನು ಸ್ಥಳಾಂತರ ಮಾಡಿ, ಅವುಗಳಿಗೆ ಪುನರ್ ಜನ್ಮ ನೀಡಿದ ಅವರ ಆಸ್ಥೆ ನನಗೆ ಇಷ್ಟವಾಗಿತ್ತು. ಪ್ರಧಾನಿ ಕಚೇರಿಯವರೂ ಈ ಕೆಲಸವನ್ನು ಗಮನಿಸಿದ್ದರು. ಕಳೆದ ಮೂರು ದಿನಗಳಿಂದ ಅವರು ನರಗುಂದದಲ್ಲಿ ಸಂಘಟಿಸಿದ ರಾಷ್ಟ್ರೀಯ ಕಬಡ್ಡಿ ಕ್ರೀಡಾಕೂಟದ ವರದಿಗಳನ್ನು ಗಮನಿಸುತ್ತಿದ್ದೇನೆ. ನರಗುಂದದಂಥ ಊರಿನಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟವನ್ನು ಸಂಘಟಿಸಿ ಪಾಟೀಲರು ರಾಷ್ಟ್ರದ ಗಮನ ಸೆಳೆದಿದ್ದಾರೆ.

ಮಹಿಳೆಯರ ಮತ್ತು ಪುರುಷರ ಎಪ್ಪತ್ತೈದು ತಂಡಗಳಲ್ಲಿ ಸುಮಾರು ಸಾವಿರಕ್ಕೂ ಅಧಿಕ ಕಬಡ್ಡಿ ಆಟಗಾರರು ನರಗುಂದ
ದಲ್ಲಿ ಒಂದು ವಾರದಿಂದ ಬೀಡು ಬಿಟ್ಟಿದ್ದರು. ಅಷ್ಟೇ ಅಲ್ಲ, ಪಾಟೀಲರು ರಾಷ್ಟ್ರಮಟ್ಟದ ಎಲ್ಲಾ ರೆಫರಿಗಳನ್ನೂ ಆಮಂತ್ರಿಸಿ
ದ್ದರು. ‘ಪ್ರೊಕಬಡ್ಡಿ’ ಮಾದರಿಯಲ್ಲಿ ಇದನ್ನು ವ್ಯವಸ್ಥೆ ಮಾಡಿದ್ದು ಗಮನಾರ್ಹ. ಏಕಕಾಲದಲ್ಲಿ ನಾಲ್ಕು ಪಂದ್ಯಗಳು ನಡೆಯುವ
ವ್ಯವಸ್ಥೆ ಮಾಡಲಾಗಿತ್ತು. ಕಬಡ್ಡಿ ಪಂದ್ಯಗಳನ್ನು ನೋಡಲು ಆಗಮಿಸಿದವರೆಲ್ಲರಿಗೂ (ಸುಮಾರು ಇಪ್ಪತ್ತು ಸಾವಿರ ಮಂದಿ)
ಪ್ರತಿದಿನ ಊಟ-ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.

ಇದನ್ನು ಒಂದು ರೀತಿಯಲ್ಲಿ ಮನೆಹಬ್ಬದಂತೆ ಆಯೋಜಿಸಲಾಗಿತ್ತು ಕಬಡ್ಡಿ ನಮ್ಮ ಅಪ್ಪಟ ದೇಸಿ ಕ್ರೀಡೆ. ಅದು ಉಸುರು, ಮಣ್ಣಿನ ಕ್ರೀಡೆ. ಅದು ನಮ್ಮತನದ ಪ್ರತೀಕ. ಇಷ್ಟು ವರ್ಷ ಕ್ರಿಕೆಟ್ ನ ಅಬ್ಬರದ ಮಧ್ಯೆ ಕಬಡ್ಡಿ ಅನಾಥವಾಗಿತ್ತು. ಆದರೆ ಕಳೆದ
ಏಳೆಂಟು ವರ್ಷಗಳಲ್ಲಿ ಅದು ಮುನ್ನೆಲೆಗೆ ಬರುತ್ತಿರುವುದು, ಕಬಡ್ಡಿ ಆಟಗಾರರೂ ಕ್ರಿಕೆಟ್ ಆಟಗಾರರಷ್ಟಲ್ಲದಿದ್ದರೂ,
ಮಾಧ್ಯಮಗಳ ಗಮನ ಸೆಳೆಯುತ್ತಿರುವುದು, ಅವರನ್ನೂ ಐಕನ್‌ಗಳಂತೆ ಸ್ವೀಕರಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ.

ನಾನೂ ಪ್ರದೀಪ ನರ್ವಾಲ, ಸಿದ್ದಾರ್ಥ ದೇಸಾಯಿ, ರಾಹುಲ್ ಚೌಧರಿ, ನಿತಿನ್ ತೋಮರ್, ಅಜಯ್ ಠಾಕೂರ್ ಥರ ಕಬಡ್ಡಿ
ಆಟಗಾರ ಆಗಬೇಕು ಎಂದು ನಮ್ಮ ಯುವಜನರು ಹಂಬಲಿಸುವಂತಾಗಿದೆ. ಈ ಆಟಗಾರರು ಜಾಹೀರಾತುಗಳಲ್ಲಿ ಮಾಡೆಲ್ಲು ಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಕಬಡ್ಡಿ ಗೆಲುವು. ಸಿ.ಸಿಪಾಟೀಲರು ಕಬಡ್ಡಿಗೆ ಇಷ್ಟು ಪ್ರೋತ್ಸಾಹ ನೀಡುತ್ತಿರುವುದು ನಿಜಕ್ಕೂ ಸ್ತುತ್ಯರ್ಹ. ಇದರಿಂದ ಅವರಿಗೆ ವೋಟು ಬರದಿರಬಹುದು. ಇದೇನು ರಾಜಕೀಯ ಸಮಾವೇಶವಲ್ಲ.

ಅದು ಗೊತ್ತಿದ್ದೂ ಇಂಥ ಕ್ರೀಡೆಯನ್ನು ತಮ್ಮ ನೆಲದಲ್ಲಿ ಪ್ರೋತ್ಸಾಹಿಸಿದ್ದು ಅವರ ಕಳಕಳಿಗೆ ಸಾಕ್ಷಿ. ಮಾಜಿ ಸಚಿವ ಆರ್
.ವಿ.ದೇಶಪಾಂಡೆ ಅವರು ತಮ್ಮ ಕ್ಷೇತ್ರದಲ್ಲಿ ನಡೆಸುವ ಕುಸ್ತಿ ಪಂದ್ಯಾವಳಿಯನ್ನೂ ಇಲ್ಲಿ ಸ್ಮರಿಸಿಕೊಳ್ಳುತ್ತೇನೆ. ಒಬ್ಬೊಬ್ಬ ರಾಜಕಾರಣಿ ನಮ್ಮ ದೇಶೀಯ ಕ್ರೀಡೆಗಳನ್ನು ಈ ರೀತಿ ಉತ್ತೇಜಿಸಿದರೆ, ಪ್ರಾಯೋಜಿಸಿದರೆ, ಅವು ಮುನ್ನೆಲೆಗೆ ಬಂದು ಜನಪ್ರಿಯವಾಗುವುದರಲ್ಲಿ ಸಂದೇಹವಿಲ್ಲ.

ಸೋನಿಯಾ ಗಾಂಧಿ ಕುರಿತು
ಸೋನಿಯಾ ಗಾಂಧಿಯವರ ಪಬ್ಲಿಕ್ ಇಮೇಜ್‌ನಲ್ಲಿ ಹೊಗಳುವಂಥದ್ದೇನೂ ಇಲ್ಲ. ಅದಕ್ಕೆ ಅವರು ಯಾರನ್ನಾದರೂ ದೂರು ವುದಿದ್ದರೆ ತಮ್ಮನ್ನೇ ದೂರಿಕೊಳ್ಳಬೇಕು. ತಮ್ಮ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅವರು ಪಕ್ಕದಲ್ಲಿದ್ದವರಿಗೂ ತಿಳಿಯಗೊಡು ತ್ತಿರಲಿಲ್ಲ. ಸದಾ ಅವರು ಏನನ್ನೋ ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ಯಾರಿಗಾದರೂ ಅನಿಸುವಂತೆ ಅವರ ವರ್ತನೆ ಇರುತ್ತಿತ್ತು.

ಅವರ ಜೀವನ ಗ್ರೀಕ್ ದುರಂತ ನಾಟಕವೊಂದನ್ನು ಭಾರತದ ವಿಶಾಲ ರಂಗಭೂಮಿಯಲ್ಲಿ ನೋಡಿದ ಅನುಭವವಾಗುತ್ತದೆ. ಅವರ ಜೀವನ ವೃತ್ತಾಂತದ ಬಗ್ಗೆ ಬರೆಯಬೇಕು ಎಂದು ಎಲ್ಲ ಬಯೋಗ್ರಾಫರುಗಳಿಗೂ ಅನಿಸುತ್ತದೆ. ಆದರೆ ಅವರ ಬಗ್ಗೆ ಬರೆದವರಾರಿಗೂ ಸಂಪೂರ್ಣ ನ್ಯಾಯವೊದಗಿಸಲು ಸಾಧ್ಯವಾಗಿಲ್ಲ.

ಸೋನಿಯಾ ಗಾಂಧಿ ಭಾರತದ ನೆಲದ ಮೇಲೆ ಕಾಲಿಟ್ಟ ದಿನದಿಂದಲೂ ಅವರನ್ನು ರಾಯಲ್ ಆಗಿ ಎಲ್ಲರೂ ಟ್ರೀಟ್
ಮಾಡಿದರು. ಮನೆಯಲ್ಲಿ, ಪಕ್ಷದಲ್ಲಿ ಮತ್ತು ಹೊರಗೆ ಸಹ ಅವರನ್ನು ಅದೇ ರೀತಿ ನಡೆಸಿಕೊಳ್ಳಲಾಯಿತು. ಎಲ್ಲರಿಗಿಂತ
ಭಿನ್ನವಾಗಿ, ಅವರನ್ನು ವಿಶೇಷ ಮಮತೆಯಿಂದ ನಡೆಸಿಕೊಳ್ಳಲಾಯಿತು. ಅದಕ್ಕೆ ಅವರ ವಿದೇಶಿ ಮೂಲ ಮತ್ತು ಅವರು
ಯಾರ ಪತ್ನಿ ಎಂಬುದು ಕಾರಣವಾಗಿರಬಹುದು. ವರ್ಷಗಳು ಉರುಳಿದಂತೆ ಅವರು ನಾಚಿಕೆಯ, ಆತ್ಮವಿಶ್ವಾಸ ಕೊರತೆಯ,
ದುರ್ಬಲ ವ್ಯಕ್ತಿಯಿಂದ, ಮಹತ್ವಾಕಾಂಕ್ಷೆಯುಳ್ಳ, ನಿಷ್ಠುರ ನಾಯಕಿಯಾಗಿ ಹೊರಹೊಮ್ಮಿದರು.

ಸೋನಿಯಾಗೆ ಸ್ವಲ್ಪ ಕಿರಿಕಿರಿಯಾದರೂ ಸಾಕು, ಕಾಂಗ್ರೆಸ್ ಪಕ್ಷದಲ್ಲಿ ಅಲವರಿಕೆಯಾಗುತ್ತಿತ್ತು. ಸೋನಿಯಾ ಗಾಂಧಿ ಅಧ್ಯಕ್ಷೆ
ಯಾಗಿ ಇದ್ದಷ್ಟು ಕಾಲ, ಬೇರೆ ಯಾರೂ ಆ ಹುz ಮೇಲೆ ಕಣ್ಣು ಹಾಕುವ ಧೈರ್ಯ ಮಾಡಲಿಲ್ಲ. ಪಕ್ಷದ ಮೇಲೆ ಅವರ
ನಿಯಂತ್ರಣ ಸಂಪೂರ್ಣವಾಗಿತ್ತು, ಬಿಗಿಯಾಗಿತ್ತು. ಜವಾಹರ ಲಾಲ್ ನೆಹರು ಅವರಿಗೂ ಪಕ್ಷದ ಮೇಲೆ ಅಷ್ಟು ನಿಯಂತ್ರಣ
ವಿರಲಿಲ್ಲ. ಆದರೆ ಅದನ್ನು ಸೋನಿಯಾ ಸಾಧಿಸಿದ್ದರು. ಪಕ್ಷದಲ್ಲಿ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶವೇ ಇರಲಿಲ್ಲ.
ಇನ್ನು ಭಿನ್ನಮತ ಮಾತಂತೂ ದೂರವೇ ಉಳಿಯಿತು.

ಮೌನವನ್ನು ಒಂದು ಅಸವಾಗಿ ಬಳಸಲಾಯಿತು. ಅವರ ಒಂದೊಂದು ಸೂಕ್ಷ್ಮ ಹಾವಭಾವ, ಸೂಚಕಗಳನ್ನು ಸಂದೇಶವಾಗಿ
ಬಿಂಬಿಸಲಾಯಿತು. ಅವರು ದಿಟ್ಟಿಸಿ ನೋಡಿದರೆ ಅದನ್ನೇ ಒಂದು ಎಚ್ಚರಿಕೆ ಎಂಬಂತೆ ಭಾವಿಸಲಾಯಿತು. ಪ್ರತಿಪಕ್ಷಗಳೂ ಅವರನ್ನು ಸೂಕ್ಷ್ಮವಾಗಿಯೇ ಟೀಕಿಸಿದವು. (ಇದು ಕ್ರಮೇಣ ಬದಲಾಯಿತೆನ್ನಿ.) ಕಾಂಗ್ರೆಸ್ ಪಕ್ಷದ ವೈಫಲ್ಯ, ಪರಾಭವಕ್ಕೆ ಸೋನಿಯಾ ಅವರನ್ನು ಯಾರೂ ಗುರಿ ಮಾಡಲಿಲ್ಲ.

ಅವರತ್ತ ಬೊಟ್ಟು ಮಾಡುವ ದಿಟ್ಟತನ, ಎದೆಗಾರಿಕೆಯನ್ನು ಯಾರೂ ತೋರಲಿಲ್ಲ. ‘ಸೋನಿಯಾಜಿ ತಪ್ಪು ಮಾಡುವವರಲ್ಲ’
ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಮಂತ್ರವಾಗಿತ್ತು. ಸೋನಿಯಾ ತಮ್ಮ 10, ಜನಪಥ್ ನಿವಾಸದಿಂದ ಭಾರತವನ್ನು ಆಳಿದರು. ಆದರೆ ಅವರು ಆಂತರಿಕವಾಗಿ ಅನಿಶ್ಚಿತತೆ, ಅಭದ್ರತೆಯಿಂದ ನರಳುತ್ತಿದ್ದರು. ಅವರಿಗೆ ಆತ್ಮವಿಶ್ವಾಸ ಇರಲಿಲ್ಲ. ಅವರ ಮೂಡು ಕ್ಷಣಕ್ಷಣಕ್ಕೂ ಬದಲಾಗುತ್ತಿತ್ತು.

ಅದನ್ನು ಗ್ರಹಿಸುವುದು ಅವರ ನಿಕಟವರ್ತಿಗಳಿಗೂ ಸುಲಭವಾಗಿರಲಿಲ್ಲ. ಆದರೆ ಈ ಗುಣವನ್ನೂ ಒಂದು ಉತ್ತಮ ಗುಣ
ಲಕ್ಷಣವೆಂಬಂತೆ ಹೊಗಳಲಾಯಿತು. ವ್ಯಕ್ತಿ ಪೂಜೆಯ ಈ ಬಡಿವಾರವನ್ನು ಒಂದು ವಿಶೇಷ ಲಕ್ಷಣವೆಂಬಂತೆ ಬಿಂಬಿಸಲಾಯಿತು.
ದಿಲ್ಲಿ ರಾಜಕೀಯ ಅವರನ್ನು ಮತ್ತಷ್ಟು ಗಟ್ಟಿಗೊಳಿಸಿತು. ಒಂದು ಮಾತು.. ಈ ಮೇಲಿನ ಯಾವ ಮಾತುಗಳೂ ನನ್ನವಲ್ಲ. ಇವನ್ನು ಕಾಂಗ್ರೆಸ್ಸಿನ ಹಿರಿಯ ನಾಯಕ, ಗಾಂಧಿ ಕುಟುಂಬದ ಒಂದು ಕಾಲದ ಪರಮಾಪ್ತ ಕೆ.ನಟವರ ಸಿಂಗ್ ಹೇಳಿದ್ದು. One Life Is Not Enough ಎಂಬ ಅವರ ಆತ್ಮಕಥೆಯಲ್ಲಿ ನಟವರ ಸಿಂಗ್ ಈ ಮಾತುಗಳನ್ನು ಬರೆದಿದ್ದಾರೆ.

ಎರಡು ಪ್ರಸಂಗಗಳು
ಒಮ್ಮೆ ಅಮೆರಿಕದ ಖ್ಯಾತ ಬಾಕ್ಸರ್ ಮಹಮದ್ ಅಲಿ ವಿಮಾನದಲ್ಲಿ ಪ್ರಯಾಣಿಸುವಾಗ, ಸೀಟ್ ಬೆಲ್ಟ್ ಹಾಕಿಕೊಳ್ಳಲು
ನಿರಾಕರಿಸಿದರು. ಗಗನಸಖಿ ಬಂದು ಸೀಟ್ ಬೆಲ್ಟ್ ಹಾಕಿಕೊಳ್ಳುವಂತೆ ಹೇಳಿದರೂ ಅಲಿ ಕೇಳಲಿಲ್ಲ. “Superman don’t need no seatbelt ಗೊತ್ತಿರಲಿ’ ಎಂದು ಅಲಿ ಬಡಾಯಿ ಕೊಚ್ಚಿಕೊಂಡರು.

ಅದಕ್ಕೆ ಗಗನಸಖಿ ಹೇಳಿದಳು – Superman don’t need no airplane neither.’ ಇನ್ನೊಂದು ಪ್ರಸಂಗ. ನೀವು ಇಲ್ಕಾ ಚೇಸ್ ಹೆಸರನ್ನು ಕೇಳಿರಬಹುದು. ಆಕೆ ಅಮೆರಿಕದ ಖ್ಯಾತ ನಟಿ, ರೇಡಿಯೋ ಕಲಾವಿದೆ ಮತ್ತು ಕಾದಂಬರಿಗಾರ್ತಿ. ಒಮ್ಮೆ ಇಲ್ಕಾ ಚೇಸ್ ಗೌರವಾರ್ಥ ಅವಳ ಅಭಿಮಾನಿಗಳು ಒಂದು ಔತಣಕೂಟವನ್ನು ಏರ್ಪಡಿಸಿದ್ದರು.

ಅಲ್ಲಿ ಚೇಸ್ ಅವಳ ಟೀಕಾಕಾರ್ತಿಯೊಬ್ಬಳು ಬಂದು, ‘ಚೇಸ್ ಅವರೇ, ನಿಮ್ಮ ಎಲ್ಲ ಕಾದಂಬರಿಗಳು ಅದ್ಭುತವಾಗಿವೆ. ನಾನು
ನಿಮ್ಮ ಬರಹಗಳ ದೊಡ್ಡ ಅಭಿಮಾನಿ. ಅಂದ ಹಾಗೆ ಈ ಕಾದಂಬರಿಗಳನ್ನು ನಿಮಗೆ ಯಾರು ಬರೆದುಕೊಡುತ್ತಾರೆ ?’ ಎಂದು ಕೇಳಿದಳು.

ಚೇಸ್‌ಗೆ ಅವಳ ಉದ್ದೇಶವೇನು ಎಂಬುದು ತಕ್ಷಣ ಗೊತ್ತಾಗಿ ಹೋಯಿತು. ‘ಡಾರ್ಲಿಂಗ್, ನೀವು ನನ್ನ ಕಾದಂಬರಿಗಳನ್ನು
ಮೆಚ್ಚಿಕೊಂಡಿದ್ದು ಕೇಳಿ ನನಗೆ ಅತೀವ ಸಂಗತಿಯಾಗಿದೆ. ಅಂದ ಹಾಗೆ ನನ್ನ ಕಾದಂಬರಿಗಳನ್ನು ನಿಮಗೆ ಓದಿದವರು ಯಾರು?’ ಎಂದು ಚೇಸ್ ಕೇಳಿದರು. ಆ ಅಭಿಮಾನಿ ಮರುಮಾತಾಡದೇ ಅಲ್ಲಿಂದ ಕಾಲ್ಕಿತ್ತಳು.