ಅಭಿವ್ಯಕ್ತಿ
ಶ್ರೀವರಸದ್ಯೋಜಾತ ಸ್ವಾಮೀಜಿ
ಮನುಷ್ಯನ ಬದುಕು ಭೂತಕ್ಕಿಂತಲೂ ವರ್ತಮಾನ, ವರ್ತಮಾನಕ್ಕಿಂತಲೂ ಭವಿಷ್ಯತ್ ತುಂಬಾ ಬದಲಾಗಿರುತ್ತದೆ. ಏಕೆಂದರೆ ಕಾಲಚಕ್ರದ ನಿಯಮವೇ ಹೀಗೆ. ಭೂಮಿಯೇ ಚಕ್ರಾಕಾರದಲ್ಲಿ ಸೂರ್ಯ ಚಂದ್ರರನ್ನು ಸುತ್ತುತ್ತಿರುವಾಗ ಮನುಷ್ಯನ ವರ್ತಮಾನ ಹಾಗೂ ಭವಿಷ್ಯತ್ತು ಸಹಜವಾಗಿ ತಮ್ಮ ಬದಲಾವಣೆಯ ರೂಪವನ್ನು ಹೊಂದುತ್ತವೆ. ತಾಯಿಯ ಗರ್ಭದಲ್ಲಿ ಬೀಜಾಂಕುರ ಗೊಳ್ಳುವ ಮೊದಲು ರಕ್ತ, ಮಜ್ಜೆ, ಮಾಂಸದಿಂದಲೂ ಪರಿಪೂರ್ಣ ರೂಪ ತಾಳಿರುವುದಿಲ್ಲ.
ಪ್ರತಿ ಸೃಷ್ಟಿಯ ಹಿಂದೆ ಒಬ್ಬ ಸೃಷ್ಟಿಕರ್ತನಿರಲೇಬೇಕು ಎಂಬ ಮಾತು ಆದಿ ಹಾಗೂ ಅಂತ್ಯದ ಪಲ್ಲವಿ ಯಾಗಿರುತ್ತದೆ. ಕಣ್ಣಿಗೆ
ಕಾಣದ ಭಗವಂತನು 84 ಲಕ್ಷ ಜೀವರಾಶಿಗಳ ಸೃಷ್ಟಿಕರ್ತನಾದರೆ ಆತನು ಸೃಷ್ಟಿಸಿರುವ ಲಕ್ಷಾಂತರ ಜೀವರಾಶಿಗಳು ಮಾತ್ರ ಕಣ್ಣಿಗೆ ಕಾಣುವಂತೆ ತಮ್ಮ ಸೃಷ್ಟಿ ಕಾರ್ಯವನ್ನು ಮಾಡುತ್ತವೆ. ಒಂದು ಜೀವಿಯ ಸುತ್ತ ಹತ್ತಾರು ಜೀವಿಗಳು ಪೂರಕವಾಗಿ ಹಾಗೂ
ಮಾರಕವಾಗಿ ವರ್ತಿಸುತ್ತಿರುತ್ತವೆ.
ಪೂರಕ ಮತ್ತು ಮಾರಕವೆಂಬುದು ಮೂಲ ಸೃಷ್ಟಿಕರ್ತ ಭಗವಂತನಿಗೆ ಮಾತ್ರ ಕಾಡದ ಶಕ್ತಿಯಾಗಿದೆ. ಇದೇ ಮೂಲ ಸೃಷ್ಟಿಕರ್ತನ ವೈಶಿಷ್ಟ್ಯ. ಆತ ಇದನ್ನು ತನ್ನ ವಿನೋದಕ್ಕಾಗಿ ಸೃಷ್ಟಿಸಿದರೂ ತನ್ನ ಸೃಷ್ಟಿಯ ವೈಶಿಷ್ಟ್ಯತೆಯನ್ನು ಮಾತ್ರ ಯಾವ ವಿಜ್ಞಾನಕ್ಕೂ,
ಯಾವ ಶಕ್ತಿಗೂ ನಿಲುಕದಂತೆ ಸೃಷ್ಟಿ ಕಾರ್ಯವು ನಿರಾತಂಕವಾಗಿ ಸಾಗಿದೆ.
ಭಗ + ವಂತ = ಭಗವಂತ ಎಂಬ ಈ ಪವಿತ್ರ ಶಬ್ದದಲ್ಲಿ ಎಲ್ಲಾ ಸೃಷ್ಟಿಯ ಮಾಲೀಕನು ಎಂಬ ಅರ್ಥ ತುಂಬಿದೆ. ಯಾವುದೇ ಒಂದು ವಸ್ತು ರಚನೆಗೊಂಡರೆ ಆ ವಸ್ತುವಿನ ತಯಾರಕನು ನಮಗೆ ಸ್ಪಷ್ಟವಾಗಿ ಗೋಚರಿಸುತ್ತಾನೆ. ಆದರೆ ಇವೆಲ್ಲವುಗಳ ಸೃಷ್ಟಿ ಕರ್ತನು ಮಾತ್ರ ನಮಗೆ ಗೋಚರವಾಗುವುದು ಕೇವಲ ನಮ್ಮ ಕಲ್ಪನೆಗೆ ಹಾಗೂ ಕನಸಿಗೆ, ಮನಸಿಗೂ ಆತ ಬಂದು ನಿಲ್ಲುತ್ತಾನೆ. ಪ್ರತಿ ಜೀವಿಯೂ ಒಂದನೊಂದನ್ನು ಕೊಂದು ತಿನ್ನುವಂತ ಆಹಾರ ಸರಪಳಿ ಕಾಣಬಹುದಾಗಿದೆ. ಕುರಿಯನ್ನು ತೋಳ, ಜಿಂಕೆ ಯನ್ನು ಸಿಂಹ, ಹಸು ಹುಲಿಗೆ ಆಹಾರವಾಗಿದೆ. ಆದರೆ ಮನುಷ್ಯ ಮುಕ್ಕಾಲು ಜೀವಿಗಳನ್ನು ತನ್ನ ಆಹಾರವನ್ನಾಗಿಸಿಕೊಂಡಿ ದ್ದಾನೆ.
ತೆರೆಮರೆಯಲ್ಲಿ ಭಗವಂತ ನಮ್ಮ ಕಣ್ಣಿಗೆ ಕಾಣದಿದ್ದರೂ ನೀ ಸೃಷ್ಟಿಸಿದ ವೈಚಿತ್ರ್ಯದೊಳಗಿರುವ ಕಲ್ಲು, ಮಣ್ಣು, ಗಿಡ ಮರದಲ್ಲಿ
ನಿನ್ನನ್ನು ಕಂಡು ಪೂಜಿಸಿದೆವು ನಾವು! ನಿನ್ನ ನಿಜ ರೂಪ ನಮ್ಮ ಕಣ್ಣಿಗೆ ಕಾಣದಿದ್ದರೂ ಕೇವಲ ನಿನ್ನನ್ನು ಕಲ್ಪಿಸಿಕೊಂಡು ಪೂಜಿಸಿದ ಮಾತ್ರಕ್ಕೆ ನಮಗೆ ಮನಃ ಶಾಂತಿಯನ್ನು ನೀಡಿದೆ, ಅಗಾಧವಾದ ಧೈರ್ಯ ಮತ್ತು ಆತ್ಮವಿಶ್ವಾಸ ನೀಡಿದೆ. ಭಗವಂತನೇ ಇವೆಲ್ಲವೂ ನೀನಾಗಿರುವಾಗ ಮತ್ತೆ ನಿನ್ನನ್ನು ನಾನು ಬೇರೆ ಯಾವುದರಲ್ಲಿ ಹುಡಕಲಿ? ಹುಡಕಲು ಹೋದರೆ ನೀನು ಸಿಗುವವ ನಲ್ಲ, ಮಡುವಿನಲ್ಲಿ ಅರಸುವಡೆ ನೀನು ಮತ್ಸ್ಯ ಮಂಡೂಕನಲ್ಲ, ಅಡವಿಯಲ್ಲಿ ಹುಡುಕುವೆಡೆ ನೀನು ಗಿಡಗಂಟಿ ತಾನಲ್ಲ, ಹುಡುಕುತ್ತ ಹೋದರೆ ನೀನು ಎಲ್ಲಿಯೂ ಇಲ್ಲ, ಹುಡುಕದೇ ಹೋದರೆ ನಾವು ಕಲ್ಪಿಸಿದ ವಸ್ತುವಿನಲ್ಲಿ ನೀನು ನಮಗೆ ಸಿಗುವೆ.
ಅವರವರ ಭಾವಕ್ಕೆ ಅವರವರ ತೆರನಾಗಿ ರೂಪ ತಾಳುವ ನೀನು ನಮ್ಮೆಲ್ಲರ ಪಾಲಿಗೆ ಆಸ್ತಿಕನಾಗಿರುವೆ. ಭಾವನೆಯಲ್ಲಿ ನೀ ಕೊಟ್ಟ ಅರಿವಿನ ಶಕ್ತಿಯಿಂದ ನೀನಿಲ್ಲ ಎಂಬ ನಾಸ್ತಿಕತೆಯನ್ನು ಮಾತ್ರ ನಾವು ಖಂಡಿತವಾಗಿಯೂಹೊಡೆದೊಡಿಸಲೇಬೇಕು. ನಿನ್ನ ಅಗಾಧ ಸೃಷ್ಟಿಯಲ್ಲಿ ಅನೇಕ ಅತ್ಯದ್ಭುತಗಳನ್ನು ಕಾಣುತ್ತೇವೆ. ಹಿಮಾಲಯದ ಗಿರಿಶಿಖರ, ಸಪ್ತ ಸಾಗರಗಳಿವೆ. ಸಾಗರಗಳಿಗೆ ಸಾವಿರಾರು ನದಿಗಳ ಸಂಗಮ, ಕಣ್ಣಿಗೆ ಕಂಡಲೆಲ್ಲಾ ಗಿಡಮರ ಬಳ್ಳಿಗಳು, ಅನೇಕ ಜೀವರಾಶಿಗಳು, ಜಲಚರಗಳು ಇವೆಲ್ಲಾ ಅದ್ಭುತ ಗಳನ್ನು ವರ್ಣಿಸುತ್ತಾ ಹೋದರೆ ಅತೀ ಎತ್ತರದ ಶಿಖರಗಳಿಗೆ ‘ಗೌರಿ ಶಂಕರ’ ಎಂದೇ ಕರೆಯುವ ವಾಡಿಕೆ ನಮ್ಮಲ್ಲಿದೆ.
ಮೂಲ ಸೃಷ್ಟಿಯು ಶಿವಶಕ್ತಿಯಿಂದ ಆಗಿರುವುದರಿಂದ ನಮ್ಮ ಕಲ್ಪನೆ ಮಾತಾಪಿತರ ಕಲ್ಪನೆಗೆ ಸಾಗುತ್ತದೆ. ಶಿವ ಪಾರ್ವತಿಯರೇ ನಮ್ಮ ಕಣ್ಣಂಚಿನ ಪೂಜ್ಯ ದೈವತ್ವವಾಗಿವೆ. ಕೋಟಿ ಕೋಟಿ ಮಾನವರಿದ್ದರೂ ಒಬ್ಬರಂತೆ ಇನ್ನೊಬ್ಬರಿಲ್ಲ, ಇದೇ ನಿನ್ನ ಸೃಷ್ಟಿಯ
ವೈಚಿತ್ರ್ಯ. ಮನುಷ್ಯ ಸೃಷ್ಟಿಸಿದ ವಸ್ತುಗಳಿಗೆ ಗುರುತಿನ ಮುದ್ರೆಯೊತ್ತಿ ಗುರುತಿಸುತ್ತಾನೆ. ಆದರೆ ನೀ ಸೃಷ್ಟಿಸಿದ ವಸ್ತುವಿಗೆ ಯಾವ ಮುದ್ರೆಯ ಅವಶ್ಯಕತೆಯೂ ಇಲ್ಲ. ಅಷ್ಟು ಸುಂದರವಾಗಿ ನೈಪುಣ್ಯತೆಯಿಂದ ಸೃಷ್ಟಿಸಿರುವೆ.
ಸೃಷ್ಟಿಯ ನಂತರ ತಾನು ಸೃಷ್ಟಿಸಿದ ಜೀವಿಯೂ ಅದು ಯಾವುದೇ ಆಗಿರಲಿ ತನ್ನ ಸೃಷ್ಟಿಯ ಜೀವಾಣುವಿಗೆ ಬಲ ಬರುವವರೆಗೆ ಲಾಲನೆ ಪಾಲನೆ ಪೋಷಣೆ ಮಾಡುತ್ತದೆ. ಬಲ ಬಂದ ನಂತರ ಅದನ್ನು ಸ್ವಚ್ಛಂದವಾಗಿ ಬದುಕಲು ಬಿಡುತ್ತದೆ. ರೆಕ್ಕೆ ಬಲಿತ
ಹಕ್ಕಿ, ಆಗಸಕ್ಕೆ ಹಾರುವಂತೆ ಆದರೆ ಯಾವ ಜೀವಿಯ ಸೃಷ್ಟಿಯಿಂದ ಲಾಲನೆ ಪಾಲನೆ ಪೋಷಣೆಯಿಂದ ತನ್ನ ರೆಕ್ಕೆಯನ್ನು ಬಲಗೊಳಿಸಿಕೊಂಡಿರುತ್ತದೆಯೋ ಆ ಹಕ್ಕಿ ಮಾತ್ರ ತನ್ನ ಕರ್ತವ್ಯದಿಂದ ವಂಚಿತಗೊಳ್ಳಲಾರದು.
ತನಗೆ ಜನ್ಮಕೊಟ್ಟ ಜೀವ ಜೋಡಿಗಳಂತೆ ತಾನೂ ಬದುಕು ನಿರ್ಮಿಸಿಕೊಳ್ಳುತ್ತದೆ. ನಿರ್ಮಿಸಿಕೊಂಡು ಆಹಾರ, ನಿದ್ರಾ, ಭಯ, ಮೈಥುನ ಇವುಗಳ ಚಕ್ರದಲ್ಲಿ ಸುಂದರವಾದ ಬದುಕನ್ನು ನಿರ್ಮಿಸಿಕೊಳ್ಳುತ್ತದೆ. ನಿರ್ಮಿಸಿಕೊಂಡು ತಾನೂ ತನ್ನ ಕರ್ತವ್ಯ
ಪಾಲನೆ ಮಾಡುತ್ತದೆ. ಮನುಷ್ಯ ಬದುಕುತ್ತಿರುವ ರೀತಿ ಭೂತ, ವರ್ತಮಾನ, ಭವಿಷ್ಯತ್ತಿನ ಈ ಮಾನವತ್ರಯಗಳಲ್ಲಿ ಮನುಷ್ಯನ ಬದುಕು ಭೂತಕ್ಕಿಂತಲೂ ವರ್ತಮಾನ, ವರ್ತಮಾನಕ್ಕಿಂತಲೂ ಭವಿಷ್ಯತ್ ತುಂಬಾ ಬದಲಾಗಿರುತ್ತದೆ. ಏಕೆಂದರೆ ಕಾಲಚಕ್ರದ
ನಿಯಮವೇ ಹೀಗೆ. ಭೂಮಿಯೇ ಚಕ್ರಾಕಾರದಲ್ಲಿ ಸೂರ್ಯ ಚಂದ್ರರನ್ನು ಸುತ್ತುತ್ತಿರುವಾಗ ಮನುಷ್ಯನ ವರ್ತಮಾನ ಹಾಗೂ ಭವಿಷ್ಯತ್ತು ಸಹಜವಾಗಿ ತಮ್ಮ ಬದಲಾವಣೆಯ ರೂಪವನ್ನು ಹೊಂದುತ್ತವೆ.
ತಾಯಿಯ ಗರ್ಭದಲ್ಲಿ ಬೀಜಾಂಕುರಗೊಳ್ಳುವ ಮೊದಲು ರಕ್ತ, ಮಜ್ಜೆ, ಮಾಂಸದಿಂದಲೂ ಪರಿಪೂರ್ಣ ರೂಪ ತಾಳಿರುವುದಿಲ್ಲ. ಅಂಕುರಗೊಂಡ ಮೇಲೆ ಬೆಳೆಯುತ್ತಾ ಪಿಂಡವಾಗುತ್ತದೆ. ಪಿಂಡಜವಾಗಲಿ, ಅಂಡಜವಾಗಲಿ ಭೂಮಿಗೆ ಜೀವ ರೂಪ ತಾಳಿ ಕಣ್ಣಿಗೆ ಕಾಣಿಸಿಕೊಳ್ಳುತ್ತದೆ. ಜೀವರೂಪಕ್ಕಿಂತ ಪೂರ್ವದಲ್ಲಿ ಅದು ಒಂದು ಘನೀಕರಣಗೊಂಡ ವಸ್ತು ಎನಿಸುತ್ತದೆ. ಇವೆರಡರ ರೂಪ ಭೂತ ಹಾಗೂ ವರ್ತಮಾನವನ್ನು ನಮಗೆ ಸೂಚಿಸುತ್ತವೆ.
ಭವಿಷ್ಯತ್ತಿನಲ್ಲಿ ನಾವು ಕಾಣುವ ರೂಪವೇ ಅದ್ಭುತ ಬದಲಾವಣೆಯ ಕಲ್ಪವಾಗಿರುತ್ತದೆ. ಬಾಲ್ಯ, ಯೌವ್ವನ, ಮುಪ್ಪು ನಮ್ಮ ಭಷ್ಯತ್ತಿನ ರೂಪ ಗಳಾಗಿರುತ್ತವೆ. ಎಲ್ಲಾ ಜೀವಿಯೂ ಬದುಕುವ ಹಕ್ಕು ಪಡೆದುಕೊಂಡೆ ಭೂಮಿಗೆ ಕಣ್ಣು ತೆರೆದು ಬಂದಿರುತ್ತದೆ. ಆದರೆ ಒಂದು ಆಶ್ಚರ್ಯವೆಂದರೆ ಭಗವಂತನು ಮಾತ್ರ ಪ್ರತಿ ಜೀವಿಗೂ ಬಗೆ ಬಗೆಯ ಆರೋಗ್ಯ, ಆಯುಷ್ಯ ನೀಡಿ ಭೂಮಿಗೆ
ಕಳಿಸಿರುತ್ತಾನೆ. ಆತನು ನಿಗದಿಪಡಿಸಿದ ಆಯುಷ್ಯದ ಪರಿಮಿತಿಯಲ್ಲಿಯೇ ಪ್ರತಿ ಜೀವಿಯೂ ಬಾಳಿ ಬದುಕುತ್ತದೆ. ಇಲಿಯ ಆಯುಷ್ಯ ಎರಡೇ ವರ್ಷವಾದರೂ ಮಾನವನ ನೂರು ವರ್ಷದ ಎಲ್ಲಾ ಕ್ರಿಯೆಗಳನ್ನು ಅದು ಮಾಡಿ ಮುಗಿಸಿ ಬಿಡುತ್ತದೆ.
ಹೂವಿನ ಆಯುಷ್ಯ ಕೇವಲ ಅರ್ಧ ದಿನವಾದರೂ ಅರ್ಧ ದಿನದ ತನ್ನ ಆಯುಷ್ಯದಲ್ಲಿ ಮಾನವನ ನೂರು ವರ್ಷದ ಆಯುಷ್ಯ ವನ್ನು ನಾಚಿಸುವಂತೆ ಬದುಕುತ್ತದೆ. ಮಾನವ ಬದುಕಿನ ಸಂಗಾತಿ ಪ್ರಾಣಿಗಳಲ್ಲಿ ಶ್ವಾನವು ಕೇವಲ ಹನ್ನೆರಡು ವರ್ಷ ಬಾಳಿ ಬದುಕುತ್ತದೆ. ಈ ಅವಧಿಯಲ್ಲಿ ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಪರಿಪೂರ್ಣಗೊಳಿಸುತ್ತದೆ. ಮನುಷ್ಯ ಮಾತ್ರ ನೂರು ವರ್ಷದ ಆಯುಷ್ಯ ವನ್ನು ಭಗವಂತನಲ್ಲಿ ಬೇಡಿಕೊಂಡು ಬದುಕನ್ನು ಕಟ್ಟಿಕೊಂಡರೂ ಭಗವಂತ ಮಾತ್ರ ಆತನಿಗೆ ಪುರುಷಾರ್ಥಗಳನ್ನು ನೀಡಿ ಅವುಗಳನ್ನು ಅಚ್ಚುಕಟ್ಟಾಗಿ ಬದುಕಿನ ಅವಧಿಯಲ್ಲಿ ಕಳೆಯಬೇಕೆಂದು ಜ್ಞಾಪಿಸಿದ್ದಾನೆ.
ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚರ್ತುವಿಧ ಫಲಪುರುಷಾರ್ಥಗಳು. ಮಾನವನು ಮಾತ್ರ ಪುರುಷಾರ್ಥಗಳನ್ನು ಗೆಲ್ಲಲೇ ಬೇಕು. ಪುರುಷಾರ್ಥಗಳು ಹೆಜ್ಜೆ ತಪ್ಪಿದರೆ ಮಾನವ ಇಡೀ ಬದುಕು ಹೆಜ್ಜೆ ತಪ್ಪುತ್ತದೆ. ಭೂಮಿ, ಗಾಳಿ, ನೀರು, ಶಾಖ, ಬಯಲು ಈ ಪಂಚಭೂತಗಳಿಂದಲೇ ನಿರ್ಮಾಣಗೊಂಡ ಮಾನವನ ಮೂಲ ಸೌಕರ್ಯಗಳಾದ ಆಹಾರ, ವಸತಿ, ನೀರು ಮುಂತಾದವುಗಳನ್ನು ಮಾನವ ರಕ್ಷಿಸದೇ ಹೋದರೆ ಮನುಷ್ಯನಿಗೆ ಸೃಷ್ಟಿಯು ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತದೆ.
ಮನುಷ್ಯ ದುರಾಸೆಗೆ ಒಳಪಡಬಾರದು. ಆಸೆಗೆ ಆತನ ಬದುಕುವ ಇತಿಮಿತವಾಗಿರಬೇಕು. ಆಗ ಮನುಷ್ಯನು ತನ್ನ ಆಯುಷ್ಯದ ಪರಿಪೂರ್ಣತೆಯನ್ನು ಕಳೆಯಬಲ್ಲ. ನಿಸರ್ಗವನ್ನು ರಕ್ಷಿಸದೇ ಹೋದರೆ ನಿಸರ್ಗವು ಖಂಡಿತವಾಗಿಯೂ ನಮ್ಮನ್ನು ಭಕ್ಷಿಸುತ್ತದೆ.
ನಿಸರ್ಗದಂಥ ಉಪಕಾರಿ ಮತ್ತೊಂದಿಲ್ಲ. ಅದನ್ನು ನಾವು ಗಮನಿಸದೇ ಹೋದರೆ ಅದು ನಮಗೆ ಅಪಕಾರ ಮಾಡುವುದರಲ್ಲಿ ಹಿಂಜರಿಯುವುದಿಲ್ಲ. ಹೀಗಾಗಿ ನಿಸರ್ಗವನ್ನು ನಾವು ಗೌರವಿಸಬೇಕು, ಪೂಜಿಸಬೇಕು ಹಾಗೂ ರಕ್ಷಿಸಬೇಕು. ಕಲ್ಲು ಮಣ್ಣುಗಳ ಗುಡಿಯೊಳಗೆ ಕಲ್ಲಿನ ಮೂರ್ತಿಯನ್ನು ಇಟ್ಟು ಪೂಜಿಸುವ ನಾವು ಅದು ನಿಸರ್ಗದ ಒಂದು ಭಾಗವೆಂಬುದನ್ನು ಮರೆತು ಬಿಡು ತ್ತೇವೆ.
ಇನ್ನೊಬ್ಬರ ಬದುಕನ್ನು ಪ್ರಶ್ನಿಸುವುದು ನಮ್ಮ ಕರ್ತವ್ಯವಲ್ಲ. ನಮ್ಮ ಬದುಕಿನ ಶ್ರೇಷ್ಠತೆಯನ್ನು ಜಗತ್ತಿನ ಮುಂದಿಟ್ಟು, ಜಗವೇ ನಮ್ಮ ಬದುಕಿನ ಫಲಿತಾಂಶವನ್ನು ನೀಡಬೇಕು. ಇದೇ ನಿಜವಾದ ಸೃಷ್ಟಿಯು ನಮಗೆ ಮೌನವಾಗಿ ನೀಡುವ ಉತ್ತರ. ಮಾನವನ ಬದುಕು ಪ್ರಕೃತಿ ನಿರ್ಮಿತ ಎಂಬುವುದನ್ನುಮರೆಯದಿರೋಣ.