Wednesday, 11th December 2024

ಪ್ರಾಣವನ್ನೇ ಲೆಕ್ಕಿಸದವರು ಮಾನಕ್ಕಾಗಿ ಹೆದರುತ್ತಾರೆಯೇ ?

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

ಕ್ರಿಕೆಟ್ ಕ್ರೀಡೆಯನ್ನೂ ಆಡುತ್ತಾ, ನೋಡುತ್ತಾ, ಅಭ್ಯಸಿಸುತ್ತಾ, ವಿಶ್ಲೇಷಿಸುತ್ತಾ ಸಾಕಷ್ಟು ಜೀವನ ಪಾಠಗಳನ್ನು ಕಲಿತಿದ್ದೇನೆ/ಕಲಿಯುತ್ತಿದ್ದೇನೆ. ಅದೊಂದು ಜನಪ್ರಿಯ ಕ್ರೀಡೆ ಎಂಬ ಕಾರಣಕ್ಕೆ ಹಲವು ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿ ಸಲು ನನ್ನ ಉಪನ್ಯಾಸಗಳಲ್ಲೂ ಕ್ರಿಕೆಟ್ ಉದಾರಹರಣೆಗಳನ್ನೂ, ಉಪಮೆಗಳನ್ನೂ ಬಳಸಿದ್ದೇನೆ.

ಹುಡುಗರಾರೋ ಆಡುವ ಮ್ಯಾಚ್ ನೋಡಲು ಸಂಬಂಧಪಡದವರೂ ನಿಂತು ವೀಕ್ಷಿಸುವಂತೆ ನಾನೂ, ಸಮಯವಿದ್ದಾಗಲೆಲ್ಲಾ, ಒಂದೆರಡು ನಿಮಿಷ ನಿಂತು ನೋಡುತ್ತೇನೆ. ನೋಡುವಾಗ, ಆ ಹುಡುಗರ ಆಂಗಿಕ ಭಾಷೆಯ ಮೂಲಕ ಅವರ ಗುಣಸ್ವಭಾವ ಗಳನ್ನು ಗಮನಿಸಿದ್ದೇನೆ. ಆಟಗಾರನೊಬ್ಬನಿಗೆ ಶಿಸ್ತಿದೆಯೋ ಇಲ್ಲವೋ, ಅವನು ಸಂಘಜೀವಿಯೋ ಅಲ್ಲವೋ, ಜತೆಯವರ ಸಮಸ್ಯೆಗೆ ಸ್ಪಂದಿಸುತ್ತಾನೋ ಇಲ್ಲವೋ, ನಂಬಿಗಸ್ಥನೋ ಅಲ್ಲವೋ ಎಂದೆಲ್ಲಾ ವಿಶ್ಲೇಷಿಸಲಿಕ್ಕೆ ಹೆಚ್ಚಿನ ಪರಿಣತಿಯೇನೂ ಬೇಕಿಲ್ಲ.

ಅಷ್ಟೇ ಅಲ್ಲ, ಪ್ರದರ್ಶಿಸಲ್ಪಡುವ ವೃತ್ತಿಪರತೆಯ ಮೂಲಕ, ಅದು ಲೀಗ್ ಕ್ರಿಕೆಟ್ ಆಗಿದ್ದಲ್ಲಿ, ಅದು ಯಾವ ಡಿವಿಷನ್ ಎಂದೂ
ಊಹಿಸಬಹುದು. ಉದಾಹರಣೆಗೆ, ಬ್ಯಾಟ್ಸ್ಮನ್ ಮಿಡ್ ಆಫ್‌ನತ್ತ ಬಾಲನ್ನು ಹೊಡೆದು ರನ್ ಗಳಿಸುವಾಗ ಹೊಡೆತದ ಬಿರುಸಿಗ ನುಸಾರವಾಗಿ ಲಾಂಗ್ ಆಫ್ ಮತ್ತು ಸ್ವೀಪರ್ ಕವರ್‌ನ ಫೀಲ್ಡರ್‌ಗಳು ಕೂಡ ಬಾಲು ಬೌಂಡರಿಗೆ ಹೋಗುವುದನ್ನು ತಪ್ಪಿಸಲು ಬಾಲನ್ನು ಅಟ್ಟಿಸಿಕೊಂಡು ಹೋಗುತ್ತಿರುವ ಮಿಡ್ ಆಫ್ ಫೀಲ್ಡರ್‌ನ ಪ್ರಯತ್ನಕ್ಕೆ ಸಾಥ್ ನೀಡುತ್ತಾರೆ.

ಅಂತೆಯೇ ಫೀಲ್ಡ್ ಮಾಡಿ ಚೆಂಡನ್ನು ಕೀಪರ್, ಬೌಲರ್ ತುದಿಗೆ ಎಸೆಯುವಾಗ ಪಿಚ್‌ನ ಆ ಬದಿಯಲ್ಲಿರುವ (ಫೈನ್ಲೆಗ್, ಸ್ಕ್ವೇರ್ ಲೆಗ್, ಮಿಡ್ ವಿಕೆಟ್, ಮಿಡ್ – ಆನ್ ಅಥವಾ ಬೇರಾವುದೇ) ಫೀಲ್ಡರ್ ಓವರ್‌ತ್ರೋನಿಂದ ಹರಿದುಹೋಗಬಹುದಾದ ಹೆಚ್ಚುವರಿ ರನ್‌ಗಳನ್ನು ತಪ್ಪಿಸುವಂತೆ ಕವರ್ ಮಾಡುತ್ತಾರೆ. ಇದು ಒಂದು ಸ್ವಾಭಾವಿಕ ಕ್ರಿಯೆ. ಅಭ್ಯಾಸದಿಂದಲೂ, ತರಬೇತಿಯಿಂದಲೂ,
ಜವಾಬ್ದಾರಿಯಿಂದಲೂ ನಡೆಯುವ ಪ್ರತಿನಿತ್ಯವೂ ನಡೆಯುವ ಪರಿಪಾಠ. ಇಲ್ಲಿ ಯಾರದ್ದೂ ಆದೇಶವಿಲ್ಲ, ಕೂಗಾಟವಿಲ್ಲ, ಹಾರಾಟವಿಲ್ಲ, ರನ್ ನಿಯಂತ್ರಿಸುವ ಧಾವಂತ, ಜರೂರಿದೆ. ಅದನ್ನು ಮ್ಯಾಚಿನ ಮುಂಚೆಯೂ ಯಾರಿಗೆ ಯಾರೂ ಹೇಳಿರುವು ದಿಲ್ಲ. ಇನ್ನೂ ಅನುಭವ ಗಳಿಸದ ಬಾಲಕರ ಮ್ಯಾಚುಗಳಲ್ಲಷ್ಟೇ ಚೀರಾಟ, ಅರಚಾಟ ನಡೆದಿರುತ್ತದೆ.

ಅನನುಭವ, ಇನ್ನೂ ಗಳಿಸದ ವೃತ್ತಿಪರತೆಯ ಅಭಾವ ಅದಕ್ಕೆ ಕಾರಣ. ಕೆಲವೊಮ್ಮೆ, ಅವನು ಓಡಲಿ, ಹೇಗಿದ್ದರೂ ಬಾಲ್
ನನಗಿಂತ ಅವನಿಗೇ ಹತ್ತಿರದಲ್ಲಿದೆ, ನಾನೇಕೆ ಓಡಿ ಮೈ ನೋಯಿಸಿಕೊಳ್ಳಲಿ ಎಂಬಂಥ ಅನುಕರಣೀಯವಲ್ಲದ ವರ್ತನೆ ಕೂಡ ಕಾಣಸಿಗುತ್ತದೆ. ಮೈದಾನದಲ್ಲಿರುವಷ್ಟು ಹೊತ್ತೂ ಪ್ರತಿಯೊಬ್ಬ ಆಟಗಾರನ ಗಮನವೆಲ್ಲಾ ಆಟದ ಮೇಲೇ ಕೇಂದ್ರೀಕೃತವಾಗಿ ರುತ್ತೆ. ಫೀಲ್ಡರ್‌ಗಳಂತೂ ಬ್ಯಾಟ್ಸನ್‌ನ್ನಿನ ಬ್ಯಾಟ್ಸ್‌‌ನತ್ತ ಲಕ್ಷ್ಯವಿಟ್ಟಿರುತ್ತಾರೆ. ಅವರ ಗಮನ ಬೇರೊಂದು ಕಡೆ ಸೆಳೆಯಲ್ಪಡ ಬಹುದಾದರೆ, ಅದು ನಾಯಕ ಆಗಿಂದಾಗ್ಗೆ ನೀಡಬಹುದಾದ ಸೂಚನೆಗಳತ್ತ. ಫೀಲ್ಡ್ ಪ್ಲೇಸ್ಮೆೆಂಟ್ ಮಾಡುವಾಗಲೂ ಅಷ್ಟೆ.

ಕೈಯಿಂದ ಒಂದು ಸಣ್ಣ ಸನ್ನೆ ಮಾಡಿದರೂ ತಕ್ಷಣ ಆತನ ನಿರ್ದೇಶನವನ್ನು ಪಾಲಿಸಬೇಕು. ಮಾತಿಗೆ ಅವಕಾಶವೇ ಇಲ್ಲ. ಇತ್ತೀಚಿನ ದಿನಗಳಂತೂ, ಓವರ್ ರೇಟ್ ಸ್ಲೋ ಆದರೆ ದಂಡ ಮುಲಾಜಿಲ್ಲದೆ ದಂಡ ಹಾಕುವುದರಿಂದ ಆಟಗಾರರು ಇನ್ನಷ್ಟು ಚುರುಕಾಗಿದ್ದು ಅವರ ಏಕಾಗ್ರತೆಯ ಮಟ್ಟ ಮತ್ತಷ್ಟು ಏರಿದೆ. ತಂಡದ ಸದಸ್ಯರು ತಮ್ಮ ತಮ್ಮ ಜವಾಬ್ದಾರಿಯನ್ನರಿತು ಆಡಿ ದಾಗ ತಂಡದ ನಾಯಕತ್ವದ ಒತ್ತಡ ಕಡಿಮೆ ಆಗುತ್ತದೆ.

ನಾಯಕನ ಪರಿಣತಿಯ ಸದ್ಬಳಕೆಯೂ ಆಗುತ್ತದೆ. ರಣರಂಗದಲ್ಲಿ ತಟಸ್ಥನಾಗಿ ನಿಂತ ಅರ್ಜುನನಿಗೆ ಕೌನ್ಸಿಲಿಂಗ್ ನೀಡಲು ಅಂದು ಕೃಷ್ಣನಿಗೆ ಸಾಧ್ಯವಾದದ್ದು ಅದು ಧರ್ಮಯುದ್ಧವಾದ್ದರಿಂದ. ದೊರಕುವ ಅಪಾರ ಹಣವೂ ಸೇರಿದಂತೆ ಮತ್ತಿತರ
ಕಾರಣಗಳಿಗೂ ಸಮರಾತ್ಮಕವಾಗಿರುವ ಇಂದಿನ ಕ್ರೀಡಾ ಜಗತ್ತಿನಲ್ಲಿ ಯುದ್ಧಕಾಲದ ಶಸ್ತ್ರಾಭ್ಯಾಸ ಅಸಾಧ್ಯ. ದೈಹಿಕವಾಗಿಯೂ, ಮಾನಸಿಕವಾಗಿಯೂ ಸದಾ ಸಜ್ಜಿತರಾಗಿರುವುದು ಯಾವುದೇ ಯೋಧರು ತಮ್ಮ ವೈಯಕ್ತಿಕ ನೆಲೆಯಲ್ಲಿ ತೋರಬಹುದಾದ, ತೋರಬೇಕಾದ ಕನಿಷ್ಠ ವೃತ್ತಿಪರತೆ. ಅಂತಹ ವೃತ್ತಿಪರತೆಯನ್ನು ಬೆಳೆಸಿಕೊಳ್ಳುವ, ಕಾಪಾಡಿಕೊಳ್ಳುವ ಅಗತ್ಯತೆಯನ್ನು ಆಧು ನಿಕ ಜೀವನ ನಮ್ಮೆಲ್ಲರಿಗೂ ವಹಿಸಿದೆ.

ಅದು ಕೇವಲ ಉದ್ಯೋಗವನ್ನು ಗಳಿಸುವ, ದೊರೆತ ಉದ್ಯೋಗವನ್ನು ಉಳಿಸಿಕೊಳ್ಳುವ ಸೀಮಿತ ಕಾರಣಕ್ಕಲ್ಲದೆ ಸಮಾಜದ ಒಟ್ಟಾರೆ ಅಭ್ಯುದಯಕ್ಕೆ ಅವಶ್ಯಕವೆಂಬ ಭಾವನೆ ಸಾರ್ವತ್ರಿಕವಾಗಬೇಕು. ಉದ್ಯೋಗಸ್ಥರಿಗೇ ಏಕೆ, ಮನೆಯಲ್ಲೇ ದಿನನಿತ್ಯವೂ
ಗೇಯುವ ಗೃಹಿಣಿಗೂ ಇದು ಅನ್ವಯಿಸುತ್ತದೆ. ಮಾಧ್ಯಮಗಳಲ್ಲೋ, ನವ ಮಾಧ್ಯಮಗಳಲ್ಲೋ ನಿತ್ಯ ಪರಿಚಯಸಲ್ಪಡುವ ನೂತನ ತಿನಿಸನ್ನು ಪ್ರಯೋಗಕ್ಕೆ ಒಡ್ಡುವಾಗ ಅನುಸೂಚಿಯನ್ನು ಯಥಾವತ್ತಾಗಿ ಅನುಸರಿಸುತ್ತಾರೆ.

ಅಕ್ಕಿ ಹಿಟ್ಟು ಇಷ್ಟು ಎಂದರೆ ಅಷ್ಟೇ ಪ್ರಮಾಣದ ಹಿಟ್ಟನ್ನು ತೆಗೆದುಕೊಳ್ಳುತ್ತಾರೆ. ಮುಗ್ಗಲಕ್ಕಿಯನ್ನು ಹಿಟ್ಟು ಮಾಡಿಸ ತೊಡಗು ವುದಿಲ್ಲ. ಕೆಂಪಕ್ಕಿಯೋ, ಬಾಸ್ಮತಿಯೋ ಸ್ಪಷ್ಟೀಕರಣ ಕೇಳುವುದಿಲ್ಲ. ತೆಂಗಿನತುರಿ ಎಂದರೆ ಬಲಿತ ತೆಂಗಿನಕಾಯಿ ಎಂಬುದು ವಿದಿತ, ಅದನ್ನು ವಿಶೇಷವಾಗಿ ವಿವರಿಸಬೇಕಿಲ್ಲ. ಕೊತ್ತಂಬರಿ ಸೊಪ್ಪು ನಾಟಿಯೋ, ಹೈಬ್ರಿಡ್ಡೋ ಎಂಬ ಗೊಂದಲ ಉಂಟಾಗು ವುದಿಲ್ಲ. ಸಣ್ಣನೆಯ ಉರಿ, ಎಂದರೆ ಗ್ಯಾಸ್ ಬರ್ನ್‌ದೇ ಎಂದು ತಿಳಿಸಿದವರಿಗೂ, ತಿಳಿಸಲ್ಪಟ್ಟವರಿಗೂ ಅದು ಅಂಡರ್ಸ್ಟುಡ್.

ಡಿಜಿಟಲ್ ಜಗತ್ತಿನಲ್ಲಿ ಎಲ್ಲೆಡೆ ಗದ್ದಲ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಮೇಲ್ಕಂಡ ಎರಡು ಉದಾಹರಣೆಗಳು ಅವ್ಯಕ್ತ ಭಾಷಾ ಬಳಕೆಯ ಮಹತ್ವವನ್ನು ಸೂಚಿಸುತ್ತವೆ. ಅವ್ಯಕ್ತವೆಂದರೆ ಮೌನ, ಆಡದೇ ಉಳಿದಿಹ ಮಾತು. ಆಡುವ ಮಾತುಗಳಷ್ಟೇ ಅಸ್ಖಲಿತ ಪದಗಳಿಗೂ ಮಹತ್ವವುಂಟು. ಸಂವಹನೆಗೆ ಪದಗಳೇ ಆಗ ಬೇಕಿಲ್ಲ. ಅವ್ಯಕ್ತ ಸಂಭಾಷಣೆ ಪ್ರೇಮಿಗಳ ನಡುವಷ್ಟೇ ನಡೆಯ ಬೇಕಿಲ್ಲ. ಪೂಜೆಗೆ ಕುಳಿತ ಗೃಹಸ್ಥ ಎಚ್ಚರ ತಪ್ಪಿ ಆತನ ಹತ್ತಿರ ಆತನ ಮಡಿ ಕೆಡಿಸುವಂತೆ ಯಾರಾದರೂ ಹತ್ತಿರ ಸುಳಿದಲ್ಲಿ ಪಠಿಸುತ್ತಿರುವ ಮಂತ್ರವನ್ನು ನಿಲ್ಲಿಸದೇ ಕಣ್ಣು ಹಿಗ್ಗಿಸಿದರೆ ಸಾಕು ಅಥವಾ ದನಿಯನ್ನು ಎತ್ತರಿಸಿ ಮಂತ್ರವನ್ನುಚ್ಚರಿಸಿದರೆ ಸಾಕು,
ಕಾರ್ಯಸಾಧನೆಯಾಗುತ್ತದೆ.

ಅವ್ಯಕ್ತ ಭಾಷೆಯ ವ್ಯಾಪಕ ಕ್ರಾಂತಿಯೇ ನಡೆಯುತ್ತಿದ್ದರೂ, ಅದನ್ನು ಅಳವಡಿಸಿಕೊಳ್ಳದ ಒಂದೆರಡು ಉದಾಹರಣೆಗಳನ್ನು ಗಮನಿಸಬಹುದು. ನೆರೆಹಾವಳಿಯಿಂದ ಅಥವಾ ಬೇರಾವುದೋ ವಿಕೋಪದಿಂದ ತತ್ತರಿಸುತ್ತಿರುವ ಜನತೆಗೆ ಮುಖ್ಯಮಂತ್ರಿಯೋ ಅಥವಾ ವಿಷಯಕ್ಕೆ ಸಂಬಂಧಿತ ಸಚಿವರೋ ತಕ್ಷಣವೇ ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ನಾನು ಅಧಿಕಾರಿಗಳಿಗೆ ತಿಳಿಸಿದ್ದೇನೆ, ಬರಪೀಡಿತರಿಗೆ ಗಂಜಿಕೇಂದ್ರಗಳನ್ನು ತೆರೆಯಲು ಸೂಚಿಸಿದ್ದೇನೆ, ಮುಂತಾದ ಹೇಳಿಕೆ ನೀಡುವ ಪರಿಪಾಠಕ್ಕೆ ನಾವು ಹೊಂದಿ ಕೊಂಡುಬಿಟ್ಟಿದ್ದೇವೆ. ನಮ್ಮ ಅಧಿಕಾರಿಗಳು ಬಹುಪಾಲು ನೇತಾರರಿಗಿಂತ ಹೆಚ್ಚು ವಿದ್ಯಾ ರ್ಹತೆ ಹೊಂದಿರದವರಾಗಿದ್ದೂ, ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಅವರಿಗಿಂತ ಹೆಚ್ಚಿನ ಅನುಭವವನ್ನೂ ಪಡೆದಿರುತ್ತಾರೆ.

ಹಾಗಿದ್ದೂ, ಅವರಿಗೆ ಅವರು ತುರ್ತು ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಹೇಳುವುದು ಮತ್ತು ಹಾಗೆ ಹೇಳಿದ್ದೇ ನೆಂದು ಮಾಧ್ಯಮಕ್ಕೆ ತಿಳಿಸುವುದು ಬಾಲಿಶವೆನಿಸುವುದಿಲ್ಲವೇ? ಅಥವಾ, ನನ್ನ ಗ್ರಹಿಕೆಯೇ ತಪ್ಪೇ? ಬ್ರಿಟಿಷರಿಂದ ಪಡೆದ ಅಧಿಕಾರಶಾಹಿ ನಮ್ಮದು. ಅವರ ಔದಾಸೀನ್ಯವೂ ರಕ್ತಗತವಾಗೇ ಬಂದಿರುವ ಕಾರಣ ಬಹುತೇಕ ಸಂದರ್ಭಗಳಲ್ಲಿ ಮೇಲಿನಿಂದ ಆದೇಶ ಬಂದಮೇಲಷ್ಟೇ ಕಾರ್ಯಪ್ರವೃತ್ತರಾಗುವ ಜಾಯಮಾನವನ್ನು ಮೈಗೂಡಿಸಿಕೊಂಡಿರುತ್ತಾರೆ.

ಈ ಪ್ರವೃತ್ತಿಯನ್ನೇ ಜನಸಾಮಾನ್ಯರಲ್ಲೂ ಕಾಣುತ್ತೇವಾದ್ದರಿಂದ ಅವರ ಉದಾಸೀನತೆಯತ್ತ ಮಾತ್ರ ಬೆಟ್ಟು ತೋರುವುದು ಸರಿ ಯಾಗಲಾರದೇನೋ. ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಿದ ವರ್ಷಗಳ ನಂತರವೂ ಶಿರಸ್ತ್ರಾಣದ ಮಹತ್ವವನ್ನು ದಿನ ನಿತ್ಯ ಮನದಟ್ಟು ಮಾಡಿಕೊಡುವುದನ್ನು ನೋಡುತ್ತೀವಲ್ಲವೇ? ವಿಶ್ವಾದ್ಯಂತ ಲಕ್ಷಾಂತರ ಮಂದಿ ಕೋವಿಡ್‌ಗೆ ಬಲಿಯಾಗುವು ದನ್ನು ನೋಡಿಯೂ ಸಾಮ, ದಾನ, ಭೇದ, ದಂಡ (ಫೈನ್ ಮತ್ತು ಲಾಠಿ ಎರಡೂ ಸೇರಿವೆ) ಗಳೆಲ್ಲದರ ಪ್ರಯೋಗವಾದ ನಂತರವೂ ಸಾರ್ವಜನಿಕರು ಬಿಂದಾಸ್ ಓಡಾಡುವುದನ್ನೂ ಕಾಣುತ್ತೀವಲ್ಲವೇ? ಇದೆಲ್ಲವನ್ನೂ ನೋಡಿದಾಗ ಅನಿಸುವು ದೇನೆಂದರೆ ಇವರು ಗಳಿಗೆ ಚಡ್ಡಿ ಹಾಕಿಕೊಳ್ಳುವುದನ್ನು ಅಭ್ಯಾಸ ಮಾಡಿಸಲು ಅವರ ತಾಯಂದಿರು ಇನ್ನೆಷ್ಟು ತ್ರಾಸ ಪಟ್ಟಿರಬೇಕು!

ವಯಸ್ಕರಾಗಿ ಪ್ರಾಣದ ಬಗ್ಗೆಯೇ ನಿಗಾ ಇಲ್ಲದವರು ಚಿಕ್ಕಂದಿನಲ್ಲಿ ಮಾನದ ಬಗ್ಗೆ ಕಾಳಜಿ ಹೊಂದಿದ್ದರೆಂದು ಊಹಿಸಲಾಗು ತ್ತದೆಯೇ?