Friday, 13th December 2024

ನಮ್ಮ ಬದುಕೆಂಬುದು ಚೊಲುಟೆಕಾ ನದಿ ಇದ್ದಂತೆ !

ನೂರೆಂಟು ವಿಶ್ವ

vbhat@me.com

ಬದುಕು ನಮ್ಮ ನಿಯಂತ್ರಣದಲ್ಲಿ ಇಲ್ಲ ಎನ್ನುವ ಸತ್ಯವನ್ನು ಅರಿಯುತ್ತ, ವಿಶ್ವಾಸ ಬೆಳೆಸಿಕೊಳ್ಳಬೇಕು. ಹೊಸ ಸಂಗತಿಗಳನ್ನು ಕಲಿಯಲು ಸಿದ್ಧರಿರಬೇಕು. ಕಾರಣ ಬದಲಾವಣೆಗಳು ಹೊತ್ತು ತರುವ ಪರಿಣಾಮಗಳಿಂದ ತಪ್ಪಿಸಿಕೊಂಡು ಓಡಿ ಹೋಗಲು ಸಾಧ್ಯವಿಲ್ಲ. ಆದರೆ ಸಂದರ್ಭ ಬಂದಾಗ ಅವುಗಳನ್ನೇ ನಮ್ಮ ಬದುಕಿಗೆ ಪೂರಕವಾಗಿ ಅಳವಡಿಸಿಕೊಳ್ಳಲು ಕಲಿಯುವುದರಿಂದ ಬಹಳ ಲಾಭಗಳಿವೆ ಎನ್ನುವುದನ್ನು ಮರೆಯಬಾರದು.

ಮೊನ್ನೆ ಬೆಂಗಳೂರಿನಲ್ಲಿ ಸುರಿದ ಮಳೆ ಅನೇಕರ ಜೀವನದಲ್ಲಿ ಹಠಾತ್ ಬದಲಾವಣೆಯನ್ನು ತಂದಿದೆ. ಹತ್ತು-ಹದಿನೈದು ಕೋಟಿ ರುಪಾಯಿ ಕೊಟ್ಟು ಖರೀದಿಸಿದ್ದ ವಿಲ್ಲಾಗಳ ಒಳಗೆ ನೀರು ನುಗ್ಗಿ ಹೈರಾಣ ಮಾಡಿಬಿಟ್ಟಿತು. ಈ ವಿಲ್ಲಾಗಳಲ್ಲಿ ವಾಸಿಸು ತ್ತಿದ್ದ, ಕೋಟ್ಯಂತರ ರುಪಾಯಿ ಬೆಲೆ ಬಾಳುವ ಆರು ಕಾರುಗಳನ್ನು ಹೊಂದಿದ ಶ್ರೀಮಂತ ಸ್ನೇಹಿತರೊಬ್ಬರು, ತಮ್ಮ ಮನೆಯಿಂದ ದೋಣಿಯಲ್ಲಿ ಕುಳಿತು ಜೀವ ಉಳಿಸಿಕೊಳ್ಳಬೇಕಾಯಿತು.

ಸಾವಿರಾರು ಕೋಟಿ ಆಸ್ತಿ ಮಾಡಿದ ನೂರಾರು ಮಂದಿಯ ಬದುಕು ರಾತ್ರಿ-ಬೆಳಗಾಗುವುದರೊಳಗೆ ಕಲ್ಲವಿಲ್ಲಗೊಂಡಿತ್ತು. ಅನೇಕರು ಪ್ರಾಣ ಉಳಿಸಿ ಕೊಂಡಿದ್ದು ಬೇರೆ ಕತೆ. ಅಂಥ ದುಬಾರಿ ಮತ್ತು ವೈಭವೋಪೇತ ಮನೆಯನ್ನು ಹೊಂದಿದ ಶ್ರೀಮಂತರೊಬ್ಬರು ಇಪ್ಪತ್ತೆಂಟು ತಾಸುಗಳಿಂದ ಮನೆಯಲ್ಲಿ ಉಪವಾಸ ಬಿದ್ದಿದ್ದರು.

ಕಾರಣ ಅವರ ಮನೆಯ ಅಡುಗೆಮನೆ ಅರ್ಧದಷ್ಟು ಮುಳುಗಿತ್ತು. ಕೋಟ್ಯಂತರ ರುಪಾಯಿ ಬೆಲೆಬಾಳುವ ಕಾರ್ಪೆಟ್, ಪೇಂಟಿಂಗ್ ಗಳೆಲ್ಲ ನೆನೆದು ತೊಪ್ಪೆಯಾಗಿದ್ದವು. ಎಲೆಕ್ಟ್ರಾನಿಕ್ ಸಾಮಾನುಗಳೆಲ್ಲ ಕೆಟ್ಟು ಹೋಗಿದ್ದವು. ಮನೆಯಲ್ಲಿದ್ದ ಅಪರೂಪದ ಸಾಮಾನುಗಳೆಲ್ಲ ಒದ್ದೆಯಾಗಿ ಹಾಳಾಗಿದ್ದವು. ನನ್ನ ಆ ಸ್ನೇಹಿತರು ತಮ್ಮ ತಂದೆಯೊಂದಿಗಿದ್ದ ಒಂದೆರಡು ಅಪರೂಪದ ಫೋಟೋ ನೀರಿನಲ್ಲಿ ನೆನೆದು ಅಂದಗೆಟ್ಟಿತ್ತು.

ಸುಮಾರು ಮೂವತ್ತು ತಾಸುಗಳ ಬಳಿಕ, ಮಳೆಯ ನೀರು ನಿಧಾನವಾಗಿ ಇಳಿಯುತ್ತಿದ್ದಂತೆ ನೋಡುತ್ತಾರೆ… ಮನೆಯೊಳಗೆಲ್ಲ ಊರಿನ ಮಣ್ಣು! ಆ ಮನೆಯನ್ನು ಮೊದಲಿನ ಸ್ಥಿತಿಗೆ ತರಲು ಏನಿಲ್ಲವೆಂದರೂ ಇನ್ನು ಐದಾರು ತಿಂಗಳು ಬೇಕಾಗಬಹುದು. ಅಲ್ಲಿಯವರೆಗೆ ಅವರು ಹೋಟೆಲಿನಲ್ಲಿ ವಾಸಿಸಬೇಕಾಗಬಹುದೇನೋ? ಅವರ ಬಳಿ ಹಣವಿರಬಹುದು, ಇನ್ನೊಂದು ಮನೆ ಯನ್ನು ಖರೀದಿಸಬಹುದು, ಆದರೆ ಆಸೆಪಟ್ಟು ಖರೀದಿಸಿದ್ದ ಈ ಮನೆ ಈ ಕ್ಷಣ ಬಾಳಲು ಅಯೋಗ್ಯವಾಗಿತ್ತು.

ಕತ್ತಲು ಸರಿದು ಬೆಳಗು ಹರಿಯುವುದರೊಳಗೆ ಅವರ ಬದುಕು ಮೂರಾಬಟ್ಟೆಯಾಗಿತ್ತು. ಈ ಮಹಾನುಭಾವರ ಕತೆಗಳನ್ನು ಕೇಳುತ್ತಿರುವಾಗ ನನಗೆ ಅಯಾಚಿತವಾಗಿ ನೆನಪಾಗುತ್ತಿದುದು ಜೀವನದಲ್ಲಿ ನೂರಕ್ಕೆ ನೂರರಷ್ಟು ಜರುಗಿಯೇ ತೀರುವ ಸಂಗತಿ ಯಾವುದಾದರೂ ಇದ್ದರೆ, ಅದು ಬದಲಾವಣೆ. ಈ ಮಾತಿನ ಅರ್ಥ ನಮಗೆ ನಿಜವಾಗಿಯೂ ಆಗುವುದು ನಮ್ಮ ಬದುಕಿನಲ್ಲಿ ನಾವ್ಯಾರೂ ಊಹಿಸಿರದ ಘಟನೆ ನಡೆದಾಗ ಮಾತ್ರ.

ಇದಕ್ಕೆ ಉತ್ತಮ ನಿದರ್ಶನ ಕೋವಿಡ್ ಮಹಾಮಾರಿ. ಸಾಮಾನ್ಯವಾಗಿ ಬದುಕಿನಲ್ಲಿ ಮಹತ್ತರವಾದ ಬದಲಾವಣೆ ನಿಧಾನವಾಗಿ
ಆಗುತ್ತದೆ. ಆದರೆ ಕೋವಿಡ್ ಬಂದಾಗ ಈ ಬದಲಾವಣೆ ಒಂದೇ ಹೊಡೆತಕ್ಕೆ ಜಗತ್ತಿನಾದ್ಯಂತ ತಾಪಡೆ ತೋಪುಡು ಆಗಿ ಬಿಟ್ಟಿತು. ವೈರಸ್ ಎಷ್ಟು ಬೇಗ ಹರಡಿತೆಂದರೆ, ನೋಡನೋಡುತ್ತಿದ್ದಂತೆ ಅದು ನಮ್ಮ ಮನೆಗೂ ಬಂದೇಬಿಟ್ಟಿತು. ಅದು ಎಲ್ಲಿಗೇ ಬಂದರೂ ತಮ್ಮ ಮನೆಗಂತೂ ಬರುವುದಿಲ್ಲ ಎಂದು ಭಾವಿಸಿದವರೂ ಕರೋನಾ ಕೈಲಿ ಕಚ್ಚಿಸಿಕೊಂಡರು.

ನಾವು ಕಲ್ಪನೆ ಮಾಡಿಕೊಳ್ಳುವ ಕತೆಗಳಿಗಿಂತ ನಿಜವಾದ ಕತೆಗಳು ಕುತೂಹಲವಾಗಿರುತ್ತವೆ. ನಿಜದ ಕತೆಗಳನ್ನು ನಾವು ಬರೆದರೆ, ನಾವು ಊಹಿಸಿರದ ಕತೆಗಳನ್ನು ಆ ಭಗವಂತ ಬರೆದಿರುತ್ತಾನೆ. ನಾಳೆ ಹೊತ್ತಿಗೆ ನನ್ನ ಮನೆ ವಾಸಯೋಗ್ಯ ವಾಗಿರುವುದಿಲ್ಲ ಎಂದು ನನ್ನ ಆ ಶ್ರೀಮಂತ ಸ್ನೇಹಿತರು ಎಂದಾದರೂ ಭಾವಿಸಿದ್ದರಾ? ಖಂಡಿತವಾಗಿಯೂ ಇಲ್ಲ. ತಮ್ಮ ಜೀವನದ ಕೊನೆಯ ದಿನಗಳನ್ನು ನೆಮ್ಮದಿಯಿಂದ ಕಳೆಯೋಣ ಎಂದು ಅವರ ನೂರಾರು ನೆರೆ-ಹೊರೆಯವರು ಯೋಚಿಸಿದ್ದಿರ ಬಹುದು. ಈಗ ಅವರ ಬದುಕು ಊರ ಚರಂಡಿ ನೀರು ಹೊಕ್ಕಿದ ಮನೆಯಂತಾಗಿದೆ.

ಇದನ್ನು ಯಾರು ನಿರೀಕ್ಷಿಸಿದ್ದರು? ಬದಲಾವಣೆಯನ್ನು ಇಷ್ಟಪಟ್ಟು ಬಯಸುವವರೂ, ಈ ರೀತಿಯ ಹಠಾತ್ ಬದಲಾವಣೆಯನ್ನು ಬಯಸಲಾರರು. ವಿಚಿತ್ರ ಅಂದ್ರೆ ಎಲ್ಲ ಬದಲಾವಣೆಗಳನ್ನೂ ನಾವು ಬಯಸಿರುವುದಿಲ್ಲ. ಅದಕ್ಕೆ ಮಾನಸಿಕವಾಗಿ ಸಿದ್ಧರಾಗಿ ರುವುದಿಲ್ಲ. ಆದರೆ ನಾವು ಬೆಳಗ್ಗೆ ಒಲ್ಲದ ಮನಸ್ಸಿನಿಂದ ಎದ್ದು, ಕಣ್ಣುಜ್ಜಿಕೊಳ್ಳುತ್ತಿರುವಾಗಲೇ ಬದಲಾವಣೆ ಎಂಬುದು ನಮ್ಮ ಮನೆಯೊಳಗೇ ಹೊಕ್ಕಿ, ಮಹಡಿಯೇರಿ ಕುಳಿತಿರುತ್ತದೆ.

ಇದಕ್ಕೆ ಸಂಬಂಧಿಸಿದಂತೆ, ನಾನು ಓದಿದ್ದ ಒಂದು ನೈಜ ಪ್ರಸಂಗ ನೆನಪಾಗುತ್ತಿದೆ. ಅದನ್ನು ನಿಮಗೆ ಹೇಳಬೇಕು. ಮಧ್ಯ ಅಮೆರಿಕದ ಹೊಂಡುರಾಸ್‌ನಲ್ಲಿ ಒಂದು ನದಿಯಿದೆ. ಅದರ ಹೆಸರು ಚೊಲುಟೆಕಾ. ಹೊಸ ಬೈಪಾಸ್ ರಸ್ತೆಗೆ ಸಂಪರ್ಕ ಕಲ್ಪಿಸಲು 1996ರಲ್ಲಿ ಈ ನದಿಗೆ ಹೊಸ ಸೇತುವೆಯನ್ನು ನಿರ್ಮಿಸಲು ಸರಕಾರ ನಿರ್ಧರಿಸಿತು. ನಮಗೆಲ್ಲ ಗೊತ್ತು, ಅಮೆರಿಕದಲ್ಲಿ ಚಂಡಮಾರುತಗಳು ಪದೇ ಪದೆ ಅಪ್ಪಳಿಸುತ್ತವೆ. ಇದರ ತೀವ್ರತೆ ಎಷ್ಟು ಮಾರಕವಾಗಿರುತ್ತವೆಯೆಂದರೆ, ಕಟ್ಟಡ,
ಸೇತುವೆಗಳೆ ಚಂಡಮಾರುತದ ಹೊಡೆತಕ್ಕೆ ತತ್ತರಿಸುತ್ತವೆ. ಈ ಸಂಗತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಹವಾಮಾನದ ಎಲ್ಲಾ ವೈಪರೀತ್ಯಗಳನ್ನೂ ಸಹಿಸಿಕೊಳ್ಳುವ, ತಾಳಿಕೊಳ್ಳುವ ಸಾಮರ್ಥ್ಯವಿರುವ ತೀರಾ ಮಜಬೂತಾದ ಸೇತುವೆಯನ್ನು ನಿರ್ಮಿಸಲು ನಿರ್ಧರಿಸಿತು.

ಇದಕ್ಕಾಗಿ ಜಾಗತಿಕ ಟೆಂಡರ್ ಕರೆಯಲಾಯಿತು. ಜಗತ್ತಿನ ಖ್ಯಾತನಾಮ ನಿರ್ಮಾಣ ಕಂಪನಿಗಳು ಟೆಂಡರಿನಲ್ಲಿ ಭಾಗವಹಿಸು ವಂತೆ ನೋಡಿಕೊಳ್ಳಲಾಯಿತು. ಒಟ್ಟಾರೆ ವಿಶ್ವದ ಶ್ರೇಷ್ಠ ನಿರ್ಮಾಣ ಕಂಪನಿಯನ್ನು ಆಹ್ವಾನಿಸಿ ಸೇತುವೆ ನಿರ್ಮಿಸುವುದು ಉದ್ದೇಶವಾಗಿತ್ತು. ಕೊನೆಗೆ, ಈ ಸೇತುವೆ ನಿರ್ಮಾಣದ ಹೊಣೆಯನ್ನು ಜಪಾನಿನ ಪ್ರತಿಷ್ಠಿತ ಕಂಪನಿಗೆ ವಹಿಸಿಕೊಡಲಾಯಿತು. ಅದೆಂಥ ಪ್ರಾಕೃತಿಕ ವಿಕೋಪ ಸಂಭವಿಸಿದರೂ ಜಗ್ಗದಂತೆ, ಅಲುಗಾಡದಂತೆ ಆ ಕಂಪನಿ ಕೇವಲ ಎರಡು ವರ್ಷಗಳಲ್ಲಿ ಸೇತುವೆಯನ್ನು ನಿರ್ಮಿಸಿತು.

ಇದನ್ನು ವಿಶ್ವದ ಪ್ರಸಿದ್ಧ ಆರ್ಕಿಟೆಕ್ಟ್ ಗಳು modern day marvel of design and engineering ಎಂದು ಬಣ್ಣಿಸಿದರು. ಈ ಸೇತುವೆಯನ್ನು ನೋಡಲೆಂದೇ ದೂರದ ಊರುಗಳಿಂದ ಜನ ಬರಲಾರಂಭಿಸಿದರು. ಕ್ರಮೇಣ ಈ ಸೇತುವೆಯೇ ಒಂದು
ಪ್ರೇಕ್ಷಣೀಯ ತಾಣವಾಯಿತು. ಅದೇನು ವಿಚಿತ್ರವೋ, ಅದೇ ವರ್ಷ ಹೊಂಡುರಾಸ್‌ಗೆ ‘ಮಿಚ್’ ಎಂಬ ಚಂಡಮಾರುತ ಅಪ್ಪಳಿಸಿತು. ಅದೆಲ್ಲಿತ್ತೋ ಏನೋ, ಆರು ತಿಂಗಳಲ್ಲಿ ಸುರಿಯುವಷ್ಟು ಮಳೆ ಕೇವಲ ನಾಲ್ಕು ದಿನಗಳಲ್ಲಿ ಸುರಿಯಿತು.

ಚೊಲುಟೆಕಾ ನದಿ ಸೊಕ್ಕಿನಿಂದ ಹರಿಯಿತು. ಇದರ ಇಕ್ಕೆಲಗಳಲ್ಲಿ ಇರುವ ಊರಿನ ಸಾವಿರಾರು ಮನೆಗಳು ಮುಳುಗಿದವು. ಇಡೀ ಪ್ರದೇಶವೇ ಜಲಾವೃತವಾಯಿತು. ಸುಮಾರು ಏಳು ಸಾವಿರ ಮಂದಿ ಜೀವ ಕಳೆದುಕೊಂಡರು. ಚಂಡಮಾರುತದ ಹೊಡೆತಕ್ಕೆ ಹೊಂಡುರಾಸ್‌ನಲ್ಲಿರುವ ಎಲ್ಲ ಸೇತುವೆಗಳು ಕುಸಿದು ಬಿದ್ದವು, ಚೊಲುಟೆಕಾ ಸೇತುವೆಯೊಂದನ್ನು ಹೊರತು ಪಡಿಸಿ!

ಚೊಲುಟೆಕಾ ಸೇತುವೆಗೆ ಏನೂ ಆಗಿರಲಿಲ್ಲ. ಅದು ಒಂಚೂರೂ ಮುಕ್ಕಾಗದೇ ಹೇಗಿತ್ತೋ, ಹಾಗೆಯೇ ಇತ್ತು. ಇಷ್ಟೇ ಆಗಿದ್ದರೆ ನಾನು ಚೊಲುಟೆಕಾ ಸೇತುವೆ ಬಗ್ಗೆ ಇಲ್ಲಿ ಬರೆಯುತ್ತಿರಲಿಲ್ಲ. ಚಂಡಮಾರುತದಿಂದ ಸಂಭವಿಸಿದ ಧಾರಾಕಾರ ಮಳೆಯಿಂದ ಜಲಾವೃತವಾಗಿದ್ದ ಹೊಂಡುರಾಸ್, ಒಂದು ವಾರದ ಬಳಿಕ ಸಹಜ ಸ್ಥಿತಿಗೆ ಮರಳಲಾರಂಭಿಸಿತ್ತು. ಆದರೆ ಅಂದು ಪವಾಡ ನಡೆದಿತ್ತು. ಚೊಲುಟೆಕಾ ಸೇತುವೆ ಕೆಳಗೆ ಹರಿಯುತ್ತಿದ್ದ ನದಿಯೇ ಮಾಯವಾಗಿತ್ತು!

ಮೊದಲು ಸೇತುವೆಯ ಕೆಳಗೆ ಹರಿಯುತ್ತಿದ್ದ ಚೊಲುಟೆಕಾ ನದಿ, ಸರಿಯಾಗಿ ಅದರ ಪಕ್ಕದಲ್ಲಿ ಹರಿಯಲಾರಂಭಿಸಿತ್ತು.
ಇಡೀ ನದಿ ತನ್ನ ಪಾತ್ರವನ್ನೇ ಬದಲಿಸಿ ಬೇರೆ ಪಾತಳಿಯನ್ನು ಕಂಡುಕೊಂಡಿತ್ತು. ಸೇತುವೆಗೆ ಅಡ್ಡವಾಗಿ ಹರಿಯುತ್ತಿದ್ದ ನದಿ,
ಈಗ ಸೇತುವೆ ಪಕ್ಕದಲ್ಲಿ ಹರಿಯಲಾರಂಭಿಸಿತ್ತು. ಹೀಗಾಗಿ ‘ಎಂಜಿನಿಯರಿಂಗ್ ಅದ್ಭುತ’ ಎಂದು ಬಣ್ಣಿತವಾದ ಸೇತುವೆ
ನಿಷ್ಪ್ರಯೋಜಕವಾಯಿತು. ಜನ ಆ ಸೇತುವೆಯನ್ನು ‘ಎಲ್ಲಿಗೂ ಹೋಗದ ಸೇತುವೆ’ (The Bridge To Nowhere)
ಎಂದು ಕರೆಯಲಾರಂಭಿಸಿದರು.

ಸೇತುವೆ ಕಟ್ಟಿದ ಬಳಿಕ, ನದಿ ತನ್ನ ಪಥವನ್ನು ಬದಲಿಸಿದ ನಿದರ್ಶನ ಜಗತ್ತಿನಲ್ಲಿ ಹಿಂದೆಂದೂ ಕಂಡುಕೇಳರಿಯದಂಥದ್ದು. ಅಡ್ಡವಾಗಿ ಹರಿಯುತ್ತಿದ್ದ ನದಿ ಸೇತುವೆ ದಾಟಿದ ನಂತರ ಹರಿಯುವುದೆಂದರೇನು? ಪ್ರವಾಹದಿಂದಾಗಿ ಚೊಲುಟೆಕಾ ನದಿ ಹೊಸ ದಾರಿಯನ್ನು ನಿರ್ಮಿಸಿಕೊಂಡಿತ್ತು. ಚಂಡಮಾರುತವನ್ನು ತಡೆದುಕೊಳ್ಳುವ ಧಾರಣಶಕ್ತಿಯನ್ನು ಹೊಂದಿದ್ದರೂ ಆ ಸೇತುವೆ ಕೆಲಸಕ್ಕೆ ಬಾರದಂತಾಯಿತು. ಬದಲಾದ ಪಥದಲ್ಲಿ ಹರಿಯಲಾರಂಭಿಸಿದ ನದಿಗೆ ಮತ್ತೊಂದು ಸೇತುವೆಯನ್ನು
ಕಟ್ಟಿದ್ದರಿಂದ, ಕ್ರಮೇಣ ಈ ಸೇತುವೆ ಬಳಸುವುದನ್ನು ಜನರು ಬಿಟ್ಟರು.

ಈ ಘಟನೆ ನಡೆದಿದ್ದು ಇಪ್ಪತ್ನಾಲ್ಕು ವರ್ಷಗಳ ಹಿಂದೆ. ಆದರೆ ಅದರ ನೀತಿ ಮಾತ್ರ ನಮಗೆ ಯಾವತ್ತೂ ಪ್ರಸ್ತುತ. ನಮ್ಮ ಜೀವನವೂ ಸಹ ಚೊಲುಟೆಕಾ ನದಿಯಂತೆ ರಾತ್ರಿ-ಬೆಳಗಾಗುವುದರೊಳಗೆ ಬದಲಾಗಿ ಬಿಡಬಹುದು. ಈ ಪ್ರಸಂಗ ಜೀವನದಲ್ಲಿ ನಾವು ಕಲಿಯಬೇಕಾದ ಅನೇಕ ಪಾಠಗಳಿಗೆ ಒಂದು ರೂಪಕದಂತೆ ಭಾಸವಾಗುತ್ತದೆ. ನಮ್ಮ ಬದುಕು ಸಹ ಚೊಲುಟೆಕಾ ನದಿಯಂತೆ ಯಾವುದೇ ಮುನ್ಸೂಚನೆ ನೀಡದೇ, ಏನನ್ನಾದರೂ ಮಾಡಿಬಿಡಬಹುದು.

ನಮ್ಮ ನೌಕರಿ, ನಮ್ಮ ಬಿಜಿನೆಸ್, ನಮ್ಮ ಖಾಸಗಿ ಜೀವನ.. ಹೀಗೆ ನಮ್ಮ ಸುತ್ತಮುತ್ತಲಿನ ಜಗತ್ತೆಲ್ಲ ಒಂದು ದಿನ
ಇದ್ದಕ್ಕಿದ್ದಂತೆ ಬದಲಾಗಿಬಿಡಬಹುದು. ಇಂದು ಅಡ್ಡವಾಗಿ ಹರಿಯುತ್ತಿದ್ದ ನದಿ, ನಾಳೆ ಉದ್ದವಾಗಿ ಹರಿಯಬಹುದು ಎಂದು ಯಾರು ನಿರೀಕ್ಷಿಸಿದ್ದರು ಹೇಳಿ? ಸಮಸ್ಯೆಗಳಿಗೆ ಪರಿಹಾರ ಅಥವಾ ಉತ್ತರವನ್ನು ಕಂಡುಹಿಡಿಯುವುದರತ್ತ ನಾವೆಲ್ಲ ನಮ್ಮ ಗಮನವನ್ನು ಕೇಂದ್ರೀಕರಿಸುತ್ತೇವೆ. ಇದಕ್ಕಾಗಿ ಪರಿಣತರನ್ನು ಸಿದ್ಧಪಡಿಸುತ್ತೇವೆ. ಅವರ ಸೇವೆಯನ್ನು ಪಡೆಯುತ್ತೇವೆ.
ಆದರೆ ನಮಗೆ ಗೊತ್ತಿರದ ಸಂಗತಿಯೆಂದರೆ, ಸಮಸ್ಯೆಯೇ ಬದಲಾಗಿಬಿಡಬಹುದು.

ನಾವು ಅತ್ಯಾಧುನಿಕ ವಸ್ತುಗಳನ್ನು ಸಿದ್ಧಪಡಿಸುವುದರತ್ತ ಗಮನ ಹರಿಸುತ್ತೇವೆ. ಆದರೆ ನಾಳೆ ಮಾರುಕಟ್ಟೆಯ ಗತಿಯೇ ಬದಲಾಗಿಬಿಡಬಹುದು ಎಂದು ಯೋಚಿಸುವುದಿಲ್ಲ. ಇಂದು ನಾವು ಉತ್ಪಾದಿಸುವ ವಸ್ತು, ನಾಳೆಯ ಹೊತ್ತಿಗೆ ಯಾರಿಗೂ ಬೇಡವಾಗಿಬಿಡಬಹುದು. ಅಂದರೆ ಬದಲಾವಣೆಗೆ ಯಾವಾಗಲೂ ನಾವು ಸನ್ನದ್ಧರಾಗಿರಬೇಕು. ಬದುಕು ನಮ್ಮ ನಿಯಂತ್ರಣ ದಲ್ಲಿ ಇಲ್ಲ ಎನ್ನುವ ಸರಳ ಸತ್ಯವನ್ನು ಅರಿಯುತ್ತ, ಬದುಕಿನಲ್ಲಿ ವಿಶ್ವಾಸ ಬೆಳೆಸಿಕೊಳ್ಳಬೇಕು.

ಹೊಸ ಅಚ್ಚರಿಗಳಿಗೆ ಮುಖ ಮಾಡುತ್ತ, ಹೊಸ ಸಂಗತಿಗಳನ್ನು ಕಲಿಯಲು ಸದಾ ಸಿದ್ಧರಿರಬೇಕು. ಕಾರಣ ಬದಲಾವಣೆಗಳು ಹೊತ್ತು ತರುವ ಪರಿಣಾಮಗಳಿಂದ ತಪ್ಪಿಸಿಕೊಂಡು ಓಡಿ ಹೋಗಲು ಸಾಧ್ಯವಿಲ್ಲ. ಆದರೆ ಸಂದರ್ಭ ಬಂದಾಗ ಅವುಗಳನ್ನೇ
ನಮ್ಮ ಬದುಕಿಗೆ ಪೂರಕವಾಗಿ ಅಳವಡಿಸಿಕೊಳ್ಳಲು ಕಲಿಯುವುದರಿಂದ ಬಹಳ ಲಾಭಗಳಿವೆ ಎನ್ನುವುದನ್ನು ಮರೆಯಬಾರದು. ಬದಲಾವಣೆಯನ್ನು ವಿರೋಧಿಸುವುದು ಅಥವಾ ಬದಲಾವಣೆಯ ಅಗತ್ಯವನ್ನು ಮನಗಾಣದೇ ಇರುವುದು ನಮ್ಮನ್ನು
ಕ್ರಮೇಣ ಹತಾಶೆ ಮತ್ತು ಅಸಹಾಯಕತೆಯಲ್ಲಿ ಮುಳುಗಿಸುತ್ತದೆ. ಈ ಬದಲಾವಣೆ ಹಾಗೂ ಸವಾಲುಗಳು ನಮ್ಮೆದುರು ತೆರೆದಿಡುವ ಅವಕಾಶಗಳನ್ನು ಬಚ್ಚಿಡುವ ಅಥವಾ ಕಡೆಗಣಿಸುವುದರ ಬದಲು ಇವುಗಳನ್ನು ಧನಾತ್ಮಕವಾಗಿ ಸ್ವೀಕರಿಸಿದರೆ ಬದುಕಿನಲ್ಲಿ ಏನೇ ಆದರೂ ಮತ್ತೆ ಮೊದಲಿನಂತೆ ಪುಟಿದೇಳುವ ಶಕ್ತಿ ನಮ್ಮಲ್ಲಿ ಮೊಳಕೆಯೊಡೆಯುತ್ತವೆ.

ವೈಫಲ್ಯಗಳಿಂದ ಪಾಠ ಕಲಿಯುವುದು, ಈಗಿನ ಸನ್ನಿವೇಶಗಳ ಜತೆಗೆ ಮರುಹೊಂದಾಣಿಕೆ ಮಾಡಿಕೊಳ್ಳುವುದು ಮತ್ತು
ಜೀವನದಲ್ಲಿ ಹಠಾತ್ ಬದಲಾವಣೆಗಳನ್ನು ಮರುಮಾತಿಲ್ಲದೇ ಸ್ವೀಕರಿಸುವುದು – ಈ ಮೂರು ಸಂಗತಿಗಳನ್ನು ನಾವು ಒಪ್ಪಿಕೊಂಡಿದ್ದೇ ಆದಲ್ಲಿ ಬದುಕು ಸಹ್ಯವಾದೀತು. ನಮ್ಮ ಮೇಲೆ ನಾವೇ ಹೇರಿಕೊಳ್ಳುವ ಮಿತಿಗಳನ್ನು ಕಿತ್ತೆಸೆಯಬೇಕು. ಮಿತಿಯೇ ಇಲ್ಲದ ಬದುಕಿಗೆ, ಮಿತಿಗಳನ್ನು ಹಾಕಿಕೊಳ್ಳುವುದು ಅವಿವೇಕವೇ. ನಮ್ಮ ಜೀವನದಲ್ಲಿ ಬೀಳದ ಸೇತುವೆ ನಿರ್ಮಿಸುವ ಬದಲು, ಹೊಂದಿಕೊಳ್ಳುವ ಸೇತುವೆಯನ್ನು ನಿರ್ಮಿಸುವುದು ಮುಖ್ಯ. ಈ ಬದುಕೆಂದರೆ ಚೊಲುಟೆಕಾ ನದಿ ಇದ್ದಂತೆ ಎಂಬುದನ್ನು ಮರೆಯಬಾರದು.